ಮಣ್ಣು – ಅಧ್ಯಾಯ-9

ಅತ್ಯಂತ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳಲ್ಲಿ ಮಣ್ಣೂ ಒಂದು. ಇದು ಸಸ್ಯಗಳಿಗೆ ನೆಲೆಯನ್ನು ಒದಗಿಸುತ್ತದೆ ಹಾಗೂ ನೀರು ಮತ್ತು ಪೋಷಕಗಳನ್ನು ಒದಗಿಸುತ್ತದೆ. ಇದು ಅನೇಕ ಜೀವಿಗಳಿಗೆ ವಾಸಸ್ಥಳವಾಗಿದೆ. ಕೃಷಿಗೆ ಮಣ್ಣು ಅವಶ್ಯಕ. ಕೃಷಿಯು ಎಲ್ಲರಿಗೂ ಆಹಾರ, ಬಟ್ಟೆ ಮತ್ತು ವಸತಿಯನ್ನು ಒದಗಿಸುತ್ತದೆ. ಹೀಗೆ ಮಣ್ಣು ನಮ್ಮ ಬದುಕಿನ ಅವಿಭಾಜ್ಯ ಅಂಗ. ಮೊದಲ ಮಳೆಯ ಅನಂತರ ಬರುವ ಮಣ್ಣಿನ ವಾಸನೆಯು ಯಾವಾಗಲೂ ಉಲ್ಲಾಸದಾಯಕವಾಗಿರುತ್ತದೆ.

9.1 ಜೀವಿಗಳಿಂದ ಸಮೃದ್ಧ ಮಣ್ಣು

ಮಳೆಗಾಲದಲ್ಲಿ ಒಂದು ದಿನ ಎರೆಹುಳು ಮಣ್ಣಿನಿಂದ ಹೊರಬರುವುದನ್ನು ಪಹೇಲಿ ಮತ್ತು ಬೂಝೊ ಗಮನಿಸಿದರು. ಮಣ್ಣಿನಲ್ಲಿ ಇತರ ಜೀವಿಗಳೂ ಇರಬಹುದೆ? ಎಂದು ಪಹೇಲಿಯು ಅಚ್ಚರಿಪಟ್ಟಳು. ಅವುಗಳನ್ನು ನಾವು ಪತ್ತೆ ಮಾಡೋಣ.

ಚಟುವಟಿಕೆ 9.1
ಮಣ್ಣಿನ ಕೆಲವು ಮಾದರಿಗಳನ್ನು ಸಂಗ್ರಹಿಸಿ ಮತ್ತು ಅವುಗಳನ್ನು ಎಚ್ಚರಿಕೆಯಿಂದ ಗಮನಿಸಿ. ಇದಕ್ಕಾಗಿ ನೀವು ಕೈ ಮಸೂರ (hand lens) ವನ್ನು ಬಳಸಬಹುದು. ಪ್ರತಿ ಮಾದರಿಯನ್ನು ಎಚ್ಚರಿಕೆಯಿಂದ ಗಮನಿಸಿ ಮತ್ತು ಕೋಷ್ಟಕ 9.1ನ್ನು ತುಂಬಿ.

• ನೀವು ಗಮನಿಸಿದ ಅಂಶಗಳನ್ನು ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿ.
• ನಿಮ್ಮ ಸ್ನೇಹಿತರು ಸಂಗ್ರಹಿಸಿದ ಮಣ್ಣಿನ ಮಾದರಿಗಳು, ನೀವು ಸಂಗ್ರಹಿಸಿದ ಮಣ್ಣಿನ ಮಾದರಿಗಳನ್ನು ಹೋಲುತ್ತವೆಯೆ?

ಬೂಝೋ ಮತ್ತು ಪಹೇಲಿ ಮಣ್ಣನ್ನು ಅನೇಕ ರೀತಿಯಲ್ಲಿ ಬಳಸಿದರು. ಅವರು ಅದರೊಂದಿಗೆ ಆಟವಾಡಿ ಸಂಭ್ರಮಿಸಿದರು. ನಿಜವಾಗಿಯೂ ಇದು ತುಂಬಾ ಖುಷಿ ಕೊಡುತ್ತದೆ.

ಮಣ್ಣಿನ ಉಪಯೋಗಗಳ ಪಟ್ಟಿಯನ್ನು ಮಾಡಿ.

ಪಾಲಿಥೀನ್ ಚೀಲಗಳು ಮತ್ತು ಪ್ಲಾಸ್ಟಿಕ್‍ಗಳು ಮಣ್ಣನ್ನು ಮಾಲಿನ್ಯಗೊಳಿಸುತ್ತವೆ. ಮಣ್ಣಿನಲ್ಲಿ ವಾಸವಾಗಿರುವ ಜೀವಿಗಳನ್ನು ಅವು ಕೊಲ್ಲುತ್ತವೆ. ಈ ಕಾರಣದಿಂದಾಗಿಯೇ ಪಾಲಿಥೀನ್ ಚೀಲಗಳು ಮತ್ತು ಪ್ಲಾಸ್ಟಿಕ್‍ಗಳನ್ನು ನಿಷೇಧಿಸಲು ಒತ್ತಾಯವಿದೆ. ಮಣ್ಣನ್ನು ಮಾಲಿನ್ಯಗೊಳಿಸುವ ಇತರ ವಸ್ತುಗಳೆಂದರೆ – ಅಸಂಖ್ಯಾತ ತ್ಯಾಜ್ಯ ವಸ್ತುಗಳು, ರಾಸಾಯನಿಕಗಳು ಮತ್ತು ಕೀಟನಾಶಕಗಳು. ತ್ಯಾಜ್ಯ ವಸ್ತುಗಳು ಮತ್ತು ರಾಸಾಯನಿಕಗಳನ್ನು ಅವು ಮಣ್ಣಿಗೆ ಸೇರುವ ಮುನ್ನ ಸಂಸ್ಕರಿಸಬೇಕು. ಕೀಟನಾಶಕಗಳ ಉಪಯೋಗವನ್ನು ಕಡಿಮೆ ಮಾಡಬೇಕು.

9.2 ಮಣ್ಣಿನ ಸ್ತರವಿನ್ಯಾಸ

ಮಣ್ಣು ವಿಭಿನ್ನ ಪದರಗಳನ್ನು ಒಳಗೊಂಡಿದೆ. ಈ ಕೆಳಗಿನ ಚಟುವಟಿಕೆಗಳನ್ನು ಮಾಡಿ, ಈ ಪದರಗಳು ಹೇಗೆ ಜೋಡಣೆಯಾಗಿವೆ ಎಂದು ಕಂಡುಹಿಡಿಯಿರಿ.

ಸ್ವಲ್ಪ ಮಣ್ಣನ್ನು ತೆಗೆದುಕೊಳ್ಳಿ. ಹೆಂಟೆಗಳನ್ನು ಕೈಯಿಂದ ಒಡೆದು ಪುಡಿಮಾಡಿ. ಈಗ 3 4 ಭಾಗದಷ್ಟು ನೀರು ತುಂಬಿದ ಗಾಜಿನ ಲೋಟವನ್ನು ತೆಗೆದುಕೊಂಡು ಅದಕ್ಕೆ ಒಂದು ಹಿಡಿ ಮಣ್ಣನ್ನು ಸೇರಿಸಿ. ಮಣ್ಣನ್ನು ವಿಲೀನಗೊಳಿಸಲು ಒಂದು ಕಡ್ಡಿಯಿಂದ ಚೆನ್ನಾಗಿ ಕಲಕಿ. ಈಗ ಸ್ವಲ್ಪಕಾಲ ಅಲುಗಾಡದಂತೆ ಇಡಿ (ಚಿತ್ರ 9.2). ನಂತರ ಅದನ್ನು ಗಮನಿಸಿ ಮತ್ತು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

• ಗಾಜಿನ ಲೋಟದಲ್ಲಿ ಮಣ್ಣಿನ ಬೇರೆ ಬೇರೆ ಗಾತ್ರದ ಕಣಗಳ ಪದರ (layer) ಗಳನ್ನು ನೀವು ಕಾಣುವಿರ?
• ಈ ಪದರಗಳನ್ನು ತೋರಿಸುವ ಚಿತ್ರವನ್ನು ಬಿಡಿಸಿ.
• ಸತ್ತ, ಕೊಳೆಯುತ್ತಿರುವ ಎಲೆಗಳು ಅಥವಾ ಪ್ರಾಣಿ ಅವಶೇಷಗಳು ನೀರಿನ ಮೇಲೆ ತೇಲುತ್ತಿವೆಯೆ?

ಮಣ್ಣಿನಲ್ಲಿ ಸತ್ತು ಕೊಳೆಯುತ್ತಿರುವ ವಸ್ತುಗಳನ್ನು ಹ್ಯೂಮಸ್ (humus) ಎನ್ನುವರು.

ಗಾಳಿ, ನೀರು ಮತ್ತು ಹವಾಮಾನದ ಪರಿಣಾಮದಿಂದ ಬಂಡೆಗಳು ಒಡೆದು ಮಣ್ಣು ಉತ್ಪತ್ತಿಯಾಗುತ್ತದೆ ಎಂದು ಬಹುಶಃ ನೀವು ತಿಳಿದಿರಬಹುದು. ಈ ಪ್ರಕ್ರಿಯೆಯನ್ನು ಶಿಥಿಲಗೊಳ್ಳುವಿಕೆ (weathering) ಎನ್ನುವರು. ಯಾವುದೇ ಮಣ್ಣಿನ ಸ್ವರೂಪವು ಅದು ಉತ್ಪತ್ತಿಯಾದ ಬಂಡೆ ಮತ್ತು ಅದರಲ್ಲಿ ಬೆಳೆಯುವ ಸಸ್ಯವರ್ಗಗಳನ್ನು ಅವಲಂಬಿಸಿದೆ.

ಶಿಥಿಲಗೊಳ್ಳುವಿಕೆ (weathering)

ಮಣ್ಣಿನ ಬೇರೆ ಬೇರೆ ಪದರಗಳ ನೀಳಸೀಳಿಕೆಯನ್ನು ಮಣ್ಣಿನ ಸ್ತರವಿನ್ಯಾಸ (soil profile) ಎನ್ನುವರು. ಪ್ರತಿ ಪದರದ ಕಣ ರಚನೆಯು ಸ್ಪರ್ಶ, ಬಣ್ಣ, ಆಳ ಮತ್ತು ರಾಸಾಯನಿಕ ಸಂಯೋಜನೆಯಲ್ಲಿ ಭಿನ್ನವಾಗಿದೆ. ಇವುಗಳನ್ನು ಸ್ತರಗಳು (horizons) ಎನ್ನುವರು (ಚಿತ್ರ 9.3).

ನಾವು ಸಾಮಾನ್ಯವಾಗಿ ಮಣ್ಣಿನ ಹೊರ ಮೇಲ್ಮೈಯನ್ನು ಮಾತ್ರ ಕಾಣುತ್ತೇವೆಯೆ ಹೊರತು ಅದರ ಕೆಳಗಿರುವ ಪದರಗಳನ್ನಲ್ಲ. ಆಗ ತಾನೆ ಅಗೆದ ಗುಂಡಿಯ ಪದರಗಳನ್ನು ವೀಕ್ಷಿಸಿದಾಗ ಮಣ್ಣಿನ ಒಳ ಪದರಗಳನ್ನು ಕೂಡ ನಾವು ನೋಡಬಹುದು. ಅಂತಹ ನೋಟ ನಮಗೆ ಆ ಪ್ರದೇಶದ ಮಣ್ಣಿನ ಸ್ತರವಿನ್ಯಾಸವನ್ನು ಗಮನಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಬಾವಿಯನ್ನು ತೋಡುವಾಗ ಅಥವಾ ಕಟ್ಟಡಕ್ಕೆ ಅಡಿಪಾಯವನ್ನು ಹಾಕುವಾಗ ಸಹ ಮಣ್ಣಿನ ಸ್ತರವಿನ್ಯಾಸವನ್ನು ನೋಡಬಹುದು. ಬೆಟ್ಟಗಳ ಮೇಲಿನ ರಸ್ತೆ ಬದಿಗಳಲ್ಲಿ ಅಥವಾ ನದಿಯ ಆಳವಾದ ದಂಡೆಗಳಲ್ಲಿಯೂ ಕೂಡ ಇದನ್ನು ನೋಡಬಹುದು.

ಮಣ್ಣಿನ ಅತ್ಯಂತ ಮೇಲಿನ ಪದರದಲ್ಲಿ ಹ್ಯೂಮಸ್ ಮತ್ತು ಖನಿಜಗಳು ಹೇರಳವಾಗಿರುವುದರಿಂದ ಅದು ಸಾಮಾನ್ಯವಾಗಿ ಗಾಢಬಣ್ಣದ್ದಾಗಿರುತ್ತದೆ. ಹ್ಯೂಮಸ್ ಮಣ್ಣನ್ನು ಫಲವತ್ತಾಗಿಸುತ್ತದೆ ಮತ್ತು ಸಸ್ಯಗಳ ಬೆಳವಣಿಗೆಗೆ ಪೋಷಕಗಳನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಈ ಪದರವು ಮೃದು, ಸರಂಧ್ರ ಮತ್ತು ಹೆಚ್ಚು ನೀರನ್ನು ಉಳಿಸಿಕೊಳ್ಳಬಲ್ಲದು. ಇದನ್ನು ಮೇಲ್ಮಣ್ಣು ಅಥವಾ A – ಸ್ತರ ಎನ್ನುವರು. ಹುಳು, ಇಲಿ, ಹೆಗ್ಗಣ ಮತ್ತು ರೆಕ್ಕೆ ಹುಳು ಜೀರುಂಡೆಯಂತಹ ಅನೇಕ ಜೀವಿಗಳಿಗೆ ಇದು ಆಶ್ರಯವನ್ನು ಒದಗಿಸುತ್ತದೆ. ಚಿಕ್ಕ ಸಸ್ಯಗಳ ಬೇರುಗಳು ಸಂಪೂರ್ಣವಾಗಿ ಮೇಲ್ಮಣ್ಣಿನಲ್ಲಿಯೇ ಹುದುಗಿಕೊಂಡಿರುತ್ತವೆ.

ನಂತರದ ಪದರವು ಕಡಿಮೆ ಪ್ರಮಾಣದ ಹ್ಯೂಮಸ್, ಆದರೆ ಹೆಚ್ಚು ಪ್ರಮಾಣದ ಖನಿಜಗಳನ್ನು ಒಳಗೊಂಡಿರುತ್ತದೆ. ಈ ಪದರವು ಸಾಮಾನ್ಯವಾಗಿ ಗಟ್ಟಿಯಾಗಿ ಮತ್ತು ಹೆಚ್ಚು ಒತ್ತೊತ್ತಾಗಿ ಇರುತ್ತದೆ ಇದನ್ನು ಮಧ್ಯದ ಪದರ ಅಥವಾ B – ಸ್ತರ ಎನ್ನುವರು.

ಮೂರನೇ ಪದರವು C – ಸ್ತರ. ಇದು ಬಿರುಕುಗಳು ಮತ್ತು ರಂಧ್ರಗಳನ್ನೊಳಗೊಂಡ ಸಣ್ಣ ಸಣ್ಣ ಕಲ್ಲಿನ ಚೂರುಗಳಿಂದಾಗಿದೆ. ಈ ಪದರದ ಕೆಳಗೆ ಗಟ್ಟಿಯಾದ ಮತ್ತು ಗುದ್ದಲಿಯಿಂದ ಅಗೆಯಲು ಕಷ್ಟವಾದ ಕಲ್ಲುಹಾಸು (bed rock) ಇದೆ.

9.3 ಮಣ್ಣಿನ ವಿಧಗಳು

ನೀವು ತಿಳಿದಿರುವಂತೆ ಕಲ್ಲಿನ ಶಿಥಿಲವಾಗುವಿಕೆಯು ಅನೇಕ ವಿಧದ ಪದಾರ್ಥಗಳ ಸಣ್ಣ ಸಣ್ಣ ಕಣಗಳನ್ನು ಉತ್ಪಾದಿಸುತ್ತದೆ. ಇವು ಮರಳು ಮತ್ತು ಜೇಡಿಮಣ್ಣನ್ನು ಒಳಗೊಂಡಿರುತ್ತವೆ. ಮರಳು ಮತ್ತು ಜೇಡಿಮಣ್ಣಿನ ಸಾಪೇಕ್ಷ ಪ್ರಮಾಣವು ಆ ಕಣಗಳ ಮೂಲ ಕಲ್ಲು, ಅಂದರೆ ಅವು ಯಾವ ಕಲ್ಲಿನಿಂದ ಆಗಿವೆ ಎಂಬುದನ್ನು ಅವಲಂಬಿಸಿದೆ. ಕಲ್ಲಿನ ಕಣಗಳು ಮತ್ತು ಹ್ಯೂಮಸ್‍ನ ಮಿಶ್ರಣವನ್ನು ಮಣ್ಣು ಎನ್ನುವರು. ಬ್ಯಾಕ್ಟೀರಿಯಾದಂತಹ ಜೀವಿಗಳು, ಸಸ್ಯದ ಬೇರುಗಳು ಮತ್ತು ಎರೆಹುಳುಗಳು ಕೂಡ ಯಾವುದೇ ಮಣ್ಣಿನ ಪ್ರಮುಖವಾದ ಭಾಗಗಳು.

ಬೇರೆ ಬೇರೆ ಗಾತ್ರದ ಮಣ್ಣಿನ ಕಣಗಳು ಯಾವ ಪ್ರಮಾಣದಲ್ಲಿವೆ ಎಂಬುದನ್ನು ಆಧರಿಸಿ ಮಣ್ಣನ್ನು ವರ್ಗೀಕರಿಸಲಾಗಿದೆ. ಮಣ್ಣಿನಲ್ಲಿ ದೊಡ್ಡ ಕಣಗಳು ಹೆಚ್ಚು ಪ್ರಮಾಣದಲ್ಲಿದ್ದರೆ, ಅದನ್ನು ಮರಳುಯುಕ್ತ ಮಣ್ಣು (sandy soil) ಎನ್ನುವರು. ಸೂಕ್ಷ್ಮ ಕಣಗಳ ಪ್ರಮಾಣವು ಸಾಪೇಕ್ಷವಾಗಿ ಹೆಚ್ಚಾಗಿದ್ದರೆ, ಅದನ್ನು ಜೇಡಿಯುಕ್ತಮಣ್ಣು (clayey soil) ಎನ್ನುವರು. ದೊಡ್ಡಕಣಗಳು ಮತ್ತು ಸೂಕ್ಷ್ಮ ಕಣಗಳು ಸಮವಾಗಿದ್ದರೆ ಅಂತಹ ಮಣ್ಣನ್ನು ಕಳಿಮಣ್ಣು (loamy soil) ಎನ್ನುವರು. ಆದ್ದರಿಂದ ಮಣ್ಣನ್ನು ಮರಳು, ಜೇಡಿ ಮತ್ತು ಕಳಿಮಣ್ಣು ಎಂದು ವರ್ಗೀಕರಿಸಬಹುದು.

ಮರಳುಯುಕ್ತ ಮಣ್ಣು (sandy soil)
ಜೇಡಿಯುಕ್ತಮಣ್ಣು (clayey soil)
ಕಳಿಮಣ್ಣು (loamy soil)

ಮಣ್ಣಿನಲ್ಲಿ ಕಣಗಳ ಗಾತ್ರವು ಅದರ ಗುಣದ ಮೇಲೆ ಪ್ರಭಾವವನ್ನು ಬೀರುತ್ತದೆ. ಮರಳಿನ ಕಣಗಳು ಸಾಕಷ್ಟು ದೊಡ್ಡವು. ಅವು ಒಟ್ಟಾಗಿ ಸಮೀಪ ಸೇರಿಕೊಳ್ಳಲಾರವು. ಆದ್ದರಿಂದ ಅವುಗಳ ನಡುವೆ ತುಂಬಾ ಅವಕಾಶಗಳು (spaces) ಇರುತ್ತವೆ. ಈ ಅವಕಾಶಗಳಲ್ಲಿ ಗಾಳಿ ತುಂಬಿರುತ್ತದೆ. ಕಣಗಳ ನಡುವಿನ ಖಾಲಿ ಅವಕಾಶದ ಮೂಲಕ ನೀರು ಬೇಗನೆ ಬಸಿದು ಹೋಗುತ್ತದೆ. ಆದ್ದರಿಂದ ಮರಳುಯುಕ್ತ ಮಣ್ಣು ಹಗುರ, ಹೆಚ್ಚು ಒಣ ಸ್ವಭಾವ ಮತ್ತು ಗಾಳಿಯುಕ್ತವಾಗಿರುತ್ತದೆ. ಜೇಡಿಮಣ್ಣಿನ ಕಣಗಳು ಸಾಕಷ್ಟು ಚಿಕ್ಕವಾಗಿದ್ದು ಒತ್ತೊತ್ತಾಗಿ ಸೇರಿಕೊಂಡಿರುವುದರಿಂದ ಗಾಳಿಗೆ ಅತಿ ಕಡಿಮೆ ಅವಕಾಶ ನೀಡುತ್ತವೆ. ಮರಳುಯುಕ್ತ ಮಣ್ಣಿಗಿಂತ ಭಿನ್ನವಾಗಿ ಜೇಡಿಮಣ್ಣಿನ ಕಣಗಳ ಸೂಕ್ಷ್ಮ ಸಂದುಗಳಲ್ಲಿ ನೀರು ಸೇರ್ಪಡೆ ಆಗುತ್ತದೆ. ಆದ್ದರಿಂದ ಜೇಡಿಮಣ್ಣಿನಲ್ಲಿ ಗಾಳಿ ಕಡಿಮೆ ಇದೆ. ಆದರೆ ಅದು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವುದರಿಂದ ಮರಳುಯುಕ್ತ ಮಣ್ಣಿಗಿಂತ ಹೆಚ್ಚು ಭಾರವಾಗಿರುತ್ತದೆ.

ಸಸ್ಯಗಳು ಬೆಳೆಯಲು ಕಳಿಮಣ್ಣು ಅತ್ಯುತ್ತಮ ಮೇಲ್ಮಣ್ಣಾಗಿದೆ. ಮರಳು, ಜೇಡಿಮಣ್ಣು ಮತ್ತು ಹೂಳು (silt) ಎಂಬ ಇನ್ನೊಂದು ವಿಧದ ಮಣ್ಣಿನ ಕಣಗಳ ಮಿಶ್ರಣವೇ ಕಳಿಮಣ್ಣು. ನದಿ ಪಾತ್ರಗಳ ನಿಕ್ಷೇಪದಲ್ಲಿ ಹೂಳು ಕಂಡುಬರುತ್ತದೆ. ಹೂಳಿನ ಕಣಗಳ ಗಾತ್ರವು ಮರಳು ಮತ್ತು ಜೇಡಿಮಣ್ಣಿನ ಕಣಗಳ ನಡುವಿನ ಗಾತ್ರದ್ದಾಗಿದೆ. ಕಳಿಮಣ್ಣು ಹ್ಯೂಮಸ್‍ಅನ್ನು ಕೂಡಾ ಒಳಗೊಂಡಿದೆ. ಸಸ್ಯಗಳ ಬೆಳವಣಿಗೆಗೆ ಬೇಕಾಗುವಷ್ಟು ನೀರನ್ನು ಸರಿಯಾದ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಇದಕ್ಕಿದೆ.

ಚಟುವಟಿಕೆ 9.3
ಜೇಡಿಯುಕ್ತಮಣ್ಣು, ಕಳಿಮಣ್ಣು ಮತ್ತು ಮರಳುಯುಕ್ತ ಮಣ್ಣುಗಳ ಮಾದರಿಗಳನ್ನು ಸಂಗ್ರಹಿಸಿ. ಒಂದು ಮಾದರಿಯಿಂದ ಒಂದು ಹಿಡಿ ಮಣ್ಣನ್ನು ತೆಗೆದುಕೊಳ್ಳಿ. ಅದರಿಂದ ಬೆಣಚು ಕಲ್ಲುಗಳು, ದಪ್ಪಕಲ್ಲುಗಳು ಮತ್ತು ಹುಲ್ಲಿನ ಗರಿಕೆಗಳನ್ನು ತೆಗೆದು ಹಾಕಿ. ಹನಿಹನಿಯಾಗಿ ನೀರನ್ನು ಸೇರಿಸಿ, ನಂತರ ಮಣ್ಣನ್ನು ಚೆನ್ನಾಗಿ ನಾದಿ (ಹಿಸುಕಿ) [ಚಿತ್ರ 9.4 (ಎ)]. ಉಂಡೆ ಕಟ್ಟಲು ಸಾಧ್ಯವಾಗುವಷ್ಟು ಮಾತ್ರ ನೀರನ್ನು ಸೇರಿಸಿ [ಚಿತ್ರ 9.4 (ಬಿ)]. ಆದರೆ ಅಂಟಾಗದಂತಿರಲಿ. ಈ ಮಣ್ಣಿನಿಂದ ಒಂದು ಉಂಡೆಯನ್ನು ಮಾಡಲು ಪ್ರಯತ್ನಿಸಿ [ಚಿತ್ರ 9.4 (ಸಿ)]. ಒಂದು ಸಮತಟ್ಟಾದ ಮೇಲ್ಮೈ ಮೇಲೆ ಒಂದು ಸಿಲಿಂಡರ್ ಆಕಾರಕ್ಕೆ ಈ ಉಂಡೆಯನ್ನು ಹೊಸೆಯಿರಿ [ಚಿತ್ರ 9.4 (ಡಿ)]. ಈ ಸಿಲಿಂಡರ್‍ನಿಂದ ಒಂದು ಮಣ್ಣಿನ ಬಳೆಯನ್ನು ಮಾಡಲು ಪ್ರಯತ್ನಿಸಿ [ಚಿತ್ರ 9.4(ಇ)]. ಈ ಚಟುವಟಿಕೆಯನ್ನು ಇತರ ಮಣ್ಣಿನ ಮಾದರಿಗಳೊಂದಿಗೆ ಪುನರಾವರ್ತಿಸಿ. ಎಷ್ಟರ ಮಟ್ಟಿಗೆ ಆಕಾರ ಕೊಡಲು ಸಾಧ್ಯ ಎಂಬುದು ಮಣ್ಣಿನ ವಿಧವನ್ನು ಸೂಚಿಸುವುದೆ?

ಮಡಕೆ, ಆಟಿಕೆ ಮತ್ತು ಮೂರ್ತಿಗಳನ್ನು ಮಾಡಲು ಯಾವ ವಿಧದ ಮಣ್ಣು ಯೋಗ್ಯವಾದುದು ಎಂದು ನೀವು ಸಲಹೆ ನೀಡುವಿರ?

9.4 ಮಣ್ಣಿನ ಗುಣಗಳು

ನೀವು ಮಣ್ಣಿನ ಕೆಲವು ಉಪಯೋಗಗಳನ್ನು ಪಟ್ಟಿ ಮಾಡಿರುವಿರಿ. ಈಗ ಮಣ್ಣಿನ ಗುಣಗಳನ್ನು ತಿಳಿಯಲು ಕೆಲವು ಚಟುವಟಿಕೆಗಳನ್ನು ನಾವು ಮಾಡೋಣ.

ಮಣ್ಣಿನಲ್ಲಿ ನೀರು ಇಂಗುವ ದರ

ಬೂಝೊ ಮತ್ತು ಪಹೇಲಿ 50cm×50cm ಅಳತೆಯ ಎರಡು ಚೌಕಾಕೃತಿಗಳಲ್ಲಿ ಒಂದನ್ನು ಅವರ ಮನೆಯ ನೆಲದ ಮೇಲೆ, ಮತ್ತೊಂದನ್ನು ಕಚ್ಚಾ ರಸ್ತೆಯ ಮೇಲೆ (ಕಲ್ಲು ಹಾಸದೇ ಇರುವ ರಸ್ತೆ) ರಚಿಸಿದರು. ಒಂದೇ ಗಾತ್ರದ ಎರಡು ಬಾಟಲಿಗಳಲ್ಲಿ ಅವರು ನೀರನ್ನು ತುಂಬಿದರು. ಒಂದೊಂದು ಬಾಟಲಿಯ ನೀರನ್ನು ಒಂದೊಂದು ಚೌಕದಲ್ಲಿ ಏಕಕಾಲದಲ್ಲಿ ಸುರಿದು ಖಾಲಿ ಮಾಡಿದರು. ಮನೆಯ ನೆಲವು ಹೀರಿಕೊಳ್ಳದೆ, ನೀರು ಹರಿದು ಹೋದುದನ್ನು ಅವರು ಗಮನಿಸಿದರು. ಆದರೆ ಕಚ್ಚಾ ರಸ್ತೆಯು ನೀರನ್ನು ಹೀರಿಕೊಂಡಿತು.

ಇದನ್ನು ಅರ್ಥೈಸಿಕೊಳ್ಳಲು ಈಗ ನಾವು ಒಂದು ಚಟುವಟಿಕೆಯನ್ನು ಮಾಡೋಣ.

ಚಟುವಟಿಕೆ 9.4
ಚಿತ್ರ 9.5 ನೀರು ಇಂಗುವ ದರವನ್ನು ಅಳೆಯುವುದು ಈ ಚಟುವಟಿಕೆಗಾಗಿ ನಿಮ್ಮನ್ನು ನೀವು ಮೂರು ತಂಡಗಳಾಗಿ ಮಾಡಿಕೊಳ್ಳಿ. ತಂಡಗಳನ್ನು ಎ, ಬಿ ಮತ್ತು ಸಿ ಎಂದು ಹೆಸರಿಸಿ. ಮಣ್ಣಿನಲ್ಲಿ ನೀರು ಎಷ್ಟು ವೇಗವಾಗಿ ಇಂಗಿ ಹೋಗುವುದು ಎಂದು ನೀವು ಕಂಡುಹಿಡಿಯುವಿರಿ. ನಿಮಗೆ ಒಂದು ಟೊಳ್ಳಾದ ಸಿಲಿಂಡರ್ ಅಥವಾ ಒಂದು ಕೊಳವೆಯ ಅಗತ್ಯವಿದೆ. ಪ್ರತಿ ತಂಡದವರು ಒಂದೇ ವ್ಯಾಸದ ಕೊಳವೆಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ. ಅಂತಹ ಕೊಳವೆಗಳನ್ನು ಪಡೆಯಲು ಕೆಲವು ಸಲಹೆಗಳನ್ನು ಕೆಳಗೆ ನೀಡಲಾಗಿದೆ.

1. ಸಾಧ್ಯವಾದರೆ ಒಂದೇ ಗಾತ್ರದ ತಗಡಿನ ಚಿಕ್ಕದಾದ ಡಬ್ಬಗಳನ್ನು ತೆಗೆದುಕೊಂಡು ಅವುಗಳ ತಳವನ್ನು ಕತ್ತರಿಸಿ.
2. P.V.C. ಪೈಪ್ (ಸುಮಾರು 5mm ವ್ಯಾಸವುಳ್ಳ) ಲಭ್ಯವಿದ್ದಲ್ಲಿ ಅದನ್ನು 20mm ಉದ್ದದ ತುಂಡುಗಳಾಗಿ ಕತ್ತರಿಸಿ, ನಂತರ ಅವುಗಳನ್ನು ಉಪಯೋಗಿಸಿ.

ನೀವು ಎಲ್ಲಿಂದ ಮಣ್ಣನ್ನು ಸಂಗ್ರಹಿಸುವಿರೋ, ಆ ನೆಲದಲ್ಲಿ 2cm ಆಳವಾಗಿ ಕೊಳವೆಯನ್ನು ನಿಲ್ಲಿಸಿ. 200ml ನೀರನ್ನು ಕೊಳವೆಯೊಳಗೆ ನಿಧಾನವಾಗಿ ಸುರಿಯಿರಿ. 200ml ನೀರನ್ನು ಅಳೆಯಲು ನೀವು ಯಾವುದಾದರೂ ಖಾಲಿಯಾದ 200ml ಬಾಟಲಿಯನ್ನು ಬಳಸಬಹುದು. ನೀವು ನೀರನ್ನು ಸುರಿಯಲು ಪ್ರಾರಂಭಿಸಿದ ಸಮಯವನ್ನು ಗುರ್ತಿಸಿಕೊಳ್ಳಿ. ಎಲ್ಲಾ ನೀರು ಇಂಗಿ, ಕೊಳವೆ ಖಾಲಿಯಾದ ಸಮಯವನ್ನು ಇನ್ನೊಮ್ಮೆ ಗುರ್ತಿಸಿ. ನೀರನ್ನು ಸುರಿಯುವಾಗ ಕೊಳವೆಯ ಮೇಲಿಂದ ನೀರು ಚೆಲ್ಲದಂತೆ ಅಥವಾ ಕೊಳವೆಯ ತಳದಿಂದ ನೀರು ಹರಿದು ಹೋಗದಂತೆ ಎಚ್ಚರವಹಿಸಿ. ನೀರು ಇಂಗುವ ದರ (rate of percolation) ವನ್ನು ಈ ಕೆಳಗಿನ ಸೂತ್ರದಿಂದ ಲೆಕ್ಕಚಾರ ಮಾಡಿ.

ನಿಮ್ಮ ಮಣ್ಣಿನ ಮಾದರಿಯ ನೀರು ಇಂಗುವ ದರವನ್ನು ಲೆಕ್ಕಚಾರ ಮಾಡಿ. ನೀವು ಕಂಡುಹಿಡಿದಿದ್ದನ್ನು ಇತರರೊಂದಿಗೆ ಹೋಲಿಸಿ. ಮಣ್ಣಿನ ಮಾದರಿಗಳನ್ನು ಅವುಗಳ ನೀರು ಇಂಗುವ ದರದ ಏರಿಕೆಯ ಕ್ರಮದಲ್ಲಿ ಜೋಡಿಸಿ.

9.5 ಮಣ್ಣಿನಲ್ಲಿ ತೇವಾಂಶ

ಬಿರು ಬೇಸಿಗೆಯಲ್ಲಿ ಎಂದಾದರೂ ಹೊಲದಲ್ಲಿ ಓಡಾಡಿರುವಿರ? ನೆಲದ ಮೇಲಿನ ಗಾಳಿಯು ಮಂದವಾಗಿ ಪ್ರಕಾಶಿಸುವುದನ್ನು ನೀವು ಬಹುಶಃ ಗಮನಿಸಿರಬಹುದು. ಇದಕ್ಕೆ ಕಾರಣವೇನು ಉತ್ತರವನ್ನು ಕಂಡುಹಿಡಿಯಲು ಈ ಕೆಳಗಿನ ಚಟುವಟಿಕೆಯನ್ನು ಪ್ರಯತ್ನಿಸಿ.

ಚಟುವಟಿಕೆ 9.5
ಚಿತ್ರ 9.6 ಮಣ್ಣಿನಿಂದ ತೇವಾಂಶವನ್ನು ತೆಗೆದು ಹಾಕುವುದು ಒಂದು ಗಟ್ಟಿ ಗಾಜಿನ ಪ್ರನಾಳವನ್ನು ತೆಗೆದುಕೊಳ್ಳಿ. ಅದರಲ್ಲಿ ಎರಡು ಚಮಚ ಮಣ್ಣಿನ ಮಾದರಿಯನ್ನು ಹಾಕಿ. ಅದನ್ನು ಜ್ವಾಲೆಯ ಮೇಲಿರಿಸಿ ಕಾಯಿಸಿ (ಚಿತ್ರ 9.6) ಮತ್ತು ಅದನ್ನು ಗಮನಿಸಿ. ಕಾಯಿಸುವುದರಿಂದ ಏನಾಗುತ್ತದೆ ಎಂಬುದನ್ನು ನಾವು ಕಂಡುಹಿಡಿಯೋಣ.

ನಿಮಗೆ ನೀರಿನ ಹನಿಗಳು ಕಾಣುತ್ತಿವೆಯೇ? ಹಾಗಾದರೆ ಅವುಗಳನ್ನು ಎಲ್ಲಿ ನೋಡಿದಿರಿ?

ಕಾಯಿಸಿದಾಗ ತೇವಾಂಶಯುಕ್ತ ಮಣ್ಣಿನಲ್ಲಿನ ನೀರು ಆವಿಯಾಗಿ ಮೇಲೆ ಚಲಿಸಿ ಪ್ರನಾಳದ ಮೇಲ್ಭಾಗದ ತಣ್ಣನೆಯ ಒಳಗೋಡೆಯಲ್ಲಿ ಸಾಂದ್ರೀಕರಣಗೊಳ್ಳುತ್ತದೆ.

ಬಿರು ಬೇಸಿಗೆಯ ದಿನ, ಮಣ್ಣಿನಿಂದ ಹೊರಬರುವ ನೀರಾವಿಯು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ. ಇದರಿಂದ ಮಣ್ಣಿನ ಮೇಲ್ಭಾಗದ ಗಾಳಿಯು ಮಂದವಾಗಿ ಪ್ರಕಾಶಿಸಿದಂತೆ ಕಾಣುತ್ತದೆ.

ಮಣ್ಣನ್ನು ಕಾಯಿಸಿದ ನಂತರ ಅದನ್ನು ಪ್ರನಾಳದಿಂದ ಹೊರತೆಗೆಯಿರಿ. ಅದನ್ನು ಕಾಯಿಸದೆ ಇರುವ ಮಣ್ಣಿನೊಂದಿಗೆ ಹೋಲಿಸಿ. ಇವೆರಡರ ನಡುವಣ ವ್ಯತ್ಯಾಸವನ್ನು ಗುರ್ತಿಸಿಕೊಳ್ಳಿ.

9.6 ಮಣ್ಣಿನಿಂದ ನೀರಿನ ಹೀರಿಕೊಳ್ಳುವಿಕೆ

ಎಲ್ಲಾ ಮಣ್ಣುಗಳು ಒಂದೇ ಪ್ರಮಾಣದಲ್ಲಿ ನೀರನ್ನು ಹೀರಿಕೊಳ್ಳುತ್ತವೆಯೆ? ಅದನ್ನು ನಾವು ಕಂಡುಹಿಡಿಯೋಣ.

ಚಟುವಟಿಕೆ 9.6
ಒಂದು ಪ್ಲಾಸ್ಟಿಕ್ ಆಲಿಕೆಯನ್ನು ತೆಗೆದುಕೊಳ್ಳಿ. ಒಂದು ಸೋಸು ಕಾಗದ (ಅಥವಾ ವಾರ್ತಾ ಪತ್ರಿಕೆಯ ಕಾಗದದ ತುಂಡು) ವನ್ನು ತೆಗೆದುಕೊಳ್ಳಿ. ಅದನ್ನು ಮಡಚಿ, ಚಿತ್ರದಲ್ಲಿ ತೋರಿಸಿರುವಂತೆ ಅಲಿಕೆಯ ಒಳಗೆ ಇಡಿ (ಚಿತ್ರ 9.7). ಸುಮಾರು 50g ನಷ್ಟು ಪುಡಿಯಾದ ಒಣ ಮಣ್ಣನ್ನು ತೂಕ ಮಾಡಿ, ಅಲಿಕೆಯೊಳಗೆ ಸುರಿಯಿರಿ. ಅಳತೆ ಜಾಡಿಯಲ್ಲಿ ನಿರ್ದಿಷ್ಟ ಪ್ರಮಾಣದ ನೀರನ್ನು ಅಳತೆ ಮಾಡಿ, ಹನಿಹನಿಯಾಗಿ ಮಣ್ಣಿನ ಮೇಲೆ ಸುರಿಯಿರಿ. ಇದಕ್ಕಾಗಿ ನೀವು ಒಂದು ಹನಿಗವನ್ನು ಬಳಸಬಹುದು. ಎಲ್ಲಾ ನೀರು ಒಂದೇ ಜಾಗಕ್ಕೆ ಬೀಳದಿರಲಿ.

ನೀರನ್ನು ಮಣ್ಣಿನ ಎಲ್ಲಾ ಭಾಗಕ್ಕೂ ಹಾಕಿ. ನೀರು ಆಲಿಕೆಯಿಂದ ಕೆಳಗೆ ತೊಟ್ಟಿಕ್ಕಲು ಪ್ರಾರಂಭವಾಗುವವರೆಗೂ ನೀರನ್ನು ಹಾಕುತ್ತಿರಿ. ಅಳತೆ ಜಾಡಿಯಲ್ಲಿ ಉಳಿದ ನೀರಿನ ಪ್ರಮಾಣವನ್ನು ಆರಂಭದ ನೀರಿನ ಪ್ರಮಾಣದಿಂದ ಕಳೆಯಿರಿ. ಇದು ಮಣ್ಣು ಹಿಡಿದಿಟ್ಟುಕೊಂಡ ನೀರಿನ ಪ್ರಮಾಣ. ನಿಮ್ಮ ಟಿಪ್ಪಣಿ ಪುಸ್ತಕದಲ್ಲಿ ಫಲಿತಾಂಶಗಳನ್ನು ಈ ಕೆಳಗಿನ ವಿಧಾನದಲ್ಲಿ ದಾಖಲಿಸಿ.

ಈ ಚಟುವಟಿಕೆಯನ್ನು ಮಣ್ಣಿನ ಬೇರೆ ಬೇರೆ ಮಾದರಿಗಳೊಂದಿಗೆ ಪುನರಾವರ್ತಿಸಿ. ಎಲಾ ಮಾದರಿಗಳ ಹೀರಿಕೊಳ್ಳುವಿಕೆ (absorption) ಯನ್ನು ಕುರಿತು ಒಂದೇ ಫಲಿತಾಂಶವನ್ನು ನೀವು ಪಡೆಯುವಿರ? ಫಲಿತಾಂಶವನ್ನು ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿ ಮತ್ತು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
• ಯಾವ ಮಣ್ಣು ಅತಿ ಹೆಚ್ಚು ನೀರು ಇಂಗುವ ದರ ಹೊಂದಿದೆ?
• ಯಾವ ಮಣ್ಣು ಅತಿ ಕಡಿಮೆ ನೀರು ಇಂಗುವ ದರ ಹೊಂದಿದೆ?
• ಮಳೆಯಾದ ನಂತರದ 8-10 ದಿನಗಳಲ್ಲಿ ಕೆರೆ ಅಥವಾ ಬಾವಿಯ ನೀರಿನ ಮಟ್ಟ ಮೇಲೇರುತ್ತದೆ ಎಂದು ಬೂಝೊ ಅವನ ನೆರೆಯವರಿಂದ ಕೇಳಿ ತಿಳಿದಿರುವನು. ಯಾವ ವಿಧದ ಮಣ್ಣು ನೀರನ್ನು ವೇಗವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬಾವಿಯನ್ನು ತಲಪಲು ಅವಕಾಶ ಮಾಡಿಕೊಡುತ್ತದೆ?
• ಯಾವ ವಿಧದ ಮಣ್ಣು ಅತಿ ಹೆಚ್ಚು ಪ್ರಮಾಣದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಯಾವುದು ಕಡಿಮೆ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ?
• ಅತಿ ಹೆಚ್ಚು ಮಳೆನೀರನ್ನು ಇಂಗಿಸಿ, ಅದು ಅಂತರ್ಜಲ ತಲುಪುವಂತೆ ಮಾಡುವ ಯಾವುದಾದರೂ ವಿಧಾನವನ್ನು ಸೂಚಿಸಬಲ್ಲಿರ?

9.7 ಮಣ್ಣು ಮತ್ತು ಬೆಳೆಗಳು

ಭಾರತದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ವಿಧದ ಮಣ್ಣುಗಳು ಕಂಡುಬರುತ್ತವೆ. ಕೆಲವು ಭಾಗಗಳಲ್ಲಿ ಜೇಡಿಯುಕ್ತಮಣ್ಣು, ಕೆಲವು ಭಾಗಗಳಲ್ಲಿ ಕಳಿಮಣ್ಣು, ಇನ್ನೂ ಕೆಲವು ಭಾಗಗಳಲ್ಲಿ ಮರಳುಯುಕ್ತ ಮಣ್ಣು ಇದೆ.

ಗಾಳಿ, ಮಳೆ, ತಾಪ, ಬೆಳಕು ಮತ್ತು ತೇವಾಂಶಗಳಿಂದ ಮಣ್ಣು ಪ್ರಭಾವಿತಗೊಳ್ಳುತ್ತದೆ. ಇವು ಮಣ್ಣಿನ ಸ್ತರವಿನ್ಯಾಸದ ಮೇಲೆ ಪ್ರಭಾವ ಬೀರುವ ಮತ್ತು ಮಣ್ಣಿನ ಸಂರಚನೆಯಲ್ಲಿ ಬದಲಾವಣೆಯನ್ನು ತರುವ ಕೆಲವು ಪ್ರಮುಖವಾದ ವಾಯುಗುಣದ ಅಂಶಗಳು. ವಾಯುಗುಣದ ಈ ಅಂಶಗಳು ಹಾಗೂ ಮಣ್ಣಿನ ಘಟಕಗಳು, ಯಾವುದೇ ಪ್ರದೇಶದಲ್ಲಿ ಬೆಳೆಯಬಹುದಾದ ವಿವಿಧ ಸಸ್ಯವರ್ಗ ಮತ್ತು ಬೆಳೆಗಳನ್ನು ನಿರ್ಧರಿಸುತ್ತವೆ.

ವಾಸ್ತವವಾಗಿ ಗ್ರಾಮ್(g) ಮತ್ತು ಕಿಲೋಗ್ರಾಮ್ (kg) ಗಳು ರಾಶಿಯ ಏಕಮಾನಗಳು. ಒಂದು ಗ್ರಾಮ್ ರಾಶಿಯು ಒಂದು ಗ್ರಾಮ್ ತೂಕವನ್ನು ತೂಗುತ್ತದೆ ಮತ್ತು ಒಂದು ಕಿಲೋಗ್ರಾಮ್ ರಾಶಿಯು ಒಂದು ಕಿಲೋಗ್ರಾಮ್ ತೂಕವನ್ನು ತೂಗುತ್ತದೆ. ಹಾಗಾಗಿ ನಿತ್ಯ ಜೀವನದಲ್ಲಿ ಹಾಗೂ ವಾಣಿಜ್ಯ ಮತ್ತು ಉದ್ಯಮಗಳಲ್ಲಿ ಗ್ರಾಮ್ ರಾಶಿ ಮತ್ತು ಗ್ರಾಮ್ ತೂಕಗಳ ನಡುವಿನ ವ್ಯತ್ಯಾಸವನ್ನು ಸಾಮಾನ್ಯವಾಗಿ ಕೈ ಬಿಡಲಾಗಿದೆ.

ಜೇಡಿಯುಕ್ತಮಣ್ಣು ಮತ್ತು ಕಳಿಮಣ್ಣುಗಳೆರಡೂ ಗೋಧಿ ಮತ್ತು ಕಡಲೆಯಂತಹ ಧಾನ್ಯಗಳನ್ನು ಬೆಳೆಯಲು ಯೋಗ್ಯವಾಗಿವೆ. ಅಂತಹ ಮಣ್ಣುಗಳು ನೀರನ್ನು ಚೆನ್ನಾಗಿ ಹಿಡಿದಿಟ್ಟುಕೊಳ್ಳುತ್ತವೆ. ಜೇಡಿಮಣ್ಣು ಮತ್ತು ಸಾವಯವ ಪದಾರ್ಥಗಳು ಸಮೃದ್ಧವಾಗಿರುವ ಹಾಗೂ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಉತ್ತಮವಾಗಿರುವ ಮಣ್ಣು ಭತ್ತ ಬೆಳೆಯಲು ಯೋಗ್ಯ. ನೀರು ಸುಲಭವಾಗಿ ಬಸಿದು ಹೋಗುವ ಕಳಿಮಣ್ಣು ಅವರೆಕಾಳು ಮತ್ತು ಇತರ ಬೇಳೆಕಾಳುಗಳನ್ನು ಬೆಳೆಯಲು ಅವಶ್ಯಕ. ನೀರು ಸುಲಭವಾಗಿ ಬಸಿದು ಹೋಗುವ ಮತ್ತು ಅತಿ ಹೆಚ್ಚು ಗಾಳಿಯನ್ನು ಹಿಡಿದಿಟ್ಟುಕೊಳ್ಳಬಲ್ಲ ಮರಳು ಮಿಶ್ರಿತ ಕಳಿಮಣ್ಣು ಹತ್ತಿ ಬೆಳೆಯಲು ಹೆಚ್ಚು ಯೋಗ್ಯವಾಗಿದೆ.

ಒಂದು ಪ್ರಸಂಗ ಅಧ್ಯಯನ

ಜಾನ್, ರಷೀದಾ ಮತ್ತು ರಾಧಾ, ಮಧ್ಯಪ್ರದೇಶದ ಸೋಹಾಗ್‍ಪುರದಲ್ಲಿನ ಲೀಲಾಧರ್ ದಾದಾ ಮತ್ತು ಸಂತೋಷ್ ಮಾಲ್ವಿಯಾರಲ್ಲಿಗೆ ಹೋದರು. ಲೀಲಾಧರ್ ದಾದಾರವರು ಹೂಜಿ, ಮಡಕೆ, ತವೆ ಮುಂತಾದ ವಸ್ತುಗಳನ್ನು ತಯಾರಿಸಲು ಮಣ್ಣನ್ನು ಸಿದ್ಧ ಮಾಡುತ್ತಿದ್ದರು. ಅವರೆಲ್ಲರೂ ಲೀಲಾಧರ್ ದಾದಾರೊಂದಿಗೆ ನಡೆಸಿದ ಸಂಭಾಷಣೆ ಈ ಕೆಳಗಿನಂತಿದೆ.
– ಈ ಮಣ್ಣು ಎಲ್ಲಿಂದ ದೊರೆಯಿತು?
ದಾದಾ – ಕಪ್ಪುಮಣ್ಣನ್ನು ನಾವು ಒಂದು ಬಂಜರು ಭೂಮಿಯಿಂದ ತಂದೆವು.
– ಮಣ್ಣನ್ನು ಹೇಗೆ ಸಿದ್ಧ ಮಾಡಲಾಗುತ್ತದೆ?
ದಾದಾ – ಒಣಮಣ್ಣನ್ನು ದೊಡ್ಡ ತೊಟ್ಟಿಗಳಲ್ಲಿ ಹಾಕಲಾಗುತ್ತದೆ ಮತ್ತು ಅದರಲ್ಲಿನ ಬೆಣಚುಕಲ್ಲುಗಳೆಲ್ಲವನ್ನೂ ತೆಗೆದು ಹಾಕಿ, ಸ್ವಚ್ಛಗೊಳಿಸಲಾಗುತ್ತದೆ. ನಂತರ ಮಣ್ಣನ್ನು ಸುಮಾರು 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಲಾಗುತ್ತದೆ. ಕುದುರೆ ಲದ್ದಿಯನ್ನು ಬೆರೆಸಿ ನಂತರ ಮಣ್ಣನ್ನು ಚೆನ್ನಾಗಿ ನಾದಲಾಗುತ್ತದೆ. ನಾದಿದ ಮಣ್ಣನ್ನು ತಿರುಗುವ ಚಕ್ರದ ಮೇಲೆ ಇಟ್ಟು ಬೇಕಾದ ಆಕಾರವನ್ನು ನೀಡಲಾಗುತ್ತದೆ. ಅಂತಿಮ ಆಕಾರವನ್ನು ಕೈಯಿಂದಲೇ ನೀಡಲಾಗುತ್ತದೆ. ಮೂರು ದಿನಗಳ ಕಾಲ ಒಣಗಿದ ನಂತರ ಈ ವಸ್ತುಗಳಿಗೆ ಬಣ್ಣ ಹಾಕಲಾಗುತ್ತದೆ. ಗಾಳಿಯಲ್ಲಿ ಒಣಗಿಸಿದ ನಂತರ ಈ ಎಲ್ಲಾ ವಸ್ತುಗಳನ್ನು ಹೆಚ್ಚಿನ ತಾಪದಲ್ಲಿ ಸುಡಲಾಗುತ್ತದೆ.
– ಕುದುರೆ ಲದ್ದಿಯನ್ನು ಮಣ್ಣಿಗೆ ಏಕೆ ಬೆರೆಸಬೇಕು?
ದಾದಾ – ಕುದುರೆ ಲದ್ದಿಯು ಸುಟ್ಟು ಹೋದಾಗ ಮಣ್ಣಿನಲ್ಲಿ ರಂಧ್ರಗಳು ತೆರೆದುಕೊಳ್ಳಲು ಸಹಾಯಕವಾಗುತ್ತದೆ. ಆದ್ದರಿಂದ ಮಡಕೆ ಅಥವಾ ಹೂಜಿಗಳ ಹೊರಕ್ಕೆ ನೀರು ಸ್ರವಿಸಿ, ಬಾಷ್ಪೀಕರಣಗೊಂಡು ನಂತರ ಒಳಗಿರುವ ನೀರನ್ನು ತಣ್ಣಗಾಗಿಸುತ್ತದೆ. ಜಬಲ್‍ಪುರ, ನಾಗಪುರ, ಅಲಹಾಬಾದ್‍ನಂತಹ ದೂರದ ಪ್ರದೇಶಗಳಲ್ಲಿಯೂ ಕೂಡಾ ಸೋಹಾಗ್‍ಪುರಿ ಹೂಜಿಗಳು ಮತ್ತು ಮಡಕೆಗಳು ತುಂಬಾ ಪ್ರಸಿದ್ಧ ಎಂದು ನೀವು ತಿಳಿದಿರುವಿರಿ.

ಗೋಧಿಯಂತಹ ಬೆಳೆಗಳು ಜೇಡಿಯುಕ್ತಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಏಕೆಂದರೆ ಅದು ಹ್ಯೂಮಸ್‍ನಿಂದ ಸಮೃದ್ಧವಾಗಿದೆ ಮತ್ತು ತುಂಬಾ ಫಲವತ್ತಾಗಿದೆ. ನಿಮ್ಮ ಪ್ರದೇಶದಲ್ಲಿನ ಮಣ್ಣುಗಳ ವಿಧ ಹಾಗೂ ಬೆಳೆಯುವ ಬೆಳೆಗಳ ಬಗ್ಗೆ ನಿಮ್ಮ ಶಿಕ್ಷಕರು, ಪೋಷಕರು ಮತ್ತು ರೈತರಿಂದ ತಿಳಿದುಕೊಳ್ಳಿ. ದತ್ತಾಂಶಗಳನ್ನು ಕೋಷ್ಟಕ 9.2 ರಲ್ಲಿ ನಮೂದಿಸಿ.

ಭತ್ತವನ್ನು ನಾಟಿ ಮಾಡಲು ಯಾವ ವಿಧದ ಮಣ್ಣು ಯೋಗ್ಯವಾಗಿದೆ? ನೀರು ಇಂಗುವ ದರ ಹೆಚ್ಚಾಗಿರುವ ಮಣ್ಣೆ ಅಥವಾ ಕಡಿಮೆ ಇರುವ ಮಣ್ಣೆ?

ಮಣ್ಣಿನ ಸವೆತ
ನೀರು, ಗಾಳಿ ಮತ್ತು ಮಂಜಿನಿಂದ ನೆಲದ ಮೇಲ್ಪದರ ನಷ್ಟವಾಗುವುದನ್ನು ಸವೆತ (erosion) ಎನ್ನುವರು. ಸಸ್ಯದ ಬೇರುಗಳು ಮಣ್ಣನ್ನು ಭದ್ರವಾಗಿ ಹಿಡಿದಿಡುತ್ತವೆ. ಸಸ್ಯಗಳಿಲ್ಲದಿದ್ದರೆ ಮಣ್ಣು ಸಡಿಲವಾಗುತ್ತದೆ. ಆದ್ದರಿಂದ ಅದು ಬೀಸುವ ಗಾಳಿ ಮತ್ತು ಹರಿಯುವ ನೀರಿನಿಂದ ಕೊಚ್ಚಿ ಹೋಗಬಲ್ಲದು. ಮೇಲ್ಮೈ ಸಸ್ಯವರ್ಗ ಅತೀ ಕಡಿಮೆ ಇರುವ ಮರುಭೂಮಿ ಮತ್ತು ಬಂಜರು ಭೂಮಿಯಂತಹ ಪ್ರದೇಶಗಳಲ್ಲಿ ಮಣ್ಣಿನ ಸವೆತವು ಹೆಚ್ಚಾಗಿರುತ್ತದೆ. ಆದ್ದರಿಂದ ಮರಗಳನ್ನು ಕಡಿಯುವುದನ್ನು ಮತ್ತು ಅರಣ್ಯನಾಶವನ್ನು ತಡೆಗಟ್ಟಬೇಕು. ಹಸಿರು ಪ್ರದೇಶವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಬೇಕು.

ಸವೆತ (erosion)
ಸವೆತ (erosion)

ಪ್ರಮುಖ ಪದಗಳು

ಜೇಡಿಯುಕ್ತಮಣ್ಣು
ತೇವಾಂಶ
ಹ್ಯೂಮಸ್
ಮರಳುಯುಕ್ತ
ಕಳಿಮಣ್ಣು
ನೀರಿನ ಹಿಡಿದಿಟ್ಟುಕೊಳ್ಳುವಿಕೆ
ಇಂಗಿಸುವಿಕೆ

ನೀವು ಕಲಿತಿರುವುದು

• ಭೂಮಿಯ ಮೇಲಿನ ಜೀವಿಗಳಿಗೆ ಮಣ್ಣು ತುಂಬಾ ಮುಖ್ಯ.
• ಮಣ್ಣಿನ ಪದರಗಳ ನೀಳ ಸೀಳಿಕೆಯೇ ಮಣ್ಣಿನ ಸ್ತರವಿನ್ಯಾಸ. ವಿವಿಧ ಪದರಗಳನ್ನು ಸ್ತರಗಳು ಎನ್ನುವರು.
• ಮಣ್ಣಿನ ವಿಧಗಳೆಂದರೆ – ಜೇಡಿಯುಕ್ತ ಮಣ್ಣು, ಕಳಿಮಣ್ಣು ಮತ್ತು ಮರಳುಯುಕ್ತ ಮಣ್ಣು.
• ಬೇರೆ ಬೇರೆ ವಿಧದ ಮಣ್ಣುಗಳ ನೀರು ಇಂಗಿಸಿಕೊಳ್ಳುವ ಸಾಮಥ್ರ್ಯ ಬೇರೆ ಬೇರೆ. ಇದು ಮರಳುಯುಕ್ತ ಮಣ್ಣಿನಲ್ಲಿ ಅತಿ ಹೆಚ್ಚಾಗಿರುತ್ತದೆ ಮತ್ತು ಜೇಡಿಯುಕ್ತ ಮಣ್ಣಿನಲ್ಲಿ ಅತಿ ಕಡಿಮೆಯಾಗಿರುತ್ತದೆ.
• ಬೇರೆ ಬೇರೆ ವಿಧದ ಬೆಳೆಗಳನ್ನು ಬೆಳೆಯಲು ಬೇರೆ ಬೇರೆ ವಿಧದ ಮಣ್ಣನ್ನು ಬಳಸಲಾಗುತ್ತದೆ. ಜೇಡಿಮಣ್ಣು ಮತ್ತು ಕಳಿಮಣ್ಣು ಗೋಧಿ, ದ್ವಿದಳ ಧಾನ್ಯಗಳು ಮತ್ತು ಭತ್ತ ಬೆಳೆಯಲು ಯೋಗ್ಯವಾಗಿವೆ. ಹತ್ತಿಯನ್ನು ಮರಳು ಮಿಶ್ರಿತ ಕಳಿಮಣ್ಣಿನಲ್ಲಿ ಬೆಳೆಯಲಾಗುತ್ತದೆ.
• ಮಣ್ಣು ನೀರನ್ನು ಹಿಡಿದಿಟ್ಟುಕೊಳುತ್ತದೆ. ಇದನ್ನು ಮಣ್ಣಿನ ತೇವಾಂಶ ಎನ್ನುವರು. ಅನೇಕ ವಿಧದ ಬೆಳೆಗಳಿಗೆ ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವು ಮುಖ್ಯವಾಗಿದೆ.
• ಮಡಕೆಗಳು, ಆಟಿಕೆಗಳು ಮತ್ತು ಮೂರ್ತಿಗಳನ್ನು ಮಾಡಲು ಜೇಡಿಯುಕ್ತ ಮಣ್ಣು ಬಳಕೆಯಾಗುತ್ತದೆ.

ಸಂವೇದ ವಿಡಿಯೋ ಪಾಠಗಳು

Samveda – 7th – Science – Mannu (Part 1 of 2)

Samveda – 7th – Science – Mannu (Part 2 of 2)

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

Layers Of Soil – The Dr. Binocs Show | Best Learning Videos For Kids | Peekaboo Kidz

Soil Profile and Soil Horizons

ಪ್ರಶ್ನೋತ್ತರಗಳು

7 CLASS SCIENCE ಅಧ್ಯಾಯ 9 ಮಣ್ಣು- ಅಭ್ಯಾಸ ಪ್ರಶ್ನೋತ್ತರಗಳು

ವಿಸ್ತರಿತ ಕಲಿಕೆ – ಚಟುವಟಿಕೆಗಳು ಮತ್ತು ಯೋಜನೆಗಳು

1. ಕಚ್ಚಾಮಣ್ಣು ಮತ್ತು ಸುಟ್ಟ ಮಣ್ಣುಗಳ ನಡುವಣ ವ್ಯತ್ಯಾಸವನ್ನು ತಿಳಿಯಲು ಬೂಝೊ ಇಚ್ಛಿಸುತ್ತಾನೆ. ಮಡಕೆಗಳನ್ನು ಮಾಡಲು ಬಳಸುವ ಮಣ್ಣು, ಮೂರ್ತಿಗಳನ್ನು ಮಾಡಲು ಬಳಸುವ ಮಣ್ಣಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಪತ್ತೆ ಮಾಡಿ.

How to Make Clay from Soil | How to Make Clay | Sculpture Factory

2. ಇಟ್ಟಿಗೆ ಸುಡುವ ಒಂದು ಗೂಡು ಪಹೇಲಿಗೆ ತನ್ನ ಮನೆಯಿಂದ ಕಾಣಿಸುತ್ತದೆ. ಅಲ್ಲಿ ಇಟ್ಟಿಗೆಗಳನ್ನು ಮಾಡಲಾಗುತ್ತದೆ. ಆ ಇಟ್ಟಿಗೆ ಗೂಡಿನಿಂದ ತುಂಬಾ ಹೊಗೆ ಹೊರಬರುತ್ತದೆ. ಇದರಿಂದ ಪಹೇಲಿ ಆತಂಕಕ್ಕೆ ಒಳಗಾಗಿದ್ದಾಳೆ. ಮಡಕೆಗಳು, ಮೂರ್ತಿಗಳು ಮತ್ತು ಇಟ್ಟಿಗೆಗಳನ್ನು ತಯಾರಿಸಲು ಅತ್ಯುತ್ತಮ ಗುಣಮಟ್ಟದ ಜೇಡಿಮಣ್ಣು ಅವಶ್ಯಕ ಎಂದು ಅವಳಿಗೆ ತಿಳಿದಿದೆ. ಕಟ್ಟಡಗಳ ನಿರ್ಮಾಣಕ್ಕಾಗಿ ಇಟ್ಟಿಗೆಗಳನ್ನು ಟ್ರಕ್‍ಗಳಲ್ಲಿ ಒಯ್ಯುವುದನ್ನು ಅವಳು ನೋಡಿರುತ್ತಾಳೆ. ಇದು ಇದೇ ರೀತಿ ಮುಂದುವರಿದರೆ, ಮುಂದೊಮ್ಮೆ ಮಣ್ಣು ಉಳಿಯುವುದಿಲ್ಲ ಎಂದು ಅವಳು ಭಯಗೊಂಡಿದ್ದಾಳೆ. ಅವಳ ಭಯ ನ್ಯಾಯಯುತವಾದುದೆ? ಈ ಸಮಸ್ಯೆಯನ್ನು ನಿಮ್ಮ ಪೋಷಕರು, ಶಿಕ್ಷಕರು ಮತ್ತು ನಿಮ್ಮ ಊರಿನಲ್ಲಿರುವ ತಜ್ಞರೊಂದಿಗೆ ಚರ್ಚಿಸಿ. ಒಂದು ವರದಿಯನ್ನು ಸಿದ್ಧಪಡಿಸಿ.

How Bricks Are Made

3. ಮಣ್ಣಿನ ಮಾದರಿಯ ತೇವಾಂಶವನ್ನು ಕಂಡುಹಿಡಿಯಲು ಪ್ರಯತ್ನಿಸಿ. ಇಲ್ಲಿ ಒಂದು ವಿಧಾನವನ್ನು ನೀಡಲಾಗಿದೆ.
ಚಟುವಟಿಕೆ: 100g ಮಣ್ಣನ್ನು ತೆಗೆದುಕೊಳ್ಳಿ (ಮಣ್ಣನ್ನು ತಕ್ಕಡಿಯಿಂದ ತೂಕ ಮಾಡಲು ಯಾವುದಾದರೂ ಅಂಗಡಿಯವರ ಸಹಾಯ ಪಡೆಯಿರಿ.) ವರ್ತಮಾನ ಪತ್ರಿಕೆಯ ಹಾಳೆಯ ಮೇಲೆ ಅದನ್ನು ಹರಡಿ, ಸುಮಾರು ಎರಡು ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ. ಈ ಚಟುವಟಿಕೆಯನ್ನು ಮಧ್ಯಾಹ್ನದ ಹೊತ್ತಿನಲ್ಲಿ ಚೆನ್ನಾಗಿ ನಡೆಸಬಹುದು. ಮಣ್ಣು ಪತ್ರಿಕೆಯ ಕಾಗದದ ಹೊರಗೆ ಚೆಲ್ಲಿ ಹೋಗದಂತೆ ಎಚ್ಚರವಹಿಸಿ. ಒಣಗಿಸಿದ ನಂತರ ಮಣ್ಣನ್ನು ಪುನಃ ತೂಕ ಮಾಡಿ. ಒಣಗಿಸುವ ಮೊದಲು ಮತ್ತು ಒಣಗಿಸಿದ ನಂತರದ ತೂಕಗಳ ನಡುವಣ ವ್ಯತ್ಯಾಸವೇ ಆ 100g ಮಣ್ಣಿನಲ್ಲಿ ಸೇರಿಕೊಂಡಿದ್ದ ತೇವಾಂಶದ ಪ್ರಮಾಣ. ತೇವಾಂಶದ ಶೇಕಡಾ ಪ್ರಮಾಣವನ್ನು ಹೀಗೆ ಕಂಡುಹಿಡಿಯಬಹುದು.

To Determine the moisture content in a given soil sample WITH PDF | EXPERIMENT | CHEMISTRY | BY CBR

ನಿಮಗಿದು ಗೊತ್ತೆ?

ಹಿಮಾಲಯದಲ್ಲಿ ಹರಿಯುವ ಉತ್ತರ ಭಾರತದ ನದಿಗಳು ತಮ್ಮೊಂದಿಗೆ ಹೂಳು, ಜೇಡಿಮಣ್ಣು, ಮರಳು ಮತ್ತು ಕಲ್ಲಿನ ರಾಳುಗಳನ್ನು ಒಳಗೊಂಡಂತೆ ಇನ್ನೂ ಅನೇಕ ಪದಾರ್ಥಗಳನ್ನು ಹೊತ್ತು ತರುತ್ತವೆ. ಇವುಗಳನ್ನು ಉತ್ತರಭಾರತದ ಪ್ರಸ್ಥಭೂಮಿಗಳಲ್ಲಿ ನಿಕ್ಷೇಪಿಸುತ್ತವೆ. ಇದನ್ನು ಮೆಕ್ಕಲು ಮಣ್ಣು ಎನ್ನುವರು. ಈ ಮಣ್ಣು ಅತ್ಯಂತ ಫಲವತ್ತಾಗಿದ್ದು, ಭಾರತದ ಸುಮಾರು ಅರ್ಧದಷ್ಟು ಜನಸಂಖ್ಯೆಗೆ ಪ್ರಯೋಜನಕಾರಿಯಾಗಿದೆ.

Alluvial Soil – Soils of India