ಪ್ರಜಾಪ್ರಭುತ್ವ – ಅಧ್ಯಾಯ 17
ಪಾಠದ ಪರಿಚಯ
ಹಿಂದೆ ನಮ್ಮ ದೇಶವನ್ನು ರಾಜರು ಆಳುತ್ತಿದ್ದರು. ಕಾಲಕ್ರಮೇಣ ರಾಜಪ್ರಭುತ್ವ ಕಣ್ಮರೆಯಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಚರಣೆಗೆ ತರಲಾಯಿತು. ಈ ಬದಲಾವಣೆಗೆ ಕಾರಣಗಳನ್ನು ತಿಳಿಯುತ್ತಾ ಪ್ರಜಾಪ್ರಭುತ್ವದ ಮಹತ್ವ, ಚುನಾವಣೆಗಳ ಪಾತ್ರ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತಾದ ಒಂದು ಪಕ್ಷಿನೋಟ ಈ ಅಧ್ಯಾಯದಲ್ಲಿದೆ.
ಪಾಠಪ್ರವೇಶ

- ಎಡಬದಿಯ ಚಿತ್ರವನ್ನು ನೋಡಿ, ಸಿಂಹಾಸನದಲ್ಲಿ ಕುಳಿತಿರುವವರು ಯಾರು?
- ಅವನ ಅಕ್ಕಪಕ್ಕದಲ್ಲಿ ಕುಳಿತಿರುವವರು ಯಾರು?
- ಬಲಗಡೆಯ ಚಿತ್ರದಲ್ಲಿರುವ ವ್ಯಕ್ತಿ ಏನು ಮಾಡುತ್ತಿದ್ದಾನೆ?
- ನೀವು ಎಂದಾದರೂ ಮತದಾನ ಮಾಡಿದ್ದೀರಾ?


ಒಂದಾನೊಂದು ಕಾಲದಲ್ಲಿ ರತ್ನಪುರವೆಂಬ ಪಟ್ಟಣವನ್ನು ಚಂದ್ರಶಯನನೆಂಬ ರಾಜನು ಆಳುತ್ತಿದ್ದನು. ಅವನ ರಾಣಿಯು ಗಂಡು ಮಗುವಿಗೆ ಜನ್ಮವಿತ್ತು ಮಡಿದಳು. ಸ್ವಲ್ಪ ಕಾಲದ ಬಳಿಕ ರಾಜನು ಆಸ್ಥಾನದ ನರ್ತಕಿಯನ್ನು ಮದುವೆಯಾದನು. ಮುಂದೆ ಅವಳಿಗೂ ಒಂದು ಗಂಡು ಮಗು ಜನಿಸಿತು. ಅಣ್ಣತಮ್ಮಂದಿರು ಗುರುಕುಲದಲ್ಲಿ ವಿದ್ಯೆ ಕಲಿತು ಜಾಣರಾದರು. ತನ್ನ ಇಳಿವಯಸ್ಸಿನಲ್ಲಿ ರಾಜನು ಹಿರಿಯ ಮಗನಿಗೆ ಯುವರಾಜ ಪಟ್ಟವನ್ನು ಕಟ್ಟಿದನು. ಇದರಿಂದ ತನ್ನ ಮಗನೇ ಮುಂದೆ ಅರಸನಾಗಬೇಕೆಂಬ ರಾಜನರ್ತಕಿಯ ಬಯಕೆ ಸುಳ್ಳಾಯಿತು. ಅವಳು ಮಗನ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳನ್ನು ಬಿತ್ತಿದಳು. ಅಧಿಕಾರಕ್ಕಾಗಿ ಅಣ್ಣತಮ್ಮಂದಿರ ನಡುವೆ ಜಗಳ ಆರಂಭವಾಯಿತು. ಚಿಂತೆಯಿಂದ ರಾಜ ಅಸುನೀಗಿದನು.
ಅಣ್ಣತಮ್ಮಂದಿರ ಒಳಜಗಳದಿಂದ ರಾಜ್ಯದ ಆಡಳಿತ ಹದಗೆಟ್ಟಿತು. ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಯಿತು. ಕೊಲೆ, ಸುಲಿಗೆಗಳು ಹೆಚ್ಚಾದವು. ಪ್ರಜೆಗಳು ಇದರಿಂದ ಬೇಸರಗೊಂಡರು. ಅವರೆಲ್ಲರು ಒಂದೆಡೆ ಸೇರಿ ತಮ್ಮ ರಾಜ್ಯದ ಆಡಳಿತವನ್ನು ತಾವೇ ನಡೆಸುವ ತೀರ್ಮಾನ ಕೈಗೊಂಡರು. ಇದಕ್ಕಾಗಿ ಅಗತ್ಯವಿರುವ ಕಾನೂನುಗಳನ್ನು ರೂಪಿಸಿದರು. ಅವುಗಳನ್ನು ಪಾಲಿಸಲು ಎಲ್ಲರೂ ಬದ್ಧರಾದರು. ಹೀಗೆ ರತ್ನಪುರದಲ್ಲಿ ರಾಜನ ಆಳ್ವಿಕೆ (ರಾಜಪ್ರಭುತ್ವ) ಕೊನೆಗೊಂಡಿತು. ಜನರ ಆಳ್ವಿಕೆ (ಪ್ರಜಾಪ್ರಭುತ್ವ) ಆರಂಭವಾಯಿತು.
- ರಾಜನು ಯಾರಿಗೆ ಪಟ್ಟ ಕಟ್ಟಿದನು?
- ಅರಸನೊಬ್ಬನ ಮರಣದ ನಂತರ ಸಿಂಹಾಸನದ ಅಧಿಕಾರವನ್ನು ಸಾಮಾನ್ಯವಾಗಿ ಯಾರು ಪಡೆಯುತ್ತಾರೆ?
- ರಾಜಪ್ರಭುತ್ವದಲ್ಲಿ ಅಧಿಕಾರಕ್ಕಾಗಿ ಒಳಜಗಳ ನಡೆದರೆ ಆಗುವ ಕೆಟ್ಟ ಪರಿಣಾಮಗಳು ಯಾವುವು?
- ರಾಜಪ್ರಭುತ್ವ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ರಾಜಪ್ರಭುತ್ವ: ಮೇಲಿನ ಕಥೆಯಲ್ಲಿ ಎರಡು ಬಗೆಯ ಆಡಳಿತ ವ್ಯವಸ್ಥೆಯನ್ನು ನಾವು ಗುರುತಿಸಬಹುದು. ಅದೇ ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವ.
ಸರಕಾರದ ಎಲ್ಲಾ ಅಧಿಕಾರಗಳು ಒಬ್ಬ ವ್ಯಕ್ತಿಯ ಕೈಯಲ್ಲೇ ಇದ್ದರೆ ಅದನ್ನು `ರಾಜಪ್ರಭುತ್ವ’ ಎನ್ನುತ್ತಾರೆ. ಇಲ್ಲಿ ಎಲ್ಲವು ರಾಜನ ಇಚ್ಛೆಯಂತೆಯೇ ನಡೆಯುತ್ತದೆ. ಅವನ ಆಳ್ವಿಕೆಗೆ ಅವಧಿಯ ನಿರ್ಬಂಧ ಇರುವುದಿಲ್ಲ. ಚತುರ ಮತ್ತು ಧೈರ್ಯಶಾಲಿ ರಾಜನಿಂದ ರಾಜ್ಯ ಬಲಗೊಳ್ಳುತ್ತದೆ. ಪ್ರಜೆಗಳು ಸುಖವಾಗಿರುತ್ತಾರೆ. ಆದರೆ ದುರ್ಬಲ ಅರಸನ ಅಳ್ವಿಕೆಯಿಂದ ರಾಜಪ್ರಭುತ್ವ ಕೊನೆಗೊಳ್ಳುತ್ತದೆ.
ಪ್ರಜಾಪ್ರಭುತ್ವದ ಅರ್ಥ: ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು ಚುನಾವಣೆಯ ಮೂಲಕ ಆಯ್ಕೆಮಾಡಿ ಅವರಿಂದ ನಡೆಸಲಾಗುವ ರಾಜಕೀಯ ವ್ಯವಸ್ಥೆಯನ್ನು `ಪ್ರಜಾಪ್ರಭುತ್ವ’ ಎಂದು ಕರೆಯಲಾಗುತ್ತದೆ. ಇದು ಪ್ರಜೆಗಳ ಸರ್ಕಾರವಾಗಿದೆ. ಪ್ರಜೆಗಳ ಹಿತರಕ್ಷಣೆಯೇ ಇದರ ಮುಖ್ಯ ಗುರಿಯಾಗಿದೆ.
ಮಹತ್ವ: ಪ್ರಜಾಪ್ರಭುತ್ವವು ಜನಪರ ರಾಜಕೀಯ ವ್ಯವಸ್ಥೆಯಾಗಿದೆ. ಇದರಲ್ಲಿ ಕೆಲವು ಉತ್ತಮ ಅಂಶಗಳಿವೆ.
- ಆಡಳಿತವು ಪ್ರಜೆಗಳು ಆಯ್ಕೆ ಮಾಡಿದ ಪ್ರತಿನಿಧಿಗಳದ್ದೇ ಆಗಿರುತ್ತದೆ.
- ಎಲ್ಲರ ಸಮಾನತೆಗೆ ಇಲ್ಲಿ ಅವಕಾಶವಿದೆ.
- ಕ್ರಮಬದ್ಧವಾಗಿ ಚುನಾವಣೆಗಳು ನಡೆದು, ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸುತ್ತಾರೆ.
- ವಿಷಯಗಳ ಬಗ್ಗೆ ಚರ್ಚೆ ನಡೆದು, ಜನಪರ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ.
- ಪ್ರಜಾಪ್ರಭುತ್ವದಲ್ಲಿ ಜನರು ವಿವೇಕದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ.
ಪ್ರಜಾಪ್ರಭುತ್ವದ ಸವಾಲುಗಳು:
- ಮತಗಳಿಸಲು ಕೆಲವೊಮ್ಮೆ ಹಣದ ಆಮಿಷ ಮತ್ತು ಬಾಹುಬಲಗಳನ್ನು ಬಳಸಲಾಗುತ್ತದೆ.
- ಚುನಾವಣೆಯಲ್ಲಿ ಜಾತಿ, ಮತ, ಭಾಷೆಗಳೂ ಪ್ರಭಾವ ಬೀರುತ್ತವೆ.
- ಚುನಾಯಿತ ಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ತೊರೆದು ಇನ್ನೊಂದು ಪಕ್ಷವನ್ನು ಸೇರುತ್ತಾರೆ. ಇಂಥ ಪಕ್ಷಾಂತರದಿಂದ ಸರ್ಕಾರವು ಅಸ್ಥಿರಗೊಳ್ಳುತ್ತದೆ.
- ಈ ವ್ಯವಸ್ಥೆಯಲ್ಲಿ ಪುಂಡರೂ, ಅಪರಾಧಿಗಳೂ ಆಯ್ಕೆಗೊಳ್ಳುವ ಸಂಭವವಿದೆ.
ಚುನಾವಣೆ

- ಜನರು ಸಾಲಾಗಿ ಏಕೆ ಸಾಗುತ್ತಿದ್ದಾರೆ?
- ನೀನು ಎಂದಾದರೂ ಈ ರೀತಿಯ ಸನ್ನಿವೇಶವನ್ನು ನೋಡಿರುವೆಯಾ?
- ಮತಪತ್ರಗಳ ಅಥವಾ ಮತಯಂತ್ರಗಳ ಮೇಲೆ ಚಿಹ್ನೆಗಳನ್ನು ಏಕೆ ನೀಡುತ್ತಾರೆ?
ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ ್ತದೆ. ಮತದಾನವು ಚುನಾವಣಾ ಪದ್ಧತಿಯ ಮುಖ್ಯ ಅಂಗವಾಗಿದೆ. ಭಾರತದಲ್ಲಿ ಹದಿನೆಂಟು ವರ್ಷ ಮತ್ತು ಅದಕ್ಕಿಂತಲೂ ಮೇಲ್ಪಟ್ಟ ವಯೋಮಾನದವರಿಗೆ ಮತದಾನದ ಹಕ್ಕಿದೆ. ಮತದಾರರು ರಹಸ್ಯ ಮತದಾನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡುತ್ತಾರೆ.
ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಗಳನ್ನು ನೀಡಲಾಗುತ್ತದೆ. ಈ ಚಿಹ್ನೆಗಳನ್ನು ನೋಡಿ ಅನಕ್ಷರಸ್ಥರೂ ಕೂಡ ಮತವನ್ನು ಚಲಾಯಿಸಬಹುದಾಗಿದೆ.
ಮತದಾನದ ಮಹತ್ವ: ಪ್ರಜೆಗಳು ತಮಗಿಷ್ಟವಾದ ಪ್ರತಿ ನಿಧಿಯನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ ಅಭಿಪ್ರಾಯವನ್ನು ತಿಳಿಸಲು ಮತದಾನವು ಸಹಾಯಕವಾಗುತ್ತದೆ. ಇದು ಎಲ್ಲ ವರ್ಗದ ಜನರ ಪ್ರಾತಿನಿಧ್ಯಕ್ಕೆ ಅವಕಾಶ ನೀಡುತ್ತದೆ.
ಚುನಾವಣಾ ಪ್ರಕ್ರಿಯೆ: ಚುನಾವಣೆಗಳನ್ನು ಒಂದು ವೇಳಾಪಟ್ಟಿಯಂತೆ ನಡೆಸಲಾಗುವುದು.
- ಚುನಾವಣಾ ಅಧಿಸೂಚನೆ ಹೊರಡಿಸುವುದು.
- ಪ್ರಾರಂಭದಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ.
- ನಾಮಪತ್ರ ಪರಿಶೀಲನೆ.
- ಸ್ಪರ್ಧೆಯಿಂದ ಹಿಂದೆ ಸರಿಯಲು ಬಯಸುವ ಅಭ್ಯರ್ಥಿಗಳಿಂದ ನಾಮಪತ್ರ ಹಿಂತೆಗೆತ.
- ಮತಯಾಚನೆಗಾಗಿ ಅಭ್ಯರ್ಥಿಗಳಿಂದ ಮತ್ತು ಪಕ್ಷಗಳ ಚುನಾವಣಾ ಪ್ರಚಾರ.
- ನಿಗದಿತ ದಿನದಂದು ಮತದಾನ.
- ಮತಗಳ ಎಣಿಕೆ ಹಾಗೂ ಫಲಿತಾಂಶದ ಘೋಷಣೆ.
- ವಿಜೇತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.

ಹೊಸ ಪದಗಳು
ಮತದಾನ – ಚುನಾವಣೆಯಲ್ಲಿ ತನ್ನ ಆಯ್ಕೆಯನ್ನು ವ್ಯಕ್ತಪಡಿಸುವುದು, ಮತ ಚಲಾಯಿಸುವುದು.
ವಂಶಪಾರಂಪರ್ಯ ಆಡಳಿತ – ಒಂದೇ ಮನೆತನದವರು ಆಡಳಿತ ನಡೆಸುವುದು.
ಮತಪತ್ರ – ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳು ಮುದ್ರಿತವಾದ ಮತದಾನದ ಚೀಟಿ
ರಹಸ್ಯ ಮತದಾನ – ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂಬುದನ್ನು ಘೋಷಿಸುವ ಅಗತ್ಯವಿಲ್ಲದೆ ಪೌರನೊಬ್ಬರೂ ರಹಸ್ಯವಾಗಿ ಮತ ಚಲಾಯಿಸಬಹುದಾದ ವ್ಯವಸ್ಥೆ
ಮತಗಟ್ಟೆ – ಮತ ಚಲಾಯಿಸುವ ಸ್ಥಳ.
ನಿಮಗಿದು ತಿಳಿದಿರಲಿ
- ಇತ್ತೀಚೆಗೆ ಮತದಾನಕ್ಕಾಗಿ ವಿದ್ಯುನ್ಮಾನ ಮತ ಯಂತ್ರಗಳ ಬಳಕೆ ಪ್ರಾರಂಭವಾಗಿದೆ.
- ಭಾರತದಲ್ಲಿ ಚುನಾವಣಾ ಕಾರ್ಯಗಳನ್ನು ನಿರ್ವಹಿಸುವ ಅಧಿಕಾರವು ಚುನಾವಣಾ ಆಯೋಗಕ್ಕಿದೆ. ಈ ಆಯೋಗವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ.
ವಿಡಿಯೋ ಪಾಠಗಳು
ಅಭ್ಯಾಸಗಳು
* * * * * *
