ವಲಯ ಮಟ್ಟದಲ್ಲಿ ವೀರಾಗ್ರಣಿಯಾಗಿ ಎತ್ತರ ಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯ ಯಶೋಗಾಥೆ

2023-24 ನೇ ಸಾಲಿನಲ್ಲಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ನಮ್ಮ ಶಾಲೆಯ 6 ಮತ್ತು 7ನೇ ತರಗತಿಯ 14 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೊಡ್ಮನೆ ಪ್ರೌಢಶಾಲಾ ಮೈದಾನದಲ್ಲಿ ನಡೆದ ವಲಯಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ರಾಘವ ಪರಮೇಶ್ವರ ಗೌಡ ಗುಂಡು ಎಸೆತ ಹಾಗೂ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿದರೆ, 80ಮೀ. ಹರ್ಡಲ್ಸ್ ನಲ್ಲಿ ಜೆ. ಅಕ್ಷರ ದ್ವಿತೀಯ ಸ್ಥಾನ ಪಡೆದನು. ಬಾಲಕಿಯರ ವಿಭಾದಲ್ಲಿ 100ಮೀ. ಓಟ, 80ಮೀ ಹರ್ಡಲ್ಸ್ ಹಾಗೂ ಎತ್ತರ ಜಿಗಿತದಲ್ಲಿ ಕೀರ್ತಿ ಮಂಜುನಾಥ ಗೌಡ ಪ್ರಥಮ ಸ್ಥಾನ ಗಳಿಸಿದಳು. ಇವುಗಳಲ್ಲಿ 80ಮೀ. ಹರ್ಡಲ್ಸ್ ನಲ್ಲಿ ಜೆ. ಅಕ್ಷರ ದ್ವಿತೀಯ ಸ್ಥಾನದಿಂದಾಗಿ ತಾಲೂಕ ಮಟ್ಟಕ್ಕೆ ಆಯ್ಕೆಯಾಯಿತು. ಇದರ ಜೊತಗೆ ವೈಯಕ್ತಿಕ ವಿಭಾಗದಲ್ಲಿ ಮೂರು ಸ್ಪರ್ಧೆಗಳಲ್ಲಿ (100ಮೀ. ಓಟ, 80ಮೀ ಹರ್ಡಲ್ಸ್ ಹಾಗೂ ಎತ್ತರ ಜಿಗಿತ) ಪ್ರಥಮ ಸ್ಥಾನ ಪಡೆದಿರುವುದರಿಂದ ಕೀರ್ತಿ ಮಂಜುನಾಥ ಗೌಡ ವೀರಾಗ್ರಣಿಯಾಗಿ ತಾಲೂಕ ಮಟ್ಟಕ್ಕೆ ಆಯ್ಕೆಯಾದಳು.

ತಾಲ್ಲೂಕ ಮಟ್ಟದ ಕ್ರೀಡಾಕೂಟದಲ್ಲಿ ಮಿಂಚಿದ ಕೀರ್ತಿ :

ತಾಲೂಕಿನ ಎಮ್.ಜಿ.ಸಿ. ಕಾಲೇಜು ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಜೆ. ಅಕ್ಷರ 80ಮೀ ಹರ್ಡಲ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ 5ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಈ ಮಧ್ಯೆ ಕೀರ್ತಿ 100ಮೀ. ಓಟದಲ್ಲಿ ತೃತೀಯ ಸ್ಥಾನ, ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಭಾಗವಹಿಸಿದ ಮೂರೂ ಆಟಗಳಲ್ಲಿ ಸ್ಥಾನ ಪಡೆದು ಮಿಂಚಿದಳು. ಅಲ್ಲದೇ ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನದಿಂದಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದಳು. ಇದು ಹುಲ್ಕುತ್ರಿ ಶಾಲೆಯ ಕ್ರೀಡೆಗೆ ಸಂಬಂಧಿಸಿದಂತೆ ಇತಿಹಾಸ ನಿರ್ಮಿಸಿದಂತಾಗಿದೆ.

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ದಾಖಲೆ ಬರೆದ ಕೀರ್ತಿ!

ಶಿರಸಿ ಶೈಕ್ಷಣಿಕ ಜಿಲ್ಲೆಯ ದಾಂಡೇಲಿಯ ರಾಮನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕೀರ್ತಿ ಎತ್ತರ ಜಿಗಿತ ಹಾಗೂ ಹರ್ಡಲ್ಸ್ (ಅಡೆತಡೆ ಓಟ)ದಲ್ಲಿ ಭಾಗವಹಿಸಿದ್ದಳು. ಅಡೆತಡೆ ಓಟದಲ್ಲಿ ಕೀರ್ತಿ ತೃತೀಯ ಸ್ಥಾನ ಪಡೆದರೆ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಇದುವರೆಗೂ ಹುಲ್ಕುತ್ರಿ ಶಾಲೆಯಲ್ಲಿ ಯಾರೂ ಮಾಡದಂತ ಸಾಧನೆ ಮಾಡಿ ದಾಖಲೆ ಬರೆದಿದ್ದಾಳೆ.

ಪ್ರತಿಸ್ಫರ್ಧಿಯೇ ಇಲ್ಲದಂತ ಸುಂದರ ಜಿಗಿತ!

ಎತ್ತರ ಜಿಗಿತದಲ್ಲಿ ಈ ವಿದ್ಯಾರ್ಥಿನಿಯ ಜಿಗಿತದ ವೈಖರಿಗೆ ಪ್ರತಿಸ್ಪರ್ಧಿಯೇ ಇಲ್ಲದಷ್ಟು ಸುಂದರವಾಗಿ ಜಿಗಿಯುತ್ತಾಳೆ. ತಾಲ್ಲೂಕ ಹಾಗೂ ಜಿಲ್ಲಾ ಮಟ್ಟದಲ್ಲಿ ಇವಳಿಗೆ ಸರಿಯಾದ ಪ್ರತಿಸ್ಪರ್ಧಿಯೇ ಇಲ್ಲದಂತಿತ್ತು. ಜಿಲ್ಲಾ ಮಟ್ಟದಲ್ಲಿ ಕೀರ್ತಿ ಜಿಗಿದಿದ್ದು ಕೇವಲ ಮೂರೇ ಬಾರಿ. ಆಗಲೇ ಪ್ರಥಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಳು.

ಕೀರ್ತಿಗೆ ಟರ್ನಿಂಗ್ ಪಾಯಿಂಟ್ ನೀಡಿದ ಶಾಲಾ ಶಿಕ್ಷಕಿಯರು!

ಕಳೆದ 2022-23ನೇ ಸಾಲಿನಲ್ಲಿ ಕೀರ್ತಿ 100ಮೀ. ಓಟ ಹಾಗೂ ಗುಂಡು ಎಸೆತದಲ್ಲಿ ಭಾಗವಹಿಸಿದ್ದಳು. 100ಮೀಟರ್ ಓಟದಲ್ಲಿ ಮುಕ್ತಾಯದ ಗೆರೆಯನ್ನು ಗುರುತಿಸುವಲ್ಲಿ ತಪ್ಪಿದ್ದರಿಂದ ಯಾವುದೇ ಸ್ಥಾನ ಗಳಿಸದೇ ಹಿಂದೆ ಉಳಿದುಬಿಟ್ಟಳು. ಆದರೆ ಆರಂಭದ ಓಟ ಮಾತ್ರ ಚೆನ್ನಾಗಿತ್ತು. ಇದನ್ನು ಮನಗಂಡ ಶಾಲಾ ಶಿಕ್ಷಕಿಯರಾದ ಕು. ಮೈತ್ರಿ ಹೆಗಡೆ ಹಾಗೂ ಕು. ರಂಜನಾ ಭಂಡಾರಿ ಇವರು 2023-24ನೇ ಸಾಲಿನ ಕ್ರೀಡಾಕೂಟಕ್ಕೆ ಕೀರ್ತಿಗೆ 100ಮೀ. ಓಟ ಹಾಗೂ ಹರ್ಡಲ್ಸ್ ನಲ್ಲಿ ಭಾಗವಹಿಸುವಂತೆ ಸಲಹೆ ನೀಡಿ ಮಾರ್ಗದರ್ಶನ ನೀಡಿದರು. ಹೊಸದಾಗಿ ಎತ್ತರ ಜಿಗಿತದಲ್ಲಿ ಕೀರ್ತಿಯ ಜಿಗಿತದ ಶೈಲಿಯು ಹೊಸ ಭರವಸೆಯನ್ನು ಮೂಡಿಸಿದ್ದರಿಂದ ಇದಕ್ಕೂ ವಿಶೇಷ ಮಾರ್ಗದರ್ಶನ ನೀಡಿದರು. ಈ ಟರ್ನಿಂಗ್ ಪಾಯಿಂಟ್ ಹಾಗೂ ಕೀರ್ತಿಯ ಆತ್ಮವಿಶ್ವಾಸ ರಾಜ್ಯ ಮಟ್ಟಕ್ಕೆ ಕೊಂಡೊಯ್ದಿದೆ!

ದಿನಾಂಕ 01-11-2023ರಿಂದ ಉಡುಪಿಯಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮುಂದುವರೆಯಲಿ ಎಂದು ಆಶಿಸುತ್ತಾ, ಕೀರ್ತಿ, ಶಾಲೆಗೆ ಕೀರ್ತಿ ತರಲೆಂದು ಶುಭ ಹಾರೈಸುತ್ತೇವೆ.