ರೈತರು ಬೆಳೆದ ಹೊಸ ಫಸಲನ್ನು ತಾವು ಬಳಸುವ ಮೊದಲು ದೇವರಿಗೆ ನೈವೇದ್ಯ ಮಾಡುವ ನಿಟ್ಟಿನಲ್ಲಿ ಆಚರಿಸುವ ವಿಶಿಷ್ಟ ರೀತಿಯ ‘ಹಾಲಬ್ಬ’ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಟ್ಟೆಕೈ ಗ್ರಾಮದಲ್ಲಿ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ಊರಿನಲ್ಲಿ ಹೊಸ ಅಕ್ಕಿ ಹಬ್ಬ, ಗಾಮದ ಹಬ್ಬ ಅಥವಾ ಹಾಲಬ್ಬ ಆಚರಿಸುವುದು ಸಂಪ್ರದಾಯ. ಆದರೆ ಕಟ್ಟೆಕೈನಲ್ಲಿ ವನದೇವತೆಯ ಮಡಿಲಲ್ಲಿ ನಡೆಯುವ ‘ಹಾಲಬ್ಬ’ದಲ್ಲಿ ನೂರಾರು ಜನರು ಪಾಲ್ಗೊಂಡು ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ. ಸುಮಾರು 150 ಮನೆಗಳಿಂದ ಅಂದಾಜು 450 ಜನಸಂಖ್ಯೆ ಹೊಂದಿರುವ ಕಟ್ಟೆಕೈ ಗ್ರಾಮದಲ್ಲಿ ಪ್ರತಿ ವರ್ಷ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ‘ಹಾಲಬ್ಬ’ದ ವೈಭವನನ್ನು ಸವಿಯಬಹುದು.

ಕಲಗುಬಳ್ಳಿ ಮಹಾಸತಿ ದೇವಸ್ಥಾನ

ಮೂರು ದಿನಗಳ ಹಬ್ಬ :

ಮೂರು ದಿನಗಳವರೆಗೆ ನಡೆಯುವ ಈ ಹಬ್ಬದಲ್ಲಿ ಬೊಮ್ಮಯ್ಯ ದೇವರ ಕಾಡು (ಬ್ರಹ್ಮದೇವರ ಕಾನು) ಅಕ್ಷರ ಸಹ ಕಳೆಗಟ್ಟಿರುತ್ತದೆ. ಹಬ್ಬ ನಡೆಯುವ ದಿನಗಳಾದ ರವಿವಾರ, ಸೋಮವಾರ ಮತ್ತು ಮಂಗಳವಾರಗಳಂದು ಒಂದೊಂದು ವಿಧಿ-ವಿಧಾನಗಳು ನಡೆಯುತ್ತದೆ. ರವಿವಾರದಂದು ಕಟ್ಟೆಕೈನಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಬ್ರಾಹ್ಮಣರಿಂದ ಪೂಜೆ ಹಾಗೂ ಹುಲಿದೇವರ ಪೂಜೆ ನಡೆಯುತ್ತದೆ.

ಬ್ರಾಹ್ಮಣರಿಂದ ಭತ್ತವನ್ನು ತಂದು ಹೊಸ ಮಡಿಕೆಯಲ್ಲಿ ಹುರಿದು ಅವಲಕ್ಕಿ ಮಾಡಿ ದೇವರಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಹುಲಿದೇವರ ಪೂಜೆಯ ಸಂದರ್ಭದಲ್ಲಿ ಹುಲಿದೇವರಿಗೆ ಅಲಂಕರಿಸುವುದರ ಜೊತೆಗೆ ಅದರ ಪರಿವಾರ ದೇವರುಗಳನ್ನು ಹಾಗೂ ಸ್ಥಳವನ್ನು ಅಲಂಕಾರ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಹೊಸ ಅಕ್ಕಿಯಿಂದ ‘ಚರು’ (ಅನ್ನ) ಸಿದ್ಧಪಡಿಸಿ ದೇವರಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಸಾಯಂಕಾಲ ಅಂದಾಜು 5 ಗಂಟೆ ಹೊತ್ತಿಗೆ ಮಹಾಸತಿ ದೇವಸ್ಥಾನದಿಂದ ದೇವರ ಪ್ರತಿರೂಪವಾಗಿ ಒಂದು ಕುದುರೆಯನ್ನು ಹುಲಿದೇವರ ಕಾಡಿಗೆ ಒಯ್ಯಲಾಗುತ್ತದೆ. ಅಲ್ಲಿ ಹಣ್ಣು-ಕಾಯಿ, ಪೂಜೆ ನೆರವೇರಿಸಿ ‘ಚರು’ವನ್ನು ಪ್ರಸಾದ ರೂಪದಲ್ಲಿ ವಿತರಿಸಿದ ಬಳಿಕ ಅಲ್ಲಿಂದ ದೇವರನ್ನು  ಪುನಃ ದೇವಸ್ಥಾನಕ್ಕೆ ತರಲಾಗುತ್ತದೆ.

ಬ್ರಹ್ಮದೇವರ ಕಾನು

ಪ್ರಕೃತಿಯ ಮಡಿಲು ಬ್ರಹ್ಮದೇವರ ಕಾನು :

ಹಬ್ಬದ ಎರಡನೇ ದಿನ ಸೋಮವಾರ ಅರ್ಚಕರು ಮತ್ತು ಗ್ರಾಮಸ್ಥರೆಲ್ಲ ಸೇರಿ ಬೊಮ್ಮಯ್ಯ ದೇವರ (ಬ್ರಹ್ಮದೇವರ ಕಾನು) ಕಾಡಿಗೆ ಹೋಗುತ್ತಾರೆ. ಮಾರನೇ ದಿನಕ್ಕೆ ಕೆಂಡದ ಸೇವೆಗೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಾರೆ. ‘ಚರು’ ನೈವೇದ್ಯ ಸಿದ್ಧಪಡಿಸಿ ಮತ್ತೆ ದೇವರಿಗೆ ಅಲಂಕಾರ ಮಾಡುತ್ತಾರೆ. ಸಾಯಂಕಾಲ ಅಂದಾಜು 4 ಗಂಟೆ ಸುಮಾರಿಗೆ ಮಹಾಸತಿ ದೇವಸ್ಥಾನದಿಂದ ಎಲ್ಲ ಮೂರ್ತಿಗಳ ಜೊತೆ ಬೊಮ್ಮಯ್ಯ ದೇವರ ಕಾಡಿಗೆ ಹೋಗುತ್ತಾರೆ. ಇವುಗಳಲ್ಲಿ ಕುದುರೆ ಮೂರ್ತಿ, 7 ಮೂರ್ತಿಗಳು, ಧ್ವಜ, ದೇವರ ಪಾಲಿಕೆಗಳು ಹಾಗೂ ಪೆಟ್ಟಿಗೆಯನ್ನು ಬೇರೆ-ಬೇರೆ ಸ್ಥಳದಲ್ಲಿಡಲಾಗುತ್ತದೆ.  ಒಂದೊಂದು ಪರಿವಾರದವರು ಒಂದೊಂದು ದೇವರಿಗೆ ಪೂಜಿಸುವ ಪದ್ಧತಿಯಿದೆ. ಸಂಜೆ ಈ ಕಾಡಿನಲ್ಲಿಯೇ ಜಾಗರಣೆ ಇದ್ದು, ಡೊಳ್ಳು ಕುಣಿತ, ಸುಗ್ಗಿಕುಣಿತ ಇರುತ್ತದೆ. ಕುಣಿಯುವಾಗ ನೃತ್ಯದಲ್ಲಿ ಕೃಷಿ ಚಟುವಟಿಕೆಗಳ ಶೈಲಿಯ ಪ್ರದರ್ಶನ ನೋಡುವುದು ಬಲು ಚೆಂದ.

ಬ್ರಹ್ಮದೇವರ ಕಾನಿನಲ್ಲಿ ಅಲಂಕೃತಗೊಂಡ ದೇವರು
ಮರುದಿನ ಕೆಂಡ ಹಾಯಲು ಸಿದ್ಧತೆ

ಮಂಗಳವಾರ ಬೆಳಿಗ್ಗೆ ಕದಿರು ಹಚ್ಚುವ ಶಾಸ್ತ್ರ ನಡೆಯುತ್ತದೆ. ಈ ಸಂದರ್ಭದಲ್ಲಿ ದೇವರು ತನ್ನ ಪ್ರೀತಿ ಪಾತ್ರರ ಮೇಲೆ ಬಂದು ಹೇಳಿಕೆಯನ್ನು ನೀಡುತ್ತದೆ. ಇದಾದ ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಗ್ರಾಮಸ್ಥರ 9 ಜನರ ತಂಡ ಹೊಳೆಯಲ್ಲಿ ಸ್ನಾನ ಮಾಡಿ ಪೂಜಾರಿಗಳಿಂದ ದೇವರ ಪಾಲಿಕೆಯನ್ನು ಹೊತ್ತು ಭಕ್ತಿಭಾವಗಳಿಂದ ಸಿದ್ಧಗೊಂಡಿದ್ದ ಕೆಂಡದ ರಾಶಿಯ ಸುತ್ತ ಗಂಟೆ, ಜಾಗಟೆ, ಡೊಳ್ಳು ನಾದಕ್ಕೆ ತಕ್ಕಂತೆ ಕುಣಿಯುತ್ತಾರೆ. ನಂತರ ಕೆಂಡ ಹಾಯುವ ಮೂಲಕ ಭಕ್ತಿ ಪರಾಕಾಷ್ಠೆ ಮರೆಯುತ್ತಾರೆ. ಕೆಂಡ ಹಾಯುವ ಕಾರ್ಯ ಸಂಪನ್ನಗೊಂಡಂತೆ ದೇವರ ಪೂಜೆಗೆಂದು ಹಾಕಲಾಗಿದ್ದ ಚಪ್ಪರವನ್ನು ಬಿಡಿಸಿ, ಎಲ್ಲಾ ಸಾಮಗ್ರಿಗಳೊಂದಿಗೆ ಮಾಹಾಸತಿ ದೇವಸ್ಥಾನಕ್ಕೆ ತೆರಳುತ್ತಾರೆ. ಇಲ್ಲಿಗೆ ಅದ್ಧೂರಿಯಾಗಿ ನಡೆದ ಹಬ್ಬಕ್ಕೆ ತೆರೆ ಬೀಳುತ್ತದೆ.

ಕೆಂಡ ಹಾಯುವ ಸೇವೆಯ ನಂತರ ದೇವರ ಪೂಜೆಗೆಂದು ಹಾಕಲಾಗಿದ್ದ ಚಪ್ಪರವನ್ನು ಬಿಡಿಸಲಾಗುತ್ತದೆ.

ಇಲ್ಲಿ ನಡೆಯುವ ವಿಶಿಷ್ಟ ಹಾಲಬ್ಬ ಮತ್ತು ಕೆಂಡ ಹಾಯುವುದನ್ನು ನೋಡುವುದಕ್ಕಾಗಿಯೇ ಗ್ರಾಮಸ್ಥರಷ್ಟೇ ಅಲ್ಲದೇ ಅಕ್ಕಪಕ್ಕದ ಊರಿನಿಂದ ನೂರಾರು ಜನರು ಆಗಮಿಸುತ್ತಾರೆ.

ಹರಕೆ ಸೇವೆ :

ಸಂತಾನ ಹೀನರು, ಕೋರ್ಟು-ಕಛೇರಿ ವ್ಯವಹಾರದವರು, ರೋಗದಿಂದ ಬಳಲುವವರು ಹೀಗೆ ಹಲವಾರು ಸಮಸ್ಯಗಳಿಗೆ ಸಂಬಂಧಿದಂತೆ ಹರಕೆ ಹೊರುತ್ತಾರೆ. ಹರಕೆ ರೂಪದಲ್ಲಿ ದೇವರಿಗೆ ಬೆಳ್ಳಿಯ ಕೊಡೆ, ಬೆಳ್ಳಿಯ ಅರಳಿ ಎಲೆ, ಮಕ್ಕಳಾಗದವರು ಚಿನ್ನದ ಶಿಶು ಹಾಗೂ ಬೆಳ್ಳಿಯ ತೊಟ್ಟಿಲು ಈ ರೀತಿಯಾಗಿ ಈ ದಿನ ಹರಕೆ ಒಪ್ಪಿಸಲಾಗುತ್ತದೆ.

ಕೆಂಡದ ಮಾಸ್ತಿಯ ಮೂಲ ಸ್ಥಳ ಬಿಳಗಿ ಗ್ರಾಮದ ಗಡಿ :

ಬಿಳಗಿಯಿಂದ ಅಂದಾಜು ಒಂದುವರೆ ಕಿ.ಮೀ. ದೂರದ ಕಿಲವಳ್ಳಿ ಮಾರ್ಗದ ಗುಡ್ಡದ ಮೇಲೆ ಮೂಲ ದೇವರು ಕೆಂಡದ ಮಾಸ್ತಿ ಅಥವಾ ಮಹಾಸತಿ ದೇವರು ಪ್ರತಿಷ್ಠಾಪಿಸಲ್ಪಟ್ಟಿದೆ. ಇದೇ ದೇವರನ್ನೇ ಗ್ರಾಮಸ್ಥರು ಅನಾದಿಕಾಲದಲ್ಲಿಯೇ ಕಟ್ಟೆಕೈನಲ್ಲಿ ಪ್ರತಿಷ್ಠಾಪಿಸಿದ್ದಾರೆ.

ಬಿಳಗಿ ಗ್ರಾಮದ ಗಡಿಯಲ್ಲಿ ನೆಲೆಸಿರುವ ಕೆಂಡದ ಮಾಸ್ತಿ ದೇವರ ಮೂಲ ಸ್ಥಳ
ಮೂಲ ಕೆಂಡದ ಮಾಸ್ತಿ ದೇವರು

ಈ ದೇವರ ಕುರಿತಾಗಿರುವ ದಂತಕಥೆ :

ಹಿಂದಿನ ಕಾಲದಲ್ಲಿ ಜನರಿಗೆ ರೋಗರುಜಿನಗಳು ಕಾಡಿದಾಗ ಸಹಜವಾಗಿ ಜನ ಗಾಡಿಗತನ ಮಾಡುವಂತ ವ್ಯಕ್ತಿಗಳ ಬಳಿ ಹೋಗಿ ತಮ್ಮ ಅನಾರೋಗ್ಯಕ್ಕೆ ಹಾಗೂ ಇತರೆ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಇದನ್ನು ಅರಿತ ಬಿಳಗಿ ಸೀಮೆಯ ರಾಜ ಒಮ್ಮೆ ಗಾಡಿಗರನ್ನು ಪರೀಕ್ಷಿಸುವ ಸಲುವಾಗಿ ಎಮ್ಮೆ ಕರುವನ್ನು ಗೋಣಿ ಚೀಲದಲ್ಲಿ ತುಂಬಿ ಅದನ್ನು ಹಗ್ಗದಲ್ಲಿ ಬಿಗಿದು, ಅರಮನೆಯಲ್ಲಿ ಬಚ್ಚಿಟ್ಟನು. ನಂತರ ಬಿಳಗಿ ಸುತ್ತ-ಮುತ್ತಲಿನ ಎಲ್ಲಾ ಗಾಡಿಗರನ್ನು ಆಮಂತ್ರಿಸಿ, ತನ್ನ ಮಗನಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ ಇದಕ್ಕೆ ಪರಿಹಾರ ತಿಳಿಸಿ ಎಂದು ವಿನಂತಿಸಿಕೊಂಡನು. ರಾಜನ ಈ ಸಮಸ್ಯೆಯನ್ನು ಗುರುತಿಸಲು ಹಾಗೂ ಅದಕ್ಕೆ ಪರಿಹಾರ ಕಂಡುಹಿಡಿಯಲು ಯಾವ ಗಾಡಿಗರಿಂದಲೂ ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ಇಲ್ಲಿನ ಕೆಂಡದ ಮಾಸ್ತಿ ದೇವರು ಕಟ್ಟೆಕೈನ ಗಾಡಿಗರ ಮೈಮೇಲೆ ಬಂದು ರಾಜನಿಗೆ, “ನೀನು ನಮ್ಮನ್ನು ಪರೀಕ್ಷೆ ಮಾಡಲು ಒಂದು ಮೂಕ ಪ್ರಾಣಿಯನ್ನು ಗೋಣಿ ಚೀಲದಲ್ಲಿ ಹಾಕಿ ಕಟ್ಟಿದ್ದೀಯಾ” ಎಂದು ಹೇಳಿಕೆಯನ್ನು ನೀಡಿತಂತೆ. ರಾಜನಿಗೆ ತನ್ನ ತಪ್ಪಿನ ಅರಿವಾಗಿ ಪ್ರಾಯಶ್ಚಿತ್ತಕ್ಕಾಗಿ ದೇವರಿಗೆ ಪ್ರಿಯವಾದ ಶ್ರೀಗಂಧ-ಧೂಪ ನೀಡಿದ್ದನೆಂದು ಕಲಗುಬಳ್ಳಿಯ ರಾಘು ಬೀರಾ ಗೌಡ ಇವರು ತಮ್ಮ ಹಿರಿಯರಿಂದ ತಿಳಿದ ಸಂಗತಿಯನ್ನು ನೆನೆಯುತ್ತಾರೆ. ಹಾಗಾಗಿ ಕಲಗುಬಳ್ಳಿಯ ಕೆಂಡದ ಮಾಸ್ತಿಯ ದೈವ ಸ್ವರೂಪವು ಶಕ್ತಿಯುತವಾದುದು ಎಂದೇ ಪ್ರಸಿದ್ಧವಾಗಿದೆ.

ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಲೇಖನ, ಚಿತ್ರಗಳು ಹಾಗೂ ವಿಡಿಯೋ :
ದರ್ಶನ ಹರಿಕಾಂತ