ಸಸ್ಯಗಳನ್ನು ತಿಳಿಯುವುದು – ಅಧ್ಯಾಯ-7

ಹೊರಗೆ ಹೋಗಿ ನಿಮ್ಮ ಸುತ್ತಮುತ್ತಲಿನ ಎಲ್ಲಾ ಸಸ್ಯಗಳನ್ನು ಗಮನಿಸಿ (ಚಿತ್ರ 7.1). ಕೆಲವು ಚಿಕ್ಕ ಸಸ್ಯಗಳು ಮತ್ತೆ ಕೆಲವು ಅತಿ ದೊಡ್ಡ ಸಸ್ಯಗಳು. ಹಾಗೆಯೇ, ಮಣ್ಣಿನ ಮೇಲೆ ಕೆಲವು ಹಸಿರು ತೇಪೆಯಂತಿರುವುದನ್ನು ನೀವು ನೋಡುತ್ತೀರ? ಕೆಲವು ಸಸ್ಯಗಳಲ್ಲಿ ಎಲೆಗಳು ಹಸಿರಾಗಿದ್ದರೆ, ಮತ್ತೆ ಕೆಲವುಗಳಲ್ಲಿ ನಡುಗೆಂಪು. ಕೆಲವು ಸಸ್ಯಗಳಲ್ಲಿ ದೊಡ್ಡ ಕೆಂಪು ಹೂಗಳಿದ್ದರೆ, ಕೆಲವುಗಳಲ್ಲಿ ಚಿಕ್ಕ ನೀಲಿಯವು, ಕೆಲವುಗಳಲ್ಲಿ ಹೂಗಳೇ ಇಲ್ಲ. ನಮ್ಮ ಮನೆಗಳ ಬಳಿ, ಶಾಲೆಯ ಮೈದಾನದಲ್ಲಿ, ಶಾಲೆಗೆ ಹೋಗುವ ದಾರಿಯಲ್ಲಿ, ಉದ್ಯಾನಗಳಲ್ಲಿ ಮತ್ತು ತೋಟಗಳಲ್ಲಿ ವಿವಿಧ ಸಸ್ಯಗಳಿರುವುದನ್ನು ನಾವು ನೋಡುತ್ತೇವೆ, ಅಲ್ಲವೆ?

ಮಾದರಿ ಸಸ್ಯದ ವಿವಿಧ ಭಾಗಗಳನ್ನು ನಾವೀಗ ತಿಳಿದುಕೊಳ್ಳೋಣ. ವಿವಿಧ ಸಸ್ಯಗಳ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಇದು ಸಹಕಾರಿ. ಚಿತ್ರ 7.2ರಲ್ಲಿ ತೋರಿಸಿರುವ ಸಸ್ಯದ ಕಾಂಡ, ರೆಂಬೆ, ಬೇರು, ಎಲೆ, ಹೂ ಮತ್ತು ಹಣ್ಣುಗಳನ್ನು ಗುರುತಿಸಬಲ್ಲಿರ? ಸಸ್ಯದ ಭಾಗಗಳಿಗೆ ಬಣ್ಣ ಹಚ್ಚಿ.

7.1 ಗಿಡಮೂಲಿಕೆಗಳು, ಪೊದೆಗಳು ಮತ್ತು ಮರಗಳು

ಚಟುವಟಿಕೆ 1
ಇವುಗಳ ಕಾಂಡ ಮತ್ತು ರೆಂಬೆಗಳನ್ನು ಹತ್ತಿರದಿಂದ ನೋಡಿ:
1. ನಿಮಗಿಂತ ಅತಿ ಚಿಕ್ಕದಾದ ಸಸ್ಯಗಳು
2. ಸುಮಾರು ನಿಮ್ಮ ಗಾತ್ರದಷ್ಟಿರುವ ಸಸ್ಯಗಳು ಮತ್ತು
3. ನಿಮಗಿಂತ ಅತಿ ಎತ್ತರವಾದ ಸಸ್ಯಗಳು.

ಅವುಗಳ ಕಾಂಡವನ್ನು ಮುಟ್ಟಿ, ಅದು ಮೃದು ಅಥವಾ ಗಟ್ಟಿಯಾಗಿದೆಯೆ ಎಂದು ತಿಳಿಯಲು ನಿಧಾನವಾಗಿ ಬಾಗಿಸಲು ಪ್ರಯತ್ನಿಸಿ. ಕಾಂಡ ಮುರಿಯದಂತೆ ಎಚ್ಚರವಹಿಸಿ. ಎತ್ತರದ ಸಸ್ಯಗಳ ಕಾಂಡಗಳು ಎಷ್ಟು ದಪ್ಪ ಇವೆ ಎಂದು ತಿಳಿಯಲು ಅಪ್ಪಿಕೊಳ್ಳಿ !

ಕೆಲವು ಸಸ್ಯಗಳಲ್ಲಿ ರೆಂಬೆಗಳು ಎಲ್ಲಿಂದ ಬೆಳೆಯುತ್ತವೆ – ನೆಲದ ಸಮೀಪ ಅಥವಾ ಕಾಂಡದ ಮೇಲ್ಭಾಗದಲ್ಲೊ ಎಂಬುದನ್ನು ಕೂಡ ನಾವು ಗಮನಿಸಬೇಕು.

ಈಗ ನಾವು ಗಮನಿಸಿದ ಎಲ್ಲ ಸಸ್ಯಗಳನ್ನೂ ಕೋಷ್ಟಕ 7.1ರಲ್ಲಿ ವರ್ಗೀಕರಿಸೋಣ. ಕೋಷ್ಟಕದಲ್ಲಿ ಕೆಲವು ಉದಾಹರಣೆಗಳನ್ನು ತೋರಿಸಲಾಗಿದೆ. ಅನೇಕ ಸಸ್ಯಗಳಿಗೆ 1, 2 ಮತ್ತು 3ನೇ ಕಾಲಂಗಳನ್ನು ನೀವು ತುಂಬಬಹುದು. 4ನೇ ಕಾಲಂಅನ್ನು ಈ ವಿಭಾಗದ ಅಧ್ಯಯನದ ನಂತರ ತುಂಬಿ.

ಸಲಹೆ: ಈ ಅಧ್ಯಾಯದಲ್ಲಿ ಸೂಚಿತ ಚಟುವಟಿಕೆಗಳನ್ನು ಮಾಡಲು ಪ್ರತಿ ತಂಡದಲ್ಲಿ 4 ರಿಂದ 5 ವಿದ್ಯಾರ್ಥಿಗಳಿದ್ದರೆ ಕನಿಷ್ಠ ಸಂಖ್ಯೆಯ ಸಸ್ಯಗಳಿಗೆ ಹಾನಿಯಾಗುತ್ತದೆ.
ಚಟುವಟಿಕೆಗಳಿಗೆ ಮೃದು ಕಾಂಡವಿರುವ ಕಳೆಗಳನ್ನು ಬಳಸಿ. ಕಳೆಗಳೆಂದರೇನೆಂದು ನಿಮಗೆ ಗೊತ್ತೆ? ಹೊಲ ಗದ್ದೆಗಳು, ಹುಲ್ಲು ಹಾಸುಗಳು ಅಥವಾ ಕುಂಡಗಳಲ್ಲಿ ಬೇಡದ ಕೆಲವು ಸಸ್ಯಗಳು ಬೆಳೆಯುತ್ತವೆ. ಇವುಗಳನ್ನು ಕಳೆಗಳು(weeds) ಎನ್ನುತ್ತಾರೆ. ರೈತರು ತಮ್ಮ ಹೊಲಗಳಲ್ಲಿ ಈ ಕಳೆಗಳನ್ನು ಕೀಳುವುದನ್ನು ನೀವು ನೋಡಿದ್ದೀರ?

ಈ ಲಕ್ಷಣಗಳನ್ನಾಧರಿಸಿ ಬಹುತೇಕ ಸಸ್ಯಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು: ಗಿಡಮೂಲಿಕೆಗಳು (herbs), ಪೊದೆಗಳು (shrubs) ಮತ್ತು ಮರಗಳು (trees). ಚಿತ್ರ 7.3ರಲ್ಲಿ ಪ್ರತಿಯೊಂದಕ್ಕು ಉದಾಹರಣೆಯನ್ನು ತೋರಿಸಲಾಗಿದೆ.

ಹಸಿರು ಮತ್ತು ಮೃದು ಕಾಂಡಗಳಿರುವ ಸಸ್ಯಗಳನ್ನು ಗಿಡಮೂಲಿಕೆಗಳು ಎನ್ನುತ್ತೇವೆ. ಸಾಮಾನ್ಯವಾಗಿ ಅವು ಗಿಡ್ಡವಾಗಿದ್ದು ಕಡಿಮೆ ರೆಂಬೆಗಳಿರುತ್ತವೆ [ಚಿತ್ರ 7.3 (ಎ)].

ಕೆಲವು ಸಸ್ಯಗಳು ಕಾಂಡದ ಬುಡದ ಹತ್ತಿರ ರೆಂಬೆಗಳನ್ನು ಬೆಳೆಸಿರುತ್ತವೆ. ಕಾಂಡ ಗಟ್ಟಿಯಿರುತ್ತದೆ ಆದರೆ ತುಂಬ ದಪ್ಪಗಿರುವುದಿಲ್ಲ. ಈ ರೀತಿಯ ಸಸ್ಯಗಳನ್ನು ಪೊದೆಗಳು ಎನ್ನುತ್ತೇವೆ [ಚಿತ್ರ 7.3 (ಬಿ)].

ಕೆಲವು ಸಸ್ಯಗಳು ತುಂಬ ಎತ್ತರವಿದ್ದು, ಅವುಗಳ ಕಾಂಡ ಗಟ್ಟಿ ಮತ್ತು ದಪ್ಪವಿರುತ್ತದೆ. ನೆಲದಿಂದ ಅತಿ ಎತ್ತರದಲ್ಲಿ, ಕಾಂಡದ ಮೇಲ್ಭಾಗದಲ್ಲಿ ರೆಂಬೆಗಳಿರುತ್ತವೆ. ಈ ರೀತಿಯ ಸಸ್ಯಗಳೇ ಮರಗಳು [ಚಿತ್ರ 7.3 (ಸಿ)].

ಈ ಮೇಲಿನ ಲಕ್ಷಣಗಳ ಆಧಾರದ ಮೇಲೆ ನೀವು ಪಟ್ಟಿ ಮಾಡಿದ ಸಸ್ಯಗಳನ್ನು ಈಗ ಸರಿಯಾಗಿ ವರ್ಗೀಕರಿಸಿ ಕೋಷ್ಟಕ 7.1ರ ಕಾಲಂ 4ನ್ನು ಪೂರ್ಣಗೊಳಿಸಬಲ್ಲಿರ?

ದುರ್ಬಲ ಕಾಂಡವಿರುವ, ನೇರವಾಗಿ ನಿಲ್ಲಲಾಗದ ಮತ್ತು ನೆಲದ ಮೇಲೆ ಹರಡುವ ಸಸ್ಯಗಳನ್ನು ನೆಲ ಬಳ್ಳಿಗಳು (creepers) ಎನ್ನುತ್ತೇವೆ. ಆದರೆ ಆಧಾರವನ್ನು ಪಡೆದು ಹತ್ತುವ ಕೆಲವು ಸಸ್ಯಗಳನ್ನು ಅಡರು ಬಳ್ಳಿಗಳು (climbers) ಎನ್ನುತ್ತೇವೆ (ಚಿತ್ರ 7.4). ಇವು ಗಿಡಮೂಲಿಕೆಗಳು, ಪೊದೆಗಳು ಮತ್ತು ಮರಗಳಿಗಿಂತ ಭಿನ್ನ.

ನೀವು ಆರೈಕೆ ಮಾಡುತ್ತಿರುವ ಕೆಲವು ಸಸ್ಯಗಳು ನಿಮ್ಮ ಶಾಲೆಯಲ್ಲಿ ಅಥವಾ ಮನೆಯಲ್ಲಿ ಇರಬಹುದು. ನಿಮ್ಮ ಮನೆ ಅಥವಾ ಶಾಲೆಯಲ್ಲಿ ಬೆಳೆಯುತ್ತಿರುವ ಯಾವುದಾದರೂ ಮರ, ಪೊದೆ, ಗಿಡಮೂಲಿಕೆ ಅಥವಾ ಬಳ್ಳಿಗಳ ಎರಡೆರಡು ಹೆಸರುಗಳನ್ನು ಬರೆಯಿರಿ.

7.2 ಕಾಂಡ

ನಿಮ್ಮ ಸುತ್ತಮುತ್ತಲೂ ಇರುವ ವಿವಿಧ ಸಸ್ಯಗಳ ಕಾಂಡಗಳನ್ನು ಹತ್ತಿರದಿಂದ ಗಮನಿಸಿ. ಕಾಂಡಗಳಲ್ಲಿರುವ ವಿವಿಧ ರಚನೆಗಳು / ಭಾಗಗಳನ್ನು ಗುರುತಿಸಿಕೊಳ್ಳಿ. ನಿಮ್ಮ ವೀಕ್ಷಣೆಯನ್ನು ಸ್ನೇಹಿತರ ವೀಕ್ಷಣೆಯೊಂದಿಗೆ ಹೋಲಿಸಿ. ಏನನ್ನು ಕಂಡುಕೊಂಡಿರಿ? ಕಾಂಡಗಳು ಎಲೆ, ರೆಂಬೆ, ಮೊಗ್ಗು, ಹೂ ಮತ್ತು ಹಣ್ಣುಗಳನ್ನು ಹೊಂದಿರುತ್ತವೆ.

ಚಟುವಟಿಕೆ 2
ಚಿತ್ರ 7.5 ಬಣ್ಣದ ನೀರಿರುವ ಗಾಜಿನ ಲೋಟದಲ್ಲಿ ಕಾಂಡ ಈ ಚಟುವಟಿಕೆಯನ್ನು ಮಾಡಲು ಒಂದು ಗಾಜಿನ ಲೋಟ, ನೀರು, ಕೆಂಪು / ನೀಲಿ ಇಂಕು ಮತ್ತು ಒಂದು ಮೃದು ಕಾಂಡದ ಗಿಡದ ಅವಶ್ಯಕತೆ ನಮಗಿದೆ. ಗಾಜಿನ ಲೋಟದ 1/3 ಭಾಗದಷ್ಟು ನೀರನ್ನು ತುಂಬಿ. ನೀರಿಗೆ ಕೆಂಪು/ನೀಲಿ ಇಂಕಿನ ಕೆಲವು ಹನಿಗಳನ್ನು ಸೇರಿಸಿ. ಕಾಂಡದ ಬುಡಭಾಗವನ್ನು ಕತ್ತರಿಸಿ, ಚಿತ್ರ 7.5ರಲ್ಲಿ ತೋರಿಸಿರುವಂತೆ ಲೋಟದಲ್ಲಿಡಿ.

ಪ್ರಯೋಗವನ್ನು ವೀಕ್ಷಿಸಿ. ಕಾಂಡದಲ್ಲಿ ಬಣ್ಣ ಕಾಣುತ್ತದೆಯೆ? ಕಾಂಡದಲ್ಲಿ ಬಣ್ಣ ಮೇಲೇರುವುದನ್ನು ನೀವು ಗಮನಿಸುವಿರಿ. ಇದನ್ನು ಹೀಗೆ ಹೆಚ್ಚಿನ ಕಾಲ ಇಟ್ಟರೆ, ಬಣ್ಣವು ಎಲೆಗಳ ಸಿರೆ(vein)ಗಳಲ್ಲೂ ಕಾಣುತ್ತದೆ. ಅಲ್ಲಿಗೆ ಬಣ್ಣವು ತಲುಪಿದ್ದಾದರು ಹೇಗೆ ಎಂದು ಯೋಚಿಸಿದ್ದೀರ? ಕಾಂಡವನ್ನು ಅಡ್ಡವಾಗಿ ಕತ್ತರಿಸಿ. ಕಾಂಡದ ಒಳಗೆ ನೀವು ಕೆಂಪು ಬಣ್ಣವನ್ನು ನೋಡಬಹುದು (ಚಿತ್ರ 7.6 ಬಿ).

ಈ ಚಟುವಟಿಕೆಯಿಂದ, ಕಾಂಡವು ನೀರು ಮೇಲೇರುವುದಕ್ಕೆ ಸಹಾಯ ಮಾಡುತ್ತದೆಯೆಂದು ನಾವು ನೋಡಬಹುದು. ಇದರರ್ಥ, ಕಾಂಡವು ನೀರನ್ನು ಸಾಗಿಸುತ್ತದೆ. ಕಾಂಡಕ್ಕೆ ಸೇರಿಕೊಂಡಿರುವ ಎಲೆಗಳಿಗೆ ಮತ್ತು ಇತರೆ ಸಸ್ಯಭಾಗಗಳಿಗೆ ನೀರು ಮತ್ತು ಖನಿಜಗಳು ತಲುಪುತ್ತವೆ.

7.3 ಎಲೆ

ನಿಮ್ಮ ಸುತ್ತಮುತ್ತಲು ಇರುವ ಸಸ್ಯಗಳ ಎಲೆ (leaf)ಗಳನ್ನು ನೋಡಿ, ನೋಟ್‍ಪುಸ್ತಕದಲ್ಲಿ ಅವುಗಳ ಚಿತ್ರ ಬಿಡಿಸಿ. ಗಾತ್ರ, ಆಕಾರ ಮತ್ತು ಬಣ್ಣಗಳಲ್ಲಿ ಎಲ್ಲಾ ಎಲೆಗಳು ಒಂದೇ ರೀತಿ ಇದೆಯೆ?

ಅವು ಕಾಂಡಕ್ಕೆ ಹೇಗೆ ಅಂಟಿಕೊಂಡಿವೆ? ಕಾಂಡಕ್ಕೆ ಅಂಟಿಕೊಂಡಿರುವ ಎಲೆಯ ಭಾಗವನ್ನು ಎಲೆ ತೊಟ್ಟು (petiole) ಎನ್ನುತ್ತೇವೆ. ಅಗಲವಾದ, ಹಸಿರಾದ ಎಲೆಯ ಭಾಗವನ್ನು ಪತ್ರ ಪಟಲ (lamina) ಎನ್ನುತ್ತೇವೆ (ಚಿತ್ರ 7.7). ನಿಮ್ಮ ಸುತ್ತಲೂ ಇರುವ ಸಸ್ಯಗಳಲ್ಲಿನ ಎಲೆಗಳಲ್ಲಿ ಈ ಭಾಗಗಳನ್ನು ನೀವು ಗುರುತಿಸಬಲ್ಲಿರ? ಎಲ್ಲ ಎಲೆಗಳಿಗೂ ಎಲೆತೊಟ್ಟು ಇರುತ್ತದೆಯೆ?

ಎಲೆಯ ಅಚ್ಚು ಪಡೆದು, ಅದರ ಬಗ್ಗೆ ಇನ್ನೂ ಚೆನ್ನಾಗಿ ತಿಳಿಯೋಣ! ಎಲೆಗಳಿಗೆ ಸಹಿ ಹಾಕಲು ಬರುವುದಿಲ್ಲವೆಂದು ನೀವು ತಿಳಿದಿದ್ದರೆ, ಈ ಬಗ್ಗೆ ನೀವು ಮತ್ತೊಮ್ಮೆ ಆಲೋಚಿಸುವಂತೆ ಮಾಡುವ ಚಟುವಟಿಕೆಯೊಂದು ಇಲ್ಲಿದೆ.

ಚಟುವಟಿಕೆ 3
ಒಂದು ಬಿಳಿ ಹಾಳೆಯ ಮಡಿಕೆಯೊಳಗೆ ಅಥವಾ ನಿಮ್ಮ ನೋಟ್‍ಪುಸ್ತಕದ ಎರಡು ಹಾಳೆಗಳ ಮಧ್ಯೆ ಒಂದು ಎಲೆಯನ್ನಿಡಿ. ಚಿತ್ರ 7.8ರಲ್ಲಿ ತೋರಿಸಿರುವಂತೆ ಒಂದು ಜಾಗದಲ್ಲಿ ಹಿಡಿದಿಡಿ. ಎಲೆ ಇರುವ ಜಾಗದಲ್ಲಿ ಕಾಗದದ ಮೇಲ್ಭಾಗವನ್ನು ಪೆನ್ಸಿಲ್ಲಿನ ತುದಿಯನ್ನು ಅಡ್ಡವಾಗಿ ಹಿಡಿದು ಉಜ್ಜಿ. ಕೆಲವು ಗೆರೆಗಳಿರುವ ಗುರುತನ್ನು ಪಡೆದಿರೆ? ಅವು ಎಲೆಯ ಮೇಲಿರುವಂತೆಯೇ ಇವೆಯೆ?

ಎಲೆಯ ಮೇಲಿರುವ ಈ ಗೆರೆಗಳನ್ನು ಎಲೆಯ ಸಿರೆಗಳು ಎನ್ನುತ್ತೇವೆ. ಎಲೆಯ ಮಧ್ಯಭಾಗದಲ್ಲಿ ಒಂದು ದಪ್ಪ ಸಿರೆಯನ್ನು ನೋಡಿದಿರ? ಈ ಸಿರೆಯನ್ನು ಮಧ್ಯ ಸಿರೆ (midrib) ಎನ್ನುತ್ತೇವೆ. ಈ ಸಿರೆಗಳು ಎಲೆಯಲ್ಲಿ ಮೂಡಿಸಿದ ವಿನ್ಯಾಸವನ್ನು ಎಲೆಯ ಸಿರಾ ವಿನ್ಯಾಸ (leaf venation) ಎನ್ನುತ್ತೇವೆ. ಮಧ್ಯ ಸಿರೆಯ ಎರಡೂ ಕಡೆ ಬಲೆಯ ರೀತಿಯ ವಿನ್ಯಾಸವಿದ್ದರೆ, ಇದು ಜಾಲಿಕ ಸಿರಾ ವಿನ್ಯಾಸ (reticulate venation)[ಚಿತ್ರ 7.9 (ಎ)]. ಹುಲ್ಲಿನ ಎಲೆಗಳಲ್ಲಿ ಒಂದಕ್ಕೊಂದು ಸಮಾನಾಂತರವಾಗಿರುವ ಸಿರೆಗಳನ್ನು ನೀವು ನೋಡಿರಬಹುದು. ಇದು ಸಮಾನಾಂತರ ಸಿರಾ ವಿನ್ಯಾಸ (parallel venation) [ಚಿತ್ರ 7.9(ಬಿ)]. ಗಿಡಗಳಿಂದ ಎಲೆಗಳನ್ನು ಕೀಳದೆ, ಎಷ್ಟು ಸಾಧ್ಯವೋ ಅಷ್ಟು ಎಲೆಗಳಲ್ಲಿ ಸಿರಾ ವಿನ್ಯಾಸ ಗಮನಿಸಿ. ಜಾಲಿಕಾರೂಪ ಮತ್ತು ಸಮಾನಾಂತರ ಸಿರಾ ವಿನ್ಯಾಸದ ಮಾದರಿಯ ಚಿತ್ರ ರಚಿಸಿ, ಈ ವಿಧದ ಸಿರಾ ವಿನ್ಯಾಸಗಳಿರುವ ಸಸ್ಯಗಳ ಹೆಸರುಗಳನ್ನು ಬರೆಯಿರಿ.
ಈಗ ಎಲೆಯ ಕೆಲವು ಕಾರ್ಯಗಳನ್ನು ನಾವು ಕಂಡುಹಿಡಿಯೋಣವೆ?

ಚಟುವಟಿಕೆ 4
ಒಂದು ಗಿಡಮೂಲಿಕೆ, ಎರಡು ಪಾರದರ್ಶಕ ಪಾಲಿಥೀನ್ ಚೀಲಗಳು ಮತ್ತು ಸ್ವಲ್ಪ ದಾರ ನಮಗೆ ಅವಶ್ಯಕ.

ಈ ಚಟುವಟಿಕೆಯನ್ನು ಪ್ರಕಾಶಮಾನವಾಗಿರುವ ಹಗಲಿನಲ್ಲಿ ಮಾಡಿ. ಇದಕ್ಕೆ ಸೂರ್ಯನ ಬೆಳಕಿನಲ್ಲಿ ಬೆಳೆಯುತ್ತಿರುವ, ಚೆನ್ನಾಗಿ ನೀರುಣಿಸಿದ, ಆರೋಗ್ಯಕರವಾದ ಸಸ್ಯವನ್ನು ಬಳಸಿ. ಚಿತ್ರ 7.10ರಲ್ಲಿ ತೋರಿಸಿರುವಂತೆ ಎಲೆಗಳಿರುವ ಸಸ್ಯದ ರೆಂಬೆಯನ್ನು ಒಂದು ಪಾಲಿಥೀನ್ ಚೀಲದ ಒಳಗೆ ಸೇರಿಸಿ, ಚೀಲದ ಬಾಯನ್ನು ಕಟ್ಟಿ. ಮತ್ತೊಂದು ಖಾಲಿ ಪಾಲಿಥೀನ್ ಚೀಲದ ಬಾಯನ್ನು ಕಟ್ಟಿ, ಇದನ್ನೂ ಸೂರ್ಯನ ಬೆಳಕಿನಲ್ಲಿಡಿ.

ಕೆಲವು ಘಂಟೆಗಳ ನಂತರ, ಚೀಲಗಳ ಒಳಮೇಲ್ಮೈಯನ್ನು ಗಮನಿಸಿ. ನೀವೇನನ್ನು ನೋಡುತ್ತೀರ? ಈ ಚೀಲಗಳಲ್ಲಿ ನೀರಿನ ಹನಿಗಳಿವೆಯೆ? ಯಾವ ಚೀಲದಲ್ಲಿ ಹನಿಗಳಿವೆ? ಅವು ಹೇಗೆ ಒಳಗೆ ಬಂದವು, ಆಲೋಚಿಸಿದಿರ?

[ಚಟುವಟಿಕೆಯ ನಂತರ ಸಸ್ಯದ ರೆಂಬೆಯಿರುವ ಪಾಲಿಥೀನ್ ಚೀಲವನ್ನು ತೆಗೆಯಲು ಮರೆಯಬೇಡಿ!]

ನೀರು ಆವಿಯ ರೂಪದಲ್ಲಿ ಎಲೆಗಳಿಂದ ಆಚೆ ಬರುತ್ತದೆ. ಈ ಪ್ರಕ್ರಿಯೆಯನ್ನು ಬಾಷ್ಪವಿಸರ್ಜನೆ (transpiration) ಎನ್ನುತ್ತೇವೆ. ಸಸ್ಯಗಳು ಈ ಪ್ರಕ್ರಿಯೆಯ ಮೂಲಕ ಬಹಳಷ್ಟು ನೀರನ್ನು ಗಾಳಿಗೆ ಬಿಡುಗಡೆ ಮಾಡುತ್ತವೆ. ಅಧ್ಯಾಯ 14ರಲ್ಲಿ ಇದರ ಬಗ್ಗೆ ನಾವು ಇನ್ನೂ ಹೆಚ್ಚಿಗೆ ಕಲಿಯೋಣ.

ನಾವು ಸಸ್ಯದ ರೆಂಬೆಯ ಸುತ್ತಲೂ ಚೀಲವನ್ನು ಏಕೆ ಕಟ್ಟಿದೆವು? ಕಟ್ಟಿಲ್ಲದಿದ್ದರೆ ಸಸ್ಯಗಳಲ್ಲಿ ನೀರು ಆವಿಯಾಗುವುದನ್ನು ನಾವು ನೋಡುತ್ತಿದ್ದೇವೆಯೆ? ಪಾಲಿಥೀನ್ ಚೀಲದಲ್ಲಿ ನೀರು ಯಾವ ಕಾರಣದಿಂದ ಗೋಚರಿಸುವುದು? ಅಧ್ಯಾಯ 5ರಲ್ಲಿ, ನಾವು ಮಾಡಿದ ಕೆಲವು ಚಟುವಟಿಕೆಗಳಿಂದ ನೀರು ವಿವಿಧ ರೂಪಗಳಿಗೆ ಬದಲಾಗುತ್ತದೆಯೆಂದು ಗಮನಿಸಿದೆವು. ಇವುಗಳ ಬಗ್ಗೆ ಆಲೋಚಿಸಿ, ಪಾಲಿಥೀನ್ ಚೀಲದಲ್ಲಿ ನೀರಿನ ಹನಿಗಳು ಕಾಣಿಸಿಕೊಳ್ಳುವಂತೆ ಮಾಡಿದ ಆ ಪ್ರಕ್ರಿಯೆಯನ್ನು ಹೆಸರಿಸಬಲ್ಲಿರ?

ಎಲೆಗಳಿಗೆ ಮತ್ತೊಂದು ಕಾರ್ಯವೂ ಇದೆ. ಅದರ ಬಗ್ಗೆ ಕಲಿಯೋಣ.

ಚಟುವಟಿಕೆ 5
ಈ ಚಟುವಟಿಕೆಗೆ ಒಂದು ಎಲೆ, ಮದ್ಯಸಾರ (spirit), ಬೀಕರ್, ಪ್ರನಾಳ, ಜ್ವಾಲಕ (burner), ನೀರು, ಗಾಜಿನ ತಟ್ಟೆ ಮತ್ತು ಅಯೋಡಿನ್ ದ್ರಾವಣದ ಅಗತ್ಯ ನಮಗಿದೆ.

ಪ್ರನಾಳದಲ್ಲಿ ಒಂದು ಎಲೆಯನ್ನು ತೆಗೆದುಕೊಳ್ಳಿ. ಎಲೆಯು ಸಂಪೂರ್ಣವಾಗಿ ಮುಳುಗುವಂತೆ ಮದ್ಯಸಾರವನ್ನು ಸುರಿಯಿರಿ. ಈಗ ಅರ್ಧಭಾಗದಷ್ಟು ನೀರು ತುಂಬಿರುವ ಬೀಕರಿನಲ್ಲಿ ಪ್ರನಾಳವನ್ನಿಡಿ. ಎಲೆಯಲ್ಲಿರುವ ಎಲ್ಲ ಹಸಿರು ಬಣ್ಣ ಪ್ರನಾಳದಲ್ಲಿರುವ ಮದ್ಯಸಾರಕ್ಕೆ ಪೂರ್ಣವಾಗಿ ಇಳಿಯುವವರೆಗೂ ಬೀಕರನ್ನು ಬಿಸಿ ಮಾಡಿ. ಎಲೆಯನ್ನು ಎಚ್ಚರಿಕೆಯಿಂದ ಆಚೆ ತೆಗೆಯಿರಿ ಮತ್ತು ನೀರಿನಲ್ಲಿ ತೊಳೆಯಿರಿ. ನಂತರ ಒಂದು ಗಾಜಿನ ತಟ್ಟೆಯ ಮೇಲೆ ಹಾಕಿ, ಸ್ವಲ್ಪ ಅಯೋಡಿನ್ ದ್ರಾವಣವನ್ನು ಅದರ ಮೇಲೆ ಸುರಿಯಿರಿ (ಚಿತ್ರ 7.11).

ಗಮನಿಸಿ:ಈ ಚಟುವಟಿಕೆಯು ಮದ್ಯಸಾರ ಮತ್ತು ಬಿಸಿ ಮಾಡುವುದನ್ನು ಒಳಗೊಂಡಿರುವುದರಿಂದ ತರಗತಿಯಲ್ಲಿ ಶಿಕ್ಷಕರೇ ಈ ಚಟುವಟಿಕೆಯನ್ನು ಮಾಡುವುದು ಸೂಕ್ತ.

ನೀವು ಏನನ್ನು ಗಮನಿಸುವಿರಿ? ಆಹಾರದಲ್ಲಿ ವಿವಿಧ ಪೋಷಕಗಳ ಇರುವಿಕೆಗೆ ಅಧ್ಯಾಯ 2ರಲ್ಲಿ ಮಾಡಿದ ಪರೀಕ್ಷೆಗಳ ವೀಕ್ಷಣೆಗಳನ್ನು ಈಗಿನ ವೀಕ್ಷಣೆಗಳೊಂದಿಗೆ ಹೋಲಿಸಿ. ಇದರರ್ಥ, ಎಲೆಯಲ್ಲಿ ಪಿಷ್ಟವಿದೆ ಎಂದೆ?

ಒಂದು ತುಂಡು ಹಸಿ ಆಲೂಗಡ್ಡೆಯು ಸಹ ಪಿಷ್ಟದ ಇರುವಿಕೆಯನ್ನು ತೋರಿಸುತ್ತದೆಯೆಂದು ಅಧ್ಯಾಯ 2ರಲ್ಲಿ, ನಾವು ನೋಡಿದೆವು. ಆಲೂಗಡ್ಡೆ ಸಸ್ಯ ಪಿಷ್ಟವನ್ನು ತನ್ನ ಎಲೆಗಳಿಂದ ಪಡೆಯುತ್ತದೆ ಮತ್ತು ಸಂಗ್ರಹಿಸುತ್ತದೆ. ಎಲೆಗಳು ಸೂರ್ಯನ ಬೆಳಕಿನಲ್ಲಿ ಮತ್ತು ಅವುಗಳಲ್ಲಿರುವ ಹಸಿರು ಬಣ್ಣದ ಪದಾರ್ಥದ ಸಹಾಯದಿಂದ ಆಹಾರವನ್ನು ತಯಾರಿಸುತ್ತವೆ. ಇದಕ್ಕಾಗಿ ಅವು ನೀರು ಮತ್ತು ಕಾರ್ಬನ್ ಡೈ ಆಕ್ಸೈಡನ್ನು ಬಳಸಿಕೊಳ್ಳುತ್ತವೆ. ಈ ಪ್ರಕ್ರಿಯೆಯನ್ನು ದ್ಯುತಿಸಂಶ್ಲೇಷಣೆ (photosynthesis) ಎನ್ನುತ್ತೇವೆ. ಈ ಪ್ರಕ್ರಿಯೆಯಲ್ಲಿ ಆಕ್ಸಿಜನ್ ಬಿಡುಗಡೆಯಾಗುತ್ತದೆ. ಅಂತಿಮವಾಗಿ ಎಲೆಗಳಲ್ಲಿ ತಯಾರಿಸಿದ ಆಹಾರವು ಸಸ್ಯದ ವಿವಿಧ ಭಾಗಗಳಲ್ಲಿ ಸಂಗ್ರಹವಾಗುತ್ತದೆ.

ಕಾಂಡವು ಎಲೆಗೆ ನೀರನ್ನು ಸರಬರಾಜು ಮಾಡುತ್ತದೆಂದು ನಾವು ನೋಡಿದೆವು. ಎಲೆಯು ಆಹಾರ ತಯಾರಿಸಲು ನೀರನ್ನು ಬಳಸುತ್ತದೆ. ಕಾಂಡ ಮತ್ತು ಎಲೆಗಳು ನೀರನ್ನು ಹೇಗೆ ಪಡೆಯುತ್ತವೆ? ಅಲ್ಲಿ, ಬೇರುಗಳ ಪಾತ್ರ ಬರುತ್ತದೆ!

7.4 ಬೇರು

ಚಿತ್ರ 7.12ನ್ನು ನೋಡಿ. ಗಿಡಕ್ಕೆ ಯಾರು ಸರಿಯಾಗಿ ನೀರುಣಿಸುತ್ತಿದ್ದಾರೆಂದು ಭಾವಿಸುವಿರಿ, ಪಹೇಲಿಯೋ ಅಥವಾ ಬೂಝೊನೋ? ಏಕೆ?

ಸಸ್ಯದ ಯಾವ ಭಾಗವು ಮಣ್ಣಿನಲ್ಲಿದೆ? ಈ ಭಾಗದ ಬಗ್ಗೆ ಕೆಳಗಿನ ಚಟುವಟಿಕೆಗಳಿಂದ ಹೆಚ್ಚು ಕಲಿಯೋಣ.

ಚಟುವಟಿಕೆ 6
ಎರಡು ಕುಂಡಗಳು, ಸ್ವಲ್ಪ ಮಣ್ಣು, ಗುದ್ದಲಿ ಅಥವಾ ಸನಿಕೆ (ಅಗೆಯುವುದಕ್ಕೆ), ಬ್ಲೇಡು ಅಥವಾ ಕತ್ತರಿ ಮತ್ತು ನೀರಿನ ಅಗತ್ಯವಿದೆ. ಈ ಚಟುವಟಿಕೆಯನ್ನು 4-5 ಮಕ್ಕಳ ತಂಡಗಳಲ್ಲಿ ಮಾಡಬೇಕು.

ಬಯಲು ಪ್ರದೇಶದಲ್ಲಿರುವ ಒಂದೇ ಬಗೆಯ 2 ಸಸ್ಯಗಳನ್ನು ಆಯ್ಕೆ ಮಾಡಿ ಅಗೆದು ಬೇರು ಸಮೇತ ತೆಗೆಯಿರಿ. ಅವುಗಳ ಬೇರುಗಳು ಮುರಿಯದಂತೆ ಎಚ್ಚರಿಕೆ ವಹಿಸಿ. ಎ ಕುಂಡದಲ್ಲಿ ಒಂದು ಗಿಡವನ್ನು ನೆಡಿ [ಚಿತ್ರ 7.13 (ಎ)]. ಮತ್ತೊಂದು ಗಿಡದ ಬೇರುಗಳನ್ನು ಕತ್ತರಿಸಿ, ಅದನ್ನು ಬಿ ಕುಂಡದಲ್ಲಿ ನೆಡಿ [ಚಿತ್ರ 7.13 (ಬಿ)]. ನಿಯಮಿತವಾಗಿ ಅವುಗಳಿಗೆ ನೀರುಣಿಸಿ. ಒಂದು ವಾರದ ನಂತರ ಗಿಡಗಳನ್ನು ಗಮನಿಸಿ. ಎರಡೂ ಸಸ್ಯಗಳು ಆರೋಗ್ಯವಾಗಿವೆಯೆ?

ಎರಡೂ ಗಿಡಗಳಿಗೆ ನಿಯಮಿತವಾಗಿ ನೀರುಣಿಸಿದ್ದೇವೆ, ಆದರೆ ಒಂದಕ್ಕೆ ಬೇರುಗಳಿಲ್ಲ, ಅಲ್ಲವೆ? ಈ ಚಟುವಟಿಕೆಯು ಬೇರುಗಳ ಮುಖ್ಯವಾದ ಕಾರ್ಯವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆಯೆ?
ಬೇರಿನ ಮತ್ತೊಂದು ಕಾರ್ಯವನ್ನು ಕಲಿಯಲು ಒಂದು ಚಟುವಟಿಕೆಯನ್ನು ಮಾಡೋಣ.

ಚಟುವಟಿಕೆ 7
ಕಡ್ಲೆಕಾಳಿನ ಮತ್ತು ಮೆಕ್ಕೆಜೋಳದ ಬೀಜಗಳು, ಹತ್ತಿ, ಬಟ್ಟಲು ಮತ್ತು ಸ್ವಲ್ಪ ನೀರಿನ ಅವಶ್ಯಕತೆ ನಮಗೆ ಇದೆ.

ಎರಡು ಬಟ್ಟಲುಗಳನ್ನು ತೆಗೆದುಕೊಳ್ಳಿ. ಅವುಗಳಲ್ಲಿ ಸ್ವಲ್ಪ ಒದ್ದೆಯಾದ ಹತ್ತಿಯನ್ನಿಡಿ. ಒಂದರಲ್ಲಿ 3-4 ಕಡ್ಲೆಕಾಳು ಮತ್ತೊಂದರಲ್ಲಿ 3-4 ಮೆಕ್ಕೆಜೋಳದ ಬೀಜಗಳನ್ನು ಹಾಕಿ. ಮೊಳಕೆಗಳು ಚಿಕ್ಕ ಸಸ್ಯಗಳಾಗಿ ಬೆಳೆಯುವವರೆಗೂ, ಪ್ರತಿದಿನ ನೀರು ಚಿಮುಕಿಸಿ ಹತ್ತಿಯನ್ನು ಒದ್ದೆಯಾಗಿಡಿ. ಒಂದು ವಾರದ ನಂತರ ಎಳೆಯ ಸಸಿಗಳನ್ನು ಹತ್ತಿಯಿಂದ ಬೇರ್ಪಡಿಸಲು ಪ್ರಯತ್ನಿಸಿ (ಚಿತ್ರ 7.14).

ಬೇರುಗಳಿಂದ ಹತ್ತಿಯನ್ನು ಬೇರ್ಪಡಿಸುವುದು ಸುಲಭವಾಯಿತೆ? ಏಕೆ?
ಚಟುವಟಿಕೆ 6ರಲ್ಲಿ, ಸಸ್ಯಗಳನ್ನು ಮಣ್ಣಿನಿಂದ ಸುಲಭವಾಗಿ ಎಳೆಯಲು ನಮಗೆ ಸಾಧ್ಯವಾಗಲಿಲ್ಲ, ಅಲ್ಲವೆ? ನಾವು ಅವುಗಳನ್ನು ಅಗೆದು ತೆಗೆದೆವು. ಏಕೆಂದರೆ ಸಸ್ಯಗಳು ಮಣ್ಣಿನಲ್ಲಿ ಸ್ಥಿರವಾಗಿ ನಿಲ್ಲಲು ಬೇರುಗಳು ಸಹಕರಿಸುತ್ತವೆ. ಸಸ್ಯಗಳು ಮಣ್ಣಿನಲ್ಲಿರಲು ಅವು ಆಧಾರ ನೀಡುತ್ತವೆ.
ನೀವು ವಿವಿಧ ಬಗೆಯ ಕಾಂಡಗಳು ಮತ್ತು ಎಲೆಗಳಿರುವುದನ್ನು ನೋಡಿದ್ದೀರಿ. ಬೇರುಗಳು ಸಹ ವೈವಿಧ್ಯವನ್ನು ತೋರಿಸುತ್ತವೆಯೆ? ನಾವು ಕಂಡುಹಿಡಿಯೋಣ.

ಚಟುವಟಿಕೆ 8
ಚಿತ್ರ 7.15 (ಎ) ಮತ್ತು (ಬಿ)ಗಳನ್ನು ಎಚ್ಚರಿಕೆಯಿಂದ ಅಭ್ಯಸಿಸಿ. ಈಗ, ಮೊದಲು ಮಾಡಿದ ಚಟುವಟಿಕೆಯಲ್ಲಿ ಹತ್ತಿಯಿಂದ ಎಳೆದ ಕಡ್ಲೆಕಾಳಿನ ಸಸ್ಯಗಳ ಬೇರುಗಳನ್ನು ನೋಡಿ. ಅವು ಚಿತ್ರ 7.15 (ಎ) ಅಥವಾ ಚಿತ್ರ 7.15 (ಬಿ)ನಲ್ಲಿ ತೋರಿಸಿರುವ ಬೇರುಗಳಂತಿವೆಯೆ?

ಮೆಕ್ಕೆಜೋಳದ ಸಸ್ಯದ ಬೇರುಗಳ ಬಗ್ಗೆ ಏನು ಹೇಳುವಿರಿ? ಚಿತ್ರಗಳೊಂದಿಗೆ ಬೇರುಗಳನ್ನು ಹೊಂದಿಸಿದ ನಂತರ, ಚಿತ್ರದಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳಲ್ಲಿ ಕಡ್ಲೆಕಾಳು ಅಥವಾ ಮೆಕ್ಕೆಜೋಳ ಎಂದು ಬರೆಯಿರಿ.

ಯಾವ ರೀತಿಯಲ್ಲಿ ಕಡ್ಲೆಕಾಳು ಮತ್ತು ಮೆಕ್ಕೆಜೋಳದ ಬೇರುಗಳು ಒಂದೇ ರೀತಿಯಿವೆ? ಯಾವ ರೀತಿಯಲ್ಲಿ ಅವು ಭಿನ್ನವಾಗಿವೆ? ಎರಡು ವಿಭಿನ್ನ ರೀತಿಯ ಬೇರುಗಳಿರುವಂತೆ ಕಾಣುತ್ತವೆ ಅಲ್ಲವೆ? ಬೇರೆ ರೀತಿಯ ಬೇರುಗಳೂ ಇವೆಯೆ? ನಾವು ಕಂಡು ಹಿಡಿಯೋಣ.

ಚಟುವಟಿಕೆ 9
ಅನೇಕ ಸಸ್ಯಗಳು ಬೆಳೆಯುತ್ತಿರುವ ಬಯಲು ಪ್ರದೇಶಕ್ಕೆ ಹೋಗಿ ಕೆಲವು ಸಸ್ಯಗಳನ್ನು ಅಗೆದು ತೆಗೆಯಿರಿ. ಬೇರುಗಳನ್ನು ತೊಳೆದು ಮಣ್ಣನ್ನು ತೆಗೆಯಿರಿ ಮತ್ತು ಅವುಗಳನ್ನು ಗಮನಿಸಿ. ನೀವು ಅಗೆದಿರುವ ಎಲ್ಲಾ ಸಸ್ಯಗಳ ಬೇರುಗಳು ಚಿತ್ರ 7.16 (ಎ) ಅಥವಾ ಚಿತ್ರ 7.16 (ಬಿ)ನಲ್ಲಿರುವಂತೆ ಇವೆಯೆ?

ಚಿತ್ರ 7.16 (ಎ)ನಲ್ಲಿ ತೋರಿಸಿರುವ ರೀತಿಯ ಬೇರುಗಳಲ್ಲಿ, ಪ್ರಧಾನ ಬೇರನ್ನು ತಾಯಿ ಬೇರು (ಣಚಿಠಿ ಡಿooಣ) ಎಂದು ಕರೆಯುತ್ತೇವೆ ಮತ್ತು ಸಣ್ಣ ಬೇರುಗಳನ್ನು ಪಾಶ್ರ್ವ ಬೇರುಗಳು (lateral roots) ಎನ್ನುತ್ತೇವೆ. ಚಿತ್ರ 7.16 (ಬಿ)ನಲ್ಲಿ ತೋರಿಸಿರುವಂಥಹ ಸಸ್ಯಗಳಲ್ಲಿ ಪ್ರಧಾನ ಬೇರು ಇರುವುದಿಲ್ಲ. ಎಲ್ಲ ಬೇರುಗಳು ಒಂದೇ ರೀತಿಯಿರುತ್ತವೆ ಮತ್ತು ಇವುಗಳನ್ನು ತಂತು ಬೇರುಗಳು (fibrous roots) ಎನ್ನುತ್ತೇವೆ.

ನೀವು ಸಂಗ್ರಹಿಸಿರುವ ಸಸ್ಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ-ಎ ಗುಂಪಿಗೆ ತಾಯಿಬೇರು ಇರುವ ಸಸ್ಯಗಳನ್ನು ಮತ್ತು ಬಿ ಗುಂಪಿಗೆ ತಂತು ಬೇರುಗಳಿರುವ ಸಸ್ಯಗಳನ್ನು ಸೇರಿಸಿ. ಎ ಗುಂಪಿನಲ್ಲಿರುವ ಸಸ್ಯಗಳನ್ನು ನೋಡಿ. ಯಾವ ಬಗೆಯ ಸಿರಾ ವಿನ್ಯಾಸ ಅವುಗಳಲ್ಲಿದೆ? ಬಿ ಗುಂಪಿನ ಸಸ್ಯಗಳಲ್ಲಿ ಯಾವ ಬಗೆಯ ಸಿರಾ ವಿನ್ಯಾಸವನ್ನು ನೀವು ನೋಡುವಿರಿ?

ಎಲೆಯ ಸಿರಾ ವಿನ್ಯಾಸ ಮತ್ತು ಬೇರುಗಳ ವಿಧಕ್ಕೆ ಒಂದು ಕುತೂಹಲಕಾರಿ ರೀತಿಯಲ್ಲಿ ಸಂಬಂಧ ಇದೆಯೆಂದು ನೀವು ಗಮನಿಸುವಿರ? ಇಲ್ಲಿಯವರೆಗೆ ನೀವು ಅಧ್ಯಯನ ಮಾಡಿದ ಸಸ್ಯಗಳ ಸಿರಾ ವಿನ್ಯಾಸದ ವಿಧ ಮತ್ತು ಬೇರಿನ ವಿಧವನ್ನು ಕೋಷ್ಟಕ 7.2ರಲ್ಲಿ ಹೊಂದಿಸಬಲ್ಲಿರ?

ನೀರು ಮತ್ತು ಖನಿಜಗಳನ್ನು ಬೇರುಗಳು ಮಣ್ಣಿನಿಂದ ಹೀರುತ್ತವೆ ಮತ್ತು ಕಾಂಡವು ಎಲೆಗಳಿಗೆ ಹಾಗೂ ಸಸ್ಯದ ಇತರೆ ಭಾಗಗಳಿಗೆ ಇವುಗಳನ್ನು ಸಾಗಿಸುತ್ತದೆ ಎಂದು ನಾವು ಕಲಿತೆವು. ಎಲೆಗಳು ಆಹಾರವನ್ನು ತಯಾರಿಸುತ್ತವೆ. ಈ ಆಹಾರವು ಕಾಂಡದಲ್ಲಿ ಹಾದುಹೋಗುತ್ತದೆ ಮತ್ತು ಸಸ್ಯದ ವಿವಿಧ ಭಾಗಗಳಲ್ಲಿ ಶೇಖರಣೆಯಾಗುತ್ತದೆ. ಇವುಗಳಲ್ಲಿ ಕೆಲವು ಬೇರುಗಳಾಗಿದ್ದು ನಾವು ಇವುಗಳನ್ನು ತಿನ್ನುತ್ತೇವೆ. ಉದಾಹರಣೆಗೆ ಕ್ಯಾರೆಟ್, ಮೂಲಂಗಿ, ಸಿಹಿಗೆಣಸು, ಸವಿ ಮೂಲಂಗಿ (turnip) ಮತ್ತು ಮರಗೆಣಸು. ಆಹಾರ ಸಂಗ್ರಹವಾಗಿರುವ ಸಸ್ಯದ ಅನೇಕ ಭಾಗಗಳನ್ನು ಕೂಡ ನಾವು ಸೇವಿಸುತ್ತೇವೆ.
ಕಾಂಡವು ದ್ವಿಮುಖ ಸಂಚಾರದ ರಸ್ತೆಯಂತೆ ಎಂದು ನೀವು ಒಪ್ಪುವಿರ (ಚಿತ್ರ 7.17)? ಕಾಂಡದಲ್ಲಿ ಮೇಲೆ ಹೋಗುವ ವಸ್ತು ಮತ್ತು ಕಾಂಡದ ಕೆಳಗೆ ಬರುವ ವಸ್ತುವಿನ ಹೆಸರನ್ನು ಬರೆಯಿರಿ.


ಮುಂದಿನ ಭಾಗದಲ್ಲಿ, ಒಂದು ಹೂವಿನ ರಚನೆಯನ್ನು ನಾವು ಕಲಿಯೋಣ.

7.5 ಹೂ

ಚಿತ್ರ 7.18 (ಎ), (ಬಿ) ಮತ್ತು (ಸಿ)ನಲ್ಲಿ ಗುಲಾಬಿಯ ಮೂರು ರೆಂಬೆಗಳನ್ನು ತೋರಿಸಲಾಗಿದೆ. ಸಸ್ಯವನ್ನು ಗುರುತಿಸಲು ಇವುಗಳಲ್ಲಿ ಯಾವುದು ಉತ್ತಮ?

ಚಿತ್ರ 7.18 (ಸಿ)ನಲ್ಲಿ ಹೂವಿಗೆ ನೀವು ಯಾವ ಬಣ್ಣವನ್ನು ಬಳಸಿದಿರಿ? ಎಲ್ಲ ಹೂಗಳೂ ವರ್ಣಮಯವೇ? ಹುಲ್ಲು, ಗೋಧಿ, ಮೆಕ್ಕೆಜೋಳ, ಮಾವು ಅಥವಾ ಸೀಬೆ ಹೂಗಳನ್ನು ಯಾವಾಗಲಾದರೂ ನೀವು ನೋಡಿದ್ದೀರ? ಈ ಗಿಡಗಳಲ್ಲಿ ಹೂಗಳನ್ನೇನಾದರೂ ನೋಡಿದ್ದಲ್ಲಿ, ಅವು ಪ್ರಕಾಶಮಾನವಾದ ಬಣ್ಣಗಳುಳ್ಳವೆ?
ಕೆಲವು ಹೂಗಳನ್ನು ನಾವು ಅಭ್ಯಸಿಸೋಣ.

ಅಧ್ಯಯನಕ್ಕೆ ಹೂಗಳನ್ನು ಆಯ್ಕೆ ಮಾಡುವಾಗ ಚೆಂಡುಹೂ, ಸೇವಂತಿಗೆ ಅಥವಾ ಸೂರ್ಯಕಾಂತಿ ಹೂವನ್ನು ಆಯ್ಕೆ ಮಾಡಬೇಡಿ. ಅವು ಒಂದು ಹೂ ಅಲ್ಲ, ಆದರೆ ಹೂಗಳ ಗುಂಪುಗಳು ಎಂದು ನಿಮ್ಮ ಮುಂದಿನ ತರಗತಿಗಳಲ್ಲಿ ಕಲಿಯುವಿರಿ.

ಚಟುವಟಿಕೆ 10
ಈ ಕೆಳಗಿನ ಯಾವುದಾದರೂ ಒಂದರ ಒಂದು ಮೊಗ್ಗು ಮತ್ತು ತಲಾ ಎರಡು ತಾಜಾ ಹೂಗಳು ಬೇಕು: ದತುರಾ, ಚೀನೀ ಗುಲಾಬಿ, ಸಾಸಿವೆ, ಬದನೆ, ಬೆಂಡೆ, ಗುಲ್‍ಮೋಹರ್. ಜೊತೆಗೆ ಬ್ಲೇಡು, ಗಾಜಿನ ಪಟ್ಟಿ ಅಥವಾ ಕಾಗದದ ಹಾಳೆ, ಪೀನಮಸೂರ ಮತ್ತು ನೀರು.

ಚಿತ್ರ 7.19ನ್ನು ಎಚ್ಚರಿಕೆಯಿಂದ ಗಮನಿಸಿ. ಅರಳಿದ ಹೂವಿನ ಪ್ರಮುಖ ಭಾಗಗಳನ್ನು ನೋಡಿ. ಇವು ಹೂವಿನ ಪುಷ್ಪದಳಗಳು (petals). ವಿವಿಧ ಹೂಗಳಿಗೆ ವಿವಿಧ ಬಣ್ಣಗಳ ಪುಷ್ಪದಳಗಳಿರುತ್ತವೆ.

ಮೊಗ್ಗಿನಲ್ಲಿ ಪುಷ್ಪದಳಗಳು ಎಲ್ಲಿರುತ್ತವೆ ಎಂದು ನೀವು ಆಲೋಚಿಸಿದ್ದೀರ? ಮೊಗ್ಗಿನಲ್ಲಿ ಅತ್ಯಂತ ಪ್ರಮುಖ ಭಾಗ ಯಾವುದು? ಈ ಭಾಗವು ಸಣ್ಣ ಎಲೆಯ ರೀತಿಯ ರಚನೆಗಳಿಂದ ಆಗಿದೆಯೆಂದು ನೀವು ನೋಡಿದಿರ? ಅವುಗಳನ್ನು ಪುಷ್ಪಪತ್ರಗಳು (sepals) ಎಂದು ಕರೆಯುತ್ತೇವೆ. ಒಂದು ಹೂವನ್ನು ತೆಗೆದುಕೊಂಡು ಅದರ ಪುಷ್ಪದಳ ಮತ್ತು ಪುಷ್ಪಪತ್ರಗಳನ್ನು ಗಮನಿಸಿ. ಈಗ, ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

ಇದರಲ್ಲಿ ಎಷ್ಟು ಪುಷ್ಪಪತ್ರಗಳಿವೆ?
ಅವು ಒಂದಕ್ಕೊಂದು ಸೇರಿಕೊಂಡಿವೆಯೆ? ಪುಷ್ಪದಳ ಮತ್ತು ಪುಷ್ಪಪತ್ರಗಳ ಬಣ್ಣಗಳೇನು?
ಹೂವಿನಲ್ಲಿ ಎಷ್ಟು ಪುಷ್ಪದಳಗಳಿವೆ?
ಅವು ಒಂದಕ್ಕೊಂದು ಸೇರಿಕೊಂಡಿವೆಯೆ ಅಥವಾ ಪ್ರತ್ಯೇಕವಾಗಿವೆಯೆ?
ಸೇರಿಕೊಂಡಿರುವ ಪುಷ್ಪಪತ್ರಗಳಿರುವ ಹೂಗಳಲ್ಲಿ ಪುಷ್ಪದಳಗಳು ಪ್ರತ್ಯೇಕವಾಗಿವೆಯೆ ಅಥವಾ ಅವು ಒಟ್ಟಿಗೆ ಸೇರಿಕೊಂಡಿವೆಯೆ?

ಇಡೀ ತರಗತಿಯ ವೀಕ್ಷಣೆಗಳನ್ನು ಆಧರಿಸಿ ಕೋಷ್ಟಕ 7.3ನ್ನು ತುಂಬಿ. ಹೂಗಳಿರುವ ಸಸ್ಯಗಳನ್ನು ಹೊಂದಿರುವ ಪ್ರದೇಶಕ್ಕೆ ಕ್ಷೇತ್ರ ಪ್ರವಾಸ ಮಾಡಿ, ವೀಕ್ಷಣೆಗಳನ್ನು ಕೋಷ್ಟಕಕ್ಕೆ ಸೇರಿಸಿ. ಕೊನೆಯ ಎರಡು ಕಾಲಂಗಳನ್ನು ನಂತರ ತುಂಬಿ.

ಹೂವಿನ ಒಳ ಭಾಗಗಳನ್ನು ಸ್ಪಷ್ಟವಾಗಿ ನೋಡಲು, ಅದರ ಪುಷ್ಪದಳಗಳು ಅಂಟಿಕೊಂಡಿದ್ದರೆ ಅವನ್ನು ಕತ್ತರಿಸಿ ತೆಗೆಯಬೇಕು. ಉದಾಹರಣೆಗೆ, ದತೂರ ಮತ್ತು ಇತರೆ ಘಂಟೆಯಾಕಾರದ ಹೂಗಳಲ್ಲಿ ಒಳಗಿನ ಭಾಗಗಳನ್ನು ಸ್ಪಷ್ಟವಾಗಿ ನೋಡಲು ಪುಷ್ಪದಳಗಳನ್ನು ಉದ್ದವಾಗಿ ಕತ್ತರಿಸಿ ಹರಡಬೇಕು (ಚಿತ್ರ 7.20).

ಇತರೆ ಭಾಗಗಳನ್ನು ನೋಡಲು ಪುಷ್ಪಪತ್ರಗಳು ಮತ್ತು ಪುಷ್ಪದಳಗಳನ್ನು ತೆಗೆಯಬೇಕು. ಚಿತ್ರ 7.21ನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿ. ಹೂವನ್ನು ಸಚಿತ್ರ ವಿವರಣೆಯೊಂದಿಗೆ ಹೋಲಿಸಿ ಹೂವಿನಲ್ಲಿ ಕೇಸರಗಳು (stamens) ಮತ್ತು ಶಲಾಕೆ (pistil) ಗಳನ್ನು ಗುರುತಿಸಿ.

ಚಿತ್ರ 7.22ನ್ನು ಎಚ್ಚರಿಕೆಯಿಂದ ನೋಡಿ. ಇದು ವಿವಿಧ ಹೂಗಳಲ್ಲಿರುವ ವಿವಿಧ ಬಗೆಯ ಕೇಸರಗಳನ್ನು ತೋರಿಸುತ್ತದೆ. ನಿಮ್ಮಲ್ಲಿರುವ ಹೂವಿನಲ್ಲಿ ಕೇಸರದ ಎರಡು ಭಾಗಗಳನ್ನು ಗುರುತಿಸಬಲ್ಲಿರ? ಹೂವಿನಲ್ಲಿ ಎಷ್ಟು ಕೇಸರಗಳಿವೆ? ಒಂದು ಕೇಸರದ ಚಿತ್ರ ಬರೆದು ಅದರ ಭಾಗಗಳನ್ನು ಗುರುತಿಸಿ.

ಹೂವಿನ ಅತ್ಯಂತ ಒಳಭಾಗವನ್ನು ಶಲಾಕೆ ಎನ್ನುತ್ತೇವೆ. ನೀವು ಶಲಾಕೆಯನ್ನು ಸಂಪೂರ್ಣವಾಗಿ ನೋಡಲಾಗದಿದ್ದರೆ, ಉಳಿದ ಕೇಸರಗಳನ್ನೂ ತೆಗೆಯಿರಿ. ಚಿತ್ರ 7.23ರ ಸಹಾಯದೊಂದಿಗೆ, ಶಲಾಕೆಯ ಭಾಗಗಳನ್ನು ಗುರುತಿಸಿ.

ಹೂವಿನ ಶಲಾಕೆಯ ಅಂದವಾದ ಚಿತ್ರ ಬರೆದು ಭಾಗಗಳನ್ನು ಗುರುತಿಸಿ.

ಚಟುವಟಿಕೆ 11
ಈಗ ನಾವು ಹೂವಿನ ಅಂಡಾಶಯ (ovary)ದ ರಚನೆಯನ್ನು ಕಲಿಯೋಣ (ಚಿತ್ರ 7.23). ಇದು ಶಲಾಕೆಯ ಅತ್ಯಂತ ಕೆಳಭಾಗ ಮತ್ತು ಉಬ್ಬಿದ ಭಾಗ. ಇದರ ಒಳ ನೋಟ ಹೇಗಿರುತ್ತದೆಂದು ಕಲಿಯಲು ಈ ಭಾಗವನ್ನು ಕತ್ತರಿಸೋಣ. ಹೂವಿನ ಅಂಡಾಶಯವನ್ನು ಹೇಗೆ ಕತ್ತರಿಸಬೇಕೆಂದು ತಿಳಿಯಲು ಚಿತ್ರ 7.24 (ಎ) ಮತ್ತು (ಬಿ)ಯನ್ನು ಎಚ್ಚರಿಕೆಯಿಂದ ನೋಡಿ.

ಚಿತ್ರ 7.24ರಲ್ಲಿ ತೋರಿಸಿರುವಂತೆ ಅಂಡಾಶಯಗಳನ್ನು ಎರಡು ವಿಭಿನ್ನ ರೀತಿಯಲ್ಲಿ ಕತ್ತರಿಸಿ. ಅಂಡಾಶಯದ ತುಂಡುಗಳು ಒಣಗಿ ಹೋಗುವುದನ್ನು ತಡೆಯಲು ಕತ್ತರಿಸಿದ ಎರಡೂ ತುಂಡುಗಳ ಮೇಲೆ ಒಂದೊಂದು ನೀರಹನಿಯನ್ನು ಹಾಕಿ.

ಮಸೂರವನ್ನು ಬಳಸಿ ಅಂಡಾಶಯದ ಒಳಭಾಗಗಳನ್ನು ಗಮನಿಸಿ (ಚಿತ್ರ 7.25). ಅಂಡಾಶಯದಲ್ಲಿ ಸಣ್ಣ ಮಣಿಗಳಂತಹ ರಚನೆಗಳನ್ನು ನೋಡಿದಿರ? ಅವುಗಳನ್ನು ಅಂಡಕಗಳು (ovules) ಎನ್ನುತ್ತೇವೆ. ಅಂಡಾಶಯದ ಒಳಭಾಗಗಳ ಚಿತ್ರವನ್ನು ನಿಮ್ಮ ನೋಟ್‍ಪುಸ್ತಕದಲ್ಲಿ ಬರೆದು ಭಾಗಗಳನ್ನು ಗುರುತಿಸಿ.

ತೋಟಗಾರ ಅಥವಾ ಬೇರೆ ಯಾರಾದರೂ ವ್ಯಕ್ತಿಯನ್ನು ಕೇಳಿ, ಎಷ್ಟು ಹೂಗಳ ಹೆಸರುಗಳನ್ನು ತಿಳಿದುಕೊಳ್ಳಲು ಸಾಧ್ಯವೋ ಅಷ್ಟು ತಿಳಿದುಕೊಳ್ಳಿ. ನೆನಪಿಡಿ, ನಿಮಗೆ ಅವಶ್ಯವಿರುವ ಹೂಗಳಿಗಿಂತ ಹೆಚ್ಚಿಗೆ ಕೀಳಬೇಡಿ. ಕೋಷ್ಟಕ 7.3ರಲ್ಲಿ ನೀವು ತುಂಬಿಸಿರುವ ಮಾಹಿತಿಯ ಆಧಾರದ ಮೇಲೆ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

ಎಲ್ಲ ಹೂಗಳಲ್ಲೂ ಪುಷ್ಪಪತ್ರ, ಪುಷ್ಪದಳ, ಕೇಸರ ಮತ್ತು ಶಲಾಕೆಗಳಿರುತ್ತವೆಯೆ? ಇವುಗಳಲ್ಲಿ ಒಂದು ಅಥವಾ ಹೆಚ್ಚು ಭಾಗಗಳು ಇಲ್ಲದಿರುವ ಹೂಗಳಿವೆಯೆ? ಈ ಭಾಗಗಳಲ್ಲದೆ ಇನ್ನಿತರ ಭಾಗಗಳು ಇರುವ ಹೂಗಳಿವೆಯೆ?

ಪುಷ್ಪಪತ್ರ ಮತ್ತು ಪುಷ್ಪದಳಗಳು ಒಂದೇ ರೀತಿಯಿರುವ ಯಾವುದಾದರು ಹೂವನ್ನು ನೀವು ನೋಡಿರುವಿರ?

ಕೇಸರಗಳ ಸಂಖ್ಯೆ ಹಾಗೂ ಪುಷ್ಪದಳಗಳ ಸಂಖ್ಯೆ ಬೇರೆ ಬೇರೆ ಇರುವ ಹೂವನ್ನು ನೀವು ನೋಡಿರುವಿರ?

ಹೂವಿನ ರಚನೆ ಯಾವಾಗಲೂ ಒಂದೇ ತರಹ ಇರುವುದಿಲ್ಲವೆಂದು ಈಗ ನೀವು ಒಪ್ಪಿಕೊಳ್ಳುವಿರ? ವಿಭಿನ್ನ ಹೂಗಳಲ್ಲಿ ವಿಭಿನ್ನ ಸಂಖ್ಯೆಯ ಪುಷ್ಪಪತ್ರ, ಪುಷ್ಪದಳ, ಕೇಸರ ಮತ್ತು ಶಲಾಕೆಗಳಿರಬಹುದು. ಕೆಲವೊಮ್ಮೆ ಕೆಲವು ಭಾಗಗಳು ಇಲ್ಲದೆಯೂ ಇರಬಹುದು!

ಎಲೆ, ಕಾಂಡ ಮತ್ತು ಬೇರುಗಳ ಕೆಲವು ಲಕ್ಷಣಗಳು ಮತ್ತು ಕಾರ್ಯಗಳ ಬಗ್ಗೆ ನಾವು ಕಲಿತೆವು. ವಿವಿಧ ಹೂಗಳ ರಚನೆಯ ಬಗ್ಗೆ ನಾವು ಕಲಿತೆವು. ಹೂಗಳ ಕಾರ್ಯಗಳ ಬಗ್ಗೆ ಮತ್ತು ಹಣ್ಣುಗಳ ಬಗ್ಗೆ ಮುಂದಿನ ತರಗತಿಗಳಲ್ಲಿ ಕಲಿಯೋಣ.

ಪ್ರಮುಖ ಪದಗಳು

ಅಡರು ಬಳ್ಳಿಗಳು
ಎಲೆಯ ತೊಟ್ಟು
ಸಾಗಿಸು
ದ್ಯುತಿಸಂಶ್ಲೇಷಣೆ
ನೆಲಬಳ್ಳಿಗಳು
ಶಲಾಕೆ
ತಂತು ಬೇರುಗಳು
ಜಾಲಿಕಾರೂಪ ವಿನ್ಯಾಸ
ಗಿಡ ಮೂಲಿಕೆಗಳು
ಪುಷ್ಪಪತ್ರ
ಪತ್ರ ಪಟಲ
ಪೊದೆಗಳು
ಪಾಶ್ರ್ವ ಬೇರುಗಳು
ಕೇಸರ
ಮಧ್ಯ ಸಿರೆ
ತಾಯಿಬೇರು
ಅಂಡಕ
ಬಾಷ್ಪವಿಸರ್ಜನೆ
ಸಮಾನಾಂತರ ಸಿರಾ ವಿನ್ಯಾಸ
ಮರಗಳು
ಪುಷ್ಪದಳ
ಸಿರೆಗಳು

ಸಾರಾಂಶ

● ಸಸ್ಯಗಳ ಎತ್ತರ, ಕಾಂಡಗಳು ಮತ್ತು ರೆಂಬೆಗಳ ಆಧಾರದ ಮೇಲೆ ಸಾಮಾನ್ಯವಾಗಿ ಅವುಗಳನ್ನು ಗಿಡಮೂಲಿಕೆ, ಪೊದೆ ಮತ್ತು ಮರಗಳನ್ನಾಗಿ ಗುಂಪು ಮಾಡುತ್ತೇವೆ.
● ಎಲೆ, ಹೂ ಮತ್ತು ಹಣ್ಣುಗಳು ಕಾಂಡದಲ್ಲಿ ಇರುತ್ತವೆ.
● ಸಾಮಾನ್ಯವಾಗಿ ಎಲೆಯಲ್ಲಿ ಎಲೆಯ ತೊಟ್ಟು ಮತ್ತು ಒಂದು ಪತ್ರ ಪಟಲ ಇರುತ್ತದೆ.
● ಎಲೆಯ ಮೇಲಿರುವ ಸಿರೆಗಳ ನಮೂನೆಯನ್ನು ಸಿರಾ ವಿನ್ಯಾಸ ಎನ್ನುತ್ತೇವೆ. ಅದು ಜಾಲಿಕಾರೂಪ ಸಿರಾ ವಿನ್ಯಾಸ ಅಥವಾ ಸಮಾನಾಂತರ ಸಿರಾ ವಿನ್ಯಾಸ ಇರಬಹುದು.
● ಎಲೆಗಳು ಬಾಷ್ಪವಿಸರ್ಜನೆ ಎಂಬ ಪ್ರಕ್ರಿಯೆಯ ಮೂಲಕ ನೀರಾವಿಯನ್ನು ಆಚೆ ಹಾಕುತ್ತವೆ.
● ಸೂರ್ಯನ ಬೆಳಕಿನ ಇರುವಿಕೆಯಲ್ಲಿ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರನ್ನು ಬಳಸಿಕೊಂಡು ದ್ಯುತಿಸಂಶ್ಲೇಷಣೆ ಎನ್ನುವ ಕ್ರಿಯೆಯ ಮೂಲಕ ಹಸಿರು ಎಲೆಗಳು ಆಹಾರವನ್ನು ತಯಾರಿಸುತ್ತವೆ.
● ನೀರು ಮತ್ತು ಖನಿಜಾಂಶಗಳನ್ನು ಬೇರುಗಳು ಮಣ್ಣಿನಿಂದ ಹೀರುತ್ತವೆ ಹಾಗು ಸಸ್ಯವನ್ನು ಮಣ್ಣಿನಲ್ಲಿ ದೃಢವಾಗಿ ಹಿಡಿದಿಟ್ಟಿರುತ್ತವೆ.
● ಬೇರುಗಳಲ್ಲಿ ಮುಖ್ಯವಾಗಿ ಎರಡು ಬಗೆ – ತಾಯಿಬೇರು ಮತ್ತು ತಂತುಬೇರುಗಳು.
● ಎಲೆಗಳಲ್ಲಿ ಜಾಲಿಕಾರೂಪ ಸಿರಾ ವಿನ್ಯಾಸವಿರುವ ಸಸ್ಯಗಳಲ್ಲಿ ತಾಯಿಬೇರುಗಳಿರುತ್ತವೆ ಆದರೆ ಎಲೆಗಳಲ್ಲಿ ಸಮಾನಾಂತರ ಸಿರಾ ವಿನ್ಯಾಸವಿರುವ ಸಸ್ಯಗಳಲ್ಲಿ ತಂತುಬೇರುಗಳಿರುತ್ತವೆ.
● ಬೇರಿನಿಂದ ಎಲೆಗಳಿಗೆ ನೀರನ್ನು ಮತ್ತು ಎಲೆಗಳಿಂದ ಸಸ್ಯದ ಇತರೆ ಭಾಗಗಳಿಗೆ ಆಹಾರವನ್ನು ಕಾಂಡವು ಸಾಗಿಸುತ್ತದೆ.
● ಪುಷ್ಪಪತ್ರಗಳು, ಪುಷ್ಪದಳಗಳು, ಕೇಸರಗಳು ಮತ್ತು ಶಲಾಕೆ ಹೂವಿನ ಭಾಗಗಳು.

ಸಂವೇದ ವಿಡಿಯೋ ಪಾಠಗಳು

Samveda – 6th – Science – Sasyagalinda Tiliyona (Part 1 of 2)
Samveda – 6th – Science – Sasyagalinda Tiliyona (Part 2 of 2) 

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

Structure of a Leaf | Science Tutorial
How Do Trees Transport Water from Roots to Leaves? | California Academy of Sciences
Travel Deep Inside a Leaf – Annotated Version | California Academy of Sciences
ROOT SYSTEM
Grow / Plant Corn In Cotton
Class 6 Science ROOTS DIFFERENT TYPES OF ROOTS
Time-Lapse: Watch Flowers Bloom Before Your Eyes | Short Film Showcase
Science – Parts of a Pistil

ಸೂಚಿತ ಯೋಜನಾ ಕಾರ್ಯ ಮತ್ತು ಚಟುವಟಿಕೆಗಳು

ಎಲೆಯ ತಜ್ಞರಾಗಿ
ಕೆಲವು ವಾರಗಳ ಅವಧಿಯಲ್ಲಿ ಅನೇಕ ಎಲೆಗಳೊಂದಿಗೆ ಈ ಚಟುವಟಿಕೆಯನ್ನು ಮಾಡಿ. ನೀವು ಅಧ್ಯಯನ ಮಾಡಲು ಇಚ್ಛಿಸುವ ಪ್ರತಿಯೊಂದು ಎಲೆಯನ್ನು ಕಿತ್ತು ಒದ್ದೆ ಬಟ್ಟೆಯಿಂದ ಸುತ್ತಿ, ಅದನ್ನು ಮನೆಗೆ ಕೊಂಡೊಯ್ಯಿರಿ. ಪ್ರತಿಯೊಂದು ಎಲೆಯನ್ನು ಬೇರೆಯಾಗಿ ವಾರ್ತಾ ಪತ್ರಿಕೆಯ ಮಡಿಕೆಯಲ್ಲಿಟ್ಟು ಭಾರವಾದ ಪುಸ್ತಕವನ್ನು ಅದರ ಮೇಲಿಡಿ. ನಿಮ್ಮ ಹಾಸಿಗೆ ಅಥವಾ ಪೆಟ್ಟಿಗೆಯ ಕೆಳಗೆ ಕೂಡ ಇಡಬಹುದು! ಒಂದು ವಾರದನಂತರ ಎಲೆಯನ್ನು ಈಚೆ ತೆಗೆಯಿರಿ. ಒಂದು ಕಾಗದಕ್ಕೆ ಅಂಟಿಸಿ ಮತ್ತು ಅದರ ಬಗ್ಗೆ ಒಂದು ಪದ್ಯ ಅಥವಾ ಕಥೆಯನ್ನು ಬರೆಯಿರಿ. ನಿಮ್ಮ ಪುಸ್ತಕದಲ್ಲಿ ಅಂಟಿಸಿರುವ ಎಲೆಗಳ ಸಂಗ್ರಹದಿಂದ ನೀವು ಎಲೆ ತಜ್ಞರಾಗಬಹುದು.

DIY Herbarium Sheet | ThinkTac | Science Experiment