ನೀರು – ಪಾಠ – 7

ಸಸ್ಯ ಮತ್ತು ಪ್ರಾಣಿಗಳು ಜೀವಿಸಲು ನೀರು ಅತ್ಯವಶ್ಯಕ. ನೀರಿಲ್ಲದೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ನೀರು ಎಲ್ಲರ ಮೂಲಭೂತ ಅಗತ್ಯವಾಗಿದೆ. ನೀರಿನಿಂದ ಅನೇಕ ಉಪಯೋಗಗಳಿವೆ. ಆದ್ದರಿಂದ ನೀರು ಬಹು ಮುಖ್ಯವಾದ ಸಂಪನ್ಮೂಲವಾಗಿದೆ. ಇದನ್ನು ಜೀವಜಲ ಎಂದೂ ಕರೆಯುತ್ತಾರೆ. ಭೂಮಿಯ ಮೇಲ್ಭಾಗ ಶೇ. 71 ಭಾಗದಷ್ಟು ನೀರಿನಿಂದ ಆವರಿಸಿದೆ.

ಹಿಂದಿನ ತರಗತಿಯಲ್ಲಿ ಕಲಿತ ಭೂಮಿಯ ಮೇಲಿನ ನೀರಿನ ಹಂಚಿಕೆಯನ್ನು ನೆನಪಿಸಿಕೊ.
ಈ ಪ್ರಶ್ನೆಗಳಿಗೆ ಉತ್ತರಿಸು.
* ಭೂಮಿಯ ಮೇಲೆ ನೀರು ಹೆಚ್ಚಾಗಿ ಎಲ್ಲಿ ಕಂಡು ಬರುತ್ತದೆ?
* ಬಳಸಬಹುದಾದ ಸಿಹಿ ನೀರಿನ ಪ್ರಮಾಣ ಎಷ್ಟು?
* ಸಿಹಿ ನೀರು ಯಾವ ಆಕರಗಳಲ್ಲಿ ದೊರೆಯುತ್ತದೆ?
* ನಿನಗೆ ತಿಳಿದಿರುವ ನೀರಿನ ವಿವಿಧ ಆಕರಗಳ ಹೆಸರನ್ನು ಬರೆ.

ನೀರಿನ ಮುಖ್ಯ ಮೂಲ ಮಳೆ. ಇದಲ್ಲದೆ ಉಳಿದ ಆಕರಗಳ ಬಗ್ಗೆ ತಿಳಿಯೋಣ.

ಸಾಗರಗಳು
ಭೂಮಿಯ ಮೇಲೆ ಸಾಗರಗಳು ನೀರಿನ ಅತೀ ದೊಡ್ಡ ಆಕರಗಳಾಗಿವೆ.


ಈ ಗೋಳವನ್ನು ನೋಡು. ನೀಲಿಬಣ್ಣದಿಂದ ಕೂಡಿರುವ ಭಾಗವು ನೀರಿನಿಂದ ಆವರಿಸಿದ ಭೂಭಾಗವನ್ನು ಸೂಚಿಸುತ್ತದೆ.

ನದಿಗಳು
ನದಿ ನೀರಿಗೂ ಮಳೆಯೇ ಆಧಾರ. ಬೇಸಿಗೆಯಲ್ಲಿ ಹಿಮ ಪರ್ವತಗಳ ಹಿಮ ಕರಗಿ ನದಿಯನ್ನು ಸೇರುತ್ತದೆ. ಆಗ ನದಿಗಳು ತುಂಬಿ ಹರಿಯುತ್ತವೆ. ಎಲ್ಲಾ ನದಿಗಳು ನಿರ್ದಿಷ್ಟ ಮಾರ್ಗದಲ್ಲಿ ಹರಿದು ಕೊನೆಗೆ ಸಾಗರವನ್ನು ಸೇರುತ್ತದೆ.
ಕರ್ನಾಟಕದ ಕೆಲವು ಮುಖ್ಯ ನದಿಗಳನ್ನು ಹೆಸರಿಸು.

ಚಿಲುಮೆಗಳು
ಭೂ ಕವಚದ ಕೆಳಗೆ ಸಂಗ್ರಹಗೊಂಡಿರುವ ಅಂತರ್ಜಲವು ಒತ್ತಡದಿಂದಾಗಿ ರಂಧ್ರಗಳ ಮೂಲಕ ಹೊರ ಹೊಮ್ಮುತ್ತದೆ. ಇದನ್ನು ಚಿಲುಮೆ ಎನ್ನುತ್ತಾರೆ. ಮಳೆಯ ನೀರು ಭೂಮಿಯ ಸಡಿಲ ಭಾಗಗಳ ಮೂಲಕ ಒಳ ಹೊಕ್ಕು ಒಂದೆಡೆ ಸೇರಿ ಅದು ಅಂತರ್ಜಲವಾಗಿ, ಚಿಲುಮೆಗಳ ರೂಪದಲ್ಲಿ ಹೊರಬರುತ್ತದೆ.

ಬಾವಿಗಳು
ಭೂ ಮೇಲ್ಪದರವನ್ನು ಸ್ವಲ್ಪ ಆಳಕ್ಕೆ ಕೊರೆಯುವುದರ ಮೂಲಕ ಪಡೆಯುವ ಅಂರ್ತಜಲದ ನೀರೇ ಬಾವಿ ನೀರು. ಇದರಲ್ಲಿ ಎಷ್ಟು ವಿಧ? ಅವು ಯಾವುವು? ಇಲ್ಲಿ ಬರೆ.

ಓದಿ-ತಿಳಿ : ಅಂತರ್ಜಲವನ್ನು ಅತಿಯಾಗಿ ಬಳಕೆ ಮಾಡುತ್ತಿರುವುದರಿಂದ ಭೂಮಿಯ ಒಳಗೆ ಸಂಗ್ರಹವಾಗುವ ಅಂತರ್ಜಲವು ಖಾಲಿಯಾಗುತ್ತಿದೆ. ಇದು ಮರು ಪೂರಣವಾಗಲು (ಮತ್ತೆ ಸಂಗ್ರಹವಾಗಲು) ಮಳೆಯ ನೀರು ಭೂಮಿಯ ಒಳಗೆ ಇಂಗುವಂತೆ ಮಾಡಬೇಕು. ಇದಕ್ಕಾಗಿ ಇಂಗುಗುಂಡಿಗಳನ್ನು ನಿರ್ಮಿಸಬೇಕು. ಅತಿಯಾದ ಅಂತರ್ಜಲದ ಬಳಕೆ ಕಡಿಮೆ ಮಾಡಿ, ಮಳೆ ಕೊಯ್ಲು ಮತ್ತು ನೀರಿನ ಪುನರ್ಬಳಕೆಯ ಕ್ರಮಗಳನ್ನು ಅನುಸರಿಸಬೇಕು.

ಇಂಗುಗುಂಡಿ
ಇಂಗುಗುಂಡಿ

ಕೆರೆಗಳು
ಮಳೆಯ ನೀರನ್ನು ಸಂಗ್ರಹಿಸಲು ಮಾನವರು ಕೃತಕವಾಗಿ ನಿರ್ಮಿಸಿದ ತಗ್ಗು ಭಾಗವೇ ಕೆರೆ. ಕಡಿಮೆ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಇದಕ್ಕೆ ಇರುತ್ತದೆ. ಬೆಟ್ಟದ ಮೇಲೆ, ಎತ್ತರದ ಸ್ಥಳಗಳಲ್ಲಿ ಬಿದ್ದ ಮಳೆಯ ನೀರು ಹರಿದು ಬಂದು ಇಲ್ಲಿ ಸಂಗ್ರಹವಾಗುವಂತೆ ಇದನ್ನು ನಿರ್ಮಿಸಲಾಗುತ್ತದೆ. ಹಳ್ಳಗಳಿಂದಲೂ ಮಳೆಯ ನೀರು ಹರಿದು ಬಂದು ಕೆರೆಯನ್ನು ಸೇರುತ್ತದೆ.

ಜಲಾಶಯಗಳು
ವರ್ಷವಿಡೀ ನೀರಿನ ಲಭ್ಯತೆಗಾಗಿ, ನೀರಿನ ಕೊರತೆಯಿರುವ ಸ್ಥಳಗಳಿಗೆ ನೀರನ್ನು ಒದಗಿಸಲು ಹಾಗೂ ವಿವಿಧ ಉದ್ದೇಶಗಳಿಗಾಗಿ ನೀರನ್ನು ಬಳಸಲು ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟುತ್ತಾರೆ. ಇದಕ್ಕೆ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸುವ ಸಾಮರ್ಥ್ಯವಿದ್ದು, ಇದನ್ನು ಜಲಾಶಯ ಎನ್ನುತ್ತಾರೆ.

ಇಲ್ಲಿರುವ ಚಿತ್ರಗಳ ಸಹಾಯದಿಂದ ಕೆರೆ ಮತ್ತು ಅಣೆಕಟ್ಟಿನ ನಡುವಿನ ವ್ಯತ್ಯಾಸ ಗುರುತಿಸಿ ಚೌಕಗಳಲ್ಲಿ ಬರೆ. ಆನಂತರ ಎರಡರ ಉಪಯೋಗಗಳನ್ನೂ ಬರೆ. (ಶಿಕ್ಷಕರ ಸಹಾಯ ಪಡೆ)

ವ್ಯತ್ಯಾಸ

ಕೆರೆಅಣೆಕಟ್ಟು

ಉಪಯೋಗಗಳು

ಕೆರೆಅಣೆಕಟ್ಟು

ಶಿಕ್ಷಕರು/ಹಿರಿಯರ ಜೊತೆಯಲ್ಲಿ ನಿನ್ನ ಊರಿನ ಸಮೀಪವಿರುವ ಕೆರೆ/ಕುಂಟೆ/ಕಲ್ಯಾಣಿ ಅಥವಾ ಅಣೆಕಟ್ಟುಗಳಿಗೆ ಭೇಟಿ ನೀಡಿ, ಈ ಮಾಹಿತಿಯನ್ನು ಸಂಗ್ರಹಿಸು.
* ಎಂತಹ ಸ್ಥಳದಲ್ಲಿ ಇದು ನಿರ್ಮಾಣಗೊಂಡಿದೆ?
* ನೀರು ಹೇಗೆ ಸಂಗ್ರಹವಾಗುತ್ತದೆ?
* ಇದರಿಂದಾಗುವ ಅನುಕೂಲಗಳೇನು?
* ವರ್ಷದ ಯಾವ ಕಾಲದಲ್ಲಿ ತುಂಬಿರುತ್ತದೆ? ಯಾವ ಕಾಲದಲ್ಲಿ ನೀರು ಬರಿದಾಗುತ್ತದೆ ಅಥವಾ ಕಡಿಮೆಯಾಗುತ್ತದೆ? ಏಕೆ?

ನಿನ್ನ ಮನೆಯಲ್ಲಿ ಮತ್ತು ಶಾಲೆಯಲ್ಲಿ ನೀರನ್ನು ಯಾವ ಆಕರದಿಂದ ಪಡೆಯುತ್ತಾರೆ. ಎಂಬುದನ್ನು ಇಲ್ಲಿ ಬರೆ.

ಮನೆಯಲ್ಲಿಶಾಲೆಯಲ್ಲಿ

ನೀರಿನ ಉಪಯೋಗಗಳನ್ನು ಪಟ್ಟಿ ಮಾಡು.

ಮನೆಯಲ್ಲಿಮನೆಯ ಹೊರಗೆ

ಓದಿ ತಿಳಿ : ನೀನು ಬರೆದ ಉಪಯೋಗದ ಪಟ್ಟಿಯಲ್ಲಿ ಸಂಚಾರಕ್ಕೆ ಅನುಕೂಲ ಎಂದು ಬರೆದಿರುವೆಯಾ? ನೀರಿನ ಮೂಲಕವೂ ಜನರು ಸಂಚಾರವನ್ನು ಕೈಗೊಳ್ಳುತ್ತಾರೆ. ಸಮೀಪಕ್ಕೆ ತೆಪ್ಪಗಳನ್ನು, ಸ್ವಲ್ಪ ದೂರದ ಪ್ರಯಾಣಕ್ಕೆ ಮತ್ತು ಮೀನು ಹಿಡಿಯಲು ದೋಣಿ/ಬೋಟ್‍ಗಳನ್ನು ಹಾಗೂ ಅತಿ ದೂರದ ಪ್ರಯಾಣಕ್ಕೆ ಹಡಗನ್ನು ಬಳಸುತ್ತಾರೆ.

ತೆಪ್ಪ
ಬೋಟ್‍
ಹಡಗು

ಮಾಡಿ ನೋಡು : ಹರಿಯುತ್ತಿರುವ ಮಳೆ ನೀರನ್ನು ಒಂದು ಗಾಜಿನ ಬಾಟಲಿನಲ್ಲಿ ಸಂಗ್ರಹಿಸು. ಮಳೆ ಬಂದಾಗ ಮಳೆಯ ನೀರನ್ನು ನೇರವಾಗಿ ಬಾಟಲಿನಲ್ಲಿ ಸಂಗ್ರಹಿಸು ಎರಡರ ಬಣ್ಣವನ್ನು ವೀಕ್ಷಿಸು. ಏನು ವ್ಯತ್ಯಾಸ ಗುರುತಿಸಿದೆ ಎಂದು ಬರೆ.

ಎರಡು ಲೋಟ ನೀರನ್ನು ತೆಗೆದುಕೊಂಡು, ಒಂದು ಲೋಟದ ನೀರಿಗೆ ಒಂದು ಚಮಚ ಸಕ್ಕರೆಯನ್ನು, ಮತ್ತೊಂದು ಲೋಟದ ನೀರಿಗೆ ಒಂದು ಚಮಚ ಉಪ್ಪನ್ನು ಹಾಕಿ ಚೆನ್ನಾಗಿ ಕಲಕು. ಎರಡೂ ನೀರಿನ ರುಚಿ ನೋಡು. ಇದರಿಂದ ನೀನೇನು ತಿಳಿದೆ ಎಂದು ಬರೆ.

ಶುದ್ಧ ನೀರಿಗೆ ಬಣ್ಣ, ವಾಸನೆ ಮತ್ತು ರುಚಿ ಇರುವುದಿಲ್ಲ. ನೀರಿನ ರುಚಿಗೆ ಅದರಲ್ಲಿ ವಿಲೀನವಾಗಿರುವ ಲವಣ ಮತ್ತು ಖನಿಜಾಂಶಗಳು ಕಾರಣ.

ಇಲ್ಲಿ ಕೊಟ್ಟಿರುವ ಚಟುವಟಿಕೆಗಳನ್ನು ಶಿಕ್ಷಕರು/ಪೋಷಕರ ಸಹಾಯದೊಂದಿಗೆ ಮಾಡು. ನಂತರ ಅದಕ್ಕೆ ಸಂಬಂಧಿಸಿದ ಹೇಳಿಕೆಗಳಲ್ಲಿ ಸರಿ, ತಪ್ಪು ಗುರ್ತಿಸು. ತಪ್ಪಾಗಿರುವ ಹೇಳಿಕೆಗಳನ್ನು ಸರಿಪಡಿಸಿ ಬರೆ.

ನೀರಿನ ಕೆಲವು ಭೌತಿಕ ಲಕ್ಷಣಗಳನ್ನು ತಿಳಿದೆ. ನೀರು ಒಂದು ದ್ರವ ವಸ್ತು. ವಸ್ತು ಸ್ವರೂಪ ಪಾಠದಲ್ಲಿ ಈ ಬಗ್ಗೆ ಹೆಚ್ಚಿನ ಅಂಶವನ್ನು ಕಲಿಯುವೆ. ಈಗ ನೀರಿನ ಜೈವಿಕ ಪ್ರಾಮುಖ್ಯತೆಯನ್ನು ತಿಳಿಯೋಣ.

ಜೀವಿಗಳ ದೇಹದಲ್ಲಿ ನೀರು ಅಧಿಕ ಪ್ರಮಾಣದಲ್ಲಿದೆ. ಸಸ್ಯ ಮತ್ತು ಪ್ರಾಣಿಗಳ ದೇಹದಲ್ಲಿ ಶೇಕಡ 70 ಭಾಗದಷ್ಟು ನೀರಿದೆ. ಮೊತ್ತ ಮೊದಲು ಜೀವ ಉಗಮವಾದದ್ದೇ ನೀರಿನಲ್ಲಿ. ಸಸ್ಯ ಮತ್ತು ಪ್ರಾಣಿಗಳ ಜೈವಿಕ ಕ್ರಿಯೆಗಳಿಗೆ ನೀರು ಅವಶ್ಯಕ. ಸಸ್ಯಗಳ ಬೆಳವಣಿಗೆಗೆ ನೀರು ಅಗತ್ಯ. ಹಸಿರು ಸಸ್ಯಗಳು ಆಹಾರ ತಯಾರಿಸಲು ನೀರು ಅವಶ್ಯಕ.

ಇಷ್ಟೆಲ್ಲಾ ಮಹತ್ವವಾದ ನೀರನ್ನು ಹಿಂದಿನವರು ತಮ್ಮ ಜೀವನದಲ್ಲಿ ಒಂದು ಭಾಗವಾಗಿ ನೋಡುತ್ತಿದ್ದರು. ತಮ್ಮ ಮನೆಯ ಆಚರಣೆಗಳಲ್ಲಿ ಒಂದು ಸ್ಥಾನವನ್ನು ನೀರಿಗಾಗಿಯೇ ಮೀಸಲಿಟ್ಟಿದ್ದರು. ಇದನ್ನು ನೀನು ನಿನ್ನ ಮನೆಯಲ್ಲಿ ಅಥವಾ ಅಕ್ಕಪಕ್ಕದವರ ಮನೆಗಳಲ್ಲಿ ಗಮನಿಸಿರುವೆಯಾ?

ನಿನ್ನ ಕುಟುಂಬ ಅಥವಾ ನೆರೆಯ ಕುಟುಂಬಗಳಲ್ಲಿ ನೀರನ್ನು ಪೂಜಿಸುವ ಪದ್ಧತಿಯಿದ್ದರೆ ಅದು ಯಾವುದು ಮತ್ತು ಯಾವಾಗ ಎಂಬುದನ್ನು ಬರೆ.

ನೀರಿನ ಆಕರಗಳು ಏಕೆ ಕಲುಷಿತಗೊಳ್ಳುತ್ತವೆ?

ಜಲ ಮಾಲಿನ್ಯ :
ಮಣ್ಣು, ಕಸ, ಪೇಪರ್, ಉಳಿಕೆ ಆಹಾರ ಪದಾರ್ಥಗಳು ಸೇರುವುದರಿಂದ ನೀರು ಭೌತಿಕವಾಗಿ ಕಲುಷಿತಗೊಳ್ಳುತ್ತದೆ. ಕಾರ್ಖಾನೆಗಳಿಂದ ಬರುವ ರಾಸಾಯನಿಕಗಳು ಬೆರೆತ ನೀರು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳು ಸೇರಿದ ನೀರು ಅಪಾಯಕಾರಿ ಅಂಶಗಳಿಂದ ಕೂಡಿ ವಿಷಯುಕ್ತವಾಗುತ್ತದೆ. ಈ ನೀರನ್ನು ಸೇವಿಸುವುದರಿಂದ ಕಾಲರಾ, ಅತಿಸಾರ, ಆಮಶಂಕೆ ಮುಂತಾದ ರೋಗಗಳು ಬರಬಹುದು. ಕೆಲವೊಮ್ಮೆ ಪ್ರಾಣಕ್ಕೆ ಹಾನಿಯೂ ಸಂಭವಿಸಬಹುದು. ಕಲುಷಿತ ನೀರು ಜಲಚರಗಳ ಸಂತತಿಯ ನಾಶಕ್ಕೂ ಕಾರಣವಾಗುತ್ತದೆ.

ಓದಿ-ತಿಳಿ
* ಕಲುಷಿತ ನೀರಿನಿಂದ ಬರುವ ಕಾಲರಾ ರೋಗದ ಬಗ್ಗೆ ನೀನು ಈಗಾಗಲೇ ತಿಳಿದಿರುವೆ. ನಿಂತ ನೀರಿನಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗುತ್ತದೆ. ಸೊಳ್ಳೆಗಳಿಂದ ಹರಡುವ ರೋಗ ಮಲೇರಿಯಾ.


* ಪ್ಲಾಸ್ಮೋಡಿಯಮ್ ಎಂಬ ರೋಗಾಣು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯ ಶರೀರದಲ್ಲಿ ಇರುತ್ತದೆ. ಈ ಸೊಳ್ಳೆಯು ಮನುಷ್ಯರನ್ನು ಕಚ್ಚಿದಾಗ ಈ ರೋಗಾಣು ರಕ್ತವನ್ನು ಸೇರಿ ಅತೀ ಜ್ವರ, ಮೈನಡುಕ, ವಾಂತಿ ಮತ್ತು ತಲೆನೋವು ಮುಂತಾದ ರೋಗ ಲಕ್ಷಣಗಳು ಕಂಡುಬರುತ್ತದೆ. ಇದೇ ಮಲೇರಿಯಾ. ಇದಕ್ಕೆ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಸಾವು ಕೂಡ ಸಂಭವಿಸಬಹುದು.

ಕಲುಷಿತ ನೀರನ್ನು ನಾವು ಸೇವಿಸಬಾರದು. ಶುದ್ಧ ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕುಡಿಯಲು ಯೋಗ್ಯವಾದ ನೀರನ್ನು ಪಡೆಯಲು ನೀನು ಏನು ಮಾಡುವೆ? ಎಂಬುದನ್ನು ಗೆಳೆಯರೊಂದಿಗೆ ಚರ್ಚಿಸು. ಒಂದು ಚಾರ್ಟ್ ತಯಾರಿಸಿ ತರಗತಿಯಲ್ಲಿ ಪ್ರದರ್ಶಿಸು.

ಸಂವೇದ ವಿಡಿಯೋ ಪಾಠಗಳು

Samveda – 5th – EVS – Neeru (Part 1 of 2)
Samveda – 5th – EVS – Neeru (Part 2 of 2)

ಪೂರಕ ವಿಡಿಯೋಗಳು

ನೀರು | ಪರಿಸರ ಅಧ್ಯಯನ | 5ನೇ ತರಗತಿ |ಪಾಠ 7| Niru| Water 5th Std EVS Part 1
ನೀರು | ಪರಿಸರ ಅಧ್ಯಯನ | 5ನೇ ತರಗತಿ |ಪಾಠ 7| Niru| Water 5th Std EVS Part 2

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

ಇಂಗುಗುಂಡಿ

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.