ವಸ್ತು ಸ್ವರೂಪ – ಪಾಠ – 11

ನಾವು ದಿನವೂ ಅನೇಕ ವಸ್ತುಗಳನ್ನು ನೋಡುತ್ತೇವೆ ಮತ್ತು ಕೆಲವನ್ನು ಬಳಸುತ್ತೇವೆ. ವಸ್ತುಗಳನ್ನು ದ್ರವ್ಯಗಳೆಂದೂ ಕರೆಯುತ್ತಾರೆ. ಒಂದು ವಸ್ತುವು ಇನ್ನೊಂದರಂತೆ ಇರುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಕೆಲವು ವಸ್ತುಗಳ ಲಕ್ಷಣಗಳು ಒಂದೇ ಆಗಿರುತ್ತವೆ. ವಸ್ತುಗಳು ಯಾವುದರಿಂದಾಗಿವೆ? ಈ ವಸ್ತುಗಳ ಸಾಮಾನ್ಯ ಲಕ್ಷಣಗಳು ಏನು? ಎಂಬ ಕುತೂಹಲ ಎಲ್ಲರಿಗೂ ಇದೆ.

ನಮ್ಮ ದಿನನಿತ್ಯದ ಜೀವನದಲ್ಲಿ ಸುತ್ತಮುತ್ತ ವಿವಿಧ ರೂಪದಲ್ಲಿ ವಸ್ತುಗಳನ್ನು ಕಾಣುತ್ತೇವೆ.

ಚಟುವಟಿಕೆ : ನೀನು ಸಂಗ್ರಹಿಸಿದ ವಸ್ತುಗಳನ್ನು ಒಂದೆಡೆ ಅಚ್ಚುಕಟ್ಟಾಗಿ ಜೋಡಿಸಿ ಆ ವಸ್ತುಗಳ ಹೆಸರನ್ನು ಪಟ್ಟಿ ಮಾಡು.

……………………………………………………………………………………………………………………………………………………………………

ನೀನು ಸಂಗ್ರಹಿಸಿದ ವಸ್ತುಗಳು ಕೆಳಗಿನಂತಿವೆಯೇ ಎಂದು ಗಮನಿಸಿ, (ಸರಿ) ಅಥವಾ (ತಪ್ಪು) ಎಂದು ಗುರುತಿಸು.

ನೀನು ಮಾಡಿದ ಚಟುವಟಿಕೆಯಿಂದ ವಸ್ತುಗಳು ಅವುಗಳ ಆಕಾರ, ಬಣ್ಣ, ಹೊಳಪು, ನೀರಿನಲ್ಲಿ ವಿಲೀನವಾಗುವ-ಹೀಗೆ ಅನೇಕ ರೂಪಗಳಲ್ಲಿವೆ ಎಂದು ತಿಳಿಯಬಹುದು. ಅಲ್ಲವೆ?

ದ್ರವ್ಯ (ವಸ್ತು)

ಪರಿಸರದಲ್ಲಿ ಲಭ್ಯವಿರುವ ವಸ್ತುಗಳು ಹೇಗೆ ಉಂಟಾಗಿವೆ?

ವಸ್ತುವನ್ನು ವೈಜ್ಞಾನಿಕವಾಗಿ ದ್ರವ್ಯವೆಂದು ಕರೆಯಲಾಗುತ್ತದೆ. ದ್ರವ್ಯಗಳೆಲ್ಲವೂ ಅತ್ಯಂತ ಸಣ್ಣ ಕಣಗಳಿಂದಾಗಿವೆ. ದ್ರವ್ಯದ ಅತೀ ಸೂಕ್ಷ್ಮವಾದ ಚೂರನ್ನು ಕಣ ಎನ್ನುತ್ತೇವೆ.

ಆಲೋಚಿಸು : ಇಲ್ಲಿ ತಿಳಿಸಿದ ವಸ್ತುಗಳೇನಾದರೂ ಅತಿ ಸೂಕ್ಷ್ಮ (ಚಿಕ್ಕ) ಆಕಾರದಲ್ಲಿ ನಿನ್ನ ಅನುಭವಕ್ಕೆ ಬಂದ ಘಟನೆಗಳು ಇವೆಯೆ?

* ಸುವಾಸನೆಯ ಕಣಗಳು ಸುವಾಸನೆಯ ದ್ರವ್ಯದಿಂದ(ಸೆಂಟ್) ನಿನ್ನ ಮೂಗಿನವರೆಗೆ ಬಂದದ್ದಾದರೂ ಹೇಗೆ?

* ಮನೆಯಲ್ಲಿ ಕೋಣೆ ಇಲ್ಲವೆ ಅಂಗಳದ ಕಸ ಗುಡಿಸಿದಾಗ, ನೀನು ಪಕ್ಕದ ಕೋಣೆಯಲ್ಲಿದ್ದಾಗಲೂ ನಿನ್ನ ಮೂಗಿಗೆ ಸೇರಿದ ಅನುಭವ ಹೇಗಾಯಿತು?

* ಸೌದೆ ಉರಿದಾಗ ಇಲ್ಲವೇ ಚಿಮಣಿ ದೀಪ ಉರಿಸಿದಾಗ ಅದರ ಕಪ್ಪಾದ ಕಣಗಳು ಚಾವಣಿ ಅಥವಾ ಇನ್ಯಾವುದೇ ಸ್ಥಳದಲ್ಲಿ ಸಂಗ್ರಹವಾಗುವಾಗ ನಿನ್ನ ಕಣ್ಣಿಗೆ ಏನಾದರೂ ಕಂಡಿತೆ?

ದ್ರವ್ಯಗಳಲ್ಲಿರುವ ಕಣಗಳು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುತ್ತವೆ. ದ್ರವ್ಯವು ಅತ್ಯಂತ ಸೂಕ್ಷ್ಮಕಣಗಳಿಂದಾಗಿದೆ. ಅಂದರೆ ಕಣ್ಣಿಗೆ ಕಾಣುವ ದ್ರವ್ಯವು ಕಣ್ಣಿಗೆ ಕಾಣದ (ಅಗೋಚರ) ಕಣಗಳಿಂದ ಕೂಡಿರುತ್ತದೆ.

ದ್ರವ್ಯ ಎಂದರೇನು?

ದ್ರವ್ಯದ ಲಕ್ಷಣಗಳು

ದ್ರವ್ಯಗಳಿಗೆ ವಿಶಿಷ್ಟ ಲಕ್ಷಣಗಳಿವೆ. ಅವುಗಳನ್ನು ನಾವು ಪ್ರಯೋಗ ಮತ್ತು ಚಟುವಟಿಕೆಗಳ ಮೂಲಕ ತಿಳಿಯಬಹುದು.

1. ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ

ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ. ಒಂದು ದ್ರವ್ಯವು ಆಕ್ರಮಿಸಿರುವ ಸ್ಥಳವನ್ನು ಮತ್ತೊಂದು ದ್ರವ್ಯವು ಅಕ್ರಮಿಸಲು ಸಾಧ್ಯವಿಲ್ಲ.

ನಿನ್ನ ಸುತ್ತಮುತ್ತ ಕಾಣಸಿಗುವ ಕೆಲವು ದ್ರವ್ಯಗಳ ಹೆಸರನ್ನು ಬರೆ.

……………………………………………………………………………………………………………………………………………………………………………..

ವಾಯು ಒಂದು ದ್ರವ್ಯ. ವಾಯು ತಾನಿರುವ ಪಾತ್ರೆಯನ್ನು ಆಕ್ರಮಿಸುತ್ತದೆ.

ಚಟುವಟಿಕೆ : ಒಂದು ಬಲೂನನ್ನು ಊದಿ ಗಾಳಿ ತುಂಬು. ವಾಯುವಿನಲ್ಲಿರುವ ಕಣಗಳು ವಿರಳವಾಗಿರುತ್ತವೆ. ವಿರಳ ಕಣಗಳಿರುವ ಒಂದು ದ್ರವ್ಯದಲ್ಲಿ ಮತ್ತೊಂದು ದ್ರವ್ಯದ ಕಣಗಳನ್ನು ಸೇರಿಸಬಹುದಾಗಿದೆ.

ದ್ರವ್ಯವು ಅನೇಕ ಗೋಚರ ಮತ್ತು ಅಗೋಚರ ಕಣಗಳಿಂದಾಗಿದೆ.

2. ದ್ರವ್ಯಕ್ಕೆ ರಾಶಿ (ದ್ರವ್ಯರಾಶಿ) ಇದೆ.

ನಿನ್ನಲ್ಲಿರುವ ದ್ರವ್ಯಗಳು ಇಲ್ಲವೆ ನಿನ್ನ ತರಗತಿಯಲ್ಲಿರುವ ಬೇರೆ ಬೇರೆ ದ್ರವ್ಯಗಳನ್ನು ಗೆಳೆಯರೊಂದಿಗೆ ಸೇರಿ ತೂಕ ಮಾಡಿ ನೋಡು.

ಆಲೋಚಿಸು
* ತೂಕವಿಲ್ಲದ ಯಾವುದಾದರೂ ದ್ರವ್ಯವಿದೆಯಾ?
* ತಕ್ಕಡಿಯ ಒಂದು ತಟ್ಟೆಯಲ್ಲಿ ಯಾವುದಾದರೊಂದು ದ್ರವ್ಯವನ್ನಿಡು.
* ತಕ್ಕಡಿಯ ಎರಡೂ ತಟ್ಟೆಗಳನ್ನು ಸಮಾನವಾಗಿಡಲು ಸಾಧ್ಯವೇ? ಪ್ರಯತ್ನಿಸು. ಇಲ್ಲದಿದ್ದರೆ ಏಕೆ?

ದ್ರವ್ಯವು ಅನೇಕ ಕಣಗಳ ಮೊತ್ತ. ಅದು ರಾಶಿಯನ್ನು ಹೊಂದಿದೆ. ದ್ರವ್ಯವು ಸಣ್ಣ ಸಣ್ಣ ಕಣಗಳಿಂದಾಗಿದೆ. ದ್ರವ್ಯದಲ್ಲಿನ ಒಟ್ಟು ಕಣಗಳು ಆ ದ್ರವ್ಯದ ತೂಕವನ್ನು ಅವಲಂಬಿಸಿದೆ. ಯಾವ ವಸ್ತುವು ಸ್ಥಳವನ್ನು ಆಕ್ರಮಿಸುವುದೊ ಮತ್ತು ರಾಶಿಯನ್ನು ಹೊಂದಿದೆಯೋ ಅದನ್ನು ದ್ರವ್ಯ ಎನ್ನುವರು.

ದ್ರವ್ಯದ ಸ್ಥಿತಿಗಳು

ಕಣಗಳ ಜೋಡಣೆಯನ್ನು ಆಧರಿಸಿ ದ್ರವ್ಯಗಳನ್ನು ಬೇರೆ ಬೇರೆ ಸ್ಥಿತಿಗಳಲ್ಲಿ ಗುರುತಿಸುತ್ತೇವೆ.

ಮೇಲಿನ ಅಂಕಣದಲ್ಲಿ ತುಂಬಿದ ದ್ರವ್ಯಗಳ ಹೆಸರನ್ನು ಕೆಳಗಿನ ಪಟ್ಟಿಯಲ್ಲಿ ತುಂಬು.

ಕೆಳಗೆ ಹೆಸರಿಸಿದ ವಸ್ತುಗಳು ಯಾವ ಗುಂಪಿಗೆ ಸೇರಿದವು ಎಂದು ಆಲೋಚಿಸಿ ಬರೆ. ಮಜ್ಜಿಗೆ, ಮೇಣದ ಬತ್ತಿ, ಮೊಸರು, ಸೀಮೆಎಣ್ಣೆ, ಇದ್ದಲು, ಜೇನುತುಪ್ಪ, ಇಟ್ಟಿಗೆ ಚೂರು, ಹೊಗೆ.

ದ್ರವ್ಯವನ್ನು ಘನ, ದ್ರವ ಮತ್ತು ಅನಿಲ – ಈ ಮೂರು ಸ್ಥಿತಿಯಲ್ಲಿ ಗುರುತಿಸುತ್ತೇವೆ.

* ಘನ ವಸ್ತುವಿನಲ್ಲಿ ಕಣಗಳು ನಿರ್ದಿಷ್ಟವಾಗಿ ಮತ್ತು ಒತ್ತೊತ್ತಾಗಿ ಜೋಡಿಸಲ್ಪಟ್ಟಿರುತ್ತವೆ.
ಉದಾಹರಣೆ: ಕಲ್ಲು, ಕಬ್ಬಿಣ ಇತ್ಯಾದಿ.

* ದ್ರವ ವಸ್ತುವಿನಲ್ಲಿ ಕಣಗಳು ಘನ ವಸ್ತು ವಿನಲ್ಲಿರುವ ಕಣಕ್ಕಿಂತ ಸ್ವಲ್ಪ ವಿರಳವಾಗಿರುತ್ತವೆ.
ಉದಾಹರಣೆ: ನೀರು ಹಾಲು, ಇತ್ಯಾದಿ.

* ಅನಿಲ ವಸ್ತುವಿನಲ್ಲಿ ಕಣಗಳು ತುಂಬಾ ವಿರಳವಾಗಿರುತ್ತವೆ.
ಉದಾಹರಣೆ: ವಾಯು, ಹೊಗೆ, ಇತ್ಯಾದಿ.

ಆಲೋಚಿಸು : ನೀನು ಎಲ್ಲೆಲ್ಲಿ ಅನಿಲ ವಸ್ತುಗಳ ಇರುವಿಕೆಯನ್ನು ಕಂಡಿರುವೆ?

ಸಕ್ಕರೆಯ ಪುಡಿಯು ನೀರಿನ ವಿರಳವಾದ ಕಣಗಳ ಮಧ್ಯದ ಸ್ಥಳದಲ್ಲಿ ಸೇರಿಕೊಂಡ ಕಾರಣ ನೀರು ಹೊರಚೆಲ್ಲಲಿಲ್ಲ.

ಚಟುವಟಿಕೆ : ಒಂದು ಗೋಲಿಯನ್ನು ಮೇಜು, ತಟ್ಟೆ, ಬೀಕರ್-ಹೀಗೆ ಬೇರೆ ಕಡೆಗಳಲ್ಲಿ ಇಟ್ಟು ನೋಡು. ಆಕಾರ ಮತ್ತು ಗಾತ್ರದಲ್ಲಿ ವ್ಯತ್ಯಾಸವಾಯಿತೆ?

ಘನ ವಸ್ತುವು ಯಾವುದೇ ಸ್ಥಳದಲ್ಲಿದ್ದರೂ ಅದರ ಆಕಾರ ಮತ್ತು ಗಾತ್ರ ಬದಲಾಗುವುದಿಲ್ಲ.

ಚಟುವಟಿಕೆ : ನೀರನ್ನು ಬೀಕರ್, ತಟ್ಟೆ, ಪ್ಲಾಸ್ಟಿಕ್ ಚೀಲ.. ಹೀಗೆ ಬೇರೆ ಬೇರೆ ಪಾತ್ರೆಗಳಲ್ಲಿ ಹಾಕಿ ನೋಡು. ದ್ರವದ ಆಕಾರದಲ್ಲಿ ವ್ಯತ್ಯಾಸವಾಯಿತೆ?

ದ್ರವವು ತಾನಿರುವ ಪಾತ್ರೆಯ ಆಕಾರವನ್ನು ಪಡೆಯುತ್ತದೆ. ಆದರೆ ಗಾತ್ರದಲ್ಲಿ ಬದಲಾಗುವುದಿಲ್ಲ.

ಚಟುವಟಿಕೆ : ಊದುಬತ್ತಿಯನ್ನು ಉರಿಸಿ, ಅದರ ಹೊಗೆಯನ್ನು ಜಾಡಿಯೊಳಗೆ ಹರಡುವಂತೆ ಮಾಡು. ಅನಿಲವು ಯಾವ ಆಕಾರ ಹೊಂದಿದೆ?

ಅನಿಲವು ತಾನಿರುವ ಪಾತ್ರೆಯ ತುಂಬೆಲ್ಲಾ ಹರಡುತ್ತದೆ ಹಾಗೂ ಗಾತ್ರದಲ್ಲಿಯೂ ಬದಲಾಗುತ್ತದೆ.

ದ್ರವದ ಆಕಾರವು ಪಾತ್ರೆಯ ಸ್ಥಳಾವಕಾಶದಂತೆ ಬದಲಾಗುತ್ತದೆ.

ಅನಿಲವು ಪಾತ್ರೆಯು ಯಾವ ರೀತಿಯಲ್ಲಿ ಇರುತ್ತದೊ ಹಾಗೆಯೇ ಹರಡಿಕೊಂಡಿರುತ್ತದೆ.

ಬಾ ಆಡೋಣ
ಆಟಕ್ಕೆ ಮೊದಲು ನೀನು ಹಲವಾರು ವಸ್ತುಗಳ ಹೆಸರುಗಳನ್ನು ಕಾರ್ಡ್‍ನಲ್ಲಿ ಬರೆ. ಆ ಹೆಸರುಗಳೆಲ್ಲಾ ಘನ, ದ್ರವ ಮತ್ತು ಅನಿಲ ವಸ್ತುವಿಗೆ ಸಂಬಂಧಿಸಿದ್ದಾಗಿರಲಿ.
ಆಮೇಲೆ ನೀನು ಮತ್ತು ನಿನ್ನ ಸಹಪಾಠಿಗಳು ವೃತ್ತಾಕಾರದಲ್ಲಿ ನಿಲ್ಲಿ. ಕಾರ್ಡ್‍ಗಳನ್ನು ವೃತ್ತದೊಳಗೆ ಅಲ್ಲಲ್ಲಿ ಇಡು. ನಿನ್ನ ಸಹಪಾಠಿಯೊಬ್ಬರನ್ನು ವೃತ್ತದ ಹೊರಗೆ ನಿಂತು ನಿಮ್ಮನ್ನು ವೃತ್ತದ ಸುತ್ತ ಓಡಿಸಲು ಮತ್ತು ಸೀಟಿ ಹೊಡೆದು ನಿಲ್ಲಿಸಲು ಹೇಳು. ಸೀಟಿ ಹೊಡೆದಾಗ ನೀವು ವೃತ್ತದೊಳಗೆ ಇಟ್ಟ ಕಾರ್ಡುಗಳ ಬಳಿ ಎಲ್ಲಿ ಬೇಕೆಂದರಲ್ಲಿ ನಿಲ್ಲಿ. ಹೊರಗೆ ನಿಂತ ನಿನ್ನ ಸಹಪಾಠಿಯು ಘನ, ದ್ರವ, ಅನಿಲ-ಈ ಮೂರರಲ್ಲಿ ಯಾವುದಾದರೂ ಒಂದರ ಹೆಸರು ಹೇಳಬೇಕು. ನಿನ್ನ ಮಿತ್ರ ಘನ ಎಂದರೆ ಘನ ವಸ್ತುವಿನ ಹೆಸರಿರುವ ಕಾರ್ಡುಗಳ ಬಳಿ ನಿಂತವರು ಔಟ್. ಹೀಗೆ ಆಟ ಮುಂದುವರಿಸು. ಆಟದ ಕೊನೆಗೆ ಉಳಿದವನಿಂದ ಘನ, ದ್ರವ ಮತ್ತು ಅನಿಲ ವಸ್ತುವಿಗೆ ಒಂದೊಂದು ಉದಾಹರಣೆ ಹೇಳಿಸಿ, ಅವನಿಗೆ ಅಭಿನಂದನೆ ಸಲ್ಲಿಸು.

ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡು.

ದ್ರವ್ಯದ ಮೇಲೆ ಉಷ್ಣದ ಪರಿಣಾಮ

ಈ ಮೇಲಿನ ಚಟುವಟಿಕೆಗಳಿಂದ ನಾವು ತಿಳಿಯುವುದೇನೆಂದರೆ, ದ್ರವ್ಯಗಳಿಗೆ ಉಷ್ಣ ತಗುಲಿದಾಗ ದ್ರವ್ಯದಲ್ಲಿ ಬದಲಾವಣೆ ಆಗುತ್ತದೆ. ಉಷ್ಣದಿಂದ ದ್ರವ್ಯವು ಹಿಗ್ಗುತ್ತದೆ. ಘನ, ದ್ರವ ಮತ್ತು ಅನಿಲಗಳು ಉಷ್ಣದಿಂದ ಅನುಕ್ರಮವಾಗಿ ಹೆಚ್ಚು ಹೆಚ್ಚು ಹಿಗ್ಗುತ್ತವೆ.

ಈ ಕೆಳಗಿನ ವಸ್ತುಗಳಿಗೆ ಉಷ್ಣ ತಗುಲಿದಾಗ ಏನಾಗುತ್ತದೆ ಎಂದು ಬರೆ.

ವಸ್ತುವಿನ ಸ್ಥಿತಿ ಬದಲಾವಣೆ

ಒಂದು ವಸ್ತುವಿಗೆ ಉಷ್ಣವನ್ನು ಕೊಟ್ಟಾಗ, ಆ ವಸ್ತುವಿನ ಉಷ್ಣತೆಯಲ್ಲಿ ಏರಿಕೆಯಾಗುತ್ತದೆ. ಉಷ್ಣದಿಂದಾಗಿ ದ್ರವ್ಯದ ಸ್ಥಿತಿಯು ಬದಲಾವಣೆಯಾಗುತ್ತದೆ.

 ಈ ಕೆಳಕಂಡ ಸಂದರ್ಭಗಳಲ್ಲಿ ದ್ರವ್ಯದ ಬದಲಾದ ಸ್ಥಿತಿಯನ್ನು ಬಿಟ್ಟ ಜಾಗದಲ್ಲಿ ಬರೆ.

  1. ಮಂಜುಗಡ್ಡೆಯನ್ನು ಬಿಸಿ ಮಾಡಿದಾಗ …………..
  2. ನೀರನ್ನು ಬಿಸಿ ಮಾಡಿದಾಗ …………….
  3. ನೀರಾವಿಯನ್ನು ತಂಪು ಮಾಡಿದಾಗ …………..
  4. ನೀರನ್ನು ಪೂರ್ತಿ ತಂಪು ಮಾಡಿದಾಗ ……………

ಒಂದು ದ್ರವ್ಯವು ಉಷ್ಣದಿಂದಾಗಿ ತನ್ನ ಸ್ಥಿತಿಯನ್ನು ಬಿಟ್ಟು ಬೇರೆ ಸ್ಥಿತಿಗೆ ಬದಲಾಗುವುದಕ್ಕೆ ವಸ್ತುವಿನ ಸ್ಥಿತಿ ಬದಲಾವಣೆ ಎನ್ನುತ್ತಾರೆ.

ಅನೇಕ ವಸ್ತುಗಳು ಉಷ್ಣದಿಂದಾಗಿ ಘನ ಸ್ಥಿತಿಯಿಂದ ದ್ರವ ಸ್ಥಿತಿಗೆ ಬದಲಾವಣೆಯಾಗುತ್ತವೆ. ದ್ರವ್ಯದ ಮೇಲೆ ಉಷ್ಣದ ಪರಿಣಾಮ ಬೀರುವಾಗ ಉಷ್ಣತೆಯ ಮಟ್ಟವನ್ನು ಅವಲಂಬಿಸಿರುತ್ತದೆ. ಉಷ್ಣದ ಏರಿಕೆಯಿಂದ ಘನ ದ್ರವವಾಗಿ, ದ್ರವ ಅನಿಲವಾಗುತ್ತದೆ. ಹಾಗೆಯೇ ತಂಪುಗೊಳಿಸಿದಾಗ ಅನಿಲ ದ್ರವವಾಗಿ, ದ್ರವ ಘನವಾಗುತ್ತದೆ.

ವಸ್ತುಗಳನ್ನು ಬಿಸಿಮಾಡಿದಾಗ ಅವು ಹಿಗ್ಗುತ್ತವೆ ಎಂಬುದನ್ನು ಹಿಂದಿನ ಪ್ರಯೋಗದಿಂದ ನೀನು ತಿಳಿದಿರುವೆ.

ಉಷ್ಣವು ಒಂದು ವಸ್ತುವಿನಿಂದ ಮತ್ತೊಂದು ವಸ್ತುವಿಗೆ ವರ್ಗಾವಣೆ ಆಗುತ್ತದೆ. ಉದಾಹರಣೆ : ಬಟ್ಟೆಗಳನ್ನು ಇಸ್ತ್ರಿ ಮಾಡುವುದು.

ಉಷ್ಣದಿಂದ ವಸ್ತುವಿನಲ್ಲಾದ ಬದಲಾವಣೆಗಳಿಗೆ ಉದಾಹರಣೆ ಬರೆ.

…………………………………………………………………………………………………………………………………………………..

ಉತ್ಪತನ :

ಉಷ್ಣದಿಂದ ಘನ ವಸ್ತುಗಳು ಮೊದಲು ದ್ರವ ಸ್ಥಿತಿಗೆ, ನಂತರ ದ್ರವ ಸ್ಥಿತಿಯಿಂದ ಅನಿಲಸ್ಥಿತಿಗೆ ಬದಲಾಗುತ್ತವೆ. ಹಾಗೆ ಕೆಲವು ವಸ್ತುಗಳನ್ನು ತಂಪು ಮಾಡಿದಾಗ ಆವಿ ಅಥವಾ ಅನಿಲ ಸ್ಥಿತಿಯ ವಸ್ತುಗಳು ಮೊದಲು ದ್ರವ ಸ್ಥಿತಿಗೆ ಬಂದು ನಂತರ ಘನಸ್ಥಿತಿಗೆ ಬದಲಾಗುತ್ತವೆ ಎಂದು ನಿನಗೆ ತಿಳಿದಿದೆ. ಆದರೆ ಕೆಲವು ಘನವಸ್ತುಗಳು ಉಷ್ಣದಿಂದ ದ್ರವಸ್ಥಿತಿಗೆ ಬದಲಾಗುತ್ತವೆ. ಘನ ಸ್ಥಿತಿಯ ವಸ್ತುಗಳು ನೇರವಾಗಿ ಅನಿಲಸ್ಥಿತಿಗೆ ಮತ್ತು ಅನಿಲ ಸ್ಥಿತಿಯಿಂದ ನೇರವಾಗಿ ಘನ ಸ್ಥಿತಿಗೆ ವಸ್ತು ಬದಲಾಗುವುದನ್ನು ಉತ್ಪತನ ಎನ್ನುವರು.
ಉದಾಹರಣೆ : ಕರ್ಪೂರ, ಅಯೋಡಿನ್.

ರಾಶಿ

ಒಂದು ವಸ್ತುವಿನಲ್ಲಿ ಅಡಕವಾಗಿರುವ ಕಣಗಳ ಮೊತ್ತವನ್ನು ರಾಶಿ (ದ್ರವ್ಯರಾಶಿ) ಎನ್ನುವರು. ಇದನ್ನು ತೂಕದ ಮುಖಾಂತರ ತಿಳಿಯಲಾಗುವುದು. ರಾಶಿಯ ಅಂತಾರಾಷ್ಟ್ರೀಯ ಮಾನ ಕಿಲೊಗ್ರಾಮ್ (kg)

ಓದಿ-ತಿಳಿ

1000 mg = 1 g

1000 g = 1 kg

100 kg = 1 quintal

1000 kg = 1 ton

ಸಾಂದ್ರತೆ

ಹತ್ತಿಯು ಹಗುರವಾಗಿದೆ ಮತ್ತು ಕಬ್ಬಿಣವು ಭಾರವಾಗಿದೆ – ಎಂದು ಸಾಮಾನ್ಯವಾಗಿ ಹೇಳಲು ಕಾರಣವೇನು? ಇಲ್ಲಿ ಬರೆ.

………………………………………………………………………………………………………………………………………………………………………..

ಸಮಗಾತ್ರದ ಎರಡು ವಸ್ತುಗಳನ್ನು ತೂಕ ಮಾಡಿದಾಗ ಒಂದರ ತೂಕ ಹೆಚ್ಚಾಗಿ ಮತ್ತೊಂದರ ತೂಕ ಕಡಿಮೆಯಾಗಿ ಕಾಣಬಹುದು. ತೂಕ ಕಡಿಮೆ ಇರುವ ವಸ್ತುವಿನ ಸಾಂದ್ರತೆ ಕಡಿಮೆ ಎಂತಲೂ, ಹೆಚ್ಚು ತೂಕವಿರುವ ವಸ್ತುವಿನ ಸಾಂದ್ರತೆ ಹೆಚ್ಚು ಎಂತಲೂ ಹೇಳುತ್ತೇವೆ.

ಆಲೋಚಿಸು : 1 kg ಹತ್ತಿ ಮತ್ತು 1 kg ಕಬ್ಬಿಣ – ಇವುಗಳಲ್ಲಿ ಯಾವುದು ಹೆಚ್ಚಿನ ಭಾರ ಹೊಂದಿದೆ?

ಒಂದು ವಸ್ತುವಿನ ಏಕಮಾನ ಗಾತ್ರದಲ್ಲಿರುವ ರಾಶಿಯೇ ಸಾಂದ್ರತೆ. ಸಾಮಾನ್ಯವಾಗಿ ಅನಿಲ ವಸ್ತುವಿಗಿಂತ ದ್ರವ ವಸ್ತುವಿನ ಸಾಂದ್ರತೆಯು ಮತ್ತು ದ್ರವ ವಸ್ತುವಿಗಿಂತ ಘನ ವಸ್ತುವಿನ ಸಾಂದ್ರತೆಯು ಹೆಚ್ಚಿರುತ್ತದೆ.

1 ಘನ cm ಗಾತ್ರದಲ್ಲಿನ ವಸ್ತುವಿನ ರಾಶಿಯನ್ನು (g ನಲ್ಲಿ ತೂಕ) ಆ ವಸ್ತುವಿನ ಸಾಂದ್ರತೆ ಎನ್ನುವರು. ಸಾಂದ್ರತೆಯ ಅಂತಾರಾಷ್ಟ್ರೀಯ ಮಾನ kg/m3 (ಕಿಲೊಗ್ರಾಂ / ಕ್ಯೂಬಿಕ್ ಮೀಟರ್).

ಒತ್ತಡ

ಬ್ಲೇಡ್‍ನ ರಾಶಿ ಒಂದೇ ಇದ್ದರೂ, ಸಮಾನಾಂತರವಾಗಿ ಇರಿಸಿದಾಗ ತೇಲಿ, ಪಾತಳಿಗೆ ಲಂಬವಾಗಿ ಇರಿಸಿದಾಗ ಮುಳುಗುತ್ತದೆ.

ಬ್ಲೇಡನ್ನು ಸಮಾನಾಂತರವಾಗಿ ಇರಿಸಿದಾಗ ಅದರ ರಾಶಿ ಜಾಸ್ತಿ ಜಾಗದಲ್ಲಿ ಹರಡಿಕೊಳ್ಳುತ್ತದೆ. ಇಲ್ಲಿ ಮೂಲಮಾನ ವಿಸ್ತೀರ್ಣಕ್ಕೆ ಬೀಳುವ ರಾಶಿಯು ಕಡಿಮೆ ಇರುತ್ತದೆ. ಆದ್ದರಿಂದ ತೇಲುತ್ತದೆ.

ಬ್ಲೇಡನ್ನು ಪಾತಳಿಗೆ ಲಂಬವಾಗಿ ಇರಿಸಿದಾಗ ಅದು ಮುಳುಗುತ್ತದೆ. ರಾಶಿಯು ಸಣ್ಣ ಜಾಗದಲ್ಲಿ ಹರಡಿಕೊಳ್ಳುವುದರಿಂದ ಅದು ಮುಳುಗುತ್ತದೆ. ಇಲ್ಲಿ ಪರಿಣಾಮವು ಏಕಮಾನ ವಿಸ್ತೀರ್ಣದ ಮೇಲಿರುವ ರಾಶಿಯನ್ನು ಅವಲಂಬಿಸಿರುತ್ತದೆ. ಇದನ್ನೆ ಒತ್ತಡ ಎನ್ನುತ್ತೇವೆ. ಒಂದು ಏಕಮಾನ ಪ್ರದೇಶದ ಮೇಲೆ ಪ್ರಯೋಗಿಸಲ್ಪಡುವ ಬಲವೇ ಒತ್ತಡ.

ವಸ್ತು ನೀರಿಗೆ ಬಿದ್ದಾಗ, ಅದು ಕೆಳಮುಖ ಬಲವನ್ನು ಪ್ರಯೋಗಿಸುತ್ತದೆ. ಅದೇ ಸಮಯದಲ್ಲಿ ನೀರು ವಸ್ತುವಿನ ಮೇಲೆ ಮೇಲ್ಮುಖ ಬಲ ಪ್ರಯೋಗಿಸುತ್ತದೆ. ಮೇಲ್ಮುಖ ತಳ್ಳುಬಲ ಜಾಸ್ತಿಯಾದರೆ ವಸ್ತುವು ನೀರಿನ ಮೇಲೆ ತೇಲುತ್ತದೆ. ಈ ಮೇಲ್ಮುಖವಾಗಿ ತಳ್ಳುವ ಬಲಕ್ಕೆ ಪ್ಲವನತೆ ಎನ್ನುವರು.

ನೀರಿನ ಮೇಲೆ ತೇಲುವ ಯಾವುದಾದರೂ ನಾಲ್ಕು ವಸ್ತುಗಳ ಹೆಸರು ಬರೆ.

  1. ___________ 2. ___________
  2. ___________ 4. ___________

ಹಲವು ವಸ್ತುಗಳು ನೀರಿನಲ್ಲಿ ತೇಲುತ್ತವೆ. ಹಾಗೆಯೇ ಹಲವು ನೀರಿನಲ್ಲಿ ಮುಳುಗುತ್ತವೆ.

ಆಲೋಚಿಸು :
∙ ತೆಪ್ಪವು ನೀರಿನಲ್ಲಿ ಮುಳುಗುವುದಿಲ್ಲ. ಏಕೆ?
∙ ಮರದ ಹಲಗೆಯನ್ನು ಯಾವುದರ ಸಹಾಯದಿಂದ ನೀರಿನಲ್ಲಿ ಮುಳುಗಿಸಿ ಇಡುತ್ತಾರೆ? ಏಕೆ?

ಕೆಲವು ವಸ್ತುಗಳು ನೀರಿನಲ್ಲಿ ಕರಗುತ್ತವೆ. ಇದನ್ನು ವಿಲೀನತೆ ಎನ್ನಲಾಗುವುದು. ಇನ್ನು ಕೆಲವು ವಸ್ತುಗಳು ನೀರಿನಲ್ಲಿ ಕರಗುವುದಿಲ್ಲ.

ಕಣಗಳ ಜೋಡಣೆಯನ್ನು ಆಧರಿಸಿ ದ್ರವ್ಯವನ್ನು ಘನ, ದ್ರವ ಮತ್ತು ಅನಿಲ ಎಂಬ ಮೂರು ಭೌತಿಕ ಸ್ಥಿತಿಗಳಲ್ಲಿ ಗುರುತಿಸುತ್ತೇವೆ. ಇದಲ್ಲದೆ ದ್ರವ್ಯವನ್ನು ಧಾತುಗಳು ಸಂಯುಕ್ತಗಳು ಮತ್ತು ಮಿಶ್ರಣಗಳೆಂದು ವಿಂಗಡಿಸಬಹುದು. ಈ ವರ್ಗೀಕರಣದ ಬಗ್ಗೆ ನೀನು ಮುಂದಿನ ಪಾಠದಲ್ಲಿ ತಿಳಿಯುವೆ.

ಸಂವೇದ ವಿಡಿಯೋ ಪಾಠಗಳು

Samveda – 5th – EVS – Vastu Swaroopagalu (Part 1 of 2) 

Samveda – 5th – EVS – Vastu Swarupa (Part 2 of 2)

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.