ವೀರ ಅಭಿಮನ್ಯು – ಪಾಠ-11

ಕೌರವರಿಗೂ ಪಾಂಡವರಿಗೂ ಕುರುಕ್ಷೇತ್ರದಲ್ಲಿ ಘನಘೋರ ಸಂಗ್ರಾಮ ನಡೆಯುತ್ತಿತ್ತು. ಹನ್ನೆರಡನೆಯ ದಿನ ದ್ರೋಣಾಚಾರ್ಯರು ಚಕ್ರವ್ಯೂಹವನ್ನು ರಚಿಸಿದ್ದರು. ಕೃಷ್ಣ, ಬಲರಾಮ ಮತ್ತು ಅರ್ಜುನನನ್ನು ಬಿಟ್ಟರೆ ಚಕ್ರವ್ಯೂಹವನ್ನು ಭೇದಿಸುವ ವಿದ್ಯೆ ಉಳಿದ ಪಾಂಡವರಾರಿಗೂ ಗೊತ್ತಿರಲಿಲ್ಲ. ಇದರಿಂದ ಭೀಮಸೇನ ಮತ್ತು ಧರ್ಮರಾಯ ಚಿಂತಾಕ್ರಾಂತರಾಗಿದ್ದರು.
ದೃಶ್ಯ 1

(ಧರ್ಮರಾಯ ಮತ್ತು ಭೀಮಸೇನ ಚರ್ಚಿಸುತ್ತಾ ಕುಳಿತಿದ್ದಾರೆ. ಅಲ್ಲಿಗೆ ಅಭಿಮನ್ಯುವಿನ ಪ್ರವೇಶ)
ಅಭಿಮನ್ಯು : ದೊಡ್ಡಪ್ಪ, ನೀವೇಕೆ ಇಂದು ಬಹಳ ಚಿಂತಾಕ್ರಾಂತರಾಗಿರುವಿರಿ?
ಧರ್ಮರಾಯ : ಬಾ ಮಗು ಅಭಿಮನ್ಯು. ಇಂದು ದ್ರೋಣಾಚಾರ್ಯರು ಯುದ್ಧಭೂಮಿಯಲ್ಲಿ ಚಕ್ರವ್ಯೂಹವನ್ನು ರಚಿಸಿದ್ದಾರೆ. ಇದನ್ನು ಭೇದಿಸುವ ವಿದ್ಯೆ ನಿನ್ನ ತಂದೆಯಾದ ಅರ್ಜುನ, ಶ್ರೀಕೃಷ್ಣ ಹಾಗೂ ಬಲರಾಮರಿಗೆ ಮಾತ್ರ ಗೊತ್ತು. ಆದರೆ ಈಗ ಅವರು ಅನಿವಾರ್ಯವಾಗಿ ಸಂಶಪ್ತಕರೆಂಬ ರಾಕ್ಷಸರನ್ನು ಎದುರಿಸಲು ಹೋಗಿದ್ದಾರೆ. ಈಗೇನು ಮಾಡಬೇಕು ಎಂಬುದೇ ದೊಡ್ಡ ಚಿಂತೆಯಾಗಿದೆ.
ಅಭಿಮನ್ಯು : ದೊಡ್ಡಪ್ಪ, ಇಷ್ಟು ಚಿಕ್ಕ ವಿಷಯಕ್ಕೆ ಅಷ್ಟೊಂದು ಚಿಂತೆಯೇ?
ಧರ್ಮರಾಯ : ಏನು! ಇದು ಚಿಕ್ಕ ವಿಷಯವೇ ಕಂದಾ! ಪಾಂಡವರಿಗೂ ಕೌರವರಿಗೂ ಬಿಲ್ವಿದ್ಯೆ ಕಲಿಸಿದ ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನು ಭೇದಿಸುವುದು ಅಷ್ಟು ಸುಲಭದ ಕೆಲಸವೇ?
ಅಭಿಮನ್ಯು : ಚಿಂತೆಯನ್ನು ಬಿಡಿ ದೊಡ್ಡಪ್ಪ, ಚಕ್ರವ್ಯೂಹವನ್ನು ನಾನು ಭೇದಿಸುತ್ತೇನೆ. ನನ್ನನ್ನು ಆಶೀರ್ವದಿಸಿ ಕಳಿಸಿಕೊಡಿ.
ಧರ್ಮರಾಯ : (ಅಭಿಮನ್ಯುವಿನ ಮಾತುಗಳನ್ನು ಕೇಳಿ ಮನದಲ್ಲೆ ಹೆಮ್ಮೆಪಡುತ್ತಾ) ಭೇಷ್ ಕುಮಾರ, ನಿನ್ನ ಪರಾಕ್ರಮದ ಮಾತನ್ನು ಕೇಳುತ್ತಿದ್ದರೆ, ನನಗೆ ಅತೀವ ಸಂತೋಷವಾಗುತ್ತಿದೆ. ನಿನ್ನನ್ನು ಪಡೆದ ನಾವೇ ಧನ್ಯರು. ಆದರೆ………
ಅಭಿಮನ್ಯು : ಆದರೆ…? ಹಾಗೆಂದರೇನು ದೊಡ್ಡಪ್ಪ. ನನ್ನ ಸಾಮರ್ಥ್ಯದ ಮೇಲೆ ನಿಮಗೆ ಶಂಕೆಯೇ? ನನ್ನ ಮೈಯಲ್ಲಿ ಹರಿಯುತ್ತಿರುವುದು ಕ್ಷತ್ರಿಯ ವಂಶದ ರಕ್ತ. ನಾನು ಜಗದ್ವಿಖ್ಯಾತ ಅರ್ಜುನನ ಮಗ.
ಧರ್ಮರಾಯ : ಅಹುದು ಮಗು, ನೀ ಹೇಳುತ್ತಿರುವ ಮಾತುಗಳಲ್ಲಿ ಸಂದೇಹವೇ ಇಲ್ಲ. ಆದರೆ ಈ ಘನ ಘೋರ ಯುದ್ಧವು ನಿನ್ನಂತಹ ಬಾಲಕನಿಗೆ ಸಲ್ಲದು ಕುಮಾರ.
ಅಭಿಮನ್ಯು : ಚಕ್ರವ್ಯೂಹವನ್ನು ಭೇದಿಸುವ ವಿದ್ಯೆಯನ್ನು ನಾನು ತಾಯಿಯ ಗರ್ಭದಲ್ಲಿರುವಾಗಲೇ ಶ್ರೀಕೃಷ್ಣ ಪರಮಾತ್ಮನಿಂದ ಕೇಳಿ ತಿಳಿದುಕೊಂಡಿದ್ದೇನೆ. ನನ್ನನ್ನು ಹರಸಿ ಕಳಿಸಿ ದೊಡ್ಡಪ್ಪ.
ಭೀಮಸೇನ : ಭಲೇ ಕುಮಾರ! ನಿನ್ನ ಪರಾಕ್ರಮದ ಮಾತುಗಳನ್ನು ಕೇಳುತ್ತಿದ್ದರೆ, ನೀನು ಚಕ್ರವ್ಯೂಹ ಭೇದಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಧರ್ಮರಾಯ : ಇದೇನು ಭೀಮಸೇನ? ನೀನು ಹೇಳುತ್ತಿರುವುದು. ಅಭಿಮನ್ಯು ಇನ್ನೂ ಮಗು. ಅವನನ್ನು ಯುದ್ಧಕ್ಕೆ ಕಳಿಸುವುದು ನನಗೆ ಸರಿ ಕಾಣಿಸದು.
ಭೀಮಸೇನ : ಅಣ್ಣಾ! ನೀನು ಚಿಂತಿಸಬೇಡ, ಚಕ್ರವ್ಯೂಹವನ್ನು ಭೇದಿಸುವ ಸಾಮರ್ಥ್ಯ ವೀರ ಅಭಿಮನ್ಯುವಿನಲ್ಲಿದೆ.
ಧರ್ಮರಾಯ : ಆಯ್ತು ಭೀಮಸೇನ. ನಿನ್ನ ಮಾತಿನಂತೆ ಅಭಿಮನ್ಯುವನ್ನು ಯುದ್ಧಕ್ಕೆ ಕಳುಹಿಸಲು ನನ್ನ ಸಹಮತವಿದೆ. ನಾವೆಲ್ಲರೂ ಯುದ್ಧರಂಗದಲ್ಲಿ ವೀರ ಬಾಲಕನಿಗೆ ರಕ್ಷಾಕವಚದಂತಿರೋಣ.
ಅಭಿಮನ್ಯು : ಬಹಳ ಸಂತೋಷ ದೊಡ್ಡಪ್ಪ. ನನ್ನನ್ನು ಆಶೀರ್ವದಿಸಿ (ಎಂದು ಹೇಳಿ ಧರ್ಮರಾಯ, ಭೀಮಸೇನರ ಪಾದಗಳಿಗೆ ನಮಸ್ಕರಿಸಿ ಹೊರಡುವನು)
ದೃಶ್ಯ 2
(ಸುಭದ್ರೆಯ ಅರಮನೆ. ಅಭಿಮನ್ಯು ತನ್ನ ತಾಯಿ ಸುಭದ್ರೆಯ ಪಾದಗಳಿಗೆ ಎರಗುವನು)
ಅಭಿಮನ್ಯು : ಅಮ್ಮಾ ! ಈ ದಿನ ನಾನು ಕುರುಕ್ಷೇತ್ರ ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸಲು ದೊಡ್ಡಪ್ಪಂದಿರಾದ ಧರ್ಮರಾಯ ಹಾಗೂ ಭೀಮಸೇನರಿಂದ ಆಶೀರ್ವಾದ ಪಡೆದು ಬಂದಿದ್ದೇನೆ. ನೀನೂ ನನ್ನನ್ನು ಹರಸಿ ಕಳುಹಿಸಿಕೊಡು.
ಸುಭದ್ರೆ : (ದಿಗ್ಭ್ರಾಂತಳಾಗಿ) ಇದೇನು ಕಂದಾ! ನೀನು ಯುದ್ಧರಂಗಕ್ಕೆ ಹೋಗುವೆಯಾ! ಅಲ್ಲಿ ಚಕ್ರವ್ಯೂಹವನ್ನು ಭೇದಿಸುವೆಯಾ?
ಅಭಿಮನ್ಯು : ಏಕಮ್ಮಾ? ಈ ಸುಭದ್ರಾನಂದನ ವೀರ ಅಭಿಮನ್ಯುವಿನ ಮೇಲೆ ನಿನಗೆ ಸಂದೇಹವೇ! ನನ್ನನ್ನು ಹರಸಿ ಕಳುಹಿಸಿಕೊಡಮ್ಮಾ.
ಸುಭದ್ರೆ : ಆಗಲಿ ಮಗು. ಶ್ರೀಕೃಷ್ಣ ಪರಮಾತ್ಮನ ಕೃಪೆ, ತಂದೆಯ ಶೌರ್ಯ ನಿನ್ನಲ್ಲಿರುವಾಗ ಸಂದೇಹದ ಮಾತೇ ಇಲ್ಲ. ಜಯಶಾಲಿಯಾಗಿ ಬಾ…ಮಗನೇ. ಹೋಗಿ ಬಾ ನಿನಗೆ ಮಂಗಳವಾಗಲಿ.
(ಉತ್ತರೆಯ ಪ್ರವೇಶ)
ಅಭಿಮನ್ಯು : ಬಾ ಉತ್ತರೇ ಏಕೆ ನಿನ್ನ ವದನ ಇಂದು ಖಿನ್ನವಾಗಿ ಕಾಣುತ್ತಿದೆಯಲ್ಲಾ?
ಉತ್ತರೆ : ಪ್ರಾಣಕಾಂತ! ನೀವು ಯುದ್ಧರಂಗಕ್ಕೆ ಹೋಗುವ ವಿಷಯ ತಿಳಿಯಿತು. ಅದಕ್ಕಾಗಿಯೇ ಈ ರೀತಿಯ ಖಿನ್ನತೆ …..
ಅಭಿಮನ್ಯು : ಚಿಂತಿಸಬೇಡ ಉತ್ತರೆ. ನಾನು ಈ ಯುದ್ಧದಲ್ಲಿ ಜಯಶಾಲಿಯಾಗಿ ಹಿಂದಿರುಗುತ್ತೇನೆ. ಧೈರ್ಯಗೆಡದೆ ನಗುಮುಖದಿಂದ ನನ್ನನ್ನು ಕಳಿಸಿಕೊಡು.
ಉತ್ತರೆ : ಆಗಲಿ, ಜಯವಿರುವ ತನಕ ಭಯವೇಕೆ? ಯುದ್ಧ ಕ್ಷತ್ರಿಯರ ಧರ್ಮ. ಹೋಗಿ ಬನ್ನಿ. ಆ ಪರಮಾತ್ಮ ನಿಮಗೆ ಒಳಿತು ಮಾಡಲಿ.

ದೃಶ್ಯ 3
(ಅಭಿಮನ್ಯು ಸೂರ್ಯನಂತೆ ಪ್ರಕಾಶಿಸುತ್ತ ರಥವನ್ನೇರಿ ಯುದ್ಧಭೂಮಿಗೆ ಪ್ರವೇಶ ಮಾಡುತ್ತಾನೆ)
ಅಭಿಮನ್ಯು : (ಸಾರಥಿಯನ್ನು ಕುರಿತು) ಸುಮಿತ್ರ, ಆದಷ್ಟು ಬೇಗ ನನ್ನನ್ನು ದ್ರೋಣಾಚಾರ್ಯರು ರಚಿಸಿರುವ ಚಕ್ರವ್ಯೂಹದ ಕಡೆ ಕರೆದುಕೊಂಡು ಹೋಗು.
(ಭೀಮನೊಂದಿಗೆ ಪಾಂಡವರ ಸೈನ್ಯವು ಅಭಿಮನ್ಯುವನ್ನು ನೆರಳಿನಂತೆ ಹಿಂಬಾಲಿಸಿ ಬರುತ್ತದೆ.)
ಅಭಿಮನ್ಯು : ಬನ್ನಿರಿ! ಬನ್ನಿರಿ! ಒಬ್ಬೊಬ್ಬರಾಗಿ ಬನ್ನಿ, ನಿಮ್ಮನ್ನೆಲ್ಲಾ ತರಗೆಲೆಗಳಂತೆ ತೂರಿ ಯಮಪುರಕ್ಕೆ ಕಳಿಸುತ್ತೇನೆ.
(ದ್ರೋಣ, ಕರ್ಣ ಹಾಗೂ ಇತರ ಕೌರವ ಸೇನೆ ಸೇರಿ ಅಭಿಮನ್ಯುವಿನ ವೀರಾವೇಶ ನೋಡಿ ಆತನನ್ನು ಮುಗಿಸಲು ತಂತ್ರ ಹೂಡುವರು. ವೀರಾವೇಶದಿಂದ ಹೋರಾಡುತ್ತಿರುವಾಗ ಕೌರವರು ಹಿಂದಿನಿಂದ ಬಂದು ಅಭಿಮನ್ಯುವಿನ ಕೈಗಳನ್ನು ಕತ್ತರಿಸುವರು.)
ಅಭಿಮನ್ಯು : ರಣಹೇಡಿಗಳೇ, ತಾಯಿಯ ಹಾಲುಂಡ ಯಾವುದೇ ಕ್ಷತ್ರಿಯ ಈ ಕೆಲಸ ಮಾಡಲಾರ. ವೀರಾವೇಶದಿಂದ ಎದುರಿಸಿ ಹೋರಾಡಿ ಸತ್ತು ಸ್ವರ್ಗ ಸೇರುವುದನ್ನು ಬಿಟ್ಟು ನರಕದ ದಾರಿ ಹಿಡಿಯುತ್ತೀರಾ? ನಿಮಗೆ ಧಿಕ್ಕಾರವಿರಲಿ.
ದುರ್ಯೋಧನ : ಸೈಂಧವರಾಜ ಬಿಡಬೇಡ, ಹೊಡೆ. ಕರ್ಣ, ಜಯದ್ರಥ ನೀವೆಲ್ಲರೂ ಅವನ ಮೇಲೆ ಒಟ್ಟಾಗಿ ಬೀಳಿರಿ.

(ಅಭಿಮನ್ಯು ರಥದ ಚಕ್ರವನ್ನು ಕೈಯಲ್ಲಿ ತಿರುಗಿಸಿ ವೀರಾವೇಶದಿಂದ ಹೋರಾಡಿ ವೀರಮರಣ ಹೊಂದುವನು.)
ಬೆಳೆಯುವ ಸಿರಿ ಮೊಳಕೆಯಲ್ಲಿ

ಭೇದಿಸು – ಹೊಡೆ, ಮುರಿ, ಸೀಳು;
ಆಶೀರ್ವದಿಸು – ಹರಸು;
ಶಂಕೆ – ಸಂದೇಹ, ಸಂಶಯ;
ವಿಖ್ಯಾತ – ಪ್ರಸಿದ್ಧವಾದ;
ಯುದ್ಧ – ಕದನ, ಸಮರ, ಸಂಗ್ರಾಮ;
ಎರಗು – ನಮಸ್ಕಾರ ಮಾಡು, ನಮಸ್ಕರಿಸು ;
ದಿಗ್ಭ್ರಾಂತ – ಗಾಬರಿಗೊಳ್ಳು, ಕಸಿವಿಸಿಯಾಗು;
ಸೂರ್ಯ– ನೇಸರ, ರವಿ ;
ಸೇನೆ – ದಂಡು, ಸೈನ್ಯ;
ಯಮಪುರ – ಯಮನಲೋಕ, ಮೃತ್ಯುಲೋಕ;
ಮರಣ – ಜೀವ ಹೋಗುವಿಕೆ, ಸಾವು;
ಘನಘೋರ – ಉಗ್ರವಾದ; ಭಯಂಕರವಾದ;
ಚಿಂತಾಕ್ರಾಂತ – ಚಿಂತೆಗೊಳಗಾದ;
ಸಂಹರಿಸು – ನಾಶಗೊಳಿಸು, ಕೊಲ್ಲು, ನಿರ್ನಾಮ ಮಾಡು;
ಪ್ರಶಂಸೆ – ಹೊಗಳಿಕೆ, ಸ್ತುತಿ;
ಪರಾಕ್ರಮ – ಕಲಿತನ, ಶೌರ್ಯ;
ಸಹಮತ – ಒಮ್ಮತ; ಏಕಾಭಿಪ್ರಾಯ;
ನಂದನ – ಮಗ, ಪುತ್ರ, ಕಂದ;
ದಯೆ– ಕರುಣೆ, ಅನುಕಂಪ, ಕೃಪೆ;
ಮಂಗಳ – ಶುಭ;
ವದನ – ಮುಖ, ಮೋರೆ;
ಖಿನ್ನ – ದುಃಖಿತನಾದ, ನೊಂದ;
ಪರಿಣಿತ – ಚತುರ, ನಿಪುಣ;
ಹೇಡಿ – ಅಂಜುಬುರುಕ, ಹೆದರುಪುಕ್ಕ;
ತಂತ್ರ – ಉಪಾಯ ;
ರಾಜೋಚಿತ – ಅರಸನಿಗೆ ಉಚಿತವಾದ, ರಾಜಯೋಗ್ಯವಾದ;
ಧಿಕ್ಕಾರ – ನಿಂದೆ, ತಿರಸ್ಕಾರ;
ಸಾಮರ್ಥ್ಯ – ದಕ್ಷತೆ, ಯೋಗ್ಯತೆ, ಬಲ. ಶಕ್ತಿ;
ಅಪ್ರತಿಮ – ಅಸಾಮಾನ್ಯವಾದ;
ಗರ್ಭ – ಬಸಿರು;
ಹಿಂಬಾಲಿಸು – ಹಿಂದೆಬರು, ಅನುಸರಿಸು

ಚಕ್ರವ್ಯೂಹ – ಒಂದು ಬಗೆಯ ಸೇನಾ ರಚನೆ.
ಕ್ಷತ್ರಿಯವಂಶ – ನಾಲ್ಕು ವರ್ಣಗಳಲ್ಲಿ ಒಂದು, ಯುದ್ಧದ ದೀಕ್ಷೆಯನ್ನು ತೆಗೆದುಕೊಂಡ ವರ್ಣ.
ಸಂಶಪ್ತಕರು – ಪರಸ್ಪರ ಶಪಥ ಮಾಡಿ ಯುದ್ಧ ಮಾಡುವ ವೀರರು.
ರಕ್ಷಾಕವಚ – ದೇಹದ ರಕ್ಷಣೆಗಾಗಿ ತೊಟ್ಟುಕೊಳ್ಳುವ ಉಕ್ಕಿನ ಅಂಗಿ.
ಸಂವೇದ ವಿಡಿಯೋ ಪಾಠಗಳು


***************************************