ಮಧ್ಯಯುಗದ ಯುರೋಪ್ – ಅಧ್ಯಾಯ 2

2.1 ಆಧುನಿಕ ಯುಗದ ಪ್ರಾರಂಭ – ಪುನರುಜ್ಜೀವನ

ಪಾಠದ ಪರಿಚಯ

ಇತಿಹಾಸಕಾರರು ಯುರೋಪಿನ ಸುದೀರ್ಘ ಇತಿಹಾಸವನ್ನು ಮೂರು ಯುಗಗಳಾಗಿ ವಿಂಗಡಿಸುವುದಿದೆ. ಅವುಗಳೆಂದರೆ – ಪ್ರಾಚೀನ ಯುಗ (ಸು.ಸಾ.ಶ.500ರವರೆಗೆ), ಮಧ್ಯ ಯುಗ (ಸು.ಸಾ.ಶ.500-1500) ಮತ್ತು ಆಧುನಿಕ ಯುಗ (ಸು.ಸಾ.ಶ.1500ರಿಂದ). ಮಧ್ಯ ಯುಗದಲ್ಲಿ ಕ್ಯಾಥೊಲಿಕ್ ಚರ್ಚ್ ಜನಜೀವನದ ಮೇಲೆ ಬಿಗಿಯಾದ ನಿಯಂತ್ರಣ ಸಾಧಿಸಿ ಸ್ವತಂತ್ರ ಚಿಂತನೆಯನ್ನು ಚಿವುಟಿಹಾಕಿತ್ತು. ಆದರೆ 15 ಮತ್ತು 16ನೇ ಶತಮಾನಗಳ ಕಾಲಾವಧಿಯಲ್ಲಿ ಮಧ್ಯ ಯುಗವು ಪರಿವರ್ತನೆಯ ಹೊಸ ಹಾದಿಯನ್ನು ಹಿಡಿಯಿತು. ಇಲ್ಲಿಂದ ಆಧುನಿಕ ಯುಗ ಆರಂಭಗೊಂಡಿತು. ಆಧುನಿಕ ಯುಗದ ಆರಂಭದ ಮೂರು ಮಹತ್ವಪೂರ್ಣ ಐತಿಹಾಸಿಕ ಬೆಳವಣೆಗೆಗಳೆಂದರೆ: ಪುನರುಜ್ಜೀವನ, ಧಾರ್ಮಿಕ ಸುಧಾರಣೆ ಮತ್ತು ಭೌಗೋಳಿಕ ಅನ್ವೇಷಣೆಗಳು.
ಪುನರುಜ್ಜೀವನ ಚಳವಳಿಯು ಪರಂಪರಾನುಗತವಾಗಿ ಬಂದ ನಂಬಿಕೆ ಆಚರಣೆಗಳನ್ನು ಪ್ರಶ್ನಿಸುವ ಮನೋಧರ್ಮವನ್ನು ಬೆಳೆಸಿತು. ಧರ್ಮದ ಬಗ್ಗೆ ಅಲ್ಲಿಯವರೆಗೂ ಜನರಿಗೆ ಇದ್ದ ಮನೋಭಾವವು ಬದಲಾಯಿತು. ಕ್ಯಾಥೊಲಿಕ್ ಚರ್ಚಿನ ವಿರುದ್ಧ ದೊಡ್ಡ ಆಂದೋಲನ ಆರಂಭವಾಯಿತು. ಇದರ ಪರಿಣಾಮವಾಗಿ 16ನೇ ಶತಮಾನದ ಯುರೋಪಿನಲ್ಲಿ ವ್ಯಾಪಕವಾದ ಧಾರ್ಮಿಕ ಸುಧಾರಣಾ ಚಳವಳಿಗಳು ನಡೆದವು. ಈ ಪಾಠದಲ್ಲಿ ಧಾರ್ಮಿಕ ಸುಧಾರಣೆಯ ಅರ್ಥ, ಕಾರಣಗಳು, ಗತಿ ಮತ್ತು ಪರಿಣಾಮಗಳನ್ನು ನಿರೂಪಿಸಲಾಗಿದೆ. ಮುಂದುವರೆದು ಪ್ರತಿಸುಧಾರಣೆ ಚಳವಳಿಯನ್ನು ಕುರಿತು ವಿವರಿಸಲಾಗಿದೆ.
15ನೇ ಮತ್ತು 16ನೇ ಶತಮಾನಗಳಲ್ಲಿ ನಡೆದ ಭೌಗೋಳಿಕ ಅನ್ವೇಷಣೆಗಳ ಮಹತ್ವ, ಕಾರಣಗಳು, ಗತಿ ಮತ್ತು ಪರಿಣಾಮಗಳನ್ನು ಈ ಪಾಠದಲ್ಲಿ ನಿರೂಪಿಸಲಾಗಿದೆ.

ಗುರುಗಳು : ಮಕ್ಕಳೇ ಪುನರುಜ್ಜೀವನ’ ಎಂದರೇನು ಗೊತ್ತೆ?

ವಿದ್ಯಾರ್ಥಿಗಳು : ಇಲ್ಲ ಗುರುಗಳೆ, ನಮಗೆ ಗೊತ್ತಿಲ್ಲ.

ಗುರುಗಳು : ಪುನರುಜ್ಜೀವನ ಎಂದರೆ ಮರುಹುಟ್ಟು’ ( ರಿನೈಸಾನ್ಸ್ – Renaissance). ಇದಕ್ಕೆ ಪುನರುಜ್ಜೀವನ ಎಂಬ ಅರ್ಥವೂ ಇದೆ. ಪುನರುಜ್ಜೀವನವು ಸುಮಾರು ಸಾ.ಶ. 1400-1600ರ ಕಾಲಾವಧಿಯಲ್ಲಿ ಯುರೋಪಿನ ಸಾಹಿತ್ಯ, ಕಲೆ, ವಾಸ್ತುಶಿಲ್ಪ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಆಗಿರುವ ಹಲವಾರು ವಿಶಿಷ್ಟ ಬೆಳವಣಿಗೆಗಳನ್ನು ಸೂಚಿಸುತ್ತದೆ. ಪುನರುಜ್ಜೀವನ ಚಳವಳಿಯು ಬೌದ್ಧಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಂಡುಬರುವ ಸೃಜನಶೀಲ ಬೆಳವಣಿಗೆಯನ್ನು ಅನಾವರಣ ಮಾಡುತ್ತದೆ. ಈ ಚಳವಳಿಯು ಆ ಕಾಲದ ಬದಲಾವಣೆಗಳ ಬಹುಮುಖಿ ಸಂಕೀರ್ಣತೆಯನ್ನು ಒಳಗೊಂಡು ಯೂರೋಪನ್ನು ಮಧ್ಯ ಯುಗದಿಂದ ಆಧುನಿಕ ಯುಗಕ್ಕೆ ಕೊಂಡೊಯ್ದಿತು.
ವಿದ್ಯಾರ್ಥಿಗಳು : ಈ ಚಳವಳಿಯು ಎಲ್ಲಿ ಆರಂಭವಾಯಿತು?
ಗುರುಗಳು : ಇದರ ಆರಂಭ ಇಟಲಿಯಲ್ಲಾಯಿತು.
ದ್ಯಾಮವ್ವ : ಪುನರುಜ್ಜೀವನದ ಲಕ್ಷಣಗಳು ಯಾವುವು ಗುರುಗಳೆ?
ಗುರುಗಳು : ಬಹಳ ಉತ್ತಮವಾದ ಪ್ರಶ್ನೆ. ಎಲ್ಲರೂ ಅವಶ್ಯವಾಗಿ ತಿಳಿಯಲೇ ಬೇಕಾದದ್ದು. ಪುನರುಜ್ಜೀವನವು ಹಲವು ಲಕ್ಷಣಗಳನ್ನು ಹೊಂದಿದೆ. ಅವುಗಳಲ್ಲಿ ಮಾನವತಾವಾದ ಮತ್ತು ವೈಚಾರಿಕತೆ ಮುಖ್ಯವಾದುದು.
ದೀಪಾಲಿ : ಮಾನವತಾವಾದ ಎಂದರೇನು?
ಗುರುಗಳು : ಪ್ರಪಂಚದ ಎಲ್ಲಾ ಆಗುಹೋಗುಗಳಲ್ಲಿ ಮಾನವನ ಪಾತ್ರವೇ ಅತಿ ಪ್ರಧಾನ ಎಂಬ ಭಾವನೆಯೇ ಮಾನವತಾವಾದ.

ಪ್ರಾಚೀನ ಗ್ರೀಕ್ ಸಾಹಿತ್ಯವನ್ನು ಅಧ್ಯಯನ ನಡೆಸುತ್ತಿದ್ದ ವಿದ್ವಾಂಸರನ್ನು `ಮಾನವಾಸಕ್ತರು’ (humanists) ಎಂದು ಕರೆಯಲಾಗುತ್ತಿತ್ತು. ಪ್ರಾಪಂಚಿಕ ಜೀವನದಲ್ಲಿ ಮಾನವನೇ ಅತಿ ಪ್ರಮುಖ; ಮಾನವನು ಪಾಪಿಯಲ್ಲ, ಅವನು ದೇವರು ಸೃಷ್ಟಿಸಿದ ಜೀವಿಗಳಲ್ಲಿ ಅತಿಶ್ರೇಷ್ಠ ಎಂಬುದಾಗಿ ಅವರು ಸಾರಿದರು.

ಗಣೇಶ : ಹಾಗಾದರೆ ವೈಚಾರಿಕತೆ ಎಂದರೇನು ಗುರುಗಳೆ?
ಗುರುಗಳು : ವೈಚಾರಿಕತೆ ಎಂದರೆ ಪ್ರತಿಯೊಂದು ವಿಷಯವನ್ನು ಪೂರ್ವಾಗ್ರಹವಿಲ್ಲದೆ ವಿಚಾರ ಮತ್ತು ತರ್ಕದ ನೆಲೆಯಲ್ಲಿ ನೋಡುವುದೇ ಆಗಿದೆ. ಅದು ಸತ್ಯವೆಂದು ಕಂಡು ಬಂದರೆ ಮಾತ್ರ ಒಪ್ಪಿಕೊಳ್ಳುವುದಾಗಿದೆ.

ಪುನರುಜ್ಜೀವನ ಕಾಲದಲ್ಲಿ ಸ್ವರ್ಗ-ನರಕ ಮತ್ತು ಪರಲೋಕದ ಚಿಂತನೆಯನ್ನು ಪೂರ್ಣವಾಗಿ ಬಿಟ್ಟು ಇಹಲೋಕದ ವಿಷಯಗಳ ಬಗ್ಗೆ ತೀವ್ರ ಒಲವು ತಳೆಯಲಾಯಿತು. ಪ್ರಸ್ತುತ ಬದುಕಿಗೆ ಹೆಚ್ಚು ಒತ್ತನ್ನು ನೀಡಲಾಯಿತು.

ಜೋಸೆಫ್ : ಇನ್ನೇನಾದರೂ ಲಕ್ಷಣಗಳಿವೆಯೇ ಗುರುಗಳೆ?
ಗುರುಗಳು : ಅವುಗಳನ್ನು ಹೊರತುಪಡಿಸಿ ಇನ್ನೆರಡು ಲಕ್ಷಣಗಳಿವೆ. ಅವೆಂದರೆ – ಒಂದನೆಯದು ಅಭಿಜಾತ ಭಾಷೆಗಳಾದ [classical languages] ಗ್ರೀಕ್ ಮತ್ತು ಲ್ಯಾಟಿನ್‍ಗಳನ್ನು ತೊರೆದು ಸ್ಥಳೀಯ ದೇಶಭಾಷೆಯಲ್ಲಿ ಸಾಹಿತ್ಯ ರಚನೆಯಾದುದಾಗಿದೆ. ಎರಡನೆಯದು, ಕಲಾಪ್ರವೃತ್ತಿಯಲ್ಲಿ ಸೃಜನಶೀಲತೆ ಮೂಡಿದುದಾಗಿದೆ.

ಪುನರುಜ್ಜೀವನದ ಚಿತ್ರಕಲಾವಿದರು ಹೊಸ ಹೊಸ ವಿಷಯಗಳನ್ನು ಆರಿಸಿಕೊಂಡರು. ವಾಸ್ತುಶಿಲ್ಪವು ಹೆಚ್ಚು ಮಾನವಕೇಂದ್ರಿತವಾಗಿತ್ತು. ಉದಾಹರಣೆಗೆ ಇಗರ್ಜಿಗಳು [churches] ಕೇವಲ ಪ್ರಾರ್ಥನಾ ಮಂದಿರಗಳಾಗಿರದೆ ಕಲಾತ್ಮಕ ವಾಸ್ತುಶಿಲ್ಪಗಳಾಗಿಯೂ ಮೂಡಿಬಂದವು.

ಇಸ್ಮಾಯಿಲ್ : ಗುರುಗಳೆ, ಪುನರುಜ್ಜೀವನದ ಲಕ್ಷಣಗಳನ್ನು ನಾವು ಅರ್ಥಮಾಡಿಕೊಂಡೆವು. ದಯವಿಟ್ಟು ಪುನರುಜ್ಜೀವನದ ಕಾರಣಗಳನ್ನು ತಿಳಿಸಿಕೊಡುವಿರಾ?
ಗುರುಗಳು : ಖಂಡಿತಾ ಹೇಳುತ್ತೇನೆ. ● ವಿಚಾರ ಸ್ವಾತಂತ್ರ್ಯವೇ ಪುನರುಜ್ಜೀವನದ ಪ್ರಧಾನ ಕಾರಣವಾಗಿತ್ತು. ಇನ್ನಿತರ ಕಾರಣಗಳು ಇವಾಗಿವೆ: ● ಕಾನ್‍ಸ್ಟಂಟಿನೋಪಲ್ ನಗರದ ಮೇಲೆ ಅಕ್ರಮಣ, ● ಭೌಗೋಳಿಕ ಅನ್ವೇಷಣೆಗಳ ಪ್ರಭಾವ, ● ಮುದ್ರಣಯಂತ್ರದ ಶೋಧ, ● ಶಿಕ್ಷಣದ ಪ್ರಸಾರಣ, ● ಊಳಿಗಮಾನ್ಯ ಪದ್ಧತಿಯ ಅವನತಿ ಮುಂತಾದವು.

ಇಸ್ತಾನ್‍ಬುಲ್, ಈಗಿನ ಟರ್ಕಿ ದೇಶದ ಬಂದರು ನಗರ. ಇದನ್ನು ಹಿಂದೆ ಕಾನ್‍ಸ್ಟಂಟಿನೋಪಲ್, ಅದಕ್ಕೂ ಮೊದಲು ಇದನ್ನು ಬೈಜಾಂಟಿಯನ್ ಎನ್ನುತ್ತಿದ್ದರು.

ತಿಮ್ಮಕ್ಕ : ಕಾನ್‍ಸ್ಟಂಟಿನೋಪಲ್ ನಗರದ ಮೇಲಿನ ಆಕ್ರಮಣವನ್ನು ವಿವರಿಸಿ ಗುರುಗಳೆ.
ಗುರುಗಳು : 15ನೇ ಶತಮಾನದ ಮಧ್ಯಭಾಗದಲ್ಲಿ (1453) ಟರ್ಕರ ಸುಲ್ತಾನ ಮೊಹಮ್ಮದನು ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಾನ್‍ಸ್ಟಂಟಿನೋಪಲ್ ನಗರದ ಮೇಲೆ ಆಕ್ರಮಣ ನಡೆಸಿದನು. ಆಕ್ರಮಣದಲ್ಲಿ ಟರ್ಕರು ಚಕ್ರವರ್ತಿ ಕಾನ್‍ಸ್ಟಂಟೈನ್‍ನಿಂದ ಈ ನಗರವನ್ನು ವಶಪಡಿಸಿಕೊಂಡರು. ಗಮನಿಸಬೇಕಾದ ಅಂಶವೆಂದರೆ, ಸಾ.ಶ. 1453ಕ್ಕಿಂತ ಹಿಂದೆ ಹನ್ನೊಂದು ಶತಮಾನಗಳ ಕಾಲ ಈ ನಗರವು ಪ್ರಸಿದ್ಧ ಜ್ಞಾನಾರ್ಜನೆಯ ಕೇಂದ್ರವಾಗಿತ್ತು.
ರಜಿಯಾ : ಆಕ್ರಮಣದ ಪರಿಣಾಮವೇನಾಯಿತು ಗುರುಗಳೆ?
ಗುರುಗಳು : ಅರಬ್ಬರಲ್ಲಿದ್ದಂತೆ ಟರ್ಕರಲ್ಲಿ ಉದಾರ ಮನೋಭಾವವಿರಲಿಲ್ಲ. ಕಲಿಕೆಯ ಬಗ್ಗೆ ಗೌರವವಿರಲಿಲ್ಲ. ಆ ನಗರದಲ್ಲಿದ್ದ ವಿದ್ವಾಂಸರು ಟರ್ಕರ ಭೀತಿಯಿಂದ ತಮ್ಮಲ್ಲಿದ್ದ ಅಮೂಲ್ಯ ಗ್ರೀಕ್ ಮತ್ತು ಲ್ಯಾಟಿನ್ ಗ್ರಂಥಗಳೊಂದಿಗೆ ಇಟಲಿ ಮತ್ತು ಯುರೋಪಿನ ಇನ್ನಿತರ ಭಾಗಗಳಿಗೆ ಪಲಾಯನ ಗೈದರು. ಇಟಲಿಯ ವಿವಿಧ ನಗರಗಳಲ್ಲಿ ನೆಲೆಸಿದ ಅವರು ಪ್ರಾಚೀನ ಜ್ಞಾನಪ್ರಚಾರ ಮಾಡತೊಡಗಿದರು. ಹೀಗೆ ಕಲಿಕೆಯು ಕಾನ್‍ಸ್ಟಂಟಿನೋಪಲಿನಿಂದ ಇಟಲಿಗೆ ಸ್ಥಳಾಂತರಗೊಂಡಿತು. ಇದು ಪುನರುಜ್ಜೀವನಕ್ಕೆ ಪ್ರೇರಣೆ ನೀಡಿತು.
ಜೊತೆಗೆ ಅದೇ ಕಾಲದಲ್ಲಿ ನಡೆದ ಭೌಗೋಳಿಕ ಅನ್ವೇಷಣೆಗಳಿಂದ ಯುರೋಪಿಯನ್ನರ ಸಂಪತ್ತು ಹೆಚ್ಚಿತು. ಭಾರತ, ಅಮೆರಿಕ ಮುಂತಾದ ದೇಶಗಳಿಗೆ ಸಮುದ್ರ ಮಾರ್ಗಗಳನ್ನು ಕಂಡುಹಿಡಿದರು. ಇದು ಯುರೋಪನ್ನು ವಸಾಹತುಶಾಹಿ ಶಕ್ತಿಯನ್ನಾಗಿ ಬದಲಾಯಿಸಿತು. ಹಾಗೆಯೇ ಊಳಿಗಮಾನ್ಯ ವ್ಯವಸ್ಥೆಯನ್ನು ಶಿಥಿಲಗೊಳಿಸಿತು.
ಅತುಲ್ : ಮುದ್ರಣಯಂತ್ರ ಪುನರುಜ್ಜೀವನಕ್ಕೆ ಹೇಗೆ ಕಾರಣವಾಯಿತು ಗುರುಗಳೆ?
ಗುರುಗಳು : ಹದಿನೈದನೆಯ ಶತಮಾನದಲ್ಲಿ ಕಂಡುಹಿಡಿಯಲಾದ ಮುದ್ರಣಯಂತ್ರವು ಜ್ಞಾನಪ್ರಸಾರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿತು. ಹಿಂದೆ ಒಬ್ಬನಿಗೆ ಒಂದು ವರ್ಷದಲ್ಲಿ ಕೇವಲ ಎರಡು ಪುಸ್ತಕಗಳನ್ನು ಮಾತ್ರ ಪ್ರತಿ ಮಾಡಲು ಸಾಧ್ಯವಾಗುತ್ತಿತ್ತು. ಮುದ್ರಣಯಂತ್ರದ ಸಹಾಯದಿಂದ ಒಂದೇ ವರ್ಷದಲ್ಲಿ ಪುಸ್ತಕವೊಂದರ 24,000 ಪ್ರತಿಗಳನ್ನು ಮುದ್ರಿಸಬಹುದಾಗಿತ್ತು. ಮುದ್ರಿತ ಪುಸ್ತಕಗಳ ಬೆಲೆ ಕಡಿಮೆಗೊಂಡು ಅವುಗಳಿಗೆ ಬೇಡಿಕೆ ಹೆಚ್ಚಿತು. ಮುದ್ರಣವು ಕೈಬರಹಕ್ಕಿಂತ ಹೆಚ್ಚು ಸ್ಪಷ್ಟವೂ ಸುಂದರವೂ ಆಯಿತು. ಓದುವ ಆಸಕ್ತಿ ಇದ್ದವರೆಲ್ಲರಿಗೂ ಸುಲಭವಾಗಿ ಪ್ರತಿಗಳು ದೊರೆಯುವಂತಾಯ್ತು.

ಕಾನ್‍ಸ್ಟಂಟಿನೋಪಲ್ ನಗರದ ಮೇಲಿನ ಆಕ್ರಮಣ

ಕಾನ್‍ಸ್ಟಂಟಿನೋಪಲ್ ನಗರದ ಮೇಲಿನ ಆಕ್ರಮಣ

ಸಾ.ಶ. 1450ರ ಸುಮಾರಿಗೆ ಜರ್ಮನಿಯ ಜಾನ್ ಗುಟೆನ್‍ಬರ್ಗ್ ಎಂಬವನು ಮೆಯಿನ್ಸ್ ಎಂಬ ಪಟ್ಟಣದಲ್ಲಿರುವ ತನ್ನ ಮುದ್ರಣಾಲಯದಲ್ಲಿ ಚಲಿಸುವ ಅಚ್ಚಿನ ಮೊಳೆಗಳನ್ನು ಬಳಸಿದನು. ಇದಕ್ಕೆ ಮೊದಲು ಪಡಿಯಚ್ಚುಗಳನ್ನು (ಬ್ಲಾಕ್ಸ್) ಉಪಯೋಗಿಸಲಾಗುತ್ತಿತ್ತು. ಹೊಸ ಹೊಸ ತಂತ್ರಜ್ಞಾನವು ಮಿಂಚಿನ ವೇಗದಲ್ಲಿ ಇಡೀ ಯುರೋಪಿನಲ್ಲಿ ಹಬ್ಬಿತು. ಇದನ್ನು ಎಲ್ಲ ವಿದ್ವಾಂಸರೂ ಪೋಪರೂ ಸ್ವಾಗತಿಸಿದರು. ವಿಲಿಯಂ ಕ್ಯಾಕ್ಸ್‍ಟನ್ ಎಂಬವನು ಸಾ.ಶ. 1477ರಲ್ಲಿ ಇಂಗ್ಲೆಂಡಿನಲ್ಲಿ ಸುಧಾರಿತ ಮುದ್ರಣಯಂತ್ರವನ್ನು ಸ್ಥಾಪಿಸಿದನು.

ಜರ್ಮನಿಯ ಜಾನ್ ಗುಟೆನ್‍ಬರ್ಗ್

ವಿಲಿಯಂ ಕ್ಯಾಕ್ಸ್‍ಟನ್

ನಿಂಗಪ್ಪ : ಸಾಹಿತ್ಯಕ್ಷೇತ್ರಕ್ಕೆ ಪುನರುಜ್ಜೀವನ ನೀಡಿರುವ ಕೊಡುಗೆಗಳನ್ನು ವಿವರಿಸಿ ಗುರುಗಳೆ.
ಗುರುಗಳು : ಪುನರುಜ್ಜೀವನ ಕಾಲದಲ್ಲಿ ದೇಶಭಾಷೆ ಪೆಟ್ರಾರ್ಕ್ ಅಥವಾ ಸ್ಥಳೀಯ ಭಾಷೆಗಳಲ್ಲಿ ಸಾಹಿತ್ಯ ರಚನೆಗೊಂಡಿತು. ಪರಿಣಾಮವಾಗಿ ಜನರ ಆಡುಭಾಷೆಗಳು ವಿಕಾಸ ಹೊಂದಿದವು. ಅನೇಕ ಲೇಖಕರು ಈ ಕಾಲದಲ್ಲಿ ವಿವಿಧ ಸಾಹಿತ್ಯ ಕೃತಿಗಳನ್ನು ರಚಿಸಿದರು.

ಲೇಖಕರಲ್ಲಿ ಪೆಟ್ರಾರ್ಕ್ ಮೊದಲಿಗನು. ಈತನಿಗೆ ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಾಹಿತ್ಯದ ಮೇಲೆ ಅತೀವ ಅಭಿಮಾನವಿತ್ತು. ಈತನ ಭಾವಗೀತೆ ಮತ್ತು ಕಾವ್ಯಗಳು ಪ್ರಸಿದ್ಧ. ಯುವ ಸಾಹಿತಿಗಳು ಈತನಿಂದ ಪಡೆದ ಸ್ಫೂರ್ತಿ ಗಮನಾರ್ಹವಾದುದು. ದಾಂತೇ ಇಟಲಿಯ ಮಹಾಕವಿ. ದ ಡಿವೈನ್ ಕಾಮಿಡಿ’ ಆತನ ಮಹಾಕಾವ್ಯ. ಬೊಕಾಷಿಯೊ ಒಬ್ಬ ಕುಶಲ ಕತೆಗಾರ. ಡೆಕಮೆರನ್’ ಆತನ ಶ್ರೇಷ್ಠ ಸಾಹಿತ್ಯ ಕೃತಿ.

ದಾಂತೇ ಇಟಲಿಯ ಮಹಾಕವಿ

ದ ಡಿವೈನ್ ಕಾಮಿಡಿ’

ಬೊಕಾಷಿಯೊ

ಬೊಕಾಷಿಯೊ – ‘ಡೆಕಮೆರನ್’

ಫ್ರೆಂಚ್ ಗದ್ಯ ಸಾಹಿತ್ಯಕ್ಕೆ ಒಂದು ಹೊಸ ಶೈಲಿಯನ್ನು ಕೊಟ್ಟವನೆಂದರೆ ಮತಸುಧಾರಕನಾದ ಜಾನ್ ಕ್ಯಾಲ್ವಿನ್. ಸರ್ವಾಂಟಿಸ್ ಸ್ಪೇನ್ ದೇಶದ ಪುನರುಜ್ಜೀವನ ಕಾಲದ ಮುಖ್ಯ ಸಾಹಿತಿ. ಈತನು ತನ್ನ `ಡಾನ್ ಕ್ವಿಕ್ಸಾಟ್’ ಎಂಬ ಪ್ರಸಿದ್ಧ ಸಾಹಿತ್ಯ ಕೃತಿಯಲ್ಲಿ ಮಧ್ಯ ಯುಗದ ಸರದಾರರನ್ನು (knights) ಗೇಲಿ ಮಾಡಿದನು.

ಜಾನ್ ಕ್ಯಾಲ್ವಿನ್

ರಾಜರ ಮಿಲಿಟರಿಯಲ್ಲಿ ಅಪ್ರತಿಮ ಸೇವೆಯನ್ನು ಸಲ್ಲಿಸುತ್ತಿದ್ದವರಿಗೆ ನೀಡುತ್ತಿದ್ದ ಸೇವಾ ಮಾನ್ಯತೆಯನ್ನು ಸರದಾರ ಎಂದು ಕರೆಯುತ್ತಿದ್ದರು.

ಇಂಗ್ಲಿಷ್ ನಾಟಕಕಾರರಲ್ಲಿ ವಿಲಿಯಮ್ ಷೇಕ್ಸ್‍ಪಿಯರ್ ಷೇಕ್ಸ್‍ಪೀಯರ್ ಪ್ರಮುಖನು. ಇವನು ಕೆಲವು ಶ್ರೇಷ್ಠ ನಾಟಕಗಳನ್ನು ರಚಿಸಿದನು. ಜೂಲಿಯಸ್ ಸೀಜರ್,ರೋಮಿಯೋ ಜ್ಯೂಲಿಯಟ್’, ಕಿಂಗ್ ಲಿಯರ್,ಮ್ಯಾಕ್‍ಬೆತ್’ ಇವೇ ಮುಂತಾದವು ಈತನ ನಾಟಕಗಳು. ಕಾಳಿದಾಸನಂತೆ ಇವನೊಬ್ಬ ಪ್ರತಿಭಾವಂತ ನಾಟಕಕಾರ.

ಮಾರ್ಗರೇಟ್ : ಸಾಹಿತ್ಯಕ್ಕೆ ಪುನರುಜ್ಜೀವನ ನೀಡಿದ ಕೊಡುಗೆಗಳನ್ನು ಹೇಳಿದಿರಿ ಗುರುಗಳೆ. ಇನ್ನು ವಾಸ್ತು, ಮೂರ್ತಿಶಿಲ್ಪ ಮತ್ತು ಚಿತ್ರಕಲೆಗೆ ಅದು ನೀಡಿದ ಕೊಡುಗೆಗಳನ್ನು ಹೇಳುವಿರಾ?
ಗುರುಗಳು : ಪುನರುಜ್ಜೀವನದ ವಾಸ್ತು ಸೌಂದರ್ಯವನ್ನು ನಾವು ರೋಮಿನ ಸಂತ ಪೀಟರ ಚರ್ಚ್, ಲಂಡನಿನ ಸಂತ ಪಾಲ್ ಚರ್ಚ್ ಮುಂತಾದ ಚರ್ಚ್‍ಗಳಲ್ಲಿ ಕಾಣಬಹುದಾಗಿದೆ.

ಪುನರುಜ್ಜೀವನದ ವಾಸ್ತುಶಿಲ್ಪಿಗಳು ಮಧ್ಯ ಯುಗದ ಅಲಂಕರಣದ ಮತ್ತು ಆಡಂಬರದ ಗಾಥಿಕ್ ಶೈಲಿಯನ್ನು ಕೈಬಿಟ್ಟು, ಚೂಪಾದ ಮೊನೆಯುಳ್ಳ ಕಮಾನುಗಳ ಬದಲು ದುಂಡದಾದ ಕಮಾನುಗಳನ್ನು ಬಳಸಿದರು.

ಡೊನಾಟೆಲ್ಲೊ ಆ ಕಾಲದ ಮಹಾನ್ ಶಿಲ್ಪಿ. ಈತನು ನಿರ್ಮಿಸಿದ ಡೇವಿಡ್ ಪ್ರತಿಮೆ’ ಶ್ರೇಷ್ಠವಾಗಿದೆ. ಹಾಗೆಯೇ ಮೈಕೆ ಲೆಂಜೆಲೊ ನಿರ್ಮಿಸಿದ ಮೋಸೆಸ್ ಪ್ರತಿಮೆ’ ಭವ್ಯವಾಗಿದೆ.

ಡೊನಾಟೆಲ್ಲೊ

ಡೇವಿಡ್ ಪ್ರತಿಮೆ

ಮೈಕೆ ಲೆಂಜೆಲೊ ನಿರ್ಮಿಸಿದ ಮೋಸೆಸ್ ಪ್ರತಿಮೆ’

ಶಿವಮೂರ್ತಿ : ಚಿತ್ರಕಲಾರಂಗದಲ್ಲಿ ಆದ ಸಾಧನೆಗಳನ್ನು ನಮಗೆ ತಿಳಿಸಿ, ಗುರುಗಳೆ.
ಗುರುಗಳು : ಇಟಲಿಯಲ್ಲಿ ಹದಿನಾರನೆಯ ಶತಮಾನದಲ್ಲಿ ಹಲವಾರು ಪ್ರತಿಭಾವಂತ ಚಿತ್ರಕಾರರಿದ್ದರು. ಅವರಲ್ಲಿ ಲಿಯೊನಾರ್ಡೊ ದ ವಿಂಚಿ ಮತ್ತು ಮೈಕೆಲೆಂಜೆಲೊ ಗಮನಾರ್ಹರು.

ಲಿಯೊನಾರ್ಡೊ ದ ವಿಂಚಿ ಅದ್ಬುತ ಚಿತ್ರಕಾರ, ಮೂರ್ತಿಶಿಲ್ಪಿ, ವಿಜ್ಞಾನಿ, ಇಂಜಿನಿಯರ್, ವಾಸ್ತುಶಿಲ್ಪಿ ಮತ್ತು ಗಣಿತಶಾಸ್ತ್ರಜ್ಞ, `ವರ್ಜಿನ್ ಆನ್ ದಿ ರಾಕ್ಸ್’, ‘ದಿ ಲಾಸ್ಟ್ ಸಪ್ಪರ್’ ಮತ್ತು ‘ಮೊನಾಲಿಸಾ’ ಆತನ ಪ್ರಸಿದ್ಧ ವರ್ಣಚಿತ್ರಗಳು.

ದ ವಿಂಚಿಯು ಎಲ್ಲ ಕಾರ್ಯಕ್ಷೇತ್ರಗಳಲ್ಲಿಯೂ ತನ್ನ ಸಮಕಾಲೀನರನ್ನು ಮೀರಿ ನಿಂತಿದ್ದ. ಆತನು ಹಾರುವಯಂತ್ರ, ಸಬ್‍ಮೆರಿನ್, ಪ್ಯಾರಾಚೂಟ್ ಮತ್ತು ಟ್ಯಾಂಕರ್ ಇವುಗಳ ವಿನ್ಯಾಸವನ್ನು ತಯಾರಿಸಿದ್ದನು. ಆದರೆ ಆತನ ವೈಜ್ಞಾನಿಕ ಸಾಧನೆಗಳು ಬಹುಕಾಲ ಬೆಳಕಿಗೆ ಬಾರದೆ ಅಜ್ಞಾತವಾಗಿಯೇ ಉಳಿದವು. ಆತನು ಓರ್ವ ಮಹಾನ್ ವಾಸ್ತುಶಿಲ್ಪಿಯೂ ಆಗಿದ್ದು ಇಟಲಿಯಲ್ಲಿ ಕಾಲುವೆಗಳನ್ನೂ ರಕ್ಷಣಾಕೋಟೆಗಳನ್ನೂ ನಿರ್ಮಿಸಿದ. ಸಂಗೀತ ಮತ್ತು ತತ್ವಶಾಸ್ತ್ರಗಳಲ್ಲಿಯೂ ಆತನಿಗೆ ಫ್ರೌಢಿಮೆಯಿತ್ತು. ಇವನು ಏಕ ಕಾಲದಲ್ಲಿ ಎರಡೂ ಕೈಗಳಿಂದ ಬರೆಯಬಲ್ಲವನಾಗಿದ್ದನೆಂದು ಹೇಳಲಾಗುತ್ತದೆ.

ಆದಿತ್ಯ : ಗುರುಗಳೇ, ಪುನರುಜ್ಜೀವನ ಕಾಲದಲ್ಲಿ ವಿಜ್ಞಾನ ಕ್ಷೇತ್ರದಲ್ಲಾದ ಪ್ರಗತಿಯನ್ನು ವಿವರಿಸಿ.
ಗುರುಗಳು : ಪುನರುಜ್ಜೀವನ ಕಾಲದಿಂದಲೇ ಆಧುನಿಕ ವಿಜ್ಞಾನದ ಬೆಳವಣಿಗೆ ಪ್ರಾರಂಭವಾಯಿತು ಎನ್ನಬಹುದು. ಖಗೋಳಶಾಸ್ತ್ರದಲ್ಲಿ ಕ್ರಾಂತಿಕಾರಕ ಮುನ್ನಡೆಯಾಯಿತು. ಪೋಲೆಂಡಿನ ಕೋಪರ್ನಿಕಸನು ಸೂರ್ಯನ ಸುತ್ತ ತಿರುಗುವ ಹಲವಾರು ಗ್ರಹಗಳಲ್ಲಿ ಭೂಮಿಯು ಒಂದಾಗಿದೆಯೆಂದು ತಿಳಿದಿದ್ದನು. ಆತನ ಸಂಶೋಧನೆಯು ಚರ್ಚಿನ ಸಿದ್ಧಾಂತಗಳಿಗೆ ವಿರುದ್ಧವಾಗಿದ್ದುದರಿಂದ ಅದನ್ನು ಗ್ರಂಥರೂಪದಲ್ಲಿ ಪ್ರಕಟಿಸಲು ಸಾಧ್ಯವಾಗಲಿಲ್ಲ.

ಕೋಪರ್ನಿಕಸನ ಕಾಲಘಟ್ಟದಲ್ಲಿ ಸೂರ್ಯನು ಭೂಮಿಯ ಸುತ್ತ ತಿರುಗುವನೆಂದು ಟಾಲೆಮಿ ಹೇಳಿದ ಮಾತೇ ಚರ್ಚಿನ ಸಿದ್ಧಾಂತವಾಗಿತ್ತು.

ಮುಂದೆ, ಜರ್ಮನಿಯ ಗಣಿತಶಾಸ್ತ್ರಜ್ಞ ಕೆಪ್ಲರ್ ಎಂಬುವನು ಕೋಪರ್ನಿಕಸನ ವಾದವನ್ನು ಪ್ರಾಯೋಗಿಕವಾಗಿ ಸಾಧಿಸಿ ತೋರಿಸಿದನು.

ಇಟಲಿಯ ಖಗೋಳ ಶಾಸ್ತ್ರಜ್ಞನಾದ ಗೆಲಿಲಿಯೊ ಗೆಲಿಲಿಯೊ ದೂರದರ್ಶಕವನ್ನು ಕಂಡುಹಿಡಿದನು. ಇವನು ಕೋಪರ್ನಿಕಸನ ವಾದವನ್ನು ಬಲವಾಗಿ ಪ್ರತಿಪಾದಿಸಿದನು. ಆದುದರಿಂದ ಚರ್ಚ್ ಇವನನ್ನು ಬಂಧಿಸಿ ಚರ್ಚಿನ ನ್ಯಾಯಾಲಯಕ್ಕೆ (ಇನ್‍ಕ್ವಿಜಿಷನ್) ಒಳಪಡಿಸಿತು. ಬಲವಂತದ ತಪ್ಪೊಪ್ಪಿಗೆ ನಂತರ ಗೆಲಿಲಿಯೊನನ್ನು ಬಿಡುಗಡೆ ಮಾಡಿತು.

ಇಂಗ್ಲೆಂಡಿನ ಸರ್ ಐಸಾಕ್ ನ್ಯೂಟನನು ನೆಲದಿಂದ ಮೇಲಕ್ಕೆ ಏರಿದ ವಸ್ತುಗಳು ಪುನಃ ಕೆಳಗೆ ಬೀಳಲು `ಗುರುತ್ವಾಕರ್ಷಣ’ ಬಲವೇ ಕಾರಣ ಎಂಬುದನ್ನು ತೋರಿಸಿಕೊಟ್ಟನು.

ಸರ್ ಐಸಾಕ್ ನ್ಯೂಟನ

ವಿಲಿಯಂ ಹಾರ್ವೆಯು (1478-1557) ಮಾನವ ದೇಹದಲ್ಲಿನ ರಕ್ತಪರಿಚಲನೆಯ ಕ್ರಮವನ್ನು ತೋರಿಸಿಕೊಟ್ಟನು. ವೆಸಾಲಿಯಸ್ ಎಂಬ ಬೆಲ್ಜಿಯಮ್ ವಿಜ್ಞಾನಿಯು ದೇಹದಲ್ಲಿ ರಕ್ತಸಂಚಾರದ ಬಗ್ಗೆ ಅಮೂಲ್ಯ ಗ್ರಂಥವನ್ನು ಪ್ರಕಟಿಸಿದನು. ಚರ್ಚಿನ ನಂಬುಗೆಯನ್ನು ಪ್ರಶ್ನಿಸಿದ್ದಕ್ಕಾಗಿ ಆತನನ್ನು ಮರಣದಂಡನೆಗೆ ಗುರಿಪಡಿಸಲಾಯಿತು!

ವಿಲಿಯಂ ಹಾರ್ವೆ

ವಿಲಿಯಂ ಹಾರ್ವೆಯು (1478-1557) ಮಾನವ ದೇಹದಲ್ಲಿನ ರಕ್ತಪರಿಚಲನೆಯ ಕ್ರಮವನ್ನು ತೋರಿಸಿಕೊಟ್ಟನು

ಗೆಲಿಲಿಯೊ ತನ್ನ ಪ್ರಯೋಗಗಳ ಮೂಲಕ ವಿವಿಧ ತೂಕದ ವಸ್ತುಗಳನ್ನು ಏಕಕಾಲದಲ್ಲಿ ಸಮಾನ ಎತ್ತರದಿಂದ ಕೈಬಿಟ್ಟಾಗ ಒಂದೇ ಸಮಯಕ್ಕೆ ಅವು ಭೂಮಿಯನ್ನು ತಲಪುತ್ತವೆ ಎಂದು ಸಾಬೀತುಗೊಳಿಸಿದನು. ಪೀಸಾ ಗೋಪುರದ ಮೇಲಿಂದ ವಿವಿಧ ತೂಕದ ಫಿರಂಗಿ ಗುಂಡುಗಳನ್ನು ಕೆಳಗೆ ಹಾಕಿ ಇದನ್ನು ಪ್ರಾಯೋಗಿಕವಾಗಿ ತೋರಿಸಿದನು.

ಹೀಗೆ ಪುನರುಜ್ಜೀವನವು ಆಧುನಿಕ ಸಮಾಜ ಮತ್ತು ನಾಗರಿಕತೆಗಳ ಮೇಲೆ ಮಹತ್ವದ ಪ್ರಭಾವವನ್ನು ಬೀರಿತು.

2.2 ಧಾರ್ಮಿಕ ಸುಧಾರಣೆ

ರವಿವಾರ ಬೆಳಗಿನ ಪ್ರಾರ್ಥನೆ ಮುಗಿಸಿ ಚರ್ಚಿನಿಂದ ಹೊರಬರುತ್ತಿದ್ದಂತೆ, ಪೀಟರ್ ಮತ್ತು ಲಿಲ್ಲಿ ಕುತೂಹಲದಿಂದ ತಂದೆ ಜಾನ್‍ನಿಗೆ ಪ್ರಶ್ನೆಗಳನ್ನು ಕೇಳಲಾರಂಭಿಸಿದರು.

ಪೀಟರ್ : ಕ್ರೈಸ್ತರಲ್ಲಿಯೂ ಪಂಗಡಗಳಿವೆಯೆ?
ಜಾನ್ : ಕ್ರೈಸ್ತರಲ್ಲಿ ಅನೇಕ ಪಂಗಡಗಳಿವೆ. ಕ್ಯಾಥೊಲಿಕ್’ಮತ್ತು ಪ್ರಾಟೆಸ್ಟಂಟ್’ ಎಂಬ ಎರಡು ಪಂಗಡಗಳು ಅವುಗಳಲ್ಲಿ ಪ್ರಮುಖ.
ಪೀಟರ್ : ಕ್ರೈಸ್ತರಲ್ಲಿ ಈ ಎರಡು ಪಂಗಡಗಳಾಗಲು ಕಾರಣಗಳೇನು?
ಜಾನ್ : ಮಧ್ಯಯುಗದ ರೋಮನ್ ಕ್ಯಾಥೋಲಿಕ್ ಚರ್ಚಿನಲ್ಲಿ ಹಲವಾರು ನೀತಿಬಾಹಿರ ಚಟುವಟಿಕೆಗಳು ನಡೆದವು. ಪೋಪ್ ಮತ್ತು ಚರ್ಚಿನ ಅಧಿಕಾರಿಗಳು ಸರಳ ಧಾರ್ಮಿಕ ಜೀವನವನ್ನು ನಡೆಸುವ ಬದಲು ರಾಜವೈಭವದಲ್ಲಿ ಮೆರೆಯುತ್ತಿದ್ದರು.

ರಾಜರು ಮತ್ತು ಪೋಪರ ಕಲಹಗಳ ಪರಿಣಾಮವಾಗಿ ಸಮಾಜದಲ್ಲಿ ಪೋಪರ ಬಗ್ಗೆ ಗೌರವ ಕಡಿಮೆಯಾಯಿತು. ಪೋಪ್ ರಾಜಕೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ರಾಜರು ಸಹಿಸಲಿಲ್ಲ. ಚರ್ಚಿನ ಅನೇಕ ಹುದ್ದೆಗಳನ್ನು ಮಾರಾಟಮಾಡಿ, ಅಪಾರ ಧನಸಂಪತ್ತನ್ನು ಸಂಗ್ರಹಿಸಲಾಗಿತ್ತು. ಈ ಕಾರಣಗಳಿಂದ ಜಾನ್ ವೈಕ್ಲಿಫ್, ಜಾನ್ ಹಸ್, ಮಾರ್ಟಿನ್ ಲೂಥರ್ ಮೊದಲಾದವರು ಚರ್ಚಿನ ಅವ್ಯವಹಾರಗಳನ್ನು ವಿವಿಧ ಕಾಲಘಟ್ಟಗಳಲ್ಲಿ ಬಯಲಿಗೆಳೆಯಲು ಆರಂಭಿಸಿದರು.

ಜಾನ್ ವೈಕ್ಲಿಫ್ (1324-84): ಜಾನ್ ವೈಕ್ಲಿಫ್‍ನನ್ನು `ಧಾರ್ಮಿಕ ಸುಧಾರಣೆಯ ಉಷಾತಾರೆ’ (Morning Star) ಎಂದು ಕರೆಯುವರು. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದ ಈತನು ಚರ್ಚಿನಲ್ಲಿಯ ಅವ್ಯವಹಾರಗಳನ್ನು ಬಯಲಿಗೆಳೆದನು.

ಜಾನ್ ವೈಕ್ಲಿಫ್ (1324-84)

ಜಾನ್ ಹಸ್ (1367-1415): ಈತನು ಚರ್ಚಿನ ಅನೈತಿಕ ನಡವಳಿಕೆಗಳನ್ನು ಕಟುವಾಗಿ ಟೀಕಿಸಿದನು. ಚರ್ಚಿನ ನ್ಯಾಯಾಲಯವು ಅವನನ್ನು ಕರೆಯಿಸಿ, ಚರ್ಚಿನ ತತ್ವಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿತು. ಇದಕ್ಕೆ ಪ್ರತಿಯಾಗಿ “ನನ್ನ ಆತ್ಮಸಾಕ್ಷಿಯ ವಿರುದ್ಧವಾದ ಯಾವುದೇ ವಿಚಾರಗಳನ್ನು ನಾನು ಒಪ್ಪಿಕೊಳ್ಳಲಾರೆ” ಎಂದು ಜಾನ್ ಹಸ್ ಉತ್ತರಿಸಿದ. ಚರ್ಚ್ ಹಾಗೂ ಚರ್ಚ್ ನ್ಯಾಯಾಲಯವನ್ನು ವಿರೋಧಿಸಿದ್ದಕ್ಕಾಗಿ ಅವನನ್ನು ಅಪರಾಧಿಯೆಂದು ಸಾರಿ ಜೀವಂತವಾಗಿ ಸುಡಲಾಯಿತು!

ಜಾನ್ ಹಸ್ (1367-1415)

ಕ್ಯಾಥೋಲಿಕ್ ಧರ್ಮದಲ್ಲಿ ಬಿರುಕು ಉಂಟಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ‘ಪಾಪಕ್ಷಮಾಪಣ ಪತ್ರ’ಗಳ ಮಾರಾಟ. ರೋಮ್ ಪಟ್ಟಣದಲ್ಲಿ ಸಂತ ಪೀಟರ ಚರ್ಚ್ ಪುನರ್‍ನಿರ್ಮಿಸಲು ಪೋಪ್ ಹತ್ತನೆಯ ಲಿಯೋ ಅವರಿಗೆ ಹಣದ ಅವಶ್ಯಕತೆಯಿತ್ತು. ಅದಕ್ಕಾಗಿ ಪಾಪಕ್ಷಮಾಪಣ ಪತ್ರಗಳನ್ನು ಖರೀದಿಸಿದವರು ಪಾಪವಿಮುಕ್ತಗೊಂಡು ಸ್ವರ್ಗಕ್ಕೆ ಹೋಗುತ್ತಾರೆ; ಇವು ಸ್ವರ್ಗದ ರಹದಾರಿ ಪತ್ರಗಳೆಂಬ ಕುರುಡು ನಂಬಿಕೆಗಳನ್ನು ಹುಟ್ಟಿಸಲಾಯಿತು. ಇವೆಲ್ಲವುಗಳನ್ನು ತಿಳಿದ ಮಾರ್ಟಿನ್ ಲೂಥರ್, ಪೋಪರು ಹಣಕ್ಕಾಗಿ ಜನರ ಪಾಪ ತೊಳೆಯುವುದಾದರೆ, ಪುಕ್ಕಟೆಯಾಗಿ ಏಕೆ ಮಾಡಬಾರದೆಂದು ಪ್ರಶ್ನಿಸಿದನು.

ಲಿಲ್ಲಿ : ಮಾರ್ಟಿನ್ ಲೂಥರ್ ಯಾರು?
ಜಾನ್ : ಮಾರ್ಟಿನ್ ಲೂಥರ್ ಜರ್ಮನಿಯಲ್ಲಿ ಮಾರ್ಟಿನ್ ಲೂಥರ್ ಧಾರ್ಮಿಕಸುಧಾರಣಾ ಚಳವಳಿಯನ್ನು ಆರಂಭಿಸಿದ ನಾಯಕ. ಈತನು ಸಂತ ಆಗಸ್ಟಿನ್ ಚರ್ಚಿನ ಪಾದ್ರಿಯಾಗಿದ್ದನು.
ರೋಮ್ ಪಟ್ಟಣದಲ್ಲಿ ಪೋಪ್ ಮತ್ತು ಪಾದ್ರಿಗಳ ವೈಭೋಗದ ಜೀವನ ಶೈಲಿಯನ್ನು ಗಮನಿಸಿದ ಲೂಥರ್ ಚರ್ಚಿನ ವಿರುದ್ದ ತಿರುಗಿ ಬಿದ್ದನು. ಅವನು ಪಾಪಕ್ಷಮಾಪಣ ಪತ್ರಗಳನ್ನು ಕುರಿತು ತೊಂಬತ್ತೈದು ಹೇಳಿಕೆಗಳನ್ನು ಬರೆದು ವಿಟೆನ್‍ಬರ್ಗ್ ಚರ್ಚಿನ ಹೆಬ್ಬಾಗಿಲಿಗೆ ಹಚ್ಚಿ ಜನರಲ್ಲಿ ಜಾಗೃತಿ ಮೂಡಿಸಿದನು.

ಲೂಥರ್ ಬೈಬಲನ್ನು ಜರ್ಮನ್ ಭಾಷೆಗೆ ಭಾಷಾಂತರಿಸಿದ್ದರಿಂದ ಅದು ಸಾಮಾನ್ಯ ಜನರೆಲ್ಲರಿಗೂ ದೊರೆಯುವಂತಾಯಿತು. ಚರ್ಚಿನ ಧಾರ್ಮಿಕ ಸೇವೆಗಳಲ್ಲಿ ಲ್ಯಾಟಿನ್ ಭಾಷೆಯ ಬದಲಾಗಿ ಜರ್ಮನ್ ಭಾಷೆ ಬಳಸಲಾರಂಭಿಸಿದನು.

ಪೋಪರು ಲೂಥರನನ್ನು ಶಿಕ್ಷೆಗೆ ಗುರಿಪಡಿಸಲು ರೋಮಿನ ರಾಜನಿಗೆ ಆಜ್ಞಾಪಿಸಿದರು. ಆದರೆ ಲೂಥರನಿಗೆ ಅನೇಕ ರಾಜರ ಬೆಂಬಲವಿದ್ದುದರಿಂದ ಯಾವುದೇ ಶಿಕ್ಷೆ ವಿಧಿಸಲು ಸಾಧ್ಯವಾಗಲಿಲ್ಲ. ಕ್ಯಾಥೊಲಿಕ್ ಚರ್ಚಿನವರು ಲೂಥರನ ಅನುಯಾಯಿಗಳನ್ನು “ಪ್ರಾಟೆಸ್ಟಂಟ್ಸ್” (ಪ್ರತಿಭಟನಾಕಾರರು) ಎಂದು ಕರೆದರು. ಕಾಲಕ್ರಮೇಣ ಪ್ರಾಟೆಸ್ಟಂಟರು ಕ್ರೈಸ್ತ ಧರ್ಮದ ಒಂದು ಪಂಗಡವಾಗಿ ವಿಶ್ವದ ಎಲ್ಲಾ ದೇಶಗಳಲ್ಲಿ ಹರಡಿದರು.

ಪೀಟರ್ : ಇದರಿಂದ ಕ್ಯಾಥೊಲಿಕ್ ಚರ್ಚಿನ ಮೇಲೆ ಯಾವ ಪರಿಣಾಮವಾಯಿತು?
ಜಾನ್ : ಕ್ಯಾಥೊಲಿಕ್ ಚರ್ಚಿನ ಬಗ್ಗೆ ಜನರಲ್ಲಿ ಅನುಮಾನಗಳುಂಟಾದವು. ಜನರು ಚರ್ಚಿನಿಂದ ದೂರ ಸರಿಯಲಾರಂಭಿಸಿದರು. ರೋಮನ್ ಕ್ಯಾಥೊಲಿಕರು ತಮ್ಮ ಚರ್ಚಿನಲ್ಲಿ ಸುಧಾರಣೆಗಳು ಅವಶ್ಯವೆಂಬುದನ್ನು ಮನಗಂಡರು. ಈ ಹಿನ್ನೆಲೆಯಲ್ಲಿ ಕ್ಯಾಥೊಲಿಕ್ ಚರ್ಚನ್ನು ಶುದ್ಧೀಕರಿಸಿ ಅದನ್ನು ಬಲಪಡಿಸಲು `ಪ್ರತಿಸುಧಾರಣೆ’ ಎಂಬ ಚಳವಳಿ ಪ್ರಾರಂಭವಾಯಿತು. ಈ ಮೂಲಕ ಪ್ರಾಟೆಸ್ಟಂಟ್ ಪಂಗಡದ ಪ್ರಸಾರವನ್ನು ನಿಯಂತ್ರಿಸುವುದು ಅದರ ಮತ್ತೊಂದು ಉದ್ದೇಶವಾಗಿತ್ತು.

ಲಿಲ್ಲಿ : `ಪ್ರತಿಸುಧಾರಣೆ’ ಎಂದರೇನು?
ಜಾನ್ : ತನ್ನ ಆಂತರಿಕ ಸುಧಾರಣೆಗಾಗಿ ಕ್ಯಾಥೊಲಿಕ್ ಚರ್ಚ್ ನಡೆಸಿದ ಎಲ್ಲ ಪ್ರಯತ್ನಗಳನ್ನು ಪ್ರತಿಸುಧಾರಣೆ ಎನ್ನುವರು.
ಲಿಲ್ಲಿ : ಪ್ರತಿಸುಧಾರಣಾ ಚಳವಳಿಯ ನಾಯಕನಾರು?
ಜಾನ್ : ಪ್ರತಿಸುಧಾರಣಾ ಚಳವಳಿಯ ನಾಯಕ ಇಗ್ನೇಶಿಯಸ್ ಲಯೋಲಾ. ಈತನು ಜೀಸಸ್ ಸಂಘ [1541] ಸ್ಥಾಪಿಸಿದ.

ಇಗ್ನೇಶಿಯಸ್ ಲಯೋಲಾ: ಲಯೋಲಾ ಸ್ಪೇನಿನ ಓರ್ವ ಸೇನಾನಿ. ಪ್ರಾಟೆಸ್ಟಂಟ್ ಚರ್ಚ್ ಜನಪ್ರಿಯವಾಗುವುದನ್ನು ಮತ್ತು ಕ್ಯಾಥೊಲಿಕ್ ಚರ್ಚಿನ ಜನಪ್ರಿಯತೆ ಕುಗ್ಗುವುದನ್ನು ಅರಿತಿದ್ದನು. ಪ್ರಾಮಾಣಿಕ ಹಾಗೂ ಉತ್ಸಾಹಶಾಲಿಯಾದ ಲಯೋಲಾ ಜನರ ನಂಬಿಕೆಯನ್ನು ಪುನರ್‍ಸ್ಥಾಪಿಸಲು ಶ್ರಮಿಸಿದನು. ಕ್ಯಾಥೊಲಿಕ್ ಉಪದೇಶ, ಪ್ರಸಾರ, ವಿದ್ಯಾಪ್ರಸಾರ ಮುಂತಾದವು `ಜೀಸಸ್ ಸಂಘ’ದ ಅನುಯಾಯಿಗಳಾದ ಜೆಸ್ಯುಯಿಟರ ಕೆಲಸವೆಂದು ಸಾರಿದ.

ಜೀಸಸ್ ಸಂಘದ ಸದಸ್ಯರನ್ನು ಜೆಸ್ಯುಯಿಟರು ಎಂದು ಕರೆದರು. ಇವರು ಮತಪ್ರಚಾರದೊಂದಿಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ವಿಸ್ತರಣೆಯ ಕಡೆಗೆ ಗಮನ ಹರಿಸಿದರು. ಇವರ ದುಡಿಮೆಯ ಫಲವಾಗಿ ಕ್ಯಾಥೊಲಿಕ್ ಚರ್ಚ್ ಮರಳಿ ಜನರ ವಿಶ್ವಾಸಗಳಿಸಿತು.

ಪೀಟರ್ : ಧಾರ್ಮಿಕ ಸುಧಾರಣಾ ಚಳವಳಿಯ ಪರಿಣಾಮಗಳೇನು?
ಜಾನ್ : ಕ್ರೈಸ್ತಮತದ ಅನುಯಾಯಿಗಳು ಕ್ಯಾಥೊಲಿಕರು ಮತ್ತು ಪ್ರಾಟೆಸ್ಟಂಟರು ಎಂಬ ಎರಡು ಮುಖ್ಯ ಪಂಗಡಗಳಾಗಿ ವಿಭಜನೆಯಾದರು. ರೋಮನ್ ಕ್ಯಾಥೊಲಿಕ್ ಚರ್ಚಿನಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳು ಕೊನೆಗೊಂಡವು. ಅಧಿಕಾರಕ್ಕಾಗಿ ಪೋಪ್ ಮತ್ತು ರಾಜರ ನಡುವಿನ ಸಂಘರ್ಷದಲ್ಲಿ ಕ್ರಮೇಣ ರಾಜರು ಪ್ರಬಲರಾದರು.

2.3 ಭೌಗೋಳಿಕ ಅನ್ವೇಷಣೆಗಳು

ನಾಗರತ್ನಾ : ಭೌಗೋಳಿಕ ಅನ್ವೇಷಣೆಗಳು ಎಂದರೇನು?
ಗುರುಗಳು : 15ನೆಯ ಶತಮಾನದವರೆಗೆ ಯೂರೋಪಿಯನ್ನರಿಗೆ ವಿಶ್ವದ ಎಲ್ಲ ಪ್ರದೇಶಗಳ ಪರಿಚಯವಿರಲಿಲ್ಲ. `ಭೂಮಿ ಚಪ್ಪಟೆಯಾಗಿದೆ’ ಎಂಬ ನಂಬಿಕೆಯಿಂದ ವ್ಯಾಪಾರವೆಲ್ಲ ಯೂರೋಪಿನ ತೀರ ಪ್ರದೇಶದವರೆಗೆ ಮಾತ್ರವೇ ನಡೆಯುತ್ತಿತ್ತು. ಕ್ರಮೇಣ ಯುರೋಪಿಯನ್ನರು ತಮ್ಮ ಕುತೂಹಲ, ವ್ಯಾಪಾರಿ ಹಾಗೂ ಸಾಹಸಿ ಪ್ರವೃತ್ತಿಗಳಿಂದ ಹೊಸ ಭೂಭಾಗಗಳನ್ನು ಅನ್ವೇಷಣೆ ಮಾಡಿದರು. ಇದನ್ನು ಭೌಗೋಳಿಕ ಅನ್ವೇಷಣೆಗಳು ಎಂದು ಕರೆಯುವರು.

ಚರ್ಚ್ ನಾಯಕರು ಭೂಮಿಯು ಚಪ್ಪಟೆಯಾಗಿದೆ, ಅದರ ಅಂಚಿನಲ್ಲಿ ಪ್ರಪಾತವಿದೆ ಎಂಬುದಾಗಿ ಏನೇನೋ ನಂಬಿದ್ದರು. ಹೀಗಾಗಿ ಸಮುದ್ರಯಾನ ಕೈಗೊಳ್ಳಲು ನಾವಿಕರು ಅಂಜುತ್ತಿದ್ದರು.

ಸಂತೋಷ : ಭೌಗೋಳಿಕ ಅನ್ವೇಷಣೆಗೆ ಕಾರಣವಾದ ಅಂಶಗಳಾವುವು?
ಗುರುಗಳು : ಭೌಗೋಳಿಕ ಅನ್ವೇಷಣೆಗೆ ಕಾರಣವಾದ ಅಂಶಗಳು ಈ ರೀತಿ ಇವೆ.

• ಕಾನ್‍ಸ್ಟಂಟಿನೋಪಲ್ ನಗರದ ಮೇಲೆ ಆಕ್ರಮಣ: ಸಾ.ಶ.1453ರಲ್ಲಿ ಟರ್ಕರು ಕಾನ್‍ಸ್ಟಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು. ಇದರಿಂದಾಗಿ ಆ ನಗರದ ಮೂಲಕ ನಡೆಯುತ್ತಿದ್ದ ಯುರೋಪಿಯನ್ನರ ವ್ಯಾಪಾರಕ್ಕೆ ಅಡ್ಡಿಯುಂಟಾಯಿತು. ಆದುದರಿಂದ ಯುರೋಪಿಯನ್ನರು ಪೂರ್ವದ ಏಷ್ಯ ದೇಶಗಳಿಗೆ ಹೊಸ ಸಮುದ್ರ ಮಾರ್ಗ ಕಂಡುಹಿಡಿಯುವುದು ಅನಿವಾರ್ಯವಾಯಿತು.

ಕಾನ್‍ಸ್ಟಂಟಿನೋಪಲ್ ನಗರದ ಮೇಲೆ ಆಕ್ರಮಣ

ಕಾನ್‍ಸ್ಟಂಟಿನೋಪಲ್ ನಗರದ ಮೇಲೆ ಆಕ್ರಮಣ

ಕಾನ್‍ಸ್ಟಂಟಿನೋಪಲ್ ನಗರದ ಮೇಲೆ ಆಕ್ರಮಣ

ಕಾನ್‍ಸ್ಟಂಟಿನೋಪಲ್ ನಗರ

• ಮಾರ್ಕ್ ಪೋಲೊವಿನ ವರದಿ: ಏಷ್ಯದ ದೇಶಗಳಿಗೆ (ಭಾರತ, ಚೀನ) ಭೇಟಿ ನೀಡಿದ ಮಾರ್ಕ್ ಪೋಲೊ ತನ್ನ ವರದಿಯಲ್ಲಿ ಏಷ್ಯದ ದೇಶಗಳು ಅಪಾರ ಸಂಪತ್ತಿನಿಂದ ಕೂಡಿವೆಯೆಂಬುದಾಗಿ ವಿವರಿಸಿದ್ದನು. ಅವನ ವರದಿಯು ಯುರೋಪಿನ ವರ್ತಕರಲ್ಲಿ ಆಸಕ್ತಿ ಕೆರಳಿಸಿತು.

ಮಾರ್ಕ್ ಪೋಲೊ

• ಏಷ್ಯದ ಪದಾರ್ಥಗಳಿಗೆ ಬೇಡಿಕೆ: ಏಷ್ಯದ ದೇಶಗಳ ಸರಕುಗಳು ಮತ್ತು ಸಂಬಾರ ಪದಾರ್ಥಗಳಿಗೆ ಯುರೋಪಿನಲ್ಲಿ ಭಾರಿ ಬೇಡಿಕೆಯಿತ್ತು.

ಯುರೋಪಿನಲ್ಲಿ ಬೇಡಿಕೆಯಿದ್ದ ಭಾರತದ ವಸ್ತುಗಳೆಂದರೆ ಕೇಸರಿ, ಸಾಗುವಾನಿ, ಹತ್ತಿ ಬಟ್ಟೆ, ಹುಣಸೆಹಣ್ಣು, ಕರಿಮೆಣಸು, ಲವಂಗ, ದಾಲ್ಚಿನ್ನಿ, ಶ್ರೀಗಂಧ, ಕಸ್ತೂರಿ, ಏಲಕ್ಕಿ, ವಜ್ರ ಮತ್ತು ಜಾಯಪತ್ರೆ.

• ವೈಜ್ಞಾನಿಕ ಆವಿಷ್ಕಾರ: ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ನಕ್ಷತ್ರೋನ್ನತಿ ಮಾಪಕ (ಆಸ್ಟ್ರೋಲ್ಯಾಬ್), ನಕ್ಷೆಗಳು ಮತ್ತು ಕ್ಯಾರವೆಲ್ ಎಂಬ ಬೃಹತ್ ಹಾಯಿಹಡಗುಗಳು ಸಮುದ್ರಯಾನದಲ್ಲಿ ತೊಡಗಿದ ನಾವಿಕರಿಗೆ ವರವಾಗಿ ಪರಿಣಮಿಸಿದವು.

• ಮತೀಯ ಪ್ರೇರಣೆ : ಕ್ರೈಸ್ತ ಮತಪ್ರಚಾರಕರು ಮತಪ್ರಚಾರಕ್ಕಾಗಿ ಏಷ್ಯ ಮತ್ತು ಆಫ್ರಿಕದತ್ತ ದೃಷ್ಟಿ ಹಾಯಿಸಿದರು.

ಜಹನಾರಾ : ಸಮುದ್ರಯಾನದಂತಹ ಸಾಹಸ ಕಾರ್ಯವನ್ನು ಮೊದಲು ಕೈಗೊಂಡವರು ಯಾರು?

ಗುರುಗಳು : ಸಮುದ್ರಯಾನ ಕಾರ್ಯವನ್ನು ಮೊದಲು ಕೈಗೊಂಡವರು ಪೋರ್ಚುಗೀಸರು. ಭಾರತ ಮತ್ತು ಚೀನ ದೇಶಗಳಿಗೆ ಸಾಗರಮಾರ್ಗವೊಂದನ್ನು ಕಂಡು ಹಿಡಿಯುವುದು ಪೋರ್ಚುಗೀಸ್ ರಾಜಕುಮಾರ ಹೆನ್ರಿಯ ಜೀವನದ ಹೆಬ್ಬಯಕೆಯಾಗಿತ್ತು. ಅದಕ್ಕಾಗಿ ನೌಕಾಶಾಲೆಯೊಂದನ್ನು ತೆರೆದ. ಇದರಿಂದಾಗಿ ಆತನು `ಹೆನ್ರಿ ದ ನ್ಯಾವಿಗೇಟರ್’ ಎಂದೇ ಜನಪ್ರಿಯನಾಗಿದ್ದನು. ಆತನ ಪ್ರೋತ್ಸಾಹ ಅನ್ವೇಷಣೆಗಳಿಗೆ ಪ್ರೇರಣೆ ನೀಡಿತು.

ರಾಜಕುಮಾರ ಹೆನ್ರಿ

ಹೆನ್ರಿಯು `ಸ್ಕೂಲ್ ಆಫ್ ನಾವಿಗೇಶನ್’ ಎಂಬ ಶಾಲೆಯ ಸ್ಥಾಪಕ. ಪ್ರತಿವರ್ಷ ಆಫ್ರಿಕದ ಪಶ್ಚಿಮ ಕರಾವಳಿ ತೀರದುದ್ದಕ್ಕೂ ಈ ಶಾಲೆಯ ವತಿಯಿಂದ ಸಮುದ್ರಯಾನವನ್ನು ಕೈಗೊಳ್ಳಲಾಗುತ್ತಿತ್ತು. 16ನೆಯ ಶತಮಾನದ ಆರಂಭದ ವೇಳೆಗೆ ನಾವಿಕರು ಮಾರುತಗಳು, ಸಮುದ್ರದ ಅಲೆಗಳು ಮತ್ತು ಏರಿಳಿತಗಳ ಬಗ್ಗೆ ಸಾಕಷ್ಟು ಮಾಹಿತಿ ಪಡೆದಿದ್ದರು. ಯೂರೋಪಿನ ಹಲವಾರು ಪ್ರಮುಖ ನಾವಿಕರು, ಖಗೋಳತಜ್ಞರು ಮತ್ತು ಭೂಗೋಳತಜ್ಞರು ಈ ಶಾಲೆಯ ಮಾಹಿತಿ ಸೃಷ್ಟಿಸುವ ಪ್ರಕ್ರಿಯೆಯ ಭಾಗವಾಗಿದ್ದರು.

ರಮೇಶ್ : ನಾವಿಕರು ಯಾವ ಯಾವ ಭೂಭಾಗಗಳನ್ನು ಶೋಧ ಮಾಡಿದರು?
ಗುರುಗಳು : • ಬಾರ್ತಲೋಮಿಯೊ ಡಾಯಸ್ ಎಂಬ ಪೋರ್ಚುಗೀಸ್ ನಾವಿಕ ರಾಜಾಶ್ರಯದಲ್ಲಿ ಸಮುದ್ರಯಾನ ಮಾಡಿ ಆಫ್ರಿಕದ ದಕ್ಷಿಣದ ತುತ್ತ ತುದಿಯನ್ನು (ಕೇಪ್) ತಲಪಿದ (1488). ಆ ಪ್ರದೇಶದಲ್ಲಿ ಅವನ ಹಡಗುಗಳು ಮಾರುತಗಳ ಹೊಡೆತಕ್ಕೆ ತುತ್ತಾದವು. ಆದುದರಿಂದ ಆ ಪ್ರದೇಶವನ್ನು ಕೇಫ್ ಆಫ್ ಸ್ಟಾರ್ಮ್’ (ಬಿರುಗಾಳಿಯ ಭೂಶಿರ) ಎಂದು ಕರೆದನು. ಮುಂದಿನ ಯಾನಕ್ಕೆ ಭರವಸೆ ಮೂಡಿಸಿದ್ದರಿಂದ ರಾಜ 2ನೇ ಜಾನನು ಆಫ್ರಿಕದ ದಕ್ಷಿಣ ತುದಿಯನ್ನುಬಿರುಗಾಳಿಯ ಭೂಶಿರ’ವಲ್ಲ ಅದು `ಭರವಸೆಯ ಭೂಶಿರ’ (ಕೇಫ್ ಆಫ್ ಗುಡ್ ಹೋಪ್) ಎಂದು ಕರೆದನು.

ಬಾರ್ತಲೋಮಿಯೊ ಡಾಯಸ್

ವಾಸ್ಕೋಡಗಾಮ: ಮತ್ತೋರ್ವ ಪೋರ್ಚುಗೀಸ್ ವಾಸ್ಕೋಡಗಾಮ ನಾವಿಕನಾದ ವಾಸ್ಕೋಡಗಾಮನು ಡಾಯಸನ ಮಾರ್ಗದಲ್ಲಿ ಹೊರಟು “ಗುಡ್‍ಹೋಪ್ ಭೂಶಿರ” ತಲುಪಿದ. ತರುವಾಯ ಆಫ್ರಿಕದ ಪೂರ್ವತೀರ ಮೆಲಿಂದ ದ್ವೀಪವನ್ನು ತಲುಪಿದನು. ಅಲ್ಲಿದ್ದ ಗುಜರಾತಿ ವ್ಯಾಪಾರಿಯ ಸಹಾಯದಿಂದ ಹಿಂದೂ ಮಹಾಸಾಗರ ಮತ್ತು ಅರಬ್ಬೀ ಸಮುದ್ರಗಳನ್ನು ದಾಟಿ, ಭಾರತದ ಪಶ್ಚಿಮ ತೀರದ ಕಲ್ಲಿಕೋಟೆಯನ್ನು ತಲುಪಿದ (1498). ಹೀಗೆ ಭಾರತಕ್ಕೆ ಹೊಸ ಜಲಮಾರ್ಗ ಅನ್ವೇಷಣೆಯಾಯಿತು. ವಾಸ್ಕೋಡಗಾಮನು ಭಾರತದಿಂದ ಹಿಂದಿರುಗುವಾಗ ತನ್ನ ಸಮುದ್ರಯಾನದ ಒಟ್ಟು ವೆಚ್ಚದ ಅರವತ್ತು ಪಟ್ಟು ಮೌಲ್ಯದ ಸರಕುಗಳನ್ನು ಭಾರತದಿಂದ ಕೊಂಡೊಯ್ದನು.

ವಾಸ್ಕೋಡಗಾಮನು ನಿಜವಾಗಿ ಬಂದು ಇಳಿದಿದ್ದು ಕಲ್ಲಿಕೋಟೆಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ `ಕಾಪ್ಪಾಡ್’ ಎಂಬ ಸ್ಥಳಕ್ಕೆ. ಆಗ ಕಲ್ಲಿಕೋಟೆಯನ್ನು ಜಾಮೋರಿನ್ ದೊರೆಗಳು ಆಳುತ್ತಿದ್ದರು.

`ಕಾಪ್ಪಾಡ್’ ಸ್ಥಳ

• ಸ್ಪೇನ್ ದೇಶದ ನಾವಿಕನಾಗಿದ್ದ ಕ್ರಿಸ್ಟೋಫರ್ ಕೊಲಂಬಸ್ `ಭೂಮಿ ದುಂಡಾಗಿದೆ’ ಎಂಬ ದೃಢ ನಂಬಿಕೆಯೊಂದಿಗೆ ಪಶ್ಚಿಮ ಮಾರ್ಗವಾಗಿ ಸಮುದ್ರಯಾನ ಕೈಗೊಂಡ. ಸಮುದ್ರಯಾನ ಮಾಡಲು ಸ್ಪೇನ್ ದೊರೆ ಫರ್ಡಿನೆಂಡ್ ಮತ್ತು ರಾಣಿ ಇಸಬೆಲ್ಲರ ಸಹಾಯ ಪಡೆದನು. ಅಟ್ಲಾಂಟಿಕ್ ಸಾಗರವನ್ನು ದಾಟಿ ಬಹಮಸ್ ದ್ವೀಪ ತಲುಪಿದ. ಅದನ್ನೇ “ಇಂಡಿಯಾ” ಎಂದು ಭಾವಿಸಿ, ಅಲ್ಲಿಯ ಜನರನ್ನು “ರೆಡ್ ಇಂಡಿಯನ್ಸ್” ಎಂದು ಕರೆದನು. ಇದೇ ವೆಸ್ಟ್ ಇಂಡಿಸ್ ದ್ವೀಪ ಸಮೂಹವಾಗಿತ್ತು, ಆಶ್ಚರ್ಯವೆಂದರೆ ಅವನು ಸಾಯುವವರೆಗೂ ತಾನೊಂದು ಹೊಸ ಭೂಭಾಗವನ್ನು ಶೋಧಿಸಿದ್ದೇನೆಂದು ತಿಳಿದಿರಲಿಲ್ಲ.

ಕ್ರಿಸ್ಟೋಫರ್ ಕೊಲಂಬಸ್ : ಈತನು ಅಟ್ಲಾಂಟಿಕ್ ಸಾಗರ ದಾಟಿ ಪಶ್ಚಿಮಾಭಿಮುಖವಾಗಿ ಭಾರತ ತಲುಪುವ ಗುರಿಯನ್ನಿಟ್ಟುಕೊಂಡಿದ್ದನು. ಮೂರು ಹಡಗುಗಳಲ್ಲಿ 88 ಜನ ನಾವಿಕರೊಡನೆ ಕೊಲಂಬಸ್ 1492 ಆಗಸ್ಟ್‍ನಲ್ಲಿ ಪಾಲೋಸ್ ಬಂದರಿನಿಂದ ಅಟ್ಲಾಂಟಿಕ್ ಸಾಗರದತ್ತ ಸಮುದ್ರಯಾನ ಆರಂಭಿಸಿದ. ಸುಮಾರು ಎರಡು ತಿಂಗಳ ಪ್ರಯಾಣ ಮಾಡಿದರೂ ಭೂಮಿ ಕಾಣಲಿಲ್ಲ, ಅವನ ಜೊತೆಗಿದ್ದ ನಾವಿಕರು ತಿರುಗಿ ಬಿದ್ದರು. ಇನ್ನೂ ಮೂರು ದಿನಗಳಲ್ಲಿ ಯಾರು ಮೊದಲು ಭೂಮಿಯನ್ನು ಕಾಣುವರೋ ಅವರಿಗೆ ಒಂದು ವರ್ಷ ಸಂಬಳದ ಜೊತೆಗೆ ವಿಶೇಷ ಬಹುಮಾನ ಕೊಡಿಸುವುದಾಗಿ ಹೇಳಿ, ಕೊಲಂಬಸ್ ಅವರನ್ನು ಹುರಿದುಂಬಿಸಿದನು. ಅದರಿಂದ ಸ್ಫೂರ್ತಿಗೊಂಡ ನಾವಿಕರು ಸಮುದ್ರಯಾನ ಮುಂದುವರಿಸಿ, ಕೊನೆಗೆ 1492 ಅಕ್ಟೋಬರ್ 12ರಂದು ಬೆಳಗಿನ ಸಮಯಕ್ಕೆ ಭೂಮಿಯನ್ನು ಕಂಡರು.

• ದಕ್ಷಿಣ ಅಮೆರಿಕದ ಅನ್ವೇಷಣೆ: ಕ್ಯಾಪ್ಟನ್ ಪೆದ್ರೊ ಕೆಬ್ರಾಲ್ ಎಂಬಾತನ ನಾಯಕತ್ವದಲ್ಲಿ ಪೋರ್ಚುಗೀಸ್ ನೌಕಾಪಡೆಯೊಂದು ಭಾರತದತ್ತ ಹೊರಟಿತು. ಆದರೆ ಭಾರೀ ಗಾಳಿಯ ಹೊಡೆತಕ್ಕೆ ಸಿಕ್ಕ ನೌಕೆಗಳು ದಾರಿತಪ್ಪಿ ಪಶ್ಚಿಮದತ್ತ ಸಾಗಿ ದಕ್ಷಿಣ ಅಮೆರಿಕದ ಪೂರ್ವ ಕರಾವಳಿಯನ್ನು ತಲುಪಿದವು. ಹೀಗೆ ಕೆಬ್ರಾಲ್ ಆಕಸ್ಮಿಕವಾಗಿ ದಕ್ಷಿಣ ಅಮೆರಿಕದ ಈಗಿನ ಬ್ರೆಜಿಲ್ ಕಂಡುಹಿಡಿಯುವಂತಾಯಿತು.

ಕ್ಯಾಪ್ಟನ್ ಪೆದ್ರೊ ಕೆಬ್ರಾಲ್

ಇಟಲಿಯ ಅಮೆರಿಗೊ ವೆಸ್ಪುಸಿಯು ಕೊಲಂಬಸನ ಮಾರ್ಗವನ್ನೇ ಅನುಸರಿಸಿ ಹೊರಟು ದಕ್ಷಿಣ ಅಮೆರಿಕದ ಭೂಖಂಡವನ್ನು ತಲುಪಿದನು. ಕೊಲಂಬಸ್ ಕಂಡುಹಿಡಿದ ಭೂಭಾಗ ಭಾರತವಲ್ಲ ಅದೊಂದು ಹೊಸ ಜಗತ್ತು’ ಎಂಬುದಾಗಿ ಜಗತ್ತಿಗೆ ಪರಿಚಯಿಸಿದನು. ಆದ್ದರಿಂದ ಈ ಹೊಸಜಗತ್ತಿಗೆ ವೆಸ್ಪುಸಿಯ ನೆನಪಾಗಿಅಮೆರಿಕ’ ಎಂದು ಹೆಸರಿಸುವಂತೆ ಜರ್ಮನ್ ಭೂಗೋಳಶಾಸ್ತ್ರಜ್ಞ ಮಾರ್ಟಿನ್ ವಾಲ್ಡ್ ಸೀಮುಲ್ಲರ್ ಸಲಹೆ ಮಾಡಿದನು. ಅದೇ ಹೆಸರು ಮಾನ್ಯಗೊಂಡು ಅಂಗೀಕಾರವಾಯಿತು.

ಫರ್ಡಿನಾಂಡ್ ಮೆಗಲ್ಲನ್: ಈತ ಓರ್ವ ಮಹಾನ್ ಫರ್ಡಿನಾಂಡ್ ಮೆಗಲ್ಲನ್ ಪೋರ್ಚುಗೀಸ್ ಸಾಹಸೀ ನಾವಿಕ. ಪ್ರಪ್ರಥಮವಾಗಿ ಭೂ ಪರ್ಯಟನಾ ನೌಕಾಯಾನ ಕೈಗೊಂಡ ಶ್ರೇಯಸ್ಸು ಈತನದು. ಸ್ಪೇನಿನಿಂದ ಐದು ಹಾಯಿಹಡಗುಗಳಲ್ಲಿ 267 ಸಹಚರರೊಡನೆ ಹೊರಟ (1519) ಮೆಗಲ್ಲನ್, ದಕ್ಷಿಣ ಅಮೆರಿಕದ ದಕ್ಷಿಣ ತುದಿಯನ್ನು ಬಳಸಿ, ಶಾಂತ ಮಹಾಸಾಗರವನ್ನು ದಾಟಿ ಫಿಲಿಫೈನ್ಸ್ ತಲುಪಿದನು. ಆದರೆ ಅಲ್ಲಿ ಸ್ಥಳೀಯರೊಡನೆ ನಡೆದ ಕದನದಲ್ಲಿ ಮೆಗಲ್ಲನ್ ಮರಣಹೊಂದಿದನು. ಅವನ ಉಳಿದ ಸಹಚರರು ವಿಕ್ಟೋರಿಯಾ' ಎಂಬ ಹಡಗಿನಲ್ಲಿ ಸ್ವದೇಶಕ್ಕೆ ಮರಳಿದರು (1522). ಇದರಿಂದಾಗಿಭೂಮಿ ದುಂಡಾಗಿದೆ’ ಎಂಬುದು ಸ್ಪಷ್ಟವಾಯಿತು.

ಫರ್ಡಿನಾಂಡ್ ಮೆಗಲ್ಲನ್ ಪ್ರಪಂಚವು ದುಂಡಾಗಿದೆ’ ಎಂದು ಭಾವಿಸಿದ್ದನು. ಇವನು ಪಶ್ಚಿಮಾಭಿಮುಖವಾಗಿ ಹೊರಟು ಪೂರ್ವ ದೇಶಗಳಿಗೆ ಮಾರ್ಗ ಕಂಡುಹಿಡಿಯಲು ಬಯಸಿದ. ಅಟ್ಲಾಂಟಿಕ್ ಸಾಗರದ ಮೂಲಕ ಪ್ರಯಾಣ ಮಾಡಿ ದಕ್ಷಿಣ ಅಮೆರಿಕದ ದಕ್ಷಿಣಕ್ಕಿರುವ ಕಿರಿದಾದ ಜಲಸಂಧಿಯನ್ನು ದಾಟಿ ಶಾಂತವಾದ ಸಾಗರವನ್ನು ಪ್ರವೇಶಿಸಿದ. ಮೆಗಲ್ಲನ್ ದಾಟಿಹೋದ ಜಲಸಂಧಿಯನ್ನುಮೆಗಲ್ಲನ್ ಜಲಸಂಧಿ’ಯೆಂದೂ ಸಾಗರವನ್ನು ಪೆಸಿಫಿಕ್ (ಶಾಂತ) ಮಹಾಸಾಗರ ಎಂದೂ ಮುಂದೆ ಕರೆಯಲಾಯಿತು. ಮೆಗಲ್ಲನ್ ಮತ್ತು ಅವನ ಸಂಗಡಿಗರಲ್ಲಿ ಕೆಲವರು ಫಿಲಿಪೈನ್ಸ್‍ನಲ್ಲಿ ಸ್ಥಳೀಯರೊಂದಿಗೆ ನಡೆದ ಹೋರಾಟದಲ್ಲಿ ಸಾವನ್ನಪ್ಪಿದರು. ಉಳಿದವರು ವಿಕ್ಟೋರಿಯಾ' ಎಂಬ ಹಡಗಿನಲ್ಲಿ 1522ರಲ್ಲಿ ಸ್ಪೇನ್ ತಲುಪಿದರು. ಭೂಪ್ರದಕ್ಷಿಣೆ ಮಾಡಿದ ಮೊದಲ ಹಡಗುವಿಕ್ಟೋರಿಯಾ’ ಎನ್ನಬಹುದು.

ಮೈಕಲ್ : ಭೌಗೋಳಿಕ ಅನ್ವೇಷಣೆಯಿಂದಾದ ಪರಿಣಾಮಗಳೇನು?
ಗುರುಗಳು : ಭೌಗೋಳಿಕ ಅನ್ವೇಷಣೆಗಳು ಕೇವಲ ಯುರೋಪಿನ ನಾಗರಿಕತೆಯ ಮೇಲೆ ಮಾತ್ರವಲ್ಲದೆ ಏಷ್ಯ, ಆಫ್ರಿಕ ಹಾಗೂ ಅಮೆರಿಕದ ಜನತೆ ಹಾಗೂ ಸಂಸ್ಕೃತಿಗಳ ಮೇಲೂ ಗಾಢ ಪ್ರಭಾವ ಬೀರಿದವು.

ವಾಣಿಜ್ಯದ ವಿಸ್ತರಣೆ: ಹೊಸತಾಗಿ ಶೋಧಿಸಲಾದ ಭೂಪ್ರದೇಶಗಳನ್ನು ಯುರೋಪಿಯನ್ನರು ತಮ್ಮ ವಾಣಿಜ್ಯ ವಸಾಹತುಗಳನ್ನಾಗಿ ಪರಿವರ್ತಿಸಿಕೊಂಡರು. ಇದರಿಂದ ಜಾಗತಿಕ ವ್ಯಾಪಾರ ವ್ಯಾಪಕವಾಗಿ ವಿಸ್ತರಿಸಿತು. ಏಷ್ಯದ ಸಾಮಗ್ರಿಗಳು ಯೂರೋಪಿನಲ್ಲಿ ವಿಶಾಲ ಮಾರುಕಟ್ಟೆ ಗಳಿಸಿದವು. ಈ ವ್ಯಾಪಾರ ಚಟುವಟಿಕೆಗಳಿಂದ ಬರುತ್ತಿದ್ದ ಲಾಭವೆಲ್ಲವೂ ಐರೋಪ್ಯರದಾಗಿತ್ತು.

• ಗುಲಾಮರ ವ್ಯಾಪಾರ: ಯುರೋಪಿಯನ್ನರು ವೆಸ್ಟ್ ಇಂಡಿಸ್, ಮೆಕ್ಸಿಕೊ, ಪೆರು ಹಾಗೂ ಬ್ರೆಜಿಲ್ ಮೂಲನಿವಾಸಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡರು. ಕ್ರಮೇಣ ಗುಲಾಮರನ್ನು ಸರಕುಗಳಂತೆ ಮಾರಲಾಯಿತು. ಮುಂದೆ `ಗುಲಾಮರ ವ್ಯಾಪಾರ’ದ ದಂಧೆ ಅಮಾನವೀಯ ಹಂತವನ್ನು ತಲುಪಿತು. ಗುಲಾಮರನ್ನು ಕಠಿಣವಾಗಿ ದುಡಿಸಿ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿತ್ತು.

• ಕ್ರಿಶ್ಚಿಯನ್ ಮಿಶನರಿಗಳು: ಹೊಸ ಭೂಭಾಗಗಳ ಮೂಲನಿವಾಸಿಗಳನ್ನು ಕ್ರಿಶ್ಚಿಯನ್ನರಾಗಿ ಮತಾಂತರಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿದರು. ವಸಾಹತುಶಾಹಿ ವಿಸ್ತರಣೆಯಲ್ಲಿ ಪರೋಕ್ಷವಾಗಿ ಕೈಜೋಡಿಸುವ ಕಾರ್ಯವನ್ನು ಕ್ರೈಸ್ತ ಮಿಶನರಿಗಳು ಮಾಡಿದರು.

• ರಾಜಕೀಯ ಪರಿಣಾಮ: ಐರೋಪ್ಯ ದೇಶಗಳೊಳಗೆ ವಸಾಹತುಗಳ ಸ್ವಾಧೀನಕ್ಕಾಗಿ ಮತ್ತು ಅಲ್ಲಿನ ಸಂಪತ್ತಿಗಾಗಿ ತೀವ್ರ ಪೈಪೋಟಿ ನಡೆಯಿತು. ಯುರೋಪಿನ ದೇಶಗಳು ಏಷ್ಯ, ಆಫ್ರಿಕ ಮತ್ತು ಅಮೆರಿಕ ಖಂಡಗಳಲ್ಲಿ ತಮ್ಮ ವಸಾಹತು ನೆಲೆಗಳನ್ನು ಸ್ಥಾಪಿಸಿಕೊಂಡವು.

ವಸಾಹತು ಎಂದರೆ ಒಂದು ದೇಶ ಮತ್ತೊಂದು ದೇಶದ ಭೂಭಾಗದ ಮೇಲೆ ಹೊಂದಿರುವ ರಾಜಕೀಯ ಹಾಗೂ ಆರ್ಥಿಕ ನಿಯಂತ್ರಣವಾಗಿದೆ. ಉದಾ: ಸ್ವತಂತ್ರ ಪೂರ್ವದಲ್ಲಿ ಭಾರತ ಇಂಗ್ಲೆಂಡಿನ ವಸಾಹತುವಾಗಿತ್ತು.

ಮುಖ್ಯ ಇಸವಿಗಳು

1488 – ಬಾರ್ತಲೋಮಿಯೊ ಡಾಯಸ್ ಆಫ್ರಿಕದ ದಕ್ಷಿಣ ಭೂಶಿರ ತಲುಪಿದ್ದು.
1498 – ವಾಸ್ಕೋಡಗಾಮ ಕಲ್ಲಿಕೋಟೆ ತಲುಪಿದ್ದು.
1492 – ಕೊಲಂಬಸ್ ಅಮೆರಿಕ ತಲುಪಿದ್ದು.
1519-1522 – ಮೆಗಲ್ಲನ್ – ಭೂಪ್ರದಕ್ಷಿಣೆ.

ವಿಡಿಯೋ ಪಾಠಗಳು

ಮಧ್ಯಯುಗದ ಯುರೋಪ್|7ನೇ ತರಗತಿ| ಪರಿಷ್ಕೃತ ಪಠ್ಯ 2022-23

ಮಧ್ಯಯುಗದ ಯುರೋಪ್|ಭಾಗ 2|7ನೇ ತರಗತಿ|ಸಮಾಜ ವಿಜ್ಞಾನ| ಪರಿಷ್ಕೃತ ಪಠ್ಯ|2022-23

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

St Peter’s Basilica in Rome : The Largest Church in the World

The Fall of Constantinople

Gutenberg Printing Press

The Travels of Marco Polo – Summary on a Map

How did Vasco Da Gama reach India?

Discovery of America | Educational Videos for Kids

Ferdinand Magellan – First Circumnavigation of the Earth

ಚಟುವಟಿಕೆಗಳು

1 ಪುನರುಜ್ಜೀವನ ಕಾಲದ ವಾಸ್ತುಶಿಲ್ಪ, ಮೂರ್ತಿಶಿಲ್ಪ ಮತ್ತು ವರ್ಣಚಿತ್ರಗಳ ಭಾವಚಿತ್ರಗಳನ್ನು ಸಂಗ್ರಹಿಸಿ ವಿವರಣೆಯೊಂದಿಗೆ ಒಂದು ಆಲ್ಬಂ ತಯಾರಿಸಿರಿ.

2 ಈ ಕೆಳಗಿನ ಧಾರ್ಮಿಕ ನಾಯಕರನ್ನು ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸಿರಿ: ಜಾನ್ ವೈಕ್ಲಿಫ್, ಇಗ್ನೇಶಿಯಸ್ ಲಯೋಲಾ.

ಜಾನ್ ವೈಕ್ಲಿಫ್

St. Ignatius of Loyola

3 ಹೊಸ ಭೂಅನ್ವೇಷಣೆಗಳನ್ನು ಮಾಡಿದ ಪ್ರಮುಖ ನಾವಿಕರ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸಿರಿ.

4 ಬಿ.ಜಿ.ಎಲ್. ಸ್ವಾಮಿ ಅವರ `ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಕೃತಿಯನ್ನು ಓದಿ ಯೂರೋಪಿಯನರಿಂದ ಭಾರತಕ್ಕೆ ಪರಿಚಯವಾದ ಹಣ್ಣು ಮತ್ತು ತರಕಾರಿಗಳ ಹೆಸರುಗಳನ್ನು ಪಟ್ಟಿ ಮಾಡಿರಿ.