ಆಹಾರದ ಘಟಕಗಳು – ಅಧ್ಯಾಯ-2

ನಾವು ತಿನ್ನುವ ಆಹಾರ ಪದಾರ್ಥಗಳ ಪಟ್ಟಿಯನ್ನು ಅಧ್ಯಾಯ 1 ರಲ್ಲಿ ಮಾಡಿದೆವು. ಭಾರತದ ವಿವಿಧ ಭಾಗಗಳಲ್ಲಿ ಜನರು ತಿನ್ನುವ ಆಹಾರ ಪದಾರ್ಥಗಳನ್ನು ಗುರುತಿಸಿ, ಭಾರತದ ನಕ್ಷೆಯಲ್ಲಿ ಅವುಗಳನ್ನು ಗುರುತು ಮಾಡಿದೆವು.

ಒಂದು ಊಟವು ಚಪಾತಿ, ದಾಲ್ ಮತ್ತು ಬದನೆಕಾಯಿ ಪಲ್ಯವನ್ನು ಒಳಗೊಂಡಿರಬಹುದು. ಇನ್ನೊಂದರಲ್ಲಿ ಅನ್ನ, ಸಾಂಬಾರು ಮತ್ತು ಬೆಂಡೆಕಾಯಿ ಪಲ್ಯ ಇರಬಹುದು. ಮತ್ತೊಂದರಲ್ಲಿ ಪಡ್ಡು (ಗುಂಡು ಪೊಂಗ್ಲು) ಅಥವಾ ದೋಸೆ, ಮೀನಿನ ಸಾರು ಮತ್ತು ತರಕಾರಿಗಳು ಇರಬಹುದು.

ಸಾಮಾನ್ಯವಾಗಿ ನಮ್ಮ ಊಟಗಳಲ್ಲಿ ಯಾವುದಾದರೂ ಒಂದು ರೀತಿಯ ಧಾನ್ಯದಿಂದ ಮಾಡಿದ, ಕನಿಷ್ಟ ಒಂದಾದರೂ ಪದಾರ್ಥ ಇರುತ್ತದೆ. ಇತರ ಪದಾರ್ಥಗಳಾದ ದಾಲ್ ಅಥವಾ ಮಾಂಸದ ಅಡುಗೆ ಮತ್ತು ತರಕಾರಿಗಳೂ ಇರಬಹುದು. ಮೊಸರು, ಬೆಣ್ಣೆ, ಹಾಲು ಮತ್ತು ಉಪ್ಪಿನಕಾಯಿಗಳನ್ನು ಸಹ ಒಳಗೊಂಡಿರಬಹುದು. ಕೋಷ್ಟಕ 2.1ರಲ್ಲಿ ವಿವಿಧ ಪ್ರದೇಶಗಳ ಊಟದ ರೀತಿಯ ಕೆಲವು ಉದಾಹರಣೆಗಳನ್ನು ನೀಡಲಾಗಿದೆ.

ವಿವಿಧ ಆಹಾರ ಪದಾರ್ಥಗಳು ಏನನ್ನು ಒಳಗೊಂಡಿರುತ್ತವೆ?

ಪ್ರತಿಯೊಂದು ಅಡುಗೆಯು ಪ್ರಾಣಿ ಅಥವಾ ಸಸ್ಯಗಳಿಂದ ದೊರೆಯುವ ಒಂದು ಅಥವಾ ಹೆಚ್ಚು ಘಟಕಾಂಶಗಳಿಂದ ಆಗಿರುತ್ತದೆ ಎಂದು ನಮಗೆ ತಿಳಿದಿದೆ. ನಮ್ಮ ದೇಹಕ್ಕೆ ಅವಶ್ಯಕವಾದ ಕೆಲವು ಅಂಶಗಳು ಈ ಘಟಕಾಂಶಗಳಲ್ಲಿರುತ್ತವೆ. ಈ ಅಂಶಗಳನ್ನು ಪೋಷಕಗಳು (nutrients) ಎಂದು ಕರೆಯುತ್ತೇವೆ. ಕಾರ್ಬೊಹೈಡ್ರೇಟ್‍ಗಳು, ಪ್ರೊಟೀನ್‍ಗಳು, ಕೊಬ್ಬು, ವಿಟಮಿನ್‍ಗಳು ಮತ್ತು ಖನಿಜಗಳು ನಮ್ಮ ಆಹಾರದಲ್ಲಿರುವ ಮುಖ್ಯ ಪೋಷಕಗಳು. ಇದರ ಜೊತೆಗೆ ನಮ್ಮ ದೇಹಕ್ಕೆ ಅವಶ್ಯಕವಾದ ನಾರು ಪದಾರ್ಥ ಮತ್ತು ನೀರನ್ನು ಸಹ ಆಹಾರ ಒಳಗೊಂಡಿರುತ್ತದೆ.

ಈ ಎಲ್ಲ ಪೋಷಕಗಳನ್ನು ಎಲ್ಲ ಆಹಾರ ಪದಾರ್ಥಗಳು ಒಳಗೊಂಡಿರುತ್ತವೆಯೆ? ಕೆಲವು ಬೇಯಿಸಿದ ಆಹಾರದಲ್ಲಿ ಮತ್ತು ಬೇಯಿಸದ ಘಟಕಾಂಶದಲ್ಲಿ ಒಂದು ಅಥವಾ ಹೆಚ್ಚು ಪೋಷಕಗಳಿರುತ್ತವೆಯೆ ಎಂಬುದನ್ನು ನಾವು ಸರಳ ವಿಧಾನಗಳಿಂದ ಪರೀಕ್ಷಿಸಬಹುದು. ಇತರ ಪೋಷಕಗಳನ್ನು ಗುರುತಿಸುವ ಪರೀಕ್ಷೆಗಳಿಗೆ ಹೋಲಿಸಿದರೆ ಕಾರ್ಬೊಹೈಡ್ರೇಟ್‍ಗಳು, ಪ್ರೊಟೀನ್‍ಗಳು ಮತ್ತು ಕೊಬ್ಬುಗಳ ಇರುವಿಕೆಯನ್ನು ತೋರಿಸುವ ಪರೀಕ್ಷೆಗಳು ಬಹಳ ಸರಳ.

ಈ ಪರೀಕ್ಷೆಗಳನ್ನು ಮಾಡಲು ಕಾಸ್ಟಿಕ್‍ಸೋಡ, ಕಾಪರ್ (ತಾಮ್ರ) ಸಲ್ಫೇಟ್ ಮತ್ತು ಅಯೋಡಿನ್ ದ್ರಾವಣಗಳು ನಿಮಗೆ ಬೇಕಾಗುತ್ತವೆ. ಕೆಲವು ಪ್ರನಾಳಗಳು ಮತ್ತು ಒಂದು ಹನಿಗ (dropper) ಕೂಡ ನಿಮಗೆ ಬೇಕು.

ನಿಮಗೆ ಅವಶ್ಯವಿರುವ ಮೊದಲೇ ತಯಾರಾದ ದ್ರಾವಣಗಳು ಲಭ್ಯವಿಲ್ಲದಿದ್ದಲ್ಲಿ, ಈ ಕೆಳಗಿನಂತೆ ನಿಮ್ಮ ಶಿಕ್ಷಕರು ಅವುಗಳನ್ನು ತಯಾರಿಸಬಹುದು.

ವಿವಿಧ ಆಹಾರ ಪದಾರ್ಥಗಳಲ್ಲಿ ಕಾರ್ಬೊಹೈಡ್ರೇಟ್‍ಗಳು ಇವೆಯೆ ಎಂಬುದನ್ನು ತಿಳಿಯಲು ಅವುಗಳನ್ನು ಪರೀಕ್ಷಿಸುವುದರೊಂದಿಗೆ ಪ್ರಾರಂಭಿಸೋಣ. ಕಾರ್ಬೊಹೈಡ್ರೇಟ್‍ಗಳಲ್ಲಿ ಅನೇಕ ವಿಧಗಳಿವೆ. ನಮ್ಮ ಆಹಾರದಲ್ಲಿರುವ ಕಾರ್ಬೊಹೈಡ್ರೇಟ್‍ಗಳು ಮುಖ್ಯವಾಗಿ ಪಿಷ್ಟ ಮತ್ತು ಶರ್ಕರಗಳ ರೂಪದಲ್ಲಿ ಕಂಡುಬರುತ್ತವೆ. ಒಂದು ಆಹಾರ ಪದಾರ್ಥದಲ್ಲಿ ಪಿಷ್ಟ ಇರುವುದೇ ಎಂದು ನಾವು ಸುಲಭವಾಗಿ ಪರೀಕ್ಷಿಸಬಹುದು.

ಪಿಷ್ಟದ ಪರೀಕ್ಷೆ

ಸ್ವಲ್ಪ ಪ್ರಮಾಣದ ಬೇಯಿಸದ ಘಟಕಾಂಶ ಅಥವಾ ಆಹಾರ ಪದಾರ್ಥವನ್ನು ತೆಗೆದುಕೊಳ್ಳಿ. 2 – 3 ಹನಿ ದುರ್ಬಲ ಅಯೋಡಿನ್ ದ್ರಾವಣವನ್ನು ಅದರ ಮೇಲೆ ಹಾಕಿ. ಆಹಾರ ಪದಾರ್ಥದ ಬಣ್ಣದಲ್ಲಿ ಏನಾದರೂ ಬದಲಾವಣೆಯಾಗಿದೆಯೆ ವೀಕ್ಷಿಸಿ. ಅದು ಕಪ್ಪು ಮಿಶ್ರಿತ ನೀಲಿ ಬಣ್ಣಕ್ಕೆ ತಿರುಗಿತೆ?

ಕಪ್ಪು ಮಿಶ್ರಿತ ನೀಲಿ ಬಣ್ಣವು ಪಿಷ್ಟದ ಇರುವಿಕೆಯನ್ನು ಸೂಚಿಸುತ್ತದೆ.

ಪ್ರೊಟೀನ್‍ನ ಪರೀಕ್ಷೆ

ಸ್ವಲ್ಪ ಪ್ರಮಾಣದ ಆಹಾರ ಪದಾರ್ಥವನ್ನು ಪರೀಕ್ಷಿಸಲು ತೆಗೆದುಕೊಳ್ಳಿ. ನೀವು ಪರೀಕ್ಷಿಸಬೇಕಾಗಿರುವ ಆಹಾರ ಗಟ್ಟಿಯಾಗಿದ್ದರೆ, ಮೊದಲು ನೀವು ಅದರ ಪೇಸ್ಟ್ ಅಥವಾ ಪುಡಿ ಮಾಡಬೇಕಾಗುತ್ತದೆ. ಸ್ವಲ್ಪ ಪ್ರಮಾಣದ ಈ ಆಹಾರ ಪದಾರ್ಥವನ್ನು ಅರೆಯಿರಿ ಅಥವಾ ಜಜ್ಜಿ. ಇದರ ಸ್ವಲ್ಪ ಭಾಗವನ್ನು ಒಂದು ಸ್ವಚ್ಛವಾದ ಪ್ರನಾಳದಲ್ಲಿ ತೆಗೆದುಕೊಂಡು, ಅದಕ್ಕೆ ಸುಮಾರು ಹತ್ತು ಹನಿ ನೀರನ್ನು ಹಾಕಿ ಪ್ರನಾಳವನ್ನು ಕುಲುಕಿ.

ಈಗ ಹನಿಗವನ್ನು ಬಳಸಿ, ಎರಡು ಹನಿ ತಾಮ್ರದ ಸಲ್ಫೇಟ್ ದ್ರಾವಣ ಮತ್ತು ಹತ್ತು ಹನಿ ಕಾಸ್ಟಿಕ್ ಸೋಡ ದ್ರಾವಣವನ್ನು ಪ್ರನಾಳಕ್ಕೆ ಹಾಕಿ. ಪ್ರನಾಳವನ್ನು ಚೆನ್ನಾಗಿ ಕುಲುಕಿ ಮತ್ತು ಕೆಲವು ನಿಮಿಷಗಳವರೆಗೆ ಹಾಗೆಯೆ ಇರಲು ಬಿಡಿ. ನೀವು ಏನನ್ನು ನೋಡುವಿರಿ? ಪ್ರನಾಳದಲ್ಲಿರುವ ವಸ್ತುಗಳು ನೇರಳೆ ಬಣ್ಣಕ್ಕೆ ಬದಲಾಗಿವೆಯೆ? ಆಹಾರ ಪದಾರ್ಥದಲ್ಲಿ ಪ್ರೊಟೀನ್ ಇರುವಿಕೆಯನ್ನು ನೇರಳೆ ಬಣ್ಣವು ಸೂಚಿಸುತ್ತದೆ.

ಕೊಬ್ಬಿನಂಶದ ಪರೀಕ್ಷೆ
ಸ್ವಲ್ಪ ಪ್ರಮಾಣದಲ್ಲಿ ಆಹಾರ ಪದಾರ್ಥವನ್ನು ತೆಗೆದುಕೊಳ್ಳಿ. ಅದನ್ನು ಒಂದು ಸಣ್ಣ ಹಾಳೆಯಲ್ಲಿ ಸುತ್ತಿ ಮತ್ತು ಜಜ್ಜಿ. ಹಾಳೆ ಹರಿಯದ ಹಾಗೆ ಎಚ್ಚರವಹಿಸಿ. ಹಾಳೆಯನ್ನು ನೇರ ಮಾಡಿ ಎಚ್ಚರಿಕೆಯಿಂದ ವೀಕ್ಷಿಸಿ. ಅದರಲ್ಲಿ ಎಣ್ಣೆಯ ಕಲೆಯಿದೆಯೇ? ಬೆಳಕಿನ ವಿರುದ್ಧ ಹಾಳೆಯನ್ನು ಹಿಡಿಯಿರಿ. ಈ ಕಲೆಯ ಮೂಲಕ ಮಂದವಾದ ಬೆಳಕನ್ನು ನೀವು ನೋಡಲು ಸಾಧ್ಯವಾಯಿತೆ?

ಹಾಳೆಯ ಮೇಲಿನ ಎಣ್ಣೆಯ ಕಲೆಯು ಆಹಾರ ಪದಾರ್ಥದಲ್ಲಿರುವ ಕೊಬ್ಬಿನಂಶವನ್ನು ತೋರಿಸುತ್ತದೆ. ಕೆಲವೊಮ್ಮೆ ಆಹಾರ ಪದಾರ್ಥದಲ್ಲಿ ಸ್ವಲ್ಪ ನೀರಿನಂಶ ಇರಬಹುದು. ಆದ್ದರಿಂದ ಹಾಳೆಯ ಮಡಿಕೆಯಲ್ಲಿರುವ ವಸ್ತುವನ್ನು ಉಜ್ಜಿದ ನಂತರ ಸ್ವಲ್ಪ ಸಮಯ ಹಾಳೆಯನ್ನು ಒಣಗಲು ಬಿಡಿ. ಆಹಾರದಲ್ಲಿದ್ದ ನೀರಿನಂಶ ಬಂದಿದ್ದರೆ ಸ್ವಲ್ಪ ಸಮಯದ ನಂತರ ಅದು ಒಣಗುತ್ತದೆ. ಇದಾದ ನಂತರ ಹಾಳೆಯಲ್ಲಿ ಯಾವುದೇ ಎಣ್ಣೆಯ ಕಲೆಯು ಇಲ್ಲವೆಂದಾದರೆ ಆಹಾರ ಪದಾರ್ಥದಲ್ಲಿ ಯಾವುದೇ ಕೊಬ್ಬಿನಂಶ ಇರುವುದಿಲ್ಲ.

ಈ ಪರೀಕ್ಷೆಗಳು ಏನನ್ನು ತೋರಿಸುತ್ತವೆ? ನೀವು ಪರೀಕ್ಷಿಸಿದ ಎಲ್ಲ ಆಹಾರ ಪದಾರ್ಥಗಳಲ್ಲಿ ಪಿಷ್ಟ, ಪ್ರೊಟೀನ್‍ಗಳು ಮತ್ತು ಕೊಬ್ಬಿನಂಶ ಇರುತ್ತವೆಯೇ? ಒಂದು ಆಹಾರ ಪದಾರ್ಥ ಒಂದಕ್ಕಿಂತ ಹೆಚ್ಚು ಪೋಷಕಗಳನ್ನು ಒಳಗೊಂಡಿರುತ್ತದೆಯೇ? ಪೋಷಕಗಳು ಇಲ್ಲದಿರುವ ಯಾವುದಾದರೂ ಆಹಾರ ಪದಾರ್ಥವನ್ನು ಕಾಣುವಿರ?
ಕಾರ್ಬೊಹೈಡ್ರೇಟ್‍ಗಳು, ಪ್ರೊಟೀನ್‍ಗಳು ಮತ್ತು ಕೊಬ್ಬು ಈ ಮೂರು ಪೋಷಕಗಳು ಆಹಾರ ಪದಾರ್ಥಗಳಲ್ಲಿ ಇರುವುದನ್ನು ನಾವು ಪರೀಕ್ಷಿಸಿದ್ದೇವೆ. ವಿವಿಧ ಆಹಾರ ಪದಾರ್ಥಗಳಲ್ಲಿ ಇತರ ಪೋಷಕಗಳಾದ ವಿಟಮಿನ್‍ಗಳು ಮತ್ತು ಖನಿಜಗಳು ಸಹ ಇರುತ್ತವೆ. ಈ ಎಲ್ಲ ಪೋಷಕಗಳು ನಮಗೇಕೆ ಬೇಕು?

ವಿವಿಧ ಪೋಷಕಗಳು ನಮ್ಮ ದೇಹಕ್ಕೆ ಏಕೆ ಬೇಕು?
ನಮ್ಮ ದೇಹಕ್ಕೆ ಕಾರ್ಬೊಹೈಡ್ರೇಟ್‍ಗಳು ಮುಖ್ಯವಾಗಿ ಶಕ್ತಿಯನ್ನು ಒದಗಿಸುತ್ತವೆ. ಕೊಬ್ಬು ಸಹ ನಮಗೆ ಶಕ್ತಿಯನ್ನು ಕೊಡುತ್ತದೆ. ವಾಸ್ತವವಾಗಿ ನಿರ್ದಿಷ್ಟ ಮೊತ್ತದ ಕಾರ್ಬೊಹೈಡ್ರೇಟ್‍ಗಳಿಗೆ ಹೋಲಿಸಿದರೆ, ಅದೇ ಮೊತ್ತದ ಕೊಬ್ಬು ಅತಿ ಹೆಚ್ಚು ಶಕ್ತಿಯನ್ನು ಕೊಡುತ್ತದೆ. ಕಾರ್ಬೊಹೈಡ್ರೇಟ್‍ಗಳು ಮತ್ತು ಕೊಬ್ಬಿನಂಶವನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಶಕ್ತಿಯನ್ನು ಕೊಡುವ ಆಹಾರ ಪದಾರ್ಥಗಳು (energy giving foods) ಎಂದು ಸಹ ಕರೆಯುತ್ತಾರೆ (ಚಿತ್ರ 2.3 ಮತ್ತು ಚಿತ್ರ 2.4).

ನಮ್ಮ ದೇಹದ ಬೆಳವಣಿಗೆ ಮತ್ತು ದುರಸ್ತಿಗೆ ಪ್ರೊಟೀನ್‍ಗಳು ಅವಶ್ಯಕ. ಅನೇಕ ಸಲ, ಪ್ರೊಟೀನ್‍ಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ದೇಹ ನಿರ್ಮಾಣಕಾರಕ ಆಹಾರ ಪದಾರ್ಥಗಳು (body building foods) ಎಂದು ಕರೆಯುತ್ತೇವೆ (ಚಿತ್ರ 2.5).

ರೋಗಗಳು ಬರದಂತೆ ನಮ್ಮ ದೇಹವನ್ನು ರಕ್ಷಿಸಲು ವಿಟಮಿನ್‍ಗಳು ಸಹಾಯ ಮಾಡುತ್ತವೆ. ನಮ್ಮ ಕಣ್ಣುಗಳು, ಮೂಳೆಗಳು, ಹಲ್ಲುಗಳು ಮತ್ತು ದವಡೆಗಳನ್ನು ಆರೋಗ್ಯವಾಗಿಡಲು ಸಹ ವಿಟಮಿನ್‍ಗಳು ಸಹಾಯ ಮಾಡುತ್ತವೆ.

ವಿವಿಧ ಹೆಸರುಗಳಿಂದ ಕರೆಯಲಾಗುವ ಬೇರೆ ಬೇರೆ ರೀತಿಯ ವಿಟಮಿನ್‍ಗಳಿವೆ. ಇವುಗಳಲ್ಲಿ ಕೆಲವು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ ಮತ್ತು ಕೆ. ವಿಟಮಿನ್ ಬಿ – ಕಾಂಪ್ಲೆಕ್ಸ್ ಎನ್ನುವ ಮತ್ತೊಂದು ಗುಂಪಿನ ವಿಟಮಿನ್‍ಗಳು ಸಹ ಇವೆ. ಸ್ವಲ್ಪ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಈ ಎಲ್ಲಾ ವಿಧದ ವಿಟಮಿನ್‍ಗಳ ಅವಶ್ಯಕತೆಯಿದೆ. ನಮ್ಮ ಕಣ್ಣುಗಳು ಮತ್ತು ಚರ್ಮವನ್ನು ವಿಟಮಿನ್ ಎ ಆರೋಗ್ಯವಾಗಿಡುತ್ತದೆ. ಅನೇಕ ರೋಗಗಳ ವಿರುದ್ಧ ಹೋರಾಡಲು ವಿಟಮಿನ್ ಸಿ ಸಹಾಯ ಮಾಡುತ್ತದೆ. ಹಲ್ಲುಗಳು ಮತ್ತು ಮೂಳೆಗಳಿಗೆ ಬೇಕಾದ ಕ್ಯಾಲ್ಸಿಯಮ್ ಬಳಸಲು ನಮ್ಮ ದೇಹಕ್ಕೆ ವಿಟಮಿನ್ ಡಿ ಸಹಾಯಕ. ವಿವಿಧ ವಿಟಮಿನ್‍ಗಳು ಸಮೃದ್ಧಿಯಾಗಿರುವ ಆಹಾರ ಪದಾರ್ಥಗಳನ್ನು ಚಿತ್ರ 2.6ರಿಂದ ಚಿತ್ರ 2.9ರವರೆಗೆ ತೋರಿಸಲಾಗಿದೆ.

ನಮ್ಮ ದೇಹಕ್ಕೆ ಖನಿಜಗಳು ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತವೆ. ದೇಹದ ಸರಿಯಾದ ಬೆಳವಣಿಗೆಗೆ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಲು ಪ್ರತಿಯೊಂದೂ ಮುಖ್ಯ. ವಿವಿಧ ಖನಿಜಗಳ ಕೆಲವು ಆಕರಗಳನ್ನು ಚಿತ್ರ 2.10 ರಲ್ಲಿ ತೋರಿಸಲಾಗಿದೆ.

ಸಾಮಾನ್ಯವಾಗಿ ಬಹಳಷ್ಟು ಆಹಾರ ಪದಾರ್ಥಗಳು ಒಂದಕ್ಕಿಂತ ಹೆಚ್ಚು ಪೋಷಕಗಳನ್ನು ಒಳಗೊಂಡಿರುತ್ತವೆ. ಆದರೆ, ಪರಿಗಣಿಸಿದ ಯಾವುದೇ ಹಸಿಯಾದ ವಸ್ತುವಿನಲ್ಲಿ ಒಂದು ನಿರ್ದಿಷ್ಟ ಪೋಷಕವು ಇತರ ಪೋಷಕಗಳಿಗಿಂತ ಅತಿ ಹೆಚ್ಚು ಪ್ರಮಾಣದಲ್ಲಿರಬಹುದು. ಉದಾಹರಣೆಗೆ, ಅಕ್ಕಿಯಲ್ಲಿ ಕಾರ್ಬೊಹೈಡ್ರೇಟ್‍ಗಳು ಇತರ ಪೋಷಕಗಳಿಗಿಂತ ಹೆಚ್ಚಾಗಿರುತ್ತವೆ. ಹಾಗಾಗಿ ಅಕ್ಕಿಯನ್ನು ಕಾರ್ಬೊಹೈಡ್ರೇಟ್ ಸಮೃದ್ಧಿ ಯಾಗಿರುವ ಆಹಾರದ ಆಕರ ಎಂದು ನಾವು ಹೇಳುತ್ತೇವೆ.

ಈ ಪೋಷಕಗಳಲ್ಲದೆ, ನಮ್ಮ ದೇಹಕ್ಕೆ ನೀರು ಮತ್ತು ನಾರು ಪದಾರ್ಥಗಳ (dietary fibres or roughage) ಅವಶ್ಯಕತೆ ಇದೆ. ಮುಖ್ಯವಾಗಿ ಸಸ್ಯ ಉತ್ಪನ್ನಗಳಿಂದ ನಾರು ಪದಾರ್ಥ ದೊರೆಯುತ್ತದೆ. ಇಡೀ ಧಾನ್ಯಗಳು ಮತ್ತು ಬೇಳೆ ಕಾಳುಗಳು, ಆಲೂಗಡ್ಡೆ, ತಾಜಾ ಹಣ್ಣುಗಳು ಮತ್ತು ತರಕಾರಿಗಳು ನಾರು ಪದಾರ್ಥದ ಪ್ರಧಾನ ಆಕರಗಳು. ನಮ್ಮ ದೇಹಕ್ಕೆ ಯಾವುದೇ ಪೋಷಕವನ್ನು ನಾರು ಪದಾರ್ಥ ಒದಗಿಸುವುದಿಲ್ಲ. ಆದರೆ ಇದು ಆಹಾರದ ಅಗತ್ಯ ಘಟಕ ಮತ್ತು ಇದು ಆಹಾರದ ಪ್ರಮಾಣವನ್ನು ಹೆಚ್ಚಿಸುತ್ತದೆ. ಜೀರ್ಣವಾಗದ ಆಹಾರವನ್ನು ನಮ್ಮ ದೇಹ ಹೊರಹಾಕಲು ಇದು ಸಹಾಯ ಮಾಡುತ್ತದೆ.

ನಮ್ಮ ದೇಹವು ಆಹಾರದಿಂದ ಪೋಷಕಗಳನ್ನು ಹೀರಿಕೊಳ್ಳಲು ನೀರು ಸಹಾಯ ಮಾಡುತ್ತದೆ. ಬೆವರು ಮತ್ತು ಮೂತ್ರದ ರೂಪದಲ್ಲಿ ಕೆಲವು ತ್ಯಾಜ್ಯ ವಸ್ತುಗಳನ್ನು ದೇಹದಿಂದ ಹೊರಹಾಕಲು ಸಹ ಇದು ಸಹಾಯಕ. ಸಾಮಾನ್ಯವಾಗಿ ಆಗಾಗ್ಗೆ ನೀರು ಕುಡಿಯುವುದರಿಂದ ನಮ್ಮ ದೇಹದ ನೀರಿನ ಬಹಳಷ್ಟು ಅವಶ್ಯಕತೆಯನ್ನು ಪೂರೈಸುತ್ತೇವೆ. ಇದಲ್ಲದೆ, ಹಾಲು ಮತ್ತು ಟೀ ಯಂತಹ ದ್ರವಗಳನ್ನು ನಾವು ಕುಡಿಯುವುದರಿಂದಲೂ ನೀರು ದೊರೆಯುತ್ತದೆ. ಜೊತೆಗೆ ಆಹಾರವನ್ನು ಬೇಯಿಸುವಾಗ ಆಹಾರಕ್ಕೂ ನಾವು ನೀರನ್ನು ಸೇರಿಸುತ್ತೇವೆ.

ಸಂತುಲಿತ ಆಹಾರ

ಸಾಮಾನ್ಯವಾಗಿ ನಾವು ಒಂದು ದಿನದಲ್ಲಿ ಸೇವಿಸುವ ಆಹಾರವೇ ನಮ್ಮ ಆಹಾರ ಕ್ರಮ. ದೇಹದ ಬೆಳವಣಿಗೆ ಮತ್ತು ಒಳ್ಳೆಯ ಆರೋಗ್ಯದ ನಿರ್ವಹಣೆಗಾಗಿ, ದೇಹಕ್ಕೆ ಅವಶ್ಯವಿರುವ ಎಲ್ಲ ಪೋಷಕಗಳು ನಮ್ಮ ಆಹಾರದಲ್ಲಿ ಸರಿಯಾದ ಪ್ರಮಾಣದಲ್ಲಿರಬೇಕು. ಒಂದು ಅತಿಯಾಗಿಯೂ ಅಲ್ಲ ಮತ್ತು ಮತ್ತೊಂದು ಕಡಿಮೆಯೂ ಅಲ್ಲ. ನಾರು ಪದಾರ್ಥ ಮತ್ತು ನೀರು ಕೂಡ ಆಹಾರದಲ್ಲಿ ಒಳ್ಳೆಯ ಪ್ರಮಾಣದಲ್ಲಿರಬೇಕು. ಇಂತಹ ಆಹಾರ ಕ್ರಮವನ್ನು ಸಂತುಲಿತ ಆಹಾರ (balanced diet) ಎಂದು ಕರೆಯುತ್ತೇವೆ.

ಬೇಳೆಕಾಳುಗಳು, ಕಡ್ಲೆಕಾಯಿ ಬೀಜ, ಸೋಯಾಬೀನ್, ಮೊಳಕೆ ಕಾಳುಗಳು (ಹೆಸರು ಕಾಳು ಮತ್ತು ಕಡ್ಲೆಕಾಳು), ಹುದುಗಿದ ಆಹಾರ ಪದಾರ್ಥಗಳು (ದಕ್ಷಿಣ ಭಾರತೀಯ ಆಹಾರವಾದ ಇಡ್ಲಿ), ಸಂಯೋಜಿತ ಹಿಟ್ಟುಗಳು (ಕಡ್ಲೆಬೇಳೆ ಹಿಟ್ಟು, ಗೋಧಿ ಹಿಟ್ಟಿನ ರೊಟ್ಟಿ, ಬೇಳೆಕಾಳುಗಳು ಮತ್ತು ಧಾನ್ಯಗಳ ಹಿಟ್ಟಿನಿಂದ ಮಾಡಿದ ಪರೋಟ), ಬಾಳೆ ಹಣ್ಣು, ಪಾಲಕ್ ಸೊಪ್ಪು, ಕಡ್ಲೆಬೇಳೆ, ಬೆಲ್ಲ, ಲಭ್ಯವಿರುವ ತರಕಾರಿಗಳು ಮತ್ತು ಇನ್ನಿತರ ಆಹಾರ ಪದಾರ್ಥಗಳು ಅನೇಕ ಪೋಷಕಗಳನ್ನು ಒದಗಿಸುತ್ತವೆ. ಆದ್ದರಿಂದ ಯಾರೇ ಆದರು ದುಬಾರಿಯಲ್ಲದ ಆಹಾರ ವಸ್ತುಗಳಿಲ್ಲದೆ ಸಂತುಲಿತ ಆಹಾರ ಸೇವಿಸಬಹುದು.

ಸರಿಯಾದ ರೀತಿಯ ಆಹಾರ ಸೇವಿಸಿದರಷ್ಟೇ ಸಾಕಾಗುವುದಿಲ್ಲ. ಅದರಲ್ಲಿರುವ ಪೋಷಕಗಳು ಹಾಳಾಗದಂತೆ ಅದನ್ನು ಸರಿಯಾದ ರೀತಿಯಲ್ಲಿ ಬೇಯಿಸಬೇಕಾಗುತ್ತದೆ.
ಹಣ್ಣುಗಳು ಮತ್ತು ತರಕಾರಿಗಳನ್ನು ಕತ್ತರಿಸಿದನಂತರ ಅಥವಾ ಅವುಗಳ ಸಿಪ್ಪೆ ತೆಗೆದನಂತರ ತೊಳೆದರೆ, ಅದರಲ್ಲಿರುವ ಕೆಲವು ವಿಟಮಿನ್‍ಗಳು ನಷ್ಟವಾಗಬಹುದು. ಅನೇಕ ತರಕಾರಿಗಳು ಮತ್ತು ಹಣ್ಣುಗಳ ಸಿಪ್ಪೆಗಳಲ್ಲಿ ಖನಿಜಗಳು ಮತ್ತು ವಿಟಮಿನ್‍ಗಳು ಇರುತ್ತವೆ. ಅದೇ ರೀತಿ ಅಕ್ಕಿ ಮತ್ತು ಬೇಳೆಕಾಳುಗಳನ್ನು ಪದೆ ಪದೆ ತೊಳೆಯುವುದರಿಂದ ಅವುಗಳಲ್ಲಿರುವ ಕೆಲವು ವಿಟಮಿನ್‍ಗಳು ಮತ್ತು ಖನಿಜಗಳು ನಷ್ಟವಾಗುತ್ತವೆ.

ಬೇಯಿಸುವುದರಿಂದ ಆಹಾರವು ರುಚಿಯಾಗುವುದರ ಜೊತೆಗೆ ಸುಲಭವಾಗಿ ಜೀರ್ಣವಾಗುತ್ತದೆ ಎಂದು ನಮ್ಮೆಲ್ಲರಿಗೂ ತಿಳಿದಿದೆ. ಅದೇ ಸಮಯದಲ್ಲಿ ಬೇಯಿಸುವುದು, ನಿರ್ದಿಷ್ಟ ಪೋಷಕಗಳ ನಾಶಕ್ಕು ಸಹ ಕಾರಣವಾಗಬಹುದು. ಬೇಯಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಳಸಿ ನಂತರ ನೀರನ್ನು ಬಸಿದರೆ, ಅನೇಕ ಉಪಯುಕ್ತ ಪ್ರೋಟೀನ್‍ಗಳು ಮತ್ತು ಗಣನೀಯ ಪ್ರಮಾಣದಲ್ಲಿ ಖನಿಜಗಳು ನಷ್ಟವಾಗುತ್ತವೆ.
ಬೇಯಿಸುವಾಗ ಶಾಖದಿಂದ ವಿಟಮಿನ್ ಸಿ ಅತಿ ಸುಲಭವಾಗಿ ನಾಶವಾಗುತ್ತದೆ. ನಮ್ಮ ಆಹಾರದಲ್ಲಿ ಕೆಲವು ಹಣ್ಣುಗಳು ಮತ್ತು ಹಸಿ ತರಕಾರಿಗಳನ್ನು ಸೇರಿಸುವುದು ಸೂಕ್ತವಲ್ಲವೆ?

ಕೊಬ್ಬು ಅತಿ ಹೇರಳವಾಗಿರುವ ಆಹಾರ ಸೇವಿಸುವುದು ನಮಗೆ ತುಂಬಾ ಹಾನಿಕಾರಕ ಮತ್ತು ಕೊನೆಯಲ್ಲಿ, ಬೊಜ್ಜು ಅಥವಾ ಸ್ಥೂಲಕಾಯ (obesity)ದಿಂದ ನಾವು ನರಳುವಂತಾಗಬಹುದು.

ಕೊರತೆಯಿಂದ ಬರುವ ರೋಗಗಳು
ಒಬ್ಬ ವ್ಯಕ್ತಿಯು ಸೇವಿಸಲು ಸಾಕಷ್ಟು ಆಹಾರ ದೊರೆಯಬಹುದು. ಆದರೆ ಕೆಲವೊಮ್ಮೆ ಆಹಾರದಲ್ಲಿ ಒಂದು ನಿರ್ದಿಷ್ಟ ಪೋಷಕ ಇಲ್ಲದೇ ಇರಬಹುದು. ಇದು ದೀರ್ಘಕಾಲದವರೆಗೆ ಮುಂದುವರಿದರೆ ವ್ಯಕ್ತಿಯು ಅದರ ಕೊರತೆಯಿಂದ ನರಳಬಹುದು. ಒಂದು ಅಥವಾ ಹೆಚ್ಚು ಪೋಷಕಗಳ ಕೊರತೆಯು ನಮ್ಮ ದೇಹದಲ್ಲಿ ರೋಗಗಳನ್ನು ಉಂಟುಮಾಡಬಹುದು. ದೀರ್ಘಕಾಲದವರೆಗೆ ಪೋಷಕಗಳ ಕೊರತೆಯಿಂದಾಗಿ ಬರುವ ರೋಗಗಳನ್ನು ಕೊರತೆಯಿಂದ ಬರುವ ರೋಗಗಳು (deficiency diseases) ಎಂದು ಕರೆಯುವರು.
ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಅವನ / ಅವಳ ಆಹಾರದಲ್ಲಿ ಸಾಕಷ್ಟು ಪ್ರೋಟೀನ್‍ಗಳನ್ನು ಪಡೆಯದಿದ್ದರೆ, ಅವನ / ಅವಳ ಬೆಳವಣಿಗೆ ಕುಂಠಿತವಾಗಬಹುದು, ಮುಖ ಊದಬಹುದು, ಕೂದಲಿನ ಬಣ್ಣ ಬದಲಾಗಬಹುದು, ಚರ್ಮ ರೋಗಗಳು ಮತ್ತು ಅತಿಸಾರ ಉಂಟಾಗಬಹುದು.
ದೀರ್ಘಕಾಲದವರೆಗೆ ಆಹಾರದಲ್ಲಿ ಕಾರ್ಬೊಹೈಡ್ರೇಟ್‍ಗಳು ಮತ್ತು ಪ್ರೋಟೀನ್‍ಗಳ ಕೊರತೆಯಿದ್ದರೆ, ಬೆಳವಣಿಗೆ ಸಂಪೂರ್ಣವಾಗಿ ನಿಲ್ಲಬಹುದು. ಅಂತಹ ವ್ಯಕ್ತಿಯು ತುಂಬಾ ಸೊರಗಿ, ಸಣಕಲಾಗುತ್ತಾನೆ. ಎಷ್ಟು ದುರ್ಬಲನಾಗುತ್ತಾನೆಂದರೆ, ಅವನು ಚಲಿಸಲು ಕೂಡ ಅಸಮರ್ಥನಾಗಬಹುದು.
ವಿವಿಧ ವಿಟಮಿನ್‍ಗಳು ಮತ್ತು ಖನಿಜಗಳ ಕೊರತೆಯು ಕೆಲವು ರೋಗಗಳಿಗೆ ಕಾರಣವಾಗಬಹುದು. ಇವುಗಳಲ್ಲಿ ಕೆಲವನ್ನು ಕೋಷ್ಟಕ 2.3ರಲ್ಲಿ ನಮೂದಿಸಿದೆ.

ಸಂತುಲಿತ ಆಹಾರವನ್ನು ತೆಗೆದುಕೊಳ್ಳುವುದರಿಂದ ಎಲ್ಲ ಕೊರತೆ ರೋಗಗಳನ್ನು ತಡೆಗಟ್ಟಬಹುದು.

ಪ್ರಮುಖ ಪದಗಳು

ಸಂತುಲಿತ ಆಹಾರ

ಬೆರಿಬೆರಿ

ಕಾರ್ಬೊಹೈಡ್ರೇಟ್‍ಗಳು

ಶಕ್ತಿ

ಕೊಬ್ಬು

ಖನಿಜಗಳು

ಪೋಷಕಗಳು

ಪ್ರೋಟೀನ್ ಗಳು

ನಾರಿನ ಪದಾರ್ಥ

ಸ್ಕರ್ವಿ

ಪಿಷ್ಟ

ವಿಟಮಿನ್ ಗಳು

ಸಾರಾಂಶ

● ನಮ್ಮ ಆಹಾರದಲ್ಲಿರುವ ಮುಖ್ಯ ಪ್ರೋಷಕಗಳೆಂದರೆ ಕಾರ್ಬೊಹೈಡ್ರೇಟ್‍ಗಳು, ಪ್ರೋಟೀನ್‍ಗಳು, ಕೊಬ್ಬು, ವಿಟಮಿನ್‍ಗಳು ಮತ್ತು ಖನಿಜಗಳು. ಇವುಗಳ ಜೊತೆಗೆ ನೀರು ಮತ್ತು ನಾರು ಪದಾರ್ಥಗಳನ್ನು ಸಹ ಆಹಾರ ಒಳಗೊಂಡಿರುತ್ತದೆ.
● ಕಾರ್ಬೊಹೈಡ್ರೇಟ್‍ಗಳು ಮತ್ತು ಕೊಬ್ಬು ನಮ್ಮ ದೇಹಕ್ಕೆ ಮುಖ್ಯವಾಗಿ ಶಕ್ತಿಯನ್ನು ಒದಗಿಸುತ್ತವೆ.
● ಪ್ರೋಟೀನ್‍ಗಳು ಮತ್ತು ಖನಿಜಗಳು ನಮ್ಮ ದೇಹದ ಬೆಳವಣಿಗೆ ಮತ್ತು ನಿರ್ವಹಣೆಗೆ ಅವಶ್ಯಕ.
● ನಮ್ಮ ದೇಹಕ್ಕೆ ರೋಗಗಳು ಬರದಂತೆ ರಕ್ಷಣೆಯನ್ನು ನೀಡಲು ವಿಟಮಿನ್‍ಗಳು ಸಹಾಯ ಮಾಡುತ್ತವೆ.
● ನಮ್ಮ ದೇಹಕ್ಕೆ ಅವಶ್ಯಕವಾದ ಎಲ್ಲ ಪ್ರೋಷಕಗಳನ್ನು ನಿರ್ದಿಷ್ಟ ಪ್ರಮಾಣಗಳಲ್ಲಿ ಒದಗಿಸುವುದರ ಜೊತೆಗೆ, ಸಾಕಷ್ಟು ಪ್ರಮಾಣದ ನಾರು ಪದಾರ್ಥ ಮತ್ತು ನೀರನ್ನು ಸಂತುಲಿತ ಆಹಾರ ಒದಗಿಸುತ್ತದೆ.
● ನಮ್ಮ ಆಹಾರದಲ್ಲಿ ಒಂದು ಅಥವಾ ಹೆಚ್ಚು ಪ್ರೋಷಕಗಳ ದೀರ್ಘಕಾಲದ ಕೊರತೆಯು ಕೆಲವು ರೋಗಗಳಿಗೆ ಕಾರಣವಾಗಬಹುದು.

ವಿಡಿಯೋ ಪಾಠಗಳು

Samveda – 6th – Science – Components of Food (Part 1 of 2) | ಭಾಗ – 1
Samveda – 6th – Science – Components of Food (Part 1 of 2) | ಭಾಗ – 2

ಪ್ರಶ್ನೋತ್ತರಗಳು

6th Class Science. Aaharad Ghatakagalu: Question answers
ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಸೂಚಿತ ಯೋಜನಾ ಕಾರ್ಯ ಮತ್ತು ಚಟುವಟಿಕೆಗಳು

  1. ಹನ್ನೆರಡು ವರ್ಷದ ಮಗುವಿಗೆ ಸಂತುಲಿತ ಆಹಾರವನ್ನು ಒದಗಿಸಲು ಆಹಾರ ಚಾರ್ಟ್ ತಯಾರಿಸಿ. ನಿಮ್ಮ ಸ್ಥಳೀಯ ಪ್ರದೇಶದಲ್ಲಿ ಸಾಮಾನ್ಯವಾಗಿ ದೊರೆಯುವ ಮತ್ತು ದುಬಾರಿಯಾಗಿರದ ಆಹಾರ ಪದಾರ್ಥಗಳನ್ನು ಆಹಾರ ಚಾರ್ಟ್ ಒಳಗೊಂಡಿರಬೇಕು.
All About NUTRITION | Balanced Diet Chart
Balanced Diet
Healthy Eating & Nutrition for Children Ages 6-12

2. ದೇಹಕ್ಕೆ ಹೆಚ್ಚಿನ ಕೊಬ್ಬಿನ ಸೇವನೆಯು ಹಾನಿಕಾರಕವೆಂಬುದನ್ನು ನಾವು ಕಲಿತಿದ್ದೇವೆ. ಬೇರೆ ಪೋಷಕಗಳನ್ನು ಹೆಚ್ಚಾಗಿ ಸೇವಿಸಿದರೆ ಆಹಾರದಲ್ಲಿ ಅತಿ ಹೆಚ್ಚು ಪ್ರೋಟೀನ್‍ಗಳು ಅಥವಾ ವಿಟಮಿನ್‍ಗಳನ್ನು ತೆಗೆದುಕೊಳ್ಳುವುದು ದೇಹಕ್ಕೆ ಹಾನಿಕಾರಕವಾಗಬಹುದೆ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಆಹಾರ ಸಂಬಂಧಿತ ಸಮಸ್ಯೆಗಳ ಬಗ್ಗೆ ಓದಿ ಮತ್ತು ಈ ವಿಷಯದ ಬಗ್ಗೆ ತರಗತಿಯಲ್ಲಿ ಚರ್ಚಿಸಿ.

ಪ್ರೋಟೀನ್ ನಿಮ್ಮ ದೇಹದ ಮುಖ್ಯ ಬಿಲ್ಡಿಂಗ್ ಬ್ಲಾಕ್ ಆಗಿದೆ. ಇದು ಸ್ನಾಯುಗಳನ್ನು ರೂಪಿಸಲು, ಹಾರ್ಮೋನುಗಳನ್ನು ಉತ್ಪಾದಿಸಲು, ಚರ್ಮ ಮತ್ತು ಮೂಳೆಗಳನ್ನು ಬಲಪಡಿಸಲು ಮತ್ತು ಪೋಷಕಾಂಶಗಳನ್ನು ಸಾಗಿಸಲು ಸಹಾಯ ಮಾಡುತ್ತದೆ. ಇದು ತುಂಬಾ ಮುಖ್ಯವಾಗಿದೆ, ಹೆಚ್ಚಿನ ಪ್ರೋಟೀನ್ ನಿಮ್ಮನ್ನು ಬಲಪಡಿಸುತ್ತದೆ ಎಂದು ನೀವು ಭಾವಿಸಬಹುದು.

ಆದರೆ, ಹೆಚ್ಚುವರಿ ಪ್ರೋಟೀನ್ ಅನ್ನು ಸೇವಿಸುವುದು – ವಿಶೇಷವಾಗಿ ಪ್ರೋಟೀನ್ ಪೂರಕಗಳಿಂದ – ಅಗತ್ಯವಾಗಿ ಆರೋಗ್ಯಕರವಲ್ಲ ಎಂದು ಕ್ರೀಡಾ ಪೌಷ್ಠಿಕಾಂಶ ತಜ್ಞ ಡಯಾನಾ ಷ್ನೀ, ಎಂಎಸ್, ಆರ್ಡಿ, ಎಲ್ಡಿ ಹೇಳುತ್ತಾರೆ. ಮತ್ತು ಅದು ಮಕ್ಕಳಿಗೆ ವಿಶೇಷವಾಗಿ ನಿಜ. ವಾಸ್ತವವಾಗಿ, ಮಗುವಿನ ಆಹಾರದಲ್ಲಿ ಹೆಚ್ಚು ಪ್ರೋಟೀನ್ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

“ಹೆಚ್ಚಿನ ಪಾಶ್ಚಿಮಾತ್ಯ ದೇಶಗಳಲ್ಲಿ, ಮಕ್ಕಳು ಈಗಾಗಲೇ ದೈನಂದಿನ ಅಗತ್ಯವಿರುವ ಪ್ರೋಟೀನ್ ಅನ್ನು ಎರಡು ಮೂರು ಪಟ್ಟು ಪಡೆಯುತ್ತಾರೆ” ಎಂದು ಅವರು ಹೇಳುತ್ತಾರೆ. “ಮಗುವಿಗೆ ಹೆಚ್ಚುವರಿ ಅಗತ್ಯವಿರುವುದು ಅಸಾಮಾನ್ಯವಾಗಿದೆ.”

ಇನ್ನೂ, ಪ್ರೋಟೀನ್ ಪೂರಕಗಳನ್ನು ತೆಗೆದುಕೊಳ್ಳುವುದು ಅಥವಾ ಆಹಾರ, ಶೇಕ್ಸ್ ಅಥವಾ ಸ್ಮೂಥಿಗಳಿಗೆ ಪ್ರೋಟೀನ್ ಪುಡಿಗಳನ್ನು ಸೇರಿಸುವುದು ಬೆಳೆಯುತ್ತಿರುವ ಮಕ್ಕಳು ಮತ್ತು ಹದಿಹರೆಯದವರಿಗೆ ಜನಪ್ರಿಯ ಪ್ರವೃತ್ತಿಯಾಗಿದೆ . ನಿಮ್ಮ ಮಗು ಕ್ರೀಡಾಪಟುವಾಗಿದ್ದರೆ ಈ ಪ್ರವೃತ್ತಿಯನ್ನು ನೀವು ಹೆಚ್ಚು ಗಮನಿಸಬಹುದು – ವಿಶೇಷವಾಗಿ ನೀವು ದೊಡ್ಡ ಹುಡುಗನನ್ನು ಹೊಂದಿದ್ದರೆ ಮತ್ತು ದೊಡ್ಡದಾಗಲು ಬಯಸುತ್ತೀರಿ.

ದೈನಂದಿನ ಪ್ರೋಟೀನ್ ಅಗತ್ಯವಿದೆ

ಹಾಗಾದರೆ ಎಷ್ಟು ಪ್ರೋಟೀನ್ ಸಾಕು? ನಿಮ್ಮ ಕ್ಯಾಲೊರಿ ಸೇವನೆಯ ಹತ್ತು ಪ್ರತಿಶತದಿಂದ 30 ಪ್ರತಿಶತದಷ್ಟು ಪ್ರೋಟೀನ್‌ನಿಂದ ಬರಬೇಕು.

  • ಕಿರಿಯ ಮಕ್ಕಳಿಗೆ, ಇದು ವಯಸ್ಸಿಗೆ ತಕ್ಕಂತೆ ಒಡೆಯುತ್ತದೆ: 4 ರಿಂದ 9 ವರ್ಷದ ಮಕ್ಕಳಿಗೆ ಪ್ರತಿದಿನ 19 ಗ್ರಾಂ ಪ್ರೋಟೀನ್ ಬೇಕು. 9 ರಿಂದ 13 ವರ್ಷದೊಳಗಿನವರಿಗೆ 34 ಗ್ರಾಂ ಅಗತ್ಯವಿದೆ.
  • ಹದಿಹರೆಯದವರಿಗೆ, 14 ರಿಂದ 18 ವರ್ಷ ವಯಸ್ಸಿನವರು, ಇದು ಲಿಂಗದಿಂದ ಬದಲಾಗುತ್ತದೆ: ಹುಡುಗರಿಗೆ 52 ಗ್ರಾಂ ಮತ್ತು ಹುಡುಗಿಯರಿಗೆ 46 ಗ್ರಾಂ ಅಗತ್ಯವಿದೆ.

ಒಟ್ಟಾರೆಯಾಗಿ, ಮಕ್ಕಳು ಹಾಲು, ಮೊಸರು, ಚೀಸ್, ಮತ್ತು ನೇರ ಗೋಮಾಂಸ, ಹಂದಿಮಾಂಸ, ಕೋಳಿ, ಮೀನುಗಳಂತಹ ಒಂದು ಅಥವಾ ಎರಡು ಬಾರಿಯ ಡೈರಿಯನ್ನು ಸೇವಿಸಿದರೆ ಪ್ರತಿದಿನ ಸಾಕಷ್ಟು ಪ್ರೋಟೀನ್ ಪಡೆಯಬೇಕು. ಪ್ರೋಟೀನ್ ಪೂರಕಗಳಿಂದ ಹೆಚ್ಚುವರಿ ಏನಾದರೂ ಅವರ ದೈನಂದಿನ ಅಗತ್ಯಗಳನ್ನು ಮೀರುತ್ತದೆ.

ಅತಿ ಹೆಚ್ಚು ಪ್ರೋಟೀನ್‍ಗಳು ಅಥವಾ ವಿಟಮಿನ್‍ಗಳನ್ನು ತೆಗೆದುಕೊಳ್ಳುವುದು ದೇಹಕ್ಕೆ ಹಾನಿಕಾರಕ

ತೂಕ ಹೆಚ್ಚಾಗುವುದು –  ಹೆಚ್ಚುವರಿ ಪ್ರೋಟೀನ್ ಎಂದರೆ ಹೆಚ್ಚುವರಿ ಕ್ಯಾಲೊರಿಗಳು. ಮಗುವಿಗೆ ಕ್ಯಾಲೊರಿಗಳನ್ನು ಸುಡಲು ಸಾಧ್ಯವಾಗದಿದ್ದರೆ, ದೇಹವು ಅವುಗಳನ್ನು ಕೊಬ್ಬಿನಂತೆ ಸಂಗ್ರಹಿಸುತ್ತದೆ .

ಅಂಗ ಹಾನಿ – ಹೆಚ್ಚಿನ ಪ್ರೋಟೀನ್ ಮಟ್ಟವು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು ಮತ್ತು ತ್ಯಾಜ್ಯ ಉತ್ಪನ್ನಗಳನ್ನು ಫಿಲ್ಟರ್ ಮಾಡಲು ಮೂತ್ರಪಿಂಡಗಳು ಹೆಚ್ಚು ಶ್ರಮಿಸುವಂತೆ ಮಾಡುತ್ತದೆ. ಹೆಚ್ಚಿನ ಪ್ರೋಟೀನ್ ಆಹಾರವು ಮೂತ್ರಪಿಂಡಗಳನ್ನು ಕಾಲಾನಂತರದಲ್ಲಿ ಧರಿಸುತ್ತದೆ ಮತ್ತು ನಿರ್ಜಲೀಕರಣಕ್ಕೆ ಕೊಡುಗೆ ನೀಡುತ್ತದೆ. ಸಂಸ್ಕರಣಾ ಪ್ರೋಟೀನ್ ಯಕೃತ್ತಿನಲ್ಲಿ ಸಾರಜನಕವನ್ನು ಸಹ ಸೃಷ್ಟಿಸುತ್ತದೆ. ಹೆಚ್ಚಿನ ಪ್ರಮಾಣದ ಸಾರಜನಕವು ದೇಹಕ್ಕೆ ತ್ಯಾಜ್ಯ ಮತ್ತು ಜೀವಾಣುಗಳನ್ನು ಸಂಸ್ಕರಿಸಲು ಕಷ್ಟವಾಗಿಸುತ್ತದೆ. ಹೆಚ್ಚಿನ ಪ್ರಮಾಣದ ಸಾರಜನಕವು ಪೋಷಕಾಂಶಗಳನ್ನು ಒಡೆಯುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ಮಕ್ಕಳಿಗೆ ಸಮಸ್ಯೆಗಳು –  ಅನೇಕ ಉತ್ಪನ್ನಗಳು ಅವುಗಳ ಎಲ್ಲಾ ಪದಾರ್ಥಗಳನ್ನು ಲೇಬಲ್ ಮಾಡುವುದಿಲ್ಲ, ಆದ್ದರಿಂದ ನಿಮ್ಮ ಮಗು ಏನು ಸೇವಿಸುತ್ತಿದೆ ಎಂದು ನಿಮಗೆ ತಿಳಿದಿಲ್ಲ. ಅನೇಕ ಪ್ರೋಟೀನ್ ಪುಡಿಗಳು ನಿಮ್ಮ ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾನಿಗೊಳಿಸುವ ಉತ್ತೇಜಕಗಳು ಅಥವಾ ಪದಾರ್ಥಗಳನ್ನು ಒಳಗೊಂಡಿರುತ್ತವೆ  .

Is eating too much Protein Bad?

3. ಪ್ರಾಣಿಗಳ ಆಹಾರದಲ್ಲಿ ಯಾವ ಪೋಷಕಗಳಿರುತ್ತವೆ ಎಂಬುದನ್ನು ಕಂಡುಕೊಳ್ಳಲು ಜಾನುವಾರುಗಳು ಅಥವಾ ಸಾಕು ಪ್ರಾಣಿಗಳು ಸಾಮಾನ್ಯವಾಗಿ ಸೇವಿಸುವ ಆಹಾರವನ್ನು ಪರೀಕ್ಷಿಸಿ. ವಿಭಿನ್ನ ಪ್ರಾಣಿಗಳಿಗೆ ಸಂತುಲಿತ ಆಹಾರದ ಅವಶ್ಯಕತೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಇಡೀ ತರಗತಿ ಪಡೆದ ಫಲಿತಾಂಶಗಳನ್ನು ಹೋಲಿಸಿ.

Nutrition In Animals Class 7 Science | How Do Animals Eat Their Food
Life Process:-Digestion in Ruminants-07