ಉತ್ತರ ಅಮೆರಿಕ-ಪ್ರೈರೀಸ್‍ಗಳ ನಾಡು
ಈ ಪಾಠದಲ್ಲಿ ಉತ್ತರ ಅಮೆರಿಕ ಖಂಡದ ಸ್ಥಾನ, ವಿಸ್ತೀರ್ಣ, ಭೌಗೋಳಿಕ ಸನ್ನಿವೇಶ, ಪ್ರಾಕೃತಿಕ ವಿಭಾಗಗಳು, ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗ, ವ್ಯವಸಾಯ, ಪ್ರಮುಖ ಖನಿಜಗಳು ಹಾಗೂ ಕೈಗಾರಿಕೆಗಳು, ಜನಸಂಖ್ಯೆಯ ಬೆಳವಣಿಗೆ, ಹಂಚಿಕೆ ಮತ್ತು ಸಾಂದ್ರತೆಗಳನ್ನು ಪರಿಚಯಿಸಲಾಗಿದೆ.
ಉತ್ತರ ಅಮೆರಿಕವು ಇತ್ತೀಚೆಗೆ ಕಂಡುಹಿಡಿದ ಖಂಡವಾಗಿದೆ. 1501ರಲ್ಲಿ ಇಟಲಿಯ ನಾವಿಕ ಅಮೆರಿಗೊ ವೆಸ್‍ಪುಸಿ ಈ ಖಂಡದ ಕರಾವಳಿಯನ್ನು ತಲುಪಿದನು. ಅನಂತರ ಈ ಖಂಡವನ್ನು ಆತನ ಹೆಸರಿನ ಮೊದಲ ಪದ ‘ಅಮೆರಿಗೊ'
ದಿಂದ
‘ಅಮೆರಿಕಾ’ ಎಂದು ಕರೆಯಲಾಗಿದೆ. ಈ ಖಂಡದಲ್ಲಿನ ಬಹುತೇಕ ನಿವಾಸಿಗಳು ಯುರೋಪಿಯನರು ಮತ್ತು ಇತರ ದೇಶಗಳಿಂದ ವಲಸೆ ಬಂದವರಾಗಿದ್ದಾರೆ. ಅವರು ಮೆಕ್ಸಿಕೊದ ಚಿನ್ನವನ್ನು ಬಳಕೆ ಮಾಡಿದರೆ, ಫ್ರೆಂಚರು ಕೆನಡದಲ್ಲಿ ತುಪ್ಪಳ (fur) ವ್ಯಾಪಾರವನ್ನು ಲಾಭದಾಯಕವಾಗಿ ಮಾಡಿಕೊಂಡರು. ಬ್ರಿಟಿಷರು ಕೆನಡದ ಅಟ್ಲಾಂಟಿಕ್ ಪ್ರಾಂತ್ಯ ಮತ್ತು ನ್ಯೂಇಂಗ್ಲೆಂಡ್‍ನ ಮೀನುಗಾರಿಕೆ ಮತ್ತು ಅಲ್ಲಿನ ಅರಣ್ಯವನ್ನು ಲೂಟಿಮಾಡಿದರು.
1) ಸ್ಥಾನ, ಭೌಗೋಳಿಕ ಸನ್ನಿವೇಶ ಮತ್ತು ವಿಸ್ತೀರ್ಣ :
ಸ್ಥಾನ : ಉತ್ತರ ಅಮೆರಿಕವು ಸಂಪೂರ್ಣವಾಗಿ ಸಮಭಾಜಕವೃತ್ತದ ಉತ್ತರದಲ್ಲಿ ನೆಲೆಗೊಂಡಿದೆ. ಅದು ಅಕ್ಷಾಂಶಿಕವಾಗಿ 190 ಉತ್ತರ ದಿಂದ 710 ಉತ್ತರ ಅಕ್ಷಾಂಶ, 500 ಪಶ್ಚಿಮದಿಂದ, 1500 ಪಶ್ಚಿಮ ರೇಖಾಂಶಗಳ ನಡುವೆ ಹಬ್ಬಿದೆ. ಕರ್ಕಾಟಕ ಸಂಕ್ರಾಂತಿ ವೃತ್ತವು (23 1/20 ಉ.ಅ) ಈ ಖಂಡದ ದಕ್ಷಿಣದಲ್ಲಿಯೂ ಉತ್ತರ ಮೇರು ವೃತ್ತವು (66 1/20 ಉ.ಆಕ್ರ್ಟಿಕ್ ವೃತ್ತ) ಉತ್ತರ ಭಾಗದಲ್ಲಿ ಹಾದು ಹೋಗಿವೆ.
ಭೌಗೋಳಿಕ ಸನ್ನಿವೇಶ : ಉತ್ತರ ಅಮೆರಿಕವು ಪೂರ್ವದಲ್ಲಿ ಅಟ್ಲಾಂಟಿಕ್ ಮಹಾಸಾಗರ, ಪಶ್ಚಿಮದಲ್ಲಿ ಫೆಸಿಫಿಕ್ ಮಹಾಸಾಗರ ಮತ್ತು ಉತ್ತರದಲ್ಲಿ ಆಕ್ರ್ಟಿಕ್ (ಉತ್ತರ ಶೀತ) ಸಾಗರದಿಂದ ಸುತ್ತುವರಿದಿದೆ. ಬೇರಿಂಗ್ ಜಲಸಂಧಿಯು ಇದನ್ನು ಏಷ್ಯ ಖಂಡದಿಂದ ಪ್ರತ್ಯೇಕಿಸಿದೆ. ಪನಾಮ ಭೂಕಂಠದಿಂದಾಗಿ ಇದು ದಕ್ಷಿಣ ಅಮೆರಿಕದೊಂದಿಗೆ ಭೂಸಂಪರ್ಕವನ್ನು ಹೊಂದಿತ್ತು. ಈಗ ಅದು ಪನಾಮ ಕಾಲುವೆಯಿಂದ ಪ್ರತ್ಯೇಕಗೊಂಡಿದೆ. ಅಸಂಖ್ಯಾತ ಸಣ್ಣ ಸಣ್ಣ ಜಲಭಾಗಗಳನ್ನು ಇಲ್ಲಿ ಕಾಣಬಹುದು. ಉದಾ :- ಮೆಕ್ಸಿಕೊ ಖಾರಿ, ಹಡ್ಸನ್‍ಕೊಲ್ಲಿ, ಅಲಾಸ್ಕ್ ಖಾರಿ, ಕ್ಯಾಲಿಫೋರ್ನಿಯ ಖಾರಿ ಇತ್ಯಾದಿ. ವೆಸ್ಟ್ ಇಂಡಿಸ್ ಮತ್ತು ಕ್ಯೂಬಾ ದ್ವೀಪಗಳನ್ನು ಕೆರಬಿಯನ್ ಸಮುದ್ರದಲ್ಲಿ ಕಾಣಬಹುದು. ಕೆನಡದ ಪೂರ್ವ ಕರಾವಳಿಯಲ್ಲಿ ನ್ಯೂಫೌಂಡ್‍ಲ್ಯಾಂಡ್ ಪ್ರದೇಶವಿದೆ. ಆಕ್ರ್ಟಿಕ್ ಮಹಾಸಾಗರದಲ್ಲಿ ಅಸಂಖ್ಯಾತ ದ್ವೀಪಗಳಿದ್ದು, ಅವುಗಳಲ್ಲಿ ಗ್ರೀನ್‍ಲ್ಯಾಂಡ್ ಅತಿ ದೊಡ್ಡದಾಗಿದೆ. ಉತ್ತರ ಅಮೆರಿಕದ ದಕ್ಷಿಣದಲ್ಲಿರುವ ಅಂಚಿನ ಭೂಭಾಗವನ್ನು ಮಧ್ಯ ಅಮೆರಿಕವೆಂದು ಕರೆಯಲಾಗಿದೆ.
ವಿಸ್ತೀರ್ಣ : ಉತ್ತರ ಅಮೆರಿಕವು ವಿಸ್ತೀರ್ಣದಲ್ಲಿ (16.46%) ಏಷ್ಯ ಮತ್ತು ಆಫ್ರಿಕಗಳ ನಂತರ ಮೂರನೇ ಅತಿ ದೊಡ್ಡ ಭೂಖಂಡವಾಗಿದೆ (24.24 ದಶಲಕ್ಷ ಚ.ಕಿ.ಮೀ). ಇದು ಭಾರತಕ್ಕಿಂತ ಸುಮಾರು ಏಳು ಪಟ್ಟು ದೊಡ್ಡದಾಗಿದೆ. ಉತ್ತರ ಅಮೆರಿಕದಲ್ಲಿ 24 ರಾಜ್ಯಗಳಿವೆ. ಕೆನಡ, ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಮೆಕ್ಸಿಕೋ ಈ ಮೂರು ರಾಜ್ಯಗಳು ಗಾತ್ರದಲ್ಲಿ ದೊಡ್ಡದಾಗಿವೆ. ಉತ್ತರ ಅಮೆರಿಕದ ಭೌಗೋಳಿಕ ಪ್ರದೇಶದಲ್ಲಿ ಕೆರಿಬಿಯನ್ ದ್ವೀಪಗಳೂ ಸೇರಿವೆ.
ನಿಮಗಿದು ತಿಳಿದಿದೆಯೇ?
ದೇಶಗಳು ಅವುಗಳ ವಿಶೇಷತೆ
ಕೆನಡ – ಟ್ರಾನ್ಸ್ ಕೆನಡಿಯನ್ ರೈಲ್ವೆ
ಯು.ಎಸ್.ಎ. – ಗ್ರ್ಯಾಂಡ್ ಕ್ಯಾನಿಯನ್, ಹೋಮ್ಸ್ ಸರೋವರಗಳು, ಬಾರ್ ರಿಂಗರ್ ಕ್ರೇಟರ್, ವಾಲ್ಕನಾಸ್
ವೆಸ್ಟ್ ಇಂಡಿಸ್ – ಕ್ರಿಕೆಟ್, ದ್ವೀಪಗಳು
2) ಪ್ರಾಕೃತಿಕ ವಿಭಾಗಗಳು :-
ಉತ್ತರ ಅಮೆರಿಕ ಖಂಡವನ್ನು ನಾಲ್ಕು ಮುಖ್ಯ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ..
- ಪಶ್ಚಿಮದ ಪರ್ವತಾವಳಿಗಳು (ರಾಕಿ ಪರ್ವತಗಳು)
- ಕೇಂದ್ರದ ಮಹಾ ಮೈದಾನಗಳು
- ಪೂರ್ವದ ಉನ್ನತ ಪ್ರದೇಶಗಳು / ಅಪಲೇಷಿಯನ್ ಪರ್ವತಗಳು
- ಕರಾವಳಿ ಪ್ರದೇಶ
1) ಪಶ್ಚಿಮದ ಪರ್ವತಾವಳಿಗಳು (ರಾಕಿ ಪರ್ವತಗಳು) :-
ಇವು ಹಿಮಾಲಯ ಪರ್ವತಗಳಂತೆ ಮಡಿಕೆ ಪರ್ವತ ಶ್ರೇಣಿಗಳಾಗಿವೆ. ಪಶ್ಚಿಮದ ಈ ಪರ್ವತಾವಳಿಗಳು ಉತ್ತರದಲ್ಲಿ ಅಲಾಸ್ಕದಿಂದ ದಕ್ಷಿಣದಲ್ಲಿ ಪನಾಮದವರೆಗೂ ಹಬ್ಬಿವೆ. ಅವು ಅನೇಕ ಸರಣಿ ಸಮಾನಾಂತರ ಪರ್ವತ ಸರಣಿಗಳಿಂದ ಕೂಡಿದ್ದು, ಅವುಗಳ ನಡುವೆ ಅಂತರ್ ಮೈದಾನ ಮತ್ತು ಪ್ರಸ್ಥಭೂಮಿಗಳಿವೆ.
ಇವುಗಳ ಎತ್ತರವು ಅಲಾಸ್ಕದೆಡೆಗೆ ಹೋದಂತೆ ಕಡಿಮೆಯಾಗುತ್ತದೆ ಮತ್ತು ಮೆಕ್ಸಿಕೊ ಕಡೆಗೆ ಹೋದಂತೆ ಹೆಚ್ಚಾಗುತ್ತದೆ. ಪಶ್ಚಿಮದ ಪರ್ವತಾವಳಿಗಳಲ್ಲಿ ರಾಕಿ ಪರ್ವತಗಳು ಅತಿ ಪ್ರಮುಖವಾದ ಸರಣಿಗಳಾಗಿವೆ. ಈ ಪ್ರದೇಶದಲ್ಲಿ ಮೌಂಟ್ ಮ್ಯಾಕ್‍ಕಿನ್ಲೆ (6194 ಮೀ) ಅತಿ ಎತ್ತರವಾದ ಶಿಖರವಾಗಿದ್ದರೆ, ಮೃತ್ಯುಕಣಿವೆಯು (ಸಮುದ್ರ ಮಟ್ಟದಿಂದ 86 ಮೀ.ನಷ್ಟು ತಗ್ಗಾದ) ಅತಿ ತಗ್ಗಾದ ಭಾಗವಾಗಿದೆ. ಕಾಸ್ಕೇಡ್ ಮತ್ತು ಸಿಯೆರ್ರಾ ನಿವೇಡಗಳು ಇತರೆ ಪರ್ವತ ಸರಣಿಗಳು. ಕ್ಯಾಲಿಫೋರ್ನಿಯದಲ್ಲಿರುವ ವೈಟ್ನೇ ಪರ್ವತ ಮತ್ತು ಶ್ವೇತ ಪರ್ವತಗಳು ತಮ್ಮದೇ ಆದ ಏರಿಳಿತ ಲಕ್ಷಣಗಳನ್ನು ಹೊಂದಿದ್ದು, ಅವು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿವೆ. ಈ ಸರಣಿಗಳ ಮಧ್ಯೆ ಕೆಲವು ಅಂತರ್ ಪರ್ವತ ಪ್ರಸ್ಥಭೂಮಿಗಳನ್ನು ಕಾಣಬಹುದು. ಅವುಗಳಲ್ಲಿ ಕೊಲಂಬಿಯ. ಕೊಲರಾಡೊ ಮತ್ತು ಮೆಕ್ಸಿಕನ್ ಪ್ರಸ್ಥಭೂಮಿಗಳು ಪ್ರಮುಖವಾದವುಗಳಾಗಿವೆ. ಕೊಲರಾಡೊ ನದಿಯು ಕೊಲರಾಡೊ ಪ್ರಸ್ಥಭೂಮಿಯನ್ನು ತನ್ನ ಅಪಾರ ಸವಕಳಿಯ ಮೂಲಕ `ಮಹಾ ಕಂದರ’ (ಗ್ರ್ಯಾಂಡ್ ಕ್ಯಾನಿಯನ್)ವನ್ನು ನಿರ್ಮಾಣಕ್ಕೆ ಕಾರಣವಾಗಿದೆ.
ಓಲ್ಡ್ ಫೇಥ್‍ಫುಲ್ ಎಂಬುದು – ಪ್ರಪಂಚದ ಹೆಸರಾಂತ ಗೈಸರ್ (ಬಿಸಿ ನೀರಿನ ಬುಗ್ಗೆ) ಆಗಿದ್ದು ಅಮೆರಿಕ ಸಂಯುಕ್ತ ಸಂಸ್ಥಾನದ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನದಲ್ಲಿದೆ.
2) ಕೇಂದ್ರೀಯ ಮಹಾ ಮೈದಾನಗಳು :-
ಕೇಂದ್ರೀಯ ಮೈದಾನಗಳನ್ನು ಪ್ರೈರೀಸ್‍ನ ಮಹಾಮೈದಾನಗಳೆಂದೂ ಕರೆಯಲಾಗಿದೆ. ಅವುಗಳು ಪೂರ್ವದಲ್ಲಿ ಅಪಲೇಷಿಯನ್ ಪರ್ವತ ಮತ್ತು ಪಶ್ಚಿಮದಲ್ಲಿ ಪರ್ವತಾವಳಿಗಳ ಮಧ್ಯೆ ಕಂಡುಬರುತ್ತವೆ. ಈ ಮೈದಾನಗಳು ಹೆಚ್ಚು ವಿಸ್ತಾರವಾಗಿದ್ದು (ಉತ್ತರ ಅಮೆರಿಕದ ಒಟ್ಟು ಭೂಭಾಗದ 3/5ರಷ್ಟು) ಸಮತಟ್ಟಾದ ಲಕ್ಷಣದಿಂದ ಸಾಧಾರಣ ಇಳಿಜಾರುವಿನಿಂದ ಕೂಡಿವೆ. ಈ ಮೈದಾನಗಳು ಮಿಸಿಸಿಪ್ಪಿ ಮತ್ತು ಮಿಸ್ಸೌರಿ ನದಿಗಳು ಮತ್ತು ಅವುಗಳ ಉಪನದಿಗಳಿಂದ ನಿರ್ಮಾಣವಾಗಿವೆ. ಇದು ಪ್ರಪಂಚದ ಅತಿ ಫಲವತ್ತಾದ ಮೈದಾನಗಳಲ್ಲೊಂದಾಗಿದ್ದು, ಉತ್ತಮ ಕೃಷಿ ಪ್ರದೇಶವಾಗಿದೆ. ಈ ಪ್ರದೇಶದ ಉತ್ತರ ಭಾಗವು ಹಿಮಹಾಳೆಗಳಿಂದ (ಹಿಮನದಿ) ಭೂನಗ್ನೀಕರಣಕ್ಕೆ ಒಳಗಾಗಿರುವ ಕಾರಣದಿಂದಾಗಿ ಅಧಿಕ ಸಂಖ್ಯೆಯ ಬಯಲುಗಳು ನಿರ್ಮಾಣಗೊಂಡಿವೆ. ಈ ಬಯಲುಗಳು ಸರೋವರಗಳಿಂದ ಸುತ್ತುವರೆದಿವೆ.
ಧೂಳಿನ ಸುಂಟರಗಾಳಿ (ಭೋಗುಣಿ) (Dust Bowl) – ಅವೈಜ್ಞಾನಿಕ ಸಾಗುವಳಿಯಿಂದ 1930ರ ದಶಕದಲ್ಲಿ ಉಂಟಾದ ಬಿರುಗಾಳಿಗೆ ಧೂಳಿನ ಸುಂಟರಗಾಳಿ ಎನ್ನುವರು. ಇದು ಅಮೆರಿಕ ಮತ್ತು ಕೆನಡದ ಕೃಷಿ ಭೂಮಿಗೆ ಅಪಾರ ಹಾನಿಯನ್ನುಂಟು ಮಾಡಿತು.
3) ಪೂರ್ವದ ಉನ್ನತ ಪ್ರದೇಶಗಳು / ಅಪಲೇಷಿಯನ್ ಪರ್ವತಗಳು :-
ಪೂರ್ವದ ಉನ್ನತ ಪ್ರದೇಶಗಳನ್ನು ಅಪಲೇಷಿಯನ್ ಪರ್ವತಗಳೆಂದೂ ಕರೆಯಲಾಗುತ್ತದೆ. ಇವುಗಳು ಭೂಖಂಡದ ಪೂರ್ವ ಅಂಚಿನುದ್ದಕ್ಕೂ ನ್ಯೂಫೌಂಡ್‍ಲ್ಯಾಂಡ್ ಪ್ರದೇಶದಿಂದ ಅಲಬಾಮದವರೆಗೂ ವಿಸ್ತರಿಸಿವೆ. ಅಪಲೇಷಿಯನ್‍ಗಳು ಪ್ರಾಚೀನ ಮಡಿಕೆ ಪರ್ವತಗಳಾಗಿದ್ದು ಭೂನಗ್ನೀಕರಣಕ್ಕೊಳಗಾಗಿದ್ದು ಅವು ಇಂದು ಪ್ರಸ್ತುತ ಎತ್ತರವನ್ನು ಹೊಂದಿವೆ.
ಅಪಲೇಷಿಯನ್ ಸರಣಿಗಳ ಪೂರ್ವ ಭಾಗದಲ್ಲಿ ಪರ್ವತಪಾದದ ಪ್ರಸ್ಥಭೂಮಿ ಮತ್ತು ಅಟ್ಲಾಂಟಿಕ್ ಕರಾವಳಿ ಮೈದಾನಗಳಿವೆ. ಸೇಂಟ್ ಲಾರೆನ್ಸ್ ಕಣಿವೆಯು ಲಾಬ್ರಡಾರ್ ಪ್ರಸ್ಥಭೂಮಿಯನ್ನು ಅಪಲೇಷಿಯನ್ ಶ್ರೇಣಿಗಳಿಂದ ಪ್ರತ್ಯೇಕಿಸುತ್ತದೆ. ಅವು ಕಲ್ಲಿದ್ದಲು, ಸೀಸ, ಸತು, ಕಬ್ಬಿಣದ ಅದಿರು, ತಾಮ್ರ, ಜಲಶಕ್ತಿ ಮತ್ತು ಕಾಡುಮರಗಳಂತಹ ಸಂಪನ್ಮೂಲಗಳಿಂದ ಶ್ರೀಮಂತವಾಗಿವೆ. ಈ ಪ್ರದೇಶವು ಅಪಾರ ಜನಸಂಖ್ಯೆಯನ್ನು ಹೊಂದಿದ್ದು, ಅದು ಉತ್ತರ ಅಮೆರಿಕದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡಿದೆ.
4) ಕರಾವಳಿ ಮೈದಾನ :-
ದಕ್ಷಿಣದ ಪನಾಮ ಭೂಕಂಠವನ್ನು ಹೊರತಾಗಿ ಉತ್ತರ ಅಮೆರಿಕಾವು ಬಹಳ ಉದ್ದವಾದ ಮತ್ತು ಕೋಚುಕೋಚಾದ (Indented) ಸಮುದ್ರ ತೀರವನ್ನು ಹೊಂದಿದೆ. ಕರಾವಳಿ ಮೈದಾನವು ಈಶಾನ್ಯದಲ್ಲಿ ಕಿರಿದಾಗಿದೆ ಮತ್ತು ದಕ್ಷಿಣ ಮತ್ತು ಪಶ್ಚಿಮದ ಕಡೆಗೆ ಹೋದಂತೆ ಅಗಲವಾಗಿದೆ. ಸರಾಸರಿ ಎತ್ತರ ಸಮುದ್ರ ಮಟ್ಟಕ್ಕೆ 150ಮೀ. ಇದು ತಗ್ಗು ಮತ್ತು ಸಾಧಾರಣಾ ಮೈದಾನ ಪ್ರದೇಶವಾಗಿದ್ದು ಫಲವತ್ತಲ್ಲದ ಮರಳು ಮಣ್ಣಿನಿಂದ ಆವರಿಸಿದೆ. ಬಹಳಷ್ಟು ಜವುಗು ಮತ್ತು ಜವುಳು ಭಾಗಗಳಿವೆ. ನದಿ ಮುಖಭಾಗ ಮತ್ತು ಕೊಲ್ಲಿಗಳ ಅಸ್ತಿತ್ವದಿಂದಾಗಿ ಸಮುದ್ರ ತೀರ ಕೋಚುಕೋಚಾಗಿದ್ದು, ಅನೇಕ ಬಂದರುಗಳು ನೆಲಸಿವೆ.
ನದಿಗಳು ಮತ್ತು ದೊಡ್ಡ ಸರೋವರಗಳು :-
ನದಿಗಳು : ಮಿಸಿಸಿಪ್ಪಿ ಮತ್ತು ಅದರ ಉಪನದಿಗಳು ಉತ್ತರ ಅಮೇರಿಕಾದ ಅತಿ ದೊಡ್ಡ ನದಿ ವ್ಯವಸ್ಥೆಯಾಗಿದ್ದು, ಖಂಡದ ಮೂರನೇ ಎರಡರಷ್ಟು ಭೂಭಾಗದ ಮೂಲಕ ಹರಿಯುತ್ತವೆ. ಮಿಸಿಸಿಪ್ಪಿ ನದಿಯು ಮೆಕ್ಸಿಕೊ ಖಾರಿಯನ್ನು ಸೇರುತ್ತದೆ. ಮಿಸ್ಸೌರಿ ಎಂಬುದು ಇದರ ಪ್ರಮುಖ ಉಪನದಿ. ರೆಡ್‍ರಿವರ್, ಓಹಾವೊ, ಅರಕಾನ್ಸ್‍ಸ್, ಟೆನಸ್ಸಿ ಮತ್ತು ಪ್ಲಾಟೆ ಎಂಬುವು ಇತರೆ ಉಪನದಿಗಳು. ಸ್ನೇಕ್, ಫ್ರೇಸರ್, ಕೊಲಂಬಿಯಾ, ಯೂಕಾನ್, ಕೊಲರಾಡೊ, ರಯೊಗ್ರಾಂಡ್, ಮೆಕೆಂಜಿ, ನೆಲ್ಸನ್ ಮತ್ತು ಸೇಂಟ್ ಲಾರೆನ್ಸ್‍ಗಳು ಉತ್ತರ ಅಮೇರಿಕೆಯ ಇತರ ಪ್ರಮುಖ ನದಿಗಳು.
ಕೊಲರಾಡೊ, ಕೊಲಂಬಿಯ ಮತ್ತು ಫ್ರೇಸರ್ ಗಳು ಪಶ್ಚಿಮಕ್ಕೆ ಹರಿಯುವ ಪ್ರಮುಖ ನದಿಗಳು. ಇವು ಚಿಕ್ಕವು ಮತ್ತು ರಭಸದಿಂದ ಹರಿಯುತ್ತವೆ. ಅವು ಪೆಸಿಫಿಕ್ ಸಾಗರವನ್ನು ಸೇರುತ್ತವೆ.
ಕೊಲರಾಡೊ ನದಿಯು ಕೊಲರಾಡೊ ಪ್ರಸ್ಥಭೂಮಿಯ ಮೂಲಕ ಹರಿಯುತ್ತಾ ಗ್ರಾಂಡ್ ಕ್ಯಾನಿಯನ್ ಮಹಾಕಂದರವನ್ನು ನಿರ್ಮಾಣ ಮಾಡಿದೆ. ಅದು ಪ್ರಕೃತಿ ಸೌಂದರ್ಯ ಮತ್ತು ಪ್ರವಾಸೋದ್ಯಮದ ಕೇಂದ್ರವಾಗಿದೆ. ಈ ಮಹಾಕಂದರವನ್ನು `ಪ್ರಪಂಚದ ಪ್ರಾಕೃತಿಕ ಅದ್ಭುತ’ ಎಂದು ಕರೆಯಲಾಗಿದೆ. ಕೊಲಂಬಿಯಾ ನದಿಯು ಕೊಲಂಬಿಯಾ ಪ್ರಸ್ಥಭೂಮಿಯ ಮೂಲಕ ಹರಿಯುತ್ತದೆ.
ಮಹಾಕಂದರ (ಅರಿಜೋನ, ಯು.ಎಸ್.ಎ.)
ಆಳ – ಸುಮಾರು 1800 ಮಿ.
ಅಗಲ – 3ರಿಂದ 29 ಕಿ.ಮೀ.
ಕೆನಡಿಯನ್ ಫಲಕದಲ್ಲಿ ಅನೇಕ ಚಿಕ್ಕ ನದಿಗಳು ಹರಿಯುತ್ತವೆ. ಅವು ಹಡ್ಸನ್ ಕೊಲ್ಲಿಗೆ ಸೇರುತ್ತವೆ. ಸೇಂಟ್ ಲಾರೆನ್ಸ್ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಗಳ ಅತಿ ಪ್ರಮುಖವಾದ ನದಿಯಾಗಿದೆ. ಇದು ಮಹಾಸರೋವರಗಳ ಮೂಲಕ ಹರಿಯುತ್ತದೆ. ಒಂದು ವರ್ಷದಲ್ಲಿ ಇದರ ನೀರು ಮೂರು ತಿಂಗಳುಗಳ ಕಾಲ ಹೆಪ್ಪುಗಟ್ಟಿರುತ್ತದೆ.
ಸರೋವರಗಳು : ಉತ್ತರ ಅಮೆರಿಕವು ಅಪಾರ ಸಂಖ್ಯೆಯ ಸಿಹಿನೀರಿನ ಮತ್ತು ಉಪ್ಪು ನೀರಿನ ಸರೋವರಗಳನ್ನು ಹೊಂದಿದೆ. ಅವುಗಳು ಕೆನಡಿಯನ್ ಭೂಫಲಕದ ದಕ್ಷಿಣದ ಗಡಿಭಾಗದಲ್ಲಿ ನೆಲೆಗೊಂಡಿವೆ. ಹ್ಯೂರಾನ್, ಓಂಟಾರಿಯೊ, ಮಿಚಿಗನ್, ಐರಿ ಮತ್ತು ಸುಪೀರಿಯರ್ ಗಳು ಪ್ರಮುಖವಾದ ಸರೋವರಗಳಾಗಿವೆ.
ಒಟ್ಟಾರೆಯಾಗಿ ಈ ಸರೋವರಗಳನ್ನು ಹೋಮ್ಸ್ (HOMES) ಎಂದು ಕರೆಯಲಾಗಿದೆ. ಸುಪೀರಿಯರ್ ಸರೋವರವು ಮಹಾಸರೋವರಗಳಲ್ಲಿ ದೊಡ್ಡದಾಗಿದ್ದು ವಿಶ್ವದ ಅತಿ ದೊಡ್ಡ ಸಿಹಿ ನೀರಿನ ಸರೋವರವಾಗಿದೆ. ಚಿಕಾಗೊ ಮತ್ತು ಡೆಟ್ರಾಯಿಟ್ ನಗರಗಳು ಐರಿ ಸರೋವರದ ದಡದಲ್ಲಿ ನೆಲೆಗೊಂಡಿವೆ. ವಿನ್ನಿಪೆಗ್ ಸರೋವರವು ಕೆನಡಾದ ಪ್ರಮುಖ ಸರೋವರವಾಗಿದೆ. ಈ ಎಲ್ಲಾ ಸರೋವರಗಳು ಪ್ರಮುಖವಾದ ಜಲಮಾರ್ಗಗಳನ್ನು ಒದಗಿಸಿವೆ.
ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗ :-
ವಾಯುಗುಣ : ಉತ್ತರ ಅಮೆರಿಕವು ಅತಿ ವಿಸ್ತಾರವಾದ ವಿಭಿನ್ನ ಮೇಲ್ಮೈ ಲಕ್ಷಣ ಅಕ್ಷಾಂಶಗಳ ವಿಸ್ತರಣೆಗಳಿಂದಾಗಿ ವಿಭಿನ್ನವಾದ ವಾಯುಗುಣವನ್ನು ಹೊಂದಿದೆ. ಅಲಾಸ್ಕ ಮತ್ತು ಗ್ರೀನ್‍ಲ್ಯಾಂಡ್ ಹೆಪ್ಪುಗಟ್ಟುವ ಹವಾಗುಣ ಪರಿಸ್ಥಿತಿಗಳನ್ನು (ಟಂಡ್ರಾ ಮಾದರಿ) ಹೊಂದಿದ್ದರೆ, ಅಮೆರಿಕ ಸಂಯುಕ್ತ ಸಂಸ್ಥಾನದ ನೈರುತ್ಯದಲ್ಲಿರುವ ಮರುಭೂಮಿಗಳು ಸುಡುವ ಶಾಖವನ್ನು ಹೊಂದಿವೆ. ಫ್ಲಾರಿಡದ ಆಗ್ನೇಯ ಭಾಗ, ಕೆರೆಬಿಯನ್ ಮತ್ತು ಕೇಂದ್ರೀಯ ಅಮೆರಿಕ ಉಷ್ಣವಲಯ ಪರಿಸ್ಥಿತಿಯನ್ನು ಹೊಂದಿವೆ. ಈ ಖಂಡದ ಕೇಂದ್ರ ಮತ್ತು ದಕ್ಷಿಣ ಪ್ರದೇಶಗಳು ಹರಿಕೇನ್ ಮತ್ತು ಟಾರ್ನಾಡೊಗಳಂತಹ ಬಿರುಗಾಳಿಯುಕ್ತ ಪ್ರದೇಶಗಳಾಗಿವೆ.
ಸ್ವಾಭಾವಿಕ ಸಸ್ಯವರ್ಗ : ಸ್ವಾಭಾವಿಕ ಸಸ್ಯವರ್ಗ ಮತ್ತು ಪ್ರಾಣಿವರ್ಗಗಳ ಹಂಚಿಕೆ ಹೆಚ್ಚಾಗಿ ಅಲ್ಲಿನ ವಾಯುಗುಣ, ಮಣ್ಣು ಮತ್ತು ಭೂಸ್ವರೂಪಗಳನ್ನು ಅವಲಂಬಿಸಿದೆ. ಉತ್ತರ ಅಮೆರಿಕವು ಹೊಂದಿರುವ ವೈವಿಧ್ಯ ವಾಯುಗುಣ ಮತ್ತು ಭೂಸ್ವರೂಪಗಳಿಂದಾಗಿ ವೈವಿಧ್ಯಮಯ ಸಸ್ಯವರ್ಗಗಳನ್ನು ಹೊಂದಿದೆ.
ಈ ಸಸ್ಯವರ್ಗದ ಪಟ್ಟಿಗಳು ಮುಖ್ಯವಾಗಿ ವಾಯುಗುಣ ಪ್ರದೇಶಗಳನ್ನು ಅನುಸರಿಸುತ್ತವೆ. ಅವುಗಳೆಂದರೆ ಟಂಡ್ರಾ ಮಾದರಿಯ ಸಸ್ಯವರ್ಗವು ಉತ್ತರ ಮೇರುವೃತ್ತ (ಆಕ್ರ್ಟಿಕ್ ವೃತ್ತ)ದೊಳಗೆ ಕಂಡುಬರುತ್ತದೆ. ಅದರಲ್ಲೂ ಮುಖ್ಯವಾಗಿ ಕೆನಡ, ಅಲಾಸ್ಕ ಮತ್ತು ಗ್ರೀನ್‍ಲ್ಯಾಂಡ್‍ಗಳಲ್ಲಿ ಕಂಡುಬರುತ್ತದೆ. ಇಲ್ಲಿ ಚಳಿಗಾಲವು ದೀರ್ಘ ಮತ್ತು ಹೆಪ್ಪುಗಟ್ಟುವ ಸ್ಥಿತಿಯನ್ನೂ ಹಾಗೂ ಬೇಸಿಗೆಯು ಅತಿಕಡಿಮೆ ಅವಧಿಯನ್ನು ಹೊಂದಿದೆ. ಇಲ್ಲಿ ಕಂಡುಬರುವ ಸಸ್ಯವರ್ಗಗಳೆಂದರೆ ಪಾಚಿ ಮತ್ತು ಹಾವಸೆಗಳು ಮಾತ್ರ. ಬೇಸಿಗೆ ಋತುಮಾನದಲ್ಲಿ ಕೆಲವು ಸುಗಂಧ ದ್ರವ್ಯಕ್ಕೆ ಸಂಬಂಧಿಸಿದ ಹೂಬಿಡುವ ಸಸ್ಯಗಳು ಬೆಳೆಯುತ್ತವೆ. ಇಂತಹ ಕಷ್ಟ ಮತ್ತು ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಬದುಕಬಲ್ಲ ಪ್ರಾಣಿಗಳಾದ ಹಿಮಜಿಂಕೆ, ಕಾರಿಬೊ ಮತ್ತು ಶಾಖಾಹಾರಿಗಳಾದ ಹಿಮಕರಡಿಗಳು ಇಲ್ಲಿ ಕಂಡು ಬರುತ್ತವೆ.
ಟಂಡ್ರಾ ಪಟ್ಟಿಯ ದಕ್ಷಿಣಭಾಗವು ತಂಪಾದ ಸಮಶೀತೋಷ್ಣ ವಿಧದ ವಾಯುಗುಣ ಪ್ರದೇಶದಲ್ಲಿದೆ. ಇದು ವಾಸ್ತವವಾಗಿ ಸೂಚಿಪರ್ಣ ಅರಣ್ಯದ ಪಟ್ಟಿಯಾಗಿದ್ದು ಅದನ್ನು ಟೈಗಾ ಎಂದು ಕರೆಯಲಾಗಿದೆ. ಸೂಚಿಪರ್ಣ ಅರಣ್ಯಗಳಲ್ಲಿ ಸದಾ ಹಸಿರಿನಿಂದ ಕೂಡಿದ ಪ್ರಭೇದಗಳಾದ ಪೈನ್, ಫರ್, ಸ್ಪ್ರೂಸ್, ಲಾರ್ಚ್ ಮುಂತಾದ ಮರಗಳು ಕಂಡುಬರುತ್ತವೆ. ಉಣ್ಣೆಯಂತಹ ಕೂದಲನ್ನು ಹೊಂದಿರುವ ಪ್ರಾಣಿಗಳನ್ನು ಈ ಪ್ರದೇಶದಲ್ಲಿ ಕಾಣಬಹುದು. ಉದಾ : ಲಿಂಕ್ಸ್, ಸಾಬಲ್, ಸಿಲ್ವರ್ ತೋಳ ಇತ್ಯಾದಿ.
ಎಲೆಯುದುರುವ ವಿಧದ ಅರಣ್ಯಗಳನ್ನು ಸೆಂಟ್ ಲಾರೆನ್ಸ ಮತ್ತು ಮಹಾಸರೋವರಗಳ ಪೂರ್ವಭಾಗದಲ್ಲಿ ಕಾಣಬಹುದು. ಈ ಪ್ರಾಂತ್ಯದ ಉತ್ತರ ಭಾಗವು ಶೀತದಿಂದ ಮತ್ತು ದಕ್ಷಿಣದ ಭಾಗವು ಬೆಚ್ಚನೆಯ ಹವಾಗುಣದಿಂದ ಕೂಡಿದೆ. ಚಳಿಗಾಲವು ಶೀತವಾಗಿದ್ದರೆ ಬೇಸಿಗೆಯು ಬೆಚ್ಚಗಿದೆ ಮತ್ತು ಸಾಮಾನ್ಯವಾಗಿ ಮಳೆಯನ್ನು ಪಡೆಯುತ್ತದೆ ಇಲ್ಲಿ ಕಂಡುಬರುವ ಮರಗಳು ನಿರ್ದಿಷ್ಟ ಪಡಿಸಿದ ಅವಧಿಯಲ್ಲಿ ತಮ್ಮ ಎಲೆಗಳನ್ನು ಉದುರಿಸಿಕೊಳ್ಳುತ್ತವೆ. ಉದಾ: ಸೈಪ್ರಸ್, ಓಕ್, ಆಶ್ ಮತ್ತು ಚೆಸ್ಟ್‍ನಟ್‍ಗಳು. ಇಲ್ಲಿ ಕಂಡುಬರುವ ವನ್ಯಜೀವಿಗಳೆಂದರೆ ಬೀವರ್, ಕಪ್ಪುಕರಡಿ, ಹಿಮಇಲಿ ಮತ್ತು ಮುಳ್ಳುಹಂದಿ.
ತಂಪಾದ ಸಮಶೀತೋಷ್ಣವಲಯದ ವಾಯುಗುಣವನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಭಾಗಗಳಲ್ಲಿ ಕಾಣಬಹುದಾಗಿದೆ. ರಾಕೀ ಪರ್ವತಗಳು ಮತ್ತು ಮಿಸಿಸಿಪ್ಪಿ- ಮಿಸ್ಸೋರಿ ಬಯಲುಗಳ ಮಧ್ಯೆ ವಿಶಾಲವಾದ ಹುಲ್ಲುಗಾವಲು ಪ್ರದೇಶವಿದೆ. ಇದನ್ನು ಪ್ರೈರೀಸ್ ಎಂತಲೂ ಕರೆಯಲಾಗುತ್ತದೆ. ಇದು ವಾಸ್ತವವಾಗಿ ವಿಶಾಲವಾದ ವೃಕ್ಷರಹಿತ ಪ್ರದೇಶವಾಗಿದೆ. ಈ ಮೈದಾನ ಪ್ರದೇಶವು ಗೋಧಿ ಬೇಸಾಯ ಮತ್ತು ಪಶುಸಂಗೋಪನೆಗೆ ಹೆಸರುವಾಸಿಯಾಗಿದೆ. ಇದನ್ನು ಪ್ರಪಂಚದ ಗೋಧಿಯ ಕಣಜ ಅಥವಾ `ರೊಟ್ಟಿಯ ಬುಟ್ಟಿ’ ಎಂದು ಕರೆಯುತ್ತಾರೆ.
ಸೂಚಿಪರ್ಣ ಮತ್ತು ಎಲೆ ಉದುರಿಸುವ ಮರಗಳು ಸಮಶೀತೋಷ್ಣ ಮಿಶ್ರ ಅರಣ್ಯಗಳಲ್ಲಿ ಕಂಡುಬರುತ್ತವೆ. ಕೆನಡ ಮತ್ತು ಉತ್ತರ ಕ್ಯಾಲಿಫೋರ್ನಿಯಗಳು ಅಂತಹ ಅರಣ್ಯಗಳನ್ನು ಹೊಂದಿವೆ. ಈ ಅರಣ್ಯ ಪ್ರದೇಶದಲ್ಲಿ ಕಂಡುಬರುವ ಪ್ರಮುಖ ಮರಗಳೆಂದರೆ ಬರ್ಚ್, ಬೀಚ್, ಮ್ಯಾಪಲ್, ಓಕ್ ಮುಂತಾದವುಗಳು.
ಕೆನಡ ಸರೋವರಗಳಿಂದ ಕೂಡಿದ ದೇಶ. ವಿರಳ ಜನಸಂಖ್ಯೆ ಹಾಗೂ ಅಪಾರ ಟೈಗಾ ಮಾದರಿಯ ಕಾಡುಗಳನ್ನು ಹೊಂದಿದೆ. ಪ್ರಪಂಚದ ಅತ್ಯಧಿಕ ಮರದ ರಫ್ತು ಇಲ್ಲಿಂದಾಗುತ್ತದೆ.
ಮೆಕ್ಸಿಕೊದ ದಕ್ಷಿಣ ಭಾಗ ಮತ್ತು ವೆಸ್ಟ್ ಇಂಡಿಸ್ ಪ್ರದೇಶವು ಉಷ್ಣವಲಯದ ಅರಣ್ಯಗಳನ್ನು ಹೊಂದಿದೆ. ಇಲ್ಲಿ ಗಟ್ಟಿಮರಗಳಾದ ಮಹಾಗನಿ ಮತ್ತು ಲಾಗ್‍ವುಡ್‍ಗಳನ್ನು ಒಳಗೊಂಡಂತಿರುವ ಮಿಶ್ರ ಅರಣ್ಯಗಳನ್ನು ಕಾಣಬಹುದು.
ಕ್ಯಾಲಿಫೋರ್ನಿಯದ ಪಶ್ಚಿಮ ಕರಾವಳಿಯು ಮೆಡಿಟರೇನಿಯನ್ ವಿಧದ ವಾಯುಗುಣ ಹೊಂದಿದೆ. ದೀರ್ಘ ಬೇಸಿಗೆ ಬರಪರಿಸ್ಥಿತಿಗೆ ನೈಜವಾಗಿ ಹೊಂದಿಕೊಳ್ಳಬಲ್ಲ ಸಸ್ಯವರ್ಗವಿದೆ. ಇಲ್ಲಿ ಆಲಿವ್, ಓಕ್, ಕಾರ್ಕ್ ಮುಂತಾದ ಮರಗಳು ಬೆಳೆಯುತ್ತವೆ. ಈ ಪ್ರದೇಶವು ಹುಳಿಹಣ್ಣು (ಕಿತ್ತಳೆ) ಬೇಸಾಯಕ್ಕೆ ಪ್ರಸಿದ್ಧಿ. ದಕ್ಷಿಣ ಕ್ಯಾಲಿಫೋರ್ನಿಯ, ಮೆಕ್ಸಿಕೊ ಮತ್ತು ಅರಿಝೋನಗಳಲ್ಲಿ ಈ ಖಂಡದ ಪಶ್ಚಿಮ ಭಾಗದ ಮರುಭೂಮಿಯಂತಹ (ಶುಷ್ಕ) ಪರಿಸ್ಥಿತಿಯನ್ನು ಕಾಣಬಹುದಾಗಿದೆ. ವಿವಿಧ ರೀತಿಯ ಪಾಪಾಸು ಕಳ್ಳಿ ಮತ್ತು ಮುಳ್ಳಿನ ಪೊದೆಗಳು ಇಲ್ಲಿ ಸರ್ವೇಸಾಮಾನ್ಯ. ಇಲ್ಲಿನ ಮರುಭೂಮಿಯ ರಾತ್ರಿಗಳನ್ನು `ಮರುಭೂಮಿಗಳ ಚಳಿಗಾಲ’ವೆಂದು ಕರೆಯಲಾಗಿದೆ.
4 ಕೃಷಿ :
ಕೃಷಿಯು ಉತ್ತರ ಅಮೆರಿಕದ ಒಂದು ಪ್ರಮುಖವಾದ ಕಸಬಾಗಿದೆ. ಈ ಖಂಡದ ಕೇಂದ್ರೀಯ ತಗ್ಗು ಪ್ರದೇಶಗಳಾದ ಅದರಲ್ಲೂ ವಿಶೇಷವಾಗಿ ಕೆನಡ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಅತ್ಯಧಿಕ ಕೃಷಿ ಉತ್ಪನ್ನ ರಾಷ್ಟ್ರಗಳಾಗಿವೆ. ಉತ್ತರ ಅಮೆರಿಕದ ಒಟ್ಟು ಭೂಭಾಗದಲ್ಲಿನ ಶೇ.10ರಷ್ಟು ಪ್ರದೇಶವು ಮಾತ್ರ ಕೃಷಿಗೆ ಸೂಕ್ತವಾಗಿದೆ. ಆದರೆ ಆ ಕೃಷಿಕ್ಷೇತ್ರಗಳಿಂದ ಬರುತ್ತಿರುವ ಉತ್ಪನ್ನ ಅತಿ ಹೆಚ್ಚು ಏಕೆಂದರೆ ವಿಸ್ತಾರವಾದ ಭೂಹಿಡುವಳಿ, ಫಲವತ್ತಾದ ಮಣ್ಣು, ಸಾಕಷ್ಟು ನೀರಾವರಿ, ಯಾಂತ್ರಿಕ ಬೇಸಾಯ ಹಾಗೂ ಇತರ ಸೌಲಭ್ಯಗಳ ಜೊತೆಗೆ ಮಾನವನ ಪೂರ್ಣ ಶ್ರಮವಿರುವುದರಿಂದ ಉತ್ತರ ಅಮೆರಿಕವನ್ನು ವಿಶ್ವದ ಅತಿದೊಡ್ಡ ಕೃಷಿಪ್ರದೇಶವಾಗಿ ಪರಿಣಮಿಸಿದೆ.
ವಿಶಿಷ್ಟ ಬೆಳೆಗಳ ಉತ್ಪಾದನೆಯಲ್ಲಿ ವಿಶಿಷ್ಟತೆಯನ್ನು ಹೊಂದಿರುವ ಪ್ರಾಂತ್ಯಗಳನ್ನು ಬೆಳೆಪಟ್ಟಿ ಎಂದು ಕರೆಯಲಾಗಿದೆ. ಉದಾ: ಕಾರ್ನ್‍ಪಟ್ಟಿ, ಗೋಧಿಪಟ್ಟಿ, ಹತ್ತಿಪಟ್ಟಿ, ತಂಬಾಕುಪಟ್ಟಿ ಇತ್ಯಾದಿ.
ಉತ್ತರ ಅಮೆರಿಕ ಅದರಲ್ಲೂ ವಿಶೇಷವಾಗಿ ಕೆನಡ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಗೋಧಿಯನ್ನು ಒಂದು ಪ್ರಮುಖ ಆಹಾರ ಧಾನ್ಯವನ್ನಾಗಿ ಬೆಳೆಯುತ್ತಿವೆ. ಪ್ರೆøರೀಪ್ರದೇಶವು ಗೋಧಿ ಬೇಸಾಯಕ್ಕೆ ಸೂಕ್ತ ಮಣ್ಣನ್ನು ಒದಗಿಸಿದೆ. ಇಲ್ಲಿನ ಜನಸಂಖ್ಯೆಯು ಕಡಿಮೆಯಿದ್ದು, ಅಪಾರ ಪ್ರಮಾಣದ ಉತ್ಪಾದನೆ ಇರುವುದರಿಂದ ಅದನ್ನು ರಫ್ತು ಮಾಡಲಾಗುತ್ತಿದೆ. ಮೆಕ್ಕೆಜೋಳವು ಕಾರ್ನ್ ಎಂದು ಪ್ರಖ್ಯಾತಿಪಡೆದಿದೆ. ಅದನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಮೆಕ್ಸಿಕೊಗಳಲ್ಲಿ ವಿಶಾಲ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಬಹುತೇಕ ಪ್ರಮಾಣದ ಮೆಕ್ಕೆ ಜೋಳವನ್ನು ಹಸು ಮತ್ತು ಹಂದಿಗಳ ಮೇವಿಗಾಗಿ ಉಪಯೋಗಿಸಲಾಗುತ್ತದೆ. ಇವುಗಳನ್ನು ಮೆಕ್ಸಿಕೊದಲ್ಲಿ ಮಾಂಸಕ್ಕಾಗಿ ಸಾಕಲಾಗುತ್ತದೆ. ಇದೊಂದು ಆಹಾರ ಧಾನ್ಯವಾಗಿದೆ. ಆದರೆ ಇಂದು ಮೆಕ್ಕೆಜೋಳವು ಇಂಧನ ಬೆಳೆಯಾಗಿ ಬೆಳೆಯಲಾಗುತ್ತಿದೆ.
ಇತರ ಪ್ರಧಾನ ಬೆಳೆಗಳೆಂದರೆ ಬಾರ್ಲಿ, ಓಟ್ಸ್ ಮತ್ತು ಆಲೂಗಡ್ಡೆಗಳಾಗಿವೆ. ಬಾರ್ಲಿ ಮತ್ತು ಓಟ್ಸ್‍ಗಳನ್ನು ಚಳಿಗಾಲದಲ್ಲಿ ಬೆಳೆಯಬಹುದು. ಬಾರ್ಲಿಯನ್ನು ಬಿಯರ್ (beeಡಿ) ತಯಾರಿಕೆಗೆ ಬಳಸಲಾಗುತ್ತದೆ. ಓಟ್ಸನ್ನು ಪ್ರಾಣಿಗಳ ಮೇವುಗಳಿಗಾಗಿ ಉಪಯೋಗಿಸಲಾಗುತ್ತದೆ. ಈ ಖಂಡದಲ್ಲಿ ಆಲೂಗಡ್ಡೆಯನ್ನು ಸಹ ಬೆಳೆಯಲಾಗುತ್ತಿದ್ದು ಇದು ಪ್ರಮುಖ ಆಹಾರ ಬೆಳೆಯಾಗಿದೆ.
ಉತ್ತರ ಅಮೆರಿಕದಲ್ಲಿ ಹತ್ತಿ ಮತ್ತು ತಂಬಾಕುಗಳನ್ನು ವಾಣಿಜ್ಯ ಬೆಳೆಗಳನ್ನಾಗಿ ದಕ್ಷಿಣ ಭಾಗಗಳಲ್ಲಿ ಬೆಳೆಯಲಾಗುತ್ತಿದೆ. ಮಿಸಿಸಿಪ್ಪಿ ನದಿಯ ಕಣಿವೆಯುದ್ದಕ್ಕೂ ಹತ್ತಿ ಪ್ರದೇಶವು ಕಂಡುಬರುತ್ತದೆ. ಯು. ಎಸ್.ಎ ಮತ್ತು ಮೆಕ್ಸಿಕೊ ದೇಶಗಳಲ್ಲಿ ಉದ್ದ ಎಳೆಯ ಹತ್ತಿಯನ್ನು ಉತ್ಪಾದಿಸಲಾಗುತ್ತದೆ. ದಕ್ಷಿಣ ಯು.ಎಸ್.ಎ, ಕ್ಯೂಬ, ಜಮೈಕ ಮತ್ತು ಮೆಕ್ಸಿಕೊಗಳಲ್ಲಿ ತಂಬಾಕು ಬೆಳೆಯಲಾಗುತ್ತದೆ. ಅಮೆರಿಕ ತಂಬಾಕು ಬೆಳೆಯುತ್ತಿರುವ ವಿಶ್ವದ ರಾಷ್ಟ್ರಗಳಲ್ಲಿ ಚೀನದ ನಂತರ ಎರಡನೇ ಸ್ಥಾನದಲ್ಲಿದೆ.
ಕಬ್ಬು ಇಲ್ಲಿ ಬೆಳೆಯುತ್ತಿರುವ ಮತ್ತೊಂದು ಪ್ರಮುಖ ಬೆಳೆಯಾಗಿದೆ. ಕ್ಯೂಬಾ ವಿಶ್ವದಲ್ಲಿ ಸಕ್ಕರೆ ಉತ್ಪಾದನೆಯ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿರುವುದರಿಂದಲೇ ಇದನ್ನು `ಜಗತ್ತಿನ ಸಕ್ಕರೆ ಬೋಗುಣಿ’ ಎಂದು ಕರೆಯಲಾಗಿದೆ. ಯು.ಎಸ್.ಎದಲ್ಲಿ ಶುಗರ್ ಬೀಟ್‍ನ್ನೂ ಸಹ ಬೆಳೆಯಲಾಗುತ್ತದೆ. ಇದು ಸಕ್ಕರೆ ತಯಾರಿಕೆಗೆ ಕಬ್ಬಿನ ತರುವಾಯ ಪ್ರಮುಖ ಮೂಲವಾಗಿದೆ.
ಕಾಫಿ ಮತ್ತು ಕೋಕೊಗಳು ಉಷ್ಣವಲಯದ ತೋಟಗಾರಿಕಾ ಬೆಳೆಯಾಗಿದ್ದು, ಇವುಗಳನ್ನು ಅಮೆರಿಕದ ಕೇಂದ್ರಭಾಗಗಳು ಮತ್ತು ವೆಸ್ಟ್ ಇಂಡಿಸ್‍ಗಳಲ್ಲಿ ಬೆಳೆಯಲಾಗುತ್ತಿದೆ. ಕ್ಯಾಲಿಫೋರ್ನಿಯ, ಪ್ಲಾರಿಡಾ, ನ್ಯೂಜೆರ್ಸಿ ಮತ್ತು ನಗರ ಕೇಂದ್ರಗಳ ಸುತ್ತಲಿನ ಪ್ರದೇಶಗಳಲ್ಲಿ ದ್ರಾಕ್ಷಿ, ಕಿತ್ತಳೆ, ನಿಂಬೆ (ಲಿಂಬೆ), ಸೇಬು, ಸೀಬೆ, ಪೀಚ್ ಇತ್ಯಾದಿ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಕ್ಯಾಲಿಫೋರ್ನಿಯವು ಉತ್ತರ ಅಮೆರಿಕದ ಶೇ.90ರಷ್ಟು ದ್ರಾಕ್ಷಿಯನ್ನು ಬಳಸಿ ದ್ರಾಕ್ಷಾರಸ ಉತ್ಪಾದಿಸುತ್ತದೆ. ಆದುದರಿಂದ ಕ್ಯಾಲಿಫೋರ್ನಿಯವನ್ನು `ದ್ರಾಕ್ಷಾರಸದ ನಾಡು’ ಎಂದು ಕರೆಯಲಾಗಿದೆ.
ಉತ್ತರ ಅಮೆರಿಕ ಖಂಡದ ಈಶಾನ್ಯ ಭಾಗದ ಅಂಟ್ಲಾಂಟಿಕ್ ಸಾಗರ ತೀರದಲ್ಲಿ ಗ್ರ್ಯಾಂಡ್ ಬ್ಯಾಂಕ್‍ಗಳು, ನ್ಯೂಇಂಗ್ಲೆಂಡಿನ ಜಾರ್ಜಸ್ ಬ್ಯಾಂಕ್‍ಗಳು ಮತ್ತು ನ್ಯೂಫೌಂಡ್ ಲ್ಯಾಂಡ್ ಕರಾವಳಿಗಳ ಆಳವಿಲ್ಲದ ಖಂಡಾವರಣ ಪ್ರದೇಶಗಳು ಹೆಸರಾಂತ ಮೀನುಗಾರಿಕಾ ಪ್ರದೇಶಗಳಾಗಿವೆ.
5) ಪ್ರಮುಖ ಖನಿಜಗಳು ಮತ್ತು ಕೈಗಾರಿಕೆಗಳು :-
ಉತ್ತರ ಅಮೆರಿಕವು ಅಪಾರ ಸಂಪನ್ಮೂಲಗಳ ಕೊಡುಗೆಗೆ ಒಳಗಾಗಿದೆ. ಅದರ ನೈಸರ್ಗಿಕ ಸಂಪನ್ಮೂಲಗಳೆಂದರೆ ವೈವಿಧ್ಯಮಯ ಮಣ್ಣುಗಳು, ವಿಸ್ತಾರವಾದ ಹುಲ್ಲುಗಾವಲು, ಖನಿಜ, ಶಕ್ತಿ ಸಂಪನ್ಮೂಲಗಳು ಮತ್ತು ಅರಣ್ಯ ಸಂಪತ್ತುಗಳಾಗಿದೆ.
ಉತ್ತರ ಅಮೆರಿಕ ಭೂಖಂಡವು ವಿವಿಧ ಬೆಲೆಬಾಳುವ ಖನಿಜಗಳ ಅಧಿಕ ನಿಕ್ಷೇಪವನ್ನು ಹೊಂದಿದೆ. ಇಲ್ಲಿರುವ ಚಿನ್ನದ ನಿಕ್ಷೇಪವು ಜನರನ್ನು ಈ ಖಂಡಕ್ಕೆ ಬಹು ಹಿಂದೆಯೇ ಆಕರ್ಷಿಸಿದೆ. ಇದಲ್ಲದೆ ಕಬ್ಬಿಣದ ಅದಿರು, ತಾಮ್ರ, ನಿಕಲ್, ಬೆಳ್ಳಿ ಮತ್ತು ಸತುಗಳು ಇತರ ಪ್ರಮುಖವಾದ ಖನಿಜ ನಿಕ್ಷೇಪಗಳಾಗಿವೆ. ಈ ಖಂಡವು ಸಾಕಷ್ಟು ಪ್ರಮಾಣದ ಕಲ್ಲಿದ್ದಲು, ಕಲ್ಲೆಣ್ಣೆ ಮತ್ತು ನೈಸರ್ಗಿಕ ಅನಿಲಗಳನ್ನು ಹೊಂದಿದೆ.
ಉತ್ತರ ಅಮೆರಿಕದಲ್ಲಿ ಪ್ರಪ್ರಥಮ ಖನಿಜ ಗಣಿಯೆಂದರೆ ಚಿನ್ನದ ಗಣಿಯಾಗಿದೆ. ಕ್ಯಾಲಿಫೋರ್ನಿಯ ಮತ್ತು ಯೂಕಾನ್ ಕಣಿವೆಗಳು ಚಿನ್ನದ ಗಣಿಗಳ ಪ್ರಮುಖ ಪ್ರದೇಶಗಳಾಗಿವೆ. ಸುಪೀರಿಯರ್ ಸರೋವರ ಮತ್ತು ಅದನ್ನು ಸುತ್ತುವರಿದಿರುವ ಪ್ರದೇಶಗಳು ಅಪಾರ ಪ್ರಮಾಣದ ಕಬ್ಬಿಣದ ಅದಿರಿನ ನಿಕ್ಷೇಪಕ್ಕೆ ಪ್ರಖ್ಯಾತಿ ಪಡೆದಿವೆ. ಅತಿ ಉತ್ಕøಷ್ಟ ದರ್ಜೆಯ ಕಬ್ಬಿಣದ ಅದಿರನ್ನು ಕೆನಡಿಯನ್ ಭೂಫಲಕದಲ್ಲಿ ಮತ್ತು ಅದನ್ನು ಸುತ್ತುವರಿದ ಪ್ರದೇಶದಲ್ಲಿ ಕಾಣಬಹುದಾಗಿದೆ. ಮೆಕ್ಸಿಕೊ ವಿಶ್ವದ ಪ್ರಮುಖ ಬೆಳ್ಳಿ ಉತ್ಪಾದಿಸುತ್ತಿರುವ ರಾಷ್ಟ್ರವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದಲ್ಲಿ ಅತ್ಯಧಿಕ ತಾಮ್ರವನ್ನು ಉತ್ಪಾದಿಸುತ್ತಿರುವ ರಾಷ್ಟ್ರವಾಗಿದೆ. ಖಂಡದಾದ್ಯಂತ ಪಳೆಯುಳಿಕೆ ಇಂಧನಗಳು ಸಾಧಾರಣ ಪ್ರಮಾಣದಲ್ಲಿ ಹಂಚಿಕೆಯಾಗಿರುವುದು ಕಂಡುಬರುತ್ತದೆ.
ಉತ್ತರ ಅಮೆರಿಕವು ಇಲ್ಲಿನ ಅಪಲೇಷಿಯನ್ ಪ್ರದೇಶದಲ್ಲಿ ಉತ್ತಮ ದರ್ಜೆಯ ಕಲ್ಲಿದ್ದಲ್ಲಿನ ಅಧಿಕ ನಿಕ್ಷೇಪವನ್ನು ಹೊಂದಿದೆ. ಜಗತ್ತಿನ ಒಟ್ಟು ಕಲ್ಲಿದ್ದಲಿನ ಉತ್ಪಾದನೆಯಲ್ಲಿ ಶೇಕಡಾ 20ರಷ್ಟು ಪೆನ್ಸಿಲ್ವೇನಿಯಾ ಒಂದೇ ಉತ್ಪಾದಿಸುವುದು. ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದ ಅತ್ಯಧಿಕ ಕಲ್ಲಿದ್ದಲನ್ನು ರಫ್ತು ಮಾಡುತ್ತಿರುವ ದೇಶವಾಗಿದೆ. ಅಲಾಸ್ಕಾ, ಟೆಕ್ಸಾಸ್, ಲೂಷಿಯಾನ, ಕಾನ್ಸಾಸ್ ಮತ್ತು ಪಶ್ಚಿಮ ಕೆನಡಾದಲ್ಲಿ ಮತ್ತು ಮೆಕ್ಸಿಕೊದ ಕೆಲವು ಭಾಗಗಳಲ್ಲಿ ತೈಲ ಮತ್ತು ನೈಸರ್ಗಿಕ ಅನಿಲವಿರುವುದು ಕಂಡುಬಂದಿವೆ. ಪೆಸಿಫಿಕ್ ಮಹಾಸಾಗರದಂಚಿನ ಪ್ರದೇಶಗಳು ನೈಸರ್ಗಿಕ ಅನಿಲದ ಅಧಿಕ ನಿಕ್ಷೇಪವನ್ನು ಹೊಂದಿವೆ. ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಮುಖ ಪೆಟ್ರೋಲಿಯಂ ಉತ್ಪಾದಿಸುತ್ತಿರುವ ರಾಷ್ಟ್ರವಾಗಿದೆಯಲ್ಲದೆ ವಿಶ್ವದಲ್ಲಿ ಅಧಿಕ ಅಣುಶಕ್ತಿಯನ್ನು ಉತ್ಪಾದಿಸುತ್ತಿರುವ ದೇಶವೂ ಆಗಿದೆ.
ಉತ್ತರ ಅಮೆರಿಕದ ದೇಶಗಳಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಗಳು ಹೆಚ್ಚು ಕೈಗಾರಿಕೀಕರಣಕ್ಕೊಳಪಟ್ಟಿವೆ. ಇಲ್ಲಿ ಲಭ್ಯವಿರುವ ಕಬ್ಬಿಣದ ಅದಿರು, ಕಲ್ಲಿದ್ದಲು, ತಾಮ್ರ, ಬಾಕ್ಸೈಟ್‍ಗಳಂತಹ ಕಚ್ಚಾ ವಸ್ತುಗಳು ಭಾರಿ ಕೈಗಾರಿಕೆಗಳಿಗೆ ಸಹಾಯಕವಾಗಿವೆ. ಶಕ್ತಿ, ಸಾರಿಗೆ ಮತ್ತು ಆಧುನಿಕ ತಾಂತ್ರಿಕತೆಗಳ ಲಭ್ಯತೆಯು ವಿಸ್ತøತ ಕೈಗಾರಿಕೀಕರಣಕ್ಕೆ ಕಾರಣವಾಗಿದೆ.
ಐರಿ, ಸುಪೀರಿಯರ್ ಮತ್ತು ಮಿಚಿಗನ್ ಸರೋವರಗಳ ಪ್ರದೇಶಗಳಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ಉತ್ತಮವಾಗಿ ಅಭಿವೃದ್ಧಿಗೊಂಡಿರುವುದನ್ನು ಕಾಣಬಹುದು. ಇದಕ್ಕೆ ಇಲ್ಲಿನ ಕಚ್ಚಾವಸ್ತು ಮತ್ತು ಜಲಸಾರಿಗೆಗಳು ಸಹಾಯಕವಾಗಿವೆ. ಯು.ಎಸ್.ಎದಲ್ಲಿ ಅನುಕೂಲಕರವಾದ ಕೈಗಾರಿಕಾ ನೀತಿಯು ಕೈಗಾರಿಕೆಗಳ ಬೆಳವಣಿಗೆಗೆ ಸಹಾಯಕವಾಗಿದೆ. ಇಲ್ಲಿನ ಪಿಟ್ಸ್‍ಬರ್ಗ್ ನಗರವನ್ನು `ಉಕ್ಕಿನ ನಗರ’ ಎಂದು ಕರೆಯಲಾಗಿದೆ. ಇದಕ್ಕೆ ಕಾರಣ ಅಪಲೇಷಿಯನ್ ಪ್ರದೇಶದಲ್ಲಿ ದೊರೆಯುವ ಸಂಪದ್ಭರಿತವಾದ ಕಲ್ಲಿದ್ದಲು ನಿಕ್ಷೇಪಗಳು, ಜಲವಿದ್ಯುಚ್ಛಕ್ತಿ ಮತ್ತು ಬೃಹತ್ ಪ್ರಮಾಣದ ಸರಕುಗಳನ್ನು ಸಾಗಿಸಲು ಉತ್ತಮ ಸಾರಿಗೆ ಸೌಲಭ್ಯವಿರುವುದು. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯು ಮೂಲ ಕೈಗಾರಿಕೆಯಾದ್ದರಿಂದ ಇದು ಇತರ ಕೈಗಾರಿಕೆಗಳಾದ ಆಟೋಮೊಬೈಲ್, ಹಡಗು ನಿರ್ಮಾಣ, ಲೋಕೋಮೋಟೀವ್ಸ್, ಭಾರಿ ಇಂಜಿನಿಯರಿಂಗ್, ವಿಮಾನ ನಿರ್ಮಾಣ ಮುಂತಾದ ಕೈಗಾರಿಕೆಗಳ ಅಭಿವೃದ್ಧಿಗೆ ಸಹಾಯಕವಾಗಿದೆ.
ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಗಳಲ್ಲಿ ಮೃದು ಮರಗಳನ್ನು ಕಾಗದ, ಕಾರ್ಡ್‍ಬೋರ್ಡ್ ಮತ್ತು ನ್ಯೂಸ್‍ಪ್ರಿಂಟ್‍ಕಾಗದಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಮರದ ತಿರುಳನ್ನು ಕೃತಕ ನಾರು ತಯಾರಿಕೆಯಲ್ಲಿ ಬಳಸುವರು. ಕಾಗದ, ಮರದ ತಿರುಳು ಮತ್ತು ನ್ಯೂಸ್‍ಪ್ರಿಂಟ್‍ಕಾಗದಗಳ ರಫ್ತಿನಲ್ಲಿ ಕೆನಡವು ಅತಿ ಪ್ರಮುಖ ರಾಷ್ಟ್ರವಾಗಿದೆ. ಮರಕಡಿಯುವಿಕೆ ಉತ್ತರ ಅಮೆರಿಕದಲ್ಲಿ ಉತ್ತಮ ಸಂಘಟಿತ ವೃತ್ತಿಯಾಗಿದೆ. ಕೆನಡದಲ್ಲಿ ಮರಕಡಿಯುವ ವೃತ್ತಿಯನ್ನು ಅವಲಂಬಿಸಿರುವ ಜನರನ್ನು ಲಂಬರ್ ಜಾಕ್ಸ್ ಎಂದು ಕರೆಯಲಾಗುತ್ತದೆ. ರಾಸಾಯನಿಕ ಕೈಗಾರಿಕೆಯು ಕೃತಕ ರಬ್ಬರ್, ಪ್ಲಾಸ್ಟಿಕ್, ರಸಗೊಬ್ಬರಗಳು ಮತ್ತು ಔಷಧಿಗಳಂತಹ ವಿಭಿನ್ನ ವಸ್ತುಗಳನ್ನು ಉತ್ಪಾದಿಸುತ್ತದೆ. ಈಗ ಮರದ ಬದಲಾಗಿ ಪ್ಲಾಸ್ಟಿಕ್‍ನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಎಲ್ಲಾ ಭಾಗಗಳಲ್ಲಿಯೂ ಪ್ಲಾಸ್ಟಿಕ್‍ನ್ನು ತಯಾರಿಸಲಾಗುತ್ತಿದೆ. ಚಿಕಾಗೊ ನಗರವು ಪ್ಲಾಸ್ಟಿಕ್ ಕೈಗಾರಿಕೆಗೆ ಹೆಸರುವಾಸಿಯಾಗಿದೆ.
ಮಾಂಸವನ್ನು ಡಬ್ಬಿಗಳಲ್ಲಿ ತುಂಬುವುದು ಒಂದು ಪ್ರಮುಖ ಕೈಗಾರಿಕೆಯಾಗಿದ್ದು, ಅಸಂಖ್ಯಾತ ಕೇಂದ್ರಗಳಲ್ಲಿ ಮುಖ್ಯವಾಗಿ ಚಿಕಾಗೊ, ಕಾನ್ಸಾಸ್ ನಗರ ಮತ್ತು ಸೆಂಟ್ ಲೂಯಿಸ್‍ಗಳಲ್ಲಿ ವಿಸ್ತøತವಾಗಿ ಹರಡಿದೆ. ವಿದ್ಯುತ್ ಮತ್ತು ವಿದ್ಯುನ್ಮಾನ ವಸ್ತುಗಳು ಸಹ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತವೆ. ಹಲವು ಕೈಗಾರಿಕಾ ಉತ್ಪನ್ನಗಳು ಮತ್ತು ಯಂತ್ರಗಳು ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡ ರಾಷ್ಟ್ರಗಳಿಂದ ರಫ್ತಾಗುತ್ತವೆ. ಕೇಂದ್ರ ಅಮೆರಿಕಾದ ಮೆಕ್ಸಿಕೊ ಮತ್ತು ಇತರ ರಾಷ್ಟ್ರಗಳು ಕೈಗಾರಿಕಾಭಿವೃದ್ಧಿಯಲ್ಲಿ ಹಿಂದುಳಿದಿವೆ. ಸಾಮಾನ್ಯವಾಗಿ ಇವು ಚಿಕ್ಕ ರಾಷ್ಟ್ರಗಳಾಗಿವೆ ಮತು ಕೈಗಾರಿಕೆಗಳ ಬೆಳವಣಿಗೆಗೆ ಬೇಕಾಗುವಂತ ಶಕ್ತಿ ಸಂಪನ್ಮೂಲಗಳು ಮತ್ತು ಕಚ್ಚಾವಸ್ತುಗಳು ಹೆಚ್ಚು ಪ್ರಮಾಣದಲ್ಲಿರುವುದಿಲ್ಲ.
6) ಜನಸಂಖ್ಯೆ
ಬಹುತೇಕ ಉತ್ತರ ಅಮೆರಿಕನ್ನರು ಯುರೋಪಿಯನ್ನರು, ಅಮೆರಿಕನ್ ಇಂಡಿಯನ್ಸ್ ಮತ್ತು ಆಫ್ರಿಕನ್ನರಾಗಿದ್ದಾರೆ. ಅವರಲ್ಲಿ ಬಹುತೇಕ ಜನರು ಸ್ಪ್ಯಾನಿಷ್, ಇಂಗ್ಲೀಷ್, ಫ್ರೆಂಚ್ ಅಥವಾ ಅಮೆರಿಕನ್ ಇಂಡಿಯನ್ ಭಾಷೆಗಳನ್ನು ಮಾತನಾಡುತ್ತಾರೆ.
ಉತ್ತರ ಅಮೆರಿಕದ ಪೂರ್ವಭಾಗಗಳಲ್ಲಿ ಅತಿ ಹೆಚ್ಚಿನ ಜನಸಾಂದ್ರತೆಯನ್ನು ಕಾಣಬಹುದು. ಇಲ್ಲಿ ಹೆಚ್ಚಿನ ನಗರೀಕರಣವಿದೆ. ಉದಾ : ನ್ಯೂಯಾರ್ಕ್, ವಾಷಿಂಗ್‍ಟನ್, ಚಿಕಾಗೊ ಇತ್ಯಾದಿ. ಆದರೆ ಖಂಡದ ಬಹುತೇಕ ಉತ್ತರ ಭಾಗವು ಸಾಮಾನ್ಯವಾಗಿ ಹೆಚ್ಚು ಹಿಮಾವೃತದಿಂದ ಕೂಡಿರುವುದರಿಂದ ಖಾಲಿ ಲಕ್ಷಣದಿಂದ ಕೂಡಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದ ನಗರ ಕೇಂದ್ರಗಳು ಮತ್ತು ಕೈಗಾರಿಕಾ ಪ್ರದೇಶಗಳು ಅಧಿಕ ಜನಸಾಂದ್ರತೆಯ ಪ್ರದೇಶಗಳಾಗಿವೆ. ಉತ್ತರ ಅಮೆರಿಕದ ಶೇ.98ರಷ್ಟು ಜನಸಂಖ್ಯೆಯು ನಗರ ಜನಸಂಖ್ಯೆಯಾಗಿದೆ
ವಿಡಿಯೋ ಪಾಠಗಳು
ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು
ಪ್ರಶ್ನೋತ್ತರಗಳು
.