ಸಸ್ಯಗಳಲ್ಲಿ ಸಂತಾನೋತ್ಪತ್ತಿ – ಅಧ್ಯಾಯ – 12
ತನ್ನನ್ನೇ ಹೋಲುವ ಜೀವಿಯನ್ನು ಉತ್ಪತ್ತಿ ಮಾಡುವುದು ಎಲ್ಲಾ ಜೀವಿಗಳ ಪ್ರಮುಖ ಲಕ್ಷಣವಾಗಿದೆ. ಈಗಾಗಲೇ 6ನೇ ತರಗತಿಯಲ್ಲಿ ನೀವು ಇದನ್ನು ಕಲಿತಿರುವಿರಿ. ಪೋಷಕ ಜೀವಿಗಳಿಂದ ಹೊಸ ಮರಿಜೀವಿಗಳು ಹುಟ್ಟುವುದಕ್ಕೆ ಸಂತಾನೋತ್ಪತ್ತಿ (reproduction) ಎನ್ನುವರು. ಆದರೆ ಸಸ್ಯಗಳು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ? ಈ ಅಧ್ಯಾಯದಲ್ಲಿ ಸಸ್ಯಗಳಲ್ಲಿ ಸಂತಾನೋತ್ಪತ್ತಿಯ ವಿವಿಧ ವಿಧಾನಗಳನ್ನು ಕಲಿಯೋಣ.
12.1 ಸಂತಾನೋತ್ಪತ್ತಿ ವಿಧಾನಗಳು
ಹೂ ಬಿಡುವ ಸಸ್ಯಗಳ ವಿವಿಧ ಭಾಗಗಳ ಬಗ್ಗೆ 6ನೇ ತರಗತಿಯಲ್ಲಿ ನೀವು ಕಲಿತಿರುವಿರಿ. ಸಸ್ಯದ ಬೇರೆ ಬೇರೆ ಭಾಗಗಳನ್ನು ಪಟ್ಟಿ ಮಾಡಿ, ಪ್ರತಿಯೊಂದರ ಕಾರ್ಯವನ್ನು ಬರೆಯಲು ಪ್ರಯತ್ನಿಸಿ. ಹೆಚ್ಚಿನ ಸಸ್ಯಗಳು ಬೇರು, ಕಾಂಡ ಮತ್ತು ಎಲೆಗಳನ್ನು ಹೊಂದಿರುತ್ತವೆ. ಇವುಗಳಿಗೆ ಸಸ್ಯದ ಕಾಯಿಕ ಭಾಗಗಳು (vegetative parts) ಎನ್ನುವರು. ಸ್ವಲ್ಪ ಅವಧಿಯ ಬೆಳವಣಿಗೆಯ ನಂತರ ಹೆಚ್ಚಿನ ಸಸ್ಯಗಳು ಹೂ ಬಿಡುತ್ತವೆ. ವಸಂತ ಋತುವಿನಲ್ಲಿ ಮಾವಿನಮರ ಹೂ ಬಿಡುವುದನ್ನು ನೀವು ನೋಡಿರಬಹುದು. ಬೇಸಿಗೆಯಲ್ಲಿ ನಾವು ತಿಂದು ಆನಂದಿಸುವಂತಹ ರಸಭರಿತ ಮಾವಿನ ಹಣ್ಣುಗಳು ಈ ಹೂಗಳಿಂದಲೇ ಉಂಟಾಗಿರುತ್ತವೆ. ನಾವು ಹಣ್ಣನ್ನು ತಿಂದು ಸಾಮಾನ್ಯವಾಗಿ ಬೀಜಗಳನ್ನು ಎಸೆಯುತ್ತೇವೆ. ಬೀಜಗಳು ಮೊಳಕೆಯೊಡೆದು ಹೊಸ ಸಸ್ಯಗಳಾಗುತ್ತವೆ. ಸಸ್ಯಗಳಲ್ಲಿ ಹೂಗಳ ಕಾರ್ಯವೇನು? ಸಸ್ಯಗಳಲ್ಲಿ ಹೂಗಳು ಸಂತಾನೋತ್ಪತ್ತಿಯ ಕೆಲಸವನ್ನು ಮಾಡುತ್ತವೆ. ಹೂಗಳು ಸಂತಾನೋತ್ಪತ್ತಿಯ ಭಾಗ (reproduction part) ಗಳಾಗಿವೆ.
ಸಸ್ಯಗಳಲ್ಲಿ ಮರಿಜೀವಿಗಳನ್ನು ಉತ್ಪತ್ತಿ ಮಾಡುವ ಹಲವಾರು ವಿಧಾನಗಳಿವೆ. ಅವುಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. (i) ಅಲೈಂಗಿಕ ಮತ್ತು (ii) ಲೈಂಗಿಕ ಸಂತಾನೋತ್ಪತ್ತಿ. ಅಲೈಂಗಿಕ ಸಂತಾನೋತ್ಪತ್ತಿಯಲ್ಲಿ ಬೀಜಗಳಿಲ್ಲದೆ ಹೊಸಸಸ್ಯಗಳನ್ನು ಪಡೆಯಬಹುದು. ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಬೀಜಗಳ ಮೂಲಕ ಹೊಸ ಸಸ್ಯಗಳನ್ನು ಪಡೆಯಬಹುದು.
ಅಲೈಂಗಿಕ ಸಂತಾನೋತ್ಪತ್ತಿ
ಅಲೈಂಗಿಕ ಸಂತಾನೋತ್ಪತ್ತಿ (asexual reproduction) ಯಲ್ಲಿ ಬೀಜಗಳ ಉತ್ಪತ್ತಿ ಇಲ್ಲದೆ ಹೊಸ ಸಸ್ಯಗಳು ಹುಟ್ಟುತ್ತವೆ.
ಕಾಯಜ ಸಂತಾನೋತ್ಪತ್ತಿ
ಇದು ಅಲೈಂಗಿಕ ಸಂತಾನೋತ್ಪತ್ತಿಯ ಒಂದು ವಿಧಾನವಾಗಿದೆ. ಇದರಲ್ಲಿ ಬೇರು, ಕಾಂಡ, ಎಲೆ ಮತ್ತು ಮೊಗ್ಗುಗಳಿಂದ ಹೊಸಗಿಡಗಳು ಹುಟ್ಟುತ್ತವೆ. ಸಸ್ಯದ ಕಾಯಜ ಭಾಗಗಳಿಂದ ಹೊಸ ಸಸ್ಯಗಳು ಹುಟ್ಟುವ ಕಾರಣ, ಈ ವಿಧಾನಕ್ಕೆ ಕಾಯಜ ಸಂತಾನೋತ್ಪತ್ತಿ (vegetative propagation) ಎನ್ನುವರು.
ಚಟುವಟಿಕೆ 12.1
ಗುಲಾಬಿ ಅಥವಾ ಸಂಪಿಗೆ ಗಿಡದ ಕೊಂಬೆಯೊಂದನ್ನು ಗಿಣ್ಣು ಸಹಿತ ಕತ್ತರಿಸಿ. ಕತ್ತರಿಸಿದ ಗಿಡದ ಭಾಗಕ್ಕೆ ಕೊಂಬೆಯ ತುಂಡು ಎನ್ನುವರು. ಇದನ್ನು ಮಣ್ಣಿನಲ್ಲಿ ನೆಡಿ. ಕಾಂಡ/ಕೊಂಬೆಯಲ್ಲಿ ಎಲೆ ಮೂಡುವ ಭಾಗವನ್ನು ಗಿಣ್ಣು (node) ಎನ್ನುವರು (ಚಿತ್ರ 12.1). ಅದಕ್ಕೆ ಪ್ರತಿದಿನವೂ ನೀರು ಹಾಕಿ, ಬೆಳವಣಿಗೆಯನ್ನು ಗಮನಿಸಿ. ಬೇರು ಮತ್ತು ಹೊಸ ಎಲೆಗಳು ಬರುವುದಕ್ಕೆ ಎಷ್ಟು ದಿನಗಳನ್ನು ತೆಗೆದುಕೊಂಡಿತು ಎಂಬುದನ್ನು ಗಮನಿಸಿ, ದಾಖಲಿಸಿ. ಮನಿಪ್ಲಾಂಟ್ ಗಿಡವನ್ನು ನೀರಿನ ಜಾಡಿಯಲ್ಲಿ ಬೆಳೆಸಿ, ಇದೇ ಚಟುವಟಿಕೆಯನ್ನು ಪುನರಾವರ್ತಿಸಿ. ನಿಮ್ಮ ವೀಕ್ಷಣೆಗಳನ್ನು ದಾಖಲಿಸಿ.
ಮೊಗ್ಗುಗಳು ಹೂವಾಗಿ ಅರಳುವುದನ್ನು ನೀವು ನೋಡಿರಬಹುದು. ಹೂವಿನ ಮೊಗ್ಗುಗಳಲ್ಲದೆ, ಎಲೆ ಕಂಕುಳಲ್ಲೂ (ಗಿಣ್ಣಿಗೆ ಎಲೆಯು ಜೋಡಿಸಲ್ಪಟ್ಟ ಭಾಗವಾದ) ಮೊಗ್ಗುಗಳಿರುತ್ತವೆ. ಮುಂದೆ ಇವು ಕಾಂಡಗಳಾಗಿ ಬೆಳೆಯುತ್ತವೆ. ಇವುಗಳಿಗೆ ಕಾಯಿಕ ಮೊಗ್ಗುಗಳು (vegetative buds) ಎನ್ನುವರು (ಚಿತ್ರ 12.2). ಒಂದು ಗಿಡ್ಡ ಕಾಂಡ ಹಾಗೂ ಕಾಂಡದ ಸುತ್ತ ಮಡಚಿರುವ ಸ್ಥಿತಿಯಲ್ಲಿ ಕಂಡುಬರುವ ಒಂದರ ಮೇಲೊಂದು ಮುಚ್ಚಿರುವ ಎಳೆಯ ಎಲೆಗಳನ್ನು ಕಾಯಿಕ ಮೊಗ್ಗು ಒಳಗೊಂಡಿದೆ. ಕಾಯಿಕ ಮೊಗ್ಗುಗಳಿಂದಲೂ ಹೊಸ ಗಿಡಗಳು ಹುಟ್ಟಬಹುದು.
ಚಟುವಟಿಕೆ 12.2
ಒಂದು ತಾಜಾ ಅಲೂಗಡ್ಡೆಯನ್ನು ತೆಗೆದುಕೊಳ್ಳಿ. ವರ್ಧಕ ಮಸೂರದ ಸಹಾಯದಿಂದ ಅದರ ಮೇಲಿರುವ ಗಾಯಗಳನ್ನು ಗಮನಿಸಿ. ನಿಮಗೆ ಅದರಲ್ಲಿ ಕಾಯಿಕ ಮೊಗ್ಗುಗಳು ಕಂಡುಬರುವುದು. ಈ ಗಾಯಗಳಿಗೆ ಕಣ್ಣುಗಳು ಎಂದು ಕರೆಯುವರು. ಪ್ರತಿಯೊಂದು ಭಾಗದಲ್ಲಿಯು ಒಂದೊಂದು ಕಣ್ಣಿರುವಂತೆ ಆಲೂಗಡ್ಡೆಯನ್ನು ಕತ್ತರಿಸಿ. ಅವುಗಳನ್ನು ಮಣ್ಣಿನಲ್ಲಿ ನೆಡಿ. ಅವುಗಳಿಗೆ ಪ್ರತಿದಿನವೂ ನೀರು ಹಾಕಿ. ಕೆಲವು ದಿನಗಳವರೆಗೆ ಅವುಗಳ ಬೆಳವಣಿಗೆಯನ್ನು ಗಮನಿಸಿ. ನೀವೇನು ಗಮನಿಸುವಿರಿ? ಇದೇ ರೀತಿ ನೀವು ಶುಂಠಿ ಅಥವಾ ಅರಿಶಿಣವನ್ನೂ ಬೆಳೆಸಬಹುದು (ಚಿತ್ರ 12.3).
ಬ್ರಯೋಫಿಲ್ಲಮ್ (ಮೊಳಕೆಯೊಡೆವ ಎಲೆಯ ಗಿಡ) ಸಸ್ಯದಲ್ಲಿ ಎಲೆಯ ಬದಿಯ ಉದ್ದಕ್ಕೂ ಎಲೆ ಮೊಗ್ಗುಗಳಿರುತ್ತವೆ (ಚಿತ್ರ 12.4). ಒದ್ದೆ ಮಣ್ಣಿನ ಮೇಲೆ ಈ ಎಲೆ ಬಿದ್ದಾಗ ಪ್ರತಿಯೊಂದು ಮೊಗ್ಗು ಹೊಸಸಸ್ಯವನ್ನು ಉಂಟುಮಾಡಬಲ್ಲದು.
ಕೆಲವು ಗಿಡಗಳ ಬೇರು ಕೂಡ ಹೊಸ ಸಸ್ಯಗಳನ್ನು ಉತ್ಪತ್ತಿ ಮಾಡಬಹುದು. ಇದಕ್ಕೆ ಸಿಹಿ ಗೆಣಸು ಮತ್ತು ಡೇರೆ ಹೂ ಉದಾಹರಣೆಗಳಾಗಿವೆ.
ಕ್ಯಾಕ್ಟಸ್‍ನಂಥ ಗಿಡಗಳ ಭಾಗಗಳು ಮೂಲ ಸಸ್ಯದಿಂದ ಬೇರ್ಪಟ್ಟಾಗ ಹೊಸ ಸಸ್ಯಗಳನ್ನು ಉತ್ಪತ್ತಿ ಮಾಡುತ್ತವೆ. ಬೇರ್ಪಟ್ಟ ಪ್ರತಿಯೊಂದು ಭಾಗವೂ ಹೊಸ ಗಿಡವಾಗಿ ಬೆಳೆಯಬಲ್ಲದು.
ಕಾಯಜ ಸಂತಾನೋತ್ಪತ್ತಿಯಿಂದ ಉಂಟಾದ ಗಿಡಗಳು ಕಡಿಮೆ ಸಮಯದಲ್ಲಿ ಬೆಳೆಯುತ್ತವೆ. ಬೀಜಗಳಿಂದ ಹುಟ್ಟಿದ ಗಿಡಗಳಿಗಿಂತ ಬೇಗನೆ ಹೂ ಮತ್ತು ಹಣ್ಣುಗಳನ್ನು ಬಿಡುತ್ತವೆ. ಈ ವಿಧಾನದಲ್ಲಿ ಒಂದೇ ಪೋಷಕ ಸಸ್ಯದಿಂದ ಉತ್ಪತ್ತಿಯಾಗುವ ಕಾರಣ ಹೊಸಸಸ್ಯಗಳು ಪೋಷಕ ಸಸ್ಯದ ತದ್ರೂಪವಾಗಿರುತ್ತವೆ.
ಲೈಂಗಿಕ ಸಂತಾನೋತ್ಪತ್ತಿಯಿಂದ ಉಂಟಾದ ಸಸ್ಯಗಳು ಎರಡೂ ಪೋಷಕ ಸಸ್ಯಗಳ ಲಕ್ಷಣಗಳನ್ನು ಹೊಂದಿರುತ್ತವೆ ಎಂಬುದನ್ನು ನೀವು ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕಲಿಯುವಿರಿ. ಲೈಂಗಿಕ ಸಂತಾನೋತ್ಪತ್ತಿಯಿಂದಾಗಿ ಬೀಜಗಳು ಉಂಟಾಗುತ್ತವೆ.
ಮೊಗ್ಗುವಿಕೆ
ಸೂಕ್ಷ್ಮದರ್ಶಕದ ಅಡಿಯಲ್ಲಿ ಮಾತ್ರ ಯೀಸ್ಟ್‍ನಂತಹ ಸೂಕ್ಷ್ಮ ಗಾತ್ರದ ಜೀವಿಗಳನ್ನು ನೋಡಲು ಸಾಧ್ಯ ಎಂಬುದನ್ನು ನೀವು ಈಗಾಗಲೇ ಕಲಿತಿರುವಿರಿ. ಸಾಕಷ್ಟು ಪೋಷಕಗಳನ್ನು ಒದಗಿಸಿದರೆ ಇವುಗಳು ಕೆಲವೇ ಗಂಟೆಗಳಲ್ಲಿ ವಿಭಜನೆಗೊಂಡು ಸಂಖ್ಯೆಯಲ್ಲಿ ಹೆಚ್ಚಳಗೊಳ್ಳುತ್ತವೆ. ಯೀಸ್ಟ್ ಒಂದು ಏಕಕೋಶ ಜೀವಿ ಎಂಬುದನ್ನು ನೆನಪಿಸಿಕೊಳ್ಳಿ. ಅವು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ ಎಂಬುದನ್ನು ನೋಡೋಣ.
ಚಟುವಟಿಕೆ 12.3
(ಶಿಕ್ಷಕರಿಂದ ಪ್ರದರ್ಶಿಸಬೇಕಾಗಿರುವುದು)
ಬೇಕರಿಯಿಂದ ಅಥವಾ ಔಷಧಿ ಅಂಗಡಿಯಿಂದ ಯೀಸ್ಟ್‍ನ ಬಿಲ್ಲೆ ಅಥವಾ ಯೀಸ್ಟ್ ಪುಡಿಯನ್ನು ಖರೀದಿಸಿ. ಒಂದು ಚಿಟಿಕೆ ಯೀಸ್ಟ್ ಪುಡಿಯನ್ನು ನೀರಿರುವ ಒಂದು ಸಣ್ಣ ಪಾತ್ರೆಯಲ್ಲಿ ಹಾಕಿ. ಒಂದು ಚಮಚ ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ಕಲಕಿ, ಸಕ್ಕರೆಯನ್ನು ಕರಗಿಸಿ. ಈ ಪಾತ್ರೆಯನ್ನು ಕೋಣೆಯ ಬೆಚ್ಚಗಿನ ಭಾಗದಲ್ಲಿ ಇಡಿ. ಒಂದು ಗಂಟೆಯ ನಂತರ ಒಂದು ಗಾಜಿನ ಪಟ್ಟಿಯ ಮೇಲೆ ಈ ಪಾತ್ರೆಯ ನೀರಿನ ಒಂದು ಹನಿಯನ್ನು ಹಾಕಿ, ಸೂಕ್ಷ್ಮದರ್ಶಕದ ಅಡಿಯಲ್ಲಿ ಗಮನಿಸಿ. ನೀವು ಏನನ್ನು ಗಮನಿಸುವಿರಿ? ಹೊಸ ಯೀಸ್ಟ್ ಕೋಶಗಳು ಉಂಟಾಗುವುದು ನಿಮಗೆ ಕಾಣಸಿಗಬಹುದು (ಚಿತ್ರ 12.5).
ಯೀಸ್ಟ್ ಕೋಶದ ಮೇಲ್ಮೈಯಿಂದ ಹೊರಚಾಚುವ ಸಣ್ಣ ಗಂಟಿನಾಕಾರದ ಬೆಳವಣಿಗೆಗೆ ಮೊಗ್ಗು (bud) ಎನ್ನುವರು. ಈ ಮೊಗ್ಗು ನಿಧಾನವಾಗಿ ಬೆಳೆದು ತಾಯಿ ಕೋಶದಿಂದ ಬೇರ್ಪಡುತ್ತದೆ ಮತ್ತು ಹೊಸ ಯೀಸ್ಟ್ ಕೋಶವಾಗಿ ಬೆಳೆಯುತ್ತದೆ. ಹೊಸ ಯೀಸ್ಟ್ ಬೆಳೆದು, ಪ್ರೌಢಾವಸ್ಥೆಯನ್ನು ತಲುಪಿ ಹೆಚ್ಚಿನ ಯೀಸ್ಟ್ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ. ಕೆಲವೊಮ್ಮೆ ಒಂದರ ಮೇಲೊಂದು ಮೊಗ್ಗು ಮೂಡಿ ಮೊಗ್ಗುಗಳ ಸರಪಳಿಯನ್ನು ಉಂಟುಮಾಡುತ್ತದೆ. ಈ ಪ್ರಕ್ರಿಯೆ ಮುಂದುವರಿದರೆ ಸ್ವಲ್ಪ ಸಮಯದಲ್ಲಿ ಅಧಿಕ ಸಂಖ್ಯೆಯ ಯೀಸ್ಟ್ ಕೋಶಗಳು ಉತ್ಪತ್ತಿಯಾಗುತ್ತವೆ.
ತುಂಡಾಗುವಿಕೆ
ನಿಂತಿರುವ ನೀರಿನಲ್ಲಿ ಅಥವಾ ಕೊಳದಲ್ಲಿ ಅಂಟಾದ ಹಸಿರು ತೇಪೆ (patch) ಗಳನ್ನು ನೀವು ನೋಡಿರಬಹುದು. ಇವು ಶೈವಲಗಳು (algae). ಪೋಷಕಗಳು ಮತ್ತು ನೀರು ದೊರಕಿದಾಗ ಇವು ಶೀಘ್ರವಾಗಿ ಬೆಳೆದು ತುಂಡಾಗುವಿಕೆ (fragmentation) ಪ್ರಕ್ರಿಯೆಯಿಂದ ಸಂಖ್ಯೆಯಲ್ಲಿ ಅಧಿಕಗೊಳ್ಳುತ್ತವೆ. ಒಂದು ಶೈವಲ ಎರಡು ಅಥವಾ ಹೆಚ್ಚು ತುಂಡುಗಳಾಗುತ್ತದೆ. ಈ ತುಂಡುಗಳು ಹೊಸ ಜೀವಿಗಳಾಗಿ ಬೆಳೆಯುತ್ತವೆ (ಚಿತ್ರ 12.6). ಈ ಪ್ರಕ್ರಿಯೆ ಮುಂದುವರೆದು ಅಲ್ಪಾವಧಿಯಲ್ಲಿಯೆ ವಿಸ್ತಾರವಾದ ಪ್ರದೇಶವನ್ನು ಇವು ಆವರಿಸಿಕೊಂಡು ಬಿಡುತ್ತವೆ.
ಬೀಜಕ ಉತ್ಪತ್ತಿ
ಗಾಳಿಯಲ್ಲಿರುವ ಬೀಜಕಗಳ (spores) ಮೂಲಕ ಒಂದು ಬ್ರೆಡ್ಡಿನ ಚೂರಿನ ಮೇಲೆ ಶಿಲೀಂಧ್ರವು ಬೆಳೆಯುತ್ತದೆ ಎಂಬುದನ್ನು 1ನೇ ಅಧ್ಯಾಯದಲ್ಲಿ ನೀವು ಕಲಿತಿರುವಿರಿ. ಚಟುವಟಿಕೆ 1.2ನ್ನು ಪುನರಾವರ್ತಿಸಿ. ಬ್ರೆಡ್ಡಿನ ಮೇಲೆ ಹತ್ತಿಯ ಬಲೆಯಂತಹ ರಚನೆಯಲ್ಲಿ ಬೀಜಕಗಳನ್ನು ಗಮನಿಸಿ. ಬಿಡುಗಡೆಗೊಂಡ ನಂತರ ಈ ಬೀಜಕಗಳು ಗಾಳಿಯಲ್ಲಿ ತೇಲುತ್ತಿರುತ್ತವೆ. ಹಗುರವಾಗಿ ಇರುವ ಕಾರಣ ಅವುಗಳು ಬಹಳ ದೂರ ಕ್ರಮಿಸಬಲ್ಲವು.
ಬೀಜಕಗಳು ಅಲೈಂಗಿಕ ಸಂತಾನೋತ್ಪತ್ತಿಯ ಕಾಯಗಳು. ಹೆಚ್ಚು ಉಷ್ಣ ಮತ್ತು ಕಡಿಮೆ ಆದ್ರ್ರತೆಯಂತಹ ಅನಾನುಕೂಲ ಪರಿಸ್ಥಿತಿಯನ್ನು ಎದುರಿಸುವ ಸಲುವಾಗಿ ಪ್ರತಿ ಬೀಜಕವು ಗಟ್ಟಿಯಾದ ರಕ್ಷಣಾ ಕವಚ/ಪದರವನ್ನು ಹೊಂದಿರುತ್ತದೆ. ಹೀಗಾಗಿ ಅವು ಬಹಳ ಸಮಯದವರೆಗೆ ಬದುಕಬಲ್ಲವು. ಅನುಕೂಲ ಪರಿಸ್ಥಿತಿ ದೊರಕಿದಾಗ ಬೀಜಕ ಮೊಳಕೆಯೊಡೆದು ಹೊಸ ಜೀವಿಯಾಗಿ ಬೆಳೆಯುತ್ತದೆ. ಹಾವಸೆ (moss) ಮತ್ತು ಜರಿಗಿಡ (fern) ಗಳಂತಹ ಸಸ್ಯಗಳು ಕೂಡ (ಚಿತ್ರ 12.8) ಬೀಜಕಗಳಿಂದ ಸಂತಾನೋತ್ಪತ್ತಿ ಮಾಡುತ್ತವೆ.
12.2 ಲೈಂಗಿಕ ಸಂತಾನೋತ್ಪತ್ತಿ
ಹೂವಿನ ರಚನೆಯ ಬಗ್ಗೆ ಈ ಮೊದಲು ನೀವು ಕಲಿತಿರುವಿರಿ. ಸಸ್ಯದ ಲೈಂಗಿಕ ಸಂತಾನೋತ್ಪತ್ತಿಯ ಭಾಗ ಹೂಗಳೆಂದು ನಿಮಗೆ ತಿಳಿದಿದೆ. ಕೇಸರಗಳು (stamens) ಪುರುಷ ಪ್ರಜನನ ಭಾಗ ಹಾಗೂ ಶಲಾಕೆ (pistil) ಹೆಣ್ಣು ಪ್ರಜನನ ಭಾಗವಾಗಿದೆ (ಚಿತ್ರ 12.9).
ಚಟುವಟಿಕೆ 12.4
ಸಾಸಿವೆ/ದಾಸವಾಳ/ಪೆಟ್ಯುನಿಯಾ ಹೂವನ್ನು ತೆಗೆದುಕೊಂಡು ಅದರ ಪ್ರಜನನ (reproductive) ಭಾಗಗಳನ್ನು ಬೇರ್ಪಡಿಸಿ. ಕೇಸರ ಹಾಗೂ ಶಲಾಕೆಯ ವಿವಿಧ ಭಾಗಗಳನ್ನು ಅಧ್ಯಯನ ಮಾಡಿ.
ಕೇಸರ ಮತ್ತು ಶಲಾಕೆ-ಇವುಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಹೊಂದಿರುವ ಹೂಗಳನ್ನು ಏಕಲಿಂಗಿ ಹೂಗಳು (unisexual flowers) ಎನ್ನುವರು. ಕೇಸರ ಮತ್ತು ಶಲಾಕೆ ಎರಡನ್ನೂ ಹೊಂದಿರುವ ಹೂಗಳನ್ನು ದ್ವಿಲಿಂಗಿ ಹೂಗಳು (bisexual flowers) ಎನ್ನುವರು. ಜೋಳ, ಪಪ್ಪಾಯ ಮತ್ತು ಸೌತೆಕಾಯಿ – ಏಕಲಿಂಗಿ ಹೂಗಳನ್ನು ಮತ್ತು ಸಾಸಿವೆ, ಗುಲಾಬಿ ಮತ್ತು ಪೆಟ್ಯುನಿಯಾಗಳು ದ್ವಿಲಿಂಗಿ ಹೂಗಳನ್ನು ಹೊಂದಿರುತ್ತವೆ. ಪುರುಷ ಮತ್ತು ಹೆಣ್ಣು ಏಕಲಿಂಗಿ ಹೂಗಳು ಒಂದೇ ಸಸ್ಯದಲ್ಲಿ ಅಥವಾ ಬೇರೆ ಬೇರೆ ಸಸ್ಯಗಳಲ್ಲಿ ಇರಬಹುದು.
ಪುಂಕೇಸರದ ಕೇಸರದಂಡ ಮತ್ತು ಪರಾಗಕೋಶವನ್ನು ಗುರ್ತಿಸಬಲ್ಲಿರ? [ಚಿತ್ರ 12.9 (ಎ)]. ಪರಾಗ ಕೋಶವು ಪುರುಷ ಲಿಂಗಾಣು (male gamete) ಗಳನ್ನು ಉತ್ಪತ್ತಿ ಮಾಡುವ ಪರಾಗರೇಣುಗಳನ್ನು ಹೊಂದಿರುತ್ತದೆ. ಶಲಾಕೆಯು ಶಲಾಕಾಗ್ರ, ಶಲಾಕನಳಿಕೆ ಮತ್ತು ಅಂಡಾಶಯವನ್ನು ಹೊಂದಿರುತ್ತದೆ. ಅಂಡಾಶಯದಲ್ಲಿ ಒಂದು ಅಥವಾ ಹೆಚ್ಚು ಅಂಡಕಗಳಿರುತ್ತವೆ. ಹೆಣ್ಣು ಲಿಂಗಾಣು (female gamete) ಅಥವಾ ಅಂಡ (egg) ವು ಅಂಡಕದಲ್ಲಿ ಉತ್ಪತ್ತಿಯಾಗುತ್ತದೆ [ಚಿತ್ರ 12.9 (ಬಿ)]. ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಪುರುಷ ಮತ್ತು ಹೆಣ್ಣು ಲಿಂಗಾಣುಗಳು ಸಂಯೋಗಗೊಂಡು ಯುಗ್ಮಜ (zygote) ವಾಗುತ್ತದೆ.
ಪರಾಗಸ್ಪರ್ಶ
ಸಾಮಾನ್ಯವಾಗಿ ಪರಾಗರೇಣುಗಳು ಅವು ಒಣಗುವುದನ್ನು ತಡೆಯಬಲ್ಲ ಕಠಿಣ ರಕ್ಷಣಾ ಕವಚ/ಪದರವನ್ನು ಹೊಂದಿರುತ್ತವೆ. ಪರಾಗರೇಣುಗಳು ಹಗುರವಾಗಿದ್ದು ಗಾಳಿ ಅಥವಾ ನೀರಿನಲ್ಲಿ ಸಾಗಾಣಿಕೆಯಾಗುತ್ತವೆ.
ಕೀಟಗಳು ಹೂಗಳ ಮೇಲೆ ಕುಳಿತು ತಮ್ಮ ದೇಹದೊಂದಿಗೆ ಪರಾಗರೇಣುಗಳನ್ನು ಒಯ್ಯುತ್ತವೆ. ಅದೇ ಜಾತಿಯ ಹೂವಿನ ಶಲಾಕಾಗ್ರದ ಮೇಲೆ ಕೆಲವು ಪರಾಗರೇಣುಗಳು ಬೀಳಬಹುದು. ಒಂದು ಹೂವಿನ ಕೇಸರದಿಂದ (ಪರಾಗಕೋಶದಿಂದ) ಶಲಾಕಾಗ್ರಕ್ಕೆ ಪರಾಗವು ವರ್ಗಾವಣೆ ಆಗುವ ಪ್ರಕ್ರಿಯೆಗೆ ಪರಾಗಸ್ಪರ್ಶ (pollination) ಎನ್ನುವರು.
ಒಂದು ವೇಳೆ ಅದೇ ಹೂವಿನ ಅಥವಾ ಅದೇ ಗಿಡದ ಮತ್ತೊಂದು ಹೂವಿನ ಶಲಾಕಾಗ್ರಕ್ಕೆ ಪರಾಗವು ಬೀಳುವ ಪ್ರಕ್ರಿಯೆಗೆ ಸ್ವಕೀಯ ಪರಾಗಸ್ಪರ್ಶ (self pollination) ಎನ್ನುವರು. ಒಂದು ಹೂವಿನ ಪರಾಗವು ಅದೇ ಜಾತಿಯ ಬೇರೊಂದು ಗಿಡದ ಹೂವಿನ ಶಲಾಕಾಗ್ರಕ್ಕೆ ವರ್ಗಾವಣೆಯಾಗುವ ಪ್ರಕ್ರಿಯೆಗೆ ಪರಕೀಯ ಪರಾಗಸ್ಪರ್ಶ (cross pollination) ಎನ್ನುವರು [ಚಿತ್ರ 12.10 (ಎ) ಮತ್ತು (ಬಿ)].
ನಿಷೇಚನ
ಲಿಂಗಾಣುಗಳು ಸಂಯೋಗಗೊಂಡು ಉಂಟಾಗುವ ಕೋಶವನ್ನು ಯುಗ್ಮಜ ಎನ್ನುವರು.
ಯುಗ್ಮಜವನ್ನುಂಟು ಮಾಡಲು ಪುರುಷ ಲಿಂಗಾಣು ಮತ್ತು ಹೆಣ್ಣು ಲಿಂಗಾಣು ಸಂಯೋಗಗೊಳ್ಳುವ ಪ್ರಕ್ರಿಯೆಗೆ ನಿಷೇಚನ (fertilisation) ಎನ್ನುವರು (ಚಿತ್ರ 12.11). ಯುಗ್ಮಜವು ಮುಂದೆ ಭ್ರೂಣ (embryo) ವಾಗಿ ಬೆಳೆಯುತ್ತದೆ.
12.3 ಹಣ್ಣು ಮತ್ತು ಬೀಜ ಉಂಟಾಗುವುದು
ನಿಷೇಚನದ ನಂತರ, ಹೂವಿನ ಉಳಿದೆಲ್ಲ ಭಾಗಗಳು ಉದುರಿಹೋಗಿ ಅಂಡಾಶಯ ಹಣ್ಣಾಗಿ ಬೆಳೆಯುತ್ತದೆ. ಬಲಿತ ಅಂಡಾಶಯವನ್ನು ಹಣ್ಣು ಎನ್ನುವರು. ಬೀಜಗಳು ಅಂಡಕಗಳಿಂದ ಬೆಳೆಯುತ್ತವೆ. ಬೀಜವು ಬೀಜಪೊರೆ ಎಂಬ ರಕ್ಷಣಾ ಕವಚದಿಂದ ಆವೃತವಾಗಿರುವ ಭ್ರೂಣವನ್ನು ಹೊಂದಿರುತ್ತದೆ.
ಮಾವು, ಕಿತ್ತಳೆಯಂಥ ಹಣ್ಣುಗಳು ತಿರುಳುಳ್ಳವು ಹಾಗೂ ರಸಭರಿತವಾಗಿರುತ್ತವೆ. ಬಾದಾಮಿ, ವಾಲ್‍ನಟ್/ಅಕ್ರೋಟ್‍ನಂಥ ಇನ್ನೂ ಕೆಲವು ಹಣ್ಣುಗಳು ಗಟ್ಟಿಯಾಗಿರುತ್ತವೆ [ಚಿತ್ರ 12.12 (ಎ) ಮತ್ತು (ಬಿ)].
12.4 ಬೀಜ ಪ್ರಸರಣ
ಬೀಜಗಳು ಬೇರೆ ಬೇರೆ ಜಾಗಗಳಿಗೆ ಪ್ರಸರಣಗೊಳ್ಳುವುದರಿಂದ ಪ್ರಕೃತಿಯಲ್ಲಿ ವಿಭಿನ್ನ ಜಾಗಗಳಲ್ಲಿ ಒಂದೇ ಜಾತಿಯ ಗಿಡಗಳು ಬೆಳೆಯುವುದನ್ನು ಕಾಣಬಹುದು. ಕೆಲವೊಮ್ಮೆ ಕಾಡಿನಲ್ಲಿ ಹೊಲದಲ್ಲಿ ಅಥವಾ ಉದ್ಯಾನವನದಲ್ಲಿ ವಿಹಾರದ ನಂತರ, ನಿಮ್ಮ ಬಟ್ಟೆಗಳಿಗೆ ಬೀಜಗಳು, ಹಣ್ಣುಗಳು ಅಂಟಿಕೊಂಡಿರುವುದನ್ನು ನೀವು ನೋಡಿರಬಹುದು. ಅವು ಬಟ್ಟೆಗಳಿಗೆ ಅಂಟಿಕೊಂಡಿರುವುದು ಹೇಗೆ ಎಂದು ನೀವು ಗಮನಿಸಲು ಪ್ರಯತ್ನಿಸಿದ್ದೀರ?
ಒಂದು ಗಿಡದ ಎಲ್ಲಾ ಬೀಜಗಳು ಒಂದೇ ಜಾಗದಲ್ಲಿ ಉದುರಿ ಅಲ್ಲೇ ಬೆಳೆದರೆ ಏನಾಗಬಹುದು? ಸೂರ್ಯನ ಬೆಳಕು, ನೀರು, ಖನಿಜಗಳು ಮತ್ತು ಬೆಳೆಯಲು ಅಗತ್ಯವಿರುವ ಸ್ಥಳಕ್ಕಾಗಿ ಹೊಸ ಸಸ್ಯಗಳ ನಡುವೆ ತೀವ್ರ ಪೈಪೋಟಿಯಿರುತ್ತದೆ. ಇದರಿಂದಾಗಿ ಬೀಜಗಳು ಆರೋಗ್ಯವಂತ ಗಿಡಗಳಾಗಿ ಬೆಳೆಯುವುದಿಲ್ಲ. ಬೀಜ ಪ್ರಸರಣದಿಂದ ಸಸ್ಯಗಳಿಗೆ ಪ್ರಯೋಜನವಿದೆ. ಅಗತ್ಯ ಪೋಷಕಗಳಿಗಾಗಿ ಸಸ್ಯ ಮತ್ತು ಅದರ ಸಸಿಗಳ ನಡುವಣ ಪೈಪೋಟಿಯನ್ನು ಇದು ತಡೆಯುತ್ತದೆ. ಬೀಜ ಪ್ರಸರಣದಿಂದ ಯಾವುದೇ ಒಂದು ಸಸ್ಯವು ಹೊಸ ಹೊಸ ಆವಾಸಗಳನ್ನು ಆಕ್ರಮಿಸಿಕೊಂಡು, ಆ ಮೂಲಕ ತನ್ನ ಪ್ರಭೇದದ ವಿಸ್ತರಣೆ ಮಾಡಲು ಸಾಧ್ಯವಾಗುತ್ತದೆ.
ಗಾಳಿ, ನೀರು ಮತ್ತು ಪ್ರಾಣಿಗಳಿಂದ ಬೀಜ ಮತ್ತು ಹಣ್ಣುಗಳು ವಿವಿಧ ಪ್ರದೇಶಗಳಿಗೆ ಸಾಗಿಸಲ್ಪಡುತ್ತವೆ. ರೆಕ್ಕೆಯಂತೆ ಚಾಚಿರುವ ಹೊರಪದರು ಇರುವ ನುಗ್ಗೆಕಾಯಿ ಮತ್ತು ಮೇಪಲ್‍ನ ಬೀಜಗಳು [ಚಿತ್ರ 12.13 (ಎ) ಮತ್ತು (ಬಿ)], ಹುಲ್ಲಿನ ಹಗುರ ಬೀಜಗಳು, ಆಕ್‍ನ ರೋಮಭರಿತ ಬೀಜಗಳು ಅಥವಾ ಸೂರ್ಯಕಾಂತಿಯ ರೋಮಭರಿತ ಹಣ್ಣು [ಚಿತ್ರ 12.14 (ಎ) ಮತ್ತು (ಬಿ)], ಗಾಳಿಗೆ ಬಹಳ ದೂರ ಚದುರಿ ಹೋಗುತ್ತವೆ. ಕೆಲವು ನೀರಿನಿಂದ ಪ್ರಸರಣಗೊಳ್ಳುತ್ತವೆ. ಕೆಲವು ಹಣ್ಣು ಅಥವಾ ಬೀಜಗಳು ನಾರುಭರಿತ ಅಥವಾ ಮೃದುವಾದ ಹೊರಪದರದ ಮೂಲಕ ನೀರಿನಲ್ಲಿ ತೇಲುವ ಸಾಮಥ್ರ್ಯ ಪಡೆದುಕೊಂಡಿರುತ್ತವೆ. ಉದಾಹರಣೆಗೆ, ತೆಂಗಿನಕಾಯಿ. ಕೆಲವು ಬೀಜಗಳು ವಿಶೇಷವಾಗಿ ಮೈಮೇಲೆ ಮುಳ್ಳು, ಕೊಕ್ಕೆ ಅಥವಾ ಕೊಂಡಿಯಂಥ ರಚನೆ ಇರುವಂಥ ಬೀಜಗಳು, ಪ್ರಾಣಿಗಳಿಂದ ಪ್ರಸರಣಗೊಳ್ಳುತ್ತವೆ. ಇವು ಪ್ರಾಣಿಗಳ ದೇಹಕ್ಕೆ ಅಂಟಿಕೊಂಡು ದೂರದ ಪ್ರದೇಶಗಳಿಗೆ ವರ್ಗಾವಣೆಗೊಳ್ಳುತ್ತವೆ. ಉದಾಹರಣೆಗೆ, ಕ್ಸಾಂತಿಯಮ್ (ಚಿತ್ರ 12.15) ಮತ್ತು ಯುರೀನ.
ಕೆಲವು ಜಾತಿಯ ಹಣ್ಣುಗಳು ಇದ್ದಕ್ಕಿದ್ದಂತೆ ಸಿಡಿದು ಬೀಜಗಳನ್ನು ದೂರಕ್ಕೆ ಎಸೆಯುತ್ತವೆ. ಹೀಗಾಗಿ ಪೋಷಕ ಸಸ್ಯದಿಂದ ಬಹು ದೂರಕ್ಕೆ ಬೀಜಗಳು ಚದುರುತ್ತವೆ. ಈ ವಿಧಾನವನ್ನು ಹರಳು ಮತ್ತು ಕರ್ಣಕುಂಡಲದಲ್ಲಿ ಕಾಣಬಹುದು.
ಪ್ರಮುಖ ಪದಗಳು
ಮೊಗ್ಗುವಿಕೆ ಅಂಡಕ ಬೀಜಕ
ಭ್ರೂಣ ಪರಾಗರೇಣು ಬೀಜಕ ದಾನಿ
ನಿಷೇಚನ ಪರಾಗನಳಿಕೆ ಕಾಯಜ ಸಂತಾನೋತ್ಪತ್ತಿ
ತುಂಡಾಗುವಿಕೆ ಪರಾಗ ಸ್ಪರ್ಶ ಯುಗ್ಮಜ
ಲಿಂಗಾಣುಗಳು ಬೀಜ ಪ್ರಸರಣ
ಸಂವೇದ ವಿಡಿಯೋ ಪಾಠಗಳು
ನೀವು ಕಲಿತಿರುವುದು
1) ಎಲ್ಲಾ ಜೀವಿಗಳು ತಮ್ಮ ಸಂಖ್ಯೆಯನ್ನು ಅಧಿಕಗೊಳಿಸುತ್ತವೆ ಅಥವಾ ತನ್ನದೇ ಜಾತಿಯ ಮರಿಗಳನ್ನು ಉತ್ಪತ್ತಿ ಮಾಡುತ್ತವೆ.
2) ಸಸ್ಯಗಳಲ್ಲಿ ಎರಡು ವಿಧದ ಸಂತಾನೋತ್ಪತ್ತಿ ವಿಧಾನಗಳಿವೆ- ಅಲೈಂಗಿಕ ಮತ್ತು ಲೈಂಗಿಕ ಸಂತಾನೋತ್ಪತ್ತಿ.
3) ಅಲೈಂಗಿಕ ಸಂತಾನೋತ್ಪತ್ತಿಯಲ್ಲಿ ತುಂಡಾಗುವಿಕೆ, ಮೊಗ್ಗುವಿಕೆ, ಬೀಜಕ ಉತ್ಪತ್ತಿ ಮತ್ತು ಕಾಯಜ ಸಂತಾನೋತ್ಪತ್ತಿಯಂಥ ಹಲವಾರು ವಿಧಾನಗಳಿವೆ.
4) ಲೈಂಗಿಕ ಸಂತಾನೋತ್ಪತ್ತಿಯು ಪುರುಷ ಲಿಂಗಾಣು ಮತ್ತು ಹೆಣ್ಣು ಲಿಂಗಾಣುಗಳ ಸಂಯೋಗವನ್ನು ಒಳಗೊಂಡಿರುತ್ತದೆ.
5) ಕಾಯಜ ಸಂತಾನೋತ್ಪತ್ತಿಯಲ್ಲಿ ಬೇರು, ಕಾಂಡ, ಎಲೆಗಳಂಥ ಕಾಯಿಕ ಸಸ್ಯ ಭಾಗಗಳಿಂದ ಹೊಸಸಸ್ಯಗಳು ಹುಟ್ಟುತ್ತವೆ.
6) ಹೂವು ಸಸ್ಯದ ಸಂತಾನೋತ್ಪತ್ತಿಯ ಭಾಗವಾಗಿದೆ.
7) ಕೇವಲ ಕೇಸರ ಅಥವಾ ಶಲಾಕೆಯನ್ನು ಮಾತ್ರ ಹೊಂದಿದ್ದರೆ ಆ ಹೂವು ಏಕಲಿಂಗಿ ಹೂವಾಗಿರುತ್ತದೆ.
8) ದ್ವಿಲಿಂಗಿ ಹೂವು ಪುರುಷ ಮತ್ತು ಹೆಣ್ಣು-ಎರಡೂ ಪ್ರಜನನ ಭಾಗಗಳನ್ನು ಹೊಂದಿರುತ್ತದೆ.
9) ಪರಾಗರೇಣುವಿನೊಳಗೆ ಪುರುಷ ಲಿಂಗಾಣು ಹಾಗೂ ಅಂಡಕದೊಳಗೆ ಹೆಣ್ಣು ಲಿಂಗಾಣುಗಳಿರುತ್ತವೆ.
10) ಒಂದು ಹೂವಿನ ಕೇಸರದಿಂದ ಅದೇ ಹೂವಿನ ಅಥವಾ ಮತ್ತೊಂದು ಹೂವಿನ ಶಲಾಕಾಗ್ರಕ್ಕೆ ಪರಾಗದ ವರ್ಗಾವಣೆಯನ್ನು ಪರಾಗಸ್ಪರ್ಶ ಎನ್ನುವರು.
11) ಪರಾಗಸ್ಪರ್ಶದಲ್ಲಿ ಎರಡು ವಿಧಗಳು: ಸ್ವಕೀಯ ಮತ್ತು ಪರಕೀಯ ಪರಾಗ ಸ್ಪರ್ಶ. ಸ್ವಕೀಯ ಪರಾಗಸ್ಪರ್ಶದಲ್ಲಿ ಒಂದು ಹೂವಿನ ಪರಾಗಕೋಶದಿಂದ ಅದೇ ಹೂವಿನ ಶಲಾಕಾಗ್ರಕ್ಕೆ ಪರಾಗದ ವರ್ಗಾವಣೆ ಆಗುತ್ತದೆ. ಪರಕೀಯ ಪರಾಗಸ್ಪರ್ಶದಲ್ಲಿ ಒಂದು ಹೂವಿನ ಪರಾಗಕೋಶದಿಂದ ಅದೇ ಜಾತಿಯ ಬೇರೊಂದು ಹೂವಿನ ಶಲಾಕಾಗ್ರಕ್ಕೆ ಪರಾಗದ ವರ್ಗಾವಣೆ ಆಗುತ್ತದೆ.
12) ಗಾಳಿ, ನೀರು ಮತ್ತು ಕೀಟಗಳ ಸಹಾಯದಿಂದ ಸಸ್ಯಗಳಲ್ಲಿ ಪರಾಗಸ್ಪರ್ಶ ನಡೆಯುತ್ತದೆ.
13) ಪುರುಷ ಮತ್ತು ಹೆಣ್ಣು ಲಿಂಗಾಣುಗಳ ಸಂಯೋಗವನ್ನು ನಿಷೇಚನ ಎನ್ನುವರು.
14) ಸಂಯೋಗಗೊಂಡ ಅಂಡವನ್ನು ಯುಗ್ಮಜ ಎನ್ನುವರು. ಅದು ಭ್ರೂಣವಾಗಿ ಬೆಳೆಯುತ್ತದೆ.
15) ಬಲಿತ ಅಂಡಾಶಯವೇ ಹಣ್ಣು. ಬೆಳೆಯುತ್ತಿರುವ ಭ್ರೂಣವನ್ನು ಒಳಗೊಂಡಿರುವ ಬೀಜವಾಗಿ ಅಂಡಕವು ಮಾರ್ಪಡುತ್ತದೆ.
16) ಗಾಳಿ, ನೀರು ಮತ್ತು ಪ್ರಾಣಿಗಳ ಸಹಾಯದಿಂದ ಬೀಜ ಪ್ರಸರಣವಾಗುತ್ತದೆ.
17) ಬೀಜ ಪ್ರಸರಣವು ಸಸ್ಯಗಳಿಗೆ ಈ ರೀತಿಯಲ್ಲಿ ಸಹಾಯ ಮಾಡುತ್ತದೆ.
(i) ಒಂದೇ ಜಾಗದಲ್ಲಿ ಹಲವಾರು ಸಸಿಗಳು ಒತ್ತಾಗಿ ಬೆಳೆಯುವುದನ್ನು ತಡೆಯಲು
(ii) ಸೂರ್ಯನ ಬೆಳಕು, ನೀರು ಮತ್ತು ಖನಿಜಗಳಿಗೆ ಉಂಟಾಗುವ ಪೈಪೋಟಿಯನ್ನು ತಡೆಯಲು
(iii) ಹೊಸ ಆವಾಸಗಳನ್ನು ಆಕ್ರಮಿಸಲು
ಅಭ್ಯಾಸಗಳು
https://www.kseebsolutions.com/kseeb-solutions-for-class-7-science-chapter-12-in-kannada/
ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.