ಮೊಘಲರು ಹಾಗೂ ಮರಾಠರು – ಅಧ್ಯಾಯ 15
ಪಾಠದ ಪರಿಚಯ
ಸಾ.ಶ.1526ರಲ್ಲಿ ಬಾಬರ್ ಭಾರತದ ಮೇಲೆ ದಂಡೆತ್ತಿ ಬಂದು, ದಿಲ್ಲಿ ಸುಲ್ತಾನರ ಆಳ್ವಿಕೆಯನ್ನು ಕೊನೆಗೊಳಿಸಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಈ ಅಧ್ಯಾಯದಲ್ಲಿ ಅಕ್ಬರ್ ಮತ್ತು ಔರಂಗಜೇಬನ ಆಳ್ವಿಕೆಯನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಮೊಘಲರ ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳನ್ನು ನಿರೂಪಿಸಲಾಗಿದೆ. ಕೊನೆಯಲ್ಲಿ ಸಾಮ್ರಾಜ್ಯದ ಅವನತಿಗೆ ಕಾರಣವಾದ ಅಂಶಗಳನ್ನು ಹೇಳಲಾಗಿದೆ. ಒಟ್ಟಿನಲ್ಲಿ ಇದು ಎರಡು ಶತಮಾನಗಳ ಕಾಲ ಪ್ರಮುಖ ರಾಜಕೀಯ ಶಕ್ತಿಯಾಗಿ ಮೆರೆದು ಸಾಹಿತ್ಯ, ಕಲೆಗಳಿಗೆ ವಿಶೇಷ ಕೊಡುಗೆ ನೀಡಿದ ಮೊಘಲ್ ಸಾಮ್ರಾಜ್ಯದ ಏಳು ಬೀಳಿನ ಚರಿತ್ರೆ.
ಶಿವಾಜಿಯ ಬಾಲ್ಯ, ಆದರ್ಶಗಳು, ಮೊಘಲ್ ಸಾಮ್ರಾಜ್ಯ ಮತ್ತು ವಿಜಯಪುರ ರಾಜ್ಯಗಳನ್ನು ಹಿಮ್ಮೆಟ್ಟಿಸಿದ ಸಾಹಸೀ ಕಥನ, ಮರಾಠಾ ರಾಜ್ಯದ ಸ್ಥಾಪನೆ, ಆಡಳಿತ ಕ್ರಮ ಹಾಗೂ ಅದ್ಭುತ ವ್ಯಕ್ತಿತ್ವ ಇವುಗಳ ನಿರೂಪಣೆಯಿದೆ.
ಈ ಸ್ಮಾರಕವನ್ನು ನೀವು ಗುರುತಿಸಬಲ್ಲಿರಾ?

ಇದು ಜಗತ್ಪ್ರಸಿದ್ಧ ತಾಜ್‍ಮಹಲ್. ಅಮೃತಶಿಲೆಯಿಂದ ರಚನೆಗೊಂಡ ಈ ಬೃಹತ್ ವಾಸ್ತುಶಿಲ್ಪ ಮೊಘಲರ ಶ್ರೇಷ್ಠ ಕೊಡುಗೆಯಾಗಿದೆ.
ಬಾಬರ್ ಮೊಘಲ್ ರಾಜಮನೆತನದ ಸ್ಥಾಪಕ. ಆರಂಭದಲ್ಲಿ ಇವನು ಅಫ್ಘಾನಿಸ್ತಾನದ ಕಾಬೂಲ್ ಎಂಬ ಪುಟ್ಟ ಪ್ರದೇಶವನ್ನು ಆಳುತ್ತಿದ್ದ. ಸಂಪದ್ಭರಿತ ಭಾರತದ ಮೇಲೆ ಆಕ್ರಮಣ ಮಾಡಲು ಸಮಯ ಕಾಯುತ್ತಿದ್ದ.

ಬಾಬರ್ ಮಂಗೋಲ್ ಸಂತತಿಯವನು. ಮೊಘಲ್’ ಪದದ ಮೂಲ ಮಂಗೋಲ್’. ಭಾರತಕ್ಕೆ ಗುಲಾಬಿಯನ್ನು ಬಾಬರ್ ಪರಿಚಯಿಸಿದನು.
ದೆಹಲಿಯ ಸುಲ್ತಾನರು ದುರ್ಬಲಗೊಳ್ಳುತ್ತಿದ್ದಂತೆ ಬಾಬರ್ ದೆಹಲಿಯ ಮೇಲೆ ದಂಡೆತ್ತಿ ಬಂದು ಅವರ ಆಳ್ವಿಕೆಯನ್ನು ಕೊನೆಗೊಳಿಸಿದನು. ಆದರೆ ಅವನು ಅಷ್ಟಕ್ಕೇ ಸಂತೃಪ್ತನಾಗುವಂತಿರಲಿಲ್ಲ. ಏಕೆಂದರೆ ಇಲ್ಲಿನ ರಜಪೂತರು ಮತ್ತು ಅಪ್ಘನ್ನರು ಅವನನ್ನು ಪ್ರಬಲವಾಗಿ ವಿರೋಧಿಸುತ್ತಿದ್ದರು. ವೀರಯೋಧನಾಗಿದ್ದ ಬಾಬರ್ ತನ್ನ ಉತ್ತಮ ಶಸ್ತ್ರಾಸ್ತ್ರ ಬಲದಿಂದ ವೈರಿಗಳನ್ನು ಧೈರ್ಯದಿಂದ ಎದುರಿಸಿ ಹಿಮ್ಮೆಟ್ಟಿಸಿದನು.

ಬಾಬರನು ದಿಲ್ಲಿ, ಆಗ್ರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಮೂರು ಯುದ್ಧಗಳಲ್ಲಿ ವಶಪಡಿಸಿಕೊಂಡು ಸಾಮ್ರಾಜ್ಯವನ್ನು ಸ್ಥಾಪಿಸಿದನು. ಆದರೆ ಅಲ್ಪಕಾಲದಲ್ಲೇ ಬಾಬರ್ ನಿಧನನಾದನು. ನಂತರ ಅವನ ಮಗ ಹುಮಾಯೂನ್ ಪಟ್ಟವೇರಿದನು.

ಹುಮಾಯೂನ್: ಸೋಲಿಸಿದನಾದರೂ ಆರಂಭದಲ್ಲಿ ಅಪ್ಘಾನ್ನರ ಹುಮಾಯೂನ್ ಸರದಾರನಾದ ಶತ್ರುಗಳನ್ನು ಶೇರ್ ಷಾ ಯುದ್ಧದಲ್ಲಿ ಸೂರಿಯಿಂದ ಪರಾಜಯಗೊಂಡನು. ರಾಜ್ಯವನ್ನು ಕಳೆದುಕೊಂಡು ಪರ್ಷಿಯಾಕ್ಕೆ ಪಲಾಯನ ಮಾಡಿ ಅಲ್ಲಿ ಹದಿನೈದು ವರ್ಷಗಳ ಕಾಲವಿದ್ದನು. ಅಪ್ಘಾನ್ನರ ಆಳ್ವಿಕೆ ದುರ್ಬಲಗೊಳ್ಳುತ್ತಿದ್ದಂತೆ ಹುಮಾಯೂನ್ ಭಾರತದ ಮೇಲೆ ದಂಡೆತ್ತಿ ಬಂದು ದೆಹಲಿಯನ್ನು ವಶಪಡಿಸಿಕೊಂಡನು. ಆದರೆ ಅಲ್ಪಕಾಲದಲ್ಲೆ ಹುಮಾಯೂನ್ ತೀರಿಕೊಂಡನು.

ಅಕ್ಬರ್: ಹುಮಾಯೂನ್‍ನ ಮಗ ಅಕ್ಬರ್ ಭಾರತದಲ್ಲಿ ಸಾಮ್ರಾಜ್ಯವನ್ನು ಕಟ್ಟುವ ಆಕಾಂಕ್ಷೆಯುಳ್ಳವನಾಗಿದ್ದನು. ಈ ನಿಟ್ಟಿನಲ್ಲಿ ಕಲಿತನಕ್ಕೆ ಹೆಸರಾಗಿದ್ದ ರಜಪೂತ ಅರಸರನ್ನು ತನ್ನ ಪಕ್ಷದತ್ತ ಒಲಿಸಲು ಯತ್ನಿಸಿದನು. ಅವರಲ್ಲಿ ಕೆಲವರು ಅಕ್ಬರನ ಪಕ್ಷ ವಹಿಸಿದರು. ಆದರೆ ಮೇವಾಡದ ರಾಣಾ ಪ್ರತಾಪಸಿಂಹನು ಅಕ್ಬರನಿಗೆ ಎಳ್ಳಷ್ಟೂ ಮಣಿಯಲಿಲ್ಲ. ಅವನು ಸ್ವಾಭಿಮಾನಿಯೂ ಮಹಾಶೂರನೂ ಆಗಿದ್ದನು. ಮುಂದೆ ಇವರೊಳಗೆ ಹಲ್ದಿಘಾಟ್ (ರಾಜಸ್ಥಾನ) ಎಂಬಲ್ಲಿ ಭೀಕರ ಕದನ ನಡೆಯಿತು. ಕದನದಲ್ಲಿ ರಾಣಾ ಪ್ರತಾಪಸಿಂಹನು ಸೋತನಾದರೂ ಕೊನೆಯವರೆಗೂ ದಿಟ್ಟತನದಿಂದ ಹೊರಡಿದನು.


ಚೇತಕ್ ಹೆಸರಿನ ತನ್ನ ನೆಚ್ಚಿನ ಕುದುರೆಯನ್ನೇರಿ ರಣರಂಗದಲ್ಲಿ ಹೋರಾಡುವ ಈತನ ಬೃಹತ್ ಕಂಚಿನ ಪ್ರತಿಮೆಯನ್ನು ಹಾಲ್ದಿಘಾಟ್‍ನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಸ್ಥಾಪಿಸಲಾಯಿತು. ಸ್ವದೇಶಾಭಿಮಾನಿಯಾದ ರಾಣಾ ಪ್ರತಾಪ್‍ಸಿಂಹ ಭಾರತೀಯರ ಕಣ್ಮಣಿಯಾಗಿ ಮೆರೆದಿದ್ದಾನೆ.

ಮುಂದೆ ಅಕ್ಬರ್ ಅನೇಕ ವರ್ಷಗಳ ಕಾಲ ಸೈನಿಕ ಕಾರ್ಯಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡನು. ಪರಿಣಾಮವಾಗಿ ಗುಜರಾತ್, ಬಂಗಾಳ, ಕಾಶ್ಮೀರ, ಕಾಬೂಲ್ ಮುಂತಾದ ಪ್ರದೇಶಗಳನ್ನು ಗೆದ್ದು ಬೃಹತ್ ಸಾಮ್ರಾಜ್ಯವನ್ನು ಸ್ಥಾಪಿಸಿದನು.
ಅಕ್ಬರನ ಸಾಧನೆಗಳು
ಆಡಳಿತ: ಉತ್ತಮ ಆಡಳಿತಗಾರನಾಗಿದ್ದ ಅಕ್ಬರ್ ವಿಶಾಲ ಮನೋಭಾವವನ್ನು ಹೊಂದಿದ್ದನು. ಉತ್ತಮ ರಾಜನಲ್ಲಿರಬೇಕಾದ ಬಹುತೇಕ ಗುಣಗಳು ಅವನಲ್ಲಿದ್ದವು. ಅವನು ನಿರಂಕುಶ ಪ್ರಭುವಾಗಿರಲಿಲ್ಲ. ಬಹುಸಂಖ್ಯಾತರಾದ ತನ್ನ ಹಿಂದು ಪ್ರಜೆಗಳ ವಿಶ್ವಾಸಗಳಿಸುವುದು ಅವಶ್ಯವೆಂದು ಮನಗಂಡನು. ಹಿಂದುಗಳಿಗೆ ತನ್ನ ಆಸ್ಥಾನದಲ್ಲಿ ಉನ್ನತ ಹುದ್ದೆಗಳನ್ನು ನೀಡಿದ. ಹಿಂದಿನ ಮುಸಲ್ಮಾನ ದೊರೆಗಳು ಹಿಂದುಗಳ ಮೇಲೆ ವಿಧಿಸಿದ್ದ `ಜೆಸಿಯಾ’ (ಜಿಜಿಯಾ) ಎಂಬ ತಲೆಗಂದಾಯ ಹಾಗೂ ಯಾತ್ರಾ ತೆರಿಗೆಯನ್ನು ರದ್ದುಪಡಿಸಿದನು. ಅಕ್ಬರನು ಗೋಹತ್ಯೆಯನ್ನು ಮತ್ತು ಸತಿ ಪದ್ಧತಿಯನ್ನು ತಡೆಹಿಡಿದನು. ಬಾಲ್ಯವಿವಾಹವನ್ನು ವಿರೋಧಿಸಿದನು. ಅಕ್ಬರನ ಭೂಕಂದಾಯ ಪದ್ಧತಿ ಜನಮನ್ನಣೆಯನ್ನು ಗಳಿಸಿತು. ಭೂಕಂದಾಯ ಪದ್ಧತಿಯನ್ನು ರೂಪಿಸಿದವನು ಮಂತ್ರಿಯಾಗಿದ್ದ ರಾಜಾ ತೋದರ್ ಮಲ್.

ಧಾರ್ಮಿಕ ನೀತಿ: ಅಕ್ಬರನು ಧಾರ್ಮಿಕ ಸಹಿಷ್ಣುವಾಗಿದ್ದನು. ತನ್ನ ಹೊಸ ರಾಜಧಾನಿಯಾದ ಫತೇಪುರ್ ಸಿಕ್ರಿಯಲ್ಲಿ ಇಬಾದತ್ ಖಾನಾ ಎಂಬ ಪ್ರಾರ್ಥನಾ ಮಂದಿರ ಕಟ್ಟಿಸಿದನು. ಇಲ್ಲಿ ಇಸ್ಲಾಮಿ ಪಂಥಗಳ ಮುಖಂಡರೊಡನೆ ಧಾರ್ಮಿಕ ವಿಚಾರಗಳನ್ನು ಚರ್ಚಿಸಿದನು. ಹಿಂದು, ಜೈನ, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್ ಮುಂತಾದ ಧಾರ್ಮಿಕ ಮುಖಂಡರನ್ನೂ ಇಲ್ಲಿಗೆ ಕರೆಸಿ ಅವರ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದನು. ಈ ಚಿಂತನೆಗಳ ಫಲವಾಗಿ ಅಕ್ಬರ್ `ದೀನ್-ಎ-ಇಲಾಹಿ’ ಎಂಬ ತನ್ನದೇ ಆದ ಹೊಸ ಪಂಥವನ್ನು ಸ್ಥಾಪಿಸಿದನು. ಅದು ಎಲ್ಲ ಮತಧರ್ಮಗಳ ಉತ್ತಮ ಅಂಶಗಳನ್ನು ಒಳಗೊಂಡಿತ್ತು. ಆದರೆ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಅದರ ಅನುಯಾಯಿಗಳಾಗಿದ್ದರು.

ಕಲಾಪೋಷಣೆ: ಅಕ್ಬರ್ ಸಾಹಿತ್ಯ ಕಲೆಗಳಿಗೆ ವಿಶೇಷ ಪ್ರೋತ್ಸಾಹ ನೀಡಿದನು. ಫೈಜಿ, ಅಬುಲ್ ಫಜಲ್ ಮತ್ತು ಬೀರಬಲ್ ಈತನ ಆಸ್ಥಾನದಲ್ಲಿದ್ದ ಗಣ್ಯ ಕವಿಗಳು. ಅಮರ ಸಂಗೀತಗಾರ ತಾನ್‍ಸೇನ್ ಅವನ ಆಸ್ಥಾನದ ಶೋಭೆಯನ್ನು ಹೆಚ್ಚಿಸಿದನು. ವಾಸ್ತುಶಿಲ್ಪ ಮತ್ತು ಚಿತ್ರಕಲೆಗಳಿಗೆ ಅಕ್ಬರ್ ನೀಡಿರುವ ಪೋಷಣೆ ಮೆಚ್ಚುವಂಥದ್ದು.
ಅಕ್ಬರನ ನಂತರ ಪಟ್ಟಕ್ಕೆ ಬಂದ ಜಹಾಂಗೀರ್ ಮತ್ತು ಷಹಜಹಾನ್ ಇಬ್ಬರೂ ಅವನ ನೀತಿಯನ್ನು ಬಹುಮಟ್ಟಿಗೆ ಅನುಸರಿಸಿದರು. ಷಹಜಹಾನ್ ಆಗ್ರಾದಲ್ಲಿ ಖ್ಯಾತ ತಾಜ್‍ಮಹಲ್, ದೆಹಲಿಯಲ್ಲಿ ಬೃಹತ್ ಕೆಂಪುಕೋಟೆ ಮತ್ತು ಭವ್ಯ ಅರಮನೆಗಳನ್ನು ನಿರ್ಮಾಣ ಮಾಡಿಸಿ ಪ್ರಸಿದ್ಧಿ ಪಡೆದನು.




ಔರಂಗಜೇಬ: ಷಹಜಹಾನನ ಮಗ ಔರಂಗಜೇಬ್ ಕೊನೆಯ ಮೊಘಲ ಸಾಮ್ರಾಟ. ಇವನು ಐವತ್ತು ವರ್ಷಗಳಷ್ಟು ಕಾಲ ಸುದೀರ್ಘ ಆಳ್ವಿಕೆ ನಡೆಸಿದನು. ಸಾಮ್ರಾಜ್ಯವು ಇನ್ನಷ್ಟು ವಿಸ್ತಾರಗೊಂಡಿತು. ಆದರೆ ಕೊನೆಯಲ್ಲಿ ಅದು ಶೀಘ್ರಗತಿಯಲ್ಲಿ ಅವನತಿ ಕಂಡಿತು.

ಧಾರ್ಮಿಕ ನೀತಿ: ಔರಂಗಜೇಬನು ಸಂಪ್ರದಾಯವಾದಿ ಮುಸಲ್ಮಾನನಾಗಿದ್ದನು. ಮದ್ಯಪಾನ, ಜೂಜು, ಮೋಜು ಮತ್ತು ಸಂಗೀತಗಳಿಂದ ದೂರವಾಗಿದ್ದನು.
ಔರಂಗಜೇಬನು ಅಕ್ಬರನ ಉದಾರನೀತಿಯನ್ನು ಕೈ ಬಿಟ್ಟನು. ಜೆಸಿಯಾ ತೆರಿಗೆಯನ್ನು ಮತ್ತೆ ಹೇರಿದನು. ಹಿಂದೂ ಜಾತ್ರೆಗಳು, ಬೋಧನೆ ಹಾಗೂ ಆಚರಣೆಗಳನ್ನು ನಿಷೇಧಿಸಿದನು. ಅವನ ರಾಜಾಜ್ಞೆಯಂತೆ ಅನೇಕ ಮಂದಿರಗಳು ನಾಶವಾದವು. ಈ ಕ್ರಮಗಳು ರಾಜಕೀಯ ಘರ್ಷಣೆಗಳಿಗೆ ಎಡೆಮಾಡಿಕೊಟ್ಟವು.
ಸಿಖ್ಖರ ದಂಗೆ: ಔರಂಗಜೇಬನ ಮತೀಯ ಧೋರಣೆಯು ಸಿಖ್ಖರು, ಮರಾಠರು ಮತ್ತು ಜಾಟರನ್ನು ಕೆರಳಿಸಿತು. ಸಿಖ್ ಗುರು ತೇಜ್ ಬಹಾದೂರ್‍ನನ್ನು ದೆಹಲಿಯಲ್ಲಿ ಬಹಿರಂಗವಾಗಿ ಕೊಲ್ಲಲಾಯಿತು. ಅವನ ಮಗ ಗುರು ಗೋವಿಂದಸಿಂಹನು ಇಡೀ ಸಿಖ್ ಸಮುದಾಯಕ್ಕೆ ವೀರದೀಕ್ಷೆ ನೀಡಿದನು. ದೀಕ್ಷೆ ಪಡೆದವರಿಗೆ ಸಿಂಗ್ (ಸಿಂಹ) ಎಂಬ ನಾಮಾಂಕಿತ ನೀಡಲಾಯಿತು. ಅವರು ಪಂಚ `ಕ’ಕಾರಗಳನ್ನು, ಅಂದರೆ ಕೇಶ (ಉದ್ದ ಕೂದಲು), ಕಂಗಾ (ಬಾಚಣಿಗೆ), ಕೃಪಾಣ (ಕಿರುಗತ್ತಿ), ಕಚ್ಚೆ (ತುಂಡು ಇಜಾರು) ಮತ್ತು ಕಂಕಣ (ಕಬ್ಬಿಣದ ಬಳೆ) ಧರಿಸಬೇಕಿತ್ತು. ಈ ಆಚರಣೆ ಸಿಖ್ಖರಲ್ಲಿ ಇಂದಿಗೂ ಜೀವಂತವಾಗಿದೆ.


ದಂಗೆಗಳು: ಉತ್ತರ ಭಾರತದಲ್ಲಿ ಸಿಖ್ಖರು ಮತ್ತು ರಜಪೂತರು ಔರಂಗಜೇಬನನ್ನು ಪ್ರಬಲವಾಗಿ ಪ್ರತಿಭಟಿಸಿದರು. ದಖನ್ ನಲ್ಲಿ ಶಿವಾಜಿ ಬಂಡಾಯ ಎದ್ದನು. ದಂಗೆಗಳು ದೀರ್ಘಕಾಲ ನಡೆದು ಔರಂಗಜೇಬನು ಭಾರಿ ಸಂಪತ್ತು, ಸೈನಿಕರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಪ್ರತಿಷ್ಠೆಯನ್ನು ಕಳೆದುಕೊಂಡನು. ಸಾಮ್ರಾಜ್ಯದ ಹಲವಾರು ಪ್ರದೇಶಗಳು ಸ್ವತಂತ್ರಗೊಂಡವು. ದಖನ್ನಿನ ಯುದ್ಧಗಳಿಂದ ಆರ್ಥಿಕವಾಗಿ ಹಾಗೂ ದೈಹಿಕವಾಗಿ ಬಹಳಷ್ಟು ಬಳಲಿದ ಔರಂಗಜೇಬನು ದಖನ್‍ನಲ್ಲಿ ಮರಣ ಹೊಂದಿದನು. ಇದರೊಂದಿಗೆ ಮೊಘಲರ ಪ್ರಾಬಲ್ಯವು ತೀವ್ರವಾಗಿ ಕುಂದಿತು.

ಮೊಘಲರ ಆಡಳಿತ: ಮೊಘಲ್ ಸಾಮ್ರಾಟನೇ ಎಲ್ಲ ನಾಗರಿಕ ಮತ್ತು ಸೈನಿಕ ಅಧಿಕಾರ ಹೊಂದಿದ್ದನು. ನ್ಯಾಯ ನೀಡಿಕೆಯಲ್ಲಿ ಈತನದು ಅಂತಿಮ ನಿರ್ಣಯವಾಗಿತ್ತು.
ಸಾಮ್ರಾಜ್ಯವನ್ನು ಪ್ರಾಂತ (ಸುಬಾ), ಜಿಲ್ಲೆ (ಸರ್ಕಾರ) ಮತ್ತು ತಾಲ್ಲೂಕುಗಳಾಗಿ (ಪರಗಣ) ವಿಂಗಡಿಸಲಾಗಿತ್ತು. ನಗರಗಳಲ್ಲಿ ಕೊತ್ವಾಲ ಎಂಬ ಅಧಿಕಾರಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತಿದ್ದನು.
ಕಂದಾಯ ವ್ಯವಸ್ಥೆ: ಅಕ್ಬರನ ಮಂತ್ರಿ ರಾಜಾ ತೋಡರ್ ಮಲ್ ಭೂಕಂದಾಯ ಪದ್ಧತಿಯನ್ನು ರೂಪಿಸಿದನು. ಭೂಮಿಯ ಫಲವತ್ತತೆಯ ಆಧಾರದಲ್ಲಿ ಕಂದಾಯವನ್ನು ನಿಗದಿ ಮಾಡಲಾಗಿತ್ತು.
ಸಾಂಸ್ಕೃತಿಕ ಕೊಡುಗೆಗಳು
ಅಕ್ಬರನ ಆಸ್ಥಾನದಲ್ಲಿ ಅಬುಲ್ ಫಜಲ್, ನಿಜಾಮುದ್ದೀನ್ ಮತ್ತು ಬದೌನಿ ಎಂಬವರು ಪ್ರಸಿದ್ಧ ಇತಿಹಾಸಕಾರರಾಗಿದ್ದರು. ಅಕ್ಬರ್ ನಾಮಾ ಅಬುಲ್ ಫಜಲನ ಪ್ರಮುಖ ಕೃತಿ. ಮೊಘಲ್ ರಾಜಕುಮಾರ ದಾರಾ ಷುಕೋ ಶ್ರೇಷ್ಠ ವಿದ್ವಾಂಸನಾಗಿದ್ದು, ಭಗವದ್ಗೀತೆಯನ್ನು ಭಾಷಾಂತರ ಮಾಡಿದನು. ಹಿಂದಿ ಸಾಹಿತ್ಯವು ರಾಜಾಶ್ರಯ ಪಡೆಯದಿದ್ದರೂ ಸಂತರ ಯತ್ನದಿಂದ ಶ್ರೀಮಂತಗೊಂಡಿತು. ರಾಮಚರಿತಮಾನಸ ಎಂಬ ತುಳಸೀದಾಸರ ಪ್ರಸಿದ್ಧ ಕೃತಿ ಇದೇ ಕಾಲದ್ದು.
ವಾಸ್ತುಶಿಲ್ಪ: ದೆಹಲಿಯಲ್ಲಿರುವ ಹುಮಾಯೂನನ ಸಮಾಧಿಯು ಅಕ್ಬರನ ಆರಂಭ ಕಾಲದ ನಿರ್ಮಾಣವಾಗಿದೆ. ಅವನು ಫತೇಪುರ ಸಿಕ್ರಿಯಲ್ಲಿ (ಆಗ್ರಾದ ಸಮೀಪ) ನೂತನ ರಾಜಧಾನಿಯನ್ನು ಕಟ್ಟಿಸಿದನು. ರಾಜಧಾನಿಯ ಭವ್ಯವಾದ ಅರಮನೆ, ಮಸೀದಿ ಮತ್ತು ಮಂಟಪಗಳು ದೇಶ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇಲ್ಲಿಯ ಜಾಮೀಯಾ ಮಸೀದಿಯ ಪ್ರವೇಶ ದ್ವಾರ (ಬುಲುಂದ್ ದರ್ವಾಜಾ) ಭಾರತದಲ್ಲಿಯೇ ಅತ್ಯುನ್ನತವಾಗಿದೆ. ಇದರ ಎತ್ತರ 40 ಮೀ.

ಷಹಜಹಾನನು ಆಗ್ರಾ ಕೋಟೆಯೊಳಗೆ ಕಟ್ಟಿಸಿದ ಅರಮನೆ, ಮೋತಿ ಮಹಲ್ ಅಮೋಘವಾಗಿವೆ. ಈತನು ಆಗ್ರಾದಲ್ಲಿ ತನ್ನ ಪ್ರೀತಿಯ ರಾಣಿಯಾದ ಮುಮ್ತಾಜ್ ಮಹಲ್ ಳ ಸ್ಮರಣಾರ್ಥವಾಗಿ ನಿರ್ಮಿಸಿದ ತಾಜ್‍ಮಹಲ್ ಮೊಘಲ್ ವಾಸ್ತುಶಿಲ್ಪಕ್ಕೆ ಕಳಸಪ್ರಾಯವಾಗಿದೆ. ದೆಹಲಿಯ ಪ್ರಸಿದ್ಧ ಕೆಂಪು ಕೋಟೆಯನ್ನು ಕೂಡ ಷಹಜಹಾನನು ಕಟ್ಟಿಸಿದನು.

ಚಿತ್ರಕಲೆ: ಮೊಘಲರ ಕಾಲದಲ್ಲಿ ನೂತನ ಚಿತ್ರಕಲಾ ಸಂಪ್ರದಾಯವೊಂದು ಹುಟ್ಟಿಕೊಂಡಿತು. ಇದನ್ನು ಚಿಕಿಣಿ ಎಂದು ಕರೆಯಲಾಗಿದೆ. ಅಕ್ಬರನ ಆಸ್ಥಾನದಲ್ಲಿ ನೂರಕ್ಕೂ ಹೆಚ್ಚು ಚಿತ್ರಕಾರರಿದ್ದರು.
ಚಿತ್ರಕಲೆಯು ಜಹಾಂಗೀರನ ಆಶ್ರಯದಲ್ಲಿ ಪರಿಪಕ್ವಗೊಂಡಿತು. ಮೂಲಭೂತವಾದಿಯಾಗಿದ್ದ ಔರಂಗಜೇಬ ಚಿತ್ರಕಲೆಗೆ ಪ್ರೋತ್ಸಾಹ ನೀಡಲಿಲ್ಲ.
ಸಂಗೀತ: ಅಕ್ಬರನ ಕಾಲದಲ್ಲಿ ಸಂಗೀತ ಕಲೆಗೆ ಪ್ರೋತ್ಸಾಹ ನೀಡಲಾಗಿತ್ತು. ಆಸ್ಥಾನದ ಸಂಗೀತಗಾರರನ್ನು ಏಳು ತಂಡಗಳಾಗಿ ವಿಂಗಡಿಸಲಾಗಿತ್ತು. ದಿನಕ್ಕೊಂದು ತಂಡದಂತೆ ಸಂಗೀತ ಕಚೇರಿಯನ್ನು ನಡೆಸಲಾಗುತ್ತಿತ್ತು. ತಾನ್‍ಸೇನನು ಅಕ್ಬರನ ಆಸ್ಥಾನದ ಅಮರ ಸಂಗೀತಗಾರ. ಜಹಾಂಗೀರ್ ಮತ್ತು ಷಹಜಹಾನನ ಕಾಲದಲ್ಲಿ ಕೂಡ ಸಂಗೀತಕ್ಕೆ ಪ್ರೋತ್ಸಾಹ ಸಿಕ್ಕಿತು. ಆದರೆ ಔರಂಗಜೇಬ ಸಂಗೀತವನ್ನು ನಿಷೇಧ ಮಾಡಿದನು. ಆದರೂ ಸಂಗೀತವು ಜನಮನದಿಂದ ಅಳಿಯಲಿಲ್ಲ.
ಮೊಘಲ್ ಸಾಮ್ರಾಜ್ಯದ ಅವನತಿ
ಔರಂಗಜೇಬನ ಕಾಲದಲ್ಲಿ ಸಾಮ್ರಾಜ್ಯವು ದುರ್ಬಲಗೊಂಡಿತು. ಇದಕ್ಕೆ ಕಾರಣಗಳು ಇವಾಗಿವೆ:
1) ಸರದಾರರು ಭ್ರಷ್ಟರಾಗತೊಡಗಿದರು.
2) ಸಿಂಹಾಸನದ ಉತ್ತರಾಧಿಕಾರಕ್ಕಾಗಿ ಭೀಕರ ಅಂತಃಕಲಹಗಳು ನಡೆದವು.
3) ಪ್ರಾಂತಾಧಿಕಾರಿಗಳು ಇದರ ಲಾಭಪಡೆದು ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು.
4) ಎಲ್ಲಕ್ಕಿಂತ ಮುಖ್ಯವಾಗಿ ಭಾರತವನ್ನು ಒಂದು ಇಸ್ಲಾಂಮತೀಯ ರಾಜ್ಯವನ್ನಾಗಿ ಪರಿವರ್ತಿಸುವ ಔರಂಗಜೇಬನ ನೀತಿಗೆ ಎಲ್ಲೆಡೆ ವಿರೋಧ ವ್ಯಕ್ತವಾಯಿತು.
5) ಸಿಖ್ಖರು, ರಜಪೂತರು ಮತ್ತು ಮರಾಠರೊಂದಿಗೆ ದೀರ್ಘಕಾಲದ ಸಂಘರ್ಷಗಳು ಸಾಮ್ರಾಜ್ಯದ ಶಕ್ತಿಯನ್ನು ಪೂರ್ತಿಯಾಗಿ ಇಂಗಿಸಿತು.
6) ಈ ನಡುವೆ ನಾದಿರ್‍ಷಾ ಎಂಬ ಪರ್ಷಿಯದ ದಾಳಿಕೋರನು ದೆಹಲಿಯ ಮೇಲೆ ಆಕ್ರಮಣಗೈದನು. ಮೊಘಲರು ಎರಡು ನೂರು ವರ್ಷ ಕಾಲ ಸಂಗ್ರಹಿಸಿದ ಧನಕನಕಾದಿಗಳನ್ನು ಸೂರೆಗೈದನು. ಜಗತ್ಪ್ರಸಿದ್ಧ ಕೊಹಿನೂರ್ ವಜ್ರ ಹಾಗೂ ಷಹಜಹಾನನ ಮಯೂರಸಿಂಹಾಸನವನ್ನು ಒಯ್ದುನು. ಮೊಘಲರ ಖಜಾನೆ ಬರಿದಾಯಿತು.
ಮರಾಠರು
ಛತ್ರಪತಿ ಶಿವಾಜಿ
ಉತ್ತರ ಭಾರತದಲ್ಲಿ ಮೊಗಲರು ಉಚ್ಛ್ರಾಯ ಕಾಲದಲ್ಲಿದ್ದಾಗ ದಖ್ಖನ್ ಪ್ರದೇಶದಲ್ಲಿ ಮೊಗಲರನ್ನು ಪ್ರತಿಭಟಿಸಿ ಅಧಿಕಾರಕ್ಕೆ ಬಂದವರು ಮರಾಠರು. ಮರಾಠ ಮನೆತನದ ಸ್ಥಾಪಕ ಶಿವಾಜಿ.
ಶಿವಾಜಿಯ ಬಾಲ್ಯ
ಶಿವಾಜಿಯು ಪುಣೆಯ ಬಳಿ ಇರುವ ಶಿವನೇರಿ ದುರ್ಗದಲ್ಲಿ ಜನಿಸಿದನು. ಇವನ ತಂದೆ ಷಹಾಜಿ ಭೋಸ್ಲೆ. ಈತನು ವಿಜಯಪುರ ಸುಲ್ತಾನನ ಬಳಿ ಉನ್ನತ ಹುದ್ದೆಯಲ್ಲಿ ಇದ್ದುದರಿಂದ ತಾಯಿ ಜೀಜಾಬಾಯಿಯೇ ಶಿವಾಜಿಯ ಭವಿಷ್ಯ ರೂಪಿಸಿದಳು. ಅವಳು ರಾಮಾಯಣ, ಮಹಾಭಾರತ ಮುಂತಾದ ಕಾವ್ಯ ಪುರಾಣಗಳ ವೀರಾಧಿವೀರರ ಕಥೆಗಳನ್ನು ತನ್ನ ಮಗನಿಗೆ ಹೇಳುತ್ತ ಅವನಲ್ಲಿ ಧರ್ಮರಕ್ಷಣೆ, ದೇಶಾಭಿಮಾನದ ಮನೋಭಾವವನ್ನು ಪ್ರಚೋದಿಸಿದ್ದಳು. ಗುರುವಾಗಿದ್ದ ದಾದಾಜಿ ಕೊಂಡದೇವ ಮತ್ತು ತಾನಾಜಿ ಮಾಲಸುರೆ ಶಿವಾಜಿಗೆ ಶಸ್ತ್ರಾಸ್ತ್ರ ವಿದ್ಯೆ ಕಲಿಸಿ, ಈ ತರುಣ ವೀರನ ಮನಸ್ಸನ್ನು ಜಾಗೃತಗೊಳಿಸಿದರು. ಪ್ರಾರಂಭದಲ್ಲಿ ಶಿವಾಜಿಯು ಮರಾಠ ಮುಖಂಡರು ಮತ್ತು ಪಶ್ಚಿಮ ಘಟ್ಟಗಳ ಮಾವಳಿಯೆಂಬ ದೃಢಕಾಯರಾದ ಗಿರಿಜನರನ್ನು ಸೇರಿಸಿ ತರುಣರ ಪಡೆಯನ್ನು ಕಟ್ಟಿದನು.


ಶಿವಾಜಿಯ ಆರಂಭದ ಸಾಹಸಗಳು: ಶಿವಾಜಿಯು ತನ್ನ 19ನೇ ವರ್ಷದಲ್ಲಿ ವಿಜಯಪುರದ ಆದಿಲ್‍ಷಾನ ಅಧೀನದಲ್ಲಿದ್ದ ತೋರಣದುರ್ಗವನ್ನು ವಶಪಡಿಸಿಕೊಂಡನು. ನಂತರ ರಾಯಗಡ, ಸಿಂಹಗಡ, ಪ್ರತಾಪಗಡ ಮುಂತಾದ ಕೋಟೆಗಳನ್ನು ಒಂದೊಂದಾಗಿ ಗೆದ್ದುಕೊಂಡನು. ಇದರಿಂದ ಕುಪಿತನಾದ ವಿಜಯಪುರ ಸುಲ್ತಾನನು ಶಿವಾಜಿಯನ್ನು ಹತ್ತಿಕ್ಕಲು ತನ್ನ ಸೇನಾನಿ ಅಫ್ಜಲ್‍ಖಾನನನ್ನು ಕಳುಹಿಸಿದನು. ಅಫ್ಜಲ್‍ಖಾನ್ ಒಪ್ಪಂದದ ಮಾತುಗಳನ್ನಾಡಲು ಶಿವಾಜಿಯನ್ನು ಬರಹೇಳಿ, ಮೋಸದಿಂದ ಅವನನ್ನು ಕೊಲ್ಲಲೆತ್ನಿಸಿದ. ಆದರೆ ಶಿವಾಜಿಯದೇ ಮೇಲುಗೈ ಆಗಿ ಅವನು ಅಫ್ಜಲ್‍ಖಾನನನ್ನು ಕೊಂದನು.
ಶಿವಾಜಿ ಮತ್ತು ಅಫ್ಜಲ್‍ಖಾನ್ ಭೇಟಿಯಾದಾಗ ಪರಸ್ಪರ ಆಲಿಂಗನದ ವೇಳೆ ಖಾನನು ತನ್ನ ಕಠಾರಿಯಿಂದ ಶಿವಾಜಿಯ ಬೆನ್ನಿಗೆ ಇರಿಯುವಷ್ಟರಲ್ಲಿಯೇ ಶಿವಾಜಿ ಗುಪ್ತವಾಗಿ ಧರಿಸಿದ್ದ ಹುಲಿಯುಗುರಿನಿಂದ (ವ್ಯಾಘ್ರನಖ) ಆತನ ದೇಹವನ್ನು ಸೀಳಿ ಕೊಂದನು.

ಮೊಘಲ್ ಸೇನಾನಿಯ ಅಪಜಯ: ಶಿವಾಜಿಯು ದಿನೇದಿನೇ ಬಲಗೊಳ್ಳುತ್ತಿರುವ ಸುದ್ದಿ ಔರಂಗಜೇಬನ ಕಿವಿಗೂ ಮುಟ್ಟಿತು. ಔರಂಗಜೇಬನು ದಖನ್ ಪ್ರದೇಶದಲ್ಲಿ ತನ್ನ ಅಧಿಕಾರಿಯಾಗಿದ್ದ ಷಯಿಸ್ತಾಖಾನನನ್ನು ಶಿವಾಜಿಯ ನಿಗ್ರಹಕ್ಕಾಗಿ ಕಳುಹಿಸಿಕೊಟ್ಟ. ಆದರೆ ಶಿವಾಜಿ ಷಯಿಸ್ತಾಖಾನನ್ನು ಉಪಾಯದಿಂದ ಸೋಲಿಸಿದ.
ಷಯಿಸ್ತಾಖಾನ್ ಪುಣೆಯ ಅರಮನೆಯಲ್ಲಿ ಬೀಡುಬಿಟ್ಟಿದ್ದ. ಎರಡು ವರ್ಷ ಕಳೆದರೂ ಶಿವಾಜಿಯನ್ನು ಸೆರೆಹಿಡಿಯಲು ಅವನಿಗೆ ಸಾಧ್ಯವಾಗಲಿಲ್ಲ. ಶಿವಾಜಿ ಸೈನಿಕರೊಂದಿಗೆ ವೇಷ ಬದಲಿಸಿ ಖಾನನ ವಾಸಸ್ಥಾನವನ್ನು ಕಾಳರಾತ್ರಿಯ ವೇಳೆ ಪ್ರವೇಶಿಸಿ ಆತನ ಮೇಲೆ ಹಠಾತ್ತನೆ ದಾಳಿಯಿಟ್ಟ. ಖಾನನು ಹೇಗೋ ದಾಳಿಯಿಂದ ಪಾರಾದರೂ ತನ್ನ ಹೆಬ್ಬೆರಳನ್ನು ಕಳೆದುಕೊಂಡ. ಷಯಿಸ್ತಾಖಾನ್ ಭಯಭೀತಿಯಿಂದ ಪುಣೆಯಿಂದ ಪಲಾಯನ ಮಾಡಿದ.
ದಖನಿಗೆ ರಾಜಾ ಜಯಸಿಂಹ: ಇದಾದ ಮುಂದಿನ ವರ್ಷವೇ ಶಿವಾಜಿ ಮೊಘಲರ ವಶವಿದ್ದ ಸೂರತ್ ನಗರವನ್ನು ಮುತ್ತಿಗೆ ಹಾಕಿ ಅಪಾರ ಧನವನ್ನು ವಶಪಡಿಸಿಕೊಂಡ. ಸಿಟ್ಟಿಗೆದ್ದ ಔರಂಗಜೇಬ್ ಹೇಗಾದರೂ ಮಾಡಿ ಶಿವಾಜಿಯನ್ನು ಸೋಲಿಸಬೇಕೆಂದು ಪಣತೊಟ್ಟು ರಾಜಾ ಜಯಸಿಂಹನೆಂಬ ಉನ್ನತ ಸೇನಾನಿಯನ್ನು ಕಳುಹಿಸಿದ. ಅವರೊಳಗೆ ಯುದ್ಧ ನಡೆದು ಶಿವಾಜಿ ಸೋತನಲ್ಲದೆ ತನ್ನ ಹಲವು ಕೋಟೆಗಳನ್ನು ಮೊಘಲರಿಗೆ ಒಪ್ಪಿಸಬೇಕಾಗಿ ಬಂದಿತು. ಒಪ್ಪಂದ ಮಾಡಿಕೊಳ್ಳಲು ಶಿವಾಜಿಯನ್ನು ದಿಲ್ಲಿಗೆ ಬರಮಾಡಿಕೊಳ್ಳಲಾಯಿತು. ಔರಂಗಜೇಬ್ ಶಿವಾಜಿಯನ್ನು ಬಂಧಿಸಿ ಆಗ್ರಾದ ಸೆರೆಮನೆಯಲ್ಲಿಟ್ಟ. ಆದರೆ ಶಿವಾಜಿಯು ಉಪಾಯದಿಂದ ಸೆರೆಯಿಂದ ತಪ್ಪಿಸಿಕೊಂಡು ತನ್ನ ರಾಜಧಾನಿ ಸೇರಿದ.

ಮುಂದೆ ಎರಡು ವರ್ಷಗಳ ಕಾಲ ಶಿವಾಜಿಯು ತನ್ನ ಅಧಿಕಾರವನ್ನು ಇನ್ನಷ್ಟು ಬಲಪಡಿಸಿಕೊಂಡ. ಕಳೆದುಕೊಂಡ ಎಲ್ಲಾ ಕೋಟೆಗಳನ್ನು ಮೊಘಲರಿಂದ ಗೆದ್ದುಕೊಂಡು ಸೂರತ್ ನಗರಕ್ಕೆ ಮುತ್ತಿಗೆ ಹಾಕಿ ಅಪಾರ ಸಂಪತ್ತನ್ನು ಸಂಗ್ರಹಿಸಿದ.
ಶಿವಾಜಿಯ ಪಟ್ಟಾಭಿಷೇಕ: ಅಲ್ಪಕಾಲದಲ್ಲೇ ಶಿವಾಜಿಯ ಪಟ್ಟಾಭಿಷೇಕವು ರಾಜಧಾನಿಯಾದ
ರಾಯಗಡದಲ್ಲಿ ಅತ್ಯಂತ ವೈಭವದಿಂದ ನಡೆಯಿತು. ಅವನು ಛತ್ರಪತಿ’ ಎಂಬ ಬಿರುದು ಧರಿಸಿ ತನ್ನ ರಾಜ್ಯವನ್ನುಹಿಂದವೀ ಸ್ವರಾಜ್ಯ’ ಎಂದು ಕರೆದ. ಮುಂದೆ ಶಿವಾಜಿಯು ಜಿಂಜಿ, ವೆಲ್ಲೂರು, ಮೈಸೂರು ಪ್ರಾಂತ್ಯದ ವಿಶಾಲವಾದ ಭೂಭಾಗವನ್ನು ಗೆದ್ದುಕೊಂಡು ಅಪಾರ ಸಂಪತ್ತನ್ನು ಕೂಡಿಹಾಕಿದ. ಆದರೆ ಮರಾಠರ ವೈಭವವನ್ನು ನೋಡಲು ಶಿವಾಜಿ ಬಹುಕಾಲ ಬಾಳಲಿಲ್ಲ.
ಶಿವಾಜಿಯ ಆಡಳಿತ ಪದ್ಧತಿ
ಆಡಳಿತದಲ್ಲಿ ಸಹಕರಿಸಲು ಅಷ್ಟಪ್ರಧಾನರು ಎಂಬ ಎಂಟು ಮಂತ್ರಿಗಳಿದ್ದರು. ಪ್ರಧಾನಮಂತ್ರಿಯನ್ನು ಪೇಶ್ವೆ ಎಂದು ಕರೆಯಲಾಗುತ್ತಿತ್ತು.
ಕಂದಾಯ ಆಡಳಿತ: ರೈತರು ಬಿತ್ತನೆ ಬೀಜ ಮತ್ತು ರಾಸುಗಳನ್ನು ಕೊಳ್ಳಲು ಅನುಕೂಲವಾಗುವಂತೆ ಸರ್ಕಾರ ಅವರಿಗೆ ಸಾಲ ನೀಡುತ್ತಿತ್ತು. ಕೃಷಿಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತಿತ್ತು. ಉತ್ಪನ್ನದ ಮೂರನೇ ಒಂದು ಭಾಗವನ್ನು ಕಂದಾಯ ರೂಪದಲ್ಲಿ ಸಂಗ್ರಹಿಸಲಾಗುತ್ತಿತ್ತು.
ಸೈನ್ಯಾಡಳಿತ: ಶಿವಾಜಿಯು ಸೈನ್ಯಾಡಳಿತಕ್ಕೆ ವಿಶೇಷ ಒತ್ತುಕೊಟ್ಟನು. ಸೈನ್ಯದಲ್ಲಿ ಕಾಲ್ದಳ, ಅಶ್ವದಳ, ನೌಕಾದಳ ಮತ್ತು ಫಿರಂಗಿದಳಗಳಿದ್ದುವು. ಶಿವಾಜಿಯ ಸೈನ್ಯವು ಶಿಸ್ತಿಗೆ ಹೆಸರಾಗಿತ್ತು. ಪ್ರಜೆಗಳನ್ನು ಮತ್ತು ಪಶುಗಳನ್ನು ಲೂಟಿ ಮಾಡುವಂತಿರಲಿಲ್ಲ.
ಕೋಟೆಗಳು: ಶಿವಾಜಿ ಗೆರಿಲ್ಲ ಯುದ್ಧತಂತ್ರವನ್ನು ಬಳಸುತ್ತಿದ್ದ. ಗೆರಿಲ್ಲ ಯುದ್ಧಯೋಧರಿಗೆ ರಕ್ಷಣೆ ಪಡೆಯಲು ಕೋಟೆಗಳು ಅತ್ಯುತ್ತಮ ಸ್ಥಳಗಳಾಗಿದ್ದವು. ಅವನ ವಶದಲ್ಲಿದ್ದ 240 ಕೋಟೆಗಳಲ್ಲಿ 111 ಕೋಟೆಗಳನ್ನು ಅವನೇ ಕಟ್ಟಿಸಿದ್ದನು.

ಚಿಕ್ಕ ಚಿಕ್ಕ ತಂಡಗಳಲ್ಲಿ ಶತ್ರುಗಳ ಮೇಲೆ ಹಠಾತ್ತನೆ ದಾಳಿ ಮಾಡುವ, ಶತ್ರುಗಳಿಗೆ ಕಾಟ ಕೊಡುವ ಯುದ್ಧತಂತ್ರವೇ ಗೆರಿಲ್ಲ ಯುದ್ಧತಂತ್ರ. ಯುದ್ಧಕಾಲದಲ್ಲಿ ಸೆರೆಸಿಕ್ಕಿದ ಸ್ತ್ರೀಯರನ್ನು ಅವರ ಪೋಷಕರಿಗೆ ಒಪ್ಪಿಸಲಾಗುತ್ತಿತ್ತು. ಯುದ್ಧಕಾಲದಲ್ಲಿ ಸೈನಿಕರು ಮಸೀದಿಗಳನ್ನು ನಾಶಮಾಡುವಂತಿರಲಿಲ್ಲ. ಪವಿತ್ರ ಕುರಾನಿನ ಪ್ರತಿಯು ಕೈಸೇರಿದರೆ ಅದನ್ನು ಗೌರವಪೂರ್ವಕವಾಗಿ ಸಂಬಂಧಪಟ್ಟವರಿಗೆ ಹಿಂತಿರುಗಿಸಬೇಕಾಗಿತ್ತು.
ಶಿವಾಜಿಯ ವ್ಯಕ್ತಿತ್ವ ಮತ್ತು ಸಾಧನೆ
ತನ್ನ ಜೀವನದಲ್ಲಿ ಅತ್ಯುಚ್ಚ ಗುಣಸ್ವಭಾವವನ್ನು ಹೊಂದಿದ ದೊರೆ ಶಿವಾಜಿ. ಅವನ ಪರಧರ್ಮಸಹಿಷ್ಣುತೆ ಅನುಸರಣೀಯವಾಗಿತ್ತು.
ಶಿವಾಜಿಯು ಬಾಲ್ಯದಿಂದಲೂ ಉತ್ತಮ ನಾಯಕನಾಗಿದ್ದನು. ಶಕ್ತಿಯನ್ನು ಶಕ್ತಿಯಿಂದಲೂ, ಮೋಸವನ್ನು ಮೋಸದಿಂದಲೂ ಎದುರಿಸುವ ಕಾರ್ಯಚತುರತೆ ಅವನಲ್ಲಿತ್ತು.
ಶಿವಾಜಿಯ ಸೇನಾ ವ್ಯವಸ್ಥೆ ಅದ್ಭುತವಾಗಿತ್ತು. ಗೆರಿಲ್ಲ ಯುದ್ಧತಂತ್ರವು ಅವನ ಪ್ರತಿಭೆಗೆ ಸಾಕ್ಷಿಯಾಗಿತ್ತು. ಒಟ್ಟಿನಲ್ಲಿ ಶಿವಾಜಿಯು ಓರ್ವ ಆದರ್ಶ ಪುರುಷನಾಗಿದ್ದನು.
ಶಿವಾಜಿಯ ಗುರು ಸಮರ್ಥ ರಾಮದಾಸರು ಒಮ್ಮೆ ಶಿವಾಜಿಯಲ್ಲಿಗೆ ಬಂದು ಭಿಕ್ಷಾಪಾತ್ರೆಯನ್ನು ಚಾಚಿದಾಗ ತನ್ನ ರಾಜ್ಯವನ್ನೇ ಅವರಿಗೆ ಒಪ್ಪಿಸಿಕೊಟ್ಟ. ರಾಮದಾಸರು ಇದನ್ನು ಸ್ವೀಕರಿಸಿ, ಮತ್ತೆ ಶಿವಾಜಿಗೆ ಹಿಂದಿರುಗಿಸಿದರು. “ನನ್ನ ಪರವಾಗಿ ನೀನು ರಾಜ್ಯವಾಳು”, ಎಂದು ಹರಸಿದರು. ಸಂತ ರಾಮದಾಸರ ಪ್ರೇರಣೆಯಿಂದ ಮಹಾರಾಷ್ಟ್ರದಲ್ಲಿ ಸುಮಾರು 1200 ಗರಡಿ ಮನೆಗಳನ್ನು ಸ್ಥಾಪಿಸಲಾಯಿತು.

ಕಾಲಗಣನೆ (ಸಾ.ಶ.)
ಬಾಬರ್ – ಸಾ.ಶ. 1526-1530
ಅಕ್ಬರ್ – ಸಾ.ಶ. 1556-1605
ಔರಂಗಜೇಬ – ಸಾ.ಶ. 1659-1707
ಶಿವಾಜಿ – ಸಾ.ಶ. 1627-1680
ಹೊಸ ಪದಗಳು
ಕಲಿತನ – ಶೂರತನ
ಪುತ್ತಳಿ – ವಿಗ್ರಹ
ಕೊತ್ವಾಲ್ – ಕೋಟೆ ಮತ್ತು ನಗರ ರಕ್ಷಕ
ಜೆಸಿಯಾ – ಮುಸಲ್ಮಾನ ದೊರೆಗಳು ಪ್ರತಿಯೊಬ್ಬ ವ್ಯಕ್ತಿಯೂ ಕೊಡಬೇಕೆಂದು ಹಿಂದೂ ಜನರ ಮೇಲೆ ವಿಧಿಸುತ್ತಿದ್ದ ತಲೆಗಂದಾಯ
ಸರದಾರ – ಮುಖ್ಯ ಅಧಿಕಾರಿ
ಹಿಂದವೀ ಸ್ವರಾಜ – ಹಿಂದೂ ಸ್ವರಾಜ್ಯ
ಛತ್ರಪತಿ – ಮಹಾರಾಜ
ಸಂವೇದ ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
ಚಟುವಟಿಕೆಗಳು
ಮೊಘಲರ ವಾಸ್ತುಕೃತಿಗಳ ಚಿತ್ರಗಳನ್ನು ವಿವರಣೆಯೊಂದಿಗೆ ಸಂಗ್ರಹಿಸಿ.
https://en.wikipedia.org/wiki/Mughal_architecture
ಮಾಹಿತಿಗಾಗಿ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಮೊಘಲ್ ಕಾಲದ ಐತಿಹಾಸಿಕ ಸ್ಥಳಗಳನ್ನು ಭೂಪಟದಲ್ಲಿ ಗುರುತಿಸಿ.
https://en.wikipedia.org/wiki/Mughal_Empire
ಮಾಹಿತಿಗಾಗಿ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ
* * * * * *
