ಸಾ.ಶ. 8ನೇ ಶತಮಾನದಿಂದ 16ನೇ ಶತಮಾನದವರೆಗಿನ ಕಾಲದಲ್ಲಿ ಅನೇಕ ಧಾರ್ಮಿಕ ಸುಧಾರಕರು ಜನ್ಮತಾಳಿದರು. ಅವರು ಚಿಂತನಶೀಲರಾಗಿದ್ದು, ವೈಚಾರಿಕ ನೆಲೆಯಲ್ಲಿ ಧರ್ಮ ಮತ್ತು ಸಮಾಜದ ಪುನರುತ್ಥಾನ ಮಾಡಿದರು.

ಈ ಅಧ್ಯಾಯದಲ್ಲಿ ಸುಧಾರಣಾ ಚಳವಳಿಯ ಮುಂಚೂಣಿಯಲ್ಲಿದ್ದ ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಬಸವೇಶ್ವರರು ಮತ್ತು ಮಧ್ವಾಚಾರ್ಯರ ಜೀವನ ಹಾಗೂ ಸುಧಾರಣೆಗಳನ್ನು ಸಂಕ್ಷಿಪ್ತವಾಗಿ ನಿರೂಪಣೆ ಮಾಡಲಾಗಿದೆ.

ನಿಮಗೆ ಪುರಂದರದಾಸ ಹಾಗೂ ಕನಕದಾಸರ ವಿಚಾರ ತಿಳಿದಿದೆಯಲ್ಲವೆ? ಅವರು ಸಮಾಜಕ್ಕೆ ಏನು ಕೊಡುಗೆಯನ್ನು ಕೊಟ್ಟರು? ಅವರಂತೆ ಉತ್ತರ ಭಾರತದಲ್ಲಿ ಸಾಧುಸಂತರು ತಮ್ಮ ಬೋಧನೆಗಳಿಂದ ಸಮಾಜವನ್ನು ಜಾಗೃತಿಗೊಳಿಸಿದರು.

ಭಕ್ತಿಪಂಥದ ಆಶಯ, ಅರ್ಥ ಮತ್ತು ಲಕ್ಷಣಗಳನ್ನು ಹೇಳಲಾಗಿದೆ. ಶ್ರೀಚೈತನ್ಯ, ಗುರು ನಾನಕರು, ಮೀರಾಬಾಯಿ ಹಾಗೂ ಸೂಫಿ ಸಂತರನ್ನು ಪರಿಚಯಿಸಲಾಗಿದೆ. ಜೊತೆಗೆ ಭಕ್ತಿಪಂಥವು ವಿಭಿನ್ನ ಪಂಥೀಯರ ನಡುವೆ ಸಾಧಿಸಿದ ಸಾಮರಸ್ಯವನ್ನು ಹಾಗೂ ಸ್ಥಳೀಯ ಭಾಷೆಗಳ ಸಂಪನ್ನತೆಗೆ ನೀಡಿದ ಕೊಡುಗೆಯನ್ನು ವಿವರಿಸಲಾಗಿದೆ.

ಭಾರತದಲ್ಲಿ ಅನೇಕ ಮಹಾಪುರುಷರು ಜನ್ಮತಾಳಿದರು. ಇವರು ಬೋಧಕರು ಮಾತ್ರವೇ ಆಗಿರದೆ ಸಕ್ರಿಯವಾಗಿ ಸಮಾಜ ಸುಧಾರಣೆಯನ್ನೂ ಮಾಡಿದರು. ಇವರ ಸುಧಾರಣೆಗಳು ಜನರಲ್ಲಿದ್ದ ಅಜ್ಞಾನ ಮತ್ತು ಕೆಟ್ಟ ಸಂಪ್ರದಾಯಗಳನ್ನು ತೊಡೆದು ಹಾಕಿದವು. ಇವರ ಪ್ರಭಾವ ಇಂದಿಗೂ ವ್ಯಾಪಕವಾಗಿ ಹರಡಿದೆ.

ಶಂಕರರು ಕೇರಳದ ಕಾಲಡಿ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರತಿಭಾವಂತರಾದ ಇವರು ಎಂಟರ ವಯಸ್ಸಿನಲ್ಲಿಯೇ ನಾಲ್ಕು ವೇದಗಳನ್ನು ಅರಿತರು. ಶಿವಗುರು ಮತ್ತು ಆರ್ಯಾಂಬೆ ಶಂಕರರ ತಂದೆ ತಾಯಿ. ಶಂಕರರು ಪ್ರತಿಪಾದಿಸಿದ ತತ್ವವನ್ನು ಅದ್ವೈತ ಎನ್ನುವರು.

ಶಂಕರರ ಸುಧಾರಣೆಗಳು:
* ಶಂಕರರು ಅಂದಿನ ಕಾಲದ ಹಿಂದೂ ಸಮಾಜದಲ್ಲಿ ಹಲವಾರು ಸುಧಾರಣೆಗಳನ್ನು ತಂದು ಜನರನ್ನು ಜ್ಞಾನ ಮಾರ್ಗದಲ್ಲಿ ನಡೆಸಿದರು.
* ಅದ್ವೈತ ಸಿದ್ದಾಂತದ ಮೂಲಕ ಮನುಕುಲವೆಲ್ಲಾ ಒಂದೇ ಇಲ್ಲಿ ಎಲ್ಲರೂ ಸಮಾನರು ಎನ್ನುವ ತತ್ವವನ್ನು ಸಾರಿದರು.
* ಜಾತಿಗಳ ಹೆಸರಿನಲ್ಲಾಗುತ್ತಿದ್ದ ಘರ್ಷಣೆಯನ್ನು ತಡೆಯುವ ಮೂಲಕ ಸಮಾಜ ಸುಧಾರಕ ಎನಿಸಿಕೊಂಡರು.
* ಶಂಕರರು ಬದರಿನಾಥ (ಉತ್ತರಾಖಂಡ), ದ್ವಾರಕೆ (ಗುಜರಾತ್), ಪುರಿ (ಒಡಿಶಾ) ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಪೀಠಗಳನ್ನು ಸ್ಥಾಪಿಸಿದರು. ಈ ಪೀಠಗಳು ಭಾರತೀಯರನ್ನು ಭಾವನಾತ್ಮಕವಾಗಿ ಹಾಗೂ ಧಾರ್ಮಿಕವಾಗಿ ಜೋಡಿಸುವ ಕೇಂದ್ರಗಳಾದವು.
* ಶಂಕರರು ಅನೇಕ ಶಾಸ್ತ್ರಗ್ರಂಥಗಳನ್ನು ಬರೆದರು. ಅವರ ಕೃತಿ `ಭಜಗೋವಿಂದಂ’ ಇಂದಿಗೂ ಜನಪ್ರಿಯವಾಗಿದೆ. ಶಂಕರರು ತಮ್ಮ 32 ವರ್ಷಗಳ ಜೀವಿತ ಕಾಲದೊಳಗೆ ಇಷ್ಟೆಲ್ಲಾ ಸಾಧಿಸಿದ್ದು ಅಚ್ಚರಿಯ ಸಂಗತಿಯಾಗಿದೆ.

ರಾಮಾನುಜರು ಚೆನ್ನೈ ಸಮೀಪದ ಶ್ರೀಪೆರಂಬುದೂರಿನಲ್ಲಿ ಜನಿಸಿದರು. ಕಂಚಿ ನಗರದಲ್ಲಿ ಶಾಸ್ತ್ರಾಧ್ಯಯನ ಮಾಡಿದರು. ರಾಮಾನುಜರ ತಂದೆ ಕೇಶವ ದೀಕ್ಷಿತರು, ತಾಯಿ ಕಾಂತಿಮತಿ. ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು ವಿಶಿಷ್ಟಾದ್ವೈತವೆಂದು ಕರೆಯುತ್ತೇವೆ.

ರಾಮಾನುಜರು ದೇಶದ ನಾಲ್ಕೂ ದಿಕ್ಕಿನಲ್ಲಿ ಸಂಚರಿಸಿ ಶ್ರೀವೈಷ್ಣವ ಮತವನ್ನು ಪ್ರಚಾರ ಮಾಡಿದರು. ಮುಕ್ತಿಗೆ ಭಕ್ತಿ ಮತ್ತು ಶರಣಾಗತಿ ಮುಖ್ಯವೆಂದು ಸಾರಿದರು. ಕರ್ನಾಟಕದ ಹೊಯ್ಸಳ ದೊರೆ ವಿಷ್ಣುವರ್ಧನ ಇವರನ್ನು ಸ್ವಾಗತಿಸಿದನು.

ರಾಮಾನುಜರ ಸುಧಾರಣೆಗಳು:
* ರಾಮಾನುಜರು ಜಾತಿಸಾಮರಸ್ಯವನ್ನು ಪ್ರೋತ್ಸಾಹಿಸಿದರು.
* ಜಾತಿವಾದವನ್ನು ಖಂಡಿಸುವ ಮೂಲಕ ಭಕ್ತಿ ತತ್ವವನ್ನು ಎಲ್ಲಾ ಜಾತಿಯವರಿಗೂ ಉಪದೇಶಿಸಿದರು.
* ಮುಕ್ತಿಗೆ ಭಕ್ತಿ ಮತ್ತು ಶರಣಾಗತಿ ಬಹಳ ಮುಖ್ಯವೆಂದು ತಿಳಿಸಿದರು.
* ಯಾವ ಆಸೆಗಳು ಇಲ್ಲದೆ ಭಗವಂತನಿಗೆ ಶರಣಾಗಬೇಕೆಂದು ತಿಳಿಸಿದರು.
* ಭಕ್ತಿ ಮಾರ್ಗದಿಂದ ಮೋಕ್ಷ ಪಡೆಯಬಹುದೆಂದು ಪ್ರತಿಪಾದಿಸಿದರು.
* ರಾಮಾನುಜರು ಮೇಲುಕೋಟೆ ಮತ್ತು ದಕ್ಷಿಣ ಭಾರತದಲ್ಲಿ ಅನೇಕ ಭವ್ಯ ದೇವಾಲಯಗಳ ನಿರ್ಮಾಣಕ್ಕೆ ಕಾರಣರಾದರು.

ಕರ್ನಾಟಕದ ಸಾಮಾಜಿಕ ಮತ್ತು ಧಾರ್ಮಿಕ ಆಂದೋಲನದಲ್ಲಿ ಬಸವೇಶ್ವರರು ಅತ್ಯಂತ ಕ್ರಾಂತಿಕಾರಿ ಪಾತ್ರವಹಿಸಿದರು. ಬಸವೇಶ್ವರರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯವರು. ಬಾಲ್ಯದಲ್ಲಿ ಉಪನಯನ ಸಂಸ್ಕಾರದ ಬದಲು ಲಿಂಗದೀಕ್ಷೆ ಪಡೆದರು. ಅವರ ವಿದ್ಯಾಭ್ಯಾಸ ಕೂಡಲಸಂಗಮದಲ್ಲಾಯಿತು.

ಬಸವೇಶ್ವರರ ತಂದೆ ತಾಯಿ ಮಾದರಸ ಮತ್ತು ಮಾದಲಾಂಬಿಕೆ. ಬಸವನ ಬಾಗೇವಾಡಿ ಅಗ್ರಹಾರದ ಶೈವ ಬ್ರಾಹ್ಮಣರಾಗಿದ್ದರು. ಬಸವತತ್ವವನ್ನು ಶಕ್ತಿವಿಶಿಷ್ಟಾದ್ವೈತ ಎಂದು ಕರೆಯುತ್ತಾರೆ.

ಕಲ್ಯಾಣದಿಂದ ಆಳ್ವಿಕೆ ನಡೆಸುತ್ತಿದ್ದ ಕಲಚೂರಿ ವಂಶದ ಬಿಜ್ಜಳನು ಬಸವೇಶ್ವರರನ್ನು ಭಂಡಾರದ ಅಧಿಕಾರಿಯಾಗಿ ನೇಮಿಸಿದನು. ಕಲ್ಯಾಣದಲ್ಲಿ ಬಸವಣ್ಣನವರು ಕ್ರಾಂತಿಕಾರಿ ಚಿಂತನೆಗಳನ್ನು ಪ್ರಚಾರ ಮಾಡಲಾರಂಭಿಸಿದರು. ಸಂಪ್ರದಾಯಸ್ಥರು ಈ ಚಿಂತನೆಗಳನ್ನು ವಿರೋಧಿಸಿದರು. ಇದರಿಂದ ನೊಂದುಕೊಂಡ ಅವರು ಕಲ್ಯಾಣವನ್ನು ತೊರೆದು ಕೂಡಲಸಂಗಮಕ್ಕೆ ಹೋದರು. ಅವರು ನಂತರ ಕೂಡಲಸಂಗಮದಲ್ಲಿ ಐಕ್ಯರಾದರೆಂದು ನಂಬಲಾಗಿದೆ.

ಬಸವೇಶ್ವರರ ಸುಧಾರಣೆಗಳು:
* ಬಸವಣ್ಣನವರು ಜಾತಿರಹಿತ ಮತ್ತು ವರ್ಗರಹಿತ ಸಮಾಜ ನಿರ್ಮಾಣಕ್ಕೆ ಪಣತೊಟ್ಟರು.

* ಕಾಯವೇ ಕೈಲಾಸ’ ಇದು ಅವರ ಮುಖ್ಯ ಬೋಧನೆಗಳಲ್ಲಿ ಒಂದಾಗಿದೆ.

* ಬಸವಣ್ಣನವರು ಜಾತೀಯತೆ, ಮೂರ್ತಿಪೂಜೆ, ಯಜ್ಞಯಾಗಾದಿಗಳನ್ನು ಖಂಡಿಸಿದರು.ದೇಹವೇ ದೇಗುಲ’ ಎಂದರು.

* ಹೆಣ್ಣು ತಾಯಿ, ಅವಳೇ ಸರ್ವಸ್ವ’ ಎಂಬ ಅವರ ಮಾತು ದನಿ ಕಳೆದುಕೊಂಡಿದ್ದ ಸ್ತ್ರೀಯರಿಗೆ ಆತ್ಮವಿಶ್ವಾಸ ನೀಡಿತು.

* ಅವರು ಬಸವಕಲ್ಯಾಣದಲ್ಲಿಅನುಭವ ಮಂಟಪ’ವನ್ನು ಸ್ಥಾಪಿಸಿದರು. ಇದು ವಚನಕಾರರ ವೇದಿಕೆಯಾಗಿತ್ತು.

* ಬಸವೇಶ್ವರರು ಸಾವಿರಕ್ಕೂ ಹೆಚ್ಚಿನ ವಚನಗಳನ್ನು ರಚಿಸಿದರು. ಇವು `ಕೂಡಲಸಂಗಮದೇವ’ ಎಂಬ ಅಂಕಿತದಿಂದ ಕೊನೆಗೊಳ್ಳುತ್ತವೆ.

* ವಚನ ಚಳುವಳಿಯ ಪ್ರಮುಖರಾದ ಶ್ರೀ ಬಸವೇಶ್ವರರು ಮಾನವ ಕುಲದ ಕಲ್ಯಾಣಕ್ಕೆ ನೀಡಿದ ಸಂದೇಶವು ಸಾರ್ವಕಾಲಿಕವಾದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ದಿನಾಂಕ 13-02-2024ರಂದು ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ.

ಕಾಯಕವೆಂದರೆ ಭಕ್ತಿಯಿಂದ ಮಾಡುವ ದುಡಿಮೆ. ಕಾಯಕದಿಂದ ಬಂದ ಫಲವನ್ನು ಸಮಾನವಾಗಿ ಸ್ವೀಕರಿಸುವುದೇ `ದಾಸೋಹ’ ಆಗಿರುತ್ತದೆ. ಬಸವಣ್ಣನವರ ಗುರಿ ಜನರಲ್ಲಿ ದುಡಿಮೆಯ ಸಂಸ್ಕೃತಿ ಬೆಳೆಸುವುದಾಗಿತ್ತು.

ವಚನ ಸಾಹಿತ್ಯ: `ವಚನ’ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದೆ. ವಚನಗಳು ಗದ್ಯದಂತೆ ಓದಲು ಪದ್ಯದಂತೆ ಹಾಡಲು ಬರುವ ಸಾಹಿತ್ಯ. ಜೇಡರ ದಾಸಿಮಯ್ಯ, ಅಲ್ಲಮಪ್ರಭು, ಚೆನ್ನಬಸವಣ್ಣ, ಅಕ್ಕಮಹಾದೇವಿ ಮೊದಲಾದವರು ವಚನಕಾರರಾಗಿದ್ದರು. ಅವರು ಎಲ್ಲಾ ಜಾತಿ ವರ್ಗಗಳಿಗೆ ಸೇರಿದವರಾಗಿದ್ದರು. ವಚನಗಳಲ್ಲಿ ಪ್ರಕಟವಾದ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ.

ಮಧ್ವರು ಉಡುಪಿಗೆ ಹತ್ತಿರವಿರುವ ಪಾಜಕ (ಬೆಳ್ಳೆ) ಗ್ರಾಮದಲ್ಲಿ ಜನಿಸಿದರು.

ಸನ್ಯಾಸ ಸ್ವೀಕರಿಸಿದ ಅನಂತರ ಮಧ್ವರು ತಮ್ಮ ಬೋಧನೆಗಳ ಪ್ರಸಾರಕ್ಕಾಗಿ ಭಾರತದ ಎಲ್ಲೆಡೆ ಎರಡು ಬಾರಿ ಸಂಚರಿಸಿದರು. ವಿಷ್ಣು ಅವರ ಆರಾಧ್ಯ ದೇವರು.

ತುಳು ಬ್ರಾಹ್ಮಣರಾದ ಮಧ್ಯಗೇಹ ಭಟ್ಟ ಮತ್ತು ವೇದವತಿ ಇವರ ತಂದೆ ತಾಯಿ. ಇವರು ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು.

ಮಧ್ವರ ಸುಧಾರಣೆಗಳು:
* ಮಧ್ವರು ದ್ವೈತ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸಿದರು.
* ಉಡುಪಿಯಲ್ಲಿ ಶ್ರೀಕೃಷ್ಣನ ಪೂಜೆಗೆಂದು ಅಷ್ಟಯತಿಗಳನ್ನು ನೇಮಿಸಿದರು.
* ಅವರು ಸರಳವಾದ ಭಕ್ತಿಮಾರ್ಗವನ್ನು ಉಪದೇಶ ಮಾಡಿದರು.

ಕೃಷ್ಣನ ಪೂಜೆಯನ್ನು ಅಷ್ಟಯತಿಗಳು ಎರಡು ತಿಂಗಳಿಗೊಮ್ಮೆ ಪರ್ಯಾಯದಿಂದ ಮಾಡಬೇಕೆಂದು ಮಧ್ವರು ವ್ಯವಸ್ಥೆಗೊಳಿಸಿದರು. ಪರ್ಯಾಯದ ಕಾಲಾವಧಿಯನ್ನು ವಾದಿರಾಜರು ಎರಡು ವರ್ಷಗಳಿಗೆ ವಿಸ್ತರಿಸಿದರು.

ಅಷ್ಟ ಮಠಗಳೊಂದಿಗೆ, ಉತ್ತರಾದಿ, ವ್ಯಾಸರಾಜ ಮತ್ತು ರಾಘವೇಂದ್ರ ಮಠಗಳು ಮಧ್ವತತ್ವದ ಅನುಯಾಯಿಗಳ ಮುಖ್ಯ ಧಾರ್ಮಿಕ ಕೇಂದ್ರಗಳಾಗಿವೆ.

ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ ಮಧ್ವಾಚಾರ್ಯರ ಉಪದೇಶಗಳಿಂದ ಜನತೆ ಪ್ರಭಾವಿತರಾದರು.

ನಮ್ಮ ದೇಶವು ಸಾಧುಸಂತರ ನಾಡು, ನೂರಾರು ಸಂತರು ಕಾಲಕಾಲಕ್ಕೆ ಈ ನೆಲದಲ್ಲಿ ಜನಿಸಿದರು. ಇವರು ಸಮಾಜದಲ್ಲಿ ಸಾಮರಸ್ಯ ತಂದರಲ್ಲದೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದರು. ಸಾಮಾಜಿಕ ಲೋಪದೋಷಗಳನ್ನು ಕೂಡ ಅವರು ತಪ್ಪದೆ ಎತ್ತಿತೋರಿಸಿದರು.

ಸಂತರು ಭಕ್ತಿಮಾರ್ಗವನ್ನು ಬೋಧಿಸಿದರು. ದೇವರ ದಯೆಯನ್ನು ಗಳಿಸಲು ಭಕ್ತಿಯೇ ದಾರಿಯೆಂದು ನಂಬಿದರು. ಈ ಸಂಪ್ರದಾಯವನ್ನು ಭಕ್ತಿಪಂಥ ಎನ್ನುವರು.

ಭಕ್ತಿಪಂಥದ ಸಾರ:
* ಭಕ್ತಿಪಂಥವು ಮೇಲುಕೀಳು ಎಂಬ ಭೇದಭಾವವನ್ನು ಖಂಡಿಸಿತು. ಸಮಾನತೆಯನ್ನು ಸಾರಿತು.
* ಭಕ್ತಿಸಂತರು ಕಂದಾಚಾರವನ್ನು ವಿರೋಧಿಸಿ ಅದನ್ನು ಖಂಡಿಸಿದರು.
* ಸೂಫಿಸಂತರು ಧರ್ಮವೆಂದರೆ ಪ್ರೇಮ ಹಾಗೂ ಮಾನವಸೇವೆ ಎಂದು ಸಾರಿದರು. ದೇವನೊಬ್ಬನೇ ಇರುವನಲ್ಲದೆ ಹಲವರಿಲ್ಲವೆಂದು ನುಡಿದರು.
* ಸಂತರು ಜನರ ಹೃದಯವನ್ನು ಬೆಸೆಯುವ ಕಾರ್ಯಮಾಡಿದರು.

ಶ್ರೀ ಚೈತನ್ಯರು: ಇವರು ಪಶ್ಚಿಮ ಬಂಗಾಳದಲ್ಲಿ ಜನಿಸಿದರು. ಚೈತನ್ಯರು ಜಾತಿ ಭೇದವನ್ನು ಅಲ್ಲಗಳೆದರು ಮುಕ್ತಿಗೆ ಭಕ್ತಿಯೊಂದೇ ದಾರಿಯೆಂದರು.

ಪ್ರೇಮ, ಸಹೋದರಭಾವ ಮತ್ತು ದಾನಶೀಲತೆ ಇವು ಚೈತನ್ಯರ ಬೋಧನೆಯ ತಿರುಳು. ಅವರು ಭಾರತದ ಎಲ್ಲೆಡೆ ತೀರ್ಥಯಾತ್ರೆಗೈದು ಪ್ರೇಮದ ಸಂದೇಶ ಸಾರಿದರು.

ಗುರು ನಾನಕ: ಗುರು ನಾನಕರು ಸಿಖ್ ಪಂಥದ ಸಂಸ್ಥಾಪಕರು. ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬಿನಲ್ಲಿ ಅವರು ಜನಿಸಿದರು. ಅವರು ಹಿಂದು-ಮುಸ್ಲಿಂ ಮತಗಳ ಸಮಾನ ಅಂಶಗಳನ್ನು ಒತ್ತಿ ಹೇಳಿದರು. `ಗುರು ಗ್ರಂಥ ಸಾಹಿಬ್’ ಎಂಬ ಸಿಖ್ಖರ ಪವಿತ್ರ ಗ್ರಂಥದಲ್ಲಿ ಅವರ ಜಪಜಿಗಳು ಎಂದು ಕರೆಯಲಾಗುವ ಹಾಡುಗಳಿವೆ. ದೇವರ ನಾಮವನ್ನು ಜಪಿಸುವುದು ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ಸಿಖ್ ಪಂಥ ಮಹತ್ವ ನೀಡಿದೆ. ಸ್ತ್ರೀ-ಪುರುಷರ ಸಮಾನತೆಯನ್ನು ಅದು ಒತ್ತಿ ಹೇಳಿದೆ. “ರಾಜಮಹಾರಾಜರಿಗೂ ಪ್ರವಾದಿಗಳಿಗೂ ಜನ್ಮನೀಡುವ ಸ್ತ್ರೀಯರು ಪುರುಷರಿಗಿಂತ ಹೇಗೆ ಕೀಳೆನಿಸಬಲ್ಲರು?” ಎಂಬುದಾಗಿ ನಾನಕರು ಪ್ರಶ್ನಿಸುತ್ತಾರೆ. “ನನಗೆ ಒಂದು ಲಕ್ಷ ನಾಲಿಗೆಗಳಿದ್ದರೂ ಆ ಎಲ್ಲ ನಾಲಿಗೆಗಳಿಂದಲೂ ಒಬ್ಬನೇ ದೇವನನ್ನು ಸ್ಮರಿಸುತ್ತೇನೆ,” ಎಂಬುದಾಗಿ ನಾನಕ್ ಹೇಳಿದರು. ತಮ್ಮ ದೇಶ ಸಂಚಾರದಲ್ಲಿ ನಾನಕರು ಕರ್ನಾಟಕಕ್ಕೂ ಬಂದಿದ್ದರು. ಅವರು ಬೀದರಿನಲ್ಲಿ ತಂಗಿದ್ದ ಸ್ಥಳವನ್ನು ನಾನಕ್ ಝರಾ ಎಂದು ಕರೆಯುತ್ತಾರೆ.

ಮೀರಾಬಾಯಿ: ‘ಕಲಿಯುಗದ ರಾಧಾ’ ಎಂದು ಗೌರವಿಸಲಾಗುವ ಸಂತ ಮೀರಾಬಾಯಿ ಭಾರತದ ಕೀರ್ತನಗಾರ್ತಿಯೂ ಹೌದು. ಓರ್ವ ಇವಳು ಮಹಾನ್ ರಾಜಸ್ಥಾನದಲ್ಲಿ ರಜಪೂತ ರಾಜಮನೆತದಲ್ಲಿ ಜನಿಸಿದಳು. ತಾತ ಕೊಟ್ಟಿದ್ದ ಕೃಷ್ಣನ ಮೂರ್ತಿಯೊಂದಿಗೆ ದಿನ ಕಳೆಯುವುದೆಂದರೆ ಇವಳಿಗೆ ಅತ್ಯಂತ ಇಷ್ಟ. ಮಾಡುತ್ತಿದ್ದ ಕೃಷ್ಣನೇ ಕೃಷ್ಣನ ಇವಳ ಆರಾಧ್ಯದೈವ. ಇವಳು ಆರಾಧನೆಯನ್ನು ಅತ್ತೆ ಕಟುವಾಗಿ ವಿರೋಧಿಸಿದಳು. ಇದನ್ನು ತಡೆಯಲಾಗದೆ ಮೀರಾ ಅರಮನೆ ಬಿಟ್ಟು ಶ್ರೀಕೃಷ್ಣನ ಕ್ಷೇತ್ರವಾದ ಬೃಂದಾವನಕ್ಕೆ ಹೋದಳು. ಅವಳು ರಚಿಸಿದ ಕೀರ್ತನೆಗಳಲ್ಲಿ ಭಕ್ತಿ, ಪ್ರೇಮ ತುಂಬಿತುಳುಕಿದೆ. ‘ಗಿರಿಧರ ಗೋಪಾಲ’ ಅವಳು ಪೂಜಿಸುತ್ತಿದ್ದ ದೇವರ ಹೆಸರು. ತನ್ನ ನೂರಾರು ಭಜನೆಗಳಿಂದ ಮೀರಾ ಜನಮನದಲ್ಲಿ ಶಾಶ್ವತ ಸ್ಥಾನಪಡೆದಳು.

ಇತರ ಪ್ರಮುಖ ಭಕ್ತಿಸಂತರು:
* ಕಬೀರ್ ದಾಸ್: ಕಬೀರರು ಜಾತಿವ್ಯವಸ್ಥೆಯ ಅನ್ಯಾಯ, ಮೂರ್ತಿಪೂಜೆ, ತೀರ್ಥಯಾತ್ರೆ, ಉಪವಾಸ, ಹರಕೆ ಮತ್ತು ಮತೀಯ ಆಚರಣೆಗಳನ್ನು ಖಂಡಿಸಿದರು. ತಾನು ‘ಅಲ್ಲಾ ಮತ್ತು ರಾಮನ ಶಿಶು’ ಎಂಬುದಾಗಿ ಹೇಳಿದರು.
* ತುಲಸೀದಾಸ್: ತುಲಸೀದಾಸರ ಪ್ರಸಿದ್ಧ ಕಾವ್ಯ ‘ರಾಮಚರಿತಮಾನಸ’.
* ಸೂರ್ ದಾಸ್: ಇವರು ಓರ್ವ ಸಂತ ಕವಿ. ಹುಟ್ಟು ಕುರುಡರು. ‘ಸೂರ್ ಸಾಗರ’ ಇವರ ಖ್ಯಾತ ಕೃತಿ.

ಸೂಫಿ ಪಂಥ: ಸೂಫಿ ಪಂಥವು ಅರೇಬಿಯಾದಲ್ಲಿ ಉದಯಿಸಿ ಭಾರತವನ್ನು ಪ್ರವೇಶಿಸಿತು. ಬಡತನದ ಪ್ರತೀಕವಾಗಿ ಸೂಫಿ ಸಂತರು ಒರಟು ಉಣ್ಣೆಯ ಬಟ್ಟೆಗಳನ್ನು (ಸೂಫ್) ತೊಡುತ್ತಿದ್ದರು. ಆದ್ದರಿಂದ ಇವರನ್ನು ಸೂಫಿಗಳೆಂದು ಕರೆಯಲಾಯಿತು. ಕಾಲಕ್ರಮೇಣ ಯೋಗ, ವೇದಾಂತ ಮತ್ತು ಬೌದ್ಧಮತದ ಚಿಂತನೆಗಳಿಂದ ಸೂಫಿಗಳು ಪ್ರಭಾವಿತರಾದರು. ಅನೇಕ ಸೂಫಿ ಸಂತರು (ಉದಾಹರಣೆಗೆ ಬಾಬಾ ಬುಡನ್) ದತ್ತಾತ್ರೇಯನ ಆರಾಧಕರು. ಬುಡನ್ ಅಲ್‍ದೀನ್‍ರಂಥ ವಿಜಯಪುರದ ಸೂಫಿಸಂತ ಕೃಷ್ಣನನ್ನು ತಮ್ಮ ಹಾಡುಗಳಲ್ಲಿ ಸ್ತುತಿಸಿದ್ದಾರೆ.

ಧರ್ಮವೆಂದರೆ ಪ್ರೇಮ, ಮಾನವ ಸೇವೆ ಎಂಬುದಾಗಿ ಸೂಫಿಗಳು ಸಾರಿದರು. ಕೀರ್ತನ, ನರ್ತನ ಇವರ ಭಕ್ತಿಯ ವಿಧಾನವಾಗಿತ್ತು. ಇವೆರಡನ್ನೂ ಸಂಪ್ರದಾಯವಾದಿಗಳು ಬಹಿಷ್ಕರಿಸಿದರು. ಸೂಫಿಗಳಲ್ಲಿ ಮಹಿಳೆಯರೂ ಇದ್ದರು. ಸೂಫಿ ಅನುಯಾಯಿ ರಬಿಹಾ ಎಂಬ ಮಹಿಳೆಯನ್ನು ಇಂದಿಗೂ ಪೂಜ್ಯ ಭಾವನೆಯಿಂದ ಕಾಣುತ್ತಾರೆ.

ನಿಜಾಮುದ್ದೀನ್ ಔಲಿಯ: ಭಾರತದ ಪ್ರಮುಖ ಸೂಫಿ ಸಂತ. ಇವರು ದೆಹಲಿಯಲ್ಲಿ ನೆಲೆಸಿ ಬಡತನದ ಜೀವನ ನಡೆಸಿದರು. ಹುಲ್ಲು ಮಾಡಿನ ಮಸೀದಿ ಇವರ ಚಟುವಟಿಕೆಯ ಕೇಂದ್ರವಾಗಿತ್ತು. ದೆಹಲಿಯ ಸುಲ್ತಾನ ಗ್ರಾಮವೊಂದನ್ನು ದಾನವಾಗಿ ಇವರು ನೀಡಿದ್ದ ತಿರಸ್ಕರಿಸಿದರು. ರಾಜಕಾರಣದಿಂದ ದೂರ ಉಳಿದರು. ತಮ್ಮನ್ನು ಕಾಣಲು ಬರುತ್ತಿದ್ದ ಭಕ್ತರಿಗೆ ಸದ್ಗುಣ, ಕರುಣೆಯ ಸಂದೇಶ ನೀಡುತ್ತಿದ್ದರು.

ಬಂದೇನವಾಜ್: ಕರ್ನಾಟಕದ ಖ್ಯಾತ ಸೂಫಿ ಸಂತರು. ಇವರ ಆಕರ್ಷಕ ದರ್ಗಾ ಕಲಬುರಗಿಯಲ್ಲಿದೆ. ಬಂದೇನವಾಜರನ್ನು ಹಿಂದುಗಳು ಕೇಶವ ಚೈತನ್ಯ ಎಂದು ಭಾವಿಸಿ ಆರಾಧಿಸುತ್ತಿದ್ದರು.

ಚಿಸ್ತಿ: ಸೂಫಿ ಪಂಥದಲ್ಲಿ ಚಿಸ್ತಿ ಪಂಗಡ ಪ್ರಮುಖವಾದುದು. ಇದರ ಸ್ಥಾಪಕ ಮೊಯುನುದ್ದೀನ್ ಚಿಸ್ತಿ ಅಜ್ಮೀರಕ್ಕೆ ಬಂದಿದ್ದು ಅಲ್ಲಿ ತಮ್ಮ ಕೇಂದ್ರವನ್ನು ಸ್ಥಾಪಿಸಿದರು. ದೈವಭಕ್ತಿ, ಗುರುಸೇವೆ, ಸನ್ಮಾರ್ಗದಲ್ಲಿ ನಡೆಯುವುದು ಚಿಸ್ತಿ ಅನುಯಾಯಿಗಳ ಲಕ್ಷಣ. ಚಿಸ್ತಿಗಳಿಗೆ ಹಿಂದು ಮುಸ್ಲಿಂ ಸಾಮರಸ್ಯದ ಬಗ್ಗೆ ಕಾಳಜಿಯಿತ್ತು. ಇವರು ಜನಬಳಕೆಯ ಸ್ಥಳೀಯ ಭಾಷೆಯಲ್ಲಿ ಕೃತಿ ಬರೆದರು. ಆಗ್ರಾದ ಫತೇಪುರ್ ಎಂಬಲ್ಲಿನ ಸಲೀಮ್ ಚಿಸ್ತಿ ಪ್ರಸಿದ್ಧರು.

* ಭಕ್ತಿಸಂತರು ಹಿಂದು-ಮುಸ್ಲಿಂ ಸಾಮರಸ್ಯ ಸಾಧಿಸುವಲ್ಲಿ ಕಾರಣರಾದರು.
* ಭಕ್ತಿಸಂತರು ಜನರಾಡುವ ಸ್ಥಳೀಯ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದರು. ಇದರಿಂದಾಗಿ ಭಾರತೀಯ ಭಾಷೆಗಳು ಶ್ರೀಮಂತಗೊಂಡವು.

ಶಂಕರಾಚಾರ್ಯರು – ಸಾ.ಶ. 8-9ನೇ ಶತಮಾನ

ರಾಮಾನುಜಾಚಾರ್ಯರು – ಸಾ.ಶ. 8-9ನೇ ಶತಮಾನ

ಬಸವೇಶ್ವರರು – ಸಾ.ಶ. 12ನೇ ಶತಮಾನ

ನಿಜಾಮುದ್ದೀನ್ ಔಲಿಯ – ಸಾ.ಶ. 1238-1325

ಮಧ್ವಾಚಾರ್ಯರು – ಸಾ.ಶ. 13-14ನೇ ಶತಮಾನ

ಮೊಯುನುದ್ದೀನ್ ಚಿಸ್ತಿ – ಸಾ.ಶ. 13ನೇ ಶತಮಾನ

ಗುರು ನಾನಕ – ಸಾ.ಶ. 1469-1538

ಶ್ರೀ ಚೈತನ್ಯ – ಸಾ.ಶ. 1486-1534

ಮೀರಾಬಾಯಿ – ಸಾ.ಶ. 1498-1546

ಬಂದೇನವಾಜ್ – ಸಾ.ಶ. 15ನೇ ಶತಮಾನ

ಸಲೀಮ್ ಚಿಸ್ತಿ – ಸಾ.ಶ. 16ನೇ ಶತಮಾನ

ದೀಕ್ಷೆ – ಮಂತ್ರೋಪದೇಶ.

ಭಂಡಾರ – ಖಜಾನೆ.

ಕಂದಾಚಾರ – ಕಟ್ಟುಪಾಡು. ಸಂಪ್ರದಾಯ-ಹಿಂದಿನಿಂದ ಬಂದ ಆಚಾರ, ವಿಚಾರಗಳು.

ಝರಾ – ಸಿಹಿನೀರಿನ ಬುಗ್ಗೆ.

* ಶ್ರೀ ಚೈತನ್ಯರ ಜನ್ಮಸ್ಥಳ – ಪಶ್ಚಿಮ ಬಂಗಾಲದ ನವದ್ವೀಪ (ನದಿಯಾ).
* ಗುರು ನಾನಕರ ಜನ್ಮಸ್ಥಳ – ಪಾಕಿಸ್ತಾನದ ತಲವಂಡಿ.
* ಮೀರಾಬಾಯಿ ಜೋಧಪುರದ ರಾಥೋಡ್ ಮನೆತನದ ರತನ್‍ಸಿಂಗನ ಒಬ್ಬಳೇ ಮಗಳು.

ಭಾರತದ ವೈಚಾರಿಕತೆ ಹಾಗು ಭಕ್ತಿಪಂಥ | BHARATADA VAICHARIKATE HAAGU BHAKTI PANTHA | CH 14 | 6TH | SOCIAL |
6th,ಭಾರತೀಯ ವೈಚಾರಿಕತೆ ಹಾಗೂ ಭಕ್ತಿ ಪಂಥ ಪ್ರಶ್ನೋತ್ತರಗಳು#6th bharateeya vaicharikate hagu bhaktipanta