ಆಹಾರ ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು – ಅಧ್ಯಾಯ-4

4.1 ನಮ್ಮ ಸುತ್ತಲಿನ ವಸ್ತುಗಳು

ನಮ್ಮ ಆಹಾರ ಮತ್ತು ಬಟ್ಟೆಗಳಲ್ಲಿ ಹಲವಾರು ವಿಧಗಳಿರುವುದನ್ನು ನಾವು ನೋಡಿದೆವು. ಕೇವಲ ಆಹಾರ ಮತ್ತು ಬಟ್ಟೆಗಳಷ್ಟೇ ಅಲ್ಲ, ಅದಕ್ಕೂ ಹೆಚ್ಚಿನ ವೈವಿಧ್ಯಮಯವಾದ ವಸ್ತುಗಳು ಎಲ್ಲಾ ಕಡೆಗಳಲ್ಲಿಯೂ ಇವೆ. ಕುರ್ಚಿ, ಎತ್ತಿನಗಾಡಿ, ಸೈಕಲ್, ಅಡುಗೆಗೆ ಬಳಸುವ ಪಾತ್ರೆಗಳು, ಪುಸ್ತಕಗಳು, ಬಟ್ಟೆಗಳು, ಆಟಿಕೆಗಳು, ನೀರು, ಕಲ್ಲು ಮುಂತಾದ ಬೇರೆ ಬೇರೆ ವಸ್ತುಗಳನ್ನು ನಮ್ಮ ಸುತ್ತ ನೋಡುತ್ತೇವೆ. ಈ ಎಲ್ಲಾ ವಸ್ತುಗಳು ವಿವಿಧ ಆಕಾರ, ಬಣ್ಣ ಮತ್ತು ಉಪಯೋಗಗಳನ್ನು ಹೊಂದಿವೆ (ಚಿತ್ರ 4.1).

ನಿಮ್ಮ ಸುತ್ತಲೂ ಇರುವ ಗೋಲಾಕಾರದ ವಸ್ತುಗಳನ್ನು ಗುರುತಿಸಿ. ರಬ್ಬರ್ ಚೆಂಡು, ಕಾಲ್ಚೆಂಡು ಮತ್ತು ಒಂದು ಗಾಜಿನ ಗೋಲಿ ನಮ್ಮ ಪಟ್ಟಿಯಲ್ಲಿ ಸೇರಿಕೊಳ್ಳಬಹುದು. ಗೋಲಾಕಾರಕ್ಕೆ ಹತ್ತಿರವಿರುವ ವಸ್ತುಗಳನ್ನು ಸೇರಿಸಿಕೊಂಡಲ್ಲಿ ಸೇಬು, ಕಿತ್ತಳೆ ಮತ್ತು ಮಣ್ಣಿನ ಮಡಿಕೆಯಂತಹ ವಸ್ತುಗಳೂ ಸೇರಿಕೊಳ್ಳುತ್ತವೆ. ಖಾದ್ಯ ವಸ್ತುಗಳ ಬಗ್ಗೆ ಆಲೋಚಿಸಿದರೆ, ಘಟಕ 1ರ ಕೋಷ್ಟಕ 1.1, 1.2 ಮತ್ತು 1.3 ಇವುಗಳಲ್ಲಿ ಪಟ್ಟಿ ಮಾಡಿದ ಎಲ್ಲಾ ವಸ್ತುಗಳನ್ನೂ ನಾವು ಸೇರಿಸಿಕೊಳ್ಳಬಹುದು. ಈಗ ತಾನೇ ಪಟ್ಟಿ ಮಾಡಿದ ಗೋಲಾಕಾರದ ವಸ್ತುಗಳೂ ಕೂಡ ಈ ಗುಂಪಿನಲ್ಲಿವೆ ಎಂಬುದನ್ನು ತಿಳಿಯಬಹುದು.

ನಾವೀಗ ಪ್ಲಾಸ್ಟಿಕ್ ನಿಂದ ತಯಾರಾದ ವಸ್ತುಗಳನ್ನು ಗುಂಪು ಮಾಡುತ್ತೇವೆ ಎಂದುಕೊಳ್ಳೋಣ. ಬಕೆಟ್‍ಗಳು, ತಿಂಡಿ ಡಬ್ಬಗಳು, ಆಟಿಕೆಗಳು, ನೀರಿನ ಬಾಟಲಿಗಳು, ಪೈಪುಗಳು ಇನ್ನೂ ಮುಂತಾದ ಈ ರೀತಿಯ ವಸ್ತುಗಳು ಈ ಗುಂಪಿನಲ್ಲಿ ಸೇರಿಕೊಳ್ಳಬಹುದು. ವಸ್ತುಗಳನ್ನು ಗುಂಪು ಮಾಡುವ ಹಲವಾರು ವಿಧಾನಗಳಿವೆ. ಮೇಲಿನ ಉದಾಹರಣೆಗಳಲ್ಲಿ ವಸ್ತುಗಳನ್ನು ಅವುಗಳ ಆಕಾರ ಮತ್ತು ಅವು ಯಾವ ಸಾಮಗ್ರಿಯಿಂದ ಮಾಡಲ್ಪಟ್ಟಿವೆ ಎಂಬುದರ ಆಧಾರದ ಮೇಲೆ ನಾವು ಗುಂಪು ಮಾಡಿದ್ದೇವೆ.

ನಮ್ಮ ಸುತ್ತಲಿರುವ ಎಲ್ಲಾ ವಸ್ತುಗಳು ಒಂದು ಅಥವಾ ಒಂದಕ್ಕಿಂತ ಹೆಚ್ಚು ಪದಾರ್ಥಗಳಿಂದ ಮಾಡಲ್ಪಟ್ಟಿವೆ. ಈ ಪದಾರ್ಥಗಳು ಗಾಜು, ಲೋಹ, ಪ್ಲಾಸ್ಟಿಕ್, ಮರ, ಹತ್ತಿ, ಕಾಗದ ಅಥವಾ ಮಣ್ಣು ಆಗಿರಬಹುದು. ಪದಾರ್ಥಗಳಿಗೆ ಇನ್ನೂ ಹೆಚ್ಚಿನ ಉದಾಹರಣೆಗಳನ್ನು ಯೋಚಿಸುವಿರ?

ಚಟುವಟಿಕೆ 1
ನಮ್ಮ ಸುತ್ತಲಿರುವ ವಸ್ತುಗಳನ್ನು ಎಷ್ಟು ಸಾಧ್ಯವೋ ಅಷ್ಟು ಸಂಗ್ರಹಿಸೋಣ. ದಿನನಿತ್ಯ ನಾವು ಬಳಸುವ ವಸ್ತುಗಳಲ್ಲಿ ಕೆಲವು ಮನೆಯಲ್ಲಿ, ಕೆಲವು ತರಗತಿಯಲ್ಲಿ ಅಥವಾ ಶಾಲೆಯ ಹೊರಗೆ ಸಿಗಬಹುದು. ಸೀಮೆಸುಣ್ಣ, ಪೆನ್ಸಿಲ್, ನೋಟ್ ಪುಸ್ತಕ, ರಬ್ಬರ್, ಡಸ್ಟರ್, ಸುತ್ತಿಗೆ, ಮೊಳೆ, ಸಾಬೂನು, ಚಕ್ರದ ಕಡ್ಡಿ (ಕೀಲು), ಬ್ಯಾಟು, ಬೆಂಕಿ ಪೆಟ್ಟಿಗೆ, ಉಪ್ಪು, ಆಲೂಗಡ್ಡೆ. ನಾವು ಯೋಚಿಸುವ ವಸ್ತುಗಳನ್ನೂ ಪಟ್ಟಿ ಮಾಡಬಹುದು ಆದರೆ ಅವುಗಳನ್ನು ತರಗತಿಗೆ ತರಲಾರೆವು. ಉದಾಹರಣೆಗೆ, ಗೋಡೆ, ಮರ, ಬಾಗಿಲು, ಟ್ರ್ಯಾಕ್ಟರ್, ರಸ್ತೆ.

ಈ ಸಂಗ್ರಹದಿಂದ ಕಾಗದ ಅಥವಾ ಮರದಿಂದ ತಯಾರಾದ ಎಲ್ಲಾ ವಸ್ತುಗಳನ್ನು ಬೇರ್ಪಡಿಸಿ. ಈ ರೀತಿಯಾಗಿ ವಸ್ತುಗಳನ್ನು ಎರಡು ಗುಂಪುಗಳಾಗಿ ನಾವು ವಿಭಾಗಿಸಿದ್ದೇವೆ. ಕಾಗದ ಅಥವಾ ಮರದಿಂದ ಮಾಡಿದ ವಸ್ತುಗಳದ್ದು ಒಂದು ಗುಂಪಾದರೆ, ಈ ಪದಾರ್ಥಗಳಿಂದ ಮಾಡಿರದ ವಸ್ತುಗಳದ್ದು ಇನ್ನೊಂದು ಗುಂಪು. ಹಾಗೆಯೇ, ಆಹಾರ ತಯಾರಿಸಲು ಉಪಯೋಗಿಸುವ ವಸ್ತುಗಳನ್ನು ನಾವು ಬೇರ್ಪಡಿಸಬಹುದು.

ಇದನ್ನು ನಾವು ಇನ್ನೂ ಸ್ವಲ್ಪ ವ್ಯವಸ್ಥಿತವಾಗಿಸೋಣ. ಕೋಷ್ಟಕ 4.1 ರಲ್ಲಿ ಸಂಗ್ರಹಿಸಿದ ಎಲ್ಲಾ ವಸ್ತುಗಳನ್ನು ಪಟ್ಟಿ ಮಾಡಿ. ಪ್ರತಿಯೊಂದೂ ಯಾವ ಪದಾರ್ಥಗಳಿಂದ ಮಾಡಲ್ಪಟ್ಟಿದೆ ಎಂಬುದನ್ನು ಗುರುತಿಸಲು ಪ್ರಯತ್ನಿಸಿ. ಎಷ್ಟು ಸಾಧ್ಯವೋ ಅಷ್ಟು ವಸ್ತುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದೊಡ್ಡದೊಂದು ಕೋಷ್ಟಕ ತಯಾರಿಸುವುದು ನಿಮಗೆ ಖುಷಿ ನೀಡಬಹುದು. ಕೆಲವು ವಸ್ತುಗಳು ಯಾವ ಪದಾರ್ಥಗಳಿಂದ ತಯಾರಿಸಲ್ಪಟ್ಟಿವೆ ಎಂಬುದನ್ನು ಕಂಡುಹಿಡಿಯುವುದು ಕಷ್ಟವೆನಿಸಬಹುದು. ಇಂತಹ ಸಂದರ್ಭಗಳಲ್ಲಿ ಪದಾರ್ಥಗಳನ್ನು ಗುರುತಿಸಲು ನಿಮ್ಮ ಸ್ನೇಹಿತರು, ಶಿಕ್ಷಕರು ಮತ್ತು ಪೋಷಕರೊಂದಿಗೆ ಚರ್ಚಿಸಿ.

ಚಟುವಟಿಕೆ 2
ಕೋಷ್ಟಕ 4.2ರಲ್ಲಿ ಸಾಮಾನ್ಯ ಪದಾರ್ಥಗಳನ್ನು ಪಟ್ಟಿ ಮಾಡಿದೆ. ಕಾಲಂ-1ರಲ್ಲಿ ನಿಮಗೆ ತಿಳಿದಿರುವ ಅನೇಕ ಪದಾರ್ಥಗಳನ್ನು ಸೇರಿಸಿ. ಈ ಪದಾರ್ಥಗಳಿಂದ ಮಾಡಲ್ಪಟ್ಟ ನಿಮಗೆ ತಿಳಿದಿರುವ ದಿನನಿತ್ಯದ ವಸ್ತುಗಳ ಬಗ್ಗೆ ಆಲೋಚಿಸಿ. ಅವುಗಳನ್ನು ಕಾಲಂ-2ರಲ್ಲಿ ಪಟ್ಟಿ ಮಾಡಿ.

ಈ ಕೋಷ್ಟಕದಲ್ಲಿ ನಾವು ಏನನ್ನು ಕಾಣುತ್ತೇವೆ? ಮೊದಲು ನಾವು ವಸ್ತುಗಳನ್ನು ಅನೇಕ ವಿಧಗಳಲ್ಲಿ ಗುಂಪು ಮಾಡಿದೆವು. ಅನಂತರ ನಮ್ಮ ಸುತ್ತಲಿನ ವಸ್ತುಗಳು ವಿವಿಧ ಪದಾರ್ಥಗಳಿಂದ ಮಾಡಲ್ಪಟ್ಟಿವೆ ಎಂಬುದನ್ನು ಕಂಡುಕೊಂಡೆವು. ಒಮ್ಮೊಮ್ಮೆ ಒಂದು ವಸ್ತು ಒಂದೇ ಪದಾರ್ಥದಿಂದ ಮಾಡಲ್ಪಟ್ಟಿರುತ್ತದೆ. ಒಂದು ವಸ್ತು ಅನೇಕ ಪದಾರ್ಥಗಳಿಂದಲೂ ಮಾಡಲ್ಪಟ್ಟಿರಬಹುದು. ಒಂದೇ ಪದಾರ್ಥವನ್ನು ಬಳಸಿ ವಿವಿಧ ವಸ್ತುಗಳನ್ನು ತಯಾರಿಸಬಹುದು. ಕೊಟ್ಟಿರುವ ವಸ್ತುವನ್ನು ತಯಾರಿಸಲು ಯಾವ ಪದಾರ್ಥ ಬಳಸಬೇಕೆಂಬುದನ್ನು ಹೇಗೆ ನಿರ್ಧರಿಸುವುದು? ವಿವಿಧ ಪದಾರ್ಥಗಳ ಬಗ್ಗೆ ನಾವು ಇನ್ನಷ್ಟು ತಿಳಿಯಬೇಕಿದೆ.

4.2 ಪದಾರ್ಥಗಳ ಗುಣಗಳು

ಒಂದು ನೀರಿನ ಲೋಟವನ್ನು ಬಟ್ಟೆಯ ತುಂಡಿನಿಂದ ಏಕೆ ಮಾಡಿಲ್ಲ ಎಂದು ಯಾವಾಗಲಾದರೂ ಆಶ್ಚರ್ಯಪಟ್ಟಿದ್ದೀರ? ಘಟಕ 3ರಲ್ಲಿ ನಡೆಸಿದ ಬಟ್ಟೆಯ ಮೇಲಿನ ಪ್ರಯೋಗವನ್ನು ನೆನಪಿಸಿಕೊಳ್ಳಿ. ನಾವು ದ್ರವ ವಸ್ತುಗಳನ್ನಿಡಲು ಸಾಮಾನ್ಯವಾಗಿ ಪಾತ್ರೆಯನ್ನು ಬಳಸುತ್ತೇವೆ. ಆದ್ದರಿಂದ ಬಟ್ಟೆಯಿಂದ ಪಾತ್ರೆಯನ್ನು ತಯಾರಿಸಲು ಪ್ರಯತ್ನಿಸಿದರೆ ಅದು ತಿಳಿಗೇಡಿತನ ಅನ್ನಿಸುವುದಿಲ್ಲವೆ! (ಚಿತ್ರ 4.2). ನೀರನ್ನು ಸಂಗ್ರಹಿಸುವ ಪಾತ್ರೆಗಳನ್ನು ತಯಾರಿಸಲು ಗಾಜು, ಪ್ಲಾಸ್ಟಿಕ್, ಲೋಹ ಅಥವಾ ಈ ರೀತಿಯ ಪದಾರ್ಥಗಳೆ ಅವಶ್ಯ. ಹಾಗೆಯೇ ಕಾಗದದಂತಹ ಪದಾರ್ಥಗಳನ್ನು ಅಡುಗೆ ಪಾತ್ರೆ ತಯಾರಿಸಲು ಬಳಸುವುದು ಬುದ್ಧಿವಂತಿಕೆ ಎನಿಸುವುದಿಲ್ಲ.

ವಸ್ತುಗಳ ತಯಾರಿಕೆಗೆ ಪದಾರ್ಥಗಳನ್ನು ಆಯ್ಕೆ ಮಾಡುವುದು ಅವುಗಳ ಗುಣಗಳು ಮತ್ತು ಯಾವ ಉದ್ದೇಶಕ್ಕಾಗಿ ಆ ವಸ್ತುವನ್ನು ಬಳಸುತ್ತೇವೆ ಎಂಬುದನ್ನು ಅವಲಂಬಿಸಿರುತ್ತದೆ ಎಂದು ತಿಳಿದೆವು.

ಆದ್ದರಿಂದ ಪದಾರ್ಥಗಳ ಯಾವೆಲ್ಲ ಗುಣಗಳು ಅವುಗಳ ಬಳಕೆಗೆ ಮಹತ್ವದ್ದಾಗಿವೆ? ಕೆಲವು ಗುಣಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಹೊರ ಸ್ವರೂಪ

ಸಾಮಾನ್ಯವಾಗಿ ಪದಾರ್ಥಗಳು ಪರಸ್ಪರ ಭಿನ್ನವಾಗಿ ಕಾಣುತ್ತವೆ. ಕಬ್ಬಿಣಕ್ಕಿಂತ ಮರ ಸಾಕಷ್ಟು ಭಿನ್ನವಾಗಿ ಕಾಣುತ್ತದೆ. ತಾಮ್ರ ಅಥವಾ ಅಲ್ಯೂಮಿನಿಯಮ್‍ಗಿಂತ ಕಬ್ಬಿಣವು ಭಿನ್ನವಾಗಿ ಕಾಣುತ್ತದೆ. ಹಾಗೆಯೇ ತಾಮ್ರ, ಕಬ್ಬಿಣ ಮತ್ತು ಅಲ್ಯೂಮಿನಿಯಮ್‍ಗಳಲ್ಲಿನ ಕೆಲವು ಸಾಮಾನ್ಯ ಅಂಶಗಳು ಮರದಲ್ಲಿ ಇರುವುದಿಲ್ಲ.

ಚಟುವಟಿಕೆ 3
ಕಾಗದ, ಕಾರ್ಡ್‍ಬೋರ್ಡ್ (cardboard), ಮರ, ತಾಮ್ರದ ತಂತಿ, ಅಲ್ಯೂಮಿನಿಯಮ್ ಹಾಳೆ, ಸೀಮೆಸುಣ್ಣದಂತಹ ವಿವಿಧ ಸಾಮಗ್ರಿಗಳ ಚಿಕ್ಕ ತುಂಡುಗಳನ್ನು ಸಂಗ್ರಹಿಸಿ. ಇವುಗಳಲ್ಲಿ ಯಾವುದಾದರೂ ಹೊಳಪಾಗಿ ಕಾಣಿಸುತ್ತಿದೆಯೇ? ಹೊಳೆಯುವ ಪದಾರ್ಥಗಳನ್ನು ಒಂದು ಗುಂಪಾಗಿ ಪ್ರತ್ಯೇಕಿಸಿ.

ಈಗ ನಿಮ್ಮ ಶಿಕ್ಷಕರು ಪ್ರತಿ ಪದಾರ್ಥವನ್ನು ಎರಡು ತುಂಡುಗಳನ್ನಾಗಿ ಕತ್ತರಿಸುವುದನ್ನು ಗಮನಿಸಿ. ಆ ಪದಾರ್ಥದ ಈಗ ತಾನೆ ಕತ್ತರಿಸಿದ ಭಾಗವನ್ನು ಗಮನಿಸಿ (ಚಿತ್ರ 4.3). ಏನನ್ನು ಗಮನಿಸಿದಿರಿ? ಕೆಲವು ಪದಾರ್ಥಗಳ ಈಗ ತಾನೆ ಕತ್ತರಿಸಿದ ಭಾಗಗಳು ಹೊಳೆಯುತ್ತಿವೆಯೆ? ಈ ವಸ್ತುಗಳನ್ನು ಕೂಡ ಹೊಳೆಯುವ ಪದಾರ್ಥಗಳ ಗುಂಪಿಗೆ ಸೇರಿಸಿ.

ಬೇರೆ ಪದಾರ್ಥಗಳನ್ನು ಕತ್ತರಿಸಿದಾಗ ಈ ರೀತಿ ಹೊಳಪನ್ನು ನೋಡುವಿರಾ? ನಿಮಗೆ ಬೇಕಾದಂತೆ ಅವುಗಳನ್ನು ಕತ್ತರಿಸಿ. ತರಗತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಪದಾರ್ಥಗಳಿಗೆ ಇದನ್ನು ಪುನರಾವರ್ತಿಸಿ. ಹೊಳಪು ಇರುವ ಹಾಗೂ ಇಲ್ಲದಿರುವ ಪದಾರ್ಥಗಳನ್ನು ಪಟ್ಟಿ ಮಾಡಿ. ಕತ್ತರಿಸುವ ಬದಲು ಈ ಪದಾರ್ಥಗಳ ಮೇಲ್ಮೈಯನ್ನು ಉಸುಕು ಕಾಗದ (sand paper) ದಿಂದ ಉಜ್ಜಿ ಹೊಳಪು ಇದೆಯೇ ಎಂದು ಪರೀಕ್ಷಿಸಿ.

ಈ ರೀತಿಯ ಹೊಳಪುಳ್ಳ ಪದಾರ್ಥಗಳು ಸಾಮಾನ್ಯವಾಗಿ ಲೋಹಗಳಾಗಿರುತ್ತವೆ. ಕಬ್ಬಿಣ, ತಾಮ್ರ, ಅಲ್ಯೂಮಿನಿಯಮ್ ಮತ್ತು ಚಿನ್ನ-ಇವುಗಳು ಲೋಹಗಳಿಗೆ ಉದಾಹರಣೆಗಳಾಗಿವೆ. ಕೆಲವು ಲೋಹಗಳ ಮೇಲೆ ಗಾಳಿ ಮತ್ತು ತೇವಾಂಶಗಳ ಕ್ರಿಯೆಯಿಂದಾಗಿ ಅವು ಆಗಾಗ್ಗೆ ಹೊಳಪನ್ನು ಕಳೆದುಕೊಂಡು ಮಬ್ಬಾಗಿ ಕಾಣುತ್ತವೆ. ಆದ್ದರಿಂದ ನಾವು ಆಗ ತಾನೇ ಕತ್ತರಿಸಿದ ಭಾಗದಲ್ಲಿ ಮಾತ್ರ ಹೊಳಪನ್ನು ನೋಡಬಹುದಾಗಿದೆ. ನೀವು ಕಮ್ಮಾರನ ಯಂತ್ರಶಾಲೆಗೆ (workshop) ಭೇಟಿ ನೀಡಿದಾಗ ಆಗ ತಾನೇ ಕತ್ತರಿಸಿದ ಲೋಹದ ಸಲಾಕೆಗಳಲ್ಲಿ ಹೊಳಪಿದೆಯೆ ಎಂಬುದನ್ನು ಗಮನಿಸಿ.

ಕಠಿಣತೆ
ವಿವಿಧ ಪದಾರ್ಥಗಳನ್ನು ನಿಮ್ಮ ಕೈಗಳಿಂದ ಒತ್ತಿದಾಗ ಕೆಲವನ್ನು ಕುಗ್ಗಿಸಲು ಕಷ್ಟವೆನಿಸಬಹುದು, ಹಾಗೆಯೇ ಕೆಲವನ್ನು ಸುಲಭವಾಗಿ ಕುಗ್ಗಿಸಬಹುದು. ಕಲ್ಲಿನ ತುಂಡು, ಮೊಳೆ, ಮೇಣದ ಬತ್ತಿ, ಸೀಮೆಸುಣ್ಣ ಅಥವಾ ಬೇರೆ ಯಾವುದಾದರೂ ಪದಾರ್ಥದ ಮೇಲ್ಮೈಯನ್ನು ಲೋಹದ ಕೀಲಿಯಿಂದ ಗೀಚಿ. ಕೆಲವು ಪದಾರ್ಥಗಳನ್ನು ನೀವು ಸುಲಭವಾಗಿ ಗೀಚಬಲ್ಲಿರಿ ಹಾಗೆಯೇ ಕೆಲವನ್ನು ಸುಲಭವಾಗಿ ಗೀಚಲಾರಿರಿ. ಕುಗ್ಗಿಸಲಾಗುವ ಅಥವಾ ಸುಲಭವಾಗಿ ಗೀಚಲಾಗುವ ಪದಾರ್ಥಗಳನ್ನು ಮೃದು (soft) ಎನ್ನುವರು. ಹಾಗೆಯೇ ಕುಗ್ಗಿಸಲು ಕಷ್ಟವೆನಿಸುವ ಕೆಲವುಗಳನ್ನು ಕಠಿಣ (hard) ಎನ್ನುವರು. ಉದಾಹರಣೆಗೆ, ಹತ್ತಿ ಅಥವಾ ಸ್ಪಂಜು ಇವುಗಳು ಮೃದುವಾಗಿದ್ದರೆ ಕಬ್ಬಿಣ ಕಠಿಣವಾಗಿರುತ್ತದೆ.

ಮೇಲ್ನೋಟಕ್ಕೆ ಪದಾರ್ಥಗಳು ಹೊಳಪು, ಕಠಿಣತೆ, ಒರಟಾಗಿರುವುದು ಅಥವಾ ನಯವಾಗಿರುವುದು ಇತ್ಯಾದಿ ವಿವಿಧ ಗುಣಗಳನ್ನು ಹೊಂದಿರಬಹುದು. ಒಂದು ಪದಾರ್ಥದ ಹೊರ ಸ್ವರೂಪವನ್ನು ವರ್ಣಿಸುವ ಇತರ ಗುಣಗಳ ಬಗ್ಗೆ ನೀವು ಯೋಚಿಸುವಿರಾ ?

ಕರಗುವಿಕೆ ಅಥವಾ ಕರಗದಿರುವಿಕೆ

ಚಟುವಟಿಕೆ 4
ಸಕ್ಕರೆ, ಉಪ್ಪು, ಸೀಮೆಸುಣ್ಣದ ಪುಡಿ, ಮರಳು ಮತ್ತು ಮರದ ಪುಡಿಗಳಂತಹ ಕೆಲವು ಘನ ಪದಾರ್ಥಗಳ ಮಾದರಿಯನ್ನು ಸಂಗ್ರಹಿಸಿ. ಐದು ಗಾಜಿನ ಲೋಟ ಅಥವಾ ಬೀಕರ್‍ಗಳನ್ನು ತೆಗೆದುಕೊಳ್ಳಿ. ಪ್ರತಿಯೊಂದರಲ್ಲೂ 2 3 ಭಾಗದಷ್ಟು ನೀರನ್ನು ತುಂಬಿ. ಸ್ವಲ್ಪ ಪ್ರಮಾಣದ (ಒಂದು ಚಮಚದಷ್ಟು) ಸಕ್ಕರೆಯನ್ನು ಮೊದಲನೆಯ ಲೋಟಕ್ಕೆ, ಎರಡನೆಯದಕ್ಕೆ ಉಪ್ಪನ್ನು, ಹೀಗೆ ಉಳಿದ ಪದಾರ್ಥಗಳನ್ನು ಉಳಿದಿರುವ ಲೋಟಗಳಿಗೆ ಹಾಕಿ. ಪ್ರತಿ ಲೋಟದಲ್ಲಿನ ಪದಾರ್ಥಗಳನ್ನು ಚಮಚದಿಂದ ಕಲಕಿ. ಕೆಲವು ನಿಮಿಷಗಳವರೆಗೆ ಕಾಯಿರಿ. ನೀರಿಗೆ ಸೇರಿಸಿದ ಪದಾರ್ಥಗಳು ಏನಾಗುವುವೆಂದು ಗಮನಿಸಿ (ಚಿತ್ರ 4.4). ನಿಮ್ಮ ವೀಕ್ಷಣೆಗಳನ್ನು ಕೋಷ್ಟಕ 4.3ರಲ್ಲಿ ತೋರಿಸಿರುವಂತೆ ಪಟ್ಟಿ ಮಾಡಿ.

ಕೆಲವು ಪದಾರ್ಥಗಳು ನೀರಿನಲ್ಲಿ ಸಂಪೂರ್ಣವಾಗಿ ಕಾಣದಂತಾಗುವುದನ್ನು ಅಥವಾ ಕರಗಿರುವುದನ್ನು ನೀವು ಗಮನಿಸುವಿರಿ. ಇವು ನೀರಿನಲ್ಲಿ ಕರಗುವ (soluble)ಪದಾರ್ಥಗಳು. ಉಳಿದ ಪದಾರ್ಥಗಳು ನೀರಿನಲ್ಲಿ ಬೆರೆಯುವುದಿಲ್ಲ ಮತ್ತು ತುಂಬಾ ಹೊತ್ತು ಕದಡಿದ ನಂತರವೂ ಕಾಣದಂತಾಗುವುದಿಲ್ಲ. ಇವು ನೀರಿನಲ್ಲಿ ಕರಗದ (insoluble) ಪದಾರ್ಥಗಳು.

ದೇಹದ ಕಾರ್ಯಗಳಲ್ಲಿ ನೀರು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಇದು ಹೆಚ್ಚಿನ ಸಂಖ್ಯೆಯ ಪದಾರ್ಥಗಳನ್ನು ಕರಗಿಸಿಕೊಳ್ಳುತ್ತದೆ. ದ್ರವಗಳೂ ಕೂಡ ನೀರಿನಲ್ಲಿ ಕರಗುತ್ತವೆಯೇ ?

ಚಟುವಟಿಕೆ 5
ವಿನೆಗರ್, ನಿಂಬೆರಸ, ಸಾಸಿವೆಎಣ್ಣೆ, ತೆಂಗಿನೆಣ್ಣೆ ಅಥವಾ ಸೀಮೆಎಣ್ಣೆ ಈ ರೀತಿಯ ದ್ರವಗಳ ಮಾದರಿಗಳನ್ನು ಸಂಗ್ರಹಿಸಿ. ಒಂದು ಗಾಜಿನ ಲೋಟದಲ್ಲಿ ಅರ್ಧದಷ್ಟು ನೀರನ್ನು ತೆಗೆದುಕೊಳ್ಳಿ. ಕೆಲವು ಚಮಚದಷ್ಟು ದ್ರವವನ್ನು ಇದಕ್ಕೆ ಬೆರೆಸಿ ಚೆನ್ನಾಗಿ ಕಲಕಿ. ಐದು ನಿಮಿಷಗಳವರೆಗೆ ಹಾಗೆಯೇ ಇಡಿ. ದ್ರವವು ನೀರಿನಲ್ಲಿ ಬೆರೆಯುವುದೇ ಎಂಬುದನ್ನು ಗಮನಿಸಿ (ಚಿತ್ರ 4.5). ನಿಮಗೆ ಎಷ್ಟು ವಿಧದ ದ್ರವಗಳು ಲಭ್ಯವೋ ಅವೆಲ್ಲವುಗಳಿಗೆ ಇದನ್ನು ಪುನರಾವರ್ತಿಸಿ. ಕೋಷ್ಟಕ 4.4ರಲ್ಲಿ ನಿಮ್ಮ ವೀಕ್ಷಣೆಗಳನ್ನು ಬರೆಯಿರಿ.

ಕೆಲವು ದ್ರವಗಳು ನೀರಿನಲ್ಲಿ ಸಂಪೂರ್ಣ ಬೆರೆಯುವುದನ್ನು ನಾವು ನೋಡುತ್ತೇವೆ. ಉಳಿದ ಕೆಲವು ದ್ರವಗಳು ನೀರಿನಲ್ಲಿ ಬೆರೆಯುವುದಿಲ್ಲ ಮತ್ತು ಸ್ವಲ್ಪ ಸಮಯ ಹಾಗೆಯೇ ಇಟ್ಟರೆ ಪ್ರತ್ಯೇಕ ಪದರವಾಗಿ ಉಳಿಯುತ್ತವೆ.

ಕೆಲವು ಅನಿಲಗಳು ನೀರಿನಲ್ಲಿ ಕರಗುತ್ತವೆ, ಹಾಗೆಯೇ ಉಳಿದವು ಕರಗುವುದಿಲ್ಲ. ಸಾಮಾನ್ಯವಾಗಿ ನೀರಿನಲ್ಲಿ ಕೆಲವು ಅನಿಲಗಳು ಕಡಿಮೆ ಪ್ರಮಾಣದಲ್ಲಿ ಕರಗಿರುತ್ತವೆ. ಉದಾಹರಣೆಗೆ, ನೀರಿನಲ್ಲಿ ವಾಸಿಸುವ ಪ್ರಾಣಿಗಳ ಮತ್ತು ಸಸ್ಯಗಳ ಉಳಿವಿಗೆ ನೀರಿನಲ್ಲಿ ಕರಗಿದ ಆಕ್ಸಿಜನ್ ಅನಿಲವು ತುಂಬಾ ಅಗತ್ಯ.

ವಸ್ತುಗಳು ನೀರಿನಲ್ಲಿ ತೇಲಬಹುದು ಅಥವಾ ಮುಳುಗಬಹುದು

ಚಿತ್ರ 4.6 ಕೆಲವು ವಸ್ತುಗಳು ತೇಲುತ್ತವೆ ಮತ್ತು ಕೆಲವು ಮುಳುಗುತ್ತವೆ. ಚಟುವಟಿಕೆ 4ನ್ನು ಕೈಗೊಂಡಾಗ, ಕರಗದ ಘನವಸ್ತುಗಳು ನೀರಿನಿಂದ ಪ್ರತ್ಯೇಕಗೊಳ್ಳುವುದನ್ನು ನೀವು ಗಮನಿಸಿರಬಹುದು. ಚಟುವಟಿಕೆ 5ರಲ್ಲಿನ ಕೆಲವು ದ್ರವಗಳಲ್ಲಿಯೂ ನೀವು ಇದನ್ನು ನೋಡಿರಬಹುದು. ನೀರಿನಲ್ಲಿ ಕರಗದ ಕೆಲವು ಪದಾರ್ಥಗಳು ನೀರಿನ ಮೇಲ್ಭಾಗದಲ್ಲಿ ತೇಲುತ್ತಿದ್ದವು. ಉಳಿದವು ಲೋಟದ ತಳಭಾಗದಲ್ಲಿ ಮುಳುಗಿರಬಹುದು. ಅಲ್ಲವೇ ? ವಸ್ತುಗಳು ನೀರಿನಲ್ಲಿ ತೇಲುವ ಅಥವಾ ಮುಳುಗುವ ಅನೇಕ ಉದಾಹರಣೆಗಳನ್ನು ನಾವು ನೋಡುತ್ತೇವೆ (ಚಿತ್ರ 4.6). ಕೊಳದ ಮೇಲ್ಭಾಗದಲ್ಲಿ ಬಿದ್ದ ಒಣಗಿದ ಎಲೆಗಳು, ಕೊಳಕ್ಕೆ ನೀವು ಎಸೆಯುವ ಕಲ್ಲು, ಒಂದು ನೀರಿನ ಲೋಟಕ್ಕೆ ನೀವು ಹಾಕುವ ಕೆಲವು ಜೇನ ಹನಿಗಳು ಇವೆಲ್ಲವುಗಳು ಏನಾಗುತ್ತವೆ?

ಪಾರದರ್ಶಕತೆ

ಚಿತ್ರ 4.7 ಪಾರದರ್ಶಕ, ಅಪಾರದರ್ಶಕ ಅಥವಾ ಅರೆ ಪಾರದರ್ಶಕ ಪದಾರ್ಥಗಳಿಂದ ನೋಡುತ್ತಿರುವುದು ನೀವು ಕಣ್ಣಾಮುಚ್ಚಾಲೆ ಆಟ ಆಡಿರಬಹುದು. ಬೇರೆಯವರಿಗೆ ಕಾಣಬಾರದೆಂದು ನೀವು ಬಚ್ಚಿಟ್ಟುಕೊಳ್ಳುತ್ತಿದ್ದ ಕೆಲವು ಜಾಗಗಳನ್ನು ಯೋಚಿಸಿ. ನೀವೇಕೆ ಅದೇ ಜಾಗಗಳನ್ನು ಆಯ್ದುಕೊಳ್ಳುತ್ತಿದ್ದಿರಿ? ಗಾಜಿನ ಕಿಟಕಿಯ ಹಿಂದೆ ಏನಾದರೂ ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದ್ದೀರಾ? ಖಂಡಿತ ಇಲ್ಲ, ನಿಮ್ಮ ಸ್ನೇಹಿತರು ಅದರಿಂದ ನೋಡಲು ಸಾಧ್ಯವಾಗಿ ನಿಮ್ಮನ್ನು ಗುರುತಿಸಿಬಿಡುತ್ತಾರೆ. ಎಲ್ಲಾ ಪದಾರ್ಥಗಳಿಂದ ನೀವು ನೋಡಬಹುದೇ? ಯಾವ ಪದಾರ್ಥಗಳ ಮೂಲಕ ನೋಡಲು ಸಾಧ್ಯವಾಗುವುದೋ ಅವುಗಳನ್ನು ಪಾರದರ್ಶಕ (transparent) ಎನ್ನುವರು (ಚಿತ್ರ 4.7). ಗಾಜು, ನೀರು, ಗಾಳಿ, ಹಾಗೂ ಕೆಲವು ಪ್ಲಾಸ್ಟಿಕ್‍ಗಳು ಪಾರದರ್ಶಕ ಪದಾರ್ಥಗಳಿಗೆ ಉದಾಹರಣೆಗಳಾಗಿವೆ. ಗ್ರಾಹಕರಿಗೆ ಸುಲಭವಾಗಿ ಕಾಣುವಂv ಮಾಡಲು ಸಾಮಾನ್ಯವಾಗಿ ಅಂಗಡಿಯವರು ಬಿಸ್ಕತ್ತು, ಸಿಹಿ ಮತ್ತಿತರ ತಿನಿಸುಗಳನ್ನು ಗಾಜು ಅಥವಾ ಪ್ಲಾಸ್ಟಿಕ್‍ನಂತಹ ಪಾರದರ್ಶಕ ಡಬ್ಬಗಳಲ್ಲಿ ಇಡಲು ಬಯಸುತ್ತಾರೆ (ಚಿತ್ರ 4.8).

ಮತ್ತೊಂದೆಡೆ, ಕೆಲವು ಪದಾರ್ಥಗಳ ಮೂಲಕ ನೋಡಲು ನಿಮಗೆ ಸಾಧ್ಯವಾಗುವುದಿಲ್ಲ. ಇಂತಹ ಪದಾರ್ಥಗಳನ್ನು ಅಪಾರದರ್ಶಕ (opaque) ಎನ್ನುವರು. ಮುಚ್ಚಿರುವ ಮರದ ಪೆಟ್ಟಿಗೆ, ರಟ್ಟಿನ ಪೆಟ್ಟಿಗೆ ಅಥವಾ ಲೋಹದ ಪಾತ್ರೆಗಳಲ್ಲಿ ಏನನ್ನು ಇಟ್ಟಿದೆ ಎಂಬುದನ್ನು ಹೇಳಲು ಸಾಧ್ಯವಾಗುವುದಿಲ್ಲ. ಮರ, ರಟ್ಟು ಮತ್ತು ಲೋಹ ಇವುಗಳು ಅಪಾರದರ್ಶಕ ಪದಾರ್ಥಗಳಿಗೆ ಉದಾಹರಣೆಗಳು.

ಯಾವುದೇ ಗೊಂದಲವಿಲ್ಲದೆ ನಾವು ಎಲ್ಲ ಪದಾರ್ಥಗಳು ಮತ್ತು ವಸ್ತುಗಳನ್ನು ಪಾರದರ್ಶಕ ಅಥವಾ ಅಪಾರದರ್ಶಕವೆಂದು ಗುಂಪು ಮಾಡಬಹುದೆ?

ಚಟುವಟಿಕೆ 6
ಒಂದು ಕಾಗದದ ಹಾಳೆಯನ್ನು ತೆಗೆದುಕೊಂಡು, ಬೆಳಗುತ್ತಿರುವ ಬಲ್ಬನ್ನು ಅದರ ಮೂಲಕ ನೋಡಿ. ನಿಮ್ಮ ವೀಕ್ಷಣೆಯನ್ನು ಬರೆದುಕೊಳ್ಳಿ. ಈಗ 2-3 ಹನಿಗಳಷ್ಟು ಯಾವುದಾದರೂ ಎಣ್ಣೆಯನ್ನು ಹಾಳೆಯ ಮೇಲೆ ಹಾಕಿ, ಹರಡಿ. ಎಣ್ಣೆಯನ್ನು ಹರಡಿದ ಹಾಳೆಯ ಭಾಗದ ಮೂಲಕ ಬೆಳಗುತ್ತಿರುವ ಬಲ್ಬನ್ನು ಪುನಃ ನೋಡಿ. ಮೊದಲಿಗಿಂತ ಬಲ್ಬ್ ಈಗ ಹೆಚ್ಚು ಸ್ಪಷ್ಟವಾಗಿ ಕಾಣುವುದನ್ನು ನೀವು ಗಮನಿಸುವಿರಾ? ಆದರೆ ಎಣ್ಣೆ ಹಚ್ಚಿದ ಹಾಳೆಯ ಭಾಗದಿಂದ ನೀವು ಸ್ಪಷ್ಟವಾಗಿ ನೋಡಲು ಸಾಧ್ಯವೆ? ಹಾಳೆಯ ಇನ್ನೊಂದು ಮಗ್ಗುಲಿನಲ್ಲಿ ಇರುವುದೆಲ್ಲವೂ ಕಾಣುವುದೆ? ಬಹುಶಃ ಇಲ್ಲ. ಯಾವ ಪದಾರ್ಥಗಳ ಮೂಲಕ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲವೊ ಅವುಗಳನ್ನು ಅರೆಪಾರದರ್ಶಕ (translucent) ಎನ್ನುವರು. ಆಹಾರ ಪದಾರ್ಥಗಳಲ್ಲಿ ಕೊಬ್ಬಿನ ಇರುವಿಕೆಯನ್ನು ಪರೀಕ್ಷಿಸಿದ್ದಾಗ ಹಾಳೆಯ ಮೇಲೆ ಕಂಡಂತಹ ಎಣ್ಣೆಯ ಕಲೆಗಳನ್ನು ಸ್ಮರಿಸಿಕೊಳ್ಳಿ. ಅದು ಕೂಡ ಅರೆಪಾರದರ್ಶಕ! ಅರೆಪಾರದರ್ಶಕ ಪದಾರ್ಥಗಳಿಗೆ ಇನ್ನೂ ಹೆಚ್ಚಿನ ಉದಾಹರಣೆಗಳನ್ನು ನೀವು ಯೋಚಿಸಬಲ್ಲಿರಾ?

ಆದ್ದರಿಂದ ನಾವು ಪದಾರ್ಥಗಳನ್ನು ಅಪಾರದರ್ಶಕ, ಪಾರದರ್ಶಕ ಮತ್ತು ಅರೆಪಾರದರ್ಶಕ ಎಂದು ಗುಂಪು ಮಾಡಬಹುದು.

ಕತ್ತಲಿನ ಜಾಗದಲ್ಲಿ ಟಾರ್ಚ್‍ನ ಗಾಜನ್ನು ನಿಮ್ಮ ಹಸ್ತದಿಂದ ಮುಚ್ಚಿ ಎಂದು ಪಹೇಲಿ ಸೂಚಿಸುತ್ತಾಳೆ. ಟಾರ್ಚನ್ನು ಹೊತ್ತಿಸಿ, ಹಸ್ತದ ಇನ್ನೊಂದು ಬದಿಯನ್ನು ವೀಕ್ಷಿಸಿ. ನಿಮ್ಮ ಹಸ್ತವು ಅಪಾರದರ್ಶಕವೆ? ಪಾರದರ್ಶಕವೆ? ಅಥವಾ ಅರೆಪಾರದರ್ಶಕವೆ? ಎಂಬುದನ್ನು ಅವಳು ತಿಳಿಯಲು ಬಯಸುತ್ತಾಳೆ.

ಮೇಲ್ನೋಟಕ್ಕೆ ಪದಾರ್ಥಗಳು ಭಿನ್ನವಾಗಿರುತ್ತವೆ ಎಂಬುದನ್ನು ಮತ್ತು ನೀರು ಅಥವಾ ಉಳಿದ ದ್ರವಗಳಲ್ಲಿ ಅವು ಹೇಗೆ ಬೆರೆಯುತ್ತವೆ ಎಂಬುದನ್ನು ನಾವು ಕಲಿತೆವು. ಅವು ನೀರಿನಲ್ಲಿ ತೇಲಬಹುದು ಅಥವಾ ಮುಳುಗಬಹುದು ಅಲ್ಲದೆ ಅವು ಪಾರದರ್ಶಕ, ಅಪಾರದರ್ಶಕ ಅಥವಾ ಅರೆಪಾರದರ್ಶಕವಾಗಿರಬಹುದು. ಪದಾರ್ಥಗಳನ್ನು ಅವುಗಳ ಗುಣಗಳ ಸಾಮ್ಯತೆ ಅಥವಾ ವ್ಯತ್ಯಾಸಗಳ ಆಧಾರದ ಮೇಲೆ ಗುಂಪು ಮಾಡಬಹುದು.

ಪದಾರ್ಥಗಳನ್ನು ನಾವು ಏಕೆ ಗುಂಪು ಮಾಡಬೇಕು? ನಿತ್ಯ ಜೀವನದಲ್ಲಿ ನಮ್ಮ ಅನುಕೂಲಕ್ಕಾಗಿ ಆಗಾಗ್ಗೆ ಪದಾರ್ಥಗಳನ್ನು ಗುಂಪು ಮಾಡುತ್ತೇವೆ. ಪದಾರ್ಥಗಳನ್ನು ಮನೆಯಲ್ಲಿ ಶೇಖರಣೆ ಮಾಡುವಾಗ ಸಾಮಾನ್ಯವಾಗಿ ಒಂದೇ ರೀತಿಯ ಪದಾರ್ಥಗಳನ್ನು ಒಟ್ಟಿಗೆ ಇಡುತ್ತೇವೆ. ಈ ರೀತಿಯ ವ್ಯವಸ್ಥೆಯಿಂದ ಅವುಗಳನ್ನು ಗುರುತಿಸಲು ಸುಲಭವಾಗುತ್ತದೆ. ಹಾಗೆಯೇ ಕಿರಾಣಿ ಅಂಗಡಿಯವನು ಎಲ್ಲಾ ವಿಧದ ಬಿಸ್ಕತ್ತುಗಳನ್ನು ಒಂದೆಡೆ, ಎಲ್ಲಾ ಸೋಪುಗಳನ್ನು ಇನ್ನೊಂದೆಡೆ ಹಾಗೆಯೇ ಬೇಳೆ ಕಾಳುಗಳನ್ನು ಬೇರೊಂದೆಡೆಯಲ್ಲಿ ಸಂಗ್ರಹಿಸಿರುತ್ತಾನೆ.

ಈ ರೀತಿ ಗುಂಪು ಮಾಡುವಿಕೆಯು ಉಪಯುಕ್ತ ಎನಿಸಿಕೊಳ್ಳಲು ಇನ್ನೊಂದು ಕಾರಣವಿದೆ. ಪದಾರ್ಥಗಳನ್ನು ಗುಂಪಾಗಿ ವಿಂಗಡಿಸುವುದರಿಂದ ಅವುಗಳ ಗುಣಗಳನ್ನು ತಿಳಿಯಲು ಮತ್ತು ಆ ಗುಣಗಳಲ್ಲಿ ಯಾವುದಾದರೂ ನಮೂನೆಯನ್ನು ಗುರುತಿಸಲು ಅನುಕೂಲವಾಗುತ್ತದೆ. ಇದರ ಬಗ್ಗೆ ಇನ್ನೂ ಹೆಚ್ಚಿನದನ್ನು ಮುಂದಿನ ತರಗತಿಗಳಲ್ಲಿ ಕಲಿಯೋಣ.

ಪ್ರಮುಖ ಪದಗಳು

ಕಠಿಣ
ಅಪಾರದರ್ಶಕ
ಕರಗದ
ಒರಟು
ಹೊಳಪು
ಕರಗುವ
ಪದಾರ್ಥ
ಅರೆಪಾರದರ್ಶಕ
ಲೋಹಗಳು
ಪಾರದರ್ಶಕ

ಸಾರಾಂಶ

* ನಮ್ಮ ಸುತ್ತಲಿರುವ ವಸ್ತುಗಳು ಹಲವಾರು ರೀತಿಯ ಪದಾರ್ಥಗಳಿಂದ ಮಾಡಲ್ಪಟ್ಟಿವೆ.
* ಒಂದು ಪದಾರ್ಥವನ್ನು ಹಲವಾರು ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಒಂದು ವಸ್ತುವನ್ನು ಒಂದೇ ಪದಾರ್ಥದಿಂದ ಅಥವಾ ಹಲವು ವಿಧದ ಪದಾರ್ಥಗಳಿಂದ ತಯಾರು ಮಾಡಲು ಸಾಧ್ಯವಿದೆ.
* ವಿವಿಧ ರೀತಿಯ ಪದಾರ್ಥಗಳು ವಿವಿಧ ಗುಣಗಳನ್ನು ಹೊಂದಿರುತ್ತವೆ.
* ಕೆಲವು ಸಾಮಗ್ರಿಗಳು ಮೇಲ್ನೋಟಕ್ಕೆ ಹೊಳಪನ್ನು ಹೊಂದಿರುತ್ತವೆ. ಹಾಗೆಯೇ ಉಳಿದವುಗಳಿಗೆ ಹೊಳಪು ಇರುವುದಿಲ್ಲ. ಕೆಲವು ಒರಟಾಗಿಯೂ, ಕೆಲವು ನಯವಾಗಿಯೂ ಇರುತ್ತವೆ. ಹಾಗೆಯೇ ಕೆಲವು ಪದಾರ್ಥಗಳು ಕಠಿಣವಾಗಿಯೂ ಇನ್ನು ಕೆಲವು ಮೃದುವಾಗಿಯೂ ಇರುತ್ತವೆ.
* ಕೆಲವು ಪದಾರ್ಥಗಳು ನೀರಿನಲ್ಲಿ ಕರಗಿದರೆ ಇನ್ನು ಕೆಲವು ಕರಗುವುದಿಲ್ಲ.
* ಗಾಜಿನಂತಹ ಕೆಲವು ಪದಾರ್ಥಗಳು ಪಾರದರ್ಶಕವಾಗಿವೆ ಮತ್ತು ಮರ, ಲೋಹದಂತಹ ಇನ್ನಿತರ ಪದಾರ್ಥಗಳು ಅಪಾರದರ್ಶಕವಾಗಿವೆ. ಕೆಲವು ಪದಾರ್ಥಗಳು ಅರೆಪಾರದರ್ಶಕವಾಗಿವೆ.
* ಪದಾರ್ಥಗಳಲ್ಲಿನ ಗುಣಗಳ ಸಾಮ್ಯತೆ ಮತ್ತು ವ್ಯತ್ಯಾಸಗಳ ಆಧಾರದ ಮೇಲೆ ಅವುಗಳನ್ನು ಗುಂಪು ಮಾಡಲಾಗುತ್ತದೆ.
* ನಮ್ಮ ಅನುಕೂಲಕ್ಕಾಗಿ ಮತ್ತು ಅವುಗಳ ಗುಣಗಳನ್ನು ಅಧ್ಯಯನ ಮಾಡಲು ವಸ್ತುಗಳನ್ನು ಗುಂಪು ಮಾಡಲಾಗುತ್ತದೆ.

ಸಂವೇದ ವಿಡಿಯೋ ಪಾಠಗಳು

ಆಹಾರ ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು – 6ನೇ ತರಗತಿ ವಿಜ್ಞಾನ

ಪೂರಕ ವಿಡಿಯೋಗಳು

https://youtu.be/m7cQPbJMcXg

6th Science in Kannada 6ನೇ ತರಗತಿ ವಿಜ್ಞಾನ 🔴 4. ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು | Part-1

https://youtu.be/eGoeWnFUSyU

6th Science in Kannada 6ನೇ ತರಗತಿ ವಿಜ್ಞಾನ 🔴 4. ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು | Part-2

https://youtu.be/cFgBy-iQs1M

6th Science in Kannada 6ನೇ ತರಗತಿ ವಿಜ್ಞಾನ 🔴 4. ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು | Part-3

https://youtu.be/7GUpWZDGELE

6th Science in Kannada 6ನೇ ತರಗತಿ ವಿಜ್ಞಾನ 🔴 4. ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು | Part-4

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.