ಭಾಗಾಕಾರ – ಅಧ್ಯಾಯ-6

ಸಮ ಗುಂಪುಗಳಾಗಿಸಿ ಭಾಗಮಾಡುವುದು

ಚಟುವಟಿಕೆ : ಕರಣ್‍ನ ಬಳಿ 12 ಚೆಂಡುಗಳಿವೆ. ಅವನು ತನ್ನ ನಾಲ್ಕು ಸ್ನೇಹಿತರುಗಳಾದ ರಾಮ್, ಗೋಪಾಲ್, ಅಶೋಕ ಮತ್ತು ರಾಜುವಿಗೆ ಅವುಗಳನ್ನು ಸಮನಾಗಿ ಹಂಚುತ್ತಾನೆ. ಈಗ ಪ್ರತಿಯೊಬ್ಬರಿಗೂ ಸಿಗುವ ಚೆಂಡುಗಳೆಷ್ಟು?

ಕರಣ್‍ನ ಬಳಿ ಇರುವ ಚೆಂಡುಗಳನ್ನು ಗಮನಿಸು.

ನೀನು ಚೆಂಡುಗಳನ್ನು ಸಮನಾಗಿ ಹಂಚಲು ಸಹಾಯ ಮಾಡುವೆಯಾ?

ಅವನು ಪ್ರತಿಯೊಬ್ಬ ಸ್ನೇಹಿತನಿಗೆ ಒಂದೊಂದು ಚೆಂಡನ್ನು ಹಂಚುತ್ತಾನೆ.
ಈಗ ಅವನಲ್ಲಿ ಉಳಿಯುವ ಚೆಂಡುಗಳ ಸಂಖ್ಯೆ ಎಷ್ಟು?

ಎರಡನೇ ಬಾರಿ ಒಬ್ಬೊಬ್ಬರಿಗೆ ಒಂದೊಂದು ಚೆಂಡನ್ನು ಹಂಚಬಹುದೆ? ಕರಣ್ ಬಳಿ ಉಳಿದಿರುವ ಚೆಂಡುಗಳು ಎಷ್ಟು?

ಅವನು ಮತ್ತೊಂದು ಬಾರಿ ಪ್ರತಿಯೊಬ್ಬರಿಗೆ ಒಂದೊಂದು ಚೆಂಡಿನಂತೆ ಹಂಚುತ್ತಾನೆ ಅಲ್ಲವೇ ?

ಈಗ ಕರಣ್ ಬಳಿ ಚೆಂಡುಗಳು ಉಳಿದಿವೆಯೇ? ಯೋಚಿಸು.

ಕರಣ್‍ನ ಪ್ರತಿಯೊಬ್ಬ ಸ್ನೇಹಿತನಲ್ಲೂ 3 ಚೆಂಡುಗಳಿವೆ.

ಆದುದರಿಂದ 12 ಚೆಂಡುಗಳನ್ನು ಪ್ರತಿ ಗುಂಪಿನಲ್ಲಿ 3 ಚೆಂಡುಗಳಂತೆ 4 ಗುಂಪುಗಳಲ್ಲಿ ಹಂಚಲಾಗಿದೆ.

‘÷’ ಚಿಹ್ನೆಯನ್ನು ಬಳಸಿ ಮೇಲಿನ ಕ್ರಿಯೆಯನ್ನು ಈ ರೀತಿ ಬರೆಯಬಹುದು. 12÷4=3

ವಸ್ತುಗಳನ್ನು ಸಮಭಾಗಗಳನ್ನಾಗಿ ವಿಂಗಡಿಸುವ ಅಥವಾ ಹಂಚುವ ವಿಧಾನವನ್ನು “ಭಾಗಾಕಾರ” ಎನ್ನುತ್ತೇವೆ.

ಉದಾಹರಣೆ 1: ನಾಲ್ಕು ಸ್ನೇಹಿತರು ಒಂದು ಮಾವಿನ ತೋಟಕ್ಕೆ ಹೋಗುತ್ತಾರೆ. ಅಲ್ಲಿ ಅವರು 32 ಮಾವಿನ ಹಣ್ಣುಗಳನ್ನು ತೆಗೆದುಕೊಳ್ಳುತ್ತಾರೆ. ಈ ಮಾವಿನ ಹಣ್ಣುಗಳನ್ನು ಪ್ರತಿಯೊಬ್ಬರೂ ಸಮನಾಗಿ ಹಂಚಿಕೊಳ್ಳುತ್ತಾರೆ. ಪ್ರತಿಯೊಬ್ಬರಿಗೂ ದೊರೆಯುವ ಮಾವಿನಹಣ್ಣುಗಳ ಸಂಖ್ಯೆ ಎಷ್ಟು?

ಸ್ನೇಹಿತರ ಸಂಖ್ಯೆ = 4
ಹಂಚಿಕೊಳ್ಳಬೇಕಾದ ಮಾವಿನ ಹಣ್ಣುಗಳ ಸಂಖ್ಯೆ = 32
ಪ್ರತಿಯೊಬ್ಬರಿಗೂ ದೊರೆಯುವ ಮಾವಿನ ಹಣ್ಣುಗಳ ಸಂಖ್ಯೆ = 32÷4=8

ಚುಕ್ಕೆಗಳನ್ನು ಬಳಸಿ ಭಾಗಾಕಾರ ಮಾಡುವುದು

ಚಟುವಟಿಕೆ 1 : ಒಂದು ಬುಟ್ಟಿಯಲ್ಲಿ 16 ಹೂವುಗಳಿವೆ. ಇದನ್ನು ಸಮಪ್ರಮಾಣದಲ್ಲಿ ಎರಡು ಗುಂಪುಗಳಾಗಿ ವಿಂಗಡಿಸು.

ಮೇಲಿನ ಚಟುವಟಿಕೆಯಲ್ಲಿ ಪ್ರತಿ ಹೂವನ್ನು ಒಂದು ಚುಕ್ಕೆಯಾಗಿ ತೆಗೆದುಕೊಳ್ಳಲಾಗಿದೆ.
ಈಗ ಎಷ್ಟು ಚುಕ್ಕೆಗಳನ್ನು ತೆಗೆದುಕೊಳ್ಳಬೇಕು?

ನೀನು ಅವುಗಳನ್ನು ಎರಡು ಸಮಗುಂಪುಗಳಲ್ಲಿ ಜೋಡಿಸಬಲ್ಲೆಯಾ? ಪ್ರಯತ್ನಿಸು

ಪ್ರತಿ ಗುಂಪಿನಲ್ಲೂ 8 ಚುಕ್ಕೆಗಳಿವೆಯಲ್ಲವೇ?
ಇದನ್ನು ಭಾಗಾಕಾರದ ಪ್ರಕಾರ ಹೇಗೆ ಬರೆಯುವಿರಿ?
16÷2 = 8

ಉದಾಹರಣೆ 1: ಒಂದು ಡಬ್ಬಿಯಲ್ಲಿರುವ 15 ಚಾಕೊಲೇಟ್‍ಗಳನ್ನು ಮೂರು ಸಮಭಾಗಗಳನ್ನಾಗಿ ವಿಂಗಡಿಸು. ಪ್ರತಿ ಭಾಗದಲ್ಲಿ ಬರುವ ಚಾಕೊಲೇಟ್‍ಗಳ ಸಂಖ್ಯೆ ಎಷ್ಟು?

15 ಚಾಕೊಲೇಟುಗಳನ್ನು15 ಚುಕ್ಕೆಗಳಾಗಿ ಪರಿಗಣಿಸು.

ಈ ಚುಕ್ಕೆಗಳನ್ನು 3 ಗುಂಪುಗಳಲ್ಲಿ ಸಮನಾಗಿ ಹಂಚಬಲ್ಲೆಯಾ? ಪ್ರಯತ್ನಿಸು.

ಪ್ರತಿ ಭಾಗದ ಚಾಕೊಲೇಟ್‍ಗಳ ಸಂಖ್ಯೆ ———–
ಇದನ್ನು ಭಾಗಾಕಾರದ ಪ್ರಕಾರ ಹೇಗೆ ಬರೆಯುವೆ?

ಪುನರಾವರ್ತಿತ ವ್ಯವಕಲನವೇ ಭಾಗಾಕಾರ ಅಥವಾ ವ್ಯವಕಲನದ ಸುಲಭ ರೂಪವೇ ಭಾಗಾಕಾರ.

ಚಟುವಟಿಕೆ : ರಾಧಾಳ ತಂದೆಯು ಅವಳಿಗೆ 20 ಕಥೆ ಪುಸ್ತಕಗಳನ್ನು ತಂದುಕೊಟ್ಟರು. ಅವಳು ದಿನವೊಂದಕ್ಕೆ 5 ಪುಸ್ತಕಗಳಂತೆ ಓದುತ್ತಾ ಹೋದರೆ ಅಷ್ಟೂ ಪುಸ್ತಕಗಳನ್ನು ಓದಲು ಎಷ್ಟು ದಿನ ಬೇಕಾಗುತ್ತದೆ?

20 ಪುಸ್ತಕಗಳನ್ನು ಓದಲು ರಾಧಳಿಗೆ ಎಷ್ಟು ದಿವಸಗಳು ಬೇಕಾಗುತ್ತದೆ ಎಂದು ಕಂಡುಹಿಡಿಯಲು ನೀನು ಸಹಾಯ ಮಾಡುವೆಯಾ?
ಅವಳು ಪ್ರತಿದಿನ 5 ಪುಸ್ತಕಗಳನ್ನು ಓದುತ್ತಾಳೆ.
ಮೊದಲನೇ ದಿನದ ನಂತರ ಅವಳಲ್ಲಿ ಓದಲು ಉಳಿದಿರುವ ಪುಸ್ತಕಗಳ ಸಂಖ್ಯೆ 20 – 5 = 15
ಎರಡನೇ ದಿನದ ನಂತರ ಅವಳಲ್ಲಿ ಓದಲು ಉಳಿದಿರುವ ಪುಸ್ತಕಗಳ ಸಂಖ್ಯೆ 15 – 5 = 10
ಮೂರನೇ ದಿನದ ನಂತರ ಅವಳಲ್ಲಿ ಓದಲು ಉಳಿದಿರುವ ಪುಸ್ತಕಗಳ ಸಂಖ್ಯೆ 10 – 5 = 5
ನಾಲ್ಕನೇ ದಿನದ ನಂತರ ಅವಳಲ್ಲಿ ಓದಲು ಉಳಿದಿರುವ ಪುಸ್ತಕಗಳ ಸಂಖ್ಯೆ 5 – 5 = 0
ನಾಲ್ಕು ದಿನದ ನಂತರ ಅವಳಲ್ಲಿ ಓದಲು ಪುಸ್ತಕಗಳು ಉಳಿದಿವೆಯೇ? ಯೋಚಿಸು.
ಮೇಲಿನ ಚಟುವಟಿಕೆಯ ಸಹಾಯದಿಂದ ವ್ಯವಕಲನಕ್ಕೂ ಭಾಗಾಕಾರಕ್ಕೂ ಇರುವ ಸಂಬಂಧವನ್ನು ಅರಿಯಲು ಪ್ರಯತ್ನಿಸು.

ಭಾಗಾಕಾರವು ಪುನರಾವರ್ತಿತ ವ್ಯವಕಲನ.

ಗುಣಾಕಾರಕ್ಕೂ ಭಾಗಾಕಾರಕ್ಕೂ ಇರುವ ಸಂಬಂಧಗಳನ್ನು ಹೋಲಿಸಲು ಸಾಧ್ಯವೇ ಊಹಿಸು.

ಗುಣಾಕಾರಕ್ಕೂ ಭಾಗಾಕಾರಕ್ಕೂ ಇರುವ ಸಂಬಂಧ

ಉದಾಹರಣೆ 1 : ಈ ಚಿತ್ರವನ್ನು ಗಮನಿಸು

ಚಿತ್ರ (a) ನಲ್ಲಿರುವ ನಕ್ಷತ್ರಗಳನ್ನು ಎಣಿಸು ಅಡ್ಡಸಾಲುಗಳ ಸಂಖ್ಯೆ ಮತ್ತು ಪ್ರತಿ ಅಡ್ಡಸಾಲಿನಲ್ಲಿರುವ ನಕ್ಷತ್ರಗಳ ಸಂಖ್ಯೆಗಳನ್ನು ಗಮನಿಸು.
20 ನಕ್ಷತ್ರಗಳನ್ನು ಸಮನಾಗಿ ಪ್ರತಿ ಅಡ್ಡಸಾಲಿನಲ್ಲಿ 5 ರಂತೆ ನಾಲ್ಕು ಅಡ್ಡಸಾಲುಗಳಲ್ಲಿ ಹಂಚಲಾಗಿದೆ ಅಲ್ಲವೇ?
ಇದನ್ನು ನಾವು ಗುಣಾಕಾರ ಮತ್ತು ಭಾಗಾಕಾರ ಬಳಸಿ ಈ ರೀತಿ ಸೂಚಿಸಬಹುದಲ್ಲವೆ?
ಗುಣಾಕಾರದ ನಿಜಾಂಶದಂತೆ 4×5=20
ಭಾಗಾಕಾರದ ನಿಜಾಂಶದಂತೆ 20÷4=5

ಚಿತ್ರ (b) ಯನ್ನು ಗಮನಿಸು


20 ನಕ್ಷತ್ರಗಳನ್ನು ಸಮನಾಗಿ ಪ್ರತಿ ಅಡ್ಡಸಾಲಿನಲ್ಲಿ 4 ರಂತೆ 5 ಅಡ್ಡ ಸಾಲುಗಳಲ್ಲಿ ಹಂಚಲಾಗಿದೆ ಅಲ್ಲವೇ?
ಇದನ್ನು ನೀನು ಗುಣಾಕಾರ ಮತ್ತು ಭಾಗಾಕಾರ ಬಳಸಿ ಈ ರೀತಿ ಸೂಚಿಸಬಹುದಲ್ಲವೆ?
5×4 = 20 ಗುಣಾಕಾರ ನಿಜಾಂಶ
20÷5 = 4 ಭಾಗಾಕಾರ ನಿಜಾಂಶ

ಸೂಚನೆ : ಗುಣಾಕಾರದಲ್ಲಿ ನಾವು ಎರಡು ಸಂಖ್ಯೆಗಳ ಗುಣಲಬ್ಧವನ್ನು ಕಂಡುಹಿಡಿಯುತ್ತೇವೆ. ಭಾಗಾಕಾರದಲ್ಲಿ ನಾವು ಎರಡು ಸಂಖ್ಯೆಗಳ ಗುಣಲಬ್ಧ ಮತ್ತು ಒಂದು ಸಂಖ್ಯೆಯು ಗೊತ್ತಿದ್ದರೆ ಎರಡನೇ ಸಂಖ್ಯೆಯನ್ನು ಕಂಡುಹಿಡಿಯುತ್ತೇವೆ.

ಉದಾಹರಣೆ 2 :
ಭಾಗಾಕಾರದ ನಿಜಾಂಶಗಳನ್ನು ಕಂಡುಹಿಡಿ 6×8 = 48
ಭಾಗಾಕಾರದ ಎರಡು ನಿಜಾಂಶಗಳು ಹೀಗಿವೆ
48÷6 = 8
ಮತ್ತು 48÷8 = 6
ಉದಾಹರಣೆಯಂತೆ ಇವುಗಳ ಭಾಗಾಕಾರ ನಿಜಾಂಶಗಳನ್ನು ಬರೆ.

ಒಂದು ಅಂಕೆಯ ಸಂಖ್ಯೆಯಿಂದ ನಿಶ್ಯೇಷವಾಗಿ ಭಾಗಿಸುವುದು.

ನೀನು ಭಾಗಾಕಾರದ ಬಗ್ಗೆ ಹಿಂದೆಯೇ ತಿಳಿದಿರುವೆ. ಜ್ಞಾಪಿಸಿಕೋ 28÷4=7
ನೀನು ದೊಡ್ಡ ಸಂಖ್ಯೆಗಳನ್ನು ಇದೇ ರೀತಿ ಭಾಗಿಸಬಲ್ಲೆಯಾ?
ವಿದ್ಯಾರ್ಥಿಗಳಿಗೆ ನಾಲ್ಕು ಐಸ್‍ಕ್ರೀಂ ಕಡ್ಡಿಗಳನ್ನು ಬಳಸಿ ಚೌಕಗಳನ್ನು ಮಾಡಲು ತಿಳಿಸಿ 148 ಕಡ್ಡಿಗಳನ್ನು ಬಳಸಿ ಎಷ್ಟು ಚೌಕಗಳನ್ನು ಮಾಡಬಹುದು?

ಹಂತ 1 :
1 < 4 ಆದುದರಿಂದ 2 ಅಂಕೆಯನ್ನು ತೆಗೆದುಕೊಂಡು ಭಾಗಿಸು 14 ಹತ್ತುಗಳನ್ನು 4ರಿಂದ ಭಾಗಿಸು, 4×3=12
3 ನ್ನು ಭಾಗಲಬ್ಧದಲ್ಲಿ ಬರೆ, 14-12 ಕಳೆದರೆ ಶೇಷ 2 ಉಳಿಯುತ್ತದೆ.

ಹಂತ 2 :
8 ಬಿಡಿಗಳನ್ನು ಇಪ್ಪತ್ತು ಬಿಡಿಗಳ ಜೊತೆ ತೆಗೆದುಕೋ, 28 ಬಿಡಿಗಳನ್ನು 4 ರಿಂದ ಭಾಗಿಸು 4×7=28
7 ನ್ನು ಭಾಗಲಬ್ಧದಲ್ಲಿ 3 ರ ಪಕ್ಕ ಬರೆ, 28 ನ್ನು 28 ರಿಂದ ಕಳೆದರೆ ಶೇಷ ‘0’ ಉಳಿಯುತ್ತದೆ.

ತಿಳಿದಿರಲಿ
 ಯಾವ ಸಂಖ್ಯೆಯನ್ನು ಭಾಗಿಸಬೇಕಾಗಿದೆಯೋ ಅದನ್ನು ಭಾಜ್ಯ ಎನ್ನುತ್ತಾರೆ.
 ಯಾವ ಸಂಖ್ಯೆಯಿಂದ ಭಾಜ್ಯವನ್ನು ಭಾಗಿಸಲಾಗುತ್ತಿದೆಯೋ ಅದನ್ನು ಭಾಜಕ ಎನ್ನುತ್ತಾರೆ.
 ಭಾಗಾಕಾರದ ಫಲಿತಾಂಶವನ್ನು ಭಾಗಲಬ್ಧ ಎನ್ನುತ್ತಾರೆ.
 ಭಾಗಾಕಾರದ ನಂತರ ಭಾಜ್ಯದಲ್ಲಿ ಉಳಿಯುವುದನ್ನು ಶೇಷ ಎನ್ನುತ್ತಾರೆ.
 ಯಾವಾಗಲೂ ಶೇಷವು ಭಾಜಕಕ್ಕಿಂತ ಚಿಕ್ಕದಾಗಿರುತ್ತದೆ.

ಹಂತ 3 :
2 ಹತ್ತುಗಳನ್ನು ಸೊನ್ನೆಯ ಪಕ್ಕಕ್ಕೆ ತೆಗೆದುಕೋ ಈಗ ಪರೀಕ್ಷಿಸು. 7,2 ಕ್ಕಿಂತ ದೊಡ್ಡದು ಆದುದರಿಂದ 7×0=0
‘0’ ಯು 2 ಕ್ಕಿಂತ ಚಿಕ್ಕದು. ಇದನ್ನು ಕಳೆಯಲು ಸಾಧ್ಯವಾಗುತ್ತದೆ.
‘0’ ಯನ್ನು 2 ರ ಪಕ್ಕದಲ್ಲಿ ಭಾಗಲಬ್ಧದಲ್ಲಿ ಬರೆ.
2-0=2 ಆಗುತ್ತದೆ, ಶೇಷ 2 ನ್ನು ಬರೆ.

ಹಂತ 4 :
ಈಗ 8 ಬಿಡಿಗಳನ್ನು ಎರಡರ ಪಕ್ಕಕ್ಕೆ ಬರೆ, 28 ಬಿಡಿಗಳನ್ನು 7 ರಿಂದ ಭಾಗಿಸು 7×4=28
‘4’ ನ್ನು ಭಾಗಲಬ್ಧದಲ್ಲಿ ‘0’ ಯ ಪಕ್ಕ ಬರೆ.
28 ನ್ನು 28 ರಿಂದ ಕಳೆ [28-28=0] .
‘0’ ಶೇಷವನ್ನು ಬರೆ.

ಉದಾಹರಣೆ 3 :
1735 ಪುಸ್ತಕಗಳನ್ನು 5 ಶಾಲೆಗಳಿಗೆ ಸಮನಾಗಿ ಹಂಚಲಾಗಿದೆ. ಪ್ರತಿಯೊಂದು ಶಾಲೆಗೆ ದೊರೆತ ಪುಸ್ತಕಗಳ ಸಂಖ್ಯೆ ಎಷ್ಟು?
ಒಟ್ಟು ಪುಸ್ತಕಗಳ ಸಂಖ್ಯೆ = 1735
ಒಟ್ಟು ಶಾಲೆಗಳ ಸಂಖ್ಯೆ = 5
ಪ್ರತಿ ಶಾಲೆಗೆ ದೊರೆತ ಪುಸ್ತಕಗಳ ಸಂಖ್ಯೆ = 347 ಪುಸ್ತಕಗಳು

ಭಾಜ್ಯವನ್ನು ಒಂದು ಅಂಕಿ ಸಂಖ್ಯೆಯಿಂದ ಶೇಷ ಉಳಿಯುವಂತೆ ಭಾಗಿಸುವುದು.

ಒಂದು ಸಂಖ್ಯೆಯನ್ನು ಭಾಗಿಸುವ ಕ್ರಿಯೆಯನ್ನು ನೀನು ತಿಳಿದಿರುವೆ.

ರವಿಯು ತನ್ನ ಬಳಿ ಇರುವ 9 ಲಾಡುಗಳನ್ನು ನಾಲ್ಕು ಜನ ಸ್ನೇಹಿತರಿಗೆ ಸಮನಾಗಿ ಹಂಚಲು ಸಾಧ್ಯವೇ? ಪ್ರಯತ್ನಿಸು.

ಶೇಷ ರವಿಯ ಎಲ್ಲಾ ಸ್ನೇಹಿತರಿಗೆ ದೊರೆತ ಲಾಡುಗಳ ಸಂಖ್ಯೆ ಎಷ್ಟು?
ರವಿಯ ಬಳಿ ಹಂಚಲಾಗದೆ ಉಳಿದ ಲಾಡುಗಳ ಸಂಖ್ಯೆ ಎಷ್ಟು?
ಎಲ್ಲರಿಗೂ ಸಮನಾಗಿ ಹಂಚಿದ ನಂತರ ರವಿಯ ಬಳಿ ಉಳಿದ ಲಾಡುವಿನ ಸಂಖ್ಯೆಯೇ ಶೇಷ.

ಗಮನಿಸು : ಶೇಷವು ಭಾಜಕಕ್ಕಿಂತ ಚಿಕ್ಕದಾಗಿರುತ್ತದೆ.
ಈ ಮುಂದಿನ ಸೂತ್ರದಿಂದ ಉತ್ತರವನ್ನು ತಾಳೆನೋಡಲು ಸಾಧ್ಯ.
(ಭಾಗಲಬ್ಧ x ಭಾಜಕ) + ಶೇಷ = ಭಾಜ್ಯ
ಮೇಲಿನ ಉದಾಹರಣೆಯಲ್ಲಿ (2×4)+1=9

ಉದಾಹರಣೆ 1 : 86 ನ್ನು 5 ರಿಂದ ಭಾಗಿಸಿ. ಭಾಗಲಬ್ಧ ಮತ್ತು ಶೇಷವನ್ನು ಕಂಡುಹಿಡಿ.

ಹಂತ 1:
8 ಹತ್ತುಗಳನ್ನು 5 ರಿಂದ ಭಾಗಿಸು, 5×1=5, 1 ನ್ನು ಭಾಗಲಬ್ಧದ ಹತ್ತರ ಸ್ಥಾನದಲ್ಲಿ ಬರೆ. 8-5=3, 3 ನ್ನು ಶೇಷದಲ್ಲಿ ಬರೆ.
ಹಂತ 2:
6 ಬಿಡಿಯನ್ನು 30 ಬಿಡಿಯ ಜೊತೆ ತೆಗೆದುಕೋ, 36 ಬಿಡಿಯನ್ನು 5 ರಿಂದ ಭಾಗಿಸು, 5×7=35, 7 ನ್ನು ಭಾಗಲಬ್ಧದ ಬಿಡಿ ಸ್ಥಾನದಲ್ಲಿ ಬರೆ, 36-35=1. 1ನ್ನು ಶೇಷದಲ್ಲಿ ಬರೆ.

ಒಂದಕ್ಕಿಂತ ಹೆಚ್ಚು ಗಣಿತದ ಕ್ರಿಯೆಗಳನ್ನು ಹೊಂದಿರುವ ಸಮಸ್ಯೆಗಳನ್ನು ಬಿಡಿಸುವುದು.

ನೆನಪಿಡು : ಗಣಿತದ ಮೂಲಕ್ರಿಯೆಗಳು ಸಂಕಲನ (+), ವ್ಯವಕಲನ ( – ), ಗುಣಾಕಾರ ( x ) ಮತ್ತು ಭಾಗಾಕಾರ ( ÷ )

ಗಣಿತದ ನಾಲ್ಕು ಮೂಲ ಕ್ರಿಯೆಗಳನ್ನು ಪ್ರತ್ಯೇಕವಾಗಿ ಉಪಯೋಗಿಸಿ ಸಮಸ್ಯೆಗಳನ್ನು ಬಿಡಿಸುವುದನ್ನು ನೀನು ತಿಳಿದಿರುವೆ.
ಈಗ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಮೂಲಕ್ರಿಯೆಗಳನ್ನು ಉಪಯೋಗಿಸಿ ಗಣಿತ ಸಮಸ್ಯೆಗಳನ್ನು ಬಿಡಿಸುವುದನ್ನು ತಿಳಿಯಲು ಪ್ರಯತ್ನಿಸು.

ಉದಾಹರಣೆ 1 :
ರಘು ತಿಂಗಳಿಗೆ 8000 ಸಂಪಾದಿಸುತ್ತಾನೆ ಅದರಲ್ಲಿ ಬಾಡಿಗೆಗೆ 2000 ಆಹಾರಕ್ಕೆ 3500 ಮತ್ತು ಬಟ್ಟೆಗಾಗಿ 1000 ಖರ್ಚುಮಾಡುತ್ತಾನೆ. ಉಳಿಕೆ ಹಣವನ್ನು ಉಳಿತಾಯ ಮಾಡುತ್ತಾನೆ. ಅವನ ಉಳಿತಾಯ ಎಷ್ಟು?

ಉದಾಹರಣೆ 2 :
ಸವಿತಳು 25 ಕಿಗ್ರಾಂ ಮಾವಿನ ಹಣ್ಣುಗಳನ್ನು ಕಿಗ್ರಾಂ ಒಂದಕ್ಕೆ 12 ರಂತೆ ಮಾರಿ ಬಂದ ಹಣದಿಂದ 10 ಕಿಗ್ರಾಂ ಅಕ್ಕಿಯನ್ನು ಖರೀದಿಸುತ್ತಾಳೆ. ಹಾಗಾದರೆ ಅವಳು ಖರೀದಿಸಿದ 1 ಕಿಗ್ರಾಂ ಅಕ್ಕಿಯ ಬೆಲೆ ಏಷ್ಟು?

ವಿಡಿಯೋ ಪಾಠಗಳು

ಭಾಗಾಕಾರ | DIVISION PROBLEMS | 4th class | Chapter 6 | ಅಧ್ಯಾಯ 6 | ಅಭ್ಯಾಸ 6.1
ಭಾಗಾಕಾರ | DIVISION PROBLEMS | 4th class | Chapter 6 | ಅಧ್ಯಾಯ 6 | ಅಭ್ಯಾಸ 6.2
ಭಾಗಾಕಾರ | DIVISION PROBLEMS | 4th class | Chapter 6 | ಅಧ್ಯಾಯ 6 | ಅಭ್ಯಾಸ 6.3
ಭಾಗಾಕಾರ | DIVISION PROBLEMS | 4th class | Chapter 6 | ಅಧ್ಯಾಯ 6 | ಅಭ್ಯಾಸ 6.4

ಅಭ್ಯಾಸಗಳು

ಅಭ್ಯಾಸ 6.1, 6.2, 6.3 ಹಾಗೂ 6.4 ಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ