ಮೆರವಣಿಗೆ – ಪಾಠ – 6

ಪ್ರವೇಶ : ನೂರಾರು ಕೈಗಳು ಸೇರಿದರೆ ಒಂದು ಮಹತ್ಕಾರ್ಯ ಸಾಧ್ಯವಾಗುತ್ತದೆ. ಸಾರ್ವಜನಿಕ ಕಾರ್ಯಗಳಲ್ಲಿ ಎಲ್ಲರೊಟ್ಟಿಗೆ ಬೆರೆತಾಗ ನಾವು ಸಮಾಜಜೀವಿ ಎನಿಸಿಕೊಳ್ಳುತ್ತೇವೆ. ಜವಾಬ್ದಾರಿ ಹೊರಲು ಸದಾ ಸಿದ್ಧರಾಗಿರಬೇಕು. ಹೊತ್ತ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಆಗ ಆ ಕಾರ್ಯ ಯಶಸ್ವಿಯಾಗುತ್ತದೆ. ಉತ್ತಮ ಕಾರ್ಯಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಆ ಮೂಲಕ ಅಳಿಲು ಸೇವೆಯ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಸಾಧ್ಯವಾಗುತ್ತದೆ.

ಅದೊಂದು ಭಾನುವಾರ. ಶಾಲೆಯ ಬಾಗಿಲು ತೆರೆದಿತ್ತು. ವಿದ್ಯಾರ್ಥಿಗಳೂ ಶಿಕ್ಷಕರೂ ಯುವಕ ಯುವತಿಯರೂ ಊರಿನ ಹಿರಿಯರೂ ಸೇರಿದರು. ಬರುವುದು ತಡವಾಯಿತಲ್ಲ ಎಂದು ಹಂಪಣ್ಣನೂ ಓಡಿ ಬಂದನು. ಎಲ್ಲರೂ ಶಾಲೆಯ ಅಂಗಳದ ಮರದ ಕೆಳಗೆ ಸೇರಿದರು.

ಸಭೆ ಪ್ರಾರಂಭವಾಯಿತು. ಶಿಕ್ಷಕರು ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕಿಯರು ಸಭೆ ಕರೆದ ಉದ್ದೇಶವನ್ನು ತಿಳಿಸಿದರು. “ಎಲ್ಲರೂ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕು” ಎಂದು ಕೋರಿದರು. ಮತ್ತೊಬ್ಬ ಶಿಕ್ಷಕರು ಆಗಬೇಕಾದ ಸಿದ್ಧತೆಗಳ ಪಟ್ಟಿಯನ್ನು ಓದಿದರು. “ಇದರಂತೆ ಎಲ್ಲವೂ ಆಗಬೇಕಾಗಿದೆ. ದಯವಿಟ್ಟು ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಎಂದು ಮನವಿ ಮಾಡಿದರು. ಹಂಪಣ್ಣ “ಆಯ್ತು ಸಾರ್” ಎಂದು ಕೂಗಿದನು.

ಶಿಕ್ಷಕರು ತಯಾರಿಸಿದ ಯೋಜನೆ, ಅವರ ಕಾಳಜಿ ಎಲ್ಲರಿಗೂ ಮೆಚ್ಚುಗೆಯಾಯಿತು. ಎಲ್ಲರೂ ಉತ್ಸುಕರಾದರು. ತಾವು ಯಾವ ಕೆಲಸ ಮಾಡುವುದು? ಎಂದು ಯೋಚಿಸಿದರು. ಸಂಗಡಿಗರೊಂದಿಗೆ ಮಾತನಾಡಿಕೊಳ್ಳಲು ಶುರು ಮಾಡಿದರು. ಸ್ವಲ್ಪ ಸಮಯದ ಅನಂತರ ಮಾತುಗಳು ಕಡಿಮೆಯಾದವು. ಆಗ ಊರಿನ ಹಿರಿಯರೊಬ್ಬರು “ಯಾರು ಯಾರು ಯಾವ ಯಾವ ಸಿದ್ಧತೆಗಳನ್ನು ನಿರ್ವಹಿಸುತ್ತೀರಿ? ಹೇಳಿರಿ” ಎಂದರು.

ಕ್ರೀಡಾಮಂತ್ರಿ ಹಬೀಬ್ “ವಾದ್ಯದ ಜವಾಬ್ದಾರಿಯನ್ನು ನಮ್ಮ ತರಗತಿಯವರು ನಿರ್ವಹಿಸುತ್ತಾರೆ” ಎಂದನು. ಶಿಕ್ಷಣ ಮಂತ್ರಿ ಡೀನಾ, “ನಮ್ಮ ತರಗತಿಯವರು ಘೋಷಣಾ ಫಲಕಗಳನ್ನು ಸಿದ್ಧಪಡಿಸುತ್ತೇವೆ” ಎಂದಳು.

ದೊಡ್ಡೇಶನು, “ಕವಿಗಳ ಚಿತ್ರ ನಮ್ಮ ತರಗತಿಯವರದು” ಎಂದನು. “ಹಾಡು ಮತ್ತು ನೃತ್ಯಕ್ಕೆ ಸಾಂಸ್ಕೃತಿಕ ಸಂಘದವರು ತಯಾರಾಗುತ್ತಾರೆ” ಎಂದಳು ಮಯೂರಿ. “ಚಿಕ್ಕಮಕ್ಕಳಿಗೆ ವೇಷಭೂಷಣಗಳನ್ನು ನಾವು ತೊಡಿಸುತ್ತೇವೆ” ಎಂದನು ಪಿಂಟೋ. “ಆರತಿಯನ್ನು ನಾವು ಹಿಡಿಯುತ್ತೇವೆ” ಎಂದಳು ಉನ್ನತಿ. “ಪೂರ್ಣಕುಂಭ ನಾವು ಹೊರುತ್ತೇವೆ” ಎಂದಳು ಡಾಲಿ. “ಮಂಟಪದ ಅಲಂಕಾರ ನಮಗಿರಲಿ” ಎಂದರು ಯುವಕ ಸಂಘದವರು. “ಕೋಲಾಟ ಮತ್ತು ಡೊಳ್ಳು ಕುಣಿತ ನಾವು ಮಾಡುತ್ತೇವೆ” ಎಂದರು ಯುವತಿ ಮಂಡಲಿಯವರು. ಎಲ್ಲೆಡೆ ತೋರಣ ಹಾಕಿಸುವ ಮತ್ತು ಎಲ್ಲರಿಗೂ ಉಪಾಹಾರ ಕೊಡಿಸುವ ಜವಾಬ್ದಾರಿಯನ್ನು ಊರಿನ ಹಿರಿಯರು ವಹಿಸಿಕೊಂಡರು.

ಶಿಕ್ಷಕರು ಯೋಜನೆಯ ಪಟ್ಟಿಯಲ್ಲಿ ಜವಾಬ್ದಾರಿ ಹೊತ್ತುಕೊಂಡವರ ಹೆಸರುಗಳನ್ನು ಬರೆದುಕೊಂಡರು. ನಾನೇನು ಮಾಡ್ಲಿ ಸಾರ್ ಎಂದು ಎದ್ದು ನಿಂತ ಹಂಪಣ್ಣ ಕೇಳಿದ. ಏ, ನೀ ನಮ್ಮ ತಂಡದಲ್ಲಿ ಇದ್ದೀಯಾ ಬ್ಯಾಂಡ್ ಬಾರಿಸೋಕೆ ಎಂದನು ಹಬೀಬ್. ಹಂಪಣ್ಣನಿಗೆ ಖುಷಿಯಾಯಿತು. ಯೋಜನೆಯಂತೆ ಎಲ್ಲ ಕಾರ್ಯಗಳೂ ಹಂಚಿಕೆಯಾಗಿದ್ದವು. ಶಿಕ್ಷಕರು ಸಂತಸಗೊಂಡರು. ಪ್ರತಿಯೊಂದು ತಂಡದ ಬಳಿಗೆ ತೆರಳಿ ಸೂಚನೆಗಳನ್ನು ನೀಡಲು ಪ್ರಾರಂಭಿಸಿದರು.

“ಮೊದಲ ತಂಡ ವಾದ್ಯದವರದ್ದು. ಹಬೀಬ್, ನಿಮ್ಮ ತಂಡದಲ್ಲಿ ಹತ್ತು ಜನರಿರಲಿ. ಬೇಸ್ ಡ್ರಂ ಮತ್ತು ಸೈಡ್ ಡ್ರಂ ಬಾರಿಸಲು ಒಬ್ಬೊಬ್ಬರಿರಲಿ. ತುತ್ತೂರಿ, ತಾಳ ಇತ್ಯಾದಿಗಳಿಗೆ ಇಬ್ಬಿಬ್ಬರಿರಲಿ. ಎಲ್ಲರೂ ಒಂದೇ ರೀತಿಯ ವಸ್ತ್ರ ಧರಿಸಿರಬೇಕು. ತುತ್ತೂರಿಯವರು ಮುಂದೆ ಇದ್ದು ಒಂದೊಂದೇ ಹೆಜ್ಜೆ ಹಾಕಬೇಕು. ಒಂದೇ ವೇಗದಲ್ಲಿ ಸಾಗಬೇಕು. ಊರಿನ ಕೆಲವು ಸ್ಥಳಗಳಲ್ಲಿ ನೃತ್ಯ ತಂಡದವರು ನೃತ್ಯ ಮಾಡುವಾಗ ವಾದ್ಯ ನುಡಿಸುವುದನ್ನು ನಿಲ್ಲಿಸಬೇಕು” ಎಂದರು ಶಿಕ್ಷಕರು. ಹಬೀಬ್, “ಹಾಗೆಯೇ ಆಗಲಿ ಸಾರ್” ಎಂದನು. ಹಂಪಣ್ಣ “ನಾನು ಸೈಡ್ ಡ್ರಂ” ಎಂದನು. ಅದಕ್ಕೆ ಶಿಕ್ಷಕರು, ಆಯ್ತು. ಅದು ಹರಿದು ಹೋಗದಂತೆ ಬಾರಿಸು ಎಂದರು. ಎಲ್ಲರೂ ನಕ್ಕರು.

“ಈಗ ಎರಡನೆಯ ಸಿದ್ಧತೆ. ಘೋಷಣಾ ಫಲಕಗಳು. ಹಾಂ! ಡೀನಾ, ನಿಮ್ಮ ತರಗತಿಯವರಲ್ಲವೇ? ಎಂಟರಿಂದ ಹನ್ನೆರಡು ಜನರಿರಲಿ. ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ಫಲಕವಿರಲಿ. ಅವು ಎರಡು ಅಡಿ ಉದ್ದ ಒಂದು ಅಡಿ ಅಗಲ ಇರಲಿ. ಫಲಕಗಳನ್ನು ಗಟ್ಟಿಯಾದ ರಟ್ಟಿನಿಂದ ತಯಾರಿಸಿರಿ. ಕೋಲಿಗೆ ಭದ್ರವಾಗಿ ಕಟ್ಟಿರಬೇಕು. ಫಲಕಗಳು ಸಿದ್ಧವಾದ ಮೇಲೆ ಏನು ಬರೆಯಬೇಕೆಂದು ಹೇಳುತ್ತೇವೆ. ನೀವು ವಾದ್ಯದವರ ಹಿಂದೆ ಹಿಂದೆ ಹೆಜ್ಜೆ ಹಾಕಬೇಕು. ಎಲ್ಲರೂ ಒಂದೇ ರೀತಿಯ ಉಡುಪು ಧರಿಸಿರಿ. ಹಾಗೆಯೇ ಅಲಂಕಾರವೂ ಕೂಡ ಇರಲಿ. ಆಗಬಹುದೆ?” ಎಂದರು ಶಿಕ್ಷಕರು. ಡಾಲಿ “ಆಗಲಿ ಸರ್” ಎಂದಳು. “ಸಾರ್, ಅವ್ರು ಹಾಕೋ ಡ್ರೆಸ್ಸೇ ನಾವು ಹಾಕಬೇಕಾ ಸಾರ್” ಎಂದನು ಹಂಪಣ್ಣ. “ಅಲ್ಲ ಕಣೋ, ಬಡಿಯುವವರಿಗೆ ಬೇರೆ” ಎಂದಳು ಸುಲೋಚನ. ಶಿಕ್ಷಕರು ಮುಗುಳ್ನಗುತ್ತ “ಬೇರೆ ಬೇರೆ ಇರಲಿ” ಎಂದರು.

ಹೀಗೆಯೇ ಶಿಕ್ಷಕರು ಆಯಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿದರು. ಅನಂತರ ಚರ್ಚೆಗೆ ಅವಕಾಶ ಕೊಟ್ಟರು. ಎಲ್ಲರೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿದರು. ಕೆಲವರಿಗೆ ಶಿಕ್ಷಕರು ಮತ್ತೆ ಮತ್ತೆ ವಿವರಣೆ ನೀಡಿದರು. ಹಂಪಣ್ಣ ಎಲ್ಲ ವಿಚಾರಗಳಲ್ಲೂ ಮೂಗು ತೂರಿಸುವುದು ಮರೆಯಲಿಲ್ಲ. ಶಿಕ್ಷಕಿಯರು ಎಲ್ಲರಿಗೂ ವಂದನೆ ಸಲ್ಲಿಸಿದರು. ಎರಡು ಭಾನುವಾರಗಳಲ್ಲಿ ಇಲ್ಲಿಯೇ ಅಭ್ಯಾಸ ನಡೆಸೋಣ ಎಂದರು. ಆಗಲೇ ಎಲ್ಲರೂ ತಮ್ಮ ತಮ್ಮ ಸಿದ್ಧತೆಗಳ ಕುರಿತು ಉತ್ಸಾಹದಲ್ಲಿದ್ದರು.

ಯೋಜನೆಯಂತೆ ಎಲ್ಲವೂ ನಡೆಯಿತು. ನವೆಂಬರ್-1 ಬಂದೇ ಬಿಟ್ಟಿತು! ಶಿಕ್ಷಕರ ಸೂಚನೆಯಂತೆ ಎಲ್ಲ ತಂಡದವರೂ ಮೆರವಣಿಗೆಗೆ ಸಿದ್ಧವಾಗಿ ಬಂದರು. ಆದರೆ “ಭುವನೇಶ್ವರಿ ಎಲ್ಲಿ? ಕರ್ನಾಟಕ ಮಾತೆ ಭುವನೇಶ್ವರಿ ಎಲ್ಲಿ?”-ಎಲ್ಲರೂ ಪರಸ್ಪರ ಮಾತನಾಡಿಕೊಂಡರು. ನೋಡುನೋಡುತ್ತಿದಂತೆಯೇ ಮುಚ್ಚಿದ್ದ ಅಧ್ಯಾಪಕರ ಕೊಠಡಿಯ ಬಾಗಿಲು ತೆರೆಯಿತು. ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಮೆಚ್ಚಿನ ಹಸೀನಾ ಕರ್ನಾಟಕ ಮಾತೆ ಭುವನೇಶ್ವರಿಯಾಗಿ ಕೊಠಡಿಯಿಂದ ಹೊರಬಂದು ರಥವೇರಿ ನಿಂತಳು! ಮೆರವಣಿಗೆ ಹೊರಟಿತು. ಎಲ್ಲರೂ “ಕರ್ನಾಟಕ ಮಾತೆ ಭುವನೇಶ್ವರಿಗೆ ಜಯವಾಗಲಿ” ಎಂದರು. “ಎಂಥ ಅಪೂರ್ವ ದೃಶ್ಯ! ನೋಡಲು ಎರಡು ಕಣ್ಣುಗಳು ಸಾಲವು. ಯಾವ ದಸರೆಗೂ ಕಡಿಮೆ ಇಲ್ಲ” ಎಂದು ಜನರು ಮಾತನಾಡುತ್ತಿದ್ದರು. ಕೆಲವರಿಗೆ ಮಾತೇ ಹೊರಡಲಿಲ್ಲ. ಇನ್ನು ಕೆಲವರು ಅಬ್ಬಬ್ಬಾ! ಎಂದು ಬೆರಗಾದರು. ಹಂಪಣ್ಣನಿಗೆ ಎಲ್ಲರೂ ತನ್ನನ್ನು ನೋಡಬೇಕೆಂಬ ಆಸೆ. ವಿವಿಧ ಭಂಗಿಯಲ್ಲಿ ಬ್ಯಾಂಡ್ ಬಾರಿಸಿದ. ಬೀಗುತ್ತಾ ಹೆಜ್ಜೆ ಹಾಕಿದ.

ಭವ್ಯ ಮೆರವಣಿಗೆ ವಿಜೃಂಭಣೆಯಿಂದ ಸಾಗಿದೆ. ತಾಯಿ ಭುವನೇಶ್ವರಿಯ ಭವ್ಯತೆಗೆ ಜನರೆಲ್ಲ ಕೈ ಮುಗಿಯುತ್ತಿದ್ದಾರೆ. ಮನಸಾರೆ ನಮಿಸುತ್ತಿದ್ದಾರೆ. ತಾಯಿ ನಗುತ್ತ ಎಲ್ಲರನ್ನೂ ಹರಸುತ್ತಿದ್ದಾಳೆ…. ಮೆರವಣಿಗೆ ಸಾಗಿದೆ…… ಸಾಗಿದೆ… ಸಾಗುತ್ತಲೇ ಇದೆ……

ಪದಗಳ ಅರ್ಥ

ತಡ – ನಿಧಾನ, ವಿಳಂಬ.
ಸಲಹೆ – ಅಭಿಪ್ರಾಯ, ಆಲೋಚನೆ.
ಸೂಚನೆ – ತಿಳಿಸುವಿಕೆ, ಸೂಚಿಸುವಿಕೆ.
ಕೋರು – ಕೇಳಿಕೊಳ್ಳು, ಬೇಡು.
ಸಿದ್ಧತೆ – ತಯಾರು, ಸಜ್ಜು.
ಪಟ್ಟಿ – ಯಾದಿ, ವಿವರಣೆಯ ಬರೆಹ.
ನಿರ್ವಹಿಸು – ನಿಭಾಯಿಸು, ಪೂರೈಸು.
ಅಲಂಕಾರ – ಸಿಂಗಾರ, ಸೊಗಸು.
ಹಂಚಿಕೆ – ಹಂಚುವಿಕೆ, ಪಾಲು ಮಾಡುವಿಕೆ.
ಬಡಿ – ಬಾರಿಸು, ಪೆಟ್ಟು ಹಾಕು. ಹೆಜ್ಜೆ
ಹಾಕು – ಚಲಿಸು, ನಡೆ.
ಅನಿಸಿಕೆ – ಅಭಿಪ್ರಾಯ, ಅಭಿಮತ.
ಭಂಗಿ – ಹಾವಭಾವ, ವಿನ್ಯಾಸ.
ಬೀಗು – ಉಬ್ಬು, ಹೆಮ್ಮೆತಾಳು.
ಭವ್ಯ – ವಿಜೃಂಭಣೆ, ವೈಭವ.

ವಿವರ ತಿಳಿಯಿರಿ:

ಸಕ್ರಿಯವಾಗಿ : ಚಟುವಟಿಕೆಯಿಂದ ಕೂಡಿ, ಕ್ರಿಯಾತ್ಮಕವಾಗಿ.
ಯೋಜನೆ : ಕರ್ತವ್ಯಗಳ ರೂಪುರೇಷೆಯ ಸಿದ್ಧತೆ.
ವಾದ್ಯ : ಧ್ವನಿ ಮಾಡುವ ಉಪಕರಣಗಳು, ನುಡಿಸುವ ಸಾಧನ.
ಸಾಂಸ್ಕೃತಿಕ ಸಂಘ : ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಕಟ್ಟಿಕೊಂಡ ಸಮಿತಿ.
ಮೂಗು ತೂರಿಸುವುದು : ವಿಚಾರಗಳ ಬಗ್ಗೆ ಅನಗತ್ಯ ಅಭಿಪ್ರಾಯ ಹೇಳುವುದು.
ವೇಷಭೂಷಣ : ಉಡುಗೆ ತೊಡುಗೆಯ ಅಲಂಕಾರ.
ಪೂರ್ಣಕುಂಭ : ಮಂಗಳ ಸೂಚಕವಾಗಿ ಬಳಸುವ ನೀರು ತುಂಬಿದ ಕೊಡ.
ಯುವತಿ ಮಂಡಲ : ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಿದ ತರುಣಿಯರ ಸಂಘ.
ಪೂರ್ವಪ್ರದರ್ಶನ : ಅಭ್ಯಾಸ ಮಾಡಿದ್ದನ್ನು ನಿಗದಿತ ಕಾರ್ಯಕ್ರಮಕ್ಕೆ ಮುಂಚಿತವಾಗಿ ತೋರಿಸುವುದು.

ಸಂವೇದ ವಿಡಿಯೋ ಪಾಠಗಳು

Samveda – 6th – Kannada – Meravanige (Part 1 of 2)

Samveda – 6th – Kannada – Meravanige (Part 2 of 2)

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವ್ಯಾಕರಣ ಮಾಹಿತಿ

ಕರ್ತೃ, ಕರ್ಮ, ಕ್ರಿಯಾಪದ.

ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಗಮನಿಸಿ ಓದಿರಿ.
ಪ್ರಸಾದನು ಮುಖ ಕೈಕಾಲು ತೊಳೆದುಬಂದನು.
ಅಬ್ದುಲ್ಲನು ಪಾತ್ರೆಗಳನ್ನು ಮಾರಿದನು.
ಗಿಳಿಯು ಹಣ್ಣನ್ನು ತಿಂದಿತು.

ಇಲ್ಲಿ ‘ಪ್ರಸಾದ,’ ‘ಅಬ್ದುಲ್ಲ,’ ‘ಗಿಳಿ’ ಎಂಬ ಪದಗಳು ಕೆಲಸಮಾಡುವವರು ‘ಯಾರು’ ಎಂಬುದನ್ನು ಸೂಚಿಸುತ್ತವೆ. ಇವು ಕರ್ತೃಪದಗಳು.

‘ಮುಖ ಕೈಕಾಲು,’ ‘ಪಾತ್ರೆಗಳನ್ನು,’ ‘ಹಣ್ಣನ್ನು’ ಎಂಬ ಪದಗಳು ಆಯಾ ಕೆಲಸಕ್ಕೆ ಪೂರಕವಾಗಿ ಏನನ್ನು ಎಂಬ ಪ್ರಶ್ನೆಯನ್ನು ಎತ್ತುತ್ತವೆ. ಇವು ಕರ್ಮ ಪದಗಳು.

‘ತೊಳೆದು ಬಂದನು,’ ‘ಮಾರಿದನು,’ ‘ತಿಂದಿತು’ ಎಂಬ ಪದಗಳು ಯಾವ ಕೆಲಸ ಎಂಬುದನ್ನು ಹೇಳುತ್ತವೆ. ಇವು ಕ್ರಿಯಾಪದಗಳು.

ಅಂದರೆ ಇಲ್ಲಿ ಕ್ರಮವಾಗಿ- ‘ಬರುವ’ ‘ಮಾರುವ’ ‘ತಿನ್ನುವ’ ಕೆಲಸವನ್ನು ಇವು ತಿಳಿಸುತ್ತವೆ. ಕೆಲಸವನ್ನು ತಿಳಿಸುವ ಪದಗಳು ಕ್ರಿಯಾಪದಗಳು. (ಕೆಲಸ = ಕ್ರಿಯೆ) ಆ ಕ್ರಿಯೆಗೆ ಸಂಬಂಧಿಸಿದಂತೆ ಏನನ್ನು’ ಎಂಬುದನ್ನು ಸೂಚಿಸುವ ಪದಗಳು ಕರ್ಮಪದಗಳು. ಆ ಕ್ರಿಯೆಯನ್ನು ಮಾಡುತ್ತಿರುವವರುಯಾರು’ ಇಲ್ಲವೇ `ಯಾವುದು’ ಎಂಬುದನ್ನು ಸೂಚಿಸುವ ಪದಗಳು ಕರ್ತೃಪದಗಳು.

ಇದಕ್ಕೆ ಪೂರಕವಾಗಿ ಇನ್ನೂ ಕೆಲವು ಉದಾಹರಣೆಗಳನ್ನು ಗಮನಿಸೋಣ:
ರೋಜಾಳು ಗೆಳತಿಯನ್ನು ಮೆಚ್ಚಿದಳು.
ಪಾರಿವಾಳವು ಕಾಳುಗಳನ್ನು ನೋಡಿತು.
ಗೆಳೆಯರು ಆಟವನ್ನು ಆಡಿದರು.

ವಾಕ್ಯ ರಚನೆಯಲ್ಲಿ ಇವು ಮೂರು ಅಂಶಗಳು ಮುಖ್ಯವೆನಿಸುತ್ತವೆ. ದೀರ್ಘ ವಾಕ್ಯಗಳಲ್ಲಿ ಈ ಮೂರು ಅಂಶಗಳನ್ನು ಕಂಡುಕೊಳ್ಳಲು ಅಭ್ಯಾಸ ಮಾಡಿರಿ.

ವ್ಯಾಕರಣ ವಿಡಿಯೋಗಳು

https://youtu.be/0OC27UfMMMY

Kannada grammar ಕತೃ, ಕರ್ಮ, ಕ್ರಿಯಾಪದ

https://youtu.be/Dsui7fu5joE

ಕತೃ೯,ಕಮ೯,ಕ್ರಿಯಾ ಪದ||ಕನ್ನಡ ವ್ಯಾಕರಣ||Kartru,karma,Kriyapad||KannadaGramma||ಕನ್ನಡ ವ್ಯಾಕರಣದ ಸುಲಭ ಟ್ರಿಕ್

ಯೋಜನೆ

ವಿವಿಧ ಸಂದರ್ಭದ ಮೆರವಣಿಗೆಯ ಚಿತ್ರಗಳನ್ನು ಸಂಗ್ರಹಿಸಿ ಆಲ್ಬಂ ತಯಾರಿಸಿರಿ.

ಪತ್ರಿಕೆಗಳಲ್ಲಿ ಬರುವ ಪದಬಂಧಗಳನ್ನು ಸಂಗ್ರಹಿಸಿ ಗುಂಪಿನಲ್ಲಿ ಪೂರ್ಣಗೊಳಿಸಿರಿ.

ಪೂರಕ ಓದು

ಜಂಬೂಸವಾರಿಯ ಕುರಿತಾದ ಲೇಖನಗಳನ್ನು ಓದಿರಿ.
ಒಟ್ಟಾಗಿ ಕೆಲಸಮಾಡಿ ಯಶಸ್ಸನ್ನು ಸಾಧಿಸಿದ ವಿಷಯಗಳನ್ನು ಕುರಿತು ಓದಿರಿ.
ಹಿರಿಯರ ಮಾತಿನಂತೆ ನಡೆದು ಪ್ರಗತಿ ಸಾಧಿಸಿದ ವ್ಯಕ್ತಿಗಳ ಕುರಿತು ಓದಿರಿ.

ಶುಭ ನುಡಿ

ಒಂದಾಗಿ ಶ್ರಮಿಸಿರಿ, ಸಂಭ್ರಮವನ್ನು ಪಡೆಯಿರಿ.
ಮಹತ್ಕಾರ್ಯದ ಸಾಧನೆಯ ಹಿಂದೆ ಪರಿಶ್ರಮವಿರುತ್ತದೆ.