ಸಿದ್ದಾಪುರ: ಕೋಶ ಓದು-ದೇಶ ಸುತ್ತು ಎನ್ನುವಂತೆ ತಾಲೂಕಿನ ಸೋವಿನಕೊಪ್ಪ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಳೆದ ನಾಲ್ಕು ವರ್ಷದಿಂದ ಶೈಕ್ಷಣಿಕ ಪ್ರವಾಸ ಕೈಗೊಂಡು ಸಂಪೂರ್ಣ ಕರ್ನಾಟಕ ದರ್ಶನ ಮಾಡಿದ್ದಾರೆ.

2022-23ನೇ ಸಾಲಿನಿಂದ ಇಲ್ಲಿಯವರೆಗೆ 6 ಮತ್ತು 7ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಬರುವ ಐತಿಹಾಸಿಕ ಸ್ಥಳಗಳಾದ ಬಾದಾಮಿ ಚಾಳುಕ್ಯರ ಬಾದಾಮಿ ಗುಹಾಂತರ ದೇವಾಲಯ, ಇಮ್ಮಡಿ ಪುಲಕೇಶಿಯ ಅರಮನೆ ಸ್ಥಳ, ಐಹೊಳೆ, ಪಟ್ಟದಕಲ್ಲು, ಮಹಾಕೂಟ, ಹೊಯ್ಸಳರ ಬೇಲೂರು, ಹಳೆಬೀಡು, ಧೋರ ಸಮುದ್ರ, ಗಂಗರ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ, ಮೈಸೂರಿನ ಅರಮನೆ, ಚಾಮುಂಡಿ ಬೆಟ್ಟ, ಚಿತ್ರದುರ್ಗದ ಕೋಟೆ, ವಿಜಯನಗರ ಸಾಮ್ರಾಜ್ಯದ ಹಂಪಿಯ ಸುತ್ತಲಿನ ಸ್ಥಳಗಳು, ಕಲ್ಯಾಣಿ ಚಾಲುಕ್ಯರ ಕೊಪ್ಪಳದ ಇಟಗಿಯ ಮಹಾದೇವ ದೇವಾಲಯವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಇವುಗಳ ಜೊತೆ ಕೂಡಲ ಸಂಗಮ, ವಿವಿಧ ಜಲಾಶಯಗಳಾದ ಆಲಮಟ್ಟಿ ಜಲಾಶಯ, ಕೆ.ಆರ್.ಎಸ್. ಜಲಾಶಯ, ಬೃಂದಾವನ ಉದ್ಯಾನವನ ಹಾಗೂ ತುಂಗಭದ್ರ ಜಲಾಶಯವನ್ನು ಸಂದರ್ಶಿದ್ದಾರೆ. ಮೈಸೂರಿನ ಮೃಗಾಲಯ, ಪ್ರಾಚ್ಯವಸ್ತು ಸಂಶೋಧನಾಲಯ, ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್, ಅಂಜನಾದ್ರಿ ಬೆಟ್ಟ, ಚಿತ್ರದುರ್ಗದ ಶ್ರೀ ಮುರುಘಾಮಠಕ್ಕೂ ಭೇಟಿ ನೀಡಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಬಹಮನಿ ಸಾಮ್ರಾಜ್ಯದ ವಿಜಯಪುರದ ಗೋಲಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್, ಗಗನ ಮಹಲ್, ಜುಮ್ಮಾ ಮಸೀದಿ, ಅಸಾರ್ ಮಹಲ್ ಸಂದರ್ಶಿಸಿದ್ದಾರೆ.

ಈ ಮೂಲಕ 6 ಮತ್ತು 7ನೇ ತರಗತಿಯ ಎಲ್ಲಾ ಸಾಮ್ರಾಜ್ಯಕ್ಕೂ ಭೇಟಿ ನೀಡಿದಂತಾಗಿದೆ. ಈ ರೀತಿಯಾಗಿ ಪಠ್ಯ ವಸ್ತುವಿನ ಮೇಲೆ ಶೈಕ್ಷಣಿಕ ಪ್ರವಾಸ ಕೈಗೊಂಡು ವಿದ್ಯಾರ್ಥಿಗಳಿಗೆ ಇತಿಹಾಸದ ವಿವಿಧ ಸಾಮ್ರಾಜ್ಯದ ಸ್ಥಳಗಳನ್ನು, ಅಲ್ಲಿನ ಸ್ಮಾರಕಗಳನ್ನು ಸಂದರ್ಶಿಸಿ ಪರಿಕಲ್ಪನೆಯನ್ನು ಮನದಟ್ಟು ಮಾಡಲು ಪ್ರಯತ್ನಿಸಿದ್ದಾರೆ. ಇದು ಬಹುಶಃ ಸಿದ್ದಾಪುರ ತಾಲೂಕಿನಲ್ಲೇ ಪ್ರಥಮ ಬಾರಿಗೆ ಇತಿಹಾಸದ ಎಲ್ಲಾ ಸಾಮ್ರಾಜ್ಯದ ಸ್ಥಳಗಳನ್ನು ಸಂದರ್ಶಿಸಿದ ಮೊದಲ ಶಾಲೆಯಾಗಿದೆ. ಕಡಿಮೆ ಮಕ್ಕಳಿರುವ ಕಾರಣ ವಿದ್ಯಾರ್ಥಿಗಳ ಪಾಲಕರನ್ನೂ ಕರೆದೊಯ್ಯುತ್ತಿರುವುದು ವಿಶೇಷ. ಹಾಗಾಗಿ ಮಕ್ಕಳ ಜೊತೆ ಪಾಲಕರೂ ಸಂಪೂರ್ಣವಾಗಿ ಕರ್ನಾಟಕ ಸಂದರ್ಶನ ಮಾಡಿದ್ದಾರೆ.

ಇದುವರೆಗೆ ಕಳೆದ ನಾಲ್ಕು ವರ್ಷಗಳಿಂದ ಶೈಕ್ಷಣಿಕದಲ್ಲಿ ಅಂದಾಜು 3800 ಕಿ.ಮೀ. ಕ್ರಮಿಸಿದ್ದಾರೆ. ಅಂದಾಜು 360000 ರೂ. ಗಳನ್ನು ವ್ಯಯಿಸಿ ಶೈಕ್ಷಣಿಕ ಪ್ರವಾಸಕ್ಕೊಂದು ನಿಜವಾದ ಅರ್ಥ ತಂದಿರುತ್ತಾರೆ.