ಮಹಿಳಾ ದಿನಾಚರಣೆ – ಪಾಠ – 9

ಅಂದು ಬೆಳಗ್ಗೆ ಶಾಲಾ ಬಯಲಿನಲ್ಲಿ ಮಕ್ಕಳೆಲ್ಲರೂ ಬಹಳ ಸಡಗರ ಸಂಭ್ರಮದಿಂದ ಓಡಾಡುತ್ತಿದ್ದರು. ಮುಖ್ಯಶಿಕ್ಷಕರು ಮಕ್ಕಳನ್ನು ಕುರಿತು ‘‘ಮಕ್ಕಳೇ! ಎಲ್ಲರೂ ಬೇಗ ಇಲ್ಲಿ ಬನ್ನಿರಿ’’ ಎಂದರು.

ಮುಖ್ಯಶಿಕ್ಷಕರು : ಮಕ್ಕಳೇ, ಈ ದಿನದ ವಿಶೇಷ ನಿಮಗೀಗಾಗಲೆ ತಿಳಿದಿದೆಯಲ್ಲವೇ?
ಮಕ್ಕಳು : (ಒಟ್ಟಾಗಿ) ಹೌದು ಗುರುಗಳೇ. ಹೌದು ಇಂದು ಮಹಿಳಾ ದಿನಾಚರಣೆ ಎಂದು ನಿನ್ನೆ ನೀವೇ ಹೇಳಿದ್ದಿರಲ್ಲ.
ಶಿಕ್ಷಕಿ : ಮಕ್ಕಳೇ! ಇಂದು ಆಗಬೇಕಾದ ಕೆಲಸದ ಬಗ್ಗೆ ನಿನ್ನೆಯೇ ನಿಮಗೆ ತಿಳಿಸಿದ್ದೆ. ಅದರಂತೆ ನೀವೆಲ್ಲ ಕಾರ್ಯ ನಿರ್ವಹಿಸಿದ್ದೀರಿ ಅಲ್ಲವೇ.
ಮಕ್ಕಳು : ಹೌದು ಮೇಡಂ. ನೀವು ಹೇಳಿದಂತೆ ಶಾಲಾ ಆವರಣ ಸ್ವಚ್ಫ ಮಾಡಿದ್ದೇವೆ. ತಳಿರು ತೋರಣ ಕಟ್ಟಿ ರಾಷ್ಟ್ರಕ್ಕಾಗಿ ದುಡಿದ ಅನೇಕ ಮಹಿಳೆಯರ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಸಿಂಗರಿಸಿದ್ದೇವೆ.
ಮುಖ್ಯಶಿಕ್ಷಕರು : ಹಾಗಾದರೆ ನಾವೆಲ್ಲ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಿ ಅತಿಥಿಗಳನ್ನು ಸ್ವಾಗತಿಸೋಣ ಬನ್ನಿ.

ಮಕ್ಕಳೆಲ್ಲರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಆಸೀನರಾದರು. ಐದನೆಯ ತರಗತಿ ವಿದ್ಯಾರ್ಥಿ ಶೇಖರ್ ಕಾರ್ಯಕ್ರಮ ನಿರೂಪಣೆ ಮಾಡಿದನು. ಸಭೆಗೆ ಆಗಮಿಸಿದ ಅತಿಥಿಗಳಿಗೆ ತಮ್ಮ ತಮ್ಮ ಆಸನಗಳಲ್ಲಿ ಕುಳಿತುಕೊಳ್ಳಲು ವಿನಂತಿಸಿದನು. ನಾಲ್ಕನೆಯ ತರಗತಿ ವಿದ್ಯಾರ್ಥಿನಿಯರಾದ ಕುಸುಮ ಮತ್ತು ಮೇರಿ ಪ್ರಾರ್ಥನೆ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರನ್ನು ಸುಮತಿ ಸ್ವಾಗತಿಸಿದಳು. ಮುಖ್ಯಶಿಕ್ಷಕರು ಪ್ರಾಸ್ತಾವಿಕವಾಗಿ ಈ ದಿನದ ಮಹತ್ವವನ್ನು ಸಭೆಗೆ ತಿಳಿಸಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ಮಹಾಲಕ್ಷ್ಮಿಯವರು ಮಹಿಳಾ ದಿನಾಚರಣೆ ಕುರಿತು ಮಾತನಾಡಲು ಪ್ರಾರಂಭಿಸಿದರು.

‘‘ಮಕ್ಕಳೇ, 1857ರ ಮಾರ್ಚ್ 8ರಂದು ನ್ಯೂಯಾರ್ಕಿನಲ್ಲಿ ಗಾರ್ಮೆಂಟ್ಸ್ ಕಾರ್ಮಿಕರು ಮಾಡಿದ ಹೋರಾಟದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜಾರಿಗೆ ಬಂದಿತು. 1975ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ವರ್ಷಾಚರಣೆಯನ್ನು ಆರಂಭಿಸಲಾಯಿತು. 1975ರಿಂದ 85ರವರೆಗೆ ವಿಶ್ವಸಂಸ್ಥೆಯ ಕರೆಯಂತೆ ಮಹಿಳೆಯರ ವಿರುದ್ಧ ನಡೆಯುವ ಎಲ್ಲ ಬಗೆಯ ಅಸಮಾನತೆಗಳನ್ನು ತೊಡೆದುಹಾಕಲು ‘ಮಹಿಳಾ ದಶಕ’ದ ಆಚರಣೆಯನ್ನು ಘೋಷಿಸಲಾಯಿತು. ಇಂದು ಹೆಣ್ಣುಮಕ್ಕಳಿಗೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುಹೆಚ್ಚು ಅವಕಾಶಗಳನ್ನು ಕಲ್ಪಿಸಬೇಕಾಗಿದೆ. ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ನಾಣ್ಣುಡಿ ಇದೆ. ಹೆಣ್ಣು ಆದರ್ಶ ಸಮಾಜದ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾಳೆ. ಮಕ್ಕಳ ಪಾಲನೆ ಪೋಷಣೆಯಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೂ ಹಲವು ಸಾಧನೆಗಳನ್ನು ಮಾಡಿದ್ದಾಳೆ.

ನ್ಯೂಯಾರ್ಕ ನಗರ

ನಮ್ಮ ನಾಡಿನಲ್ಲಿ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ ಮುಂತಾದ ಅನೇಕ ವೀರನಾರಿಯರ ಹೆಸರು ಅಜರಾಮರವಾಗಿವೆ. ಈ ಸಂದರ್ಭದಲ್ಲಿ ಒನಕೆ ಓಬವ್ವಳ ಬಗ್ಗೆ ಕಿರು ಪರಿಚಯ ಮಾಡಿಕೊಳ್ಳೋಣ.

ಒನಕೆ ಓಬವ್ವ
ಕಿತ್ತೂರು ರಾಣಿ ಚೆನ್ನಮ್ಮ
ರಾಣಿ ಅಬ್ಬಕ್ಕ
ಬೆಳವಡಿ ಮಲ್ಲಮ್ಮ

ಹಿಂದೆ ಚಿತ್ರದುರ್ಗವನ್ನು ಮದಕರಿನಾಯಕ ಪಾಳೇಗಾರನು ಆಳುತ್ತಿದ್ದನು. ಒಮ್ಮೆ ದುರ್ಗದ ಕೋಟೆಗೆ ಹೈದರಾಲಿ ಸೈನಿಕರು ಮುತ್ತಿಗೆ ಹಾಕಿದರು. ಹೈದರಾಲಿ ಸೈನಿಕರು ಕೊಳದ ಸಮೀಪ ಇದ್ದ ಕಳ್ಳಗಿಂಡಿಯ ಮೂಲಕ ಕೋಟೆಯನ್ನು ಪ್ರವೇಶಿಸಲು ಹೊಂಚು ಹಾಕಿದ್ದರು. ಆ ಕಳ್ಳಗಿಂಡಿಯ ಮೂಲಕ ಒಬ್ಬೊಬ್ಬರೇ ಕೋಟೆಯ ಒಳಗೆ ಹೋಗಲು ಸಿದ್ಧರಾದರು.

ಚಿತ್ರದುರ್ಗ
ಮದಕರಿನಾಯಕ ಪಾಳೇಗಾರ
ಹೈದರಾಲಿ
ಕಳ್ಳಗಿಂಡಿ

ಓಬವ್ವ ಕೋಟೆಯ ಒಬ್ಬ ಕಾವಲುಗಾರನ ಹೆಂಡತಿ. ಆಕೆ ತಣ್ಣೀರು ಕೊಳದ ಹತ್ತಿರ ನೀರು ತರಲು ಕೊಡವನ್ನು ಹಿಡಿದು ಬಂದಳು. ಆಗ ಕಳ್ಳಗಿಂಡಿಯ ಹತ್ತಿರ ಪಿಸುಗುಟ್ಟುವ ಧ್ವನಿ ಕೇಳಿಸಿತು. ಶತ್ರು ಸೈನಿಕರು ಕೋಟೆಯೊಳಗೆ ನುಸುಳಲು ಹವಣಿಸುತ್ತಿದ್ದರು. ಇದನ್ನು ಅರಿತ ಓಬವ್ವ ತನ್ನ ಗುಡಿಸಲಿಗೆ ಹೋಗಿ ಒನಕೆಯನ್ನು ತಂದಳು. ಕೈಯಲ್ಲಿ ಒನಕೆ ಹಿಡಿದು ಆ ಕಳ್ಳಗಿಂಡಿಯ ಮಗ್ಗುಲಿಗೆ ನಿಂತುಕೊಂಡಳು. ಒಳ ನುಸುಳಿ ಬರುತ್ತಿದ್ದ ಹೈದರಾಲಿ ಸೈನಿಕರನ್ನು ಒನಕೆಯಿಂದ ಹೊಡೆದು ಹೊಡೆದು ಸಾಯಿಸಿದಳು.

ಹೀಗೆ ನೂರಾರು ಸೈನಿಕರು ಹತರಾದರು. ಆಗ ಮದಕರಿ ನಾಯಕನು ದಂಡಿನೊಡನೆ ಆ ಸ್ಥಳಕ್ಕೆ ಬಂದನು. ಓಬವ್ವಳ ಸಾಹಸಕ್ಕೆ ಬೆರಗಾದನು. ದುರ್ಗವನ್ನು ರಕ್ಷಿಸಿದ ಓಬವ್ವಳನ್ನು ಕೊಂಡಾಡಿದನು.

ಒನಕೆ ಓಬವ್ವಳನ್ನು ಕನ್ನಡ ನಾಡಿನ ಜನರು ಮರೆಯುವಂತಿಲ್ಲ. ಆಕೆಯ ಸಾಹಸದಿಂದ ಯುದ್ಧದಲ್ಲಿ ದುರ್ಗಕ್ಕೆ ಜಯ ಲಭಿಸಿತು. ಹೀಗೆ ಅನೇಕ ಮಹಿಳೆಯರು ತಮ್ಮ ಪ್ರಾಣದ ಹಂಗನ್ನು ತೊರೆದು ಸಾಧನೆಗೈದಿರುವರು. ನಾವೂ ಸಹ ಇಂತಹ ಸಾಧಕ ಮಹಿಳೆಯರ ಆದರ್ಶಗಳನ್ನು ಪಾಲಿಸಿಕೊಂಡು ಈ ದೇಶದ ಉತ್ತಮ ಪ್ರಜೆಗಳಾಗಿ ಬಾಳೋಣ’’ ಎಂದರು.

ಮಕ್ಕಳೆಲ್ಲರೂ ಉತ್ಸಾಹದಿಂದ ಭಾಷಣವನ್ನು ಆಲಿಸುವುದರಲ್ಲಿ ಮೈ ಮರೆತಿದ್ದರು. ವಿದ್ಯಾರ್ಥಿನಿ ಫಾತಿಮಾಳು ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದಳು. ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು. ಎಸ್.ಡಿ.ಎಂ.ಸಿ.ಯವರ ಸಹಕಾರದಿಂದ ಎಲ್ಲರಿಗೂ ಸಿಹಿ ಹಂಚಲಾಯಿತು.

ಹೆಣ್ಣು ಸಂಸಾರದ ಕಣ್ಣು

ಪದಗಳ ಅರ್ಥ

ಸಂಭ್ರಮ – ಸಡಗರ, ಉತ್ಸಾಹ
ಕಾರ್ಯ – ಕೆಲಸ, ಕಾಯಕ
ಸಿಂಗರಿಸು – ಅಲಂಕರಿಸು, ಅಲಂಕಾರ ಮಾಡು
ನಿರೂಪಣೆ – ವಿವರಿಸು
ಗಣ್ಯ – ಮನ್ನಣೆಗೆ ತಕ್ಕ, ಪ್ರಮುಖ
ಪೋಷಣೆ – ರಕ್ಷಣೆ, ಪಾಲನೆ
ನಿದರ್ಶನ – ಉದಾಹರಣೆ, ದೃಷ್ಟಾಂತ
ಸಂದರ್ಭ – ಸಮಯ, ವೇಳೆ, ಕಾಲ
ಮುತ್ತಿಗೆ – ಎರಗು, ಆಕ್ರಮಿಸು
ಪಿಸುಗುಟ್ಟು – ಮೆಲ್ಲನೆ ಮಾತು
ಶತ್ರು – ಹಗೆ, ವೈರಿ
ಹವಣಿಸು – ಅಣಿಯಾಗು, ಸಿದ್ಧವಾಗು
ದಂಡು – ಸೈನ್ಯ, ಗುಂಪು, ಪಡೆ, ಸಮೂಹ
ಪಾಲಿಸು – ಅನುಸರಿಸು, ಆಚರಿಸು
ಉತ್ಸಾಹ – ಹುರುಪು, ಆಸಕ್ತಿ
ವಂದನೆ – ನಮಸ್ಕಾರ, ನಮನ
ಮುಕ್ತಾಯ – ಕೊನೆ, ಅಂತ್ಯ
ಸಹಕಾರ – ಸಹಾಯ, ನೆರವು.

ಟಿಪ್ಪಣಿ

ತಳಿರು ತೋರಣ – ಚಿಗುರೆಲೆಗಳ ಮಾಲೆ.
ಹೊಂಚುಹಾಕು – ಅಡಗಿಕೊಂಡು ಕಾಯುವುದು.
ಪರಂಪರೆ – ಸಂಪ್ರದಾಯ, ಅನೂಚಾನವಾಗಿ ಬಂದಿರುವುದು.
ಎಸ್.ಡಿ.ಎಂ.ಸಿ. – ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ.
ಅತಿಥಿ – ಆಮಂತ್ರಣವನ್ನು ಪಡೆದು ಅಥವಾ ಪಡೆಯದೆಯೆ ಮನೆಗೆ ಬಂದ ವ್ಯಕ್ತಿ.
ಆಸನ – ಕುಳಿತುಕೊಳ್ಳಲು ಉಪಯೋಗಿಸುವ ಪೀಠ.
ಕೊಡ – ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ.

ಸಂವೇದ ವಿಡಿಯೋ ಪಾಠಗಳು

Samveda Kannada 4th Mahila Dinacharane 1 of 1

ಪೂರಕ ವಿಡಿಯೋಗಳು

Mahila dinacharane ( ಮಹಿಳಾ ದಿನಾಚರಣೆ ) kannada lesson class 4 ( ಮಹಿಳಾ ದಿನಾಚರಣೆ ) kannada lesson

ಪ್ರಶ್ನೋತ್ತರಗಳು ಹಾಗೂ ಭಾಷಾ ಚಟುವಟಿಕೆಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.