ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಶಾಲೆಯಲ್ಲಿ ಇತ್ತಿಚಿಗೆ ನಕ್ಷತ್ರಪುಂಜ ವೀಕ್ಷಣೆ ಕಾರ್ಯಕ್ರಮ ಜರುಗಿತು.

ಬಿಳಗಿಯ ನಿವೃತ್ತ ಅಧ್ಯಾಪಕರು ಹಾಗೂ ಇತಿಹಾಸ ಅಧ್ಯಯನಕಾರರು ಆಗಿರುವ ಶ್ರೀ ಪದ್ಮಾಕರ ಮಡಗಾಂವಕರ ಅವರು ನಕ್ಷತ್ರಪುಂಜಗಳ ಕುರಿತು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸೋವಿಕೊಪ್ಪ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಮೋಹನ ಎಮ್. ಗೌಡ ಇವರು ಶಿಕ್ಷಣ ಹಾಗೂ ಸಂಸ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಕ್ಕಳಿಗೆ ಪಾಠದೊಂದಿಗೆ ತಿಳುವಳಿಕೆ ಹಾಗೂ ಕುತೂಹಲ ತಣಿಸುವಂತ ಕಾರ್ಯ ಆಗಬೇಕು ಎಂದು ನುಡಿದರು.

ಮಾರ್ಗದರ್ಶಕರಾದ ಶ್ರೀ ಪದ್ಮಾಕರ ಮಡಗಾಂವಕರ ಅವರು ವಿದ್ಯಾರ್ಥಿಗಳಿಗೆ 27 ನಕ್ಷತ್ರಪುಂಜಗಳು ಹಾಗೂ 108 ನಕ್ಷತ್ರಗಳ ಕುರಿತಾಗಿ ಮಾಹಿತಿ ನೀಡಿದರು. ಅಲ್ಲದೇ ನಕ್ಷತ್ರಪುಂಜ ಗುರುತಿಸುವಿಕೆಗೆ ಆಧಾರಗಳಾದ ಅಕ್ಷಾಂಶ ಹಾಗೂ ದಿಕ್ಕುಗಳ ಕುರಿತು ತಿಳಿಸಿದರು. ಗ್ರಹಗಳು ಮತ್ತು ನಕ್ಷತ್ರಗಳಿಗಿರುವ ವ್ಯಾತ್ಯಾಸ, ಚಂದ್ರನ ಉದಯದೊಂದಿಗೆ ಯಾವ ನಕ್ಷತ್ರ ಕಾಣಿಸುತ್ತದೆ, ಇದರ ಆಧಾರದ ಮೇಲೆ ನಕ್ಷತ್ರಗಳನ್ನು ಆಧರಿಸಿ ಮಾಸಗಳ ಹೆಸರನ್ನು ಇಟ್ಟಿರುವ ಕುರಿತು ಮಾಹಿತಿ ನೀಡಿದರು. ನಂತರ ಪ್ರಾಯೋಗಿಕವಾಗಿ ಬಯಲಲ್ಲಿ ಕೆಲವು ನಕ್ಷತ್ರಪುಂಜಗಳನ್ನು ತೋರಿಸಿದರು.

ಈ ಸಂದರ್ಭದಲ್ಲಿ ಶ್ರೀ ಪದ್ಮಾಕರ ಮಡಗಾಂವಕರ ಅವರನ್ನು ಗೌರವಿಸಲಾಯಿತು. ಅಂದಾಜು 400 ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು. ನಂತರ ಬೆಳದಿಂಗಳೂಟ ಹಾಗೂ ಶಾಲಾ ಮಕ್ಕಳಿಂದ ಲಘು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸೋವಿನಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಮೋಹನ ಎಮ್. ಗೌಡ, ಉಪಾಧ್ಯಕ್ಷರಾದ ಶ್ರೀಮತಿ ರಾಧಾ ವೆಂಕಟ್ರಮಣ ಗೌಡ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಸುರೇಶ ಬಂಗಾರ್ಯ ಗೌಡ, ಉಪಾಧ್ಯಕ್ಷರಾದ ಶ್ರೀಮತಿ ಮಹಾಲಕ್ಷ್ಮಿ ಮಂಜುನಾಥ ಗೌಡ, ಶ್ರೀ ಗಿರೀಶ ಶೇಟ್ ಆಲ್ಮೆನೆ, ಶ್ರೀ ಪದ್ಮಾಕರ ಮಡಗಾಂವಕರ, ಶ್ರೀ ಚಂದ್ರಶೇಖರ ಮಾಬ್ಲ ಗೌಡ, ಶ್ರೀ ಮಹೇಶ ತಿಮ್ಮ ಗೌಡ, ಶ್ರೀ ಅಣ್ಣಪ್ಪ ಭೈರ್ಯ ಗೌಡ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಸ್ವಾಗತಿಸಿದರು. ಕು. ಮೈತ್ರಿ ಹೆಗಡೆ ನಿರೂಪಿಸಿದರು ಹಾಗೂ ಕು. ರಂಜನಾ ಭಂಡಾರಿ ವಂದಿಸಿದರು.