ಭಾರತಕ್ಕೆ ಐರೋಪ್ಯರ ಆಗಮನ – 7ನೇ ತರಗತಿ ಸಮಾಜ ವಿಜ್ಞಾನ

ಪಾಠದ ಪರಿಚಯ

ಯುರೋಪಿಯನ್ನರು ಭಾರತಕ್ಕೆ ಏಕೆ ಬಂದರು? ಅವರ ಆರಂಭಿಕ ಚಟುವಟಿಕೆಗಳೇನು? ಅವರಲ್ಲಿ ಇಂಗ್ಲಿಷರು ಮಾತ್ರವೇ ಇಲ್ಲಿ ನೆಲೆವೂರಲು ಹೇಗೆ ಸಾಧ್ಯವಾಯಿತು? ಅದರಿಂದಾದ ಪರಿಣಾಮಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಪಾಠದಲ್ಲಿ ನಿರೂಪಿಸಲಾಗಿದೆ.

ಕಪ್ಪು ಹಲಗೆಯ ಮೇಲೆ ಶಿಕ್ಷಕರು ದಪ್ಪಕ್ಷರದಲ್ಲಿ “ಭಾರತಕ್ಕೆ ಯುರೋಪಿಯನ್ನರ ಆಗಮನ” ಎಂಬ ತಲೆಬರಹ ಬರೆಯುವುದನ್ನು ಕಂಡ ತರಗತಿಯ ರಾಮು ಪ್ರಶ್ನೆ ಕೇಳಿದ.

ರಾಮು : ಯುರೋಪಿಯನ್ನರು ಅಂದರೆ ಯಾರು? ಅವರು ಭಾರತಕ್ಕೆ ಬರಲು ಕಾರಣವೇನು?

ಗುರುಗಳು : ಯುರೋಪ್ ಖಂಡದ ವಿವಿಧ ದೇಶಗಳ ಜನರನ್ನು ಯುರೋಪಿಯನ್ನರೆಂದು ಕರೆಯುವರು. ಉದಾ: ಇಂಗ್ಲಿಷರು, ಫ್ರೆಂಚರು, ಪೋರ್ಚುಗೀಸರು, ಡಚ್ಚರು, ಇಟಾಲಿಯನರು, ಜರ್ಮನರು, ಇತ್ಯಾದಿ. ಇವರಲ್ಲಿ ಕೆಲವರು ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದರು.

ರಹೀಮ್ : ಭಾರತಕ್ಕೆ ಬಂದಿದ್ದ ಯುರೋಪಿಯನ್ನರಲ್ಲಿ ಮೊದಲಿಗರು ಯಾರು?

ಗುರುಗಳು : ಭಾರತಕ್ಕೆ ಬಂದ ಯುರೋಪಿಯನ್ನರಲ್ಲಿ ಪೋರ್ಚುಗೀಸರು ಮೊದಲಿಗರು. ಕಲ್ಲಿಕೋಟೆಯ ದೊರೆ ಜಾಮೊರಿನ್ ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮನಿಗೆ ವ್ಯಾಪಾರಕ್ಕೆ ಅನುಮತಿ ನೀಡಿದನು. ಅನಂತರ ಪೋರ್ಚುಗೀಸರು ಅಲ್ಬುಕರ್ಕ್ ಎಂಬವನನ್ನು ಭಾರತಕ್ಕೆ ಗವರ್ನರ್ ಆಗಿ ಕಳುಹಿಸಿದರು (1509). ಭಾರತದಲ್ಲಿ ಪೋರ್ಚುಗೀಸರ ಪ್ರಾಬಲ್ಯ ಸ್ಥಾಪನೆ ಮಾಡುವುದು ಇವನ ಗುರಿಯಾಗಿತ್ತು. ಈತನು ಸಂಪತ್ಭರಿತ ಗೋವಾ ಬಂದರನ್ನು ವಿಜಯಪುರ ಸುಲ್ತಾನನಿಂದ ಸ್ವಾಧೀನ ಪಡಿಸಿಕೊಂಡನು. ಇಲ್ಲಿನ ವಿವಿಧ ಧರ್ಮೀಯರನ್ನು ಪೀಡಿಸುತ್ತಿದ್ದುದು ಈತನ ನೀತಿಯ ದೋಷವಾಗಿತ್ತು. ಅಲ್ಬುಕರ್ಕನ ಬಳಿಕ ಬಂದ ಗವರ್ನರ್‍ಗಳು ದಿಯು, ದಮನ್, ಸಾಲ್ಸೆಟ್, ಬೆಸ್ಸೀನ್, ಚೌಲ್, ಮುಂಬೈ, ಸಾನ್‍ಥೋಮ್ ಮತ್ತು ಬಂಗಾಳದ ಹೂಗ್ಲಿ ಮುಂತಾದ ಕಡೆ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು.

ಸಂಗೀತಾ : ಭಾರತದಲ್ಲಿ ಪೋರ್ಚುಗೀಸರ ಅವನತಿಗೆ ಕಾರಣಗಳೇನು?

ಗುರುಗಳು : ಬಲಿಷ್ಠ ನೌಕಾಪಡೆಯನ್ನು ಹೊಂದಿದ್ದ ಡಚ್ಚರು ಮತ್ತು ಇಂಗ್ಲಿಷರು ಪೋರ್ಚುಗೀಸರ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದರು. ಪೋರ್ಚುಗೀಸ್ ಸರ್ಕಾರದ ನೌಕರರು ಭ್ರಷ್ಟರಾಗಿ, ಸ್ವಾಮಿನಿಷ್ಠೆ ಕಳೆದುಕೊಂಡರು. ಕ್ರಮೇಣ ಅವರ ಸರ್ಕಾರ ಹೀನ ಸ್ಥಿತಿಗಿಳಿಯಿತು. ಮತಾಂಧತೆಯೇ ಪೋರ್ಚುಗೀಸರ ಅವನತಿಗೆ ಮುಖ್ಯ ಕಾರಣವಾಗಿತ್ತು. ಅವರು ಇಲ್ಲಿಯ ವಿವಿಧ ಧರ್ಮೀಯರನ್ನು ಬಲವಂತದಿಂದ ಮತಾಂತರಿಸಿದರು. ಇದಲ್ಲದೆ ವಿಜಯನಗರ ಸಾಮ್ರಾಜ್ಯದ ಅವನತಿಯಿಂದಾಗಿ ಅವರ ವ್ಯಾಪಾರ ಕುಂಠಿತವಾಯಿತು. ಇವು ಭಾರತದಲ್ಲಿ ಪೋರ್ಚುಗೀಸರ ಅವನತಿಗೆ ಕಾರಣವಾದ ಅಂಶಗಳು.

ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನ್ನರು ಹಾಗೂ ಭಾರತ ತೊರೆದ ಕಟ್ಟಕಡೆಯ ಯುರೋಪಿಯನ್ನರು ಪೋರ್ಚುಗೀಸರೇ ಆಗಿದ್ದಾರೆ. ಕೊನೆಯವರೆಗೆ ಗೋವಾ, ದಿಯು ಮತ್ತು ದಮನ್ ಮಾತ್ರವೇ ಪೋರ್ಚುಗೀಸರ ವಶದಲ್ಲಿ ಉಳಿದವು. ಬ್ರಿಟಿಷ್ ಆಳ್ವಿಕೆ 1947ರಲ್ಲಿ ಕೊನೆಗೊಂಡರೂ ಪೋರ್ಚುಗೀಸರು ನಮ್ಮ ನೆಲದಿಂದ ಕದಲಲಿಲ್ಲ. ಗೋವೆಯ ವಿಮೋಚನೆಗಾಗಿ ಅಲ್ಲಿಯ ಭಾರತೀಯರು ಅಹಿಂಸಾತ್ಮಕ ಚಳವಳಿ ಹೂಡಿದರು. ಆದರೆ ಚಳವಳಿಗಾರರನ್ನು ಅಮಾನುಷವಾಗಿ ಹಿಂಸೆಗೊಳಪಡಿಸಲಾಯಿತು. ಕೊನೆಗೆ 1961ರಲ್ಲಿ ಭಾರತೀಯ ಸೇನಾಪಡೆಯು ಪೋರ್ಚುಗೀಸರನ್ನು ಸೋಲಿಸುವುದರೊಂದಿಗೆ ಗೋವಾ ವಿಮೋಚನೆಗೊಂಡಿತು.

ಆಶಾ : ಡಚ್ಚರು ಭಾರತದ ಯಾವ ಯಾವ ಪ್ರದೇಶಗಳಲ್ಲಿ ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆದಿದ್ದರು?

ಗುರುಗಳು : ಹಾಲೆಂಡ್ (ನೆದರ್‍ಲ್ಯಾಂಡ್) ದೇಶದವರಾದ ಡಚ್ಚರ ವ್ಯಾಪಾರ ಕೇಂದ್ರಗಳು ಭಾರತದ ಆಗ್ರಾ, ಮಚಲೀಪಟ್ಟಣ, ಸೂರತ್, ಕಾರೈಕಲ್, ನಾಗಪಟ್ಟಣಂ, ಕೊಚ್ಚಿ ಮೊದಲಾದ ಕಡೆಗಳಲ್ಲಿದ್ದವು. ಡಚ್ಚರು ಇಂಗ್ಲಿಷರೊಡನೆ ಸಂಘರ್ಷಕ್ಕಿಳಿದರು. ಆದರೆ ಇಂಗ್ಲಿಷರು ಅವರನ್ನು ಸೋಲಿಸಿದರು. ಇದರೊಂದಿಗೆ ಭಾರತದಲ್ಲಿ ಡಚ್ಚರ ವ್ಯಾಪಾರಿ ಚಟುವಟಿಕೆಗಳು ಅಂತ್ಯಗೊಂಡವು.

ಮಮ್ತಾಜ್ : ಬ್ರಿಟಿಷರು ಭಾರತದ ಯಾವ ಯಾವ ಪ್ರದೇಶಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ತೆರೆದಿದ್ದರು?

ಗುರುಗಳು : ಇಂಗ್ಲೆಂಡಿನ ವರ್ತಕರು ಪೂರ್ವ ದೇಶಗಳೊಡನೆ ವ್ಯಾಪಾರ ಸಂಪರ್ಕ ಹೊಂದಲು ಬಯಸಿ “ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ” ಸ್ಥಾಪಿಸಿದರು. ಎಲಿಜಬೆತ್ ರಾಣಿಯ ಅನುಮತಿ ಪಡೆದು (1600ರಲ್ಲಿ) ಭಾರತದೊಡನೆ ವ್ಯಾಪಾರ ಸಂಪರ್ಕ ಬೆಳೆಸಿದರು. ಪ್ರಾರಂಭದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಹಡಗುಗಳು ಸೂರತ್ ಬಂದರಿನಲ್ಲಿ ತಂಗುತ್ತಿದ್ದವು. ಮೊಗಲ್ ಚಕ್ರವರ್ತಿ ಜಹಾಂಗೀರನಿಂದ ಅವರು ಅನುಮತಿ ಪಡೆದು ಸೂರತ್, ಆಗ್ರಾ, ಅಹ್ಮದಾಬಾದ್ ಮತ್ತು ಬ್ರೋಚ್‍ಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ತೆರೆದರು. ಮುಂದೆ ಮದ್ರಾಸ್, ಕಲ್ಕತ್ತ ಮತ್ತು ಮುಂಬೈಗಳಲ್ಲಿಯೂ ತಮ್ಮ ವ್ಯಾಪಾರದ ಕೋಠಿ (ಮಳಿಗೆ)ಗಳನ್ನು ಸ್ಥಾಪಿಸಿದರು.

ಎಲಿಜಬೆತ್ ರಾಣಿ

ಕಾಲಸರಿದಂತೆ ಕಂಪನಿಯ ಲಾಭವೂ ಗಣನೀಯವಾಗಿ ಹೆಚ್ಚುತ್ತಾ ಹೋಯಿತು. ದುರ್ಬಲನಾಗಿದ್ದ ಮೊಗಲ್ ಚಕ್ರವರ್ತಿಯಿಂದ ಬಂಗಾಳ ಪ್ರಾಂತ್ಯ (ಈಗಿನ ಬಂಗಾಳ, ಬಿಹಾರ ಮತ್ತು ಒರಿಸ್ಸ) ಮತ್ತು ಸೂರತ್ನಲ್ಲಿ ಸುಂಕರಹಿತ ವ್ಯಾಪಾರ ಮಾಡುವ ಪರವಾನಗಿಯಾದ `ದಸ್ತಕ್’ಗಳನ್ನು ಪಡೆದರು. `ದಸ್ತಕ್’ಗಳ ಸಹಾಯದಿಂದ ಇಂಗ್ಲಿಷರು ದೇಶೀಯ ವ್ಯಾಪಾರಿಗಳಿಗಿಂತ ಶಕ್ತಿವಂತರಾದರು. ಸುಂಕವಿಲ್ಲದೆ ಮುಕ್ತವ್ಯಾಪಾರ ನಡೆಸಲು ಬ್ರಿಟಿಷ್ ವರ್ತಕರಿಗೆ ನೀಡಲಾದ ವಿಶೇಷ ಪಾಸುಗಳೇ `ದಸ್ತಕ್’ಗಳು.

ಬ್ರಿಟಿಷರು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ತಮ್ಮ ವಸತಿ ಪ್ರದೇಶಗಳ ಸುತ್ತಲು ಕೋಟೆಗಳನ್ನು ಕಟ್ಟಿದರು. ಕೋಟೆಗಳ ರಕ್ಷಣೆಗಾಗಿ ಸೈನಿಕರನ್ನೂ ಮದ್ದುಗುಂಡುಗಳನ್ನೂ ಇಟ್ಟುಕೊಳ್ಳಲು ಆರಂಭೀಸಿದರು. ಬಹುಬೇಗ ಇಂಗ್ಲೀಷರ ಸೇನಾಬಲವು ಭಾರತೀಯ ರಾಜರುಗಳ ಸೇನಾಬಲವನ್ನು ಮೀರಿತು.

ಮೇರಿ : ಭಾರತಕ್ಕೆ ವ್ಯಾಪಾರಕ್ಕಾಗಿ ಕೊನೆಯಲ್ಲಿ ಬಂದವರಾರು? ಅವರು ಭಾರತದ ಯಾವ ಪ್ರದೇಶಗಳಲ್ಲಿ ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆದಿದ್ದರು?

ಗುರುಗಳು : ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಯುರೋಪಿಯನ್ನರಲ್ಲಿ ಫ್ರೆಂಚರೇ ಕೊನೆಯವರು. ಅವರು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯನ್ನು (1664ರಲ್ಲಿ) ಸ್ಥಾಪಿಸಿ ಸೂರತ್, ಪಾಂಡಿಚೇರಿ, ಮಚಲೀಪಟ್ಟಣ, ಕಲ್ಲಿಕೋಟೆ, ಮಾಹೆ, ಕಾರೈಕಲ್ ಮತ್ತು ಚಂದ್ರನಗರಗಳಲ್ಲಿ ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆದರು.

ಅಲ್ಪಕಾಲದಲ್ಲೇ ಇಂಗ್ಲೀಷ್ ಮತ್ತು ಫ್ರೆಂಚರ ನಡುವೆ ರಾಜಕೀಯ ಸಂಘರ್ಷ ಏರ್ಪಟ್ಟಿತು. ಇದರಲ್ಲಿ ಯಾರ ಕೈಮೇಲಾಯಿತು? ಇದು ಭಾರತದ ಇತಿಹಾಸದ ಮೇಲೆ ಯಾವ ಪರಿಣಾಮ ಬೀರಿತು? ಇದನ್ನು ಮುಂದಿನ ಪಾಠದಲ್ಲಿ ಕಲಿಯೋಣ.

ಸಂವೇದ ವಿಡಿಯೋ ಪಾಠಗಳು

Samveda – 7th – Social Science – Bharatakke Europeannara Aagamana

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

************