ಮಂಗಳ ಗ್ರಹದಲ್ಲಿ ಪುಟ್ಟಿ – 6ನೇ ತರಗತಿ ಕನ್ನಡ

ಸಿ. ಎಂ. ಗೋವಿಂದರೆಡ್ಡಿ

ಪ್ರವೇಶ : ಮಕ್ಕಳ ಮನಸ್ಸಿನಲ್ಲಿ ಕುತೂಹಲಭರಿತ ಪ್ರಶ್ನೆಗಳು ಹುಟ್ಟುತ್ತವೆ. ವಿವಿಧ ಕಲ್ಪನೆಗಳು ಕಾಣಿಸುತ್ತವೆ. ಹೊಸ ಹೊಸ ಕನಸುಗಳು ಗೂಡು ಕಟ್ಟುತ್ತವೆ. ಮಕ್ಕಳು ತಮ್ಮ ಕಲ್ಪನೆಯಲ್ಲಿ ನಿರ್ಜೀವ ವಸ್ತುಗಳೊಂದಿಗೂ ಮನಬಿಚ್ಚಿ ಮಾತಾಡಬಲ್ಲರು! ಅಪರಿಚಿತ ಸನ್ನಿವೇಶಗಳೂ ಸಹ ಅವರ ಕನಸುಗಳಲ್ಲಿ ಹತ್ತಿರಕ್ಕೆ ಬಂದುಬಿಡುತ್ತವೆ. ಹೀಗಿರುವ ಅವರ ಕಲ್ಪನೆಗಳಿಗೆ ಮತ್ತಷ್ಟು ಗರಿಗಳನ್ನು ಕಟ್ಟಿ ಇನ್ನಷ್ಟು ಎತ್ತರಕ್ಕೆ ಹಾರಲು ಪ್ರೋತ್ಸಾಹಿಸಿ ಆ ಮೂಲಕ ಪ್ರಸ್ತುತತೆಯ ಅರಿವು ಮೂಡಿಸುವುದು ಇಲ್ಲಿನ ಆಶಯವಾಗಿದೆ.

ಆಗಸದಲ್ಲಿ ಹಾರುವುದೆಂದರೆ
ಪುಟಾಣಿ ಪುಟ್ಟಿಗೆ ಬಲು ಇಷ್ಟ
ರೆಕ್ಕೆಗಳಿಲ್ಲದೆ ಹಾರಲು ಹೋದರೆ
ಆಗದೆ ತೊಂದರೆ? ಇದು ಕಷ್ಟ.

ಒಂದಿನ ಇದ್ದಕ್ಕಿದ್ದಂತೆ
ಪುಟ್ಟಿಗೆ ರೆಕ್ಕೆಯು ಬಂದಿತ್ತು.
ಹಕ್ಕಿಯ ಹಾಗೆ ಹಾರುವ ಮನಕೆ
ಹೆಚ್ಚಿನ ಹರುಷವ ತಂದಿತ್ತು.

ಕೂಡಲೆ ಪುಟ್ಟಿ ಠಣ್ಣನೆ ಜಿಗಿದು
ಆಗಸದೊಡಲಿಗೆ ಹಾರಿದಳು.
ಹಾರುತ ತೇಲುತ ಮುಂದಕೆ ಸಾಗಿ
ಚಂದ್ರನ ಮಡಿಲನು ಸೇರಿದಳು

ಚಂದ್ರನ ಮೇಲೆ ನೆಟ್ಟಗೆ ನಿಂತು
ಭೂಮಿಯ ಕಡೆಗೆ ನೋಡಿದರೆ
ನೇರಳೆ ಬಣ್ಣದ ಚೆಂಡಿನ ಹಾಗೆ
ಕಂಡಿತು ಅವಳಿಗೆ ನಮ್ಮ ಧರೆ

ಚಂದ್ರನ ಬಿಟ್ಟು ಮೇಲಕೆ ಹಾರಿ
ಸೇರಲು ಮಂಗಳನಂಗಳವ
ಕೆಂಪಗೆ ಬಣಬಣಗುಟ್ಟುತಲಿತ್ತು
ಕಾಣಲಿಲ್ಲ ಯಾವುದೆ ಜೀವ

ಪುಟ್ಟಿಯು ಕಂಡಳು ಮಂಗಳನಲ್ಲಿ
‘ಯೋಗಿ’ ಹೆಸರಿನ ಹೆಬ್ಬಂಡೆ
ಒಡನೆ ಕೇಳಿದಳು ಕೆಂಪು ಬಂಡೆಯನು
‘ನೀನು ಹೇಗೆ ಇಲ್ಲಿಗೆ ಬಂದೆ?’

ಬಂಡೆಯು ಕಣ್ಣೀರನು ಸುರಿಸುತ್ತಾ
ಹೇಳಿತು ಪುಟ್ಟಿಗೆ ನೋವಿನಲಿ
‘ಪುಟ್ಟಿಯೇ, ನಮ್ಮೀ ಮಂಗಳ ಗ್ರಹದ
ದುರಂತ ಕಥೆಯನು ಕೇಳಿ ತಿಳಿ’

ಹಿಂದೊಂದು ಕಾಲದಿ ಈ ಗ್ರಹದಲ್ಲಿ
ಇತ್ತು ಜೀವಜಲ ಹಸಿರು ಮರ
ಆಗಿನ ಜನತೆಯು ನಾಡನು ಕಟ್ಟಲು
ಮರಗಳ ಕಡಿಯೆ ಬಂತು ಬರ

ಮಳೆ ಬೆಳೆ ಕಾಣದೆ ಜೀವಿಯು ಅಳಿದು
ಬಂದಿತು ನಮಗೆ ಇಂಥ ಸ್ಥಿತಿ
‘ನಿಮ್ಮ ಭೂಮಿಯಲಿ ಗಿಡಮರ ಅಳಿದರೆ
ಮುಂದೆ ಒಂದು ದಿನ ಇದೇ ಗತಿ’

ಬಣಬಣಗುಟ್ಟುವ ಬಯಲನು ಕಂಡು
ಢವಢವಗುಟ್ಟಿತು ಎಳೆ ಹೃದಯ
ಹಸಿರನು ಅಳಿಸದೆ ಗಿಡಮರ ಬೆಳೆಸಿ
ಉಳಿಸುವೆವೆಂದಳು ಈ ಧರೆಯ

ಭೂಮಿಗೆ ಬಂದು ಜನತೆಯ ಕಂಡು
ಹಸಿರನು ಉಳಿಸಲು ಬೇಡಿದಳು
ತಾನು ಕೂಡ ಎಳೆ ಸಸಿಗಳ ನೆಟ್ಟು
ಬೆಳೆಸುತ ಕುಣಿ ಕುಣಿದಾಡಿದಳು.

ಕವಿ ಕೃತಿ ಪರಿಚಯ

ಸಿ.ಎಂ. ಗೋವಿಂದರೆಡ್ಡಿಯವರು 11-08-1958ರಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚೆನ್ನಿಗರಾಯಪುರ ಎಂಬ ಊರಿನಲ್ಲಿ ಜನಿಸಿದರು. ಪ್ರಸ್ತುತ ಇವರು ಬೆಂಗಳೂರಿನ ಕಾಡುಗೋಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ ಇವರು ‘ಬಣ್ಣದ ಚಿಟ್ಟೆ‘ಮಕ್ಕಳ ಮಂದಾರ’ ‘ಪದ್ಯ ಹೇಳುವ ಮರ’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ‘ಪೆರ್ಲ ಕಾವ್ಯ ಪ್ರಶಸ್ತಿ’, ‘ಸಿಸು ಸಂಗಮೇಶ ದತ್ತಿ ಬಹುಮಾನ’ ಕನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ವಿವಿಧ ಬಹುಮಾನಗಳು ದೊರೆತಿವೆ.
ಪ್ರಸ್ತುತ ಪದ್ಯವನ್ನು ‘ಮಕ್ಕಳ ಮಂದಾರ’ ಎಂಬ ಕೃತಿಯಿಂದ ಆಯ್ಕೆಮಾಡಿಕೊಳ್ಳಲಾಗಿದೆ.

ಪದಗಳ ಅರ್ಥ

ಆಗಸ – ಆಕಾಶ, ಗಗನ.
ಇಷ್ಟ- ಇಚ್ಛೆ, ಮೆಚ್ಚುಗೆ.
ರೆಕ್ಕೆ – ಹಕ್ಕಿಗಳ ಪುಕ್ಕ, ಗರಿ.
ಒಡಲು – ಶರೀರ, ಹೊಟ್ಟೆ.
ಸಾಗು – ಚಲಿಸು, ಮುಂದೆ ಹೋಗು.
ಮಡಿಲು – ಉಡಿ.
ಧರೆ – ನೆಲ, ಭೂಮಿ.
ಹೆಬ್ಬಂಡೆ – ದೊಡ್ಡದಾದ ಬಂಡೆ, ವಿಸ್ತಾರವಾದ ಕಲ್ಲು.
ಬರ – ಬರಗಾಲ, ಕ್ಷಾಮ.
ಅಳಿ – ಸಾಯು, ನಾಶಹೊಂದು.
ಗತಿ – ಸ್ಥಿತಿ, ದಾರಿ.
ಬಯಲು – ಅಂಗಳ, ಮೈದಾನ.
ಉಳಿಸು – ರಕ್ಷಿಸು, ಕಾಪಾಡು.
ನೆಡು – ನಾಟು.

ವಿವರ ತಿಳಿಯಿರಿ

ಪುಟ್ಟಿ = ಮಕ್ಕಳನ್ನು ಕರೆಯುವ ಒಂದು ಆಪ್ತ ಸಂಬೋಧನೆ.
ಮಂಗಳನಂಗಳ = ಮಂಗಳ ಗ್ರಹದ ಬಯಲು, ಮಂಗಳ ಗ್ರಹದ ವಿಸ್ತಾರ ಪ್ರದೇಶ.
ಬಣಬಣಗುಟ್ಟು = ಖಾಲಿ ಖಾಲಿಯಾಗಿ ಕಾಣು, ನೀರವತೆಯಿಂದ ಕೂಡಿರು.
ಯೋಗಿ ಹೆಸರಿನ ಬಂಡೆ = ಮಂಗಳ ಗ್ರಹದಲ್ಲಿ ಕಂಡುಬಂದಿದೆ ಎನ್ನಲಾದ ಒಂದು ದೊಡ್ಡ ಬಂಡೆ.
ದುರಂತ = ದುಃಖದಲ್ಲಿ ಮುಗಿಯುವ, ಕಷ್ಟದಲ್ಲಿ ಕೊನೆಗೊಳ್ಳುವ.
ಢವಢವಗುಟ್ಟು = ಒಮ್ಮೆಲೆ ಭಯವಾಗು, ಹೃದಯ ಜೋರಾಗಿ ಹೊಡೆದುಕೊಳ್ಳು.

ಸಂವೇದ ವಿಡಿಯೋ ಪಾಠಗಳು

Samveda – 6th – Kannada – Mangala Grahadalli Putti (Part 1 of 2)
Samveda – 6th – Kannada – Mangala Grahadalli Putti (Part 2 of 2)

ಪದ್ಯದ ಮಾದರಿ ಗಾಯನ

https://youtu.be/PsUNj-Ckdmo

6th std | New syllabus 2017 | 1st lang Kannada | 2nd poem | Lyrical video | Mangala grahadalli putti | ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

Poem Mangala grahadalli putti lyrics
6th Standard I ಮಂಗಳ ಗ್ರಹದಲ್ಲಿ ಪುಟ್ಟಿ ಪದ್ಯದ ಸುಮಧುರ ಗಾಯನ I Mangala Grahadalli Putti Kannada Poem

ಪೂರಕ ವಿಡಿಯೋಗಳು

ಮಂಗಳ ಗ್ರಹದಲ್ಲಿ ಪುಟ್ಟಿ | Mangala grahadalli putti | 6th standard Kannada poem | 6th std poetry |6std
ಮಂಗಳ ಗ್ರಹದಲ್ಲಿ ಪುಟ್ಟಿ | Mangala grahadalli putti | 6th Standard kannada Poem | 6th Class Kanndada

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವ್ಯಾಕರಣ ಮಾಹಿತಿ

ದ್ವಿರುಕ್ತಿ :

ದ್ವಿರುಕ್ತಿ ಕೆಳಗಿನ ವಾಕ್ಯಗಳನ್ನು ಗಮನಿಸಿರಿ :
* ಶಿಕ್ಷಕರು ಮತ್ತೆ ಮತ್ತೆ ವಿವರಣೆ ನೀಡಿದರು.
* ಷರೀಫನು ನಗುತ್ತ ನಗುತ್ತ ಮಾತನಾಡಿದನು.

ಮೇಲಿನ ವಾಕ್ಯಗಳಲ್ಲಿ ‘ಮತ್ತೆ’, ‘ನಗುತ್ತ’ ಎಂಬ ಪದಗಳು ಎರಡೆರಡು ಬಾರಿ ಬಳಕೆಯಾಗಿವೆ. ಇವುಗಳನ್ನು ‘ದ್ವಿರುಕ್ತಿ’ ಎನ್ನುವರು.
(ದ್ವಿ-ಎರಡು, ಉಕ್ತಿ-ಮಾತು)
ಸಾಮಾನ್ಯವಾಗಿ ವಿಷಯಕ್ಕೆ ಒತ್ತುಕೊಡಲು ದ್ವಿರುಕ್ತಿಗಳನ್ನು ಬಳಸುತ್ತಾರೆ. ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ.
* ಇತ್ತ ಕಡೆಗೆ ಬೇಗಬೇಗ ಬಾ.
* ಗುಡ್ಡಗಳಲ್ಲಿ ದೊಡ್ಡದೊಡ್ಡ ಕಲ್ಲುಗಳಿವೆ.

ಇಲ್ಲಿ ‘ಬೇಗಬೇಗ’, ‘ದೊಡ್ಡದೊಡ್ಡ ಎಂಬ ಪದಗಳು ದ್ವಿರುಕ್ತಿಗಳಾಗಿವೆ.

ಜೋಡುನುಡಿ :

ಕೆಳಗಿನ ವಾಕ್ಯಗಳನ್ನು ಗಮನಿಸಿರಿ :
* “ಚಿಕ್ಕ ಮಕ್ಕಳಿಗೆ ವೇಷಭೂಷಣಗಳನ್ನು ನಾವು ತೊಡಿಸುತ್ತೇವೆ” ಎಂದನು ಪಿಂಟೋ.
* ಉಪವಾಸದ ರಾತ್ರಿ ಹಣ್ಣುಹಂಪಲು ತಿನ್ನುತ್ತಾರೆ.

ಮೇಲಿನ ವಾಕ್ಯಗಳಲ್ಲಿ ‘ವೇಷಭೂಷಣ’, `ಹಣ್ಣು ಹಂಪಲು’ – ಈ ಪದಗಳಲ್ಲಿ ಎರಡು ಬೇರೆಬೇರೆ ಪದಗಳಿದ್ದು ಅವು ಜೊತೆಜೊತೆಯಾಗಿ ಬಳಕೆಯಾಗಿವೆ. ಇವು ಜೋಡುನುಡಿಗಳು.
ಸಾಮಾನ್ಯವಾಗಿ ಮಾತುಗಳನ್ನು, ವಿಷಯಗಳನ್ನು ಮೆರುಗುಗೊಳಿಸಲು ಜೋಡುನುಡಿಗಳನ್ನು ಬಳಸುತ್ತಾರೆ. ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ.
* ಎಲ್ಲರೂ ತಮ್ಮ ನೋವುನಲಿವುಗಳನ್ನು ಹಂಚಿಕೊಂಡರು.
* ಅವರು ಊರುಕೇರಿ ತಿರುಗಿ ಬಂದರು.

ಇಲ್ಲಿ ‘ನೋವುನಲಿವು,’ ‘ಊರುಕೇರಿ’ ಎಂಬ ಪದಗಳು ಜೋಡುನುಡಿಗಳಾಗಿವೆ.

ಅನುಕರಣಾವ್ಯಯ :

ಕೆಳಗಿನ ವಾಕ್ಯಗಳನ್ನು ಗಮನಿಸಿರಿ.
* ಹಂಪಣ್ಣನು ಸರಸರ ಹೆಜ್ಜೆ ಹಾಕಿದನು.
* ಗಾಳಿಯು ಸುಯ್ಯನೆ ಬೀಸಿತು.

ಮೇಲಿನ ವಾಕ್ಯಗಳಲ್ಲಿ ‘ಸರಸರ,’ ‘ಸುಯ್ಯನೆ’ ಈ ಪದಗಳಿಗೆ ನಿರ್ದಿಷ್ಟವಾದ ಅರ್ಥವಿಲ್ಲ. ಇವು ಧ್ವನಿವಿಶೇಷಣವನ್ನು ಅನುಕರಣ ಮಾಡಿದವುಗಳಾಗಿವೆ. ಇವು ಅನುಕರಣಾವ್ಯಯಗಳು.
ಸಾಮಾನ್ಯವಾಗಿ ಧ್ವನಿವಿಶೇಷಣಗಳನ್ನು ಕೇಳಿದಂತೆ ಪುನಃ ಅನುಕರಣೆ ಮಾಡುವಾಗ ಅನುಕರಣಾವ್ಯಯಗಳನ್ನು ಬಳಸುತ್ತಾರೆ. ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ
* ಮಳೆಯ ಹನಿಗಳು ಪಟಪಟನೆ ಬಿದ್ದವು.
* ನೀರು ಜುಳುಜುಳು ಎಂದು ಹರಿಯಿತು.

ಇಲ್ಲಿ ‘ಪಟಪಟನೆ’, ‘ಜುಳುಜುಳು’ ಎಂಬ ಪದಗಳು ಅನುಕರಣಾವ್ಯಯಗಳಾಗಿವೆ.

ದ್ವಿರುಕ್ತಿ ಅನುಕರಣಾವ್ಯಯ ಜೋಡಿಪದ ನುಡಿಗಟ್ಟು(ಪಡೆನುಡಿ)

ಯೋಜನೆ

ನಿಮಗೆ ಅಪರಿಚಿತವೆನಿಸುವ ಸನ್ನಿವೇಶದ ಚಿತ್ರಗಳನ್ನು ಸಂಗ್ರಹಿಸಿರಿ.

ಹಾರುವ ತಟ್ಟೆ
ಹಾರುವ ತಟ್ಟೆ
ಗ್ಯಾಲಕ್ಸಿ
ಚಂದ್ರ ಮೇಲಿಂದ ಭೂಮಿ ವೀಕ್ಷಣೆ

ಪೂರಕ ಓದು

ಅಪರಿಚಿತ ಸನ್ನಿವೇಶಗಳ ಕುರಿತಾದ ಲೇಖನಗಳನ್ನು ಓದಿರಿ.

ಹಾರುವ ತಟ್ಟೆ 

(ಸಾಮಾನ್ಯವಾಗಿ UFO ಅಥವಾ U.F.O. ಎಂದು ಸಂಕ್ಷೇಪಿಸಿ ಹೇಳಲಾಗುತ್ತದೆ) ಎಂಬುದು ಅಂತರಿಕ್ಷದ ಯಾವುದೇ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಇರುವ ಒಂದು ಜನಪ್ರಿಯ ಪದ. ಈ ವಿದ್ಯಮಾನದ ಕಾರಣ ಅಥವಾ ಮೂಲವನ್ನು ಸುಲಭವಾಗಿ ಅಥವಾ ತತ್‌ಕ್ಷಣಕ್ಕೆ ವೀಕ್ಷಕರು ಗುರುತಿಸಲು ಆಗುವುದಿಲ್ಲ. ೧೯೫೨ರಲ್ಲಿ ಈ ಪದವನ್ನು ಮೊದಲು ಹುಟ್ಟುಹಾಕಿದ ಅಮೆರಿಕ ಸಂಯುಕ್ತ ಸಂಸ್ಥಾನಗಳ ವಾಯುಪಡೆಯು ಆರಂಭದಲ್ಲಿ ತನ್ನದೇ ಆದ ರೀತಿಯಲ್ಲಿ UFOಗಳನ್ನು ವ್ಯಾಖ್ಯಾನಿಸಿತು. ವೀಕ್ಷಕರ ಕಣ್ಣಿಗೆ ಗೋಚರಿಸಿದ ಯಾವುದೇ ಗುರುತಿಸಲಾಗದ ವಸ್ತು-ದೃಶ್ಯಗಳನ್ನು ವಿವರಿಸಲು UFO ಎಂಬ ಪದವನ್ನು ಸಾಮಾನ್ಯವಾಗಿ ಆಗಾಗ ಬಳಸಲಾಗುತ್ತದೆ. ಆದರೂ, ಪರಿಣಿತ ಶೋಧಕರಿಂದ ಕೂಲಂಕಷ ಪರೀಕ್ಷೆಗೆ ಒಳಗಾದ ನಂತರವೂ ಗುರುತಿಗೆ ಸಿಕ್ಕದ ವಸ್ತುಗಳಾಗಿಯೇ ಯಾವುವು ಉಳಿಯುತ್ತವೆಯೋ ಅವೇ UFOಗಳು ಎಂಬುದು ವಾಯುಪಡೆಯ ವ್ಯಾಖ್ಯಾನವಾಗಿತ್ತು. UFO ಎಂಬ ಪದವನ್ನು ಅನ್ಯಲೋಕದ ಬಾಹ್ಯಾಕಾಶ ನೌಕೆಗೆಪರ್ಯಾಯ ಪದವಾಗಿ ಜನಪ್ರಿಯ ಸಂಸ್ಕೃತಿಯು ಆಗಾಗ ಬಳಸುತ್ತದೆ. UFOಗಳೊಂದಿಗೆ ಪಂಥಗಳೂ ಸಹ ಗುರುತಿಸಿಕೊಂಡಿದ್ದು, ಪುರಾಣ ಹಾಗೂ ಜಾನಪದ ಕಥೆಗಳು ಈ ವಿದ್ಯಮಾನದ ಸುತ್ತಲೂ ವಿಕಸನಗೊಂಡಿವೆ. UFO ಎಂಬ ಪದದ ಜೊತೆಗೆ ತಳುಕು ಹಾಕಿಕೊಂಡಿರುವ ಗೊಂದಲ ಹಾಗೂ ಊಹಾತ್ಮಕ ಸಂಗತಿಗಳನ್ನು ತಪ್ಪಿಸುವ ದೃಷ್ಟಿಯಿಂದ, ಕೆಲವೊಂದು ಶೋಧಕರು ಗುರುತಿಸಲಾಗದ ಅಂತರಿಕ್ಷ ವಿದ್ಯಮಾನ (ಅಥವಾ UAP ) ಎಂಬ ವಿಶಾಲಾರ್ಥದ ಪದವನ್ನು ಈಗ ಬಳಸುತ್ತಾರೆ. ಸ್ಪ್ಯಾನಿಷ್‌, ಫ್ರೆಂಚ್‌, ಪೋರ್ಚುಗೀಸ್‌ ಮತ್ತು ಇಟಾಲಿಯನ್‌ ಭಾಷೆಗಳಲ್ಲಿ UFO ಕುರಿತು ವ್ಯಾಪಕವಾಗಿ ಬಳಸಲಾಗುವ ಮತ್ತೊಂದು ಪ್ರಥಮಾಕ್ಷರಿಯೆಂದರೆ OVNI. ರೂಢಿಗತವಾಗಿರುವ, ಆದರೆ ನಿಜವಾಗಿರುವ ಕೆಲವೊಂದು ವಸ್ತುಗಳನ್ನು ವೀಕ್ಷಿಸುವುದೇ UFOಗಳ ಕುರಿತಾದ ಬಹುಪಾಲು ಕಾರ್ಯವನ್ನು ಆಕ್ರಮಿಸಿಕೊಳ್ಳುತ್ತದೆ ಎಂದು ಅಧ್ಯಯನಗಳು ದೃಢೀಕರಿಸಿವೆ. ಅಂದರೆ, ವಿಮಾನ, ಆಕಾಶಬುಟ್ಟಿಗಳಂಥ ಅತಿ ಸಾಮಾನ್ಯವಾದ ವಸ್ತುಗಳು, ಅಥವಾ ಉಲ್ಕೆಗಳು ಅಥವಾ ಪ್ರಕಾಶಮಾನವಾದ ಗ್ರಹಗಳಂಥ ಖಗೋಳೀಯ ಕಾಯಗಳ ವೀಕ್ಷಣೆಗಳೇ ಇದರ ಬಹುಪಾಲನ್ನು ಆಕ್ರಮಿಸಿಕೊಳ್ಳುತ್ತವೆ ಎಂಬುದು ಈ ಅಧ್ಯಯನದ ಅಭಿಪ್ರಾಯ. ಇಂಥ ವಸ್ತುಗಳನ್ನು ವೀಕ್ಷಕರು ವೈಪರೀತ್ಯದ ಕಾಯಗಳಂತೆ ತಪ್ಪಾಗಿ ಗುರುತಿಸಿದ್ದರೆ, UFOಗಳು ಎಂದು ಉಲ್ಲೇಖಿಸಲಾದ ಅಥವಾ ಹೇಳಲಾದವುಗಳ ಪೈಕಿ ಒಂದು ಸಣ್ಣ ಪಾಲು ಕೇವಲ ಕೀಟಲೆಯ ತಂತ್ರಗಳಾಗಿವೆ. ಈ ರೀತಿಯಾಗಿ ವರದಿಯಾದ ದೃಶ್ಯಗಳ ಅಥವಾ ವಿದ್ಯಮಾನಗಳ ಪೈಕಿ ಕೇವಲ ಒಂದು ಸಣ್ಣ ಭಾಗವನ್ನು (ಸಾಮಾನ್ಯವಾಗಿ ೫ ರಿಂದ ೨೦%) ಅತಿ ಕರಾರುವಾಕ್ಕಾದ ಅರ್ಥದಲ್ಲಿ (ಕೆಲವೊಂದು ಅಧ್ಯಯನಗಳಿಗಾಗಿ ಕೆಳಗೆ ನೋಡಿ) ಹಾರುವ ತಟ್ಟೆಗಳು ಎಂದು ವರ್ಗೀಕರಿಸಬಹುದು. ನೈಸರ್ಗಿಕ ವಿದ್ಯಮಾನವನ್ನು ತಪ್ಪಾಗಿ ಗುರುತಿಸಿರುವುದರಿಂದಲೇ ಎಲ್ಲಾ UFO ದೃಶ್ಯಗಳೂ ವರದಿಯಾಗಿವೆ ಎಂದು ಕೆಲವೊಂದು ವಿಜ್ಞಾನಿಗಳು ವಾದಿಸಿದ್ದಾರೆ. ಐತಿಹಾಸಿಕವಾಗಿ ಹೇಳುವುದಾದರೆ, ಲಭ್ಯವಿದ್ದ ಅನುಭವಾತ್ಮಕ ಆಧಾರಾಂಶಗಳನ್ನು ಆಧರಿಸಿ ವೈಜ್ಞಾನಿಕ ಶೋಧನೆಯನ್ನು ಸಮರ್ಥಿಸಲಾಗಿತ್ತೇ ಎಂಬುದರ ಕುರಿತು ಕೆಲವೊಂದು ವಿಜ್ಞಾನಿಗಳ ನಡುವೆ ಒಂದಷ್ಟು ಚರ್ಚೆಗಳು ನಡೆದಿದ್ದವು.ಕಷ್ಟಪಟ್ಟು-ಅವಲೋಕಿಸಿದ ಅಲ್ಪ ಪ್ರಮಾಣದ ಸಾಹಿತ್ಯವನ್ನು ಇಲ್ಲಿ ಪ್ರಕಟಿಸಲಾಗಿದ್ದು, UFOಗಳ ಕುರಿತಾಗಿರುವ ರಂಜಕವಾದ ವಿವರಣೆಗಳನ್ನು ವಿಜ್ಞಾನಿಗಳು ಪ್ರಸ್ತಾವಿಸಿದ್ದಾರೆ, ಅಧ್ಯಯನ ಮಾಡಿದ್ದಾರೆ ಅಥವಾ ಬೆಂಬಲಿಸಿದ್ದಾರೆ. ಪರಿಣಿತ ಖಗೋಳಶಾಸ್ತ್ರಜ್ಞನಾಗಿದ್ದ ಅಲನ್ ಹೈನೆಕ್‌, ಒಕ್ಕೂಟ ಸರ್ಕಾರದ ಒಬ್ಬ ನೌಕರನಾಗಿ ಸಂಶೋಧನೆ ನಡೆಸಿದ ನಂತರ ಪ್ರಾಜೆಕ್ಟ್‌ ಬ್ಲೂಬುಕ್‌ನಲ್ಲಿ ಪಾಲ್ಗೊಂಡ. UFO ಕುರಿತಾದ ಕೆಲವೊಂದು ವರದಿಗಳನ್ನು ವೈಜ್ಞಾನಿಕವಾಗಿ ವಿವರಿಸಲು ಸಾಧ್ಯವಿಲ್ಲ ಎಂಬುದು ಅವನ ಅಭಿಪ್ರಾಯವಾಗಿತ್ತು. ತಾನು ಹುಟ್ಟುಹಾಕಿದ UFO ಅಧ್ಯಯನಗಳ ಕುರಿತಾದ ಕೇಂದ್ರದ ಮೂಲಕ ಹಾಗೂ CUFOಗಳಲ್ಲಿ ಪಾಲ್ಗೊಳ್ಳುವುದರ ಮೂಲಕ, ಆತ ತನ್ನ ಜೀವನದ ಉಳಿದ ಭಾಗವನ್ನು UFO ಸಂಶೋಧನೆ ಹಾಗೂ ಅದನ್ನು ಸಾಕ್ಷ್ಯಪೂರ್ವಕವಾಗಿ ನಿರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡ. ಕ್ಲೋಸ್‌ ಎನ್‌ಕೌಂಟರ್ಸ್‌ ಆಫ್‌ ದಿ ಥರ್ಡ್‌ ಕೈಂಡ್‌ ಎಂಬ ಚಲನಚಿತ್ರದಲ್ಲಿನ ಪಾತ್ರವೊಂದು ಹೈನೆಕ್‌ನ್ನು ಜಾಳುಜಾಳಾಗಿ ಆಧರಿಸಿದೆ. ಮ್ಯುಚುಯಲ್ UFO ನೆಟ್‌ವರ್ಕ್‌ ಎಂಬುದು UFOಗಳನ್ನು ಅಧ್ಯಯನ ಮಾಡುತ್ತಿರುವ ಮತ್ತೊಂದು ತಂಡವಾಗಿದೆ. MUFON ಎಂಬ ತಲಸ್ಪರ್ಶಿ ಆಧರಿತ ಸಂಸ್ಥೆಯೊಂದು UFO ಶೋಧಕರ ಕುರಿತಾಗಿ ಮೊದಲು ಬಂದ ಕೈಪಿಡಿಗಳ ಪೈಕಿ ಒಂದನ್ನು ಪ್ರಕಟಿಸಿದೆ. ಕಾಣಿಸಿತೆಂದು ಹೇಳಲಾದ UFO ದೃಶ್ಯಗಳನ್ನು ದಾಖಲಿಸುವುದು ಹೇಗೆ ಎಂಬುದರ ಕುರಿತು ಈ ಕೈಪಿಡಿಯು ಆಳವಾದ ವಿವರಗಳನ್ನು ನೀಡಿತ್ತು. U.S. ವತಿಯಿಂದ ಮೊಟ್ಟಮೊದಲ ಬಾರಿಗೆ ವ್ಯಾಪಕವಾಗಿ ಪ್ರಚಾರ ಮಾಡಲಾದ ದೃಶ್ಯಗಳ ನಂತರ, UFO ಕುರಿತಾದ ವರದಿಗಳು ಆಗಿಂದಾಗ್ಗೆ ಬರಲು ಪ್ರಾರಂಭಿಸಿದವು. ಕೆನ್ನೆತ್ ಆರ್ನಾಲ್ಡ್‌ ಎಂಬ ಖಾಸಗಿ ವಿಮಾನ ಚಾಲಕ ೧೯೪೭ರಲ್ಲಿ ಇದನ್ನು ವರದಿಮಾಡಿದ್ದು, “ಹಾರುವ ತಟ್ಟೆ” ಮತ್ತು “ಹಾರುವ ಬಿಲ್ಲೆ” ಎಂಬ ಜನಪ್ರಿಯ ಪದಗಳು ಇದರಿಂದ ಉದ್ಭವವಾದವು. ಅಲ್ಲಿಂದೀಚೆಗೆ ಲಕ್ಷಾಂತರ ಜನರು ತಾವು UFOಗಳನ್ನು ನೋಡಿರುವುದಾಗಿ ಉಲ್ಲೇಖಿಸಿದ್ದಾರೆ ಇಲ್ಲವೇ ವರದಿ ಮಾಡಿದ್ದಾರೆ.

ಶುಭ ನುಡಿ

* ಕನಸುಗಳನ್ನು ಕಟ್ಟಬೇಕು. ಅವುಗಳನ್ನು ನನಸು ಮಾಡಬೇಕು.
* ಅಪರಿಚಿತವಾಗಿರುವುದನ್ನು ಅರಿಯಬೇಕು. ಅದು ಪರಿಚಿತವಾಗುತ್ತದೆ.
* ಕಗ್ಗಲ್ಲಿನಲ್ಲಿ ಸುಂದರ ಮೂರ್ತಿಗಳು ಅರಳುತ್ತವೆ.