ಪೀಠಿಕೆ

ವಸ್ತುಗಳನ್ನು ಎಣಿಕೆ ಮಾಡುವುದು ನಮಗೀಗ ತೀರಾ ಸುಲಭ. ಗುಂಪಿನಲ್ಲಿ ಎಷ್ಟೇ ವಸ್ತುಗಳು ಇದ್ದರೂ ಅವುಗಳನ್ನು ಎಣಿಕೆ ಮಾಡಬಲ್ಲೆವು. ಉದಾ: ಶಾಲೆಯಲ್ಲಿರುವ ವಿದ್ಯಾರ್ಥಿಗಳನ್ನು ಎಣಿಕೆ ಮಾಡಿ ಸಂಖ್ಯಾಸೂಚಿಯಿಂದ ಬರೆಯುತ್ತೇವೆ. ದೊಡ್ಡ ಸಂಖ್ಯೆಗಳನ್ನು ತಿಳಿಸಲು ವಿವಿಧ ಸಂಖ್ಯಾ ಹೆಸರುಗಳನ್ನೂ ಬಳಸುತ್ತೇವೆ.

ನಾವು ಸಂಖ್ಯೆಗಳನ್ನು ಬಳಸುವ ಸನ್ನಿವೇಶಗಳ ಬಗ್ಗೆ ಯೋಚಿಸಿ. ಹಿಂದಿನ ತರಗತಿಗಳಲ್ಲಿ ನಾವು ಸಂಖ್ಯೆಗಳನ್ನು ಕೂಡುವುದು, ಕಳೆಯುವುದು, ಗುಣಾಕಾರ, ಭಾಗಾಕಾರ ಕ್ರಿಯೆಗಳನ್ನು ಕಲಿತು ನಿತ್ಯಜೀವನದಲ್ಲಿ ಇವುಗಳ ಬಳಕೆಯಿಂದ ಆನಂದವನ್ನು ಅನುಭವಿಸುತ್ತಿದ್ದೇವೆ. ಸಂಖ್ಯೆಗಳ ಸಾಲಿನಲ್ಲಿರುವ ಅನೇಕ ಕುತೂಹಲಕಾರಿ ಸಂರಚನೆಗಳನ್ನು ನಾವು ಗಮನಿಸಿದ್ದೇವೆ. ಈ ಅಧ್ಯಾಯದಲ್ಲಿ ನಾವು ಹಿಂದೆ ಕಲಿತ ವಿಷಯಗಳನ್ನು ಮನನ ಮಾಡೋಣ ಮತ್ತು ಇನ್ನಷ್ಟು ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ.

ಸಂಖ್ಯೆಗಳನ್ನು ತಿಳಿಯುವುದು (Knowing our Numbers)

ಸಂಖ್ಯೆಗಳ ಹೋಲಿಕೆ

ಸಂಖ್ಯೆಗಳನ್ನು ಹೋಲಿಸುವುದನ್ನು ನೀವು ತಿಳಿದಿರುವಿರಲ್ಲವೇ ? ಮುಂದೆ ನೀಡಿರುವ ಸಂಖ್ಯೆಗಳಲ್ಲಿ ಅತ್ಯಂತ ದೊಡ್ಡ ಸಂಖ್ಯೆ ಯಾವುದು ?
1) 92, 392, 4456, 89742ನಾನೇ ಅತ್ಯಂತ ದೊಡ್ಡವ
2) 1902, 1920, 9201, 9021, 9210ನಾನೇ ಅತ್ಯಂತ ದೊಡ್ಡವ
ಇವುಗಳಲ್ಲಿ ಯಾವುದು ದೊಡ್ಡದೆಂದು ನಿಮಗೆ ತಿಳಿದಿದೆ. ಯಾವುದು ದೊಡ್ಡದೆಂದು ನೀವು ಹೇಗೆ ನಿರ್ಣಯಿಸಿದಿರಿ ಎಂಬುದನ್ನು ನಿಮ್ಮ ಗೆಳೆಯನೊಂದಿಗೆ ಚರ್ಚಿಸಿ.

ಈಗ 4875 ಮತ್ತು 3542 ಗಳನ್ನು ಹೇಗೆ ಹೋಲಿಸುವಿರಿ? ಇದು ಕಠಿಣವೇನಲ್ಲ. ಇವೆರಡರಲ್ಲೂ ಸಮಾನ ಸಂಖ್ಯೆಯಲ್ಲಿ ಅಂಕಿಗಳಿವೆ. ಆದರೆ 4875ರಲ್ಲಿ, ಸಾವಿರದ ಸ್ಥಾನದಲ್ಲಿರುವ ಅಂಕಿಯು 3542 ರಲ್ಲಿರುವುದಕ್ಕಿಂತ ದೊಡ್ಡದಾಗಿದೆ. ಆದ್ದರಿಂದ 4875 ಇದು 3542 ಕ್ಕಿಂತ ದೊಡ್ಡದು.

4875 ಮತ್ತು 4542 ಗಳಲ್ಲಿ ಯಾವುದು ದೊಡ್ಡದು ? ಈ ಎರಡೂ ಸಂಖ್ಯೆಗಳಲ್ಲಿರುವ ಅಂಕಿಗಳ ಸಂಖ್ಯೆ ಸಮಾನ ಅಲ್ಲದೆ ಸಾವಿರದ ಸ್ಥಾನದಲ್ಲಿರುವ ಅಂಕಿಗಳೂ ಸಮವಾಗಿವೆ. ಈಗ ಏನು ಮಾಡೋಣ? ಅದರ ಮುಂದಿನ ಅಂಕಿ, ಸ್ಥಾನಬೆಲೆ 100 ಇರುವ ಅಂಕಿಗಳನ್ನು ಗಮನಿಸೋಣ. 4875ರಲ್ಲಿ ನೂರರ ಸ್ಥಾನದಲ್ಲಿರುವ ಅಂಕಿಯು 4542ರ ನೂರರ ಸ್ಥಾನದಲ್ಲಿರುವ ಅಂಕಿಗಿಂತ ದೊಡ್ಡದು. ಆದ್ದರಿಂದ 4875 ಇದು 4542 ಕ್ಕಿಂತ ದೊಡ್ಡದು.

ಏರಿಕೆ ಕ್ರಮ (ಆರೋಹಣ ಕ್ರಮ) : ಏರಿಕೆ ಕ್ರಮ ಎಂದರೆ ಕನಿಷ್ಟದಿಂದ ಗರಿಷ್ಟದ ಕಡೆಗೆ ವ್ಯವಸ್ಥೆಗೊಳಿಸುವುದು.
ಇಳಿಕೆ ಕ್ರಮ (ಅವರೋಹಣ ಕ್ರಮ) : ಇಳಿಕೆ ಕ್ರಮ ಎಂದರೆ ಗರಿಷ್ಟದಿಂದ ಕನಿಷ್ಟದ ಕಡೆಗೆ ವ್ಯವಸ್ಥೆಗೊಳಿಸಿವುದು.

10,000ವನ್ನು ಪರಿಚಯಿಸುವುದು :

99 ಕ್ಕಿಂತ ದೊಡ್ಡದಾದ 2 ಅಂಕಿ ಸಂಖ್ಯೆ ಇಲ್ಲವೆಂದು ನಮಗೆ ತಿಳಿದಿದೆ. 2 ಅಂಕಿ ಸಂಖ್ಯೆಗಳಲ್ಲಿ ಗರಿಷ್ಟ ಸಂಖ್ಯೆ 99. ಹೀಗೆಯೇ 3 ಅಂಕಿ ಸಂಖ್ಯೆಗಳಲ್ಲಿ ಗರಿಷ್ಟ ಸಂಖ್ಯೆ 999, 4 ಅಂಕಿ ಸಂಖ್ಯೆಗಳಲ್ಲಿ ಗರಿಷ್ಟ ಸಂಖ್ಯೆ 9999. ಈ 9999ಕ್ಕೆ 1ನ್ನು ಕೂಡಿದರೆ ಏನಾಗುವುದು ?
ಈ ವಿನ್ಯಾಸವನ್ನು ಗಮನಿಸಿ :
9 + 1 = 10 = 10 x 1
99 + 1 = 100 = 10 x 10
999 + 1 = 1000 = 10 x 100

1,00,000 ಅನ್ನು ಪರಿಚಯಿಸುವುದು :

5 ಅಂಕಿಗಳ ಗರಿಷ್ಟ ಸಂಖ್ಯೆ ಯಾವುದು ?
5 ಅಂಕಿಗಳ ಗರಿಷ್ಟ ಸಂಖ್ಯೆಗೆ 1ನ್ನು ಕೂಡಿದಾಗ 6 ಅಂಕಿಗಳ ಕನಿಷ್ಟ ಸಂಖ್ಯೆ ಸಿಗುತ್ತದೆ.
99,999 + 1 = 1,00,000
ಈ ಸಂಖ್ಯೆಯನ್ನು ‘ಒಂದು ಲಕ್ಷ’ ಎನ್ನುತ್ತಾರೆ. ಒಂದು ಲಕ್ಷವು 99,999ರ ಮುಂದಿನ ಸಂಖ್ಯೆ ಆಗಿದೆ.
10 x 10,000 = 1,00,000
ನಾವೀಗ 6 ಅಂಕಿಗಳ ಸಂಖ್ಯೆಗಳನ್ನು ವಿಸ್ತರಿಸಬಹುದು.
2,46,853 = 2 x 1,00,000 + 4 x 10,000 + 6 x 1,000 + 8 x 100 + 5 x 10 + 3 x 1
ಈ ಸಂಖ್ಯೆಯಲ್ಲಿ 3 ಬಿಡಿಸ್ಥಾನದಲ್ಲಿ, 5 ಹತ್ತರ ಸ್ಥಾನಲ್ಲಿ, 8 ನೂರರ ಸ್ಥಾನದಲ್ಲಿ, 6 ಸಾವಿರದ ಸ್ಥಾನದಲ್ಲಿ, 4 ಹತ್ತುಸಾವಿರದ ಸ್ಥಾನದಲ್ಲಿ ಮತ್ತು 2 ಲಕ್ಷದ ಸ್ಥಾನದಲ್ಲಿ ಇವೆ. ಈ ಸಂಖ್ಯೆಯನ್ನು ‘ಎರಡು ಲಕ್ಷದ ನಲವತ್ತಾರು ಸಾವಿರದ ಎಂಟುನೂರ ಐವತ್ತಮೂರು’ ಎಂದು ಕರೆಯುತ್ತೇವೆ.

ಅಲ್ಪವಿರಾಮವನ್ನು ಬಳಸುವುದು :

ದೊಡ್ಡ ಸಂಖ್ಯೆಗಳನ್ನು ಬರೆಯುವಾಗ ನಾವು ಅಲ್ಲಲ್ಲಿ ಅಲ್ಪವಿರಾಮ ಚಿಹ್ನೆ ಬಳಸಿರುವುದನ್ನು ನೀವು ಗಮನಿಸಿರಬಹುದು. ಅಲ್ಪವಿರಾಮವು ದೊಡ್ಡ ಸಂಖ್ಯೆಗಳನ್ನು ಓದಲು ಅಥವಾ ಬರೆಯಲು ಸಹಕಾರಿಯಾಗಿದೆ. ನಮ್ಮ ಭಾರತೀಯ ಸಂಖ್ಯಾ ಪದ್ಧತಿಯಲ್ಲಿ ನಾವು ಬಿಡಿ, ಹತ್ತು, ನೂರು, ಸಾವಿರ, ಲಕ್ಷ ಹಾಗೂ ಕೋಟಿಗಳನ್ನು ಬಳಸುತ್ತೇವೆ. ಸಾವಿರ, ಲಕ್ಷ ಮತ್ತು ಕೋಟಿಗಳನ್ನು ಸೂಚಿಸಲು ಅಲ್ಪವಿರಾಮವನ್ನು ಬಳಸುತ್ತೇವೆ. ಬಲಬದಿಯಿಂದ ಮೂರು ಅಂಕಿಗಳ ಅನಂತರ (ಅಂದರೆ ನೂರರ ಎಡಬದಿಯಲ್ಲಿ) ಮೊದಲನೆಯ ಅಲ್ಪವಿರಾಮ ಬರುತ್ತದೆ. ಎರಡನೆಯ ಅಲ್ಪವಿರಾಮವು ಮತ್ತೆರಡು ಅಂಕಿಗಳ ಅನಂತರ (ಬಲಬದಿಯಿಂದ 5ನೇ ಅಂಕಿಯ ಅನಂತರ) ಬರುತ್ತದೆ. ಇದು ಹತ್ತು ಸಾವಿರದ ಅನಂತರ ಬಿಂದು ಲಕ್ಷವನ್ನು ಸೂಚಿಸುತ್ತದೆ. ಮೂರನೆಯ ಅಲ್ಪವಿರಾಮವು ಮತ್ತೆರಡು (ಬಲಬದಿಯಿಂದ 7 ಅಂಕಿಗಳ ಅನಂತರ) ಅಂಕಿಗಳ ಅನಂತರ ಬರುತ್ತದೆ. ಇದು ಹತ್ತು ಲಕ್ಷದ ಅನಂತರ ಒಂದು ಕೋಟಿಯನ್ನು ಸೂಚಿಸುತ್ತದೆ.
ಉದಾಹರಣೆಗೆ :
5,08,01,592
3,32,40,781
7,27,05,062

ಬಳಕೆಯಲ್ಲಿರುವ ದೊಡ್ಡ ಸಂಖ್ಯೆಗಳು :

ಹಿಂದಿನ ತರಗತಿಗಳಲ್ಲಿ ನಾವು ಉದ್ದವನ್ನು ಅಳೆಯಲು ಸೆಂಟಿಮೀಟರ್ (cm) ಎಂಬ ಮೂಲಮಾನವನ್ನು ಬಳಸುತ್ತೇವೆ ಎಂದು ಕಲಿತಿದ್ದೇವೆ. ಪೆನ್ಸಿಲಿನ ಉದ್ದವನ್ನು ಪುಸ್ತಕ ಅಥವಾ ನೋಟ್ ಪುಸ್ತಕದ ಅಗಲ ಇತ್ಯಾದಿಗಳನ್ನು ಅಳೆಯಲು ಸೆಂಟಿಮೀಟರ್‍ನಲ್ಲಿ ಗುರುತುಗಳಿವೆ. ಆದರೆ ಪೆನ್ಸಿಲಿನ ದಪ್ಪವನ್ನು ಅಳೆಯಲು ಸೆಂಟಿಮೀಟರ್ ತುಂಬಾ ದೊಡ್ಡದಾಗುವುದರಿಂದ ಅದನ್ನು ಅಳೆಯಲು ಮಿಲಿಮೀಟರ್ (mm) ಬಳಸುತ್ತೇವೆ.

a) 10 ಮಿಲಿಮೀಟರ್ = 1 ಸೆಂಟಿಮೀರ್ ನಮ್ಮ ತರಗತಿ ಕೋಣೆ ಅಥವಾ ಶಾಲಾ ಕಟ್ಟಡದ ಉದ್ದವನ್ನು ಅಳತೆ ಮಾಡಲು ಸೆಂಟಿಮೀಟರ್ ತುಂಬಾ ಚಿಕ್ಕದಾಗುತ್ತದೆ. ಅದಕ್ಕಾಗಿ ನಾವು ಮೀಟರ್ ನ್ನು ಉಪಯೋಗಿಸುತ್ತೇವೆ.
b) 1 ಮೀಟರ್ = 100 ಸೆಂಟಿಮೀಟರ್ = 1000 ಮಿಲಿಮೀಟರ್. ಆದರೆ, ಎರಡು ನಗರಗಳ ಉದಾಹರಣೆಗೆ ದೆಹಲಿ ಮತ್ತು ಮುಂಬಯಿ ಅಥವಾ ಚೆನ್ನೈ ಮತ್ತು ಕೋಲ್ಕತಾ ನಡುವಿನ ದೂರವನ್ನು ಹೇಳುವಾಗ ಮೀಟರ್ ಕೂಡಾ ತುಂಬಾ ಚಿಕ್ಕದಾಗುತ್ತದೆ. ಅದಕ್ಕಾಗಿ ನಮಗೆ ಕಿಲೋಮೀಟರ್ ಗಳು (km) ಬೇಕಾಗುತ್ತವೆ.
c) 1 ಕಿಲೋಮೀಟರ್ = 1000 ಮೀಟರ್
ಒಂದು ಕಿಲೋಮೀಟರ್ ಗೆ ಎಷ್ಟು ಮಿಲಿಮೀಟರ್ ಗಳಾಗುತ್ತವೆ ?

1 m = 1000 mm ಆಗಿರುವುದರಿಂದ
1 m = 1000 m = 1000 x 1000 mm = 10,00,000 mm

ನಾವು ಅಕ್ಕಿ ಅಥವಾ ಗೋಧಿಯನ್ನು ಕೊಳ್ಳಲು ಮಾರುಕಟ್ಟೆಗೆ ಹೋಗುತ್ತೇವೆ. ಕಿಲೋಗ್ರಾಂಗಳಲ್ಲಿ ಅವುಗಳನ್ನು ಖರೀದಿಸುತ್ತೇವೆ. ಆದರೆ ಶುಂಠಿ ಅಥವಾ ಮೆಣಸುಗಳು ನಮಗೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಬೇಕಾಗದಿರುವುದರಿಂದ ನಾವು ಅವುಗಳನ್ನು ಗ್ರಾಂಗಳಲ್ಲಿ ಖರೀದಿಸುತ್ತೇವೆ.
ನೀವೇನಾದರೂ ರೋಗಿಗಳಿಗೆ ಕೊಡುವಂತಹ ಮಾತ್ರೆಗಳ ತೂಕವನ್ನು ಗಮನಿಸಿದ್ದೀರಾ ? ಅದು ತುಂಬಾ ಚಿಕ್ಕದು. ಅದು ಮಿಲಿಗ್ರಾಂಗಳಲ್ಲಿ ಇರುತ್ತದೆ.
1 ಗ್ರಾಂ = 1000 ಮಿಲಿ ಗ್ರಾಂಗಳು
ಒಂದು ಬಾಲ್ಡಿಯಲ್ಲಿ ಎಷ್ಟು ನೀರು ಹಿಡಿಯಬಹುದು? ಸಾಮಾನ್ಯವಾಗಿ ಅದು 20 ಲೀಟರ್‍ಗಳು (L) ಗಾತ್ರವನ್ನು ಲೀಟರ್‍ಗಳಲ್ಲಿ ನೀಡಿರುತ್ತಾರೆ. ಆದರೆ ಕೆಲವೊಮ್ಮೆ ನಮಗೆ ಚಿಕ್ಕ ಮೂಲಮಾನ, ಮಿಲಿಲೀಟರ್‍ಗಳು ಬೇಕಾಗುತ್ತವೆ.
ತಲೆಕೂದಲ ಎಣ್ಣೆ, ಶುದ್ಧೀಕರಿಸುವ ದ್ರಾವಣ ಅಥವಾ ಲಘುಪೇಯಗಳಿರುವ ಸೀಸೆಗಳ ಮೇಲೆ ಹಚ್ಚಿರುವ ಚೀಟಿಗಳಲ್ಲಿ ದ್ರವದ ಪ್ರಮಾಣವು ಮಿಲಿಲೀಟರ್ (ml) ಗಳಲ್ಲಿ ಇರುತ್ತವೆ.
1 ಲೀಟರ್ = 1000 ಮಿಲಿಲೀಟರ್‍ಗಳು
ಈ ಎಲ್ಲಾ ಮೂಲಮಾನ ಪದಗಳಲ್ಲಿ ಕಿಲೋ, ಮಿಲಿ, ಸೆಂಟಿ ಎಂಬಂತಹ ಕೆಲವು ಸಾಮಾನ್ಯ ಪದಗಳನ್ನು ನೀವು ಗಮನಿಸಿ. ಇವುಗಳಲ್ಲಿ ಕಿಲೋ ಅತ್ಯಂತ ದೊಡ್ಡದು ಮತ್ತು ಮಿಲಿ ಅತ್ಯಂತ ಚಿಕ್ಕದು ಎಂಬುದನ್ನು ನೆನಪಿಡಿ. ಕಿಲೋ ಎಂದರೆ 1000 ಪಟ್ಟು ದೊಡ್ಡದು, ಮಿಲಿ ಎಂದರೆ 1000 ಪಟ್ಟು ಚಿಕ್ಕದು ಎಂದು ಸೂಚಿಸುತ್ತದೆ. ಎಂದರೆ,
1 ಕಿಲೋಗ್ರಾಂ = 1000 ಗ್ರಾಂಗಳು,
1 ಗ್ರಾಂ = 1000 ಮಿಲಿಗ್ರಾಂಗಳು

ಹೀಗೆಯೇ, ಸೆಂಟಿಯು 100 ಪಟ್ಟು ಚಿಕ್ಕದು ಎಂದು ಸೂಚಿಸುತ್ತದೆ. ಎಂದರೆ 1 ಮೀಟರ್ = 100 ಸೆಂಟಿಮೀಟರ್.

ಅಂದಾಜು ಮಾಡುವುದು :

ವಾರ್ತೆಗಳು

  1. ಕ್ರೀಡಾಂಗಣದಲ್ಲಿ 51,000 ಪ್ರೇಕ್ಷಕರು, ಮತ್ತು ವಿಶ್ವದಾದ್ಯಂತ 40 ಮಿಲಿಯನ್ ದೂರದರ್ಶನ ವೀಕ್ಷಕರ ಸಮ್ಮುಖದಲ್ಲಿ ನಡೆದ ಹಾಕಿ ಪಂದ್ಯವೊಂದರಲ್ಲಿ ಭಾರತವು ಪಾಕಿಸ್ತಾನದೊಂದಿಗೆ ಸಮಬಲವನ್ನು ಸಾಧಿಸಿತು.
  2. ಭಾರತ ಮತ್ತು ಬಾಂಗ್ಲಾದೇಶಗಳ ಕರಾವಳಿ ಪ್ರದೇಶಗಳಲ್ಲಿ ಬೀಸಿದ ಚಂಡಮಾರುತದಿಂದ ಸುಮಾರು 2000 ಮಂದಿ ಹತರಾದರು ಮತ್ತು 50,000 ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
  3. ರೈಲ್ವೆ ಹಾದಿಯ ಮೂಲಕ ಪ್ರತಿದಿನ 13 ಮಿಲಿಯನ್‍ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು 63,000 ಕಿಲೋಮೀಟರ್‍ಗಿಂತಲೂ ಹೆಚ್ಚು ದೂರಕ್ಕೆ ಸಾಗಿಸಲಾಗುತ್ತಿ?

ವಾರ್ತೆಯಲ್ಲಿ ಉಲ್ಲೇಖ ಮಾಡಿರುವಷ್ಟೇ ಸಂಖ್ಯೆಯ ಜನರು ಸರಿಯಾಗಿ ಆ ಸಂದರ್ಭಗಳಲ್ಲಿ ಇದ್ದರು ಎಂದು ನಾವು ಹೇಳಲು ಸಾಧ್ಯವೇ ? ಉದಾಹರಣೆಗೆ (1)ರಲ್ಲಿ, ಸರಿಯಾಗಿ 51,000 ಮಂದಿ ಕ್ರೀಡಾಂಗಣದಲ್ಲಿ ಇದ್ದರೇ ? ಅಥವಾ ಸರಿಯಾಗಿ 40 ಮಿಲಿಯನ್ ಮಂದಿ ದೂರದರ್ಶನದಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದರೆ ? ಖಂಡಿತವಾಗಿಯೂ ಇಲ್ಲ. ಪದ ಸುಮಾರು ಎಂಬುದು ಅಲ್ಲಿದ್ದ ಜನರ ಸಂಖ್ಯೆಗೆ ಸಮೀಪದ ಸಂಖ್ಯೆ ಎಂದು ಸೂಚಿಸುತ್ತದೆ.
ಸ್ಪಷ್ಟವಾಗಿಯೇ, 51,000 ಎಂದರೆ 50,800 ಅಥವಾ 51,300 ಆಗಿರಬಹುದೇ ಹೊರತು 70,000 ಆಗಿರಲಾರದು. ಹಾಗೆಯೇ, 40 ಮಿಲಿಯನ್ 39 ಮಿಲಿಯನ್‍ಕ್ಕಿಂತ ಬಹಳ ಹೆಚ್ಚು ಆದರೆ 41 ಮಿಲಿಯನ್‍ಕ್ಕಿಂತ ಬಹಳ ಕಡಿಮೆ ಎಂದು ಸೂಚಿಸುತ್ತದೆ ಹೊರತು ಖಂಡಿತವಾಗಿಯೂ 50 ಮಿಲಿಯನ್‍ನ್ನು ಸೂಚಿಸುವುದಿಲ್ಲ.
ಹಿಂದಿನ ಉದಾಹರಣೆಗಳಲ್ಲಿ ಕೊಟ್ಟಿರುವ ಪರಿಮಾಣಗಳು ಸರಿಯಾದ ಲೆಕ್ಕವಲ್ಲ, ಆದರೆ ಪರಿಮಾಣದ ಬಗ್ಗೆ ಕಲ್ಪನೆ ಮೂಡಿಸುವುದಕ್ಕಾಗಿ ನೀಡಿದ ಅಂದಾಜು ಪರಿಮಾಣವಾಗಿದೆ.

ವಿಡಿಯೋ ಪಾಠಗಳು

Samveda – 6th – Maths – Knowing Numbers (Part 1 of 4) | (ಭಾಗ – 1)
Samveda – 6th – Maths – Knowing Numbers (Part 2 of 4) | (ಭಾಗ – 2)
Samveda – 6th – Maths – Knowing Numbers (Part 3 of 4) | (ಭಾಗ – 3)
Samveda – 6th – Maths – Knowing Numbers (Part 4 of 4) | (ಭಾಗ – 4)

ಅಭ್ಯಾಸಗಳು

ಅಭ್ಯಾಸ 1.1ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 1.2ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 1.3ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.