ಸ್ವಾತಂತ್ರ್ಯದ ಹಣತೆ – ಪದ್ಯ-2

– ಕೆ. ಎಸ್. ನಿಸಾರ್ ಅಹಮ್ಮದ್

ಪ್ರವೇಶ : ನಮಗೆ ಬಂದಿರುವ ಸ್ವಾತಂತ್ರ್ಯವನ್ನು ಸದಾ ರಕ್ಷಣೆ ಮಾಡಿಕೊಳ್ಳಬೇಕು. ನಮ್ಮ ದೇಶದ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿರಬೇಕು. ಧೀರತನದಿಂದ ದೇಶದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಸಾಧನೆಯ ಕಡೆಗೆ ಗಮನವಿರಬೇಕು. ದೇಶಕ್ಕಾಗಿ ಹೋರಾಡಿದ ಹುತಾತ್ಮರಿಗೆ ಗೌರವವನ್ನು ಸದಾ ಸಲ್ಲಿಸಬೇಕು ಎಂಬುದು ಈ ಪದ್ಯದ ಆಶಯವಾಗಿದೆ.

ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ
ದುಡಿಮೆ ತೈಲವೆರೆಯುತಿರಲು ಬಿಡುವಿಲ್ಲದೆ ಜನತೆ
ಎಂತು ಕುಂದಬಹುದು ಎಮ್ಮ ತಾಯ್ನಾಡಿನ ಘನತೆ || ಸದಾ ||

ಮುಳ್ಳಿನಿಂದ ಅರಿವೆ ಬಿಡಿಸಿದಂತೆ ಬಂತೆ ಮುಕ್ತಿ?
ಹುಲಿಯ ಬಾಯ ಮೇವ ಕಸಿಯುವಂತೆ ಧೀರಶಕ್ತಿ
ಪಡೆಯಿತದನು ಜನತೆ, ಬಾಳ ಬೆಸೆಯೆ ನಾಡ ಭಕ್ತಿ || ಸದಾ ||

ಸ್ವಾತಂತ್ರ್ಯದ ಜೊತೆಗೆ ಬಂದು ಕೂಡಲಿಲ್ಲ ಗಳಿಕೆ
ವ್ಯಕ್ತಿ ವ್ಯಕ್ತಿ ಬೆವರ ಹೀರಿ ಮರವಾಗಿದೆ ಮೊಳಕೆ,
ಮೇಲೇರಿದ ಹಾಗೆ ಭದ್ರ ಪಾಯವುಂಟು ಗೃಹಕೆ || ಸದಾ ||

ಸಾಗಿದಂತೆ ಸಲ್ಲುತ್ತಿರಲಿ ಸಾಧನೆಯೆಡೆ ಗಮನ
ಪ್ರಾಣವನ್ನೆ ಪಗಡೆಯಾಡಿದವರಿಗೆಮ್ಮ ನಮನ,
ತಾಯ ಮುಡಿಗೆ ದಿನವು ಏರುತಿರಲಿ ಹೂವು ದವನ || ಸದಾ ||

ಕೃತಿಕಾರರ ಪರಿಚಯ – ಕೆ. ಎಸ್. ನಿಸಾರ್ ಅಹಮ್ಮದ್

ಕವಿ ಕೊಕ್ಕರೆಹೊಸಹಳ್ಳಿ ಷೇಕ್ ಹೈದರ್ ನಿಸಾರ್ ಅಹಮ್ಮದ್ ಅವರು 05-02-1936 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ತಂದೆ ಷೇಕ್ ಹೈದರ್, ತಾಯಿ ಹಮೀದಾ ಬೇಗಂ. ಭೂಗರ್ಭಶಾಸ್ತ್ರದಲ್ಲಿ ಪದವಿಯನ್ನು ಪಡೆದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆಯನ್ನು ಪ್ರಾರಂಭಿಸಿದರು. ಇವರು ಮನಸು ಗಾಂಧಿಬಜಾರು, ನೆನೆದವರ ಮನದಲ್ಲಿ, ನಿತ್ಯೋತ್ಸವ, ಸುಮೂರ್ತ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಪದಗಳ ಅರ್ಥ

ಅರಿವೆ – ಬಟ್ಟೆ
ಗಳಿಕೆ – ಸಂಪಾದನೆ
ಗೃಹ – ಮನೆ
ಘನತೆ – ಶ್ರೇಷ್ಠತೆ
ತೈಲ – ಎಣ್ಣೆ
ಬೆಸೆ – ಒಂದಾಗುವುದು
ಮೊಳಕೆ – ಕುಡಿ
ಪಗಡೆ – ಒಂದು ಬಗೆಯ ಆಟ
ಪಾಯ – ಬುನಾದಿ
ಹಣತೆ – ದೀಪ

ಸಂವೇದ ವಿಡಿಯೋ ಪಾಠಗಳು

Samveda – 5th – Kannada – Swatantrada Hanate

ಪದ್ಯದ ಮಾದರಿ ಗಾಯನ

https://youtu.be/z-3qmeczqz0

ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಪೂರಕ ವಿಡಿಯೋಗಳು

5ನೇ ತರಗತಿ/ಸ್ವಾತಂತ್ರ್ಯದ ಹಣತೆ/ಕೆ ಎಸ್ ನಿಸಾರ್ ಅಹಮದ್/5th standard/swathantrada hanate/K S Nisar Ahmed/

ವ್ಯಾಕರಣ ಮಾಹಿತಿ

ಲಿಂಗಗಳು

  1. ಶಿವಪುರದಲ್ಲಿ ಒಬ್ಬ ಶಿವಭಕ್ತನಿದ್ದನು.
  2. ಭಜನೆಯ ಮಂದಿರಕ್ಕೆ ಒಬ್ಬ ಶರಣೆ ಬಂದಿದ್ದಳು.
  3. ನದಿಯ ಹತ್ತಿರ ಒಂದು ಮೊಸಳೆ ಇತ್ತು.
    ಮೇಲಿನ ವಾಕ್ಯಗಳನ್ನು ಓದಿ. ಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ. ಶಿವಭಕ್ತ ಎಂಬ ಪದವು ‘ಗಂಡಸು’ ಎಂಬುವುದನ್ನು ಸೂಚಿಸುತ್ತದೆ. ‘ಶರಣೆ’ ಎಂಬ ಪದವು ‘ಹೆಂಗಸು’ ಎಂಬುದನ್ನು ಸೂಚಿಸುತ್ತದೆ. ಆದರೆ ‘ಮೊಸಳೆ’ ಎಂಬ ಪದವು ‘ಗಂಡಸು’ ಎಂಬುದನ್ನಾಗಲೀ, ‘ಹೆಂಗಸು’ ಎಂಬುದನ್ನಾಗಲೀ ಸೂಚಿಸುತ್ತಿಲ್ಲ.
  1. ಆ ಊರಿನಲ್ಲಿ ಪ್ರಸಿದ್ಧ ರಾಜ ಇರುವನು.
  2. ಪುನೀತ್ ಬಹಳ ಒಳ್ಳೆಯವನು.
    ಮೇಲಿನ ವಾಕ್ಯಗಳನ್ನು ಓದಿ ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ, ‘ರಾಜ’. ‘ಪುನೀತ್’ ಎಂಬ ಪದಗಳು ‘ಗಂಡಸು’ ಎಂಬ ಅರ್ಥದಿಂದ ಬಳಕೆಯಾಗಿವೆ. ಇವು ಪುಲ್ಲಿಂಗಗಳು.
  1. ಸಿಂಧು ಬಲು ಅಪರೂಪದವಳು.
  2. ಆಸೆಯು ರಾಣಿಗಲ್ಲದೆ ಮತ್ತಾರಿಗೆ?
    ಮೇಲಿನ ವಾಕ್ಯಗಳನ್ನು ಓದಿ ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ, ‘ಸಿಂಧು’, ‘ರಾಣಿ’ ಎಂಬ ಪದಗಳು ‘ಹೆಂಗಸು’ ಎಂಬ ಅರ್ಥದಿಂದ ಬಳಕೆಯಾಗಿವೆ. ಇವು ಸ್ತ್ರೀಲಿಂಗಗಳು.
  1. ಗಿಳಿಯ ಮೈಬಣ್ಣ ಹಸಿರು.
  2. ಭರತನ ತೋಟದಲ್ಲಿ ಹಣ್ಣುಗಳಿವೆ.
    ಮೇಲಿನ ವಾಕ್ಯಗಳನ್ನು ಓದಿ ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ, ‘ಗಿಳಿ’. ‘ಹಣ್ಣು’ ಎಂಬ ಪದಗಳು ‘ಗಂಡಸು’ ಅಥವಾ ‘ಹೆಂಗಸು’ ಎಂಬ ಅರ್ಥದಿಂದ ಬಳಕೆಯಾಗಿಲ್ಲ. ಇವು ನಪುಂಸಕಲಿಂಗಗಳು.

ಒಟ್ಟಾರೆಯಾಗಿ ‘ಗಂಡಸು’ ಎಂಬ ಅರ್ಥದಿಂದ ಬಳಸುವ ಪದಗಳು ‘ಪುಲ್ಲಿಂಗಗಳು’.
‘ಹೆಂಗಸು’ ಎಂಬ ಅರ್ಥದಿಂದ ಬಳಸುವ ಪದಗಳು ‘ಸ್ತ್ರೀಲಿಂಗಗಳು’.
ಗಂಡಸು ಅಥವಾ ಹೆಂಗಸು ಎಂಬ ಅರ್ಥದಿಂದ ಬಳಕೆಯಾಗದ ಪದಗಳು ‘ನಪುಂಸಕಲಿಂಗಗಳು’.

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಓದಿಗೆ ಮನ್ನಣೆ

  1. ಕೆ. ಎಸ್. ನಿಸಾರ್ ಅಹಮ್ಮದ್ ಅವರ ಬಗೆಗೆ ಹೆಚ್ಚಿನ ವಿವರವನ್ನು ತಿಳಿಯಿರಿ.
  2. ಕೆ. ಎಸ್. ನಿಸಾರ್ ಅಹಮ್ಮದ್ ಅವರ ‘ನಿತ್ಯೋತ್ಸವ’ ಕವನವನ್ನು ಸಂಗ್ರಹಿಸಿ, ಹಾಡಿರಿ.
ಕೆ ಎಸ್ ನಿಸಾರ್ ಅಹಮದ್ ಅವರ ಬಗ್ಗೆ ನಿಮಗೆಷ್ಟು ಗೊತ್ತು? ಕವಿ ಪರಿಚಯ, k s nisar ahamed 2020 Kannada sahitya
ಕವಿ, ಕೆ.ಎಸ್ ನಿಸಾರ್ ಅಹ್ಮದ್ ವ್ಯಕ್ತಿಚಿತ್ರ | KS Nisar Ahmed Documentary | Kalamadhyama | KS Parameshwara
Jogada Siri Belakinalli Lyrical Video Song | K S Nissar Ahmed, Mysore Anantaswamy | Kannada Songs

ಶುಭನುಡಿ

  1. ದೇಶಕ್ಕಾಗಿ ದುಡಿ; ದೇಶಕ್ಕಾಗಿ ಮಡಿ.
  2. ಒಗ್ಗಟ್ಟಿನಲ್ಲಿ ಬಲವಿದೆ.