ಜನವಸತಿಗಳು – ಪಾಠ – 10

ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬ ಗಾದೆ ಮಾತನ್ನು ಕೇಳಿರುತ್ತೀರಿ. ಮನೆ ನಮಗೆಲ್ಲ ಗೊತ್ತಿರುವ ಪದ. ಆದಿ ಮಾನವರು ಗುಹೆ ಮತ್ತು ಮರದ ಪೊಟರೆಗಳನ್ನು ಆಶ್ರಯಿಸಿ ಬಿಸಿಲು, ಮಳೆ, ಗಾಳಿ ಹಾಗೂ ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯುತ್ತಿದ್ದರು. ಹಾಗಾಗಿ ಇವು ಮಾನವನ ಮೊದಲ ವಸತಿಗಳು ಎನಿಸಿದವು. ನಾಗರಿಕನಾದ ಮಾನವ ಒಂದೆಡೆ ನೆಲೆ ನಿಂತಾಗ ಮನೆಯ ಅವಶ್ಯಕತೆ ಹೆಚ್ಚಾಯಿತು. ನಾಗರಿಕ ಮಾನವನಿಂದ ಆರಂಭಗೊಂಡ ವಸತಿ ನಿರ್ಮಾಣವು ಕಾಲ, ಸಮಯ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆಯಿಂದ ವಸತಿಯ ಅಗತ್ಯತೆ ಹೆಚ್ಚುತ್ತಾ ಹೋಯಿತು. ವೈಯಕ್ತಿಕ ವಸತಿ ನಿರ್ಮಾಣದಿಂದ, ಆರಂಭಗೊಂಡ ಈ ಕಾರ್ಯ ಸಾಮೂಹಿಕ ವಸತಿಗಳಾಗಿ ಬದಲಾಗಿ ಹೊಸ ರೂಪ ಪಡೆಯಿತು.

ಈ ಪಾಠವನ್ನು ಕಲಿತ ನಂತರ ನೀನು, ƒ

ಸಾಮೂಹಿಕ ಹಾಗೂ ವೈಯಕ್ತಿಕ ವಸತಿ ಯೋಜನೆಗಳ ಬಗ್ಗೆ ತಿಳಿಯುವೆ. ƒ

ಗ್ರಾಮೀಣ ಹಾಗೂ ನಗರಗಳ ವಸತಿ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವೆ.

ಕೆಳಗಿನ ಚಿತ್ರಗಳನ್ನು ಗಮನಿಸು. ಈ ಮನೆಗಳ ನಿರ್ಮಾಣದ ಬಗ್ಗೆ ಹಿಂದಿನ ತರಗತಿಯಲ್ಲಿ ತಿಳಿದಿರುವೆ. ಆಯಾ ಚಿತ್ರಗಳ ಮುಂದೆ ಮನೆ ನಿರ್ಮಾಣ ಮಾಡಲು ಬೇಕಾದ ಸಾಮಗ್ರಿಗಳನ್ನು ಬರೆ.

ಗುಡಿಸಲು, ಹೆಂಚಿನ ಮನೆ ಮತ್ತು ಕಾಂಕ್ರೀಟ್ ತಾರಸಿ ಇರುವ ವಿವಿಧ ರೀತಿಯ ಮನೆಗಳಲ್ಲಿ ಜನರು ವಾಸಿಸುತ್ತಾರೆ. ಹಳ್ಳಿ ಅಥವಾ ನಗರಗಳಲ್ಲಿ ಅನೇಕ ಕುಟುಂಬಗಳು ಅಕ್ಕ-ಪಕ್ಕದಲ್ಲಿ ಮನೆಗಳನ್ನು ಕಟ್ಟಿಕೊಂಡು ಒಂದೆಡೆ ವಾಸಿಸುತ್ತಾರೆ. ಇದನ್ನು ಜನವಸತಿಗಳು ಎನ್ನುವರು.

ಜನರು ಸ್ವತ: ತಾವೇ ನಿರ್ಮಿಸಿಕೊಂಡ ಈ ಜನವಸತಿ ಪ್ರದೇಶಗಳಲ್ಲಿ ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳು ದೊರೆಯುವುದು ಅಪರೂಪ. ಹೆಚ್ಚಿದ ಜನಸಂಖ್ಯೆ, ಜನರ ಅಗತ್ಯತೆ ಮತ್ತು ಬೇಡಿಕೆಗೆ ಅನುಗುಣವಾಗಿ ಇತ್ತೀಚೆಗೆ ಸಾಮೂಹಿಕ ವಸತಿ ಯೋಜನೆಗಳನ್ನು ಆರಂಭಿಸಲಾಗಿದೆ. ಕೆಳಗಿನ ಚಿತ್ರಗಳು ಸಾಮೂಹಿಕ ವಸತಿಗಳಿಗೆ ಉದಾಹರಣೆಗಳಾಗಿವೆ.

ಹಲವು ಅನುಕೂಲಗಳಿಗಾಗಿ ಸಾಮೂಹಿಕ ವಸತಿಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಕೆಳಗೆ ಕೆಲವು ಹೇಳಿಕೆಗಳನ್ನು ನೀಡಲಾಗಿದೆ. ಆದರೆ ಕೆಲವು ಹೇಳಿಕೆಗಳು ಸರಿಯಾದ ಕಾರಣವಾಗಿಲ್ಲ. ಸರಿಯಾದ ಕಾರಣಗಳಿಗೆ ಮಾತ್ರ ಸರಿ ಗುರುತು ಹಾಕು.

* ಸಾಮೂಹಿಕ ವಸತಿಗಳಲ್ಲಿ ಹಲವು ಕುಟುಂಬಗಳು ಒಂದೆಡೆ ವಾಸಿಸುತ್ತವೆ. ……….

* ಹಣದ ಸೌಲಭ್ಯ ಕಡಿಮೆ ಇರುವ ಹಳ್ಳಿ ಅಥವಾ ನಗರದ ಬಡ ಕುಟುಂಬಗಳಿಗೆ ಸರಕಾರವೇ ಸಾಮೂಹಿಕ ವಸತಿ ನಿರ್ಮಿಸಿ, ವಸತಿ ಸೌಲಭ್ಯ ಒದಗಿಸುತ್ತದೆ. ……….

* ಕಡಿಮೆ ಭೂಮಿಯಲ್ಲಿ ಅತಿ ಹೆಚ್ಚಿನ ಜನಸಂಖ್ಯೆಗೆ ವ್ಯವಸ್ಥಿತ ಮೂಲ ಸೌಲಭ್ಯಗಳನ್ನು ನೀಡಲು ಇವುಗಳನ್ನು ನಿರ್ಮಿಸಲಾಗುತ್ತದೆ. ……….

* ಬಹುಮಹಡಿ ವಸತಿ ಕಟ್ಟಡಗಳನ್ನು ಕೇವಲ ಒಂದೇ ಕುಟುಂಬ ವಾಸಿಸುವಂತೆ ನಿರ್ಮಾಣ ಮಾಡಲಾಗಿರುತ್ತದೆ. ………..

ಸಾಮೂಹಿಕ ವಸತಿಗಳ ಮುಖ್ಯ ಉದ್ದೇಶಗಳೆಂದರೆ –

* ವೈಯಕ್ತಿಕ ಕುಟುಂಬಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಮನೆಗಳಲ್ಲಿ ನೀಡುವುದು.

* ಎಲ್ಲ ಮನೆಗಳಿಗೆ ಸಾರ್ವತ್ರಿಕವಾಗಿ ಬೇಕಾದ ಉತ್ತಮ ರಸ್ತೆ, ಸಂಚಾರ ವ್ಯವಸ್ಥೆ, ದೀಪ, ನೀರು, ಕಸ ವಿಲೇವಾರಿಗಳನ್ನು ಯೋಜನಾ ಬದ್ಧವಾಗಿ ಮಾಡಲಾಗುವುದು.

* ಸಾಮೂಹಿಕವಾಗಿ ಅವಶ್ಯವಿರುವ ಉದ್ಯಾನ, ಆಸ್ಪತ್ರೆ ಇತ್ಯಾದಿಗಳನ್ನು ನಿರ್ಮಿಸುವುದು.

* ಸಾಮೂಹಿಕ ವಸತಿಯನ್ನು ಪ್ರಾದೇಶಿಕ ಮುಖ್ಯ ರಸ್ತೆಗೆ ಸೇರಿಸುವುದು.

ಈ ಕೆಳಗಿನ ಚಾರ್ಟ್‍ನಲ್ಲಿ ಸಾಮೂಹಿಕ ವಸತಿಗಳಲ್ಲಿ ಕಂಡುಬರುವ ಸೌಲಭ್ಯಗಳನ್ನು ಕೊಡಲಾಗಿದೆ. ಗಮನಿಸು.

ಸಾಮಾನ್ಯವಾಗಿ ಸಾಮೂಹಿಕ ವಸತಿ ಯೋಜನೆಗಳನ್ನು ಹಳ್ಳಿ ಹಾಗೂ ನಗರಗಳಲ್ಲಿ ಸೂಕ್ತವಾದ ಸ್ಥಳಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಹಳ್ಳಿಗಳಲ್ಲಿ ಸರ್ಕಾರಗಳು ಸಾಮೂಹಿಕ ವಸತಿಗಳನ್ನು ನಿರ್ಮಿಸುತ್ತದೆ. ನಗರಗಳಲ್ಲಿ ವಸತಿ ನಿರ್ಮಾಣಕ್ಕಾಗಿಯೇ ಪ್ರತ್ಯೇಕ ಮಂಡಳಿಗಳನ್ನು ಸರ್ಕಾರ ರಚನೆ ಮಾಡಿರುತ್ತದೆ. ನಗರ ಅಥವಾ ಹಳ್ಳಿಗಳಲ್ಲಿ ಜನವಸತಿಗಳನ್ನು ನಿರ್ಮಿಸುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಮೇಲಿನ ಚಿತ್ರಗಳು ವಸತಿ ಪ್ರದೇಶಗಳಲ್ಲಿನ ಕೆಲವು ಸಮಸ್ಯೆಗಳನ್ನು ಬಿಂಬಿಸುತ್ತವೆ.

ಕೆಳಗಿನ ಹೇಳಿಕೆಗಳನ್ನು ಗಮನಿಸು. ನಗರ / ಹಾಗೂ ಗ್ರಾಮೀಣ ಪ್ರದೇಶದ ವಸತಿ ಸಮಸ್ಯೆಗಳಲ್ಲಿ ಕೆಲವನ್ನು ನೀಡಿದೆ. ಉಳಿದವುಗಳನ್ನು ಗೆಳೆಯ/ಗೆಳತಿಯರೊಂದಿಗೆ ಚರ್ಚಿಸಿ ಬರೆ. (ಶಿಕ್ಷಕರ ನೆರವು ಪಡೆ)

ನಗರ ಪ್ರದೇಶದ ವಸತಿ ಸಮಸ್ಯೆಗಳು

* ಸಮರ್ಪಕ ಒಳಚರಂಡಿ ವ್ಯವಸ್ಥೆ ಇರುವುದಿಲ್ಲ.

* ಕಸ/ತ್ಯಾಜ್ಯದ ವಿಲೇವಾರಿ ಸಮಸ್ಯೆ.

* ಬಹುಮಹಡಿ ವಸತಿ ಕಟ್ಟಡಗಳಲ್ಲಿ ಆಗಾಗ್ಗೆ ಸಂಭವಿಸುವ ಅಗ್ನಿ ದುರಂತಗಳು.

* ………………………………………

* ………………………………………

ಗ್ರಾಮೀಣ ಪ್ರದೇಶದ ವಸತಿ ಸಮಸ್ಯೆಗಳು

* ಸ್ನಾನ ಗೃಹ, ಶೌಚಾಲಯ ಇಲ್ಲದಿರುವಿಕೆ.

* ವಿದ್ಯುತ್ ಸೌಲಭ್ಯ ಇಲ್ಲದಿರುವಿಕೆ.

* ಶುದ್ಧ ಕುಡಿಯುವ ನೀರಿನ ಸರಬರಾಜು ಇಲ್ಲದಿರುವಿಕೆ.

* ವಾಹನ ಸಂಚಾರಕ್ಕೆ ಸೂಕ್ತವಲ್ಲದ ಬೀದಿಗಳು.

* ಒಳ ಚರಂಡಿಯ ಸೌಲಭ್ಯ ಇಲ್ಲದಿರುವುದು.

* ………………………………………

* ………………………………………

ನಗರ ಹಾಗೂ ಗ್ರಾಮೀಣ ಪ್ರದೇಶದ ವಸತಿ ಸಮಸ್ಯೆಗಳ ಪಟ್ಟಿ ಗಮನಿಸು. ಒಂದು ಉತ್ತಮ ನಗರ ವಸತಿ/ ಹಳ್ಳಿ ವಸತಿಯು ಹೊಂದಿರಬೇಕಾದ ಕೆಲವು ಸೌಲಭ್ಯಗಳನ್ನು ನೀಡಿದೆ ಗಮನಿಸು.

ಉತ್ತಮ ನಗರ ಅಥವಾ ಹಳ್ಳಿಯ ವಸತಿಯ ಲಕ್ಷಣಗಳು

* ಗಾಳಿ, ಬೆಳಕು ಯಥೇಚ್ಛವಾಗಿ ಬರುವಂತಿರಬೇಕು.

* ಪ್ರತಿ ಮನೆಯ ಮೇಲ್ಛಾವಣಿಯು ಮಳೆ ಕೊಯ್ಲು ಅನುಸರಿಸಿ ಮಳೆ ನೀರು ಸಂಗ್ರಹ ಮಾಡುವ ವ್ಯವಸ್ಥೆ ಇರುತ್ತದೆ.

* ಸೌರಶಕ್ತಿಯಿಂದ ವಿದ್ಯುತ್ ಪಡೆಯುವಿಕೆ.

* ಮುಚ್ಚಿದ ಒಳಚರಂಡಿ ವ್ಯವಸ್ಥೆ.

* ಕಸವಿಲೇವಾರಿ ಮಾಡಲು ಸಮರ್ಪಕ ವ್ಯವಸ್ಥೆ ಇರುತ್ತದೆ. ಕಸದಿಂದ ಗೊಬ್ಬರ ತಯಾರಿಸುವ ವ್ಯವಸ್ಥೆ.

ಒಟ್ಟಾರೆ ಉತ್ತಮ ವಸತಿಯು ಅಲ್ಲಿ ವಾಸಿಸುವ ಕುಟುಂಬದ ಸದಸ್ಯರಿಗೆ ಹಾಗೂ ನೆರೆಯವರಿಗೆ ಆರೋಗ್ಯ, ಸಂತಸ ಮತ್ತು ನೆಮ್ಮದಿ ನೀಡಬಲ್ಲದು. ಉತ್ತಮ ಸೌಲಭ್ಯವುಳ್ಳ ವಸತಿ ಉತ್ತಮ ಆರೋಗ್ಯಕ್ಕೆ ಸಹಕಾರಿ.

ಸಂವೇದ ವಿಡಿಯೋ ಪಾಠಗಳು

Samveda – 5th – EVS – Janavasati

ಪೂರಕ ವಿಡಿಯೋಗಳು

ಜನವಸತಿಗಳು | ಪರಿಸರ ಅಧ್ಯಯನ | 5ನೇ ತರಗತಿ |ಪಾಠ 10| Janavasatigalu|5th Std EVS Chapter 10

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.