ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು – ಅಧ್ಯಾಯ – 5

ನಿಂಬೆಹಣ್ಣು, ಹುಣಸೆಹಣ್ಣು, ಅಡುಗೆ ಉಪ್ಪು, ಸಕ್ಕರೆ ಮತ್ತು ವಿನೆಗರ್ ಮುಂತಾದ ಬಹಳಷ್ಟು ಪದಾರ್ಥಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಉಪಯೋಗಿಸುತ್ತೇವೆ. ಅವು ಒಂದೇ ರುಚಿಯವೆ? ಕೋಷ್ಟಕ 5.1ರಲ್ಲಿ ಪಟ್ಟಿ ಮಾಡಿದ ಕೆಲವು ಖಾದ್ಯ ಪದಾರ್ಥಗಳ ರುಚಿಗಳನ್ನು ನಾವೀಗ ಸ್ಮರಿಸೋಣ. ಇವುಗಳಲ್ಲಿ ಯಾವ ಪದಾರ್ಥದ ರುಚಿಯನ್ನೂ ನೀವು ಸವಿದಿಲ್ಲವಾದರೆ, ಈಗ ಸವಿದು ರುಚಿ ನೋಡಿ, ಫಲಿತಾಂಶವನ್ನು ಕೋಷ್ಟಕ 5.1ರಲ್ಲಿ ತುಂಬಿ.

ಎಚ್ಚರಿಕೆ
* ರುಚಿ ನೋಡಲು ಹೇಳದೇ ಇರುವ ಯಾವುದೇ ಪದಾರ್ಥದ ರುಚಿ ನೋಡಬೇಡಿ.
* ಸ್ಪರ್ಶಿಸಲು ಹೇಳದೇ ಇರುವ ಯಾವುದೇ ಪದಾರ್ಥವನ್ನು ಸ್ಪರ್ಶಿಸಬೇಡಿ.

ಇವುಗಳಲ್ಲಿ ಕೆಲವು ಪದಾರ್ಥಗಳು ಹುಳಿಯಾಗಿಯೂ, ಕೆಲವು ಕಹಿಯಾಗಿಯೂ, ಕೆಲವು ಸಿಹಿಯಾಗಿಯೂ ಮತ್ತೆ ಕೆಲವು ಉಪ್ಪಾಗಿಯೂ ಇರುವುದನ್ನು ನೀವು ಕಂಡುಕೊಳ್ಳುವಿರಿ.

5.1 ಆಮ್ಲಗಳು ಮತ್ತು ಪ್ರತ್ಯಾಮ್ಲಗಳು

ಮೊಸರು, ನಿಂಬೆರಸ, ಕಿತ್ತಳೆರಸ ಮತ್ತು ವಿನೆಗರ್‍ಗಳ ರುಚಿ ಹುಳಿ. ಇವುಗಳಲ್ಲಿ ಸೇರಿಕೊಂಡಿರುವ ಆಮ್ಲ (acid) ಗಳಿಂದಾಗಿ ಈ ಪದಾರ್ಥಗಳು ಹುಳಿಯಾಗಿವೆ. ಈ ಪದಾರ್ಥಗಳ ರಾಸಾಯನಿಕ ಗುಣ ಆಮ್ಲೀಯ (acidic). ಆ್ಯಸಿಡ್ ಪದವು ಹುಳಿ ಎಂಬ ಅರ್ಥವಿರುವ ಆ್ಯಸಿರೆ (acere) ಎಂಬ ಲ್ಯಾಟಿನ್ ಶಬ್ದದಿಂದ ಬಂದಿದೆ. ಈ ಪದಾರ್ಥಗಳಲ್ಲಿರುವ ಆಮ್ಲಗಳು ನೈಸರ್ಗಿಕ ಆಮ್ಲಗಳು.

ಆಡುಗೆ ಸೋಡದ ರುಚಿಯ ಬಗ್ಗೆ ನೀವೇನು ಹೇಳುವಿರಿ? ಅದರ ರುಚಿಯೂ ಹುಳಿಯಾಗಿತ್ತೆ? ಇಲ್ಲವಾದರೆ ಅದರ ರುಚಿ ಯಾವುದು? ಅದರ ರುಚಿ ಹುಳಿಯಾಗಿಲ್ಲದ ಕಾರಣ ಅದರಲ್ಲಿ ಆಮ್ಲವಿಲ್ಲ ಎಂದರ್ಥ. ಅದರ ರುಚಿ ಕಹಿ. ನೀವು ಅದರ ದ್ರಾವಣವನ್ನು ಬೆರಳುಗಳ ನಡುವೆ ಉಜ್ಜಿದರೆ ಸಾಬೂನಿನಂತಹ (soapy) ಅನುಭವವಾಗುವುದು. ಸಾಮಾನ್ಯವಾಗಿ ಕಹಿರುಚಿ ಇದ್ದು, ಸ್ಪರ್ಶಿಸಿದಾಗ ಸಾಬೂನಿನಂತಹ ಅನುಭವ ನೀಡುವ ಇಂತಹ ಪದಾರ್ಥಗಳನ್ನು ಪ್ರತ್ಯಾಮ್ಲಗಳು (bases) ಎನ್ನುವರು. ಇಂತಹ ಪದಾರ್ಥಗಳ ಗುಣಗಳು ಪ್ರತ್ಯಾಮ್ಲೀಯ (basic) ವಾಗಿರುವುವು.

ಪ್ರತಿಯೊಂದು ಪದಾರ್ಥದ ರುಚಿ ನೋಡಲು ಸಾಧ್ಯವಾಗದಿದ್ದರೆ, ಅದರ ಗುಣವನ್ನು ತಿಳಿಯುವುದು ಹೇಗೆ?

ಒಂದು ಪದಾರ್ಥವು ಆಮ್ಲೀಯವೆ? ಅಥವಾ ಪ್ರತ್ಯಾಮ್ಲೀಯವೆ? ಎಂದು ಪರೀಕ್ಷಿಸಲು ವಿಶಿಷ್ಟ ರೀತಿಯ ಪದಾರ್ಥಗಳನ್ನು ಬಳಸಲಾಗುತ್ತದೆ. ಈ ಪದಾರ್ಥಗಳನ್ನು ಸೂಚಕಗಳು (indicators) ಎನ್ನುವರು. ಈ ಸೂಚಕಗಳನ್ನು ಆಮ್ಲೀಯ ಅಥವಾ ಪ್ರತ್ಯಾಮ್ಲೀಯ ಪದಾರ್ಥವುಳ್ಳ ದ್ರಾವಣಕ್ಕೆ ಸೇರಿಸಿದಾಗ ತಮ್ಮ ಬಣ್ಣವನ್ನು ಬದಲಾಯಿಸುತ್ತವೆ. ಅರಿಶಿನ, ಲಿಟ್ಮಸ್, ದಾಸವಾಳ ಹೂವಿನ ದಳ ಇತ್ಯಾದಿಗಳು ನೈಸರ್ಗಿಕವಾಗಿ ದೊರೆಯುವ ಕೆಲವು ಸೂಚಕಗಳಾಗಿವೆ.

5.2 ನಮ್ಮ ಸುತ್ತಲಿನ ನೈಸರ್ಗಿಕ ಸೂಚಕಗಳು.

ಲಿಟ್ಮಸ್ : ಒಂದು ನೈಸರ್ಗಿಕ ಬಣ್ಣ.

ಲಿಟ್ಮಸ್ (litmus) ಸಾಮಾನ್ಯವಾಗಿ ಬಳಕೆಯಾಗುವ ಒಂದು ನೈಸರ್ಗಿಕ ಸೂಚಕ. ಇದನ್ನು ಕಲ್ಲುಹೂಗಳಿಂದ ಪಡೆಯಲಾಗುತ್ತದೆ [ಚಿತ್ರ 5.1 (ಎ)]. ಇದು ಆಸವಿತ (distilled) ನೀರಿನಲ್ಲಿ ಉಜ್ವಲವಾದ ಕೆನ್ನೀಲಿ ಬಣ್ಣವನ್ನು ಹೊಂದಿದ್ದು, ಆಮ್ಲೀಯ ದ್ರಾವಣದೊಂದಿಗೆ ಸೇರಿಸಿದಾಗ ಕೆಂಪಾಗಿ ಬದಲಾಗುತ್ತದೆ ಮತ್ತು ಪ್ರತ್ಯಾಮ್ಲೀಯ ದ್ರಾವಣದೊಂದಿಗೆ ಸೇರಿಸಿದಾಗ ನೀಲಿಯಾಗಿ ಬದಲಾಗುತ್ತದೆ. ಇದು ದ್ರಾವಣದ ರೂಪದಲ್ಲಿ ಅಥವಾ ಕಾಗದದ ಪಟ್ಟಿಗಳ ರೂಪದಲ್ಲಿ ದೊರೆಯುತ್ತದೆ. ಸಾಮಾನ್ಯವಾಗಿ ಇದು ಕೆಂಪು ಮತ್ತು ನೀಲಿ ಲಿಟ್ಮಸ್ ಕಾಗದವಾಗಿ ದೊರೆಯುತ್ತದೆ. [ಚಿತ್ರ 5.1 (ಬಿ)].

ಚಟುವಟಿಕೆ 5.1
• ಪ್ಲಾಸ್ಟಿಕ್ ಬಟ್ಟಲು/ಲೋಟ/ಪ್ರನಾಳದಲ್ಲಿನ ಸ್ವಲ್ಪ ನೀರಿಗೆ ಲಿಂಬೆರಸವನ್ನು ಬೆರೆಸಿ.
• ಈ ದ್ರಾವಣದ ಹನಿಯನ್ನು ಹನಿಗ (dropper) ದ ಸಹಾಯದಿಂದ ಕೆಂಪು ಲಿಟ್ಮಸ್‍ನ ಕಾಗದದ ಪಟ್ಟಿಯ ಮೇಲೆ ಹಾಕಿ. ಬಣ್ಣದಲ್ಲಿ ಏನಾದರೂ ಬದಲಾವಣೆಯಾಗುವುದೆ?
• ಇದೇ ಪ್ರಯತ್ನವನ್ನು ನೀಲಿ ಲಿಟ್ಮಸ್ ಕಾಗದದ ಪಟ್ಟಿಯ ಮೇಲೆ ಪುನರಾವರ್ತಿಸಿ, ಬಣ್ಣ ಬದಲಾಗುವುದೆ ಗುರ್ತಿಸಿ.

ಇದೇ ಚಟುವಟಿಕೆಯನ್ನು ಈ ಕೆಳಗಿನ ಪದಾರ್ಥಗಳನ್ನು ಬಳಸಿ ಮಾಡಿ.

ನಲ್ಲಿನೀರು, ಮಾರ್ಜಕ (detergent) ದ ದ್ರಾವಣ, ಸೋಡಾಪಾನೀಯ, ಸಾಬೂನಿನ ದ್ರಾವಣ, ಶಾಂಪೂ, ಅಡುಗೆ ಉಪ್ಪಿನ ದ್ರಾವಣ, ಸಕ್ಕರೆ ದ್ರಾವಣ, ವಿನೆಗರ್, ಅಡುಗೆ ಸೋಡದ ದ್ರಾವಣ, ಮೆಗ್ನೀಸಿಯಮ್‍ಹಾಲು, ವಾಷಿಂಗ್‍ಸೋಡದ ದ್ರಾವಣ, ಸುಣ್ಣದ ತಿಳಿ. ಸಾಧ್ಯವಾದರೆ ಈ ಎಲ್ಲಾ ದ್ರಾವಣಗಳನ್ನು ಆಸವಿತ ನೀರಿನಿಂದಲೇ ಮಾಡಿ.

ನೀವು ಗಮನಿಸಿದ ಅಂಶಗಳನ್ನು ಕೋಷ್ಟಕ 5.2ರಲ್ಲಿ ದಾಖಲಿಸಿ.

ಲಿಟ್ಮಸ್‍ನ ಮೇಲೆ ಪರಿಣಾಮವನ್ನು ಉಂಟುಮಾಡದ ಯಾವುದಾದರೂ ಪದಾರ್ಥಗಳು ನಿಮ್ಮ ಕೋಷ್ಟಕದಲ್ಲಿ ಇವೆಯೇ? ಆ ಪದಾರ್ಥಗಳನ್ನು ಹೆಸರಿಸಿ.

ಕೆಂಪು ಅಥವಾ ನೀಲಿ ಲಿಟ್ಮಸ್‍ನ ಬಣ್ಣವನ್ನು ಬದಲಾಯಿಸದೇ ಇರುವ ದ್ರಾವಣಗಳು ತಟಸ್ಥ ದ್ರಾವಣಗಳು (neutral solutions). ಈ ಪದಾರ್ಥಗಳು ಆಮ್ಲೀಯವೂ ಅಲ್ಲ, ಪ್ರತ್ಯಾಮ್ಲೀಯವೂ ಅಲ್ಲ.

ಅರಿಶಿನವು ಇನ್ನೊಂದು ನೈಸರ್ಗಿಕ ಸೂಚಕ

ಚಟುವಟಿಕೆ 5.2
* ಒಂದು ಚಮಚ ಅರಿಶಿನದ ಪುಡಿಯನ್ನು ತೆಗೆದುಕೊಳ್ಳಿ. ಸ್ವಲ್ಪ ನೀರನ್ನು ಸೇರಿಸಿ ಜಿಗುಟಾದ ಕಣಕ (paste) ವನ್ನು ತಯಾರಿಸಿ.
* ಬ್ಲಾಟಿಂಗ್ ಕಾಗದ/ಸೋಸು ಕಾಗದದ ಮೇಲೆ ಅರಿಶಿನದ ಜಿಗುಟಾದ ಕಣಕವನ್ನು ಲೇಪಿಸಿ. ಅನಂತರ ಅದನ್ನು ಒಣಗಿಸಿ, ಅರಿಶಿನದ ಕಾಗದವನ್ನು ತಯಾರಿಸಿ. ದೊರೆತ ಅರಿಶಿನದ ಕಾಗದವನ್ನು ತೆಳುವಾದ ಪಟ್ಟಿಗಳಾಗಿ ಕತ್ತರಿಸಿ.
* ಈ ಅರಿಶಿನದ ಕಾಗದದ ಪಟ್ಟಿಯ ಮೇಲೆ ಸಾಬೂನಿನ ದ್ರಾವಣದ ಒಂದು ಹನಿಯನ್ನು ಹಾಕಿ. ನೀವು ಏನನ್ನು ಗಮನಿಸುವಿರಿ?

ಇದೇ ರೀತಿ, ಕೋಷ್ಟಕ 5.3 ರಲ್ಲಿ ಪಟ್ಟಿ ಮಾಡಿದ ದ್ರಾವಣಗಳನ್ನು ಪರೀಕ್ಷಿಸಿ, ನೀವು ಗಮನಿಸಿದ ಅಂಶಗಳನ್ನು ಗುರುತು ಹಾಕಿ. ಬೇರೆ ಪದಾರ್ಥಗಳ ದ್ರಾವಣಗಳನ್ನು ಕೂಡ ನೀವು ಪರೀಕ್ಷಿಸಬಹುದು.

ಸೂಚಕವಾಗಿ ದಾಸವಾಳ ಹೂ

ಚಟುವಟಿಕೆ 5.3
ದಾಸವಾಳ ಹೂವಿನ ಕೆಲವು ದಳಗಳನ್ನು ಸಂಗ್ರಹಿಸಿ. ಅವುಗಳನ್ನು ಒಂದು ಬೀಕರ್‍ನಲ್ಲಿ ಹಾಕಿ. ಸ್ವಲ್ಪ ಬೆಚ್ಚಗಿನ ನೀರನ್ನು ಸೇರಿಸಿ. ನೀರು ಬಣ್ಣವನ್ನು ಪಡೆಯುವವರೆಗೆ ಮಿಶ್ರಣವನ್ನು ಸ್ವಲ್ಪ ಕಾಲ ಹಾಗೇ ಇಡಿ. ಈ ಬಣ್ಣದ ನೀರನ್ನು ಸೂಚಕವಾಗಿ ಬಳಸಿ. ಕೋಷ್ಟಕ 5.4ರಲ್ಲಿ ಕೊಟ್ಟಿರುವ ಪ್ರತಿಯೊಂದು ದ್ರಾವಣಕ್ಕೆ ಈ ಸೂಚಕದ ಐದು ಹನಿಗಳನ್ನು ಸೇರಿಸಿ.

ಆಮ್ಲೀಯ, ಪ್ರತ್ಯಾಮ್ಲೀಯ ಮತ್ತು ತಟಸ್ಥ ದ್ರಾವಣಗಳ ಮೇಲೆ ಈ ಸೂಚಕದ ಪರಿಣಾಮವೇನು? ದಾಸವಾಳ ಹೂವಿನ ಸೂಚಕವು (ಚಿತ್ರ 5.3) ಆಮ್ಲೀಯ ದ್ರಾವಣಗಳನ್ನು ಕಡು ಗುಲಾಬಿ (megenta) ಬಣ್ಣವಾಗಿ ಮತ್ತು ಪ್ರತ್ಯಾಮ್ಲೀಯ ದ್ರಾವಣಗಳನ್ನು ಹಸಿರಾಗಿ ಬದಲಾಯಿಸುತ್ತದೆ.

ಚಟುವಟಿಕೆ 5.4
ಈ ಕೆಳಗಿನ ರಾಸಾಯನಿಕಗಳ ಸಾರರಿಕ್ತ (dilute) ದ್ರಾವಣಗಳನ್ನು ಶಾಲಾ ಪ್ರಯೋಗಾಲಯದಿಂದ ಅಥವಾ ಸಮೀಪದ ಶಾಲೆಯಿಂದ ಪಡೆಯಲು ಶಿಕ್ಷಕರಿಗೆ ವಿನಂತಿಸಿದೆ. ಹೈಡ್ರೊಕ್ಲೋರಿಕ್ ಆಮ್ಲ, ಸಲ್ಫ್ಯೂರಿಕ್ ಆಮ್ಲ, ನೈಟ್ರಿಕ್ ಆಮ್ಲ, ಅಸಿಟಿಕ್ ಆಮ್ಲ, ಸೋಡಿಯಮ್ ಹೈಡ್ರಾಕ್ಸೈಡ್, ಅಮೋನಿಯಮ್ ಹೈಡ್ರಾಕ್ಸೈಡ್, ಕ್ಯಾಲ್ಸಿಯಮ್ ಹೈಡ್ರಾಕ್ಸೈಡ್ (ಸುಣ್ಣದ ತಿಳಿ).

ನಿಮಗೆ ಆಮ್ಲಮಳೆ (acid rain) ಪದದ ಪರಿಚಯವಿದೆಯೆ? ಆಮ್ಲಮಳೆಯ ಹಾನಿಕಾರಕ ಪರಿಣಾಮದ ಬಗ್ಗೆ ನೀವು ಕೇಳಿರುವಿರ? ಅದರ ಹೆಸರೇ ಸೂಚಿಸುವಂತೆ, ಹೆಚ್ಚಾದ ಪ್ರಮಾಣದಲ್ಲಿ ಆಮ್ಲಗಳಿಂದ ಕೂಡಿರುವ ನೀರಿನ ಮಳೆಯನ್ನು ಆಮ್ಲಮಳೆ ಎನ್ನುವರು. ಈ ಆಮ್ಲಗಳು ಎಲ್ಲಿಂದ ಬರುತ್ತವೆ? ಕಾರ್ಬನ್ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೊಜನ್ ಡೈಅಕ್ಸೈಡ್ (ಮಾಲಿನ್ಯಕಾರಕಗಳಾಗಿ ಗಾಳಿಗೆ ಬಿಡುಗಡೆಯಾದಂತಹವು) ಮಳೆನೀರಿನ ಹನಿಗಳಲ್ಲಿ ವಿಲೀನವಾಗಿ ಕ್ರಮವಾಗಿ ಕಾರ್ಬೊನಿಕ್ ಆಮ್ಲ, ಸಲ್ಫ್ಯೂರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲವಾಗಿ ಮಳೆನೀರು ಆಮ್ಲೀಯವಾಗುತ್ತದೆ. ಆಮ್ಲಮಳೆಯು ಕಟ್ಟಡಗಳಿಗೆ, ಐತಿಹಾಸಿಕ ಸ್ಮಾರಕಗಳಿಗೆ, ಸಸ್ಯಗಳಿಗೆ ಮತ್ತು ಪ್ರಾಣಿಗಳಿಗೆ ಹಾನಿಯನ್ನು ಉಂಟುಮಾಡಬಲ್ಲದು.

ಎಚ್ಚರಿಕೆ
ಪ್ರಯೋಗಶಾಲೆಯಲ್ಲಿ ಆಮ್ಲಗಳು ಮತ್ತು ಪ್ರತ್ಯಾಮ್ಲಗಳನ್ನು ಉಪಯೋಗಿಸುವಾಗ ಅತಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು. ಏಕೆಂದರೆ ಅವು ಸಂಕ್ಷಾರಕ (corrosive) ಗುಣ ಹೊಂದಿದ್ದು, ಉರಿಯನ್ನು ಉಂಟುಮಾಡುತ್ತವೆ ಮತ್ತು ಚರ್ಮಕ್ಕೆ ಹಾನಿಕರ.

ಇಲ್ಲಿನ ಪ್ರತಿಯೊಂದು ದ್ರಾವಣದ ಮೇಲೆ ಈ ಮೂರು ಸೂಚಕಗಳ ಪರಿಣಾಮವನ್ನು ಕುರಿತು ಪ್ರಾತ್ಯಕ್ಷಿಕೆ ನಡೆಸಿ. ನೀವು ಗಮನಿಸಿದ ಅಂಶಗಳನ್ನು ಕೋಷ್ಟಕ 5.5 ರಲ್ಲಿ ದಾಖಲಿಸಿ.

5.3 ತಟಸ್ಥೀಕರಣ

ಆಮ್ಲವು ನೀಲಿ ಲಿಟ್ಮಸ್‍ಅನ್ನು ಕೆಂಪಾಗಿ ಮತ್ತು ಪ್ರತ್ಯಾಮ್ಲವು ಕೆಂಪು ಲಿಟ್ಮಸ್‍ಅನ್ನು ನೀಲಿಯಾಗಿ ಬದಲಾಯಿಸುತ್ತದೆ ಎಂದು ನೀವು ಕಲಿತಿರುವಿರಿ. ಈಗ ಆಮ್ಲವನ್ನು ಪ್ರತ್ಯಾಮ್ಲದೊಂದಿಗೆ ಬೆರೆಸಿದಾಗ ಏನಾಗುವುದು ಎಂದು ನೋಡೋಣ.
ಈವರೆಗೆ ನೀವು ಬಳಸದೇ ಇರುವ ಸೂಚಕವನ್ನು ನಾವು ಬಳಸಲಿದ್ದೇವೆ. ಅದನ್ನು ಫಿನಾಫ್ತಲೀನ್ (phenolphthalein) ಎನ್ನುವರು.

ಚಟುವಟಿಕೆ 5.5
ಈ ಪ್ರಾತ್ಯಕ್ಷಿಕೆಯನ್ನು ಶಿಕ್ಷಕರು ತರಗತಿಯಲ್ಲಿ ಮಾಡಿ ತೋರಿಸಬೇಕು.
ಒಂದು ಪ್ರನಾಳದಲ್ಲಿ 1/4 ಭಾಗದಷ್ಟು ಸಾರರಿಕ್ತ ಹೈಡ್ರೊಕ್ಲೋರಿಕ್ ಆಮ್ಲವನ್ನು ತುಂಬಿಸಿ. ಅದರ ಬಣ್ಣವನ್ನು ಗುರ್ತಿಸಿ. ಫಿನಾಫ್ತಲೀನ್‍ನ ಬಣ್ಣವನ್ನು ಕೂಡಾ ಗುರ್ತಿಸಿ. ಆಮ್ಲಕ್ಕೆ 2-3 ಹನಿ ಸೂಚಕವನ್ನು ಸೇರಿಸಿ. ಈಗ ಪ್ರನಾಳವನ್ನು ಮೆಲ್ಲಗೆ ಅಲುಗಾಡಿಸಿ. ಆಮ್ಲದ ಬಣ್ಣದಲ್ಲಿ ಏನಾದರೂ ಬದಲಾವಣೆಯನ್ನು ಗಮನಿಸುವಿರ?

ಒಂದು ಹನಿಗದ ಸಹಾಯದಿಂದ ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದ ಒಂದು ಹನಿಯನ್ನು ಈ ಆಮ್ಲೀಯ ದ್ರಾವಣಕ್ಕೆ ಸೇರಿಸಿ. ಪ್ರನಾಳವನ್ನು ನಿಧಾನವಾಗಿ ಕಲಕಿ. ದ್ರಾವಣದ ಬಣ್ಣದಲ್ಲಿ ಏನಾದರೂ ಬದಲಾವಣೆ ಆಯಿತೇ? ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣವನ್ನು ಹನಿಹನಿಯಾಗಿ ಸೇರಿಸುವುದನ್ನು ಮುಂದುವರಿಸಿ. ಗುಲಾಬಿ ಬಣ್ಣ ಕಾಣಿಸುವವರೆಗೂ ಕಲಕುವುದನ್ನು ಮುಂದುವರಿಸಿ.

ಈಗ ಸಾರರಿಕ್ತ ಹೈಡ್ರೊಕ್ಲೋರಿಕ್ ಆಮ್ಲದ ಇನ್ನೂ ಒಂದು ಹನಿಯನ್ನು ಸೇರಿಸಿ, ನೀವು ಏನನ್ನು ಗಮನಿಸುವಿರಿ? ದ್ರಾವಣವು ಪುನಃ ಬಣ್ಣ ರಹಿತವಾಗುವುದು. ಪುನಃ ಒಂದು ಹನಿ ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣವನ್ನು ಸೇರಿಸಿ. ಬಣ್ಣದಲ್ಲಿ ಏನಾದರೂ ಬದಲಾವಣೆ ಆಯಿತೆ? ಪುನಃ ದ್ರಾವಣವು ಗುಲಾಬಿ ಬಣ್ಣವಾಗುತ್ತದೆ.

ದ್ರಾವಣವು ಪ್ರತ್ಯಾಮ್ಲೀಯವಾದಾಗ ಫಿನಾಫ್ತಲೀನ್ ಗುಲಾಬಿ ಬಣ್ಣವನ್ನು ನೀಡುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಅದಕ್ಕೆ ಬದಲಾಗಿ ದ್ರಾವಣವು ಆಮ್ಲೀಯವಾದಾಗ ಅದು ಬಣ್ಣರಹಿತವಾಗಿರುತ್ತದೆ.

ಆಮ್ಲೀಯ ದ್ರಾವಣವನ್ನು ಪ್ರತ್ಯಾಮ್ಲೀಯ ದ್ರಾವಣದೊಂದಿಗೆ ಬೆರೆಸಿದಾಗ, ಒಂದು ಇನ್ನೊಂದರ ಪರಿಣಾಮವನ್ನು ತಟಸ್ಥಗೊಳಿಸುತ್ತವೆ. ಒಂದು ಆಮ್ಲೀಯ ದ್ರಾವಣ ಮತ್ತು ಒಂದು ಪ್ರತ್ಯಾಮ್ಲೀಯ ದ್ರಾವಣವನ್ನು ಸೂಕ್ತ ಪ್ರಮಾಣದಲ್ಲಿ ಬೆರೆಸಿದಾಗ, ಆಮ್ಲದ ಆಮ್ಲೀಯ ಗುಣ ಹಾಗೂ ಪ್ರತ್ಯಾಮ್ಲದ ಪ್ರತ್ಯಾಮ್ಲೀಯ ಗುಣಗಳೆರಡೂ ನಾಶವಾಗುತ್ತವೆ. ಉಂಟಾದ ದ್ರಾವಣವು ಆಮ್ಲೀಯವೂ ಅಲ್ಲ, ಪ್ರತ್ಯಾಮ್ಲೀಯವೂ ಅಲ್ಲ. ತಟಸ್ಥೀಕರಣವಾದ ತಕ್ಷಣ ಪ್ರನಾಳವನ್ನು ಮುಟ್ಟಿ ನೋಡಿ. ನೀವು ಏನನ್ನು ಗಮನಿಸುವಿರಿ? ತಟಸ್ಥೀಕರಣ (neutralisation) ಕ್ರಿಯೆಯಲ್ಲಿ ಯಾವಾಗಲೂ ಉಷ್ಣವು ಉತ್ಪತ್ತಿಯಾಗುತ್ತದೆ ಅಥವಾ ಬಿಡುಗಡೆಯಾಗುತ್ತದೆ. ವರ್ತಿಸುವ ಮಿಶ್ರಣದ ತಾಪವನ್ನು ಬಿಡುಗಡೆಯಾದ ಉಷ್ಣವು ಹೆಚ್ಚಿಸುತ್ತದೆ.

ತಟಸ್ಥೀಕರಣ ಕ್ರಿಯೆಯಲ್ಲಿ ಒಂದು ಹೊಸ ಪದಾರ್ಥವು ಉತ್ಪತ್ತಿಯಾಗುತ್ತದೆ. ಇದನ್ನು ಲವಣ ಎನ್ನುವರು. ಲವಣವು ಆಮ್ಲೀಯ, ಪ್ರತ್ಯಾಮ್ಲೀಯ ಅಥವಾ ತಟಸ್ಥ ಸ್ವಭಾವವುಳ್ಳದ್ದಾಗಿರಬಹುದು. ಆದ್ದರಿಂದ ತಟಸ್ಥೀಕರಣವನ್ನು ಕೆಳಕಂಡಂತೆ ವ್ಯಾಖ್ಯಾನಿಸಬಹುದು.

ಒಂದು ಆಮ್ಲ ಮತ್ತು ಪ್ರತ್ಯಾಮ್ಲದ ನಡುವಿನ ಕ್ರಿಯೆಯನ್ನು ತಟಸ್ಥೀಕರಣ ಎನ್ನುವರು. ಈ ಕ್ರಿಯೆಯಲ್ಲಿ ಉಷ್ಣದ ಬಿಡುಗಡೆಯೊಂದಿಗೆ ಲವಣ ಮತ್ತು ನೀರು ಉತ್ಪತ್ತಿಯಾಗುತ್ತವೆ.

5.4 ನಿತ್ಯ ಜೀವನದಲ್ಲಿ ತಟಸ್ಥೀಕರಣ

ಅಜೀರ್ಣ
ನಮ್ಮ ಜಠರದಲ್ಲಿ ಹೈಡ್ರೊಕ್ಲೋರಿಕ್ ಆಮ್ಲವಿದೆ. ನೀವು ಅಧ್ಯಾಯ 2ರಲ್ಲಿ ಕಲಿತಂತೆ, ಆಹಾರವು ಜೀರ್ಣವಾಗಲು ಇದು ನಮಗೆ ಸಹಾಯ ಮಾಡುತ್ತದೆ. ಆದರೆ ಜಠರದಲ್ಲಿನ ಅತಿಯಾದ ಆಮ್ಲವು ಅಜೀರ್ಣವನ್ನು ಉಂಟು ಮಾಡುತ್ತದೆ. ಕೆಲವೊಮ್ಮೆ ಅಜೀರ್ಣವು ನೋವುಕಾರಕ. ಅಜೀರ್ಣದ ಶಮನಕ್ಕೆ, ಮೆಗ್ನೀಸಿಯಮ್ ಹೈಡ್ರಾಕ್ಸೈಡ್ ಉಳ್ಳ ಮೆಗ್ನೀಸಿಯಮ್ ಹಾಲಿನಂತಹ ಆಮ್ಲರೋಧಕ (antacid) ಗಳನ್ನು ನಾವು ಸೇವಿಸುತ್ತೇವೆ. ಅತಿಯಾದ ಆಮ್ಲದ ಪರಿಣಾಮವನ್ನು ಇದು ತಟಸ್ಥಗೊಳಿಸುತ್ತದೆ.

ಇರುವೆ ಕಚ್ಚುವಿಕೆ
ಇರುವೆ ಕಚ್ಚುವಾಗ ಅದು ಆಮ್ಲೀಯ ದ್ರವವನ್ನು (formic acid) ಚರ್ಮದ ಒಳಗೆ ಸ್ರವಿಸುತ್ತದೆ. ಒದ್ದೆ ಮಾಡಿದ ಅಡುಗೆ ಸೋಡ ಅಥವಾ ಸತುವಿನ ಕಾರ್ಬೊನೇಟ್ ಉಳ್ಳ ಕ್ಯಾಲಮೈನ್ ದ್ರಾವಣವನ್ನು ಉಜ್ಜುವುದರಿಂದ ಈ ಆಮ್ಲದ ಪರಿಣಾಮವನ್ನು ತಟಸ್ಥಗೊಳಿಸಬಹುದು.

ಮಣ್ಣಿನ ಸಂಸ್ಕರಣೆ
ರಸಗೊಬ್ಬರಗಳ ಅತಿಯಾದ ಬಳಕೆಯು ಮಣ್ಣನ್ನು ಆಮ್ಲೀಯವಾಗಿಸುತ್ತದೆ. ಮಣ್ಣು ಅತಿಯಾಗಿ ಆಮ್ಲೀಯವಾದರೂ ಅಥವಾ ಅತಿಯಾಗಿ ಪ್ರತ್ಯಾಮ್ಲೀಯವಾದರೂ, ಸಸ್ಯಗಳು ಚೆನ್ನಾಗಿ ಬೆಳೆಯುವುದಿಲ್ಲ. ಮಣ್ಣು ಅತಿಯಾಗಿ ಆಮ್ಲೀಯವಾದಾಗ, ಅದಕ್ಕೆ ಸುಟ್ಟ ಸುಣ್ಣ (ಕ್ಯಾಲ್ಸಿಯಮ್ ಆಕ್ಸೈಡ್) ಅಥವಾ ನೀರೂಡಿಸಿದ ಸುಣ್ಣ (ಕ್ಯಾಲ್ಸಿಯಮ್ ಹೈಡ್ರಾಕ್ಸೈಡ್) ದಂತಹ ಪ್ರತ್ಯಾಮ್ಲಗಳನ್ನು ಸೇರಿಸಿ ಸಂಸ್ಕರಿಸುತ್ತಾರೆ. ಮಣ್ಣು ಪ್ರತ್ಯಾಮ್ಲೀಯವಾದಾಗ ಅದಕ್ಕೆ ಸಾವಯವ ವಸ್ತುಗಳನ್ನು ಸೇರಿಸುತ್ತಾರೆ. ಸಾವಯವ ವಸ್ತುಗಳು ಆಮ್ಲವನ್ನು ಬಿಡುಗಡೆ ಮಾಡಿ ಮಣ್ಣಿನ ಪ್ರತ್ಯಾಮ್ಲೀಯ ಗುಣವನ್ನು ತಟಸ್ಥಗೊಳಿಸುತ್ತವೆ.

ಕಾರ್ಖಾನೆ ತ್ಯಾಜ್ಯಗಳು
ಅನೇಕ ಕಾರ್ಖಾನೆಗಳ ತ್ಯಾಜ್ಯಗಳು ಆಮ್ಲಗಳನ್ನು ಒಳಗೊಂಡಿರುತ್ತವೆ. ಇವುಗಳನ್ನು ನೀರಿನ ಆಕರಗಳಿಗೆ ಹರಿಯಲು ಬಿಟ್ಟಾಗ, ಈ ಆಮ್ಲಗಳು ಮೀನು ಮತ್ತು ಇತರ ಜೀವಿಗಳನ್ನು ಕೊಲ್ಲುತ್ತವೆ. ಆದ್ದರಿಂದ ಪ್ರತ್ಯಾಮ್ಲೀಯ ಪದಾರ್ಥಗಳನ್ನು ಸೇರಿಸಿ, ಕಾರ್ಖಾನೆ ತ್ಯಾಜ್ಯಗಳನ್ನು ತಟಸ್ಥಗೊಳಿಸಲಾಗುತ್ತದೆ.

ಪ್ರಮುಖ ಪದಗಳು

ಆಮ್ಲ
ಪ್ರತ್ಯಾಮ್ಲೀಯ
ತಟಸ್ಥೀಕರಣ
ಆಮ್ಲೀಯ
ಸೂಚಕ
ಲವಣ
ಪ್ರತ್ಯಾಮ್ಲ
ತಟಸ್ಥ

ನೀವು ಕಲಿತಿರುವುದು

* ಆಮ್ಲಗಳ ರುಚಿಯು ಹುಳಿಯಾಗಿರುತ್ತದೆ. ಸಾಮಾನ್ಯವಾಗಿ ಪ್ರತ್ಯಾಮ್ಲದ ರುಚಿ ಕಹಿಯಾಗಿದ್ದು, ಸ್ಪರ್ಶಿಸಿದಾಗ ಸಾಬೂನಿನಂತೆ ಭಾಸವಾಗುತ್ತದೆ.
* ಆಮ್ಲಗಳು ನೀಲಿ ಲಿಟ್ಮಸ್‍ಅನ್ನು ಕೆಂಪಾಗಿ ಬದಲಾಯಿಸುತ್ತವೆ. ಪ್ರತ್ಯಾಮ್ಲಗಳು ಕೆಂಪು ಲಿಟ್ಮಸ್‍ಅನ್ನು ನೀಲಿಯಾಗಿ ಬದಲಾಯಿಸುತ್ತವೆ.
* ಆಮ್ಲೀಯವೂ ಅಲ್ಲದ, ಪ್ರತ್ಯಾಮ್ಲೀಯವೂ ಅಲ್ಲದ ಪದಾರ್ಥಗಳನ್ನು ತಟಸ್ಥ ಎನ್ನುವರು.
* ಆಮ್ಲೀಯ, ಪ್ರತ್ಯಾಮ್ಲೀಯ ಮತ್ತು ತಟಸ್ಥ ದ್ರಾವಣಗಳಲ್ಲಿ ಬೇರೆ ಬೇರೆ ಬಣ್ಣಗಳನ್ನು ತೋರುವ ಪದಾರ್ಥಗಳನ್ನು ಸೂಚಕಗಳು ಎನ್ನುವರು.
* ಆಮ್ಲ ಮತ್ತು ಪ್ರತ್ಯಾಮ್ಲಗಳು ಪರಸ್ಪರ ತಟಸ್ಥಗೊಂಡು, ಲವಣವನ್ನು ಉಂಟುಮಾಡುತ್ತವೆ. ಲವಣವು ಆಮ್ಲೀಯ, ಪ್ರತ್ಯಾಮ್ಲೀಯ ಅಥವಾ ತಟಸ್ಥ ಗುಣದ್ದಾಗಿರಬಹುದು.

ವಿಡಿಯೋ ಪಾಠಗಳು

7th science lesson 5 ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು ಭಾಗ 1
7th science lesson 5 ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು ಭಾಗ 2

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವಿಸ್ತರಿತ ಕಲಿಕೆ – ಚಟುವಟಿಕೆಗಳು ಮತ್ತು ಯೋಜನೆಗಳು

* ಆಮ್ಲ ಮತ್ತು ಪ್ರತ್ಯಾಮ್ಲದ ಜ್ಞಾನವನ್ನು ಬಳಸಿ, ಅಡುಗೆ ಸೋಡ ಮತ್ತು ಬೀಟ್‍ರೂಟ್‍ನ ಸಹಾಯದಿಂದ ಒಂದು ಗುಪ್ತ ಸಂದೇಶವನ್ನು ಬರೆಯಿರಿ. ಅದು ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸಿ. [ಸುಳಿವು: ನೀರಿನಿಂದ ಅಡುಗೆ ಸೋಡದ ದ್ರಾವಣವನ್ನು ತಯಾರಿಸಿ. ಈ ದ್ರಾವಣವನ್ನು ಬಳಸಿ, ಬಿಳಿ ಹಾಳೆಯ ಮೇಲೆ ಹತ್ತಿ ಸುತ್ತಿದ ಕಡ್ಡಿಯಿಂದ ಗುಪ್ತ ಸಂದೇಶವನ್ನು ಬರೆಯಿರಿ. ತಾಜಾ ಬೀಟ್‍ರೂಟ್‍ನ ಚೂರನ್ನು ಅದರ ಮೇಲೆ ಉಜ್ಜಿ]

Betanin in beet root acts as alkali indicator | Acids & Bases | Chemistry
Beetroot indicator~testing with baking soda~reaction between baking soda and beetroot

* ಕೆಂಪು ಕ್ಯಾಬೇಜ್‍ನ ಚೂರನ್ನು ನೀರಿನಲ್ಲಿ ಕುದಿಸಿ, ಅದರ ರಸವನ್ನು ತಯಾರಿಸಿ. ಇದನ್ನು ಸೂಚಕವಾಗಿ ಬಳಸಿ, ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ದ್ರಾವಣಗಳನ್ನು ಪರೀಕ್ಷಿಸಿ. ನೀವು ಗಮನಿಸಿದ ಅಂಶಗಳನ್ನು ಒಂದು ಕೋಷ್ಟಕದಲ್ಲಿ ನಿರೂಪಿಸಿ.

EXPERIMENT DIY PH indicator from red cabbage 

* ನಿಮ್ಮ ಪ್ರದೇಶದ ಮಣ್ಣಿನ ಮಾದರಿಯನ್ನು ತನ್ನಿ. ಅದು ಆಮ್ಲೀಯವೆ? ಪ್ರತ್ಯಾಮ್ಲೀಯವೆ? ಅಥವಾ ತಟಸ್ಥವೆ? ಎಂಬುದನ್ನು ಕಂಡುಹಿಡಿಯಿರಿ. ಮಣ್ಣನ್ನು ಯಾವ ವಿಧದಲ್ಲಾದರೂ ಸಂಸ್ಕರಿಸುವರೆ ಎಂಬುದರ ಬಗ್ಗೆ ರೈತರೊಂದಿಗೆ ಚರ್ಚಿಸಿ.

Why is soil pH important to farmers?
How to Test Soil (Alkaline or Acidic) easily at Home without a Kit/Testing pH of soil without a Kit

* ಒಬ್ಬ ವೈದ್ಯರನ್ನು ಭೇಟಿಯಾಗಿ. ಆಮ್ಲೀಯತೆಗೆ ಚಿಕಿತ್ಸೆ ನೀಡಲು ಅವರು ಯಾವ ಔಷಧಿಯನ್ನು ಸೂಚಿಸುತ್ತಾರೆ ಎಂದು ತಿಳಿಯಿರಿ. ಆಮ್ಲೀಯತೆಯನ್ನು ತಡೆಗಟ್ಟುವುದು ಹೇಗೆ? ಎಂಬುದನ್ನು ಅವರಲ್ಲಿ ಕೇಳಿ ತಿಳಿಯಿರಿ.

What is Acidity
HOW TO TREAT ACID REFLUX WITHOUT MEDICINES

ನಿಮಗಿದು ಗೊತ್ತೆ?

ನಮ್ಮ ದೇಹದ ಪ್ರತಿಯೊಂದು ಜೀವಕೋಶದಲ್ಲಿಯೂ ಡಿ ಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲ ಅಥವಾ ಡಿ.ಎನ್.ಎ (DNA) ಎಂಬ ಆಮ್ಲವಿದೆ. ಅದು ನಮ್ಮ ಮುಖಲಕ್ಷಣ (ಚಹರೆ), ನಮ್ಮ ಕಣ್ಣಿನ ಬಣ್ಣ, ನಮ್ಮ ಎತ್ತರ ಇತ್ಯಾದಿ ಎಲ್ಲಾ ಲಕ್ಷಣಗಳನ್ನು ನಿಯಂತ್ರಿಸುತ್ತದೆ. ನಮ್ಮ ಜೀವಕೋಶಗಳನ್ನು ನಿರ್ಮಿಸುವ ಪ್ರೋಟೀನ್‍ಗಳು ಕೂಡಾ ಅಮೈನೋ ಆಮ್ಲ (amino acid) ಗಳಿಂದ ರೂಪುಗೊಂಡಿವೆ. ನಮ್ಮ ದೇಹದಲ್ಲಿನ ಕೊಬ್ಬು, ಕೊಬ್ಬಿನ ಆಮ್ಲ (fatty acid) ಗಳನ್ನು ಒಳಗೊಂಡಿದೆ.