ಮೈಸೂರು ಮತ್ತು ಇತರ ಸಂಸ್ಥಾನಗಳು – 7ನೇ ತರಗತಿ ಸಮಾಜ

ಪಾಠದ ಪರಿಚಯ : ಈ ಪಾಠದಲ್ಲಿ ಮೈಸೂರಿನ ಒಡೆಯರ ರಾಜಮನೆತನವನ್ನು ಪರಿಚಯಿಸಿ, ಪ್ರಾರಂಭದ ಪ್ರಸಿದ್ಧ ಅರಸ ಚಿಕ್ಕದೇವರಾಜನ ಜನಮುಖಿ ಸುಧಾರಣೆಗಳನ್ನು ಹೇಳಲಾಗಿದೆ. ಅನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಮಧ್ಯಂತರ ಆಳ್ವಿಕೆ, ಮೈಸೂರು ಯುದ್ಧಗಳು ಮತ್ತು ಅವರ ಸಾಧನೆಗಳನ್ನು ನಿರೂಪಿಸಲಾಗಿದೆ.

ವಿಜಯನಗರದ ಪತನಾನಂತರ ಕೆಲವೇ ದಶಕಗಳಲ್ಲಿ ಕರ್ನಾಟಕವು ಮುಖ್ಯವಾಗಿ ಮೂರು ಆಡಳಿತಗಳಿಗೆ ಒಳಗಾಯಿತು. ಅವೆಂದರೆ ವಿಜಯಪುರ, ಕೆಳದಿ ಮತ್ತು ಮೈಸೂರು. ವಿಜಯಪುರ ರಾಜ್ಯ ಕೊನೆಗೊಂಡ ಬಳಿಕ ಕರ್ನಾಟಕದ ಬಹುಭಾಗದಲ್ಲಿ ಮೊಗಲ್ ಮತ್ತು ಮರಾಠರ ಆಡಳಿತ ನಡೆಯಿತು. ಇವರ ಮೇಲಾಟದ ನಡುವೆಯೂ ತಮ್ಮ ರಾಜ್ಯಗಳನ್ನು ಸ್ವತಂತ್ರವಾಗಿ ಉಳಿಸಿಕೊಂಡ ಕೆಳದಿ ಮತ್ತು ಮೈಸೂರು ರಾಜ್ಯಗಳು ವಿಜಯನಗರದ ಪರಂಪರೆಯನ್ನು ತಮ್ಮ ಪ್ರದೇಶದಲ್ಲಿ ಮುಂದುವರಿಸಿಕೊಂಡು ಬಂದವು. ಇವಲ್ಲದೆ ಚಿತ್ರದುರ್ಗ, ಯಲಹಂಕ (ಬೆಂಗಳೂರು) ಮುಂತಾದ ಹಲವು ಪಾಳೆಯಪಟ್ಟುಗಳು ಬೆಳೆದವು. ಈ ಪಾಠದಲ್ಲಿ ಕೆಳದಿ ಮತ್ತು ಚಿತ್ರದುರ್ಗದ ನಾಯಕರು ಹಾಗೂ ಯಲಹಂಕ ನಾಡಪ್ರಭುಗಳ ಸಾಧನೆಗಳನ್ನು ವಿವರಿಸಲಾಗಿದೆ.

ಕರ್ನಾಟಕವನ್ನಾಳಿದ ರಾಜ್ಯ ಸಾಮ್ರಾಜ್ಯಗಳ ಶ್ರೀಮಂತ ಇತಿಹಾಸದ ತಿಳಿವಳಿಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಕರ್ನಾಟಕದ ಚಿಕ್ಕ ಪುಟ್ಟ ಪ್ರದೇಶಗಳ ಇತಿಹಾಸದ ಅರಿವು. ಏಕೆಂದರೆ ಪ್ರಾದೇಶಿಕ ಇತಿಹಾಸವು ಸತ್ವಪೂರ್ಣವಾಗಿದೆಯಲ್ಲದೆ, ಅದು ಕರ್ನಾಟಕದ ಒಟ್ಟು ಇತಿಹಾಸದ ಅರ್ಥೈಸುವಿಕೆಗೆ ಪೂರಕವಾಗಿದೆ. ಈ ದೃಷ್ಟಿಯಿಂದ ಕೊಡಗು, ಕಿತ್ತೂರು, ತುಳುನಾಡು ಮತ್ತು ಹೈದರಾಬಾದ್-ಕರ್ನಾಟಕದ ಚರಿತ್ರೆಯ ಮುಖಗಳನ್ನು ಈ ಪಾಠದಲ್ಲಿ ನಿರೂಪಿಸಲಾಗಿದೆ.

6.1 ಮೈಸೂರಿನ ಒಡೆಯರು

ಮೈಸೂರು ನಗರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿದೆ. ಬೆಟ್ಟದ ಮೇಲಿನ ಚಾಮುಂಡೇಶ್ವರಿ ದೇವಿ ಮೈಸೂರು ಒಡೆಯರ ಮನೆತನದ ಅಧಿದೇವತೆ. ಒಡೆಯರ ವಂಶದ ಅರಸರು ವಿಜಯನಗರದ ಪರಂಪರೆಯನ್ನು ಮುಂದುವರಿಸಿಕೊಂಡು, ಸಮಾಜ-ಸಂಸ್ಕೃತಿಗೆ ಅಪಾರ ಸೇವೆ ಸಲ್ಲಿಸಿದರು. ಸುದೀರ್ಘ ಕಾಲ ಆಳ್ವಿಕೆ ನಡೆಸಿ ಜನರ ಪ್ರೀತಿ, ಗೌರವಗಳಿಗೆ ಪಾತ್ರರಾದರು.

ಚಾಮುಂಡಿ ಬೆಟ್ಟ

ಚಾಮುಂಡೇಶ್ವರಿ ದೇವಿ

ಒಡೆಯರ ರಾಜಧಾನಿ ಮೈಸೂರು. ರಾಜ್ಯದ ಲಾಂಛನ ಗಂಡಭೇರುಂಡ. ಮೈಸೂರಿನ ನವರಾತ್ರಿ ಉತ್ಸವ (ದಸರಾ) ಒಂದು ಸಂಭ್ರಮದ ಸಮಾರಂಭ. ಅಲ್ಲಿನ ಅರಮನೆ ಭಾರತದ ಭವ್ಯ ಅರಮನೆಗಳಲ್ಲೊಂದು. ಅರಮನೆ ಮತ್ತು ಸಿಂಹಾಸನದ ಚಿತ್ರಗಳನ್ನು ನೋಡಿ.

ರಾಜ್ಯದ ಲಾಂಛನ ಗಂಡಭೇರುಂಡ

ಮೈಸೂರು ಅರಮನೆಯನ್ನು ಹೊಸದಾಗಿ 1912ರಲ್ಲಿ ಕಟ್ಟಲಾಯಿತು. ಇದರ ಮೊದಲಿದ್ದ ಕಟ್ಟಿಗೆಯ (ಮರದ) ಅರಮನೆ ಅಗ್ನಿಗೆ ಆಹುತಿಯಾಗಿ ಭಸ್ಮಗೊಂಡಿತು. ಹೊಸ ಅರಮನೆಯ ನಿರ್ಮಾಣಕಾರ್ಯಕ್ಕೆ ದೇಶವಿದೇಶಗಳಿಂದ ಕುಶಲಕರ್ಮಿಗಳು ಬಂದಿದ್ದರು. ಅರಮನೆಯ ಸಭಾಂಗಣವನ್ನು (ದರ್ಬಾರ್ ಹಾಲ್) ಪ್ರಸಿದ್ಧ ಚಿತ್ರಕಲಾಕಾರ ರಾಜಾ ರವಿವರ್ಮ ಶೃಂಗರಿಸಿದನು.

ಚಿಕ್ಕದೇವರಾಜ ಒಡೆಯರ್

ಚಿಕ್ಕದೇವರಾಜನು ಒಡೆಯರ ವಂಶದ ಪ್ರಾರಂಭದ ಪ್ರಸಿದ್ಧ ಅರಸ. ಶೂರನಾಗಿದ್ದ ಇವನು ರಾಜ್ಯವನ್ನು ವಿಸ್ತರಿಸಿದ.

ಜನಮುಖಿ ಸಾಧನೆಗಳು

ಚಿಕ್ಕದೇವರಾಜನ ಜನಮುಖಿ ಸಾಧನೆಗಳು ಅನೇಕ. ರಾಜಧಾನಿಯಲ್ಲಿ ಹದಿನೆಂಟು ಶಾಖೆಗಳುಳ್ಳ ಮುಖ್ಯ ಆಡಳಿತ ಕಚೇರಿಯನ್ನು ಸ್ಥಾಪಿಸಿದ. ಇದೇ ‘ಅಠಾರಾ ಕಚೇರಿ’. ಜನರು ಮೋಸ ಹೋಗದಂತೆ ಅಳತೆ ಮತ್ತು ತೂಕಗಳನ್ನು ಕುರಿತು ನಿಯಮಗಳನ್ನು ರೂಪಿಸಿದ. ಆಡಳಿತದಲ್ಲಿ ಲಂಚಗುಳಿತನವನ್ನು ತಡೆಯಲು ಕ್ರಮಗಳನ್ನು ಕೈಗೊಂಡ.

ಚಿಕ್ಕದೇವರಾಜನು ಮೊಗಲರಿಗೆ ಮೂರು ಲಕ್ಷ ವರಹಗಳನ್ನು ತೆತ್ತು ಬೆಂಗಳೂರನ್ನು ಗುತ್ತಿಗೆಗೆ ಪಡೆದಿದ್ದನು.

ಶ್ರೀರಂಗಪಟ್ಟಣದ ಬಳಿ ಪಶ್ಚಿಮದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಕೃಷಿಗೆ ನೀರು ಒದಗಿಸಿದ. ಆಡಳಿತದಲ್ಲಿ ಮಿತವ್ಯಯ ಸಾಧಿಸಿ ಭಾರಿ ನಿಧಿಯನ್ನು ಕೂಡಿಟ್ಟು, `ನವಕೋಟಿ ನಾರಾಯಣ’ಎಂಬ ಬಿರುದನ್ನು ಪಡೆದ. ಸರ್ಕಾರದ ಕಾಗದಪತ್ರಗಳ ವಿತರಣೆಗೆ `ಅಂಚೆ’ ವ್ಯವಸ್ಥೆಯನ್ನು ಸ್ಥಾಪಿಸಿದ.

ಚಿಕ್ಕದೇವರಾಜನ ಕಾಲದಲ್ಲಿ ಮೈಸೂರು ಸಂಪದ್ಭರಿತ ರಾಜ್ಯವಾಗಿತ್ತಲ್ಲದೆ ಅವನು ದಕ್ಷಿಣ ಭಾರತದ ಪ್ರಸಿದ್ಧ ಅರಸನೆನಿಸಿಕೊಂಡನು.

ಚಿಕ್ಕದೇವರಾಜನ ಆಸ್ಥಾನದಲ್ಲಿದ್ದ ಸಿಂಗರಾರ್ಯನು ಮೊತ್ತ  ಮೊದಲನೆಯ ನಾಟಕ `ಮಿತ್ರವಿಂದಾ ಗೋವಿಂದ’ ರಚಿಸಿದನು. `ಹದಿಬದೆಯ ಧರ್ಮ’ ಎಂಬ ಕೃತಿಯು ಸಂಚಿ ಹೊನ್ನಮ್ಮಳ ಕಾವ್ಯ. ಇವಳು ತಾಂಬೂಲದ ಸಂಚಿಯನ್ನು ರಾಜನ ಬಳಿ ಒಯ್ಯುವ ಊಳಿಗದಲ್ಲಿದ್ದು `ಸಂಚಿ ಹೊನ್ನಮ್ಮ’ ಎಂದೇ ಇವಳ ರೂಢಿಯ ಹೆಸರಾಯಿತು.

ಚಿಕ್ಕದೇವರಾಜನ ಮರಣಾನಂತರ ದುರ್ಬಲ ಅರಸರು ಆಳಿದರು. ಇದರಿಂದಾಗಿ ದಳವಾಯಿಗಳೆಂಬ ಅಧಿಕಾರಿಗಳು ಆಡಳಿತವನ್ನು ರಾಜನ ಹೆಸರಿನಲ್ಲಿ ನಡೆಸಿದರು.

ಹೈದರ್ ಅಲಿ

ಹೈದರ್ ಅಲಿಯು ದಳವಾಯಿ ನಂಜರಾಜನ ಸೇನೆಯಲ್ಲಿ ಸಮರ್ಥ ಸೇನಾನಿಯಾಗಿದ್ದ. ಶೂರನೂ ಸಾಹಸಿಯೂ ಆಗಿದ್ದ. ಯುದ್ಧಗಳಲ್ಲಿ ಜಯಗಳಿಸಿ ಹಂತಹಂತವಾಗಿ ತನ್ನ ಸೇನಾಬಲ ಮತ್ತು ಧನಬಲವನ್ನು ಬೆಳೆಸಿಕೊಂಡ. ಶೀಘ್ರವೇ ಬೆಂಗಳೂರಿನಲ್ಲಿ ಮರಾಠರನ್ನು ಸೋಲಿಸುವ ಅವಕಾಶ ಪಡೆದು ಅವನು ರಾಜನಿಂದ ಅಪೂರ್ವ ಗೌರವಕ್ಕೆ ಪಾತ್ರನಾದ. ಮೈಸೂರು ರಾಜ್ಯವನ್ನು ಸಂದಿಗ್ಧ ರಾಜಕೀಯದಿಂದ ಪಾರು ಮಾಡಿದ. ರಾಜಧಾನಿಯಲ್ಲಿ ಸೈನಿಕರ ಬಂಡಾಯ ಕಾಣಿಸಿಕೊಂಡಾಗ ದಳವಾಯಿ ನಂಜರಾಜನನ್ನು ನಿವೃತ್ತಿಗೊಳಿಸಿ ರಾಜ್ಯಾಧಿಕಾರವನ್ನು ರಾಜ್ಯದ `ಕಾರ್ಯಕರ್ತ’ ತಾನೆಂದು ಕರೆದುಕೊಂಡು ಎರಡನೆಯ ಕೃಷ್ಣರಾಜ ಒಡೆಯರನ್ನು ಬದಿಗೊತ್ತಿದನು.

ಅಧಿಕಾರ ವಹಿಸಿಕೊಂಡ ಒಡನೆಯೇ ಹೈದರ್ ರಾಜ್ಯ ವಿಸ್ತರಣೆಯಲ್ಲಿ ತೊಡಗಿದನು. ಕೆಳದಿ ರಾಜರನ್ನು ಸೋಲಿಸಿದನು. ಅಲ್ಲಿನ ಅಪಾರ ಧನಕನಕಾದಿಗಳನ್ನು ವಶಪಡಿಸಿಕೊಂಡು ತನ್ನ ಧನಬಲವನ್ನು ಇನ್ನಷ್ಟು ಹೆಚ್ಚಿಸಿಕೊಂಡನು.

ಬ್ರಿಟಿಷರೊಂದಿಗೆ ಹೋರಾಟ: ವ್ಯಾಪಾರಿಗಳಾಗಿ ಭಾರತಕ್ಕೆ ಬಂದಿದ್ದ ಬ್ರಿಟಿಷರು ಕ್ರಮೇಣ ರಾಜಕೀಯ ಶಕ್ತಿಯಾಗಿ ಎದ್ದು ನಿಂತರು. ಹೈದರ್ ದಕ್ಷಿಣ ಭಾರತದಲ್ಲಿ ರಾಜ್ಯ ವಿಸ್ತರಣೆ ಮಾಡುವುದನ್ನು ಅವರು ಸಹಿಸದಾದರು. ಹೀಗಾಗಿ ಹೈದರ್ ಮತ್ತು ಬ್ರಿಟಿಷರ ನಡುವೆ ಸಂಘರ್ಷ ಅನಿವಾರ್ಯವಾಯಿತು.

ಹೈದರ್ ಮತ್ತು ಅವನ ಮಗನಾದ ಟಿಪ್ಪು ಸುಲ್ತಾನ್ ಬ್ರಿಟಿಷರೊಡನೆ ಮಾಡಿದ ನಾಲ್ಕು ಯುದ್ಧಗಳನ್ನು `ಮೈಸೂರು ಯುದ್ಧಗಳು’ ಅಥವಾ `ಆಂಗ್ಲೋ-ಮೈಸೂರು ಯುದ್ಧಗಳು’ ಎನ್ನುವರು.

ಮೊದಲನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಅಪಾರ ಹಾನಿಗೊಳಗಾದರು. ವಿಜಯಗಳಿಸಿದ ಹೈದರನ ಘನತೆ ಹೆಚ್ಚಿತು.

ಇದೇ ವೇಳೆ ಮರಾಠರು ಕೂಡ ದಕ್ಷಿಣ ಭಾರತದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿದ್ದರು. ಮರಾಠರು ಮೈಸೂರನ್ನು ಆಕ್ರಮಣ ಮಾಡಿದ ಸಂದರ್ಭದಲ್ಲಿ ಬ್ರಿಟಿಷರು ಹೈದರನ ಸಹಾಯಕ್ಕೆ ಬರತಕ್ಕದ್ದು ಎಂಬುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಮರಾಠರು ಮೈಸೂರನ್ನು ಆಕ್ರಮಣ ಮಾಡಿದಾಗ ಬ್ರಿಟಿಷರು ಒಪ್ಪಂದವನ್ನು ಮುರಿದು ತಟಸ್ಥರಾದರು. ಇದರಿಂದ ಹೈದರ್ ಸಿಡಿಮಿಡಿಗೊಂಡು ಬ್ರಿಟಿಷರನ್ನು ಯುದ್ಧಕ್ಕೆಳೆದ. ಈ ಯುದ್ಧವೇ ಎರಡನೆಯ ಮೈಸೂರು ಯುದ್ಧ. ಯುದ್ಧ ನಡೆಯುತ್ತಿದ್ದಂತೆ ಹೈದರ್ ಮರಣವನ್ನಪ್ಪಿದ. ಯುದ್ಧವನ್ನು ಟಿಪ್ಪು ಸುಲ್ತಾನ್ ಮುಂದುವರಿಸಿದ.

ಹೈದರ್ ಅಲಿಯ ಸಾಧನೆ: ಹೈದರನಿಗೆ ಓದುಬರಹ ಬರುತ್ತಿಲ್ಲವಾದರೂ ಕನ್ನಡ ಸೇರಿದಂತೆ ಹಲವು ಭಾಷೆಗಳನ್ನು ಚೆನ್ನಾಗಿ ಬಲ್ಲವನಾಗಿದ್ದನು. ಅವನು ಮೈಸೂರು ರಾಜ್ಯದ ವಿಸ್ತಾರವನ್ನು ಇಮ್ಮಡಿಗೊಳಿಸಿದ. ಶೂರ ಯೋಧನೂ ದಕ್ಷ ಆಡಳಿತಗಾರನೂ ಆಗಿದ್ದ ಹೈದರ್ ಅಲಿಗೆ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಸ್ಥಾನವಿದೆ. ಬೆಂಗಳೂರಿನ ಸುಂದರ ಉದ್ಯಾನವನ ಲಾಲ್ಬಾಗ್ ಅವನಿಂದಲೇ ಆರಂಭ ಆದುದು.

ಲಾಲ್ಬಾಗ್

ಟಿಪ್ಪು ಸುಲ್ತಾನ್

ತನ್ನ ತಂದೆಯ ಕಾಲದ ಯುದ್ಧಗಳಲ್ಲಿ ಪಾಲ್ಗೊಂಡು ವಿಜಯವನ್ನು ಗಳಿಸಿದ ಟಿಪ್ಪು ಸುಲ್ತಾನ್ ಧೀರ ತರುಣನಾಗಿದ್ದ. ತನ್ನನ್ನು ಸುಲ್ತಾನನೆಂದು ಘೋಷಿಸಿ ತನ್ನ ರಾಜ್ಯ `ದೈವದತ್ತ’ವೆಂದು ಪ್ರಕಟಿಸಿಕೊಂಡ.

ತಂದೆಯ ಮರಣಾನಂತರ ಆಗ ನಡೆಯುತ್ತಿದ್ದ ಯುದ್ಧವನ್ನು ಟಿಪ್ಪು ಮುಂದುವರೆಸಿದ. ಆತನ ಸಹಾಯಕ್ಕೆ ಯಾರೂ ಬರಲಿಲ್ಲ. ಟಿಪ್ಪು ಏಕಾಂಗಿಯಾಗಿ ಬ್ರಿಟಿಷರನ್ನು ಎದುರಿಸಲಾರದೆ ಮಂಗಳೂರಿನಲ್ಲಿ ಒಪ್ಪಂದ ಮಾಡಿಕೊಂಡ. ಮಂಗಳೂರು ಒಪ್ಪಂದ ಉಭಯ ಪಕ್ಷದವರಿಗೂ ಹಿತಕರವಾಗಿದ್ದಿತು. ಇಬ್ಬರೂ ಗೆದ್ದದ್ದ ಪ್ರದೇಶಗಳನ್ನು ಬಿಟ್ಟುಕೊಟ್ಟು ಯುದ್ಧಕೈದಿಗಳನ್ನು ಹಿಂತಿರುಗಿಸಿದರು.

ಅಲ್ಪಕಾಲದಲ್ಲೇ ಟಿಪ್ಪು ಮತ್ತು ಬ್ರಿಟಿಷ್ ನಡುವೆ ಇನ್ನೆರಡು ಯುದ್ಧಗಳು ನಡೆದುವು. ಟಿಪ್ಪು ಮತ್ತು ಬ್ರಿಟಿಷರ ನಡುವಣ ಪರಸ್ಪರ ದ್ವೇಷ ಮತ್ತು ಅಪನಂಬಿಕೆಯೇ ಈ ಯುದ್ಧಗಳಿಗೆ ಮೂಲ ಕಾರಣವಾಗಿತ್ತು.

ಮೂರನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಆಕ್ರಮಣ ಮಾಡುತ್ತಾ ರಾಜಧಾನಿಯಾದ ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕಿದರು. ಬೇರೆ ಮಾರ್ಗ ತೋಚದೆ ಟಿಪ್ಪು ಬ್ರಿಟಿಷರೊಡನೆ ಶಾಂತಿ ಒಪ್ಪಂದ ಮಾಡಿಕೊಂಡನು. ಶಾಂತಿ ಒಪ್ಪಂದದಂತೆ ಅವನು ಅರ್ಧರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದನು. ಅಪಾರ ಪರಿಹಾರ ಧನವನ್ನು ಅವರಿಗೆ ನೀಡಬೇಕಾಯಿತು. ತನ್ನಿಬ್ಬರು ಮಕ್ಕಳನ್ನು ಕೂಡ ಬ್ರಿಟಿಷರಿಗೆ ಒತ್ತೆಯಾಳಾಗಿ ಕೊಡಬೇಕಾಯಿತು.

ಯುದ್ಧದ ಪರಿಣಾಮವಾಗಿ ಟಿಪ್ಪು ಅವಮಾನಗೊಂಡನು. ಬ್ರಿಟಿಷರನ್ನು ಭಾರತದಿಂದ ಹೊರದಬ್ಬಲು ದೃಢಸಂಕಲ್ಪ ಮಾಡಿದನು. ಇದು ನಾಲ್ಕನೆಯ ಮೈಸೂರು ಯುದ್ಧಕ್ಕೆ ನಾಂದಿಯಾಯಿತು. ಯುದ್ಧದಲ್ಲಿ ಶ್ರೀರಂಗಪಟ್ಟಣವು ಮುತ್ತಿಗೆಗೊಳಗಾಯಿತು.

ಟಿಪ್ಪು ವೀರಾವೇಶದಿಂದ ಹೋರಾಡಿ ಅಸುನೀಗಿದ. ಟಿಪ್ಪುವು ‘ಮೈಸೂರಿನ ಹುಲಿ’ಯೆಂದು ಪ್ರಸಿದ್ಧನಾಗಿದ್ದಾನೆ.

ಟಿಪ್ಪು ಸುಲ್ತಾನನ ಮರಣಾನಂತರ ಮೈಸೂರು ರಾಜ್ಯ ಬ್ರಿಟಿಷರ ವಶವಾಯಿತು, ಬ್ರಿಟಿಷರು ಒಡೆಯರ ರಾಜವಂಶದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ರಾಜ್ಯವನ್ನು ಹಸ್ತಾಂತರಿಸಿದರು. ಆದರೆ ಮೈಸೂರು ಬ್ರಿಟಿಷರ ಆಶ್ರಿತ ರಾಜ್ಯವಾಯಿತು.

6.2 ಕೆಳದಿ, ಚಿತ್ರದುರ್ಗ ಮತ್ತು ಯಲಹಂಕ

ಕೆಳದಿಯ ನಾಯಕರು

ನಾಯಕರು: ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಅನೇಕ ಚಿಕ್ಕಪುಟ್ಟ ಅರಸರಿದ್ದರು. ಇವರೇ ನಾಯಕರು ಅಥವಾ ಪಾಳೆಯಗಾರರು. ಪಾಳೆಯಗಾರರ ವಶವಿದ್ದ ಸೀಮೆಯನ್ನು ಪಾಳೆಯಪಟ್ಟು ಎನ್ನುತ್ತಿದ್ದರು. ನಾಯಕರಲ್ಲಿ ಕೆಳದಿ ಮತ್ತು ಚಿತ್ರದುರ್ಗದ ನಾಯಕರು ಪ್ರಸಿದ್ಧರು.

ವಿಜಯನಗರದ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ರಾಜ್ಯವು ಸ್ಥಾಪನೆಗೊಂಡು ಮುಂದೆ ಅದು ಸ್ವತಂತ್ರಗೊಂಡಿತು. ಕೆಳದಿಯ ನಾಯಕರು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ಆಳುತ್ತಿದ್ದರು.

ಕೆಳದಿ ಸಂಸ್ಥಾನವು ವಿಶಾಲ ಹಾಗೂ ಸಂಪದ್ಭರಿತವಾಗಿತ್ತು. ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು (ಕೇರಳ), ಕೊಡಗು, ಹಾಸನ, ತುಮಕೂರು, ಚಿತ್ರದುರ್ಗ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭಾಗಗಳನ್ನು ಒಳಗೊಂಡು ಕೆಳದಿ ರಾಜ್ಯವಿತ್ತು.

ಹಿರಿಯ ವೆಂಕಟಪ್ಪ ನಾಯಕ: ವೆಂಕಟಪ್ಪ ನಾಯಕನು ಕೆಳದಿ ಅರಸರಲ್ಲೇ ಅತ್ಯಂತ ಪ್ರಖ್ಯಾತನಾಗಿದ್ದನು, ಇವನ ಕಾಲದಲ್ಲಿ ಕೆಳದಿ ರಾಜ್ಯವು ಪೂರ್ಣ ಸ್ವತಂತ್ರವಾಯಿತು. ಈತನು ಕರಾವಳಿಯಲ್ಲಿ ಚಂದ್ರಗಿರಿ ನದಿಯವರೆಗೆ ವಿಜಯಯಾತ್ರೆ ಮಾಡಿದನು. ಉಳ್ಳಾಲದ ರಾಣಿ ಅಬ್ಬಕ್ಕಳ ನೆರವಿನಿಂದ ಪೋರ್ಚುಗೀಸರನ್ನು ಮಂಗಳೂರಿನಲ್ಲಿ ಈತನು ಸೋಲಿಸಿದನು. ವಿಜಯಪುರದ ಆದಿಲ್ಷಾಹಿ ಸೇನೆಯನ್ನು ಸೋಲಿಸಿ ಹಾನಗಲ್ನಲ್ಲಿ ವಿಜಯಸ್ತಂಭ ಸ್ಥಾಪಿಸಿದನು. ಸಕಲ ಮತಗಳಿಗೆ ಈತನು ಪ್ರೋತ್ಸಾಹ ನೀಡಿದನು.

ಶಿವಪ್ಪ ನಾಯಕ

ಶಿವಪ್ಪ ನಾಯಕ ಕೆಳದಿಯ ಪ್ರಸಿದ್ಧ ಅರಸನಾಗಿದ್ದನು. ಇವನು ಕರಾವಳಿಯ ಪೋರ್ಚುಗೀಸರ ಕೋಟೆಗಳನ್ನು ವಶಪಡಿಸಿಕೊಂಡು ‘ಪಡುಗಡಲೊಡೆಯ’ ಎನಿಸಿದನು. ರಾಜ್ಯದ ರಕ್ಷಣೆಗಾಗಿ ಬೇಕಲ ಮತ್ತು ಚಂದ್ರಗಿರಿ (ಕೇರಳ) ಹಾಗೂ ಮಂಗಳೂರು ಮುಂತಾದೆಡೆಗಳಲ್ಲಿ ಭದ್ರವಾದ ಕೋಟೆಗಳನ್ನು ಕಟ್ಟಿಸಿದನು. ಧರ್ಮ ಶ್ರದ್ಧೆಯುಳ್ಳವನಾದ ಶಿವಪ್ಪ ನಾಯಕನು ವಾಜಪೇಯ ಮುಂತಾದ ವೈದಿಕ ಯಜ್ಞಗಳನ್ನು ಮಾಡಿಸಿದನು.

ವ್ಯಾಪಾರದ ಅಭಿವೃದ್ಧಿಗಾಗಿ ಗೋವೆಯ ವ್ಯಾಪಾರಿ ವರ್ಗದವರಿಗೆ ತನ್ನ ರಾಜ್ಯದಲ್ಲಿ ಬಂದು ನೆಲೆಸಲು ಪ್ರೋತ್ಸಾಹ ನೀಡಿದನು. ಗೋವೆಯ ಕ್ರೈಸ್ತರು ಕೃಷಿಯಲ್ಲಿ ನಿಪುಣರಾದುದರಿಂದ ಅವರಿಗೂ ತನ್ನ ರಾಜ್ಯಕ್ಕೆ ವಲಸೆ ಬರಲು ಪ್ರೋತ್ಸಾಹಿಸಿ, ಭೂಮಿ ಕಾಣಿಕೆಗಳನ್ನು ಕೊಟ್ಟನು. ಅವನು ತನ್ನ ರಾಜ್ಯದಲ್ಲಿ ಪಾದ್ರಿಗಳು ಮಾತ್ರ ಸ್ಥಳೀಯರೇ ಇರಬೇಕೆಂದು ಕಟ್ಟಳೆ ಮಾಡಿದ್ದನು.

ಶಿವಪ್ಪನಾಯಕನ ಸಿಸ್ತು: ಶಿವಪ್ಪ ನಾಯಕನು ಅಳವಡಿಸಿದ ಕಂದಾಯ ವ್ಯವಸ್ಥೆಯನ್ನು ‘ಸಿಸ್ತು’ ಎಂದು ಕರೆಯಲಾಗಿದೆ. ಈ ಕಂದಾಯ ಪದ್ಧತಿಯಂತೆ ಭೂಕಂದಾಯವನ್ನು ನಿಗದಿಪಡಿಸಲು ಭೂಮಿಯನ್ನು ವರ್ಗೀಕರಿಸಲಾಗುತ್ತಿತ್ತು. ಮಣ್ಣಿನ ಗುಣ, ನೀರಾವರಿ ಸವಲತ್ತು ಇತ್ಯಾದಿ ಅಂಶಗಳು ವರ್ಗೀಕರಣದ ಮೂಲವಾಗಿದ್ದವು. ಹೊಲದ ಇಳುವರಿಯ ಮೂರನೆಯ ಒಂದಂಶವನ್ನು  ಕಂದಾಯ ರೂಪದಲ್ಲಿ ಸಂಗ್ರಹಿಸಲಾಗುತ್ತಿತ್ತು. ಇಂಥ ಕ್ರಮಬದ್ಧ ಕಂದಾಯ ಪದ್ಧತಿಯನ್ನು ‘ಶಿವಪ್ಪ ನಾಯಕನ ಸಿಸ್ತು’ ಎನ್ನುವರು. ಸಿಸ್ತು ಮಲೆನಾಡಿನ ಸಮೃದ್ಧಿಗೆ ಕಾರಣವಾಯಿತು.

ರಾಣಿ ಚೆನ್ನಮ್ಮಾಜಿ: ಶಿವಪ್ಪ ನಾಯಕನ ಅನಂತರ ಅವನ ಸೊಸೆ ರಾಣಿ ಚೆನ್ನಮ್ಮಾಜಿ ರಾಜ್ಯವಾಳಿದಳು. ಅವಳು ಮೊಗಲರ ಸೈನ್ಯವನ್ನು ಹಿಮ್ಮೆಟ್ಟಿಸಿ ಶಿವಾಜಿಯ ಮಗ ಛತ್ರಪತಿ  ರಾಜಾರಾಮನಿಗೆ ರಕ್ಷಣೆ ನೀಡಿದಳು. ಕನ್ನಡ ನಾಡಿನ ಶೌರ್ಯ, ತ್ಯಾಗಕ್ಕೆ ಸಂಕೇತವಾಗಿದ್ದ ಚೆನ್ನಮ್ಮ ಮೈಸೂರಿನ ಸೈನ್ಯದೊಂದಿಗೂ ಸೆಣಸಾಡಿದಳು. ಕೆಳದಿ ಅರಸರು ದೇವಸ್ಥಾನಗಳು, ಅಗ್ರಹಾರಗಳು ಮತ್ತು ವೀರಶೈವ ಮಠಗಳನ್ನು ಸ್ಥಾಪಿಸಿದರು. ಕೆಳದಿಯ ಅಘೋರೇಶ್ವರ ದೇವಾಲಯ ಶಿಲ್ಪಕಲೆಗೆ ಪ್ರಸಿದ್ಧವಾಗಿದೆ. ಮಠಗಳು ದಾಸೋಹ ಹಾಗೂ ಶಿಕ್ಷಣದ ಕೇಂದ್ರಗಳಾಗಿದ್ದವು. ಸಕಲ ಧರ್ಮಗಳಿಗೆ ಅಪಾರ ದತ್ತಿದಾನ ನೀಡಿದರು. ಚಿನ್ನಮ್ಮಾಜಿಯು ಮಂಗಳೂರಿನಲ್ಲಿ ಕ್ರೈಸ್ತ ದೇವಾಲಯಕ್ಕೆ ನಿವೇಶನವಿತ್ತಳು.

ಮೈಸೂರಿನ ಜೊತೆ ಸತತ ಸ್ಪರ್ಧೆ ಹಾಗೂ ಆಂತರಿಕ ಯುದ್ಧಗಳಿಂದಾಗಿ ಕೆಳದಿ ರಾಜ್ಯ ದುರ್ಬಲವಾಯಿತು. ಮುಂದೆ ಹೈದರನು ಅದನ್ನು ವಶಪಡಿಸಿಕೊಂಡನು.

ಚಿತ್ರದುರ್ಗದ ನಾಯಕರು

ಮೈಸೂರು ಮತ್ತು ಕೆಳದಿ ಅರಸರುಗಳ ನಂತರ ಚಿತ್ರದುರ್ಗದ ನಾಯಕರಿಗೆ ಕರ್ನಾಟಕದ ಇತಿಹಾಸದಲ್ಲಿ ಒಂದು ಗಣ್ಯ ಸ್ಥಾನವಿದೆ. ಇವರು 16ರಿಂದ 18ನೇ ಶತಮಾನದವರೆಗೆ ಪಾಳೆಯಗಾರರಾಗಿ ಆಳ್ವಿಕೆ ನಡೆಸಿದರು.

ಮದಕರಿ ನಾಯಕ : ಈತನು ಚಿತ್ರದುರ್ಗದ ನಾಯಕರಲ್ಲಿ ಅತ್ಯಂತ ಪ್ರಬಲ ಹಾಗೂ ಪ್ರಸಿದ್ಧನಾಗಿದ್ದನು. ಕೇವಲ ಹನ್ನೆರಡು ವರ್ಷದವನಾಗಿದ್ದಾಗಲೇ ಸಿಂಹಾಸನವನ್ನೇರಿದನು. ಮದಕರಿಯು ಹೈದರ್ ಅಲಿಗೆ ಹಲವಾರು ಯುದ್ಧಗಳಲ್ಲಿ ಸಹಾಯ ಮಾಡಿದನು. ಆದರೆ ಮದಕರಿಯ ಸಾಹಸವನ್ನು ಮನಗಂಡ ಹೈದರ್ ಅಲಿ ಒಳಗೊಳಗೇ ಮತ್ಸರಪಟ್ಟನು. ಈತನನ್ನು ಹತ್ತಿಕ್ಕಲು ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿದನು. ಏಳು ಸುತ್ತಿನ ಭಾರಿ ಗಾತ್ರದ ಅಭೇದ್ಯ ಕೋಟೆಯನ್ನು ವಶಪಡಿಸಿಕೊಳ್ಳಲು ಹೈದರನಿಗೆ ಅಸಾಧ್ಯವಾಗಿತ್ತು. ಆದುದರಿಂದ ಆತನ ಸೈನಿಕರು ಕೋಟೆಯ ರಹಸ್ಯದಾರಿಯನ್ನು ಪತ್ತೆಮಾಡಿ, ಕಾವಲುಗಾರನಿಲ್ಲದ ವೇಳೆ ಕಳ್ಳಗಿಂಡಿಯಿಂದ ಅದನ್ನು ಪ್ರವೇಶಿಸಲು ಯತ್ನಿಸಿದರು. ಆ ವೇಳೆಗೆ ಕಾವಲುಗಾರನ ಹೆಂಡತಿ ಓಬವ್ವ ತನ್ನ ಓನಕೆಯಿಂದ ಅನೇಕ ಶತ್ರುಗಳನ್ನು ಕೊಂದು ಹಾಕಿದಳು. ಇಂದಿಗೂ ಚಿತ್ರದುರ್ಗದ ಕೋಟೆಯ ಪಶ್ಚಿಮದಲ್ಲಿ ವೀರವನಿತೆ ‘ಓಬವ್ವನ ಕಿಂಡಿ’ ಇದೆ.

ಮದಕರಿ ನಾಯಕ

ಚಿತ್ರದುರ್ಗದ ಕೋಟೆ

ಚಿತ್ರದುರ್ಗದ ಕೋಟೆ

ಸೋಲನ್ನೊಪ್ಪದ ಹೈದರನು ಚಿತ್ರದುರ್ಗಕ್ಕೆ ಮತ್ತೊಮ್ಮೆ ಮುತ್ತಿಗೆ ಹಾಕಿದನು. ಭೀಕರ ಯುದ್ಧವೊಂದು ನಡೆದು ಮದಕರಿಗೆ ಸೋಲಾಯಿತು. ಮದಕರಿಯನ್ನು ಬಂಧಿಸಿ ಅನಂತರ ಕೊಲ್ಲಲಾಯಿತು. ಮದಕರಿ ಗತಿಸುವುದರೊಂದಿಗೆ ಚಿತ್ರದುರ್ಗದ ನಾಯಕರ ವಂಶ ಅಳಿಯಿತು.

ಚಿತ್ರದುರ್ಗವು ಒಂದು ಆಕರ್ಷಕವಾದ ಗಿರಿದುರ್ಗವಾಗಿದ್ದು ಏಳು ಸುತ್ತಿನ ಕೋಟೆಯನ್ನು ಹೊಂದಿದೆ. ಇದರ ಒಳಗಿನ ನಿವೇಶನದಲ್ಲಿ ಹಲವು ದೇವಾಲಯಗಳೂ ಕೆರೆಗಳೂ ಇವೆ. ಚಿತ್ರದುರ್ಗದ ನಾಯಕರು ಹಲವಾರು ದೇವಾಲಯಗಳನ್ನು ಕಟ್ಟಿಸಿದರು. ಭರಮಸಾಗರ ಮತ್ತು ಭೀಮಸಮುದ್ರ ಜಲಾಶಯಗಳು ಇವರ ಕೊಡುಗೆಗಳಾಗಿವೆ. ತಮ್ಮ ಶೌರ್ಯ, ಸಾಹಸಗಳಿಗೆ ಚಿತ್ರದುರ್ಗದ ನಾಯಕರು ಖ್ಯಾತರಾಗಿದ್ದಾರೆ. ಈ ಮನೆತನದ ಬಗ್ಗೆ ಸಮೃದ್ಧವಾದ ಜನಪದ ಸಾಹಿತ್ಯವಿದೆ.

ಯಲಹಂಕ ನಾಡಪ್ರಭುಗಳು

ಕೆಂಪೇಗೌಡ ಮನೆತನದವರೆಂದು ಪ್ರಸಿದ್ಧವಾಗಿರುವ ಯಲಹಂಕ ನಾಡಪ್ರಭುಗಳು ಆಧುನಿಕ ಬೆಂಗಳೂರಿನ  ನಿರ್ಮಾಪಕರು. ಇವರು ವಿಜಯನಗರದ ಪಾಳೆಯಗಾರರಾಗಿದ್ದರು. ಮುಂದೆ 16-18ನೇ ಶತಮಾನಗಳ ಕಾಲಾವಧಿಯಲ್ಲಿ ಬೆಂಗಳೂರು ಜಿಲ್ಲೆಯ ಬಹುತೇಕ ಭಾಗಗಳ ಮೇಲೆ ಇವರು ಆಳ್ವಿಕೆ ನಡೆಸಿದರು. ಪ್ರಾರಂಭದಲ್ಲಿ ಬೆಂಗಳೂರು, ಅನಂತರ ಮಾಗಡಿ ಇವರ ರಾಜಧಾನಿಯಾಗಿತ್ತು.

ಒಂದನೆಯ ಕೆಂಪೇಗೌಡ: ಒಂದನೆಯ ಕೆಂಪೇಗೌಡನು ಬೆಂಗಳೂರು ನಗರದ ಸ್ಥಾಪಕನೆಂದು ಹೆಸರುವಾಸಿಯಾಗಿದ್ದಾನೆ. ಇವನು ಬೆಂಗಳೂರಿನಲ್ಲಿ ಕೋಟೆಯೊಂದನ್ನು ಕಟ್ಟಿ ಅಲ್ಲಿಂದ ಆಳ್ವಿಕೆ ನಡೆಸಿದ. ಬೆಂಗಳೂರಿನ ಬಸವನಗುಡಿಯ ಬಸವನ ದೇವಾಲಯ, ಹಲಸೂರಿನ ಸೋಮೇಶ್ವರ ದೇವಾಲಯಗಳ ರಚನೆ ಹಾಗೂ ಗವಿಗಂಗಾಧರೇಶ್ವರ ದೇವಾಲಯದ ವಿಸ್ತರಣೆ ಈತನ ಸಾಧನೆಯಾಗಿದೆ. ಬೆಂಗಳೂರಿನಲ್ಲಿ ಅನೇಕ ಕೆರೆಗಳನ್ನು ನಿರ್ಮಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ.

ಬೆಂಗಳೂರಿನ ಬಸವನಗುಡಿಯ ಬಸವನ ದೇವಾಲಯ

ಹಲಸೂರಿನ ಸೋಮೇಶ್ವರ ದೇವಾಲಯ

ಗವಿಗಂಗಾಧರೇಶ್ವರ ದೇವಾಲಯ

ಒಂದನೆಯ ಕೆಂಪೇಗೌಡನು ನಿರ್ಮಿಸಿದ ನಾಲ್ಕು ಕೆರೆಗಳೆಂದರೆ ಕೆಂಪಾಂಬುಧಿ, ಧರ್ಮಾಂಬುಧಿ, ಹಲಸೂರು ಹಾಗೂ ಸಂಪಂಗಿ.

ಕೆಂಪಾಂಬುಧಿ

ಹಲಸೂರು

ಸಂಪಂಗಿ

ಒಂದನೆಯ ಕೆಂಪೇಗೌಡನು ಅನೇಕ ಛತ್ರ ಮತ್ತು ಅಗ್ರಹಾರಗಳನ್ನು ಕಟ್ಟಿಸಿದನು. ಧರ್ಮಪ್ರಭುವಾಗಿ ಆಳಿದ ಇವನಿಗೆ `ಪ್ರಜಾವತ್ಸಲ’ ಎಂಬ ಬಿರುದಿತ್ತು.

ಎರಡನೆಯ ಕೆಂಪೇಗೌಡನು ಒಂದನೆಯ ಕೆಂಪೇಗೌಡನ ಮಗ. ಕೆಂಪೇಗೌಡ ಮನೆತನದವರು ಮಾಗಡಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತವನ್ನು ನಿರ್ವಹಿಸಿದರು.  ಹೀಗಾಗಿ ಈ ಸಂತತಿಯ ದೊರೆಗಳನ್ನು ಮಾಗಡಿ ಕೆಂಪೇಗೌಡರೆಂದು ಕರೆಯುವ ವಾಡಿಕೆಯಿದೆ. ಎರಡನೇ ಕೆಂಪೇಗೌಡನು ಬೆಂಗಳೂರು ನಗರದ ಎಲ್ಲೆಕಟ್ಟುಗಳನ್ನು ಗುರುತಿಸಿ ನಾಲ್ಕು ಗೋಪುರಗಳನ್ನು ಕಟ್ಟಿಸಿದನು. ಇವನ ಕಾಲದಲ್ಲಿ ಬೆಂಗಳೂರು ನೇಯ್ಗೆಯ ದೊಡ್ಡ ಕೇಂದ್ರವಾಗಿ ಬೆಳೆಯಿತು. ತನ್ನ ತಂದೆಯಂತೆ  ಇವನು ಕೂಡ ಹೊಸ ಹಳ್ಳಿಗಳು, ದೇವಾಲಯಗಳು ಮತ್ತು ಕೆರೆಗಳ ನಿರ್ಮಾಣ ಮಾಡಿ ಹೆಸರುಗಳಿಸಿದನು. ಮುಂದೆ, ಯಲಹಂಕ ನಾಡಪ್ರಭುಗಳ ಸಂಸ್ಥಾನ ಮೈಸೂರು ಸಂಸ್ಥಾನದೊಂದಿಗೆ ಸೇರ್ಪಡೆಯಾಯಿತು.

6.3 ಕೊಡಗು, ಕಿತ್ತೂರು, ತುಳುನಾಡು ಮತ್ತು ಹೈದರಾಬಾದ್-ಕರ್ನಾಟಕ

ಕೊಡಗು

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಜಿಲ್ಲೆಯೇ ಕೊಡಗು. ಇಲ್ಲಿನ ಹೆಚ್ಚಿನ ಜನರು ಆಡುವ ಭಾಷೆಗಳೆಂದರೆ ಕೊಡವ ಮತ್ತು ಅರೆಭಾಸೆ (ಅರೆಭಾಷೆ).

ಕರ್ನಾಟಕದ ಜನರ ಜೀವನದಿ ಕಾವೇರಿ. ತಲಕಾವೇರಿಯು ಕಾವೇರಿ ನದಿಯ ಉಗಮ ಸ್ಥಾನ. ತಲಕಾವೇರಿಯನ್ನು ಲಕ್ಷಾಂತರ ಜನರು ಆರಾಧಿಸುತ್ತಾರೆ. ಕೊಡಗು ಅರಣ್ಯ ಸಂಪತ್ತಿನಿಂದ ಕೂಡಿದ್ದು, ನಾಗರಹೊಳೆ ಎಂಬ ರಾಷ್ಟ್ರೀಯ ಉದ್ಯಾನವನ ಇಲ್ಲಿದೆ.

ಹಾಲೇರಿ ಅರಸುಮನೆತನ: ಕೊಡಗನ್ನು ಆಳಿದ ಪ್ರಮುಖ ರಾಜವಂಶವೆಂದರೆ ಹಾಲೇರಿ ಅರಸುಮನೆತನ. 17ನೇ ಶತಮಾನದ ಆರಂಭದಲ್ಲಿ ಇದನ್ನು ವೀರರಾಜನು ಸ್ಥಾಪಿಸಿದನು. ಮುಂದೆ, ಮುದ್ದುರಾಜನು ಮುದ್ದುರಾಜಕೇರಿಯನ್ನು ಕಟ್ಟಿಸಿ ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಮುದ್ದುರಾಜಕೇರಿಯೇ ಮಡಿಕೇರಿಯಾಗಿದೆ.

ಕೊಡಗನ್ನು 18ನೇ ಶತಮಾನದ ಉತ್ತರಾರ್ಧದಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರು ಆಳಿದರು. ಆ ಸಂದರ್ಭದಲ್ಲಿ ಕೊಡಗಿನ ರಾಜನಾಗಿದ್ದ ವೀರರಾಜನು ಟಿಪ್ಪುವಿನ ಬಂಧಿಯಾಗಿದ್ದ. ಅವನ ಕೈಯಿಂದ ತಪ್ಪಿಸಿಕೊಂಡ ವೀರರಾಜನು ಬ್ರಿಟಿಷರ ಸಹಾಯದಿಂದ ಕೊಡಗನ್ನು ವಶಪಡಿಸಿಕೊಂಡನು. ಟಿಪ್ಪುವಿನ ಮರಣಾನಂತರ ಬ್ರಿಟಿಷರು ಮತ್ತು ಕೊಡಗಿನ ಅರಸರು ಸ್ನೇಹದಿಂದಿದ್ದರು.

ಕೊಡಗು ಮತ್ತು ಬ್ರಿಟಿಷರು: ಕೆಲಕಾಲದ ಬಳಿಕ ಬ್ರಿಟಿಷರು ಕೊಡಗನ್ನು ವಶಪಡಿಸಿಕೊಂಡರು. (1834). ಕೊಡಗಿನ ಕೊನೆಯ ಅರಸ ಚಿಕ್ಕವೀರರಾಜೇಂದ್ರನನ್ನು ಅವರು ಗಡಿಪಾರು ಮಾಡಿ ಕೊಡಗನ್ನು ತಾವೇ ನೇರವಾಗಿ ಆಳತೊಡಗಿದರು. ಕೊಡಗನ್ನು ವಿಭಜಿಸಿ, ಕೊಡಗಿನ ಭಾಗವಾಗಿದ್ದ ಅಮರಸುಳ್ಯವನ್ನು ಕೆನರಾ ಜಿಲ್ಲೆಗೆ ಸೇರಿಸಿದರು.

ಅಮರಸುಳ್ಯ ಹೋರಾಟ: ಕೆನರಾ ಜಿಲ್ಲೆಯಲ್ಲಿ ರೈತರ ಮೇಲೆ ಕಂದಾಯ ಹೆಚ್ಚಾಗಿದ್ದುದರಿಂದ ಅಲ್ಲಿನ ರೈತರು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ಮಾಡಿದರು. ಅವರು ಬ್ರಿಟಿಷರನ್ನು ಕೊಡಗಿನಿಂದ ಓಡಿಸಲು ಸಂಕಲ್ಪಮಾಡಿದರು. ಈ ಹೋರಾಟವನ್ನು 1837ರ ಅಮರಸುಳ್ಯ ಹೋರಾಟವೆನ್ನುತ್ತಾರೆ. ಹೋರಾಟಗಾರರು ಸುಳ್ಯ, ಪುತ್ತೂರು, ಕಾಸರಗೋಡು ಹಾಗೂ ಮಂಗಳೂರನ್ನು ಹದಿಮೂರು ದಿನಗಳ ಕಾಲ ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ ಬ್ರಿಟಿಷರು ಈ ಹೋರಾಟವನ್ನು ಬಗ್ಗುಬಡಿದರು. ಹೋರಾಟಗಾರರನ್ನು ಅವರು ಗಲ್ಲು ಶಿಕ್ಷೆಗೆ ಒಳಪಡಿಸಿದರು. ಹೋರಾಟದ ಪ್ರಮುಖ ನಾಯಕರೆಂದರೆ ಪುಟ್ಟಬಸಪ್ಪ, ಕಲ್ಯಾಣಸ್ವಾಮಿ ಮತ್ತು ಗುಡ್ಡೆಮನೆ ಅಪ್ಪಯ್ಯಗೌಡ.

ಕೊಡಗಿನಲ್ಲಿ ಸ್ವಾತಂತ್ರ್ಯ ಹೋರಾಟ : ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಸ್ವಾತಂತ್ರ್ಯ ಪ್ರೇಮಿಗಳು ಸಕ್ರಿಯವಾಗಿ ಭಾಗವಹಿಸಿದರು. ಸ್ವಾತಂತ್ರ್ಯಾನಂತರ ಕೊಡಗು ಕೆಲಕಾಲ ಪ್ರತ್ಯೇಕ ರಾಜ್ಯವಾಗಿ ಉಳಿಯಿತು. 1956ರಲ್ಲಿ ಕೊಡಗು ಕರ್ನಾಟಕದೊಂದಿಗೆ ವಿಲೀನವಾಯಿತು.

ಕೊಡಗಿನ ಇಬ್ಬರು ಕಣ್ಮಣಿಗಳು: ಕೊಡಗಿನ ಹೆಸರನ್ನು ಜಗತ್ತಿಗೆ ಪರಿಚಯ ಮಾಡಿದವರಲ್ಲಿ ಫೀಲ್ಡ್ ಮಾರ್ಷಲ್ ಕೆ. ಎಮ್. ಕಾರ್ಯಪ್ಪ ಅವರು ಪ್ರಮುಖರು. ಬ್ರಿಟಿಷರ ಕಾಲದಲ್ಲಿ ಅವರು ಪ್ರಥಮ ಭಾರತೀಯ ಜನರಲ್ ಆಗಿದ್ದರು. ಸ್ವತಂತ್ರ ಭಾರತದ ಭೂಸೇನೆ, ನೌಕಾದಳ ಮತ್ತು ವಾಯುಪಡೆಗಳಿಗೆ ಮೊದಲ ಅಧಿಪತಿಯಾಗಿದ್ದವರು. ತಮ್ಮ ಆಡಳಿತ, ಸಾಹಸ, ಶೌರ್ಯಕ್ಕೆ ಹೆಸರಾದ ಕಾರ್ಯಪ್ಪನವರಿಗೆ ಫೀಲ್ಡ್ ಮಾರ್ಷಲ್ ಎಂಬ ಅತ್ಯುನ್ನತ ಪದವಿಯನ್ನು ನೀಡಲಾಯಿತು.

ಇನ್ನೊಬ್ಬ ಮಹಾನ್ ದೇಶಭಕ್ತ ಕೊಡಗಿನವರಾದ ಜನರಲ್ ಕೆ. ಎಸ್. ತಿಮ್ಮಯ್ಯ. ಅವರು ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಭಾರತದ ವಿಜಯಕ್ಕೆ ಕಾರಣರಾದರು. ಈ ಇಬ್ಬರು ವೀರರು ಕೊಡಗಿನ ಕಣ್ಮಣಿಗಳೆಂದು ಹೆಸರುವಾಸಿಯಾಗಿದ್ದಾರೆ. ಸೈನ್ಯಶಕ್ತಿಯೊಂದಿಗೆ ಗುರುತಿಸಿಕೊಂಡ ಕೊಡಗು ಕ್ರೀಡೆ, ಸಾಹಸ, ಜನಪದ ಮತ್ತು ಪ್ರಕೃತಿ ಸೌಂದರ್ಯಕ್ಕೂ ಹೆಸರಾಗಿದೆ.

ಕಿತ್ತೂರು

ಬೆಳಗಾವಿ ಜಿಲ್ಲೆಯ ಕಿತ್ತೂರು ಸುಮಾರು ಎರಡು ಶತಮಾನಗಳ ವೀರವನಿತೆ ಕಿತ್ತೂರ ಚೆನ್ನಮ್ಮನ ಕಂಚಿನ ಪುತ್ತಳಿ ಹಿಂದೆ ಪ್ರಭಾವಶಾಲಿ ರಾಜ್ಯವಾಗಿತ್ತು. ವ್ಯಾಪಾರ, ವ್ಯವಸಾಯಗಳಿಗೆ ಪ್ರಸಿದ್ಧವಾಗಿತ್ತು.

ರಾಣಿ ಚೆನ್ನಮ್ಮ: ವೀರವನಿತೆ ಕಿತ್ತೂರಿನ ರಾಣಿ ಚೆನ್ನಮ್ಮ ರಾಜ ಮಲ್ಲಸರ್ಜ ದೇಸಾಯಿಯ ಕಿರಿಯ ಪತ್ನಿ. ಮಲ್ಲಸರ್ಜನೂ ಅವನ ಉತ್ತರಾಧಿಕಾರಿಯಾಗಿದ್ದ ಮಗನೂ ತೀರಿಕೊಂಡರು. ಚೆನ್ನಮ್ಮ ಶಿವಲಿಂಗ ಸರ್ಜನನ್ನು ದತ್ತು ತೆಗೆದುಕೊಂಡು ರಾಜ್ಯವಾಳಲು ಪ್ರಾರಂಭಿಸಿದಳು. ಧಾರವಾಡದ ಕಲೆಕ್ಟರ್ ಥ್ಯಾಕರೆ ದತ್ತು ಸ್ವೀಕಾರ ಕ್ರಮಬದ್ಧವಲ್ಲ ಎಂದು ಕುಂಟುನೆಪ ತೆಗೆದನು. ಕಿತ್ತೂರಿನ ಆಡಳಿತವನ್ನು ಬ್ರಿಟಿಷ್ ಸರ್ಕಾರವೇ ವಹಿಸಬೇಕೆಂದು ಅವನು ಶಿಫಾರಸು ಮಾಡಿದ. ಈ ವಿಚಾರವನ್ನು ತಿಳಿದ ಚೆನ್ನಮ್ಮ ಸಿಟ್ಟಿನಿಂದ ಕಿಡಿಕಿಡಿಯಾದಳು. ಬ್ರಿಟಿಷರ ದಮನ ನೀತಿಯನ್ನು ಪ್ರತಿಭಟಿಸಿ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಲು ನಿರ್ಧರಿಸಿದಳು. ಥ್ಯಾಕರೆಯು 500 ಮಂದಿ ಸೈನಿಕರೊಂದಿಗೆ ಕಿತ್ತೂರಿಗೆ ದಾಳಿಯಿಟ್ಟನು. ಘೋರವಾದ ಯುದ್ಧ ನಡೆಯಿತು.

ಚೆನ್ನಮ್ಮ ತನ್ನ ಸೈನ್ಯದೊಂದಿಗೆ ಬ್ರಿಟಿಷರ ವಿರುದ್ಧ ಪರಾಕ್ರಮದಿಂದ ಹೋರಾಡಿದಳು. ಬ್ರಿಟಿಷ್ ಸೈನ್ಯ ದಿಕ್ಕಾಪಾಲಾಯಿತು. ಥ್ಯಾಕರೆ ಗುಂಡಿನೇಟಿಗೆ ಅಸುನೀಗಿದನು.

ಮತ್ತೆ ಬ್ರಿಟಿಷ್ ಸೈನ್ಯ ಕಿತ್ತೂರನ್ನು ಮುತ್ತಿತು. ಕಿತ್ತೂರಿನ ಸೈನ್ಯ ಚಿಕ್ಕದಾಗಿದ್ದು 6,000 ಸೈನಿಕರಿದ್ದರು. ಬ್ರಿಟಿಷರದು ಬಹು ದೊಡ್ಡ ಸೈನ್ಯ. ಮೂರು ದಿನಗಳ ಯುದ್ಧವಾಯಿತು. ಚೆನ್ನಮ್ಮನ ಕಡೆಯವರೇ ಕೆಲವರು ಅವಳಿಗೆ ಮೋಸ ಮಾಡಿದರು. ಕಿತ್ತೂರಿನ ಸೈನ್ಯ ಸೋತು ಚೆನ್ನಮ್ಮ ಸೆರೆಯಾದಳು. ಅವಳನ್ನು ಬ್ರಿಟಿಷರು ಬೈಲಹೊಂಗಲದಲ್ಲಿ ಸೆರೆಯಲ್ಲಿಟ್ಟರು. ಐದು ವರ್ಷಗಳ ಕಾಲ ಸೆರೆಯಲ್ಲಿದ್ದ ರಾಣಿಯು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಧೀರರಿಗೆ ಸಂದೇಶಗಳನ್ನು ಕಳುಹಿಸುತ್ತ ಹುರಿದುಂಬಿಸುತ್ತಿದ್ದಳು.

ಬ್ರಿಟಿಷ್ಸತ್ತೆಯನ್ನು (ಪ್ರಭುತ್ವ) ವಿರೋಧಿಸಿದ ಪ್ರಥಮ ಭಾರತೀಯ ನಾರಿ ಎನ್ನುವ ಕೀರ್ತಿ ಚೆನ್ನಮ್ಮನಿಗೆ ಸಲ್ಲುತ್ತದೆ. ಆಕೆ ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕೆಯಾಗಿ ಕಂಗೊಳಿಸುತ್ತಿದ್ದಾಳೆ. ಆಕೆಯ ನೆನಪಿನಲ್ಲಿ ಲಾವಣಿಗಳನ್ನು ಈಗಲೂ ಹಾಡುತ್ತಾರೆ.

ಸಂಗೊಳ್ಳಿ ರಾಯಣ್ಣ: ಸಂಗೊಳ್ಳಿ ರಾಯಣ್ಣ ಚನ್ನಮ್ಮನ ನಿಷ್ಠ ಸಂಗೊಳ್ಳಿ ರಾಯಣ್ಣ ಬಂಟ. ಜನಸಾಮಾನ್ಯರ ಮಧ್ಯೆ ಮೂಡಿಬಂದ ಸ್ವಾತಂತ್ರ್ಯ ವೀರ. ಚೆನ್ನಮ್ಮನ ಬಂಧನವಾದ ಮೇಲೆ ಕಿತ್ತೂರಿನ ನಾಯಕತ್ವವಹಿಸಿ ಸೈನ್ಯವನ್ನು ಸಂಘಟಿಸಿದ. ಬ್ರಿಟಿಷರ ಕಛೇರಿಗಳನ್ನು ಸುಟ್ಟು, ಖಜಾನೆಗಳನ್ನು ಲೂಟಿ ಮಾಡಿದ. ಗೆರಿಲ್ಲ ಯುದ್ಧದಲ್ಲಿ ನಿಷ್ಣಾತನಾಗಿದ್ದ ರಾಯಣ್ಣನು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದನು. ನೇರ ಯುದ್ಧದಲ್ಲಿ ಅವನನ್ನು ಸೋಲಿಸಲು ಸಾಧ್ಯವಾಗದೆ ಬ್ರಿಟಿಷರು ಕುಟಿಲೋಪಾಯ ಮಾಡಿದರು.

ಹಣದಾಸೆಗೆ ಬಲಿಬಿದ್ದ ದೇಶದ್ರೋಹಿಗಳು ರಾಯಣ್ಣನನ್ನು ಮೋಸದಿಂದ ಸೆರೆಹಿಡಿದುಕೊಟ್ಟರು. ಅವನನ್ನೂ ಅವನ ಆರು ಮಂದಿ ಸಂಗಡಿಗರನ್ನೂ ಗಲ್ಲಿಗೇರಿಸಲಾಯಿತು. ಅಂತ್ಯದರ್ಶನ ಪಡೆಯಲು ಬಂದಿದ್ದ ತಾಯಿ ಕೆಂಚವ್ವನಿಗೆ ರಾಯಣ್ಣ ಅಡ್ಡಬಿದ್ದು ಹರಕೆ ಪಡೆದು, ನಗುನಗುತ್ತಲೇ ಗಲ್ಲುಕಂಬ ಏರಿದ. ಆತನ ಸಂಗಡಿಗರೆಲ್ಲರನ್ನೂ ನಂದಗಡದಲ್ಲಿ ಸಮಾಧಿ ಮಾಡಲಾಯಿತು. ರಾಯಣ್ಣನ ಅನುಯಾಯಿಗಳು ಬಂಡಾಯವನ್ನು ಮುಂದುವರಿಸಿದರು.

ರಾಯಣ್ಣನ ಸಮಾಧಿಯ ಮೇಲೆ ಆಲದ ಸಸಿಯೊಂದನ್ನು ಅವನ ಅನುಯಾಯಿ ಬಿಚ್ಚುಗತ್ತಿ ಚೆನ್ನಬಸಪ್ಪ ನೆಟ್ಟ. ಎಷ್ಟೋ ವರ್ಷಗಳ ಕಾಲ ಚೆನ್ನಬಸಪ್ಪ ಭೈರಾಗಿಯಾಗಿ ಅಲ್ಲಿಯೇ ಇದ್ದನಂತೆ. ಆ ಆಲದ ಮರ ಈಗಲೂ ಇದೆ. ರಾಯಣ್ಣನ ನಂತರ ಅನೇಕ ಕೆಚ್ಚೆದೆಯ ಯುವಕರು ಕಿತ್ತೂರಿನ ಬಂಡಾಯವನ್ನು ಮುಂದುವರಿಸಿ ಕಿತ್ತೂರ ಜನತೆಯ ಸ್ವಾತಂತ್ರ್ಯ ಪ್ರೇಮವನ್ನು ತೋರಿಸಿಕೊಟ್ಟರು.

ತುಳುನಾಡು

ಪ್ರಾಚೀನ ಕಾಲದಲ್ಲಿ ಕರ್ನಾಟಕ ಕರಾವಳಿಯ ಒಂದು ಭಾಗವನ್ನು (ಹೆಚ್ಚು ಕಡಿಮೆ ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು) ತುಳುನಾಡು ಎಂದು ಕರೆಯಲಾಗುತ್ತಿತ್ತು. ಪುರಾಣ ಸಾಹಿತ್ಯದಲ್ಲಿ ಈ ಪ್ರದೇಶವು ಪರಶುರಾಮ ಕ್ಷೇತ್ರವೆನಿಸಿದೆ. ಇಲ್ಲಿನ ಬಹುತೇಕ ಜನರ ಭಾಷೆ ತುಳು. ಕೊಂಕಣಿ ಮತ್ತು ಬ್ಯಾರಿ ಭಾಷೆಗಳನ್ನಾಡುವ ಸಾಕಷ್ಟು ಜನರು ಕೂಡ ತುಳುನಾಡಿನಲ್ಲಿದ್ದಾರೆ.

ಇತಿಹಾಸ ಕಾಲದಲ್ಲಿ ತುಳುನಾಡನ್ನು ಕದಂಬ, ಆಳುಪ, ಹೊಯ್ಸಳ, ವಿಜಯನಗರ ಅರಸುಮನೆತನಗಳು ಆಳಿಕೊಂಡು ಬಂದವು. ತುಳುನಾಡಿನಲ್ಲಿ ಆಳುಪ ವಂಶದ ಅರಸರು ಸುಧೀರ್ಘ ಕಾಲ ಆಳಿದರು. ಉದ್ಯಾವರ (ಉದಯಪುರ), ಮಂಗಳೂರು (ಮಂಗಳಪುರ), ಬಾರಕೂರು ಮುಂತಾದವು ತುಳು ರಾಜ್ಯದ ರಾಜಧಾನಿಗಳಾಗಿದ್ದವು.

ಚೌಟ ಅರಸು ಮನೆತನದ ಉಲ್ಲಾಳದ ಅಬ್ಬಕ್ಕ ರಾಣಿಯು (16ನೇ ಶತಮಾನ) ಪೋರ್ಚುಗೀಸರ ವಿರುದ್ಧ ಹೋರಾಟ ನಡೆಸಿ ಅವರನ್ನು ಸೋಲಿಸಿದ್ದಳು.

ಮತಧರ್ಮ: ತುಳುನಾಡಿನ ಅರಸರಲ್ಲಿ ಬಹುತೇಕ ಮಂದಿ ಜೈನರು. ಇಲ್ಲಿ ಬೌದ್ಧ, ಜೈನ, ವೀರಶೈವ, ನಾಥ, ಇಸ್ಲಾಂ, ಕ್ರೈಸ್ತ ಹೀಗೆ ಅನೇಕ ಮತೀಯರು ನೆಲೆಸಿದ್ದಾರೆ. ನಾಗಾರಾಧನೆ ಮತ್ತು ಭೂತಾರಾಧನೆ ತುಳುನಾಡಿನ ಎರಡು ಆರಾಧನಾ ಪಂಥಗಳು.

ನಾಗಮಂಡಲ ಒಂದು ವಿಸ್ತಾರವಾದ ನಾಗಾರಾಧನೆಯಾಗಿದೆ ಮತ್ತು ನಾಗ ಮತ್ತು ಭೂತವನ್ನು ಕೋಲ ಮತ್ತು ನೇಮ ಎಂದು ಆರಾಧಿಸಲಾಗುತ್ತದೆ.

* ದ್ವೈತಮತದ ಸ್ಥಾಪಕ ಮಧ್ವಾಚಾರ್ಯರು ತುಳುನಾಡಿನವರು. ಮಂಗಳೂರಿನ  ಕದ್ರಿಯಲ್ಲಿರುವ ಮಂಜುನಾಥನ ದೇವಸ್ಥಾನವು ತುಳುನಾಡಿನ ಪ್ರಾಚೀನ ದೇವಸ್ಥಾನವಾಗಿದೆ.

* ತುಳುನಾಡಿನಲ್ಲಿ ಕ್ರೈಸ್ತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡಿದರು. ಮಂಗಳೂರಿನಲ್ಲಿ ಮುದ್ರಣಾಲಯವನ್ನು ಸ್ಥಾಪಿಸಿದವರು ಇವರೇ. ಫರ್ಡಿನಾಂಡ್ ಕಿಟೆಲ್ ಅವರು ರಚಿಸಿದ ಕನ್ನಡ ನಿಘಂಟು ಬಾಸೆಲ್ ಮಿಷನ್ ಮುದ್ರಣಾಲಯದಲ್ಲಿ ಅಚ್ಚಾಯಿತು.

* ತುಳು ನಿಘಂಟನ್ನು ರಚಿಸಿದವರು ಜರ್ಮನಿಯಿಂದ ಬಂದ ಮೆನ್ನರ್. ಪ್ರಾರಂಭದಲ್ಲಿ ತುಳುನಾಡಿನಲ್ಲಿ ಕ್ರೈಸ್ತ ರಿಲಿಜನ್ ಪ್ರಚಾರವನ್ನು ವಿದೇಶಿ ಪಾದ್ರಿಗಳು ಮಾಡಿದರು. ಮುಂದೆ ಈ ಕಾರ್ಯವನ್ನು ದೇಶೀಯರು ಮುಂದುವರಿಸಿದರು. ಅನೇಕ ಸುಂದರ ಚರ್ಚ್ಗಳು ಇಲ್ಲಿವೆ.

* ಪ್ರಾಚೀನ ಕಾಲದಿಂದಲೂ ಅರಬ್ದೇಶದೊಂದಿಗೆ ತುಳುನಾಡು ವ್ಯಾಪಾರ ಸಂಬಂಧವನ್ನು ಇರಿಸಿಕೊಂಡಿತ್ತು. ಇದರ ಫಲವಾಗಿ ಇಲ್ಲಿ ಇಸ್ಲಾಮ್ ರಿಲಿಜನ್ ಪ್ರಚಾರಕ್ಕೆ ಬಂದಿತು. ಮುಸಲ್ಮಾನರು ಪ್ರಾರ್ಥನೆ ಮಾಡಲು ಅಲ್ಲಲ್ಲಿ ಆಕರ್ಷಕ ಮಸೀದಿಗಳನ್ನು ನಿರ್ಮಿಸಿಕೊಂಡರು.

ವಾಸ್ತು, ಶಿಲ್ಪ : ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಸುಂದರವಾದ ಅವಲೋಕಿತೇಶ್ವರನ ಬೃಹದಾಕಾರದ ಕಂಚುಶಿಲ್ಪವಿದೆ. ಇದು ಒಂದು ಸಹಸ್ರ ವರ್ಷಗಳಷ್ಟು ಹಳೆಯದು. ಮೂಡಬಿದಿರೆಯ ಸಾವಿರ ಕಂಬ ಬಸದಿ ಮತ್ತು ಕಾರ್ಕಾಳ, ವೇಣೂರು ಹಾಗೂ ಧರ್ಮಸ್ಥಳಗಳಲ್ಲಿರುವ ಗೊಮ್ಮಟಮೂರ್ತಿ ಜೈನ ಸಂಸ್ಕೃತಿಯ ಸಂಕೇತಗಳು. ಇಲ್ಲಿ ಪ್ರಸಿದ್ಧ ದೈವಗಳಾದ ಕೋಟಿ ಚೆನ್ನಯರ ಗರೋಡಿಗಳು ಕಾಣಿಸುತ್ತವೆ.

ಕಾರ್ಕಾಳ – ಗೊಮ್ಮಟಮೂರ್ತಿ

ಜನಪದ: ಕಂಬುಳ(ಕಂಬಳ), ಕೋಳಿಅಂಕ ಚೆನ್ನೆ ಮುಂತಾದವು ತುಳುನಾಡಿನ ಕೆಲವು ಜಾನಪದ ಆಟಗಳು. ಯಕ್ಷಗಾನ ಮತ್ತು ತಾಳಮದ್ದಳೆ ಇಲ್ಲಿನ ಪ್ರಸಿದ್ಧ ಪ್ರಾಚೀನ ಕಲೆಗಳು.

ಬ್ರಿಟಿಷ್ ಆಡಳಿತ: 19ನೇ ಶತಮಾನದ ಪ್ರಾರಂಭದಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಬ್ರಿಟಿಷರು ಆಡಳಿತ ನಡೆಸಿದರು. ಆಗ ಕರಾವಳಿ ಪ್ರದೇಶವನ್ನು `ಕೆನರಾ’ ಜಿಲ್ಲೆ ಎನ್ನುತ್ತಿದ್ದರು. ಮುಂದೆ ಕೆನರಾ ಜಿಲ್ಲೆಯನ್ನು ಎರಡು ಜಿಲ್ಲೆಗಳಾಗಿ ವಿಂಗಡಿಸಲಾಯಿತು. ಅವೆಂದರೆ ಉತ್ತರ ಭಾಗದ `ಉತ್ತರ ಕನ್ನಡ’ (ನಾರ್ತ್ ಕೆನರಾ), ದಕ್ಷಿಣ ಭಾಗದ `ದಕ್ಷಿಣ ಕನ್ನಡ’ (ಸೌತ್ ಕೆನರಾ) ಜಿಲ್ಲೆಗಳು.

ಸ್ವಾತಂತ್ರ್ಯ ಸಂಗ್ರಾಮ: ತುಳುನಾಡಿನ ಸ್ವಾತಂತ್ರ್ಯ ಯಕ್ಷಗಾನ ವೇಷಧಾರಿ ಹೋರಾಟಗಾರರಲ್ಲಿ ಕಾರ್ನಾಡು ಸದಾಶಿವರಾವ್ ಮತ್ತು ಅತ್ತಾವರ ಯಲ್ಲಪ್ಪ ಅಗ್ರಗಣ್ಯರು.

* ‘ದೇಶಭಕ್ತ’ರೆಂದು ಕರೆಸಿಕೊಂಡ ಕಾರ್ನಾಡು ಸದಾಶಿವರಾವ್ ಮಾಡಿರುವ ಹರಿಜನ ಸೇವೆ ಮರೆಯಲಾಗದ್ದು. ದಲಿತ ವರ್ಗದ ಹಲವು ಮಕ್ಕಳಿಗೆ ತಮ್ಮ ಮನೆಯಲ್ಲಿ ಅವರು ಊಟ ಹಾಕುತ್ತಿದ್ದರು. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಉಜ್ವಲತಾರೆ ಅವರಾಗಿದ್ದಾರೆ.

* ಅತ್ತಾವರ ಯಲ್ಲಪ್ಪ ನೇತಾಜಿ ಸುಭಾಶ್ಚಂದ್ರ ಬೋಸರು ಸ್ಥಾಪಿಸಿದ ‘ಆಜಾದ್ ಹಿಂದ್ ಸರ್ಕಾರ’ದ ಮಂತ್ರಿಮಂಡಲದಲ್ಲಿ ಮಂತ್ರಿಗಳಾಗಿದ್ದರು. ನೇತಾಜಿಯವರ  ಆಜಾದ್ ಹಿಂದ್ ಫೌಜಿನಲ್ಲಿ ಹದಿನೈದು ವರ್ಷಗಳ ಕಾಲ ಅವರು ಸೇನಾಧಿಕಾರಿಯಾಗಿದ್ದರು.

* ಅಸ್ಪೃಶ್ಯತೆಯ ವಿರುದ್ಧ ಚಳವಳಿ, ದಲಿತ ಹೆಣ್ಣು ಮಕ್ಕಳಿಗಾಗಿ ಶಿಕ್ಷಣ ಮುಂತಾದ ದಲಿತೋದ್ಧಾರ ಕಾರ್ಯಗಳನ್ನು ಮಾಡಿದವರಲ್ಲಿ ಕುದ್ಮುಲ್ ರಂಗರಾವ್ ಮಂಚೂಣಿಯಲ್ಲಿದ್ದರು. ಮಹಾತ್ಮಾ ಗಾಂಧೀಜಿ ಮಂಗಳೂರಿಗೆ ಬಂದಾಗ ಅವರ ಕಾರ್ಯಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ತುಳುನಾಡು ದಾಖಲೆ ಸ್ಥಾಪಿಸಿದೆ. ಕೆನರಾ, ಕಾರ್ಪೋರೇಶನ್, ಸಿಂಡಿಕೇಟ್, ಕರ್ನಾಟಕ ಮತ್ತು ವಿಜಯಾ ಬ್ಯಾಂಕುಗಳು ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿ  ಸ್ಥಾಪನೆಗೊಂಡವು. ದೇಶದ ಉದ್ದಗಲದಲ್ಲಿ ಹಬ್ಬಿಕೊಂಡಿರುವ ಈ ಪ್ರಸಿದ್ಧ ಬ್ಯಾಂಕುಗಳ ಸಾವಿರಾರು ಶಾಖೆಗಳು ಭಾರತದ ಅರ್ಥವ್ಯವಸ್ಥೆಗೆ ವಿಶೇಷ ಕೊಡುಗೆ ನೀಡಿವೆ. ಲಕ್ಷಾಂತರ ಮಂದಿಗೆ ಅವು ಉದ್ಯೋಗ ಅವಕಾಶ ಕಲ್ಪಿಸಿವೆ.

1956ರಲ್ಲಿ ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಕರ್ನಾಟಕದೊಂದಿಗೆ ಸೇರ್ಪಡೆಗೊಂಡವು. (ಇದಕ್ಕೆ ಮುನ್ನ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸು ಆಧಿಪತ್ಯಕ್ಕೆ ಸೇರಿತ್ತು). ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಂಗಡಿಸಿ ಉಡುಪಿ ಜಿಲ್ಲೆಯಾಯಿತು (1997).

ಹೈದರಾಬಾದ್-ಕರ್ನಾಟಕ

ಬೇಡನಾಯಕರ ದಂಗೆಗಳು

ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಹೈದರಾಬಾದ್-ಕರ್ನಾಟಕ (ಇದನ್ನು ಕಲ್ಯಾಣ-ಕರ್ನಾಟಕ ಎಂದು ಈಗ ಕರೆಯಲಾಗುತ್ತದೆ) ಬೇಡನಾಯಕ ಪಾಳೆಯಗಾರರ ಪ್ರಾಬಲ್ಯವಿತ್ತು. ಹೋರಾಟಗಾರರಾಗಿದ್ದ ಅವರು 1800ರ ಅನಂತರ ಬ್ರಿಟಿಷರ ವಿರುದ್ಧ ನಡೆಸಿದ ದಂಗೆಗಳಾದರೋ ಎಣಿಕೆಯಿಲ್ಲದ್ದು.

ಕಾರಣಗಳು: ಸ್ಥಳೀಯ ಜಮೀನ್ದಾರರ ಶೋಷಣೆ ಮತ್ತು ಬ್ರಿಟಿಷರು ಜಾರಿಗೆ ತಂದಿದ್ದ ಶಸ್ತ್ರಾಸ್ತ್ರ ಕಾಯ್ದೆ, ಅರಣ್ಯ ಕಾಯ್ದೆ ಹಾಗೂ ಅವರ ದಬ್ಬಾಳಿಕೆಗಳಿಂದ ಬೇಸತ್ತ ಸ್ಥಳೀಯ ಪಾಳೆಯಗಾರರು ಮತ್ತು ಜನಸಾಮಾನ್ಯರು ಪ್ರತಿಭಟನೆಗೆ ಇಳಿದರು. 1800ರ ಅನಂತರ ನಡೆದ ಇಪ್ಪತ್ತೈದಕ್ಕೂ ಹೆಚ್ಚು ದಂಗೆಗಳಲ್ಲಿ ಬೇಡರೇ ಹೆಚ್ಚಾಗಿ ಭಾಗವಹಿಸುವುದನ್ನು ನಾವು ಕಾಣುತ್ತೇವೆ. ದಂಗೆಗಳ ಉದ್ದೇಶ ಬ್ರಿಟಿಷರನ್ನು ಹೊರದೂಡುವುದಾಗಿತ್ತು.

ಹಲಗಲಿ ಬೇಡನಾಯಕರ ದಂಗೆ

ಹಲಗಲಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಒಂದು ಗ್ರಾಮ. ಈ ಗ್ರಾಮ ಇಂದಿಗೂ ಪೈಲವಾನರಿಗೆ ಪ್ರಸಿದ್ಧ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಗ್ರಾಮ ಹೆಸರಾಯಿತು. ಅಲ್ಲಿಯ ಹೆಚ್ಚಿನ ಜನರು ಬೇಡನಾಯಕರು. ಬೇಟೆಗಾಗಿ ಮತ್ತು ಆತ್ಮರಕ್ಷಣೆಗಾಗಿ ಅವರಲ್ಲಿ ಆಯುಧಗಳ ಸಂಗ್ರಹವಿತ್ತು.

1857ರಲ್ಲಿ ಬ್ರಿಟಿಷರು ಜಾರಿಗೆ ತಂದ ಶಸ್ತ್ರಾಸ್ತ್ರ ಕಾಯ್ದೆಯಂತೆ ಭಾರತೀಯರು ಸರ್ಕಾರದ ಅಪ್ಪಣೆ ಪಡೆದುಕೊಂಡೇ ಆಯುಧಗಳನ್ನು ಇರಿಸಿಕೊಳ್ಳಬಹುದಾಗಿತ್ತು. ಸ್ವಭಾವತಃ ಶೂರರೂ ಸ್ವಾಭಿಮಾಣಿಗಳೂ ಆದ ಬೇಡನಾಯಕರಿಗೆ ಇದು ನುಂಗಲಾರದ ತುತ್ತಾಯಿತು. ಈ ಕಾರಣದಿಂದಾಗಿ ಘರ್ಷಣೆ ನಡೆದು ಬ್ರಿಟಿಷರು ಬೇಡನಾಯಕರ ಮೇಲೆ ದಾಳಿ ನಡೆಸಿದರು. ಜಡಗ, ಬಾಲ, ರಾಮಿ ಮುಂತಾದ ದಂಗೆಯ ನಾಯಕರು ಕೆಚ್ಚೆದೆಯಿಂದ ಹೋರಾಟ ನೆಡೆಸಿದರು. ದಾಳಿಯಲ್ಲಿ ಅನೇಕ ವೀರರು ಮರಣಹೊಂದಿದರು. 290 ಜನರನ್ನು ಸೆರೆಹಿಡಿದು ಅವರಲ್ಲಿ 19 ಮಂದಿಯನ್ನು ಗಲ್ಲಿಗೇರಿಸಲಾಯಿತು. ಹಲಗಲಿ ಬೇಡನಾಯಕರ ವೀರಗಾಥೆ ಕರ್ನಾಟಕದ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದಲ್ಲಿ ಅಮರವಾಗಿದೆ.

ರಾಮಿ: ಹಲಗಲಿ ದಂಗೆಯಲ್ಲಿ ಮೂರು ಜನ ಬ್ರಿಟಿಷ್ ಸೈನಿಕರನ್ನು ಗುಂಡಿಕ್ಕಿ ಕೊಂದ ರಾಮಿ ಬೇಡರ ವೀರಮಹಿಳೆ. ಈ ದಂಗೆಯಲ್ಲಿ ರಾಮಿ ವೀರಮರಣ ಹೊಂದುತ್ತಾಳೆ.

ಹಲಗಲಿಯ ಬೇಡನಾಯಕರ ಕುರಿತು ಬರೆದಿರುವ ಲಾವಣಿಯ ಪ್ರಾರಂಭ ಹೀಗಿದೆ: ಹಲಗಲಿಯ ಬೇಡರು ಹುಲಿಗಿಂತ ಶೂರರು ಚಲಿಸದೆ ನಿಂತು ಹೋರಾಡಿ ಮಡಿದವರು ಕುಲಹಿರಿಮೆ ಮೆರೆಸಿ ಹೋಗ್ಯಾರ ||

ಸಿಂಧೂರ ಲಕ್ಷ್ಮಣ

ಸಿಂಧೂರ ಲಕ್ಷ್ಮಣ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಓರ್ವ ಮಹಾವೀರ.

ಸಾಂಗ್ಲಿ ಜಿಲ್ಲೆ ಜತ್ ತಾಲೂಕಿನ ಸಿಂಧೂರ ಗ್ರಾಮದಲ್ಲಿ ಬೇಡರ ಸಾಬು ಮತ್ತು ನರಸವ್ವ ಎಂಬ ದಂಪತಿಗಳಿಗೆ ಲಕ್ಷ್ಮಣ ಜನಿಸಿದ. ಈತನ ಸಮಾಧಿ ಬೀಳಗಿಯಲ್ಲಿದೆ.

ಸಿಂಧೂರ ಗ್ರಾಮವು ಇನಾಂದರರ (ಗೌಡರ) ಆಳ್ವಿಕೆಯಿಂದ ತತ್ತರಿಸಿತ್ತು. ಆದರೆ ಲಕ್ಷ್ಮಣ ಅವರ ವಿರುದ್ಧ ಬಂಡೆದ್ದ. ಲಕ್ಷ್ಮಣ ಕ್ರಮೇಣ ಬ್ರಿಟಿಷರಿಗೂ ವಿರೋಧಿಯಾದ.

ಲಕ್ಷ್ಮಣ ಬ್ರಿಟಿಷರ ಖಜಾನೆಗಳನ್ನು ಮತ್ತು ಶ್ರೀಮಂತರನ್ನು ದೋಚಿ ಹಣವನ್ನು ಬಡವರಿಗೆ ಹಂಚುತ್ತಿದ್ದ. ಸಮಾಜಮುಖಿಯಾಗಿ ಶೋಷಿತರ ಸೇವೆ ಮಾಡುತ್ತಿದ್ದ. ಊರ ಚಾವಡಿಯ ಮುಂದೆ ಲಕ್ಷ್ಮಣನನ್ನು ಕರೆಯಿಸಿ ಕಳ್ಳತನದ ಬಗ್ಗೆ ವಿಚಾರಣೆ ನಡೆಸಿದಾಗ ಅವನಿಗೆ ಅವಮಾನ ಆಯಿತು. ಅಲ್ಲಿಂದ ಆತ ಪರಾರಿಯಾದ. ಪೊಲೀಸ್ ಅಧಿಕಾರಿಯನ್ನು ಅವನು ಕೊಂದಿದ್ದರಿಂದ ಅವನನ್ನು ಹಿಡಿಯಲು ಬ್ರಿಟಿಷರು ಶತಪ್ರಯತ್ನ ಮಾಡಿದರು. ಮುಂದೆ ಅವನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಸಿಂಧೂರ ಲಕ್ಷ್ಮಣ ಇತಿಹಾಸದ ಪುಟಗಳಲ್ಲಿ ಚಿರಸ್ಮರಣೆಯಾಗಿದ್ದಾನೆ.

ಸುರಪುರದ ನಾಯಕರು

ಯಾದಗಿರಿ ಜಿಲ್ಲೆಯ ಸುರಪುರವು ಶೂರ ಬೇಡನಾಯಕರ ನಾಡಾಗಿತ್ತು. ಸುರಪುರದ ರಾಜ ಕೃಷ್ಣಪ್ಪನಾಯಕ ತೀರಿಕೊಂಡ ಆನಂತರ ಎಂಟು ವರ್ಷದ ವೆಂಕಟಪ್ಪನಾಯಕ ಉತ್ತರಾಧಿಕಾರಿಯಾದ. ಸುರಪುರ ಸಂಸ್ಥಾನವನ್ನು ನಿಜಾಮ ಮತ್ತು ಬ್ರಿಟಿಷರು ಹರಿದು ಹಂಚಿಕೊಳ್ಳಲು ಹವಣಿಸುತ್ತಿದ್ದರು.

ರಾಜಾ ವೆಂಕಟಪ್ಪನಾಯಕನು ಆಂಗ್ಲ ಶಿಕ್ಷಣ ಸುರಪುರದ ರಾಜಾ ವೆಂಕಟಪ್ಪನಾಯಕ ಪಡೆದಿದ್ದನು. ಸ್ವಾತಂತ್ರ್ಯಪ್ರಿಯತೆ ಅವನಲ್ಲಿ ಮೈಗೂಡಿತ್ತು. ಈ ವೇಳೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ (1857) ಕಾವು ಸುರಪುರವನ್ನು ತಟ್ಟಿತು. ವೆಂಕಟಪ್ಪನಾಯಕ ಸಂಗ್ರಾಮದಲ್ಲಿ ತಕ್ಷಣ ಧುಮುಕಿದ.

ಬ್ರಿಟಿಷ್ ಸೇನೆ ಸುರಪುರದ ಕೋಟೆಗೆ ಮುತ್ತಿಗೆ ಹಾಕಿತು. ಭಾರಿ ಹೋರಾಟ ನಡೆಯಿತು. ಬ್ರಿಟಿಷ್ ಸೇನೆಯ ಹಿರಿಯ ಅಧಿಕಾರಿಯೊಬ್ಬನು ಎರಡನೆಯ ದಿನ ರಣರಂಗದಲ್ಲಿ ಮಡಿದ. ಬ್ರಿಟಿಷರ ಧೈರ್ಯ ಕುಸಿಯಿತು. ಮೋಸದಿಂದಲಾದರೂ ಕೋಟೆಯನ್ನು ಗೆಲ್ಲುವ ನಿರ್ಧಾರ ಅವರು ಮಾಡಿದರು. ನಾಯಕನ ಪ್ರಮುಖ ಅಧಿಕಾರಿಯು ಕೋಟೆಯ ಗುಪ್ತಮಾರ್ಗವನ್ನು ತಿಳಿಸಿ ಬ್ರಿಟಿಷರ ವಿಜಯಕ್ಕೆ ನೆರವಾದನು.

ತಪ್ಪಿಸಿಕೊಂಡ ವೆಂಕಟಪ್ಪ ನಾಯಕನು ಹೆಚ್ಚಿನ ಸೈನ್ಯ ಸಂಗ್ರಹಕ್ಕಾಗಿ ಹೈದರಾಬಾದಿನ ನಿಜಾಮನಲ್ಲಿಗೆ ಹೋದನು. ಆದರೆ ನಿಜಾಮನ ಪ್ರಧಾನ ಮಂತ್ರಿ ಸಾಲಾರ್ ಜಂಗ್ ಬ್ರಿಟಿಷರಿಂದ  ತನಗೇನಾದರೂ ಲಾಭ ಸಿಗಬಹುದೆಂದು ನಿರೀಕ್ಷಿಸಿ, ಆತನನ್ನು ಬ್ರಿಟಿಷರ ವಶಕ್ಕೊಪ್ಪಿಸಿದ! ಬ್ರಿಟಿಷರು ವಿಚಾರಣೆ ನಡೆಸಿ ವೆಂಕಟಪ್ಪನಿಗೆ ಮರಣದಂಡನೆ ವಿಧಿಸಿದರು. ನಂತರ ನಾಟಕೀಯವಾಗಿ ಶಿಕ್ಷೆಯನ್ನು ನಾಲ್ಕು ವರ್ಷಕ್ಕೆ ಇಳಿಸಿದರು. ಆದರೆ ವೆಂಕಟಪ್ಪ ನಾಯಕನನ್ನು  ಬ್ರಿಟಿಷರು ಮೋಸದಿಂದ ಗುಂಡಿಟ್ಟು ಕೊಂದರು. ಆತ್ಮಹತ್ಯೆಯೆಂದು ಸುಳ್ಳು ಕಥೆ ಹಬ್ಬಿಸಿ ಪ್ರಚಾರ ಮಾಡಿದರು. ಆ ವೇಳೆ ಅವನು 24 ವರ್ಷದ ತರುಣ.

ಬ್ರಿಟಿಷರು ಸುರಪುರವನ್ನು ಹೈದರಾಬಾದ್ ನಿಜಾಮನಿಗೆ ಕಾಣಿಕೆಯಾಗಿ ನೀಡಿದರು.  ಹೀಗೆ ಕಲಬುರಗಿ, ಬೀದರ ಮತ್ತು ರಾಯಚೂರು ಪ್ರದೇಶಗಳು ಹೈದರಾಬಾದ್ ಸಂಸ್ಥಾನದಲ್ಲಿ ಸೇರ್ಪಡೆಗೊಂಡವು.

ಹೈದರಾಬಾದ್-ಕರ್ನಾಟಕ ವಿಮೋಚನಾ ಹೋರಾಟ

ಹೈದರಾಬಾದ್-ಕರ್ನಾಟಕ ವಿಮೋಚನಾ ಹೋರಾಟವು ದಮನಕಾರಿ ಆಳರಸನೋರ್ವನ ವಿರುದ್ಧ ಜನ ಒಂದಾಗಿ ಬಂಡಾಯವೆದ್ದ ಉಜ್ವಲ ಇತಿಹಾಸಕ್ಕೆ ನಿದರ್ಶನವಾಗಿದೆ. ಹಾಗೆಯೇ ಮಹಾನ್ ತ್ಯಾಗ, ಬಲಿದಾನಗಳಿಗೆ ಅಚ್ಚಳಿಯದ ಸಾಕ್ಷಿಯಾಗಿದೆ.

ನಮ್ಮ ದೇಶದಲ್ಲಿ ಮೊದಲು 562 ಚಿಕ್ಕಪುಟ್ಟ ರಾಜ್ಯಗಳು (ಸಂಸ್ಥಾನಗಳು) ಬ್ರಿಟಿಷರ ಅಧೀನದಲ್ಲಿದ್ದುವು. ಈ ರಾಜ್ಯಗಳಲ್ಲಿ ಹೈದರಾಬಾದ್ ಪ್ರಮುಖವಾಗಿತ್ತು.

ಹೋರಾಟದ ಹಿನ್ನೆಲೆ: ಹೈದರಾಬಾದ್ ಸಂಸ್ಥಾನದಲ್ಲಿ ಹಿಂದುಗಳ ಸ್ಥಿತಿ ಅತ್ಯಂತ ದಾರುಣವಾಗಿತ್ತು. ಸಾರ್ವಜನಿಕವಾಗಿ ಅವರು ಧಾರ್ಮಿಕ ಆಚರಣೆಗಳನ್ನು ನಡೆಸುವಂತಿರಲಿಲ್ಲ.

ಸಂಸ್ಥಾನದಲ್ಲಿ ಶಿಕ್ಷಣವನ್ನು ಕಡೆಗಣಿಸಲಾಗಿತ್ತು. ಇಲ್ಲಿ ಎಲ್ಲವೂ ಉರ್ದುಮಯವಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ದೊಡ್ಡ ಹೊಡೆತ ಬಿತ್ತು.

ನಿಜಾಮನು ‘ಕಾಲಾಗಪ್ತಿ’ ಎಂಬ 53 ಕರಾಳ ನಿಯಮಗಳನ್ನು ಜಾರಿಗೆ ತಂದು ಜನರ ಮೂಲಭೂತ ಸ್ವಾತಂತ್ರ್ಯವನ್ನು ಹತ್ತಿಕ್ಕಿದನು.

ಹೋರಾಟದ ಗತಿ: ಹೋರಾಟದ ಜನಪ್ರಿಯ ನಾಯಕರೆಂದರೆ ಸ್ವಾಮಿ ರಮಾನಂದ ತೀರ್ಥರು. ಅವರು ಹೈದರಾಬಾದ್ ಸಂಸ್ಥಾನದ ಎಲ್ಲೆಡೆ ಸಂಚಾರ ಮಾಡಿ ಅಹಿಂಸಾತ್ಮಕ ಸತ್ಯಾಗ್ರಹ ಚಳುವಳಿಯನ್ನು ಸಂಘಟಿಸಿದರು. ಹೋರಾಟದ ಇನ್ನೊಬ್ಬ ಪ್ರಸಿದ್ಧ ನಾಯಕರು ಹರ್ಡೇಕರ್ ಮಂಜಪ್ಪ. ಇವರು ‘ಕರ್ನಾಟಕದ ಗಾಂಧಿ’ ಎಂದೇ ಪ್ರಸಿದ್ಧರು. ಅವರು ಪಾನ ವಿರೋಧ, ಅಸ್ಪೃಶ್ಯತೆಯ ನಿವಾರಣೆ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸಿದರು.

ವಂದೇ ಮಾತರಂ ಚಳವಳಿ: ಈ ನಡುವೆ ವಂದೇ ಮಾತರಂ ಹಾಡುವುದನ್ನು ಸರ್ಕಾರ ನಿಷೇಧಿಸಿತು. ಇದರ ವಿರುದ್ಧ ನಡೆದ ಹೋರಾಟದ ಧೀರ ನಾಯಕರು ರಾಮಚಂದ್ರ ರಾವ್. ಇವರು `ವಂದೇ ಮಾತರಂ ರಾಮಚಂದ್ರರಾವ್’ ಎಂದೇ ಪ್ರಸಿದ್ಧರು. ‘ವಂದೇ ಮಾತರಂ’ ಹಾಡಿದ ನೂರಾರು ಜನರನ್ನು ಬಂಧಿಸಲಾಯಿತು.

ಹೋರಾಟದಲ್ಲಿ ಆರ್ಯ ಸಮಾಜದ ಪಾತ್ರವು ಪ್ರಮುಖವಾಗಿತ್ತು. ಮುಸ್ಲಿಂ ಮೂಲಭೂತವಾದಿಗಳು ಇತ್ತೇಹಾದ್-ಹಾದ್-ಉಲ್-ಮುಸಲ್ಮೀನ್ ಎಂಬ ಸಂಘವನ್ನು ಕಟ್ಟಿದರು. ಅದರ ಮುಖಂಡ ಕಾಸಿಂರಜವಿ. ಸಂಘವು ಹಿಂಸಾತ್ಮಕ ಮಾರ್ಗ ಹಿಡಿಯಿತು.

ಕಾಂಗ್ರೆಸ್ ಸಂಸ್ಥೆಗೆ ಸಂಸ್ಥಾನದಲ್ಲಿ ನಿಷೇಧವಿತ್ತು. ಅದು ಹೈದರಾಬಾದ್ ಸ್ವತಂತ್ರ ಭಾರತದ ಒಕ್ಕೂಟವನ್ನು ಸೇರಬೇಕೆಂದು ನಿಜಾಮನನ್ನು ಒತ್ತಾಯಿಸಿತು. 1947 ಆಗಸ್ಟ್ 15ರಂದು  ಸ್ವತಂತ್ರ ಭಾರತದ ಧ್ವಜವನ್ನು ಹೈದರಾಬಾದಿನಲ್ಲಿ ಹಾರಿಸಿಯೇ ತೀರಬೇಕೆಂದು ಜನರು ದೃಢ ಸಂಕಲ್ಪಗೈದರು. ನಿಜಾಮನ ಸರ್ಕಾರ ಜನರ ಮೇಲೆ ಇನ್ನಷ್ಟು ಪ್ರತಿಬಂಧ ಹೇರಿತು.

ಇದೇ ವೇಳೆ ರಜಾಕಾರರು ಸಂಸ್ಥಾನದಲ್ಲಿ ವ್ಯಾಪಕ ಕೊಲೆಸುಲಿಗೆಗಳನ್ನು ಮಾಡಲಾರಂಭಿಸಿದರು. ಅವರಿಗೆ ನಿಜಾಮನ ಬೆಂಬಲವಿತ್ತು. ಇದೇ ವೇಳೆ ಎಲ್ಲೆಲ್ಲೂ ಒಂದೇ ಸಮನೆ ವಂದೇ ಮಾತರಂ ಕೇಳಿ ಬರುತ್ತಿತ್ತು.

ಶರಣಗೌಡ ಇನಾಂದಾರ್: ಹೈದರಾಬಾದ್ ವಿಮೋಚನಾ ಸಂಗ್ರಾಮದಲ್ಲಿ ಭೂಗತ ಕಾರ್ಯಾಚರಣೆಯನ್ನು  ಸಂಘಟಿಸಿದವರು ತರುಣ ನಾಯಕ ಶರಣಗೌಡ ಇನಾಂದಾರ್. ಅವರು ಸಂಘಟಿಸಿದ ಯುವತಂಡಗಳು ರಜಾಕಾರರ ಮೇಲೆ ಸಿಡಿಲಿನಂತೆ ಬಂದು ಎರಗಿದವು. ಪರಿಣಾಮವಾಗಿ ಅನೇಕ ಗ್ರಾಮಗಳು ರಜಾಕಾರರ ದೌರ್ಜನ್ಯದಿಂದ ಮುಕ್ತವಾದವು. ಮುಕ್ತರಾದ ಜನ ಅಭಿಮಾನದಿಂದ ಶರಣಗೌಡ ಇನಾಂದಾರರನ್ನು ‘ಸರದಾರ’ರೆಂದು ಕರೆದರು.

ರಜಾಕಾರರ ಅತಿಯಾದ ಹಾವಳಿಯಿಂದ ಲಕ್ಷೋಪಲಕ್ಷ ಜನ ಹೈದರಾಬಾದ್ ಸಂಸ್ಥಾನವನ್ನು ತ್ಯಜಿಸಿ ನೆರೆಯ ಸ್ವತಂತ್ರ ಭಾರತಕ್ಕೆ ವಲಸೆ ಹೋದರು. ಸಾವಿರಾರು ತರುಣರು  ಹೈದರಾಬಾದಿನ ಗಡಿಯುದ್ದಕ್ಕೂ ಶಿಬಿರಗಳನ್ನು ಸ್ಥಾಪಿಸಿ ರಜಾಕಾರ ಪುಂಡರ ವಿರುದ್ಧ ಸಶಕ್ತ ಹೋರಾಟ ನಡೆಸಿದರು.

1947ರಲ್ಲಿ ದೇಶ ಸ್ವತಂತ್ರಗೊಂಡರೂ ಹೈದರಾಬಾದ್ ಸಂಸ್ಥಾನ ಇನ್ನೂ ಭಾರತದೊಂದಿಗೆ ವಿಲೀನವಾಗಿರಲಿಲ್ಲ. ಈ ಮಧ್ಯೆ ರಜಾಕಾರರ ಹಿಂಸಾಚಾರ ನಿರಂತರವಾಗಿ ನಡೆಯುತ್ತಿತ್ತು. ಕೊನೆಗೆ ಹೈದರಾಬಾದ್ ಸಮಸ್ಯೆಯನ್ನು ಇತ್ಯರ್ಥ ಮಾಡಲು ಗೃಹಮಂತ್ರಿ ಸರದಾರ್ ವಲ್ಲಭಭಾಯಿ ಪಟೇಲರಿಗೆ ಅಧಿಕಾರವನ್ನು ಸರ್ಕಾರ ನೀಡಿತು. ಅವರ ಆದೇಶದಂತೆ 1948ರ ಸಪ್ಟೆಂಬರ್ 17ರಂದು ಭಾರತೀಯ ಸೇನೆ ಹೈದರಾಬಾದ್ ಪ್ರವೇಶಿಸಿತು. ಅನ್ಯಮಾರ್ಗವಿಲ್ಲದೆ ನಿಜಾಮನು ಶರಣಾಗತನಾದನು. ನಂತರ ಹೈದರಾಬಾದ್ ಸಂಸ್ಥಾನ ಭಾರತದೊಂದಿಗೆ ವಿಲೀನಗೊಂಡಿತು.

1951ರಲಿ ಹೈದರಾಬಾದ್ ಪ್ರಾಂತದಲ್ಲಿ ಚುನಾವಣೆಗಳು ನಡೆದು ಜನತೆ ತಮ್ಮ ಪ್ರತಿನಿಧಿಗಳನ್ನು ಮೊದಲ ಬಾರಿಗೆ ಆರಿಸಿ ಕಳುಹಿಸಿದರು. ಅಗ್ರಗಣ್ಯ ಜನನಾಯಕರಾಗಿದ್ದ ಸ್ವಾಮಿ ರಮಾನಂದ ತೀರ್ಥರು ಕಲಬುರಗಿ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು.

ಕಾಲಗಣನೆ (ಸಾ.ಶ.)

ಚಿಕ್ಕದೇವರಾಜ ಒಡೆಯರ್ – 1673-1704

ಬೆಂಗಳೂರನ್ನು ಗುತ್ತಿಗೆಗೆ ಪಡೆದದ್ದು – 1689

ದಳವಾಯಿಗಳ ಆಡಳಿತ – 1704-1761

ಹೈದರ್ ಅಲಿ – 1761-1782

ಒಂದನೆಯ ಮೈಸೂರು ಯುದ್ಧ – 1767-1769

ಎರಡನೆಯ ಮೈಸೂರು ಯುದ್ಧ – 1780-1784

ಟಿಪ್ಪು ಸುಲ್ತಾನ್ – 1782-1799

ಮೂರನೆಯ ಮೈಸೂರು ಯುದ್ಧ – 1790-1792

ನಾಲ್ಕನೆಯ ಮೈಸೂರು ಯುದ್ಧ – 1799

ಕೆಳದಿ ರಾಜ್ಯದ ಆಳ್ವಿಕೆಯ ಕಾಲ – 1499-1763

ಹಿರಿಯ ವೆಂಕಟಪ್ಪ ನಾಯಕ – 1586-1629

ಶಿವಪ್ಪ ನಾಯಕ – 1645-60

ರಾಣಿ ಚೆನ್ನಮ್ಮಾಜಿ – 1672-97

ಹೈದರ್ ಅಲಿ ಕೆಳದಿಯನ್ನು ಪರಾಭವಗೊಳಿಸಿದ್ದು – 1763

ಒಂದನೆಯ ಕೆಂಪೇಗೌಡ – 1510-1570

ಎರಡನೆಯ ಕೆಂಪೇಗೌಡ – 1585-1633

ಮದಕರಿ ನಾಯಕ – 1754-1779

ಕಿತ್ತೂರ ಚೆನ್ನಮ್ಮ – 1824

ಸಂಗೊಳ್ಳಿ ರಾಯಣ್ಣ – 1829

ಆಳುಪರ ಆಳ್ವಿಕೆಯ ಕಾಲ – 7-14ನೇ ಶತಮಾನ

ಬ್ರಿಟಿಷರ ಆಡಳಿತ – 1801-1947

ಹಲಗಲಿ ಗ್ರಾಮದ ಬೇಡನಾಯಕರ ಮೇಲೆ ಬ್ರಿಟಿಷರ ದಾಳಿ. ರಾಮಿಯ ದಾಳಿ. – 1857

ಸುರಪುರದ ರಾಜಾವೆಂಕಟಪ್ಪ ನಾಯಕನ ಹೋರಾಟ ಮತ್ತು ಅಂತ್ಯ. – 1854-58

ಸಿಂಧೂರ ಲಕ್ಷ್ಮಣನನ್ನು ಬ್ರಿಟಿಷರು ಗುಂಡಿಕ್ಕಿ ಕೊಂದದ್ದು. – 1922 ಜುಲೈ 22

ಹೈದರಾಬಾದ್ ನಿಜಾಮನ ಶರಣಾಗತಿ ಮತ್ತು ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟದೊಂದಿಗೆ ವಿಲೀನವಾದುದು. – 1948 ಸಪ್ಟೆಂಬರ್ 17

ಹೊಸ ಪದಗಳು

1. ಗಂಡಭೇರುಂಡ – ಎರಡು ತಲೆಗಳಿರುವ ಒಂದು ಕಾಲ್ಪನಿಕ ಪಕ್ಷಿ.

2. ಮಾಂಡಳಿಕ – ಒಂದು ಪ್ರಾಂತವನ್ನು ಆಳುವವನು.

3. ವರಹ – ವರಾಹಮುದ್ರೆಯಿಂದ ಕೂಡಿದ ಒಂದು ಚಿನ್ನದ ನಾಣ್ಯ.

4. ಸೀಮೆ – ರಾಜ್ಯ

5. ಗರೋಡಿ – ಆರಾಧನಾ ಕೇಂದ್ರ

ನಿಮಗೆ ತಿಳಿದಿರಲಿ

1. ನಳದಮಂತಿಯರ ನಡುವೆ ಪತ್ರ ವ್ಯವಹಾರಕ್ಕೆ ನೆರವಾದ ಹಂಸದ ಉದಾಹರಣೆಯಿಂದ ಅಂಚೆ (=ಹಂಸ) ಶಬ್ದವನ್ನು ಚಿಕ್ಕದೇವರಾಜನು ರೂಢಿಸಿದನು.

2. ಎರಡನೆಯ ಕೆಂಪೇಗೌಡನು ಕಟ್ಟಿಸಿದ ಕಾವಲು ಗೋಪುರಗಳು ಇಲ್ಲಿವೆ: ಉತ್ತರದಲ್ಲಿ ಮೇಖ್ರಿವೃತ್ತ; ದಕ್ಷಿಣದಲ್ಲಿ-ಲಾಲ್ಬಾಗ್; ಪೂರ್ವದಲ್ಲಿ-ಹಲಸೂರು; ಮತ್ತು ಪಶ್ಚಿಮದಲ್ಲಿ- ಗವಿಗಂಗಾಧರೇಶ್ವರ.

ಪ್ರಶ್ನೋತ್ತರಗಳು

7ನೇ ತರಗತಿ ಸಮಾಜ ವಿಜ್ಞಾನ | ಮೈಸೂರು ಮತ್ತು ಇತರ ಸಂಸ್ಥಾನಗಳು | Mysuru mattu Itara samsthanagalu

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

Chamundi Betta | Chamundi History | Mysore
Mysore Palace with guide Amba Vilas Palace ಮೈಸೂರು ಅರಮನೆ inside Mysore Tourism Karnataka Tourism
Chitradurga Fort | Onake Obavva | Madakari Nayaka | ಚಿತ್ರದುರ್ಗ ಕೋಟೆ | ಮದಕರಿ ನಾಯಕ | Vani Vilasa Sagar
Talakaveri & Bhagamandala – Best of Coorg trip
Bahubali (Gomateshwara) Statue at Karkala- drone footage
SAVIRA KAMBADA BASADI | JAIN TEMPLE MOODABIDRE | ಸಾವಿರ ಕಂಬದ ಬಸದಿ | MANGALORE FAMOUS PLACE

***********