ಸುಳ್ಳು ಹೇಳಬಾರದು – ಪಾಠ-4

ಬೊಳುವಾರು ಮಹಮ್ಮದ್ ಕುಂಞ

ಪ್ರವೇಶ : ಎಳೆಯವರಿದ್ದಾಗ ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಸುಳ್ಳು ಹೇಳಿಯೇ ಹೇಳುತ್ತಾರೆ. ಮಹಾತ್ಮಾಗಾಂಧಿ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಗಾಂಧೀಜಿಯವರ ಬದುಕಿನಲ್ಲಿ ನಡೆದ ಘಟನೆಯೊಂದು ಮುಂದೆ ಅವರನ್ನು ಸುಳ್ಳು ಹೇಳದಂತೆ ಮಾಡಿತು. ಸರಿಯಾದ ಮಾರ್ಗದರ್ಶನ ಸಿಗಬೇಕಾದ ಸಂದರ್ಭದಲ್ಲಿ ಸಿಕ್ಕಿದರೆ ಎಂಥವರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೆ ಎಂಬುದು ಈ ಪಾಠದ ಆಶಯವಾಗಿದೆ.

ಮಹಾತ್ಮ ಗಾಂಧೀಜಿಯವರು ಮಗುವಾಗಿ ಇದ್ದ ದಿನಗಳಲ್ಲಿ ಎಲ್ಲರೂ ಅವರನ್ನು ‘ಮೋನು ಪಾಪು’ ಎಂದು ಕರೆಯುತ್ತಿದ್ದರು. ಮೋನು ಪಾಪುವಿನ ಅಮ್ಮನ ಹೆಸರು ಪುತಲೀಬಾಯಿ.

ಪ್ರತೀ ವರ್ಷವೂ ಮಳೆಗಾಲದ ನಂತರ ಬರುವ ‘ಚಾತುರ್ಮಾಸ’ದಲ್ಲಿ ಅವಳು ಉಪವಾಸ ವ್ರತವನ್ನು ನಿಷ್ಠೆಯಿಂದ ಆಚರಿಸುತ್ತಿದ್ದಳು. ಎಷ್ಟೇ ಕಷ್ಟವಾದರೂ ವ್ರತದ ನಿಯಮದಂತೆ ಸೂರ್ಯೋದಯವಾಗುವುದನ್ನು ಕಣ್ಣಾರೆ ನೋಡದೆ ಊಟ ಮಾಡುತ್ತಿರಲಿಲ್ಲ.

ಅಂತಹ ವ್ರತದ ದಿನಗಳಲ್ಲಿ ಅಮ್ಮ ಬೇಗನೇ ಊಟ ಮಾಡಬೇಕೆಂದು ಮೋನು ಪಾಪು ಆಸೆಪಡುತ್ತಿದ್ದನು. ಅದಕ್ಕಾಗಿ ಮೋನು ಪಾಪು ಬೆಳಗ್ಗೆ ಬೇಗನೆ ಎದ್ದು, ಮನೆಯೆದುರು ಇದ್ದ ಎತ್ತರದ ಮಣ್ಣಿನ ದಿಣ್ಣೆಯನ್ನು ಏರಿ ನಿಂತು ಪೂರ್ವ ದಿಕ್ಕಿನಲ್ಲಿ ಉದಯಿಸುವ ಸೂರ್ಯನನ್ನು ಎಲ್ಲರಿಗಿಂತ ಮೊದಲು ನೋಡಿ, ಓಡಿ ಬಂದು ಅಮ್ಮನಿಗೆ ತಿಳಿಸುತ್ತಿದ್ದನು. ಆಗ ಅವನ ಅಮ್ಮ ಹೊರಗೆ ಅಂಗಳಕ್ಕೆ ಬಂದು, ಸೂರ್ಯನನ್ನು ಕಂಡು ಭಕ್ತಿಯಿಂದ ನಮಸ್ಕರಿಸಿ, ಆನಂತರ ಊಟ ಮಾಡುತ್ತಿದ್ದಳು. ಆಗ ಮೋನು ಪಾಪುವಿಗೆ ಸಂತೋಷವಾಗುತ್ತಿತ್ತು.

ಆದರೆ, ಕೆಲವು ದಿನಗಳಲ್ಲಿ ಉದಯಿಸುವ ಸೂರ್ಯನನ್ನು ಕಪ್ಪಾದ ಮೋಡಗಳು ಮರೆಮಾಡುತ್ತಿದ್ದುದರಿಂದ, ಸೂರ್ಯ ಕಾಣದೆ ಅಮ್ಮ ಉಪವಾಸವನ್ನು ಮುಂದುವರಿಸುತ್ತಿದ್ದಳು. ಅಂತಹ ದಿನಗಳಲ್ಲಿ ಹಸಿವಿನಿಂದ ಅಮ್ಮ ಕಷ್ಟ ಪಡುವುದು ಮೋನು ಪಾಪುವಿಗೆ ಬೇಸರವನ್ನುಂಟು ಮಾಡುತ್ತಿತ್ತು.

ಮೋನು ಪಾಪುವಿಗೆ ಐದು ವರ್ಷ ತುಂಬಿದ ದಿನ ಅವನಿಗೆ ಹೊಸಬಟ್ಟೆ ಹೊಲಿಸಿದ್ದರು. ಮನೆಯಲ್ಲಿ ಸಿಹಿ ಊಟ ತಯಾರಿಸಿದ್ದರು. ಮೋನು ಪಾಪು ಸಿಹಿ ಊಟ ಮಾಡಿ ಹೊಸ ಬಟ್ಟೆ ಧರಿಸುವ ಆತುರದಿಂದ ಇದ್ದನು. ಆದರೆ ಅಂದು ಮುಂಜಾನೆ ಅನಿರೀಕ್ಷಿತವಾಗಿ ಮಳೆ ಸುರಿದಿತ್ತು. ಪೂರ್ವ ದಿಕ್ಕಿನ ಆಕಾಶದಲ್ಲಿ ಕವಿದಿರುವ ಕಪ್ಪು ಮೋಡಗಳು ಸೂರ್ಯನನ್ನು ಮರೆ ಮಾಡಿದ್ದವು.

ಕಳೆದ ಎರಡು ದಿನಗಳಿಂದ ಜ್ವರ ಬರುತ್ತಿರುವ ಕಾರಣದಿಂದ ಅಮ್ಮ ಒಳಗಿನ ಕೋಣೆಯಲ್ಲಿ ಮಲಗಿದ್ದಳು. ಆದರೂ ವ್ರತದಲ್ಲಿರುವ ಅಮ್ಮ ಸೂರ್ಯನನ್ನು ನೋಡದೆ ಊಟ ಮಾಡಲು ಒಪ್ಪುವುದಿಲ್ಲ ಎಂಬುದು ಮೋನು ಪಾಪುವಿಗೆ ಗೊತ್ತಿತ್ತು. ಖಾಯಿಲೆಯಿಂದ ಮಲಗಿರುವ ಅಮ್ಮ ಉಪವಾಸದಲ್ಲಿರುವಾಗ ತಾನೊಬ್ಬನೇ ಸಿಹಿಯೂಟ ಮಾಡುವುದು ಮೋನು ಪಾಪುವಿಗೆ ಇಷ್ಟವಿರಲಿಲ್ಲ. ಹಿಂದಿನ ರಾತ್ರಿ ಅಮ್ಮನಿಗೆ ಕಷಾಯ ಕುಡಿಸಿ ಹೋಗಿದ್ದ ವ್ಯೆದ್ಯರು, ಸ್ವಲ್ಪವಾದರೂ ಊಟ ಮಾಡಲೇಬೇಕು ಎಂದು ಅಮ್ಮನಿಗೆ ಹೇಳಿದ್ದನ್ನು ಮೋನು ಪಾಪು ಕೇಳಿಸಿಕೊಂಡಿದ್ದನು.

ಮೋನು ಪಾಪುವಿಗೆ ಗೊತ್ತಿತ್ತು; ಯಾರು ಏನು ಹೇಳಿದರೂ ಪೂರ್ವ ದಿಕ್ಕಿನಲ್ಲಿ ಉದಯಿಸುವ ಸೂರ್ಯನನ್ನು ಕಣ್ಣಾರೆ ಕಾಣದೆ ಅಮ್ಮ ಊಟ ಮಾಡಲು ಒಪ್ಪವುದಿಲ್ಲ ಎಂದು. ಆದರೆ, ಸೂರ್ಯ ಉದಯಿಸುವುದನ್ನು ಕಾಣಲು ‘ಧೋ’ ಎಂದು ಸುರಿಯುತ್ತಿರುವ ಮಳೆ ನಿಂತು, ಕಪ್ಪು ಮೋಡಗಳು ಕರಗಬೇಕು; ಆಕಾಶ ತಿಳಿಯಾಗಿ ಕಾಣಿಸಬೇಕು.

ಆದರೆ ಮೋಡಗಳು ಕರಗುವ ಸೂಚನೆಗಳು ಕಾಣಿಸುತ್ತಿರಲಿಲ್ಲ. ಬೇಸರಗೊಂಡ ಮೋನು ಪಾಪು ಈ ವಿಷಯವನ್ನು ಅವನ ಅಕ್ಕ ರಲಿತಳ ಹತ್ತಿರ ಚರ್ಚೆ ಮಾಡಿದನು. ಅಮ್ಮ ಊಟ ಮಾಡುವಂತೆ ಅವರಿಬ್ಬರೂ ಒಂದು ಉಪಾಯ ಮಾಡಿದರು. ಇಬ್ಬರೂ ಅಂಗಳಕ್ಕೆ ಹೋದರು. ಮೋಡಗಳ ಮರೆಯಲ್ಲಿ ಸೂರ್ಯನು ಕಾಣುವುದು ಹೋಗಲಿ, ಸೂರ್ಯನ ಕಿರಣಗಳೂ ಕಾಣಿಸುತ್ತಿರಲಿಲ್ಲ. ಆದರೆ, ಮೊದಲೇ ನಿರ್ಧರಿಸಿದಂತೆ ಮನೆಯ ಜಗಲಿಯಲ್ಲಿ ನಿಂತು, ಒಳಮನೆಯಲ್ಲಿ ಇರುವ ಅಮ್ಮನಿಗೆ ಕೇಳಿಸುವಂತೆ “ಓಹ್! ಸೂರ್ಯ ಉದಯಿಸಿದ, ಸೂರ್ಯ ಕಾಣಿಸಿದ”! ಎಂದು ಸುಳ್ಳು ಸುಳ್ಳೇ ಕಿರುಚಿದರು. ಹಾಗೆಯೇ ಗಟ್ಟಿಯಾಗಿ ಹೇಳುತ್ತಾ ಒಳಗೆ ಓಡಿ ಹೋಗಿ ಅಮ್ಮನ ಎದುರು ನಿಂತುಬಿಟ್ಟರು. ಅಮ್ಮನಿಗೆ ತನ್ನ ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಾಗಿಬಿಟ್ಟಿತ್ತು. ಕಪ್ಪು ಬಣ್ಣದ ದಟ್ಟ ಮೋಡಗಳು ಕವಿದಿರುವ ಮುಂಜಾನೆಯಲ್ಲಿ ಉದಯಿಸುತ್ತಿರುವ ಸೂರ್ಯನನ್ನು ಕಾಣಲು ಸಾಧ್ಯವಿಲ್ಲ ಎಂಬುದು ಅವಳಿಗೆ ಗೊತ್ತಿತ್ತು. ತನ್ನ ಮಕ್ಕಳು ಸುಳ್ಳು ಹೇಳುತ್ತಿರುವುದನ್ನು ಕೇಳಿ ತುಂಬಾ ದುಃಖವಾಯಿತು.

ಅಮ್ಮ ಮಲಗಿದ್ದಲ್ಲಿಂದಲೇ ತಲೆಯೆತ್ತಿ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೋಪದಿಂದ ದಿಟ್ಟಿಸಿ, “ನೀವಿಬ್ಬರೂ ಉದಯಿಸುತ್ತಿರುವ ಸೂರ್ಯನನ್ನು ಕಂಡದ್ದು ನಿಜವೇ?” ಎಂದು ಪ್ರಶ್ನಿಸಿದಳು. ಖಾಯಿಲೆಯಿಂದ ಮಲಗಿರುವ ಅಮ್ಮ ಊಟ ಮಾಡುವುದು ತೀರಾ ಅಗತ್ಯ ಎಂದು ನಂಬಿದ್ದ ಇಬ್ಬರು ಮಕ್ಕಳೂ ‘ಹೌದು’ ಎಂದು ಸುಳ್ಳು ಹೇಳಿಬಿಟ್ಟರು. ತನ್ನ ಮಕ್ಕಳು ಮತ್ತೊಮ್ಮೆ ಸುಳ್ಳು ಹೇಳುತ್ತಿರುವುದನ್ನು ಕೇಳಿ ಅವಳಿಗೆ ಇನ್ನಷ್ಟು ದುಃಖ ಉಂಟಾಯಿತು.

ಅಮ್ಮ ನಿಧಾನವಾಗಿ ಮಂಚದಿಂದ ಎದ್ದು ಕುಳಿತಳು. ಅನಂತರ ತನ್ನ ಬಲಗೈಯನ್ನು ಮುಂದಕ್ಕೆ ಚಾಚಿ-”ನೋಡಿ ಮಕ್ಕಳೇ, ನಾನು ನನ್ನ ಬಲಗೈಯನ್ನು ಹೀಗೆ ಹಿಡಿದುಕೊಂಡು ಕಣ್ಣುಗಳನ್ನು ಮುಚ್ಚಿ ಕುಳಿತುಕೊಂಡಿರುತ್ತೇನೆ. ಸೂರ್ಯನನ್ನು ನೀವು ನೋಡಿದ್ದು ನಿಜವೇ ಆಗಿದ್ದರೆ, ನನ್ನ ಕೈಯನ್ನು ನೀವು ನಿಮ್ಮ ಬಲಗೈಯಲ್ಲಿ ಮುಟ್ಟಬೇಕು. ನೀವು ಹೇಳುತ್ತಿರುವುದು ಸುಳ್ಳಾಗಿದ್ದರೆ ನನ್ನ ಕೈಯನ್ನು ನಿಮ್ಮ ಎಡಗೈಯಲ್ಲಿ ಮುಟ್ಟಬೇಕು. ನೀವು ನಿಮ್ಮ ಯಾವ ಕೈಯಲ್ಲಿ ಮುಟ್ಟುತ್ತೀರಿ ಎಂಬುದು ನನಗೆ ಗೊತ್ತಾಗುವುದಿಲ್ಲ. ಆದರೆ, ನನ್ನ ಒಳ್ಳೆಯ ಮುದ್ದು ಮಕ್ಕಳು ಸುಳ್ಳು ಹೇಳಿ ನನ್ನನ್ನು ಮುಟ್ಟುವುದಿಲ್ಲ ಎಂದು ನಂಬಿದ್ದೇನೆ” ಎಂದು ಹೇಳಿ ಕಣ್ಣು ಮುಚ್ಚಿ ಕುಳಿತುಕೊಂಡಳು. ಮೋನು ಪಾಪು ಅಕ್ಕನ ಮುಖ ನೋಡಿದನು; ತಪ್ಪು ಮಾಡಿದವಳಂತೆ ಅವಳು ನಾಚಿಕೆಯಿಂದ ತಲೆ ತಗ್ಗಿಸಿ ನಿಂತಿದ್ದಳು. ಇಬ್ಬರಿಗೂ ತಮ್ಮ ತಪ್ಪಿನ ಅರಿವೂ ಆಗಿತ್ತು. ಇಷ್ಟು ಒಳ್ಳೆಯ ಅಮ್ಮನ ಬಳಿ ಸುಳ್ಳು ಹೇಳಿದ್ದಕ್ಕಾಗಿ ಅವರಿಬ್ಬರಿಗೂ ತುಂಬ ನಾಚಿಕೆ ಉಂಟಾಯಿತು. ಸುಳ್ಳು ಹೇಳಿ ಅಮ್ಮನ ಕೈ ಮುಟ್ಟಲು ಭಯವಾಯಿತು.

ಬಹಳ ಹೊತ್ತು ದಾಟಿದರೂ ತನ್ನ ಕೈಯನ್ನು ಯಾರೂ ಮುಟ್ಟಲು ಬಾರದಿದ್ದಾಗ, ಸುಳ್ಳು ಹೇಳಿದ್ದ ಮಕ್ಕಳು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ತಿಳಿಯಿತು. ಸಂತೋಷಪಟ್ಟ ಅಮ್ಮ ಕಣ್ಣು ತೆರೆದಳು. ಇಬ್ಬರು ಮಕ್ಕಳನ್ನೂ ಹತ್ತಿರಕ್ಕೆ ಕರೆದು ಅಪ್ಪಿಕೊಂಡು ಮುದ್ದು ಮಾಡಿದಳು. “ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು ಮಕ್ಕಳೇ” ಎಂದೂ ಹೇಳಿದಳು.

ಮೋನು ಪಾಪು ಅಂದೇ ಶಪಥ ಮಾಡಿದರು. “ಏನೇ ಕಷ್ಟ ಬಂದರೂ ಇನ್ನು ಮುಂದೆ ನಾನು ಸುಳ್ಳು ಹೇಳುವುದಿಲ್ಲ.”

ಕೃತಿಕಾರರ ಪರಿಚಯ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೊಳುವಾರು ಎಂಬಲ್ಲಿ 1951ರಲ್ಲಿ ಜನಿಸಿದ ಮಹಮ್ಮದ್ ಕುಂಞಿ ಅವರು ಬೆಂಗಳೂರಿನಲ್ಲಿರುವ ಸಿಂಡಿಕೇಟ್ ಬ್ಯಾಂಕಿನ ಕಛೇರಿಯಲ್ಲಿ ಮುಖ್ಯ ಪ್ರಬಂಧಕರಾಗಿದ್ದರು. ಮುಸ್ಲಿಂ ಸಂಸ್ಕೃತಿಯನ್ನು ಕನ್ನಡ ಸಾಹಿತ್ಯದ ಮೂಲಕ ಲೋಕಾರ್ಪಣೆ ಮಾಡಿದವರಲ್ಲಿ ಮೊದಲಿಗರು. ‘ದೇವರುಗಳ ರಾಜ್ಯದಲ್ಲಿ’, ‘ಆಕಾಶಕ್ಕೆ ನೀಲಿ ಪರದೆ’, ‘ಜಿಹಾದ್’, ‘ಸ್ವಾತಂತ್ರ್ಯದ ಓಟ’, ‘ಪಂಡಿತ ಫಕೀರ;, ‘ತಟ್ಟು ಚಪ್ಪಾಳೆ ಪುಟ್ಟ ಮಗು’, ‘ಕಲಾಂ ಮೇಸ್ಟ್ರು’ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಕಥಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಕಥಾಭಾಗವನ್ನು ಬೊಳುವಾರರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ‘ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ’ ಎಂಬ ಮಕ್ಕಳ ಕಾದಂಬರಿಯಿಂದ ಆಯ್ದುಕೊಳ್ಳಲಾಗಿದೆ.

ಪದಗಳ ಅರ್ಥ

ಅಪ್ಪಿ – ತಬ್ಬಿಕೊಂಡು, ಆಲಿಂಗನ ಮಾಡಿ.
ಉದಯಿಸು – ಹುಟ್ಟು, ಮೂಡು.
ಕವಿದಿರುವ – ಆವರಿಸಿರುವ, ಮರೆಮಾಡಿರುವ.
ಕಷಾಯ – ಔಷಧಿ, ಗಿಡಮೂಲಿಕೆಗಳನ್ನು ಭಟ್ಟಿ ಇಳಿಸಿ ತೆಗೆದ ರಸ.
ಕೆಂಬಣ್ಣ – ಕೆಂಪು ಬಣ್ಣ, ರಕ್ತವರ್ಣ.
ಚಾಚಿ – ನೀಡಿ, ಮುಂದೆ ಒಡ್ಡಿ.
ಚಾತುರ್ಮಾಸ – ನಾಲ್ಕು ತಿಂಗಳು, ನಾಲ್ಕು ತಿಂಗಳು ನಡೆಸುವ ವ್ರತ.
ದಟ್ಟ – ಸಾಂದ್ರವಾದ, ಮಂದವಾದ.
ದಿನ್ನೆ – ದಿಬ್ಬ, ಬೋರೆ, ತೆವರು.
ದುರುಗುಟ್ಟು – ನೆಟ್ಟಕಣ್ಣಿನಿಂದ ನೋಡು, ದಿಟ್ಟಿಸಿ ನೋಡು.
ಪರದೆ – ತೆರೆ, ಜವನಿಕೆ.
ಪಶ್ಚಾತ್ತಾಪ – ಮಾಡಿದ ತಪ್ಪು ಕೆಲಸಕ್ಕಾಗಿ ಮರುಗುವಿಕೆ.
ಪ್ರಸಿದ್ಧ – ಹೆಸರುವಾಸಿಯಾದ, ಖ್ಯಾತಿಹೊಂದಿದ.
ಮುಂಜಾನೆ – ಬೆಳಗಿನ ಜಾವ, ನಸುಕು.
ಮೀರಿ – ದಾಟಿ, ಮುಂದೆಹೋಗಿ.
ವ್ರತ – ನಿಯಮ, ನೋಂಪಿ.
ಸಂತೋಷ – ಹಿಗ್ಗು, ಆನಂದ.
ಶಪಥ – ಪ್ರತಿಜ್ಞೆ, ಆಣೆ.

ಸಂವೇದ ವಿಡಿಯೋ ಪಾಠಗಳು

Samveda – 5th – Kannada – Sullu Helabaaradu (Part 1 of 2)

Samveda – 5th – Kannada – Sullu Helabaaradu (Part 2 of 2)

ಪೂರಕ ವಿಡಿಯೋಗಳು

Sullu healabaradu | ಸುಳ್ಳು ಹೇಳಬಾರದು | ಪಾಠ ೪ | 5th standard kannada

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವ್ಯಾಕರಣ ಮಾಹಿತಿ

ಅ. ನಾಮಪದ

ವ್ಯಕ್ತಿ, ವಸ್ತು, ಸ್ಥಳ ಮತ್ತು ಪ್ರಾಣಿಗಳ ಹೆಸರುಗಳನ್ನು ಸೂಚಿಸುವ ಪದಗಳಿಗೆ ನಾಮಪದ ಎನ್ನುವರು.
ಉದಾಹರಣೆ : ಮಂಡ್ಯ, ತಿಮ್ಮಣ್ಣ, ಹುಲಿ, ಕಲ್ಲು ಇತ್ಯಾದಿ.

ಈ ಕೆಳಗೆ ಮೂರು ವಿಧದ ನಾಮಪದಗಳನ್ನು ಹೆಸರಿಸಲಾಗಿದೆ.

ರೂಢನಾಮ : ರೂಢಿಯಿಂದ ಬಂದ ಪದಗಳಿಗೆ ರೂಢನಾಮ ಎನ್ನುವರು.
ಉದಾ : ನದಿ, ಪರ್ವತ, ಹೆಂಗಸು, ಪಟ್ಟಣ, ದೇಶ, ಇತ್ಯಾದಿ.

ಅಂಕಿತನಾಮ : ಗುರುತಿಗಾಗಿ ಹಾಗೂ ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು.
ಉದಾ : ಕೂಡಲಸಂಗಮದೇವ, ಪುರಂದರವಿಠಲ, ಗಂಗಾ, ಬ್ರಹ್ಮಪುತ್ರ, ಭಾರತ ಇತ್ಯಾದಿ.

ಅನ್ವರ್ಥನಾಮ : ರೂಪ, ಗುಣ, ವೃತ್ತಿ, ಸ್ವಭಾವಾದಿ ವಿಶೇಷವಾದ ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲ ಅನ್ವರ್ಥನಾಮಗಳು.
ಉದಾ : ವ್ಯಾಪಾರಿ, ರೋಗಿ, ಯೋಗಿ, ಬಳೆಗಾರ, ಪೂಜಾರ, ಶಿಕ್ಷಕ, ವಿದ್ಯಾರ್ಥಿ ಇತ್ಯಾದಿ.

ಓದಿಗೆ ಮನ್ನಣೆ

1. ಮುದ್ರಿತ ಕರಪತ್ರ ಹಾಗೂ ಲಗ್ನ ಪತ್ರಿಕೆಗಳನ್ನು ಸಂಗ್ರಹಿಸಿ ಓದಿರಿ.


2. ಶಿಶು ಗೀತೆಗಳನ್ನು ಓದಿರಿ.


3. ರಾಜರತ್ನಂ, ಡುಂಡಿರಾಜ್ ಮೊದಲಾದ ಲೇಖಕರು ಬರೆದ ಮಕ್ಕಳ ಕವಿತೆಗಳನ್ನು ಓದಿರಿ.

ಶುಭನುಡಿ

1. ಕನ್ನಡಿ ನಿನಗೆ ಬೇಡ, ಕನ್ನಡಿಯೆ ನೀನಾಗು.
2. ನುಡಿದರೆ ಮುತ್ತಿನ ಹಾರದಂತಿರಬೇಕು.
3. ಮಾತಿನ ರೀತಿಗೆ ಪ್ರೀತಿಯ ಬೆಸುಗೆ.