ಸ್ವಾತಂತ್ರ್ಯ ಸ್ವರ್ಗ – ಪದ್ಯ-2

ಡಾ. ಎಂ. ಅಕಬರ ಅಲಿ-

ಪ್ರವೇಶ : ರಾಜುವಿನ ಮನೆಯಲ್ಲಿ ಒಂದು ಪಂಜರ, ಆ ಪಂಜರದಲ್ಲಿ ಒಂದು ಪುಟ್ಟ ಗಿಳಿ. ಆ ಗಿಳಿ ಮನೆಯವರಿಗೆಲ್ಲ ಅಚ್ಚು ಮೆಚ್ಚು. ಕೆಲವು ದಿನಗಳ ಅನಂತರ ಗಿಳಿ ಸರಿಯಾಗಿ ಕಾಳು ತಿನ್ನುತ್ತಿಲ್ಲ, ಲವಲವಿಕೆಯಿಂದ ಇಲ್ಲ ಎಂದು ರಾಜುವಿಗೆ ತುಂಬಾ ಬೇಸರವಾಯ್ತು. ಅದನ್ನು ತನ್ನ ಮನೆಯ ಪಕ್ಕದಲ್ಲಿದ್ದ ಪಶು ವೈದ್ಯರಿಗೆ ಹೇಳಿದ. ಅವರು ಬಂದು ಗಿಳಿಯನ್ನು ಪರೀಕ್ಷೆ ಮಾಡಿ ಹೇಳಿದರು “ಇದಕ್ಕೆ ಯಾವ ರೋಗವೂ ಇಲ್ಲ ಬಂಧನವೇ ರೋಗ ಇದನ್ನು ಪಂಜರದಿಂದ ಹೊರಗೆ ಬಿಟ್ಟರೆ ತನ್ನ ಇತರ ಗಿಳಿಗಳನ್ನು ಕೂಡಿಕೊಂಡು ಸಂತೋಷದಿಂದ ಇರುತ್ತದೆ. ಗಿಡಮರಗಳಿರುವ ಜಾಗದಲ್ಲಿ ಇದನ್ನು ಬಿಟ್ಟು ಬನ್ನಿ ಎಂದರು’’ ರಾಜು ಹಾಗೇ ಮಾಡಿದ. ಬಂಧನದಿಂದ ಬಿಡುಗಡೆಗೊಂಡ ಗಿಳಿ ಪುರ್ರೆಂದು ಹಾರಿ ಹೋಯಿತು. ರಾಜುವಿಗೂ ಅದನ್ನು ನೋಡಿ ಸಂತೋಷವಾಯಿತು. ನನ್ನನ್ನು ನನ್ನ ಮನೆಯಿಂದ ದೂರಮಾಡಿ ಗಿಳಿಯಂತೆ ಬಂಧನದಲ್ಲಿಟ್ಟಿದ್ದರೆ ಏನಾಗಬಹುದಿತ್ತು ಎಂದು ರಾಜು ಯೋಚಿಸತೊಡಗಿದ.

ನಿರ್ಭೀತ ನಿರ್ಮುಕ್ತ ಮನವು ತಾನೆಲ್ಲಿಹುದು;
ಅಭಿಮಾನಧನವೆನಿಪ ಮಸ್ತಕವದು
ಜಗ್ಗದೆಯೆ ಕುಗ್ಗದೆಯೆ ತಗ್ಗದೆಯೆ ಬಗ್ಗದೆಯೆ
ಮೇಲ್ಮೊಗದಿ ನೀಟಾಗಿ ನಿಂದಿರುವುದು;-
ಅಲ್ಲಿ ಆ ಸ್ವಾತಂತ್ರ್ಯ -ಸ್ವರ್ಗದಲಿ, ಓ ತಂದೆ!
ಏಳಲೈ ಬಾಳಲೈ ನಾಡೆಮ್ಮದು!

ಅರಿವು ತಾನ್ ಸರ್ವಸ್ವತಂತ್ರವಾಗಲಿಹುದು;
ಸಂಕುಚಿತತನ ಮನೋವೃತ್ತಿಯಳಿದು
ವಿಶ್ವವೆಂಬುವುದೆಲ್ಲ ಹೋಳು ಹೋಳಾಗದೆಯೆ
ಒಂದಾಗಿ ಚೆಂದಾಗಿ ಬಾಳುತಿಹುದು;-
ಅಲ್ಲಿ ಆ ಸ್ವಾತಂತ್ರ್ಯ – ಸ್ವರ್ಗದಲಿ, ಓ ತಂದೆ!
ಏಳಲೈ ಬಾಳಲೈ ನಾಡೆಮ್ಮದು!

ನನ್ನಿತನದಾಳದಿಂದೆಲ್ಲಿ ನುಡಿ ಹೊರಬಹುದು;
ದುಡಿಮೆಯೆಂಬುವುದೆಲ್ಲಿ ಮುಂದುವರಿದು,
ದಣಿವನ್ನು ಅರಿಯದೆಯೆ ದಣಿವಿಂಗೆ ಮಣಿಯದೆಯೆ,
ಪೂರ್ಣತೆಗೆ ತನ್ನ ಕೈಚಾಚುತಿಹುದು;-
ಅಲ್ಲಿ ಆ ಸ್ವಾತಂತ್ರ್ಯ -ಸ್ವರ್ಗದಲಿ, ಓ ತಂದೆ!
ಏಳಲೈ ಬಾಳಲೈ ನಾಡೆಮ್ಮದು!

ಸಂಪ್ರದಾಯದನಿಷ್ಟ ರೂಢಿ-ನಿಯಮಗಳೆಂಬ
ನಿರ್ಜನದ ಮರುಭೂಮಿ ಹರಹಿನಲ್ಲಿ
ಸುವಿಚಾರವೆಂದೆಂಬ ಪರಿಶುದ್ಧ ವಾಹಿನಿಯು
ಹರಿಗಡಿಯದೆಯೆ ಮುಂದುವರಿಯುವಲ್ಲಿ;-
ಅಲ್ಲಿ ಆ ಸ್ವಾತಂತ್ರ್ಯ -ಸ್ವರ್ಗದಲಿ, ಓ ತಂದೆ!
ಏಳಲೈ ಬಾಳಲೈ ನಾಡೆಮ್ಮದು!

ನಿತ್ಯ ವೈಶಾಲ್ಯವಹ ನಡೆ-ನುಡಿಗಳಿಂದಾಗಿ
ಮನವರಳಿ ತಾನಲ್ಲಿ ಮುಂದರಿವುದು,
ನಿನ್ನೊಲವು, ನಿನ್ನ ದಯೆ, ನಿನ್ನ ಕೃಪೆಯಿಂದಾಗಿ
ನಿನ್ನನ್ನೆ ಧ್ರುವತಾರೆಯೆಂದರಿವುದು;-
ಅಲ್ಲಿ ಆ ಸ್ವಾತಂತ್ರ್ಯ -ಸ್ವರ್ಗದಲಿ, ಓ ತಂದೆ!
ಏಳಲೈ ಬಾಳಲೈ ನಾಡೆಮ್ಮದು!

ಆಶಯ

‘ಸ್ವಾತಂತ್ರ್ಯವೇ ಸ್ವರ್ಗ’ ಎಂಬ ಮಾತಿದೆ. ಆ ಸ್ವಾತಂತ್ರ್ಯ ಎಂತಹ ಸ್ವರ್ಗವಾಗಬೇಕು ಎಂಬುದು ಪ್ರಶ್ನೆ. ಅದು ಸ್ವೇಚ್ಛೆಯ ಸ್ವರ್ಗವಲ್ಲ. ಅಲ್ಲಿ ಹೆದರಿಕೆ ಇರುವುದಿಲ್ಲ, ನಾವು ನಮ್ಮ ಬಗ್ಗೆ, ನಮ್ಮವರ ಬಗ್ಗೆ, ನಮ್ಮ ನಾಡಿನ ಬಗ್ಗೆ ಹೆಮ್ಮೆಯಿಂದ ತಲೆಯೆತ್ತಿ ನಡೆಯುವಂತಿರಬೇಕು. ಎಲ್ಲರೂ ಒಂದು ಎಂಬ ಭಾವನೆಯಿರಬೇಕು. ಸಂತಸದ ದುಡಿಮೆಯಾಗಬೇಕು. ಒಳ್ಳೆ ವಿಚಾರಗಳು ನಮ್ಮ ಮನಸ್ಸಿಗೆ ಹರಿದು ಬರುವಂತಿರಬೇಕು, ಜೀವಪ್ರೀತಿಗೆ ಅಲ್ಲಿ ಅವಕಾಶ ವಿರಬೇಕು. ಅಂತಹ ಸ್ವಾತಂತ್ರ್ಯವೇ ಸ್ವರ್ಗ.

ಕೃತಿಕಾರರ ಪರಿಚಯ

ಡಾ. ಎಂ. ಅಕಬರ ಅಲಿ ಅವರು 1925ರ ಮಾರ್ಚ್ 3ರಂದು ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡ್ಡಿ ಖಾನಾಪುರದಲ್ಲಿ ಜನಿಸಿದರು. ಬೆಳಗಾವಿ, ಸಾಂಗ್ಲಿ ಹಾಗೂ ಪುಣೆಗಳಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸಿದರು. ಮೈಸೂರಿನ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ (ಇಂದಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ)ಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಡಾ ಅಕಬರ ಅಲಿಯವರು ‘ವಿಷಸಿಂಧು’ ಎಂಬ ಅಷ್ಟ ಷಟ್ಪದಿಗಳ ಸಂಗ್ರಹವನ್ನೂ, ‘ನವಚೇತನ’ ‘ಗಂಧಕೇಶರ’, ಸುಮನಸೌರಭ’ ಎಂಬ ಕವನ ಸಂಗ್ರಹಗಳನ್ನೂ, ‘ಅವ್ವ’ ಎಂಬ ಚುಟುಕುಗಳ ಸಂಗ್ರಹವನ್ನೂ, ‘ನಿರೀಕ್ಷೆಯಲ್ಲಿ’ ಎಂಬ ಕಾದಂಬರಿಯನ್ನೂ ರಚಿಸಿರುವರು. 1989ರಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ. ಈ ಕವನವನ್ನು ಅವರ ‘ತಮಸಾನದಿ – ಎಡಬಲದಿ’ ಎಂಬ ಕವನ ಸಂಕಲನದಿಂದ ಆರಿಸಲಾಗಿದೆ.

ಪದಗಳ ಅರ್ಥ

ನಿರ್ಭೀತ-ಭಯವಿಲ್ಲದ;
ಮಸ್ತಕ-ತಲೆ;
ಹೋಳು-ತುಂಡು;
ಹರಹು-ವಿಸ್ತಾರ ;
ವಾಹಿನಿ-ನದಿ;
ಹರಿಗಡಿಯದೆ-ಹರಿಯುವಿಕೆಯು ನಿಲ್ಲದೆ;
ವೈಶಾಲ್ಯ-ವಿಶಾಲತೆ;
ಧ್ರುವತಾರೆ-ಧ್ರುವನಕ್ಷತ್ರ (ಸ್ಥಿರವಾದ ಲಕ್ಷ್ಯ);
ನಿರ್ಮುಕ್ತ-ಸರ್ವಸ್ವತಂತ್ರ.

ಪದ ವಿಂಗಡಣೆ

ನಿರ್+ಮುಕ್ತ,
ಹರಿ+ಕಡಿಯದೆ,
ನಿನ್ನ+ಒಲವು,
ಧ್ರುವತಾರೆ+ಎಂದು+ಅರಿಯುವುದು,
ಮನ+ಅರಳಿ.

ಸಂವೇದ ವಿಡಿಯೋ ಪಾಠಗಳು

Samveda – 7th – Kannada – Swatantrya Swarga (Part 1 of 2)
Samveda – 7th – Kannada – Swantantrya Swarga (Part 2 of 2)

ಪದ್ಯದ ಮಾದರಿ ಗಾಯನ

https://youtu.be/BI2kfx9jaF4

7th std | new syllabus 2017 | 1st language Kannada | 2nd poem | lyrical video | swathanthrya swarga | ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

https://youtu.be/az8GJ9jK_84

Swatantra Swarga | 7th standard Kannada Poem | ಸ್ವಾತಂತ್ರ್ಯ ಸ್ವರ್ಗ ಪದ್ಯ | ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಪೂರಕ ವಿಡಿಯೋಗಳು

ಸ್ವಾತಂತ್ರ್ಯ ಸ್ವರ್ಗ | 7 ನೇ ತರಗತಿಯ ಕನ್ನಡ ಪದ್ಯ | Swatantra Swarga | 7th Standard Kannada Poem

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಚೆನ್ನುಡಿ

“ತನ್ನನ್ನು ತಾನು ಗುರುತಿಸಿಕೊಂಡು, ತನ್ನ ವಿಶೇಷವನ್ನು ಶಕ್ತಿಯ ಪರಿಮಿತಿಯನ್ನು ಅರಿತು, ತನ್ನತನದ ವೈಶಿಷ್ಟ್ಯವನ್ನು ಬೆಳೆಸಿಕೊಳ್ಳುತ್ತಾ ಉಳಿದವರ ಜೊತೆಗೆ ಸಮಭಾವದಿಂದ ಸಹಕರಿಸಲು ಕಲಿಸುವುದೇ ನಿಜವಾದ ಸಂಸ್ಕೃತಿಯ ಲಕ್ಷಣ” – ಎಂ. ಗೋಪಾಲಕೃಷ್ಣ ಅಡಿಗ (ಕವಿ)