ಮಗು ಮತ್ತು ಹಣ್ಣುಗಳು – ಪದ್ಯ – 4

ಪ್ರವೇಶ : ಮಾನವನಿಗೆ ಪ್ರಕೃತಿಯೇ ಮೊದಲ ಗುರು. ಎಲ್ಲರಿಂದಲೂ, ಎಲ್ಲದರಿಂದಲೂ ಮಾನವ ಪಾಠ ಕಲಿಯಬೇಕು. ಪ್ರಾಣಿ, ಪಕ್ಷಿ, ಮರ-ಗಿಡಗಳಿಂದಲೂ ಕಲಿಯುವ ವಿಷಯಗಳು ಬಹಳಷ್ಟಿವೆ. `ಎಲ್ಲರೊಳಗೊಂದು ನುಡಿ ಕಲಿತು ವಿದ್ಯದ ಪರ್ವತವೇ ಆದ ಸರ್ವಜ್ಞ’ ಎನ್ನುವ ಹಾಗೆ ಹಣ್ಣುಗಳಿಂದಲೂ ಕಲಿಯಬೇಕಾದ ಪಾಠಗಳಿವೆ. ಹಣ್ಣಿನ ಹಾಗೆ ಬದುಕು ಮಾಗಿದರೆ ಬಾಳು ಸಿಹಿಯಾಗಿರುತ್ತದೆ ಎಂಬ ಆಶಯದ ಪದ್ಯವಿದು.

ಹಣ್ಣಿನಂಗಡಿ ಮುಂದೆ ಕಣ್ಣರಳಿಸುವ ಮಗು
ಇಲ್ಲಿ ಈ ತಿರುವಲ್ಲಿ ಥಟ್ಟನವತರಿಸಿದ ಕಪ್ಪು ಲಾರಿಯ ಹಾಗೆ
ಗಾಳಿ ಕೀಟಲೆ ಉಗುರೊ
ತುಂಟರೆಸೆಯುವ ಕಲ್ಲೋ ||1||

ಕಾಯಿಯಲ್ಲೇ ನಿನ್ನ ಕೆಡವದಿರಲಿ
ಹಣ್ಣಿನಂಗಡಿಯಾಗು ನೀನೂನು
ಗಿರವಿಯಂಗಡಿ ಗುಜರಿಗಳ ಧೂಳು ಹಬ್ಬಿದ
ಊರ ಮಾರುಕಟ್ಟೆಯ ನಡುವೆ ||2||

ಹಣ್ಣಾಗಬೇಕು, ಮಗು,
ಮೈಯೆಲ್ಲ ಮಾಗಿಹುಣ್ಣಿನ ಸುಕ್ಕು ಬರುವವರೆಗೆ
ಪಕ್ವತನ ಬಿರಿದ ಬಾಳೆಹಣ್ಣಿದೆಯಲ್ಲ
ಅದರ ಹಾಗೇ ಕೊಂಚ ಬಾಗಬೇಕು ||3||

ಕೊಬ್ಬಿದರೆ ಚಕೋತನೆಯ ಹಾಗೆ
ಕುಗ್ಗಿದರೆ ನಿಂಬೆ ಹಣ್ಣಿನ ಹಾಗೆ
ಹುಳಿಗಟ್ಟುವುದು ನಿನ್ನೊಳಗೆ
ಸರಿಗಾತ್ರವಾಗಿ ಸಮನಿಸಲಿ ನಿನ್ನತನ ||4||

ಕಿತ್ತಲೆಯ ಹಾಗೆ, ಮೋಸಂಬಿ ಹಾಗೆ
ರಸಪೂರಿ ಮಾವಿನ ಹಣ್ಣಿನಂತೆ
ಅಂಜೂರದಂತೆ ಅಪರೂಪವಾಗು ಜನರ ಕಣ್ಣಿಗೆ;
ಕಂಡರೆ ಕಾಣು ಕಲ್ಲಂಗಡಿಯಾಗಿ ||5||

ಬೇಸಿಗೆಯ ಕಮರಿರುವ ಕಣ್ಣುಗಳಿಗೆ
ದಳದಳಕೊಯ್ದು ಅರಳಿಸಿದ ದಾಳಿಂಬೆಯೊಳಗೆ
ಥಳಥಳ ಕೆಂಡ ಬಣ್ಣ ಮಣಿಮಣಿ
ಹನಿಹನಿ ತನಿರಸದ ಖನಿಯಾಗು; ||6||

ಹಬ್ಬಿಕೋ ದ್ರಾಕ್ಷಿ ಬಳ್ಳಿಯ ಹಾಗೆ
ಆಯುಷ್ಯೆ ಚಪ್ಪರದ ಉದ್ದಗಲ;
ತಬ್ಬಿಕೋ ಬಿಡಬೇಡ;
ಹಣ್ಣು ತೊಡಿಸಲು ನಿನಗೆ ||7||

ತಾನೆ ಮಣ್ಣಾಗುತ-ಬರಲು ತೋಟಗಾತಿ
ಬೆಲೆಯ ರಾಕೆಟ್ಟು ಯಾನ ಹೊರಡದಿರು
ಸೇಬು ಹಣ್ಣಿನ ಜೊತೆಗೆ
ಎಲ್ಲರಿಗೂ ದಕ್ಕುವ ಎಲಚಿಯಾಗು ||8||

ಕವಿ ಕೃತಿ ಪರಿಚಯ

ಶ್ರೀ ಎಚ್. ಎಸ್. ಶಿವಪ್ರಕಾಶ್ ಅವರು 1954ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಮಹಾಚೈತ್ರ, ಸುಲ್ತಾನ್ ಟಿಪ್ಪು, ನವಿಲು ನಗರ, ಮಳೆಬಿದ್ದ ನೆಲದಲ್ಲಿ ಮೊದಲಾದ ಕೃತಿಗಳನ್ನು ರಚಿದ್ದಾರೆ. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಕೇಂದ್ರ ಸಾಹಿತ್ಯ ಅಕಾಡೆಮಿ, ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಪದಗಳ ಅರ್ಥ

ಗಿರಿವಿಯಂಗಡಿ – ವಸ್ತುಗಳನ್ನು ಅಡವಿಟ್ಟುಕೊಂಡು ಹಣ ನೀಡುವ ಅಂಗಡಿ;
ಗುಜರಿ – ಹಳೆಯ ವಸ್ತುಗಳನ್ನು ಮಾರುವ ಸ್ಥಳ;
ಪಕ್ವತನ – ಮಾಗಿದ;
ಕೊಬ್ಬು – ರಸಭರಿತ;
ಕಮರು – ಕಂದು;
ಖನಿ – ಗಣಿ, ಆಕರ;
ದಕ್ಕು – ದೊರಕು.

ಸಂವೇದ ವಿಡಿಯೋ ಪಾಠಗಳು

Samveda – 5th – Kannada – Magu mattu Hannugalu

ಪದ್ಯದ ಮಾದರಿ ಗಾಯನ

https://youtu.be/LB6aWhMMgJY

ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವ್ಯಾಕರಣ ಮಾಹಿತಿ

ನಾವು ಹಿಂದಿನ ಪಾಠದಲ್ಲಿ ಕೆಲವು ಲೇಖನ ಚಿಹ್ನೆಗಳನ್ನು ಪರಿಚಯ ಮಾಡಿಕೊಂಡಿದ್ದೇವೆ. ಈಗ ಇನ್ನೂ ಕೆಲವು ಲೇಖನ ಚಿಹ್ನೆಗಳನ್ನು ತಿಳಿಯೋಣ.

1. ನೌಕಾಸೇನೆ :- ಭಾರತೀಯ ನೌಕಾಸೇನೆ ಭೂಸೇನೆಯಷ್ಟೇ ಹಳೆಯದು. ಜಲಮಾರ್ಗದಲ್ಲಿ ವೈರಿಗಳನ್ನು ತಡೆಯಲು ನೌಕಾಸೇನೆ ಬಳಕೆಯಾಗುತ್ತದೆ.
ಇಲ್ಲಿ ವಾಕ್ಯದ ಶಿರೋನಾಮೆಯ ಅನಂತರ ವಿವರಣಾತ್ಮಕ ಚಿಹ್ನೆ (:-) ಬಳಕೆಯಾಗಿದೆ. ಅಭಿಪ್ರಾಯದ ವಿವರಣೆ ಇಂತಿದೆ ಎನ್ನುವುದನ್ನು ತಿಳಿಸುವ ಸಂದರ್ಭದಲ್ಲಿ ಈ ಚಿಹ್ನೆ ಬಳಕೆಯಾಗುತ್ತದೆ.

2. ಒಂದು ಬಿಲದೊಳಗೆ ಹಿರಣ್ಯರೋಮ ಎಂಬ ಮೂಷಿಕವು ಮನೆಮಾಡಿಕೊಂಡಿತ್ತು.
ಮೇಲಿನ ವಾಕ್ಯದಲ್ಲಿ ‘ಹಿರಣ್ಯರೋಮ’ ಈ ಪದಕ್ಕೆ ವಾಕ್ಯವೇಷ್ಟನ ಚಿಹ್ನೆ (‘ ’) ಬಳಕೆ ಯಾಗಿದೆ. ಇದು ಪಾರಿಭಾಷಿಕ/ಪ್ರಧಾನ/ವಿಶಿಷ್ಟ ಪದಗಳನ್ನು ಬರೆಯುವಾಗ ಬಳಕೆ ಯಾಗುತ್ತದೆ.

3. ಸ್ವಾಮಿ, ನನಗೆ ಅದೃಷ್ಟವಿಲ್ಲ. ಈಗಲೂ ನನ್ನ ಹೃದಯ ಅವನಿಗಾಗಿ ಮಿಡಿಯುತ್ತಿದೆ. ಗಂಧರ್ವಸೇನ ನನ್ನ ಪ್ರೀತಿಯ ಕತ್ತೆ ಎಂದು ಮಡಿವಾಳ್ತಿ ಬೊಬ್ಬಿಟ್ಟು ಅತ್ತಳು.
ಮೇಲಿನ ವಾಕ್ಯದಲ್ಲಿ ಉದ್ಧರಣ ಚಿಹ್ನೆ (‘’…………”) ಬಳಕೆಯಾಗಿದೆ. ಇದು ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಹೇಳುವಾಗ ಬಳಕೆಯಾಗುತ್ತದೆ.

4. ನರಿಯು ಕೊಕ್ಕರೆ (ನೀರುಹಕ್ಕಿ)ಯನ್ನು ಹಿಡಿಯಲು ಹೊಂಚು ಹಾಕಿತು.
ಮೇಲಿನ ವಾಕ್ಯದಲ್ಲಿ ಆವರಣ ಚಿಹ್ನೆ (…………) ಬಳಕೆಯಾಗಿದೆ. ಇದು ಹೆಚ್ಚಿನ ವಿವರಣೆಗಳನ್ನು, ಅರ್ಥಗಳನ್ನು ನೀಡುವ ಸಂದರ್ಭದಲ್ಲಿ ಬಳಕೆಯಾಗುತ್ತದೆ.