ಚಗಳಿ ಇರುವೆ – ಪಾಠ-6

ಕೆ.ಪಿ. ಪೂರ್ಣಚಂದ್ರ ತೇಜಸ್ವಿ-

ಪ್ರವೇಶ : ಕನ್ನಡದ ಪ್ರಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಪ್ರಸಿದ್ಧ ಮಿಲೇನಿಯಮ್ ಸರಣಿಯ ಪುಸ್ತಕಗಳಲ್ಲಿ ಐದನೆಯ ‘ಪುಸ್ತಕ’ ‘ನೆರೆಹೊರೆ ಗೆಳೆಯರು’. ಅದರಲ್ಲಿ ಒಂದು ಬರೆಹ ‘ಮೂರು ಇರುವೆಗಳು’. ಇದರಲ್ಲಿ ತೇಜಸ್ವಿಯವರು ಒಂದು ಪ್ರಸಂಗವನ್ನು ಹೀಗೆ ವಿವರಿಸುತ್ತಾರೆ.
“ಒಂದು ದಿನ ನಾನು, ನನ್ನ ತಮ್ಮ ಚೈತ್ರ ಮೈಸೂರಿನಲ್ಲಿ ಮನೆ ಮುಂದೆ ಇದ್ದ ಪನ್ನೇರಲು ಮರ ಹತ್ತಿ ಹಣ್ಣುಗಳಿವೆಯೇ ಎಂದು ಹುಡುಕುತ್ತಿದ್ದಾಗ ಇದ್ದಕ್ಕಿದ್ದಂತೆ ಇರುವೆಗಳ ದಂಡೊಂದು ನಮ್ಮ ಮೇಲೆ ಎರಗಿತು. ಮರದ ಮೇಲೆ ಎಲ್ಲಿಂದ ಬಂತು ಇರುವೆ ಎಂದು ಅತ್ತಿತ್ತ ನೋಡಿದೆ. ಕೊಂಬೆಗಳ ಮೇಲೆ ಸಾಲು ಸಾಲಾಗಿ ಕೆಂಪು ಇರುವೆಗಳು ನಮ್ಮತ್ತ ನುಗ್ಗುತ್ತಿದ್ದವು. ಅಲ್ಲದೆ ನಮ್ಮ ತಲೆಯ ಮೇಲೆ ಎಲೆಗಳನ್ನೆ ಸುತ್ತಿ ಮಾಡಿದ ದೊಡ್ಡ ಗಂಟಿನಿಂದ ಇರುವೆಗಳು ತುಪು ತುಪು ಉದುರುತ್ತಿದ್ದವು. ಸಾವಿರಾರು ಇರುವೆಗಳು ಇದ್ದುದರಿಂದ ಕಚ್ಚುತ್ತಿದ್ದ ಅವನ್ನು ಹೊಸಕಿ ಹಾಕಿ ಮುಯ್ಯಿ ತೀರಿಸಲು ಸಾಧ್ಯವಿರಲಿಲ್ಲ. ಕೊಂಬೆಯಿಂದ ಒಂದೇ ಏಟಿಗೆ ಕೆಳಗೆ ಹಾರಿ ಮೈ ಕೈಯೆಲ್ಲಾ ಮುತ್ತಿಕೊಂಡು ಕಚ್ಚುತ್ತಿದ್ದ ಇರುವೆಗಳನ್ನು ಕೊಡವಿಕೊಂಡೆವು. ಗೂಡಿನಿಂದ ಇರುವೆಗಳು ಹೊರಬಂದು ಗೂಡಿನ ಮೇಲೆಲ್ಲ ನೆರೆದಿದ್ದರಿಂದ ಹಸುರೆಲೆಗಳನ್ನು ಅಂಟಿಸಿ ಮಾಡಿದ್ದ ಗೂಡು ಈಗ ಕೆಂಪಗೆ ಕಾಣುತ್ತಿತ್ತು.
ಅಂಗಿಯ ಒಳಗೆ, ಚಡ್ಡಿಯ ಒಳಗೆ, ಎಲ್ಲ ಕಡೆಯೂ ಸೇರಿಕೊಂಡು ಕಚ್ಚುತ್ತಿದ್ದ ಅವನ್ನು ಆ ಮರದಿಂದ ಹೇಗಾದರೂ ಉಚ್ಚಾಟಿಸಲೇಬೇಕೆಂದು ದೃಢನಿಶ್ಚಯ ಮಾಡಿ ಮರವನ್ನು ಗಟ್ಟಿಯಾಗಿ ಹಿಡಿದು ಅಲ್ಲಾಡಿಸತೊಡಗಿದೆವು. ಆಗ ಗೂಡಿನಿಂದ ಧಾರಾಕಾರವಾಗಿ ಇರುವೆಗಳು ಹೊರಬಂದು ದಾಳಿಗೆ ಸಜ್ಜಾದವು.
ನಮ್ಮ ಪ್ರಯತ್ನ ಸತತವಾಗಿ ಮುಂದುವರಿಯಿತು. ಗೂಡಿಗೆ ಅಂಟಿಸಿದ್ದ ಎಲೆಗಳು ಬೇರೆ ಬೇರೆಯಾಗಿ ಇರುವೆಗಳು ಎಲ್ಲಾ ಉದುರಿ ಬಿದ್ದು ಹರಿದಾಡತೊಡಗಿದವು. ಇರುವೆಗಳಿಗೆ ತಕ್ಕ ಶಾಸ್ತಿಯಾಯಿತೆಂದು ನಮಗೆ ಸಮಾಧಾನವಾಯಿತು. ನಮ್ಮ ತಂದೆಯವರಿಗೆ ನಾವು ಈ ವಿಷಯ ತಿಳಿಸಿದಾಗ ಅವು ಚಗಳಿ ಇರುವೆಗಳೆಂದೂ ಮಲೆನಾಡಿನಲ್ಲಿ ಅವುಗಳ ಮೊಟ್ಟೆ ಮರಿಗಳನ್ನೆಲ್ಲಾ ಹಿಡಿದು ಅರೆದು ಚಟ್ನಿ ಮಾಡಿ ಊಟಕ್ಕೆ ನಂಚಿಕೊಳ್ಳುತ್ತಾರೆಂದೂ ಹೇಳಿದರು.
ಅವರೇ ವಿವರಿಸಿದಂತೆ ಮಲೆನಾಡಿಗರ ಪ್ರಿಯ ಇರುವೆಗಳ ಪರಿಚಯ ಈ “ಚಗಳಿಇರುವೆ” ಪಾಠ.

ಇರುವೆಗಳ ವರ್ಗದಲ್ಲೇ ಅದ್ಭುತವೆಂದು ವರ್ಣನೆಗೊಳಗಾಗಿರುವ ಚಗಳಿ ಇರುವೆಗಳು ಮಲೆನಾಡಿಗರಿಗೆ ಚಿರಪರಿಚಿತ. ಇವು ಕಾಡಿನಲ್ಲಿ, ತೋಟದಲ್ಲಿ ಅಗಾಧವಾದ ಗೂಡುಗಳನ್ನು ಕಟ್ಟಿಕೊಂಡು ವಾಸಿಸುತ್ತವೆ. ಎಲೆಗಳನ್ನು ಒಂದಕ್ಕೊಂದು ಸೇರಿಸಿ ಇವು ಕಟ್ಟುವ ಗೂಡುಗಳನ್ನು ‘ಕೊಟ್ಟೆ’ ಎನ್ನುತ್ತಾರೆ. ಅತ್ಯಂತ ಸಂಕೀರ್ಣ ಸಂದೇಶಗಳನ್ನು ತಿಳಿಸಬಲ್ಲ ಭಾಷೆ ಅಥವಾ ಸಂವಹನ ಮಾಧ್ಯಮ ಇಲ್ಲದೆ ಈ ಇರುವೆಗಳು ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದು ಇದರಿಂದ ತಿಳಿದುಬರುತ್ತದೆ. ಸಂಘಜೀವಿಗಳಾದ ಈ ಇರುವೆಗಳು ಇಡೀ ಗೂಡು ಒಂದೇ ಎನ್ನುವಷ್ಟು ಶಿಸ್ತಿನಿಂದ ವರ್ತಿಸುತ್ತವೆ.


ಉದಾಹರಣೆಗೆ, ಇವು ಕೊಟ್ಟೆಗಳನ್ನು ರಚಿಸುವ ರೀತಿಯನ್ನೇ ನೋಡಿ. ಒಂದು ಕೊಂಬೆಯ ಎಲೆಗಳನ್ನು ಬಗ್ಗಿಸಿ ಒಂದಕ್ಕೊಂದು ತಾಗಿಸಿ ಹೊಲಿದಿರುತ್ತವೆ. ನಮಗೆ ಹೊರಗಿನಿಂದ ನೋಡಿದಾಗ ಇದೇನು ಮಹಾ ಅನ್ನಿಸಬಹುದು. ಆದರೆ ಇರುವೆಯಂಥ ಅತ್ಯಂತ ಸಣ್ಣ ಶರೀರದ ಪ್ರಾಣಿ ಅದರ ನೂರಾರು ಪಟ್ಟು ವಿಸ್ತಾರವಾಗಿಯೂ ಬಲವಾಗಿಯೂ ಇರುವ ಎಲೆಗಳನ್ನು ಬಗ್ಗಿಸುವುದು ಹೇಗೆ? ಯಾವ ಎಲೆಗಳನ್ನು ಬಗ್ಗಿಸಬೇಕಾಗಿದೆಯೋ ಆ ಎಲೆಯ ಮೇಲೆ ನೂರಾರು ಇರುವೆಗಳು ಜಮಾಯಿಸುತ್ತವೆ. ಅನಂತರ ಒಂದರ ಕಾಲು ಒಂದು ಹಿಡಿದುಕೊಂಡು ಜೋತಾಡುತ್ತಾ ಕೆಳಗಿಳಿಯುತ್ತವೆ. ಕೆಳಗಿನ ಎಲೆಯ ಅಂಚು ಸಿಕ್ಕಿದ ಕೂಡಲೆ ನೇತಾಡುವ ದಾರದ ಕೊನೆಯಲ್ಲಿರುವ ಇರುವೆ ಎಲೆಯ ಅಂಚನ್ನು ಹಿಡಿಯುತ್ತದೆ. ಮೇಲಿನಿಂದ ಕೆಳಗೆ ನೇತುಕೊಂಡಿರುವ ಹಲವಾರು ದಾರಗಳು ನಿರ್ಮಾಣವಾದ ಕೂಡಲೇ ನೀಡಿರುವ ತಮ್ಮ ಕೈ ಕಾಲುಗಳನ್ನು ಎಲ್ಲ ಇರುವೆಗಳೂ ನಿಧಾನವಾಗಿ ಮಡಚುತ್ತವೆ. ದಾರದ ಸೆಳೆತಕ್ಕೆ ಎಲೆ ಮೆಲ್ಲಗೆ ಕೆಳಗೆ ಬಾಗುತ್ತದೆ. ಮೊದಲ ಇರುವೆಗಳ ದಾರ ಸಂಕುಚಿಸಿ ಎಲೆ ಕೆಳಕ್ಕೆ ಬಾಗಿರಬೇಕಾದರೆ ಮತ್ತೆ ಎರಡನೇ ಸುತ್ತಿನ ಇರುವೆಗಳ ದಾರ ನಿರ್ಮಾಣವಾಗುತ್ತದೆ. ಮೊದಲನೆಯ ಸರಣಿ ಎಳೆದು ಹಿಡಿದಿರುವ ಎಲೆಯಿಂದ ಮತ್ತೊಂದು ಸುತ್ತಿನ ದಾರಗಳು ಬಂದು ಎಲೆಯನ್ನು ಮತ್ತಷ್ಟು ಕೆಳಗೆ ಎಳೆಯುತ್ತವೆ. ಕೆಲಹೊತ್ತಿನಲ್ಲೇ ಆ ಎಲೆಯನ್ನು ಪೊಟ್ಟಣದಂತೆ ಬಗ್ಗಿಸಿ ಕೆಳಗಿನ ಎಲೆಗೆ ಒತ್ತಿ ಹಿಡಿಯುತ್ತವೆ.


ಹಲಸಿನ ಮತ್ತು ಮಾವಿನ ಮರದಲ್ಲಿ ನೇತಾಡುತ್ತಿರುವ ಸಾಮಾನ್ಯ ಗಾತ್ರದ ಚಗಳಿ ಕೊಟ್ಟೆಯ ಚಿಕ್ಕೆಲೆಗಳು ಒಂದಕ್ಕೊಂದು ತಾಗುತ್ತಿದ್ದಂತೆಯೇ ಇರುವೆಗಳು ತಮ್ಮ ಹಳೆಗೂಡಿಗೆ ಓಡಿ ಅಲ್ಲಿ ಇನ್ನೂ ಕೋಶಾವಸ್ಥೆಯಲ್ಲಿರುವ ಲಾರ್ವಾಗಳನ್ನು ತಮ್ಮ ದವಡೆಯಲ್ಲಿ ಮೃದುವಾಗಿ ಹಿಡಿದು ತರುತ್ತವೆ. ಆ ಲಾರ್ವಾಗಳನ್ನು ಎಲೆಗೆ ಎಲೆ ಅಂಟಿಸಬೇಕಾದ ಜಾಗದಲ್ಲಿ ವಿಚಿತ್ರವಾಗಿ ನೇವರಿಸುತ್ತಾ ಮೇಲೂ ಕೆಳಗೂ ಮಗ್ಗದ ಲಾಳ ಆಡಿಸುವಂತೆ ಅತ್ತಿಂದಿತ್ತ ಆಡಿಸುತ್ತವೆ. ಲಾರ್ವಾಗಳನ್ನು ನೇವರಿಸುವುದರಿಂದ ಅವು ರೇಷ್ಮೆಯಂಥ ನೂಲನ್ನು ಸತತವಾಗಿ ಸ್ರವಿಸಲು ಶುರು ಮಾಡುತ್ತವೆ. ಜೇಡರ ಬಲೆಯಂತೆ ಎರಡನ್ನೂ ಬೆಸೆಯುವ ಈ ನೂಲು ಕೆಲಸ ಮುಗಿಯುವ ಹೊತ್ತಿಗೆ ರೇಷ್ಮೆ ಬಟ್ಟೆಯಂತೆಯೇ ದಟ್ಟವಾಗಿ ದಪ್ಪಗಿದ್ದು ಎಲೆಗಳೆರಡನ್ನು ಅಂಟಿಸಿರುತ್ತದೆ.


ಚಗಳಿ ಇರುವೆಗಳು ಮೊದಲು ಎರಡೋ ಮೂರೋ ಅಕ್ಕಪಕ್ಕದ ಎಲೆಗಳನ್ನು ಸೇರಿಸಿ ಪೊಟ್ಟಣ ಕಟ್ಟಿದಂತೆ ಚಿಕ್ಕಗೂಡು ಕಟ್ಟುತ್ತವೆ. ಇವುಗಳ ಸಂಖ್ಯೆ ಬೆಳೆದಂತೆಲ್ಲಾ ಮೇಲಿನ ಮತ್ತು ಅಕ್ಕಪಕ್ಕದ ಎಲೆಗಳನ್ನು ಹೊಂದಿಸಿ ಮಾಳಿಗೆಗಳನ್ನು ನಿರ್ಮಿಸುತ್ತಾ ಗೂಡನ್ನು ದೊಡ್ಡವನ್ನಾಗಿ ಮಾಡುತ್ತವೆ. ದೊಡ್ಡ ಗೂಡುಗಳಲ್ಲಿ ಐದರಿಂದ ಹತ್ತು ಲಕ್ಷ ಇರುವೆಗಳವರೆಗೂ ಇರುತ್ತವೆ. ಇರುವೆಗಳ ಸಂಖ್ಯೆ ಇದನ್ನೂ ಮೀರಿ ಬೆಳೆದರೆ ಆಗ ಅದೇ ಮರದ ಬೇರೆ ಕೊಂಬೆಯಲ್ಲೋ ಅಥವಾ ಸಮೀಪದ ಇನ್ನೊಂದು ಮರದಲ್ಲೋ ಹೊಸ ಉಪಕೊಟ್ಟೆಗಳನ್ನು ಕಟ್ಟುತ್ತವೆ.


ಈ ಇರುವೆಗಳ ಶಿಸ್ತು, ಧೈರ್ಯ ಮತ್ತು ಒಗ್ಗಟ್ಟುಗಳ ದೆಸೆಯಿಂದ ಇವನ್ನು ಮನುಷ್ಯರಿಗೂ ಸಹ ಹಿಮ್ಮೆಟ್ಟಿಸುವುದು ಕಷ್ಟ. ಬೇರೆ ಇರುವೆಗಳನ್ನು ನೀವು ಹಿಡಿಯಲು ಹೋದರೆ ಅವು ತಲೆ ತಪ್ಪಿಸಿಕೊಂಡು ಓಡಿಹೋಗಲು ನೋಡುತ್ತವೆ. ಆದರೆ ಚಗಳಿ ಇರುವೆಗಳನ್ನು ಹಿಡಿಯಲು ಹೋದರೆ ಅವು ಓಡುವುದಿಲ್ಲ. ಬದಲಿಗೆ ತಿರುಗಿ ನಿಂತು ನೆಗೆದು ಕಚ್ಚಲು ಸಿದ್ಧವಾಗುತ್ತವೆ. ಅಷ್ಟೇ ಅಲ್ಲದೆ ತನ್ನ ಹಿಂಭಾಗವನ್ನು ಮೇಲೆತ್ತಿ ಹೊಟ್ಟೆ ಅಡಿಯಲ್ಲಿರುವ ಗ್ರಂಥಿಗಳಿಂದ ಅಪಾಯದ ಫಿರಮೋನ್ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪರಿಸುತ್ತವೆ. ಕೆಲವೇ ಕ್ಷಣಗಳಲ್ಲಿ ಆಜುಬಾಜಿನಲ್ಲಿರುವ ಎಲ್ಲ ಚಗಳಿ ಇರುವೆಗಳೂ ಯುದ್ಧ ಸನ್ನದ್ಧರಾಗಿ ಹಾಜರಾಗುತ್ತವೆ.


ಈ ಇರುವೆಗಳು ತಮ್ಮಲ್ಲೇ ದನ ಸಾಕುವ ಗೋಪಾಲಕರಂಥ ಕೆಲಸಗಾರ ಇರುವೆಗಳನ್ನು ರೂಪಿಸಿವೆ. ಇವುಗಳ ಕೆಲಸವೆಂದರೆ ಗಿಡದ ರಸ ಹೀರಿ ಬದುಕುವ ತಿಗಣೆ ಮತ್ತು ಜಿಗಿ ಹುಳುಗಳನ್ನು ಹಿಡಿತಂದು ತಾವು ಕೊಟ್ಟೆ ಕಟ್ಟಿದ ಮರದ ಕೊಂಬೆಗಳ ಮೇಲೆ ಸಾಕುವುದು. ಚಗಳಿಗಳ ಜೀವನದಲ್ಲಿ ಇವಕ್ಕೆ ಅಪಾರ ಪ್ರಾಮುಖ್ಯತೆ ಇದೆ. ಅವುಗಳ ಉಚ್ಛಿಷ್ಠ ಸಿಹಿಯಾದ ಮಧುವಾಗಿರುವುದರಿಂದ ಅದು ಇರುವೆಗಳ ಆಹಾರವೂ ಹೌದು. ನಾವು ದನ ಸಾಕಿ ಅವುಗಳಿಂದ ಹಾಲು ಕರೆದುಕೊಳ್ಳುವಂತೆ ತಮಗೆ ಆಹಾರೋತ್ಪತ್ತಿ ಮಾಡುವ ಈ ಕೀಟಗಳನ್ನು ಚಗಳಿ ಇರುವೆಗಳು ಸಾಕುತ್ತವೆ. ಇದರಿಂದಾಗಿ ಚಗಳಿ ಇರುವೆಗಳು ಲಕ್ಷಾಂತರ ಕೀಟಗಳನ್ನು ಹಿಡಿದು ಕೊಂದು ರೈತರಿಗೆ ಸಹಾಯ ಮಾಡಿದರೂ ಜಿಗಿ ಹುಳುಗಳನ್ನೂ ತಿಗಣೆಗಳನ್ನೂ ಇವು ಗೂಡು ಮಾಡಿರುವ ಮರಗಿಡಗಳಲ್ಲೆಲ್ಲ ತಂದಿಟ್ಟು ಸಾಕುವುದರಿಂದ ಈ ಉಪದ್ರವಕಾರಿ ಕೀಟಗಳನ್ನು ಗಿಡದಿಂದ ಗಿಡಕ್ಕೆ ಹಬ್ಬಿಸಿ ಸಾಕುವ ವಾಹಕಗಳಾಗಿವೆ.


ಚಗಳಿ ಇರುವೆಗಳಿಗೆ ಇತರ ಸಂಘಜೀವಿಗಳಾದ ಕೀಟಗಳಲ್ಲಿರುವಂತೆಯೇ ಒಂದು ರಾಣಿ ಇರುವೆ ಇರುತ್ತದೆ. ಇಡೀ ಇರುವೆಗಳ ಗುಂಪಿಗೆ ಇದೇ ಮೂಲ. ಇದರ ಕೆಲಸ ಸತತವಾಗಿ ಮೊಟ್ಟೆ ಇಡುವುದು. ರಾಣಿ ಇರುವೆಯ ಮೈಯಲ್ಲಿ ಅನೇಕ ಗ್ರಂಥಿಗಳಿಂದ ಹಲವಾರು ಬಗೆಯ ಫಿರಮೋನ್ ರಾಸಾಯನಿಕ ಒಸರುತ್ತದೆ. ಈ ರಾಸಾಯನಿಕಗಳು ಒಂದು ಇರುವೆಯ ಸಮುದಾಯದ ರೂಪುರೇಷೆಗಳನ್ನು ನಿಯಂತ್ರಿಸುವವು. ಗಂಡು ಇರುವೆಗಳು, ಕಾವಲುಗಾರ ಇರುವೆಗಳು, ಸೈನಿಕ ಇರುವೆಗಳು ಸಹ ಈ ರಾಸಾಯನಿಕ ಸಂಯೋಜನೆಯಲ್ಲಿ ರೂಪುಗೊಳ್ಳುವವು.


ರಾಣಿಯ ಮೇಲೆ ಸದಾ ಇರುವೆಗಳು ಮುತ್ತಿಕೊಂಡಿರುತ್ತವೆ. ಅದರ ಮೈಮೇಲೆ ಒಸರುವ ರಾಸಾಯನಿಕವನ್ನು ತಾವು ನೆಕ್ಕುವುದಲ್ಲದೆ ಅದನ್ನು ಸಂಗ್ರಹಿಸಿ ಬೇರೆ ಬೇರೆ ಇರುವೆಗಳಿಗೆ ಒಯ್ದು ತಿನ್ನಿಸುತ್ತವೆ. ತಾವು ಹೊರಗಿನಿಂದ ಸಂಗ್ರಹಿಸಿ ತಂದ ಆಹಾರವನ್ನು ಕೆಲಸಗಾರ ಇರುವೆಗಳು ರಾಣಿಗೆ ತಿನ್ನಿಸುತ್ತಲೂ ಇರುತ್ತವೆ. ಚಗಳಿ ಇರುವೆಗಳದ್ದು ಸ್ತ್ರೀ ಪ್ರಧಾನವಾದ ಸಮಾಜ.

ಆಶಯ : ಇಂದು ನಮ್ಮ ಸುತ್ತಮುತ್ತಲು ಅನೇಕ ಕೌತುಕಗಳು ನಡೆಯುತ್ತಿರುತ್ತವೆ. ವಿಚಿತ್ರ ಸಂಗತಿಗಳು ಘಟಿಸುತ್ತಿರುತ್ತವೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಅನೇಕ ಜೀವಿಗಳ ಜೀವನದಿಂದ ನಾವು ಕಲಿಯಬೇಕಾದುದು ಬಹಳ ಇದೆ. ಅಂತಹ ಕೌತುಕಗಳಲ್ಲಿ ಒಂದಾದ ಚಗಳಿ ಇರುವೆಗಳ ಪರಿಚಯ ಮಾಡಿಕೊಡುವುದು ಇಲ್ಲಿನ ಉದ್ದೇಶ.

ಕೃತಿಕಾರರ ಪರಿಚಯ

ಪೂರ್ಣಚಂದ್ರ ತೇಜಸ್ವಿ (1938-2007) ರಾಷ್ಟ್ರಕವಿ ಕುವೆಂಪುರವರ ಪುತ್ರ. 1938ರ ಸೆಪ್ಟೆಂಬರ್ 08ರಂದು ಶಿವಮೊಗ್ಗದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನೆಲೆಸಿದರು. ತೋಟಗಾರಿಕೆ, ಛಾಯಾಗ್ರಹಣ, ಬರವಣಿಗೆ ಮತ್ತು ಚಿತ್ರಕಲೆ ತೇಜಸ್ವಿಯವರ ಹವ್ಯಾಸ. ಕಥೆ, ಕವಿತೆ, ನಾಟಕ, ಕಾದಂಬರಿ, ವೈಚಾರಿಕ ಲೇಖನಗಳು, ಪರಿಸರ, ಶಿಕಾರಿ ಸಂಬಂಧಿತ ಬರೆಹಗಳು, ಇತಿಹಾಸ, ತತ್ವಜ್ಞಾನ, ಮಾನವಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ ಹೀಗೆ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಕರ್ವಾಲೊ, ಅಬಚೂರಿನ ಪೋಸ್ಟಾಫೀಸ್, ಚಿದಂಬರ ರಹಸ್ಯ, ಕಿರಗೂರಿನ ಗಯ್ಯಾಳಿಗಳು, ತಬರನ ಕಥೆ, ಜುಗಾರಿ ಕ್ರಾಸ್, ಮಾಯಾಲೋಕ, ಪರಿಸರದ ಕತೆ, ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್, ಅಣ್ಣನ ನೆನಪು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ತೇಜಸ್ವಿಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ದೊರೆತಿವೆ. ಇವರ ಸಮಗ್ರ ಸಾಹಿತ್ಯಕ್ಕಾಗಿ ಪಂಪ ಪ್ರಶಸ್ತಿ ನೀಡಲಾಗಿದೆ. ತೇಜಸ್ವಿ ಅವರು. ಏಪ್ರಿಲ್ 5, 2007 ರಂದು ನಿಧನರಾದರು.

ಪದಗಳ ಅರ್ಥ

ವರ್ಗ – ಗುಂಪು, ಸಮೂಹ;
ವರ್ಣನೆ – ಬಣ್ಣನೆ;
ಸಂಕೀರ್ಣ – ಜಟಿಲವಾದ, ನಾನಾ ವಿಧವಾದ;
ಅಂಚು – ಕೊನೆ, ತುದಿ;
ಸ್ರವಿಸು – ಒಸರು, ಜಿನುಗು;
ಬೆಸೆ – ಕೂಡಿಸು, ಸೇರಿಸು;
ಮಾಳಿಗೆ – ಮಹಡಿ;
ಹಿಮ್ಮೆಟ್ಟಿಸು – ಹಿಂದಕ್ಕೆ ಸರಿಸು, ಸೋಲಿಸು;
ಸಿಂಪರಿಸು – ಚಿಮುಕಿಸು, ಲೇಪಿಸು;
ಆಜುಬಾಜು – ಅಕ್ಕಪಕ್ಕ, ನೆರೆಹೊರೆ;
ಸನ್ನದ್ಧ – ಸಿದ್ಧವಾಗು;
ಉಚ್ಛಿಷ್ಠ – ಎಂಜಲು;
ಮಧು – ಸಿಹಿ;
ವಾಹಕ – ಸಾಗಿಸುವ;
ಒಸರು – ಜಿನುಗು.

ಸಂವೇದ ವಿಡಿಯೋ ಪಾಠಗಳು

Samveda – 7th – Kannada – Chagali Iruve (Part 1 of 2)
Samveda – 7th – Kannada – Chagali Iruve (Part 2 of 2)

ಅಭ್ಯಾಸಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವ್ಯಾಕರಣ – ಸಮಾಸಗಳು

ಕೆಳಗೆ ನೀಡಿರುವ ವಾಕ್ಯವೃಂದವನ್ನು ಗಮನಿಸಿ.
ಮೈಸೂರಿನಲ್ಲಿ ಅರಸನ ಮನೆ ಇದೆ. ಅರಸನ ಮನೆಯಲ್ಲಿ ಬಿಳಿದು ಕೊಡೆಯೂ ಇದೆ. ಅರಸನ ಮನೆಯನ್ನು ನಾಲ್ಕು ಮಡಿ ಕೃಷ್ಣರಾಜರು ಕಟ್ಟಿಸಿದರು. ಅರಸನ ಮನೆಯಲ್ಲಿ ಓಡಾಡಿ ನನಗೆ ಕಾಲ ಅಡಿ ನೋವು ಬಂದಿತು. ಅರಸನ ಮನೆಯಲ್ಲಿ ಆನೆಯೂ ಕುದುರೆಯೂ ದನವೂ ಇವೆ. ಅರಸನ ಮನೆಯನ್ನು ನೋಡು ನನ್ನ ಜೊತೆ ಚಕ್ರವನ್ನು ಕೈಯಲ್ಲಿ ಹಿಡಿದವನು ಇದ್ದ. ಇಬ್ಬರೂ ಅರಸನ ಮನೆಯನ್ನು ಮೈಯನ್ನು ಮರೆತು ನೋಡಿದೆವು.


ಮೇಲಿನ ವಾಕ್ಯವೃಂದದಲ್ಲಿ ಅರಸನ ಮನೆ, ಬಿಳಿದು ಕೊಡೆ, ನಾಲ್ಕು ಮಡಿ, ಕಾಲ ಅಡಿ, ಆನೆಯೂ ಕುದುರೆಯೂ ಚಕ್ರವನ್ನು ಕೈಯಲ್ಲಿ ಹಿಡಿದವನು ಎಂಬ ಪದಗಳನ್ನು ಬಿಡಿಸಿ ಬರೆಯಲಾಗಿದೆ. ಈ ಪದಗಳನ್ನು ಕೂಡಿಸಲು ಸಾಧ್ಯ. ಹೀಗೆ ಕೂಡಿಸುವುದರಿಂದ ಅಕ್ಷರಗಳ ಅನಗತ್ಯ ಬಳಕೆ ಮತ್ತು ಉಚ್ಚಾರಣೆಯ ಕಾಲ ಕಡಿಮೆಯಾಗುತ್ತದೆ ಮತ್ತು ಉಚ್ಚಾರಣೆ ಮತ್ತಷ್ಟು ಸುಲಭವಾಗುತ್ತದೆ. ಈಗ ಕೂಡಿಸಿ ನೋಡೋಣ :


ಮೈಸೂರಿನಲ್ಲಿ ಅರಮನೆ ಇದೆ. ಅರಮನೆಯಲ್ಲಿ ಬೆಳ್ಗೊಡೆಯೂ ಇದೆ. ಅರಮನೆಯನ್ನು ನಾಲ್ವಡಿ ಕೃಷ್ಣರಾಜರು ಕಟ್ಟಿಸಿದರು. ಅರಮನೆಯಲ್ಲಿ ಓಡಾಡಿ ನನಗೆ ಅಂಗಾಲು ನೋವು ಬಂದಿತು. ಅರಮನೆಯಲ್ಲಿ ಆನೆ ಕುದುರೆ ದನಗಳು ಇವೆ. ಅರಮನೆಯನ್ನು ನೋಡುವಾಗ ನನ್ನ ಜೊತೆ ಚಕ್ರಪಾಣಿ ಇದ್ದ. ಇಬ್ಬರೂ ಅರಮನೆಯನ್ನು ಮೈಮರೆತು ನೋಡಿದೆವು.


ಹೀಗೆ ಕೂಡಿಸುವುದು ಎಂದರೆ ಸಮಾಸ ಮಾಡುವುದು ಎಂದು ಅರ್ಥ. ಹೀಗೆ ಕೂಡಿಸಿದ ಪದದಲ್ಲಿ ಎರಡು ಭಾಗಗಳಿವೆ. ಒಂದನ್ನು ಪೂರ್ವಪದ, ಅದರ ಎದುರಿಗೆ ಬರುವುದನ್ನು ಉತ್ತರಪದ ಎಂದೂ ಕರೆಯಲಾಗುತ್ತದೆ. ಕೂಡಿಸಿದ ಪದವನ್ನು ಮತ್ತೆ ಬಿಡಿಸಿ ಬರೆದರೆ ಅದು ವಿಗ್ರಹವಾಕ್ಯ. ಸಮಾಸವಾದ ಪದವನ್ನು ವಾಕ್ಯದಲ್ಲಿ ಬಳಸಿದಾಗ ಯಾವ ಪದದ ಅರ್ಥ ಮುಖ್ಯವಾಗುತ್ತದೆ ಎಂಬುದರ ಆಧಾರದ ಮೇಲೆ ವಿವಿಧ ಸಮಾಸಗಳನ್ನು ಗುರುತಿಸಲಾಗುತ್ತದೆ.


ಉದಾ : (ಅರಮನೆ = ಅರಸನ ಮನೆ; ಪೂರ್ವಪದ = ಅರಸನ; ಉತ್ತರಪದ = ಮನೆ) ಅರಸನ ಮನೆಯಲ್ಲಿ ಸಿಂಹಾಸನವಿದೆ. ಈ ವಾಕ್ಯದಲ್ಲಿ ಸಿಂಹಾಸನ ಇರುವುದು ಮನೆಯಲ್ಲಿ ಆ ಮನೆ ಯಾರದು ಎಂದಾಗ ಅದು ಅರಸನದು ಎಂಬ ಉತ್ತರ ದೊರೆಯುತ್ತದೆ. ಇಲ್ಲಿ ಮನೆ ಎಂಬ ಪದದ ಅರ್ಥ ಮುಖ್ಯ. ಆದುದರಿಂದ ಇದು ಉತ್ತರ ಪದದ ಅರ್ಥ ಪ್ರಧಾನವಾದ ಸಮಾಸ.

ತತ್ಪುರುಷ ಸಮಾಸ

  1. ಮಳೆಯ ಕಾಲ – ಮಳೆಗಾಲ
  2. ತಲೆಯಲ್ಲಿ ನೋವು – ತಲೆನೋವು
  3. ಮಲ್ಲಿಗೆಯ ಹೂವು – ಮಲ್ಲಿಗೆ ಹೂವು
  4. ಮನೆಯ ಕೆಲಸ – ಮನೆಗೆಲಸ
  5. ಅರಸನ ಮನೆ – ಅರಮನೆ
    ಈ ಮೇಲಿನ ಪದಗಳನ್ನು ಗಮನಿಸಿದಾಗ ‘ಮಳೆಯ’ ಮತ್ತು ‘ಕಾಲ’ ಎಂಬ ಎರಡು ಪದಗಳನ್ನು ಸೇರಿಸಿ ಮಳೆಗಾಲ ಎಂದು ಹೇಳಲಾಗುತ್ತದೆ. ಹೀಗೆ ಕಾಲದ ಉಳಿತಾಯ ಹಾಗೂ ಸ್ಪಷ್ಟ ಅರ್ಥೈಸುವಿಕೆಗಾಗಿ ಪದಗಳನ್ನು ಕೂಡಿಸಿ ಬಳಸುತ್ತೇವೆ. ಹೀಗೆ ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗಿದ್ದರೆ ಅಂತಹ ಸಮಾಸಗಳಿಗೆ ತತ್ಪುರುಷ ಸಮಾಸ ಎಂದು ಹೆಸರು.

ಕರ್ಮಧಾರೆಯ ಸಮಾಸ

  1. ಹಿರಿದು ಮರ – ಹೆಮ್ಮರ
  2. ಕೆಂಪಾದ ತಾವರೆ – ಕೆಂದಾವರೆ
  3. ಮೆಲ್ಲಿತು ನುಡಿ – ಮೆಲ್ನುಡಿ
    ಹೀಗೆ ಪೂರ್ವೋತ್ತರ ಪದಗಳು ವಿಶೇಷಣ-ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎಂದು ಹೆಸರು.

ಅಂಶಿ ಸಮಾಸ

  1. ಕೈಯ ಅಡಿ – ಅಂಗೈ
  2. ತಲೆಯ ಮುಂದು – ಮುಂದಲೆ
  3. ಕೆಳಗಿನ ತುಟಿ – ಕೆಳದುಟಿ
  4. ಕಾಲಿನ ಮುಂದು – ಮುಂಗಾಲು
    ಪೂರ್ವೋತ್ತರ ಪದಗಳು ಹೀಗೆ ಅಂಶಿ ಅಂಶ ಭಾವದಿಂದ ಸೇರಿ ಸಮಾಸವಾದರೆ ಅಂತಹ ಸಮಾಸಗಳಿಗೆ ‘ಅಂಶಿ ಸಮಾಸ’ ಎಂದು ಹೆಸರು. ‘ಕಾಲು’ ಅಂಶಿ, ಅದರ ‘ಮುಂದು’ ಅದರ ಅಂಶ.

ದ್ವಂದ್ವ ಸಮಾಸ

  1. ರಾಮನು ಲಕ್ಷ್ಮಣನು – ರಾಮಲಕ್ಷ್ಮಣರು
  2. ಕೃಷ್ಣನು ಅರ್ಜುನನು – ಕೃಷ್ಣಾರ್ಜುನರು
  3. ಗಿಡಗಳು ಮರಗಳು ಬಳ್ಳಿಗಳು – ಗಿಡಮರಬಳ್ಳಿಗಳು
    ಹೀಗೆ ಎರಡು ಅಥವಾ ಎರಡಕ್ಕಿಂತಲೂ ಹೆಚ್ಚು ನಾಮಪದಗಳು ಸೇರಿ ಸಮಾಸವಾಗುವಾಗ ಎಲ್ಲ ಪದಗಳ ಅರ್ಥವೂ ಪ್ರಧಾನವಾಗಿದ್ದರೆ ಅಂತಹ ಸಮಾಸಕ್ಕೆ ‘ದ್ವಂದ್ವ ಸಮಾಸ’
    ಎಂದು ಹೆಸರು.

ಬಹುವ್ರೀಹಿ ಸಮಾಸ

  1. ಮೂರು ಕಣ್ಣುಳ್ಳವನು : ಮುಕ್ಕಣ್ಣ
  2. ಹಣೆಯಲ್ಲಿ ಕಣ್ಣುಳ್ಳವನು : ಹಣೆಗಣ್ಣ
  3. ಚಕ್ರವನ್ನು ಹಿಡಿದಿರುವವನು : ಚಕ್ರಪಾಣಿ
  4. ಚಂದ್ರನಂತೆ ಮುಖವುಳ್ಳವಳು : ಚಂದ್ರಮುಖಿ
    ಹೀಗೆ ಸಮಾಸವಾದಾಗ ಪೂರ್ವೋತ್ತರ ಪದಗಳು ಪ್ರಧಾನವಾಗದೆ ಬೇರೊಂದು ಪದ ಪ್ರಧಾನವಾದರೆ ಅಂತಹ ಸಮಾಸಗಳಿಗೆ ‘ಬಹುವ್ರೀಹಿ ಸಮಾಸ’ ಎಂದು ಹೆಸರು.

ಕ್ರಿಯಾ ಸಮಾಸ (ಇದು ಕನ್ನಡಕ್ಕೆ ವಿಶಿಷ್ಟವಾದ ಸಮಾಸ)

  1. ಕೈಯನ್ನು ತೊಳೆ – ಕೈತೊಳೆ
  2. ಮರವನ್ನು ಹತ್ತು – ಮರಹತ್ತು
  3. ಕಳೆಯನ್ನು ಕೀಳು – ಕಳೆಕೀಳು
  4. ಊಟವನ್ನು ಮಾಡು – ಊಟಮಾಡು
  5. ತಲೆಯನ್ನು ಬಾಚು – ತಲೆಬಾಚು
  6. ಕಾಲನ್ನು ಎಳೆ – ಕಾಲೆಳೆ
    ಸಮಾಸದಲ್ಲಿ ಪೂರ್ವಪದವು ನಾಮಪದವಾಗಿದ್ದು, ಉತ್ತರ ಪದವು ಕ್ರಿಯಾ ಪದವಾಗಿದ್ದರೆ ಅಂತಹ ಸಮಾಸಗಳಿಗೆ ‘ಕ್ರಿಯಾ ಸಮಾಸ’ ಎಂದು ಹೆಸರು.

ಗಮಕ ಸಮಾಸ

  1. ಆ ಹುಡುಗ – ಅವನು + ಹುಡುಗ
  2. ಈ ಕಲ್ಲು – ಇದು + ಕಲ್ಲು
  3. ಕಡೆಗೋಲು – ಕಡೆಯುವುದು + ಕೋಲು
  4. ಮಾಡಿದಡಿಗೆ – ಮಾಡಿದುದು + ಅಡಿಗೆ
    ಹೀಗೆ ಪೂರ್ವ ಪದವು ಸರ್ವನಾಮ ಕೃದಾಂತಗಳಲ್ಲಿ ಒಂದಾಗಿದ್ದು ಉತ್ತರ ಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ಗಮಕ ಸಮಾಸ.

********