ಗ್ಲೋಬ್ ಮತ್ತು ನಕಾಶೆಗಳು – ಅಧ್ಯಾಯ-10

ಗ್ಲೋಬ್ ಮತ್ತು ನಕಾಶೆಗಳು

ಪಾಠದ ಪರಿಚಯ
ಭೂಗೋಳ ವಿಜ್ಞಾನವನ್ನು ಸರಿಯಾಗಿ ಅರಿತುಕೊಳ್ಳಲು ಮಾದರಿ ಗೋಳ (ಗ್ಲೋಬ್) ಮತ್ತು ನಕಾಶೆಗಳು ಉತ್ತಮ ಕಲಿಕಾ ಸಾಧನಗಳಾಗಿವೆ. ಭೂಮಿಯ ಮಾದರಿಯಾದ ಗ್ಲೋಬ್‍ನ ಅರ್ಥ ಮತ್ತು ಉಪಯೋಗಗಳನ್ನು ತಿಳಿಯುವುದು. ನಕಾಶೆಗಳ ಅರ್ಥ, ವಿಧಗಳು ಮತ್ತು ಅವುಗಳ ಉಪಯೋಗಗಳನ್ನು ತಿಳಿಯುವುದು. ನಕಾಶೆಗಳನ್ನು ರಚಿಸಲು ಮತ್ತು ಓದಲು ಬೇಕಾಗುವ ಪ್ರಮುಖ ಚಿಹ್ನೆಗಳನ್ನು ಈ ಪಾಠದಲ್ಲಿ ಪರಿಚಯಿಸಲಾಗಿದೆ.

1. ಮಾದರಿ ಗೋಳ (ಗ್ಲೋಬ್)
ಅರ್ಥ: ವಿಜ್ಞಾನ ತರಗತಿಯಲ್ಲಿ ನೀವು ಭೂಮಿಯ ಆಕಾರ ಮತ್ತು ಗಾತ್ರಗಳನ್ನು ಕುರಿತು ಅಧ್ಯಯನ ಮಾಡಿದ್ದೀರಿ. ಭೂಮಿಯು `ಜಿಯಾಯ್ಡ್’ (Geoid) ಆಕಾರದಲ್ಲಿದ್ದು ಅದನ್ನು ಮಾದರಿ ಗೋಳಗಳಿಂದ ನಿರೂಪಿಸಬಹುದು. ಕೃತಕ ಉಪಗ್ರಹಗಳಿಂದ ಪಡೆದ ಛಾಯಾಚಿತ್ರ ಭೂಮಿಯ ನೈಜ ಚಿತ್ರಣ ಮತ್ತು ಆಕಾರಗಳನ್ನು ತೋರಿಸುತ್ತದೆ. ಆದರೆ ಅದರಲ್ಲಿ ನಾವು ಭೂಮಿಯ ಒಂದು ಭಾಗವನ್ನು ಮಾತ್ರ ನೋಡಬಹುದು. ಭೂಮಿಯ ಪ್ರತಿರೂಪವಾದ ಮಾದರಿ ಗೋಳವನ್ನು ತಿರುಗಿಸಬಹುದಾದುದರಿಂದ ಭೂಮಿಯ ಪೂರ್ಣ ನೋಟವನ್ನು ಪಡೆಯಲು ಸಾಧ್ಯ.

ಮಾದರಿ ಗೋಳದ ಲಕ್ಷಣಗಳು
`ಗ್ಲೋಬ್’ ಇದು ಭೂಮಿಯ ಒಂದು ಚಿಕ್ಕ ಮಾದರಿಯಾಗಿದೆ. ಇದು ಭೂಮಿಯ ನೈಜ ಗೋಳಾಕಾರವನ್ನು ತೋರಿಸುತ್ತದೆ ಮತ್ತು ಅದು ನಕಾಶೆಯಂತೆ ಚಪ್ಪಟೆಯಾದುದಲ್ಲ. ಜೊತೆಗೆ ಹಲವು ಲಕ್ಷಣಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡುವುದು. ಇದೊಂದು ಸರಳವಾದ ಕಲಿಕಾ ಉಪಕರಣ. ಈ ಮಾದರಿಯನ್ನು ಮೇಜಿನ ಮೇಲೆ ಇಟ್ಟು ತಿರುಗಿಸಿ ಭೂಮಿಯ ವಿವಿಧ ಭೌಗೋಳಿಕ ಪರಿಕಲ್ಪನೆಗಳನ್ನು ತಿಳಿಯಬಹುದು.

ಉಪಯೋಗಗಳು
ಅ. `ಗ್ಲೋಬ್’ ಭೂಮಿಯ ಆಕಾರವನ್ನು ತಿಳಿಯಲು ಸಹಾಯವಾಗುತ್ತದೆ.
ಆ. ಭೂಮಿಯ ಮೇಲಿನ ಭೂಖಂಡ, ಸಮುದ್ರ ಮತ್ತು ಸಾಗರಗಳ ಸ್ಥಾನ, ಗಾತ್ರ ಮತ್ತು ಆಕಾರ ತಿಳಿಯಲು ನೆರವಾಗುತ್ತದೆ.
ಇ. ಇದು ಅಕ್ಷಾಂಶ ಮತ್ತು ರೇಖಾಂಶಗಳಿಂದ ಪ್ರದೇಶಗಳ ನಿಖರ ಸ್ಥಾನ ಮತ್ತು ರಾಜಕೀಯ ಗಡಿಗಳನ್ನು ತಿಳಿಯಲು ಸಹಕಾರಿಯಾಗಿದೆ
ಈ. ಉತ್ತಮ ಮಾದರಿಗೋಳವು ಭೂಅಕ್ಷದ ಓಲುವಿಕೆ, ಭೂಮಿಯ ಚಲನೆಗಳು, ದೈನಂದಿನ ಮತ್ತು ವಾರ್ಷಿಕ ಚಲನೆ ಹಾಗೂ ಅವುಗಳ ಪರಿಣಾಮ ತಿಳಿಯಲು ಅನುಕೂಲವಾಗಿದೆ. ಉದಾ: ಹಗಲು-ರಾತ್ರಿ, ಋತುಗಳು.
ಉ. ಗ್ಲೋಬ್‍ನಿಂದ ಭೂಮಿಯ ಮೇಲಿನ ವಿವಿಧ ಭೌಗೋಳಿಕ, ಸಾಮಾನ್ಯ ಮಾಹಿತಿಗಳನ್ನು ತಿಳಿಯಬಹುದು. ಅವುಗಳೆಂದರೆ: ಪರ್ವತ, ಪ್ರಸ್ಥಭೂಮಿ, ಮೈದಾನ, ಮರುಭೂಮಿ, ದ್ವೀಪಗಳು, ನದಿ, ಹುಲ್ಲುಗಾವಲು ಮತ್ತು ಅರಣ್ಯಗಳು ಇತ್ಯಾದಿ.

ಭೂಮಿಯ ಸ್ಯಾಟಲೈಟ್ ಚಿತ್ರ

2. ನಕ್ಷೆಗಳು (ನಕಾಶೆಗಳು)
ಗ್ಲೋಬ್‍ಗಳು ನಮಗೆ ಭೂಮಿಯ ಕುರಿತಾದ ಸಾಮಾನ್ಯ ಮಾಹಿತಿಯನ್ನು ಮಾತ್ರ ನೀಡುತ್ತವೆ. ಆದರೆ ಒಂದು ಸ್ಥಳ, ರಾಜ್ಯ, ದೇಶ ಹಾಗೂ ಇತರ ಭೌಗೋಳಿಕ ಲಕ್ಷಣಗಳ ವಿವರವಾದ ಮಾಹಿತಿ ಪಡೆಯಲು ನಕ್ಷೆಗಳು ಬೇಕಾಗುತ್ತವೆ.
ಭೂಮಿಯ ಪೂರ್ಣ ಅಥವಾ ಭಾಗಶಃ ಭಾಗವನ್ನು ಸಮತಲದ ಮೇಲೆ ಮಾಪಕಕ್ಕೆ (Scale) ಅನುಗುಣವಾಗಿ ರೂಪಿಸುವ ಆಕೃತಿಯೇ (ಚಿತ್ರ) ನಕ್ಷೆಯಾಗಿದೆ. ನಕ್ಷೆಯನ್ನು ತಯಾರಿಸುವ ವಿಜ್ಞಾನ ಮತ್ತು ಕಲೆಗೆ ನಕ್ಷಾಶಾಸ್ತ್ರ’ ಎನ್ನುವರು. ವಿವಿಧ ಪ್ರಕಾರದ ನಕ್ಷೆಗಳನ್ನು ಸೇರಿಸಿ ತಯಾರಿಸಿದ ಪುಸ್ತಕವನ್ನು‘ಅಟ್ಲಾಸ್’ ಅಥವಾ `ನಕಾಶೆ ಪುಸ್ತಕ’ ಎನ್ನುವರು.

ನಕ್ಷೆ

ನಕಾಶೆಗಳ ವಿಧಗಳು
ನಕಾಶೆಗಳನ್ನು ಅವುಗಳ ಮಾಪಕ ಮತ್ತು ಉದ್ದೇಶಗಳ ಆಧಾರದ ಮೇಲೆ ಅನೇಕ ವಿಧಗಳಾಗಿ ವಿಂಗಡಿಸಲಾಗಿದೆ.
1) ಮಾಪಕ ಆಧಾರಿತ ನಕ್ಷೆಗಳು :- ಮಾಪಕ ಆಧಾರದ ಮೇಲೆ ನಕ್ಷೆಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
ಅ) ದೊಡ್ಡ ಪ್ರಮಾಣದ ನಕ್ಷೆಗಳು :- ಇವು ಚಿಕ್ಕ ಪ್ರದೇಶಗಳನ್ನು ಪ್ರತಿನಿಧಿಸುತ್ತವೆ. ಇವುಗಳನ್ನು ಕಂದಾಯ ನಕ್ಷೆಗಳು ಮತ್ತು ಸ್ಥಳ ಸ್ವರೂಪ ನಕ್ಷೆಗಳೆಂದು ವಿಂಗಡಿಸಬಹುದು. ಕಂದಾಯ ನಕ್ಷೆಗಳು ವೈಯಕ್ತಿಕ ಆಸ್ತಿ ಬಗ್ಗೆ ಮಾಹಿತಿ ನೀಡುತ್ತವೆ. ಭೂಸ್ವರೂಪ ನಕ್ಷೆಗಳು ಒಂದು ಸ್ಥಳ ಮತ್ತು ಪ್ರದೇಶದ ಹೆಚ್ಚಿನ ಮಾಹಿತಿಯನ್ನು ತೋರಿಸುತ್ತವೆ.

ದೊಡ್ಡ ಪ್ರಮಾಣದ ನಕ್ಷೆಗಳು


ಆ) ಚಿಕ್ಕ ಪ್ರಮಾಣದ ನಕ್ಷೆಗಳು :- ಇವು ವಿಶಾಲವಾದ ಪ್ರದೇಶವನ್ನು ನಿರೂಪಿಸುತ್ತವೆ. ಉದಾ: ಪ್ರಪಂಚ, ಭೂಖಂಡಗಳು, ದೇಶ ಇತ್ಯಾದಿ. ಇವುಗಳಲ್ಲಿ ಭೂಪಟ ಮತ್ತು ಅಟ್ಲಾಸ್ ಪುಸ್ತಕಗಳೆಂದು ಎರಡು ವಿಧಗಳಿವೆ.
ಭೂಪಟಗಳು ಅಟ್ಲಾಸ್‍ಗಳಿಗಿಂತ ದೊಡ್ಡವು. ಅವುಗಳನ್ನು ತರಗತಿಗಳಲ್ಲಿ ಬೋಧನ ಸಾಧನವಾಗಿ ಉಪಯೋಗಿಸಲಾಗುವುದು. ಅವು ರಾಜಕೀಯ ವಿಭಾಗಗಳು, ಮೇಲ್ಮೈ ಲಕ್ಷಣಗಳು ಮುಂತಾದ ಸಾಮಾನ್ಯ ಮತ್ತು ಪ್ರಮುಖ ಲಕ್ಷಣಗಳನ್ನು ತೋರಿಸುತ್ತವೆ.

ಅಟ್ಲಾಸ್ ನಕ್ಷೆಗಳು ಚಿಕ್ಕದಾಗಿದ್ದರೂ ಅವು ನಮಗೆ ವಿವರವಾದ ಮಾಹಿತಿಗಳನ್ನು ನೀಡುತ್ತವೆ.

ಚಿಕ್ಕ ಪ್ರಮಾಣದ ನಕ್ಷೆಗಳು

2) ಉದ್ದೇಶ ಆಧಾರಿತ ನಕ್ಷೆಗಳು
ಇವು ವಿಷಯಾಧಾರಿತ ನಕ್ಷೆಗಳು. ಅವುಗಳನ್ನು ಈ ಕೆಳಕಂಡಂತೆ ವಿಂಗಡಿಸಲಾಗಿದೆ.
ಅ) ಸ್ವಾಭಾವಿಕ ನಕ್ಷೆಗಳು : ಇವು ನೈಸರ್ಗಿಕವಾದ ವಿಷಯಗಳಿಗೆ ಸಂಬಂಧಿಸಿದ್ದು ಭೂ ಮೇಲ್ಮೈ ಲಕ್ಷಣಗಳಾದ ಪರ್ವತ, ಪ್ರಸ್ಥಭೂಮಿ, ಬಯಲು ಪ್ರದೇಶ, ನದಿ ಇತ್ಯಾದಿಗಳನ್ನು ತೋರಿಸುತ್ತವೆ.

ಸ್ವಾಭಾವಿಕ ನಕ್ಷೆಗಳು


ಆ) ರಾಜಕೀಯ ನಕ್ಷೆಗಳು : ಇವು ರಾಜ್ಯ, ದೇಶ, ಖಂಡ ಮತ್ತು ಅವುಗಳ ಸ್ಥಾನ, ವಿಸ್ತೀರ್ಣ ಇತ್ಯಾದಿಗಳನ್ನು ತೋರಿಸುತ್ತವೆ.

ರಾಜಕೀಯ ನಕ್ಷೆಗಳು


ಇ) ಹಂಚಿಕೆ ನಕ್ಷೆಗಳು : ಈ ನಕ್ಷೆಗಳನ್ನು ಭೂಬಳಕೆ, ವಾಯುಗೋಳದ ಉಷ್ಣಾಂಶ, ಮಳೆ, ಜನಸಂಖ್ಯೆ, ಮಣ್ಣು, ಸ್ವಾಭಾವಿಕ ಸಸ್ಯವರ್ಗ, ಬೆಳೆಗಳು, ಖನಿಜ, ಕೈಗಾರಿಕೆ, ರೈಲುಮಾರ್ಗ, ರಸ್ತೆ, ಜಲಮಾರ್ಗಗಳು ಇತ್ಯಾದಿ ಹಂಚಿಕೆಯ ಬಗ್ಗೆ ತಿಳಿಯಲು ಉಪಯೋಗಿಸಲಾಗುವುದು.

ಹಂಚಿಕೆ ನಕ್ಷೆಗಳು

ನಕ್ಷೆಯ ಮೂಲಾಂಶಗಳು
ಸಿದ್ಧವಾದ ಉತ್ತಮ ನಕ್ಷೆಯು ಸೂಕ್ತವಾದ ಶೀರ್ಷಿಕೆ, ಮಾಪಕ, ಅಕ್ಷಾಂಶ ಮತ್ತು ರೇಖಾಂಶಗಳು, ದಿಕ್ಕು ಮತ್ತು ಸೂಚಿ ಮುಂತಾದ ಅಗತ್ಯವಾದ ಮಾಹಿತಿಗಳನ್ನು ಹೊಂದಿರಬೇಕು.

* ಶೀರ್ಷಿಕೆ (ತಲೆಬರಹ) : ಪ್ರತಿಯೊಂದು ನಕ್ಷೆಯು ಅವಶ್ಯಕವಾಗಿ ಶೀರ್ಷಿಕೆಯನ್ನು ಹೊಂದಿರಬೇಕು. ಅದು ನಮಗೆ ಬೇಕಾದ ಒಳವಿಷಯವನ್ನು ತಿಳಿಸುವುದು. ಉದಾ: ಭಾರತದ ಭೌಗೋಳಿಕ ಲಕ್ಷಣಗಳು, ಭಾರತದ ಆಡಳಿತ ವಿಭಾಗಗಳು ಇತ್ಯಾದಿ.

ಶೀರ್ಷಿಕೆ (ತಲೆಬರಹ)

* ಮಾಪಕ : ಮಾಪಕವು ಭೂಮಿಯ ಮೇಲಿನ ಎರಡು ಸ್ಥಳಗಳ ಅಂತರವನ್ನು ತಿಳಿಯಲು ನಮಗೆ ಸಹಾಯವಾಗಿದೆ. ಭೂಮಿಯ ಮೇಲಿನ ವಾಸ್ತವ ದೂರಕ್ಕೂ (ಅಂತರಕ್ಕೂ) ಮತ್ತು ನಕಾಶೆಯ ಮೇಲಿನ ದೂರಕ್ಕೂ ಇರುವ ಪರಿಮಾಣವೇ ಮಾಪಕ. ನಕಾಶೆಯ ಮೇಲಿನ ಎರಡು ಸ್ಥಳಗಳು ತುಂಬಾ ಹತ್ತಿರದಲ್ಲಿವೆ ಎಂದೆನಿಸಿದರೂ ಭೂಮಿಯ ಮೇಲೆ ಅವು ತುಂಬಾ ದೂರದಲ್ಲಿರುತ್ತವೆ.

ಮಾಪಕ

* ಅಕ್ಷಾಂಶ ಮತ್ತು ರೇಖಾಂಶಗಳು : ಇವು ಕಾಲ್ಪನಿಕ ರೇಖೆಗಳ ಜಾಲವಾಗಿವೆ. ನಕಾಶೆಯ ಮೇಲಿನ ಸ್ಥಳವೊಂದರ ಸ್ಥಾನ, ದೂರ ಮತ್ತು ದಿಕ್ಕುಗಳನ್ನು ಗುರುತಿಸುವುದಕ್ಕೆ ಸಹಾಯಕವಾಗುತ್ತದೆ.

Latitude and longitude diagram. Vector educational poster, scientific infographics. Geographic coordinate system. ಅಕ್ಷಾಂಶ ಮತ್ತು ರೇಖಾಂಶಗಳು

* ದಿಕ್ಕು : ನಕ್ಷೆಯಲ್ಲಿ `ಉ’ (N) ಅಕ್ಷರವುಳ್ಳ ಬಾಣದ ಗುರುತಿನ ಚಿಹ್ನೆಯಿಂದ ಉತ್ತರ ದಿಕ್ಕನ್ನು ಸೂಚಿಸಲಾಗುತ್ತದೆ. ಬಾಣದ ತುದಿ ಉತ್ತರಕ್ಕೆ ನಿರ್ದೇಶಕವಾಗಿರುತ್ತದೆ. ಈ ಚಿಹ್ನೆಯಿಂದ ಒಮ್ಮೆ ಉತ್ತರ ದಿಕ್ಕು ತಿಳಿಯುತ್ತಲೇ ಇತರೆ ದಿಕ್ಕುಗಳನ್ನು ಸರಳವಾಗಿ ಗುರುತಿಸಬಹುದು.

ದಿಕ್ಕು

* ಸೂಚಿ : ನಕ್ಷೆಯಲ್ಲಿ ಸೂಚಿಸಲು ಮತ್ತು ಗುರುತಿಸುವುದಕ್ಕಾಗಿ ಬಳಕೆ ಮಾಡುವ ಯಾವುದೇ ಸೂಚಿಗೆ `ನಕ್ಷಾ ಸೂಚಿ’ ಎನ್ನುವರು. ಇದು ನಕಾಶೆಯ ಪ್ರಮುಖ ಮೂಲಾಂಶವಾಗಿದ್ದು, ನಕಾಶೆಯಲ್ಲಿ ತೋರಿಸಿರುವ ಎಲ್ಲ ಲಕ್ಷಣಗಳನ್ನು ಸೂಚಿಸುತ್ತದೆ. ಸೂಚಿಯಲ್ಲಿ ವಿವಿಧ ಬಣ್ಣಗಳು ಮತ್ತು ಭೌಗೋಳಿಕ ಚಿಹ್ನೆಗಳನ್ನು ಬಳಸಲಾಗುತ್ತದೆ. ಉದಾ: ನೀಲಿ ಬಣ್ಣವು ಜಲರಾಶಿಗಳನ್ನು, ಹಸಿರು ಬಣ್ಣ ಮೈದಾನಗಳನ್ನು ತೋರಿಸುವುದು ಇತ್ಯಾದಿ.

ಸೂಚಿ

ನಕಾಶೆಗಳ ಉಪಯೋಗ :

* ನಕಾಶೆಗಳು ನಮಗೆ ಹಲವು ರೀತಿಯಲ್ಲಿ ನೆರವಾಗುತ್ತವೆ. ನಕಾಶೆಗಳು ನಮಗೆ ನಗರ, ಜಿಲ್ಲೆ, ರಾಜ್ಯ, ದೇಶ, ಖಂಡ ಮುಂತಾದವುಗಳ ಸ್ಥಳ, ನಿರ್ದೇಶನ ತಿಳಿಯಲು ಸಹಾಯವಾಗುತ್ತವೆ.

* ಭೌತಿಕ ಲಕ್ಷಣಗಳಾದ ಪರ್ವತ, ಪ್ರಸ್ಥಭೂಮಿ, ಮರುಭೂಮಿ, ತೀರ ಪ್ರದೇಶ, ದ್ವೀಪ ಮುಂತಾದವುಗಳನ್ನು ಸೂಚಿಸಲು ಸಹಕಾರಿಯಾಗುತ್ತವೆ.

* ಪ್ರದೇಶಗಳ ಸಾರಿಗೆ-ಸಂಪರ್ಕ (ರಸ್ತೆ, ರೈಲು, ವಾಯುಮಾರ್ಗಗಳು)ಗಳನ್ನು ಅರಿಯಲು ಅನುಕೂಲವಾಗುತ್ತವೆ.

* ಬೆಳೆಗಳು, ಖನಿಜಗಳು, ಕೈಗಾರಿಕೆಗಳು ಇತ್ಯಾದಿಗಳ ಹಂಚಿಕೆಯನ್ನು ತಿಳಿಯುವುದಕ್ಕೆ ನೆರವಾಗುತ್ತವೆ.

* ಯುದ್ಧ ಹಾಗೂ ರಕ್ಷಣೆಯ ಸಂದರ್ಭಗಳಲ್ಲಿ ಸೈನಿಕರಿಗೆ ಬಹಳ ಉಪಯೋಗವಾಗುತ್ತವೆ.

* ಅವುಗಳು ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವವು.

* ನಕಾಶೆಗಳು ಒಂದು ಪ್ರಮುಖ ಬೋಧನಾ ಅಥವಾ ಕಲಿಕಾ ಸಾಧನಗಳಾಗಿವೆ. ಅವುಗಳನ್ನು ಒಯ್ಯುವುದು ಸುಲಭ.

3. ಭೌಗೋಳಿಕ ಸಂಕೇತಗಳು
ಒಂದು ಸಂಕೇತವು ಒಂದು ವಸ್ತುವಿನ ಕಲ್ಪನೆಯ ಚಿಹ್ನೆಯಾಗಿದೆ. ನಕ್ಷೆಯಲ್ಲಿ ಬಳಸುವ ಸಂಕೇತಗಳು ಪ್ರಪಂಚದಾದ್ಯಂತ ಒಂದೇ ರೀತಿಯಾಗಿರುತ್ತವೆ. ಸಂಕೇತಗಳು ವೈವಿಧ್ಯ ಮಾಹಿತಿಗಳನ್ನು ಒದಗಿಸುತ್ತವೆ.
ಬಣ್ಣಗಳು : ನೀವು ನಕಾಶೆಯನ್ನು ನೋಡಿದಾಗ ವಿವಿಧ ಬಣ್ಣಗಳನ್ನು ಕಾಣುತ್ತೀರಿ. ಈ ಬಣ್ಣಗಳು ನಕಾಶೆಗಳ ಮೇಲೆ ವಿವಿಧ ಪ್ರಾಕೃತಿಕ ಸಂಗತಿಗಳನ್ನು ತೋರಿಸುತ್ತವೆ. ಪ್ರಾಕೃತಿಕ ನಕಾಶೆಯಲ್ಲಿ ಬಳಸುವ ಮಹತ್ವದ ಬಣ್ಣಗಳೆಂದರೆ,

ಭೌಗೋಳಿಕ ಸಂಕೇತಗಳು
ಬಣ್ಣಗಳು

ಅ) ನೀಲಿ : ಜಲಭಾಗಗಳನ್ನು ಸೂಚಿಸುತ್ತದೆ. – ಮಹಾಸಾಗರ, ಸಮುದ್ರ, ಸರೋವರಗಳು ಇತ್ಯಾದಿ.
ಆ) ಹಸಿರು : ಮೈದಾನ ಮತ್ತು ತಗ್ಗು ಪ್ರದೇಶಗಳನ್ನು ತೋರಿಸುತ್ತದೆ.
ಇ) ಹಳದಿ : ಎತ್ತರವಾದ ಭೂಭಾಗಗಳು ಅಥವಾ ಮೈದಾನಗಳಿಗಿಂತ ಎತ್ತರವಾದ ಭಾಗಗಳನ್ನು ತೋರಿಸುತ್ತದೆ.
ಈ) ಕಂದು : ಬೆಟ್ಟಗಳು ಮತ್ತು ಪರ್ವತಗಳಿಗಿಂತ ಕಡಿಮೆ ಎತ್ತರದ ಭಾಗಗಳನ್ನು ಸೂಚಿಸುತ್ತದೆ.
ಉ) ಕಡು ಕಂದು ಬಣ್ಣ : ಅತಿ ಎತ್ತರವಾದ ಪರ್ವತಗಳನ್ನು ನಿರೂಪಿಸುತ್ತದೆ.
ಊ) ಬಿಳುಪು ಅಥವಾ ನೇರಳೆ ಬಣ್ಣ : ಹಿಮದಿಂದಾವೃತ ಪ್ರದೇಶಗಳನ್ನು ಸೂಚಿಸುತ್ತವೆ.
ಅಲ್ಲದೆ ರಾಜಕೀಯ ನಕಾಶೆಗಳಲ್ಲಿ ಜಿಲ್ಲೆ ಅಥವಾ ರಾಜ್ಯಗಳಲ್ಲಿ ಕೂಡಲೇ ಗುರುತಿಸುವುದಕ್ಕೆ ವಿವಿಧ ಬಣ್ಣಗಳಿಂದ ಅವುಗಳನ್ನು ಚಿತ್ರಿಸಲಾಗುತ್ತದೆ.


ಗೆರೆಗಳು : ನಕಾಶೆಯ ಮೇಲೆ ರಸ್ತೆ, ರೈಲು, ವಾಯುಮಾರ್ಗ ಇತ್ಯಾದಿ ಜಾಲಗಳನ್ನು ತೋರಿಸಲು ವಿವಿಧ ಬಗೆಯ ಗೆರೆಗಳನ್ನು ವಿವಿಧ ಬಣ್ಣಗಳಿಂದ ಎಳೆಯಲಾಗುವುದು. ಕಪ್ಪು ಬಣ್ಣವನ್ನು ಗಡಿರೇಖೆಗಳು, ಕೆಂಪು ಬಣ್ಣವನ್ನು ರಸ್ತೆಗಳನ್ನು ತೋರಿಸಲು ಇತ್ಯಾದಿಯಾಗಿ ಉಪಯೋಗಿಸಲಾಗುವುದು.

4. ನಕಾಶೆಯನ್ನು ಓದುವಿಕೆ
ನಕಾಶೆಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಕೆಲವೊಂದು ಅಂಶಗಳನ್ನು ತಿಳಿದಿರಬೇಕು. ಒಂದು ಅರ್ಥಪೂರ್ಣ ಶಬ್ಧ ತಯಾರಿಸಲು ನಿಮಗೆ ಹೇಗೆ ವರ್ಣಮಾಲೆ ತಿಳಿದಿರಬೇಕೋ ಹಾಗೆಯೇ ನಕ್ಷೆ ಓದುವುದರಲ್ಲಿಯೂ ವಿವಿಧ ಬಣ್ಣಗಳು, ರೇಖೆಗಳು ಮತ್ತು ಚಿಹ್ನೆಗಳ ಬಗ್ಗೆಯೂ ತಿಳಿದಿರಬೇಕು.

ವಿ.ಸೂ. : ಮಾಪಕವನ್ನಾಧರಿಸಿ ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾ ಕೇಂದ್ರಗಳ ನೇರ ಅಂತರ 222 ಕಿ.ಮೀ.ಗಳಾಗಿರುತ್ತದೆ.
ನಕಾಶೆ ಓದುವುದು ಒಂದು ಕೌಶಲ್ಯ. ನಾವೆಲ್ಲರೂ ನಕಾಶೆ ಮೇಲಿನ ಸ್ಥಳ ಮತ್ತು ವಿವಿಧ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಕೆಲವು ಪರಿಣತಿ ಮತ್ತು ಸಾಮಾನ್ಯ ನಿರ್ದೇಶನಗಳನ್ನು ಹೊಂದಿರಬೇಕು. ಅವು ಈ ಕೆಳಕಂಡಂತಿವೆ.

1. ಸ್ಥಳ ಗುರುತಿಸುವಿಕೆ : ಮೇಲಿನ ಸ್ಥಳಗಳನ್ನು ತಿಳಿಯಲು ನಾವು ಅಕ್ಷಾಂಶ ಮತ್ತು ರೇಖಾಂಶಗಳ ಬಗ್ಗೆ ತಿಳಿದಿರಬೇಕು.

2. ದಿಕ್ಕು ಗುರುತಿಸುವಿಕೆ : ನಕಾಶೆ ಮೇಲಿನ ಸ್ಥಳದ ದಿಕ್ಕನ್ನು ತಿಳಿಯಲು ಉತ್ತರದ ದಿಕ್ಕಿಗೆ ಮುಖ ಮಾಡಿದ ಬಾಣದ ಚಿಹ್ನೆಯನ್ನು ತಿಳಿದರೆ ಉಳಿದ ದಿಕ್ಕುಗಳನ್ನು ಸರಳವಾಗಿ ಗುರುತಿಸಿಕೊಳ್ಳಬಹುದು.

3. ಸ್ಥಳಗಳ ನಡುವಿನ ಅಂತರ ಗುರುತಿಸುವಿಕೆ : ಎರಡು ಸ್ಥಳಗಳ ನಡುವಿನ ಅಂತರ ತಿಳಿಯಲು ನಕಾಶೆಯಲ್ಲಿ ಕೊಟ್ಟಿರುವ ಮಾಪಕವು ಸಹಕಾರಿಯಾಗುತ್ತದೆ.

ಹೊಸ ಪದಗಳು
ಮಾದರಿಗೋಳ (ಗ್ಲೋಬ್), ನಕಾಶೆ, ಸನ್ನಿವೇಶ, ಭೌಗೋಳಿಕ ಲಕ್ಷಣ, ಅಟ್ಲಾಸ್, ಮಾಪಕ, ನಕ್ಷಾಶಾಸ್ತ್ರ, ಸೂಚಿ, ಶೀರ್ಷಿಕೆ, ಚಿಹ್ನೆ, ಸಾರಿಗೆ ಸಂಪರ್ಕ.

ನಿಮಗೆ ತಿಳಿದಿರಲಿ

* ಅತ್ಯಂತ ಪುರಾತನ ನಕಾಶೆಯು ಬಾಬಿಲೋನಿಯದಲ್ಲಿ (ಕ್ರಿ.ಪೂ.2300) ಕಂಡುಬಂದರೆ, ಗ್ರೀಕ್‍ನ ಖಗೋಳ ವಿಜ್ಞಾನಿಯಾದ ಕ್ಲಾಡಿಯಸ್ ಟಾಲೆಮಿಯವರ (ಕ್ರಿ.ಶ. 90-168) ಅಟ್ಲಾಸ್ ಪ್ರಥಮದ್ದಾಗಿದೆ.

ಅತ್ಯಂತ ಪುರಾತನ ನಕಾಶೆಯು ಬಾಬಿಲೋನಿಯದಲ್ಲಿ (ಕ್ರಿ.ಪೂ.2300) ಕಂಡುಬಂದಿದೆ
ಗ್ರೀಕ್‍ನ ಖಗೋಳ ವಿಜ್ಞಾನಿಯಾದ ಕ್ಲಾಡಿಯಸ್ ಟಾಲೆಮಿಯವರ (ಕ್ರಿ.ಶ. 90-168) ಅಟ್ಲಾಸ್ ಪ್ರಥಮದ್ದಾಗಿದೆ.
ಟಾಲೆಮಿ

* ವಿಶಾಲ ಪ್ರದೇಶಗಳನ್ನು ತೋರಿಸುವ ನಕಾಶೆಗಳು ಚಿಕ್ಕ ಪ್ರಮಾಣದ ನಕ್ಷೆಗಳಾಗಿದ್ದು, ಚಿಕ್ಕ ಪ್ರದೇಶಗಳನ್ನು ತೋರಿಸುವ ನಕಾಶೆಗಳು ದೊಡ್ಡ ಪ್ರಮಾಣದ ನಕಾಶೆಗಳಾಗಿವೆ.

* ಭೂಗೋಳಶಾಸ್ತ್ರ ಅಧ್ಯಯನದಲ್ಲಿ ನಕಾಶೆಗಳು ನೆರವಾಗುತ್ತವೆ. ಅವು ಬೋಧನ ಸಾಧನಗಳು.

* ಭೂಮಿಯ ಮೇಲಿನ ನಿಖರ ಅಂತರವನ್ನು ತಿಳಿಯಲು ನಾವು ಮಾಪಕವನ್ನು ಸೆಂ.ಮೀ.ನಿಂದ ಕಿ.ಮೀ.ಗೆ ಅಥವಾ ಅಂಗುಲದಿಂದ ಮೈಲಿಗೆ ಪರಿವರ್ತಿಸಿಕೊಳ್ಳಬೇಕಾಗುತ್ತದೆ.

* ಆಯಸ್ಕಾಂತೀಯ ಕಂಪಾಸಿನಲ್ಲಿರುವ ಮುಳ್ಳು ಯಾವಾಗಲೂ ಉತ್ತರ ದಿಕ್ಕನ್ನೇ ತೋರಿಸುತ್ತದೆ.

ಆಯಸ್ಕಾಂತೀಯ ಕಂಪಾಸಿನಲ್ಲಿರುವ ಮುಳ್ಳು ಯಾವಾಗಲೂ ಉತ್ತರ ದಿಕ್ಕನ್ನೇ ತೋರಿಸುತ್ತದೆ.

ಚಟುವಟಿಕೆಗಳು

* ಕಾಗದ, ರಬ್ಬರ್ ಚಂಡು ಅಥವಾ ಇನ್ನಿತರ ವಸ್ತುಗಳಿಂದ ಯಥಾವತ್ತಾಗಿ ಭೂಗೋಳದ ಮಾದರಿ ತಯಾರಿಸುವುದು.

* ವಿವಿಧ ಪ್ರಕಾರದ ನಕ್ಷೆಗಳನ್ನು ಇಟ್ಟುಕೊಂಡು ಅವುಗಳ ಪ್ರಮುಖ ವ್ಯತ್ಯಾಸಗಳನ್ನು ಗುರುತಿಸುವುದು.

* ಭಾರತದ ಬಾಹ್ಯ ನಕ್ಷೆಯಲ್ಲಿ ಸೂಕ್ತ ಬಣ್ಣಗಳನ್ನು ಉಪಯೋಗಿಸಿ.
ಅ) ಭಾರತದ ಪ್ರಾಕೃತಿಕ ಲಕ್ಷಣಗಳನ್ನು ಗುರುತಿಸುವುದು.
ಆ) ಭಾರತವನ್ನಾವರಿಸಿರುವ ಸಾಗರ ಮತ್ತು ಸಮುದ್ರಗಳಿಗೆ ಬಣ್ಣ ಹಾಕುವುದು ಮತ್ತು ಹೆಸರಿಸುವುದು.

ವಿಡಿಯೋ ಪಾಠಗಳು

Samveda – 6th – Social Studies – Globe and Maps (Part 1 of 2)
Samveda – 6th – Social Science – Globe and Maps (Part 2 of 2)

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

The Globe – A Model Of Our Earth | Study of Globe
2 The uses of Globe
Types of Maps
Types and Elements of Maps

https://youtu.be/5NRybjuUXVo

ನಕ್ಷೆಯ ಮೂಲಾಂಶಗಳು | ವೀಕ್ಷಿಸಲು ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ನಕ್ಷೆಯ ಮೂಲಾಂಶಗಳು
Elements of a Map
ನಕಾಶೆಯನ್ನು ಓದುವಿಕೆ | Learn How to Read Maps

ನಿಮಗೆ ತಿಳಿದಿರಲಿ

The Babylonian Map of the World | ಅತ್ಯಂತ ಪುರಾತನ ನಕಾಶೆಯು ಬಾಬಿಲೋನಿಯದಲ್ಲಿ (ಕ್ರಿ.ಪೂ.2300) ಕಂಡುಬಂದಿದೆ
ದೊಡ್ಡ ಪ್ರಮಾಣದ ನಕ್ಷೆಗಳು | ಚಿಕ್ಕ ಪ್ರಮಾಣದ ನಕ್ಷೆಗಳು

https://youtu.be/nyC63C1Zf2Y

ಆಯಸ್ಕಾಂತೀಯ ಕಂಪಾಸಿನಲ್ಲಿರುವ ಮುಳ್ಳು ಯಾವಾಗಲೂ ಉತ್ತರ ದಿಕ್ಕನ್ನೇ ತೋರಿಸುತ್ತದೆ | ವೀಕ್ಷಿಸಲು ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಚಟುವಟಿಕೆಗಳು

how to make a globe at home with paper | diy earth model school project | ಕಾಗದ, ರಬ್ಬರ್ ಚಂಡು ಅಥವಾ ಇನ್ನಿತರ ವಸ್ತುಗಳಿಂದ ಯಥಾವತ್ತಾಗಿ ಭೂಗೋಳದ ಮಾದರಿ ತಯಾರಿಸುವುದು.
How to make Model of Globe for science project and school Exhibition/Model of Earth
Physiographical Map of India – Geography Project | ಭಾರತದ ಪ್ರಾಕೃತಿಕ ಲಕ್ಷಣಗಳನ್ನು ಗುರುತಿಸುವುದು.