ಭೌತ ಮತ್ತು ರಾಸಾಯನಿಕ ಬದಲಾವಣೆಗಳು – ಅಧ್ಯಾಯ – 6

ನಿಮ್ಮ ಸುತ್ತಮುತ್ತ ಪ್ರತಿದಿನವೂ ಅನೇಕ ಬದಲಾವಣೆಗಳನ್ನು ನೀವು ಕಾಣುವಿರಿ. ಈ ಬದಲಾವಣೆಗಳು ಒಂದು ಅಥವಾ ಹೆಚ್ಚು ಪದಾರ್ಥಗಳನ್ನು ಒಳಗೊಂಡಿರಬಹುದು. ಉದಾಹರಣೆಗೆ, ನಿಮ್ಮ ತಾಯಿ ತಂಪು ಪಾನೀಯವನ್ನು ತಯಾರಿಸಲು ಸಕ್ಕರೆಯನ್ನು ನೀರಿನಲ್ಲಿ ವಿಲೀನಗೊಳಿಸಲು ನಿಮಗೆ ಹೇಳಬಹುದು. ಸಕ್ಕರೆಯ ದ್ರಾವಣವನ್ನು ತಯಾರಿಸುವುದು ಒಂದು ಬದಲಾವಣೆ. ಹಾಗೆಯೇ ಹಾಲನ್ನು ಮೊಸರಾಗಿಸುವುದೂ ಒಂದು ಬದಲಾವಣೆ. ಕೆಲವೊಮ್ಮೆ ಹಾಲು ಹುಳಿಯಾಗುತ್ತದೆ. ಹಾಲು ಹುಳಿಯಾಗುವುದೂ ಒಂದು ಬದಲಾವಣೆ. ಹಿಗ್ಗಿಸಿದ ರಬ್ಬರ್ ಬ್ಯಾಂಡ್ ಕೂಡಾ ಒಂದು ಬದಲಾವಣೆಯನ್ನು ಸೂಚಿಸುತ್ತದೆ.

ನಿಮ್ಮ ಸುತ್ತಮುತ್ತಲೂ ನೀವು ಗಮನಿಸಿರುವ ಹತ್ತು ಬದಲಾವಣೆಗಳನ್ನು ಪಟ್ಟಿ ಮಾಡಿ.

ಈ ಅಧ್ಯಾಯದಲ್ಲಿ ನಾವು ಕೆಲವು ಚಟುವಟಿಕೆಗಳನ್ನು ಮಾಡಿ, ಈ ಬದಲಾವಣೆಗಳ ಸ್ವರೂಪವನ್ನು ಅಭ್ಯಸಿಸೋಣ. ಮುಖ್ಯವಾಗಿ ಈ ಬದಲಾವಣೆಗಳಲ್ಲಿ ಎರಡು ವಿಧಗಳಿವೆ –
i) ಭೌತ ಬದಲಾವಣೆ (physical change)
ii) ರಾಸಾಯನಿಕ ಬದಲಾವಣೆ (chemical change).

6.1 ಭೌತ ಬದಲಾವಣೆಗಳು

ಚಟುವಟಿಕೆ 6.1
ಒಂದು ಕಾಗದದ ಹಾಳೆಯನ್ನು ನಾಲ್ಕು ಚೌಕಾಕಾರದ ಭಾಗಗಳಾಗಿ ಕತ್ತರಿಸಿ. ಪ್ರತಿ ಚೌಕಾಕಾರದ ಭಾಗವನ್ನು ಪುನಃ ನಾಲ್ಕು ಚೌಕಾಕಾರದ ಭಾಗಗಳಾಗಿ ಕತ್ತರಿಸಿ. ಕಾಗದದ ಮೊದಲಿನ ಆಕಾರಕ್ಕೆ ಬರುವಂತೆ ಈ ಭಾಗಗಳನ್ನು ನೆಲದ ಮೇಲೆ ಅಥವಾ ಮೇಜಿನ ಮೆಲೆ ಹರಡಿ (ಚಿತ್ರ 6.1).

ಈ ಭಾಗಗಳನ್ನು ಸೇರಿಸಿ ನೀವು ಮೊದಲಿನ ಹಾಳೆಯನ್ನು ಮಾಡಲು ಸಾಧ್ಯವಿಲ್ಲ. ಆದರೆ ಕಾಗದದ ಗುಣದಲ್ಲಿ ಏನಾದರೂ ಬದಲಾವಣೆ ಆಗಿದೆಯೆ?

ಚಟುವಟಿಕೆ 6.2
ನಿಮ್ಮ ತರಗತಿಯ ಕರಿಹಲಗೆಯ ಸಮೀಪದಲ್ಲಿ, ನೆಲದಲ್ಲಿ ಬಿದ್ದಿರುವ ಸೀಮೆಸುಣ್ಣದ ಪುಡಿಯನ್ನು ಸಂಗ್ರಹಿಸಿ ಅಥವಾ ಸೀಮೆಸುಣ್ಣದ ಚೂರನ್ನು ಜಜ್ಜಿ ಪುಡಿಮಾಡಿ. ಸ್ವಲ್ಪ ನೀರನ್ನು ಸೇರಿಸಿ ಕಣಕ (paste) ವನ್ನು ತಯಾರಿಸಿ. ಇದನ್ನು ಉಂಡೆಮಾಡಿ ಸೀಮೆಸುಣ್ಣದ ಆಕಾರಕ್ಕೆ ತನ್ನಿ. ಇದನ್ನು ಒಣಗಲು ಬಿಡಿ.

ನೀವು ಪುಡಿಯಿಂದ ಸೀಮೆಸುಣ್ಣವನ್ನು ಪುನಃ ಪಡೆಯಲು ಸಾಧ್ಯವಾಯಿತೆ?

ಚಟುವಟಿಕೆ 6.3
ಒಂದು ಗಾಜಿನ ಅಥವಾ ಪ್ಲಾಸ್ಟಿಕ್‍ನ ಲೋಟದಲ್ಲಿ ಸ್ವಲ್ಪ ಮಂಜುಗಡ್ಡೆಯನ್ನು ತೆಗೆದುಕೊಳ್ಳಿ. ಈ ಲೋಟವನ್ನು ಬಿಸಿಲಿಗೆ ಇಟ್ಟು, ಮಂಜುಗಡ್ಡೆಯ ಸ್ವಲ್ಪ ಭಾಗವನ್ನು ಕರಗಿಸಿ. ಈಗ ನಿಮ್ಮ ಬಳಿ ಮಂಜುಗಡ್ಡೆ ಮತ್ತು ನೀರಿನ ಮಿಶ್ರಣವಿದೆ. ಈಗ ಈ ಲೋಟವನ್ನು ಘನೀಕರಿಸುವ ಮಿಶ್ರಣದಲ್ಲಿ (ಮಂಜುಗಡ್ಡೆ ಮತ್ತು ಅಡುಗೆ ಉಪ್ಪು) ಇಡಿ.

ನೀರು ಪುನಃ ಮಂಜುಗಡ್ಡೆಯಾಗುವುದೆ?

ಚಟುವಟಿಕೆ 6.4
ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಕುದಿಸಿ. ನೀರಿನ ಮೇಲ್ಮೈಯಿಂದ ಹಬೆಯು ಮೇಲೇರುವುದನ್ನು ಕಾಣುವಿರ? ಕುದಿಯುವ ನೀರಿನಿಂದ ಸ್ವಲ್ಪ ಎತ್ತರದಲ್ಲಿ ಒಂದು ತವೆಯನ್ನು ಬೋರಲಾಗಿ ಹಿಡಿಯಿರಿ. ತವೆಯ ಒಳಮೇಲ್ಮೈಯನ್ನು ಗಮನಿಸಿ.

ಅಲ್ಲಿ ನೀರಿನ ಸಣ್ಣ ಸಣ್ಣ ಹನಿಗಳನ್ನು ನೀವು ಕಾಣುವಿರ?

ಚಟುವಟಿಕೆ 6.5
ಎಚ್ಚರಿಕೆ
ಬೆಂಕಿಯ ಜ್ವಾಲೆಯನ್ನು ಉಪಯೋಗಿಸುವಾಗ ಎಚ್ಚರವಿರಲಿ.

ಈಗಾಗಲೆ ಉಪಯೋಗಿಸಿದ, ಲೋಹವನ್ನು ಕತ್ತರಿಸುವ ಬ್ಲೇಡನ್ನು ಇಕ್ಕಳದಿಂದ ಹಿಡಿದುಕೊಳ್ಳಿ. ಬ್ಲೇಡ್‍ನ ಮುಕ್ತ ತುದಿಯನ್ನು ಗ್ಯಾಸ್ ಒಲೆಯ ಜ್ವಾಲೆಯ ಮೇಲೆ ಹಿಡಿಯಿರಿ. ಕೆಲವು ನಿಮಿಷಗಳ ಕಾಲ ಕಾಯಿಸಿ.

ಬ್ಲೇಡ್‍ನ ತುದಿಯ ಬಣ್ಣ ಬದಲಾಯಿತೆ?

ಜ್ವಾಲೆಯಿಂದ ಬ್ಲೇಡನ್ನು ಹೊರ ತೆಗೆಯಿರಿ. ಸ್ವಲ್ಪ ಸಮಯದ ನಂತರ ಬ್ಲೇಡ್‍ನ ತುದಿಯನ್ನು ಮತ್ತೆ ಗಮನಿಸಿ.
ಅದು ತನ್ನ ಮೊದಲಿನ ಬಣ್ಣವನ್ನು ಪಡೆಯಿತೆ?

ಮೇಲಿನ ಚಟುವಟಿಕೆ 6.1 ಮತ್ತು 6.2ರಲ್ಲಿ ಕಾಗದ ಮತ್ತು ಸೀಮೆಸುಣ್ಣದ ಚೂರಿನ ಗಾತ್ರ ಬದಲಾಗಿರುವುದನ್ನು ನೀವು ನೋಡಿದಿರಿ. ಚಟುವಟಿಕೆ 6.3 ಮತ್ತು 6.4ರಲ್ಲಿ ನೀರಿನ ಸ್ಥಿತಿಯು ಘನದಿಂದ ದ್ರವಕ್ಕೆ ಅಥವಾ ಅನಿಲದಿಂದ ದ್ರವಕ್ಕೆ ಬದಲಾಯಿತು. ಚಟುವಟಿಕೆ 6.5 ರಲ್ಲಿ ಲೋಹವನ್ನು ಕತ್ತರಿಸುವ ಬ್ಲೇಡ್‍ನ ಬಣ್ಣವು ಕಾಯಿಸಿದಾಗ ಬದಲಾಯಿತು.

ಆಕಾರ, ಗಾತ್ರ, ಬಣ್ಣ ಮತ್ತು ಪದಾರ್ಥದ ಸ್ಥಿತಿ ಮುಂತಾದುವು ಭೌತ ಗುಣಗಳು (physical properties). ಒಂದು ಪದಾರ್ಥದ ಭೌತಿಕಗುಣಗಳಲ್ಲಿ ಬದಲಾವಣೆಯಾದರೆ, ಆ ಬದಲಾವಣೆಯನ್ನು ಭೌತ ಬದಲಾವಣೆ ಎನ್ನುವರು. ಭೌತ ಬದಲಾವಣೆಯು ಸಾಮಾನ್ಯವಾಗಿ ಒಂದು ಪರಾವರ್ತ (reversible) ಬದಲಾವಣೆ. ಇಂತಹ ಬದಲಾವಣೆಯಲ್ಲಿ ಹೊಸ ವಸ್ತುವು ಉತ್ಪತ್ತಿಯಾಗುವುದಿಲ್ಲ.

ಈಗ ನಾವು ಇನ್ನೊಂದು ವಿಧದ ಬದಲಾವಣೆಯನ್ನು ಗಮನಿಸೋಣ.

6.2 ರಾಸಾಯನಿಕ ಬದಲಾವಣೆ

ಕಬ್ಬಿಣವು ತುಕ್ಕು ಹಿಡಿಯುವುದು ನಿಮಗೆ ಪರಿಚಿತವಾದ ಒಂದು ಬದಲಾವಣೆ. ನೀವು ಒಂದು ಕಬ್ಬಿಣದ ತುಂಡನ್ನು ವಾತಾವರಣಕ್ಕೆ ತೆರೆದಿಟ್ಟರೆ, ಅದರ ಮೇಲೆ ಕಂದುಬಣ್ಣದ ಪದಾರ್ಥದ ಒಂದು ಸೂಕ್ಷ್ಮ ಪದರ ಸಂಗ್ರಹವಾಗುತ್ತದೆ. ಈ ಪದಾರ್ಥವನ್ನು ತುಕ್ಕು (rust) ಎನ್ನುವರು. ಈ ಪ್ರಕ್ರಿಯೆಯನ್ನು ತುಕ್ಕು ಹಿಡಿಯುವಿಕೆ (rusting) ಎನ್ನುವರು (ಚಿತ್ರ 6.2). ಉದ್ಯಾನವನ ಅಥವಾ ಕೃಷಿ ಭೂಮಿಯ ಕಬ್ಬಿಣದ ಗೇಟುಗಳು, ಹುಲ್ಲುಹಾಸು ಮತ್ತು ಹೂತೋಟಗಳಲ್ಲಿನ ಕಬ್ಬಿಣದ ಆಸನಗಳು, ಬಹುಪಾಲು ಕಬ್ಬಿಣದಿಂದ ಮಾಡಿದ ಪ್ರತಿಯೊಂದು ವಸ್ತುವೂ ವಾತಾವರಣದಲ್ಲಿ ತೆರೆದಿಟ್ಟಾಗ ತುಕ್ಕು ಹಿಡಿಯುತ್ತದೆ. ಮನೆಗಳಲ್ಲಿ ಹಾರೆಗಳು ಮತ್ತು ಗುದ್ದಲಿಗಳನ್ನು ವಾತಾವರಣಕ್ಕೆ ತೆರೆದಿಟ್ಟಾಗ, ಅವು ತುಕ್ಕು ಹಿಡಿಯುವುದನ್ನು ನೀವು ಗಮನಿಸಿರಬಹುದು. ಅಡುಗೆ ಮನೆಯಲ್ಲಿ ಒದ್ದೆಯಾದ ಕಬ್ಬಿಣದ ತವೆಯನ್ನು ಹಾಗೆಯೇ ಬಿಟ್ಟರೆ ತುಕ್ಕು ಹಿಡಿಯುತ್ತದೆ. ತುಕ್ಕು ಕಬ್ಬಿಣವಲ್ಲ. ತುಕ್ಕು ತಾನು ಆವರಿಸುವ ಕಬ್ಬಿಣಕ್ಕಿಂತ ಭಿನ್ನವಾದುದು.

ಹೊಸ ಪದಾರ್ಥಗಳು ಉಂಟಾಗುವ ಇನ್ನೂ ಕೆಲವು ಬದಲಾವಣೆಗಳನ್ನು ನಾವು ಗಮನಿಸೋಣ.

ಚಟುವಟಿಕೆ 6.6
(ಶಿಕ್ಷಕರು ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಬೇಕು)

ಎಚ್ಚರಿಕೆ
ಉರಿಯುತ್ತಿರುವ ಮೆಗ್ನೀಸಿಯಮ್ ತಂತಿಯನ್ನು ಬಹಳ ಕಾಲ ದಿಟ್ಟಿಸಿ ನೋಡುವುದು ಅಪಾಯಕಾರಿ. ಉರಿಯುತ್ತಿರುವ ತಂತಿಯನ್ನು ದಿಟ್ಟಿಸಿ ನೋಡದಂತೆ ಶಿಕ್ಷಕರು ಮಕ್ಕಳಿಗೆ ತಿಳಿಸಬೇಕು.

ಮೆಗ್ನೀಸಿಯಮ್ ಸುರುಳಿಯ ತೆಳುವಾದ ಚಿಕ್ಕ ತುಂಡನ್ನು ತೆಗೆದುಕೊಳ್ಳಿ. ಅದರ ತುದಿಯನ್ನು ಉಜ್ಜು ಕಾಗದದಿಂದ ಸ್ವಚ್ಛ ಮಾಡಿ. ಆ ತುದಿಯನ್ನು ಮೇಣದ ಬತ್ತಿಯ ಜ್ವಾಲೆಯ ಸಮೀಪ ತನ್ನಿ. ಇದು ಪ್ರಕಾಶಮಾನವಾದ ಬಿಳಿಯ ಬೆಳಕಿನೊಂದಿಗೆ ಹೊತ್ತಿ ಉರಿಯುತ್ತದೆ (ಚಿತ್ರ 6.3).

ಇದು ಸಂಪೂರ್ಣವಾಗಿ ದಹನವಾದಾಗ ಪುಡಿ ಬೂದಿಯಾಗಿ ಉಳಿಯುತ್ತದೆ.
ಈ ಬೂದಿಯು ಮೆಗ್ನೀಸಿಯಮ್ ತಂತಿಯಂತೆ ಕಾಣಿಸುತ್ತದೆಯೆ?
ಈ ಬದಲಾವಣೆಯನ್ನು ಕೆಳಗಿನ ಸಮೀಕರಣದಿಂದ ಸೂಚಿಸಬಹುದು.

ಮೆಗ್ನೀಸಿಯಮ್ (Mg) + ಆಕ್ಸಿಜನ್ (O2) → ಮೆಗ್ನೀಸಿಯಮ್ ಆಕ್ಸೈಡ್ (MgO)

ಈ ಸಮೀಕರಣಗಳು ಗಣಿತದ ಸಮೀಕರಣಗಳಿಗಿಂತ ಭಿನ್ನವಾಗಿವೆ. ಈ ವಿಧದ ಸಮೀಕರಣಗಳಲ್ಲಿ ಬಾಣದ (→) ಗುರುತು, ‘ಉಂಟಾಗುತ್ತದೆ’ ಎಂಬುದನ್ನು ಸೂಚಿಸುತ್ತದೆ. ಈ ಹಂತದಲ್ಲಿ ರಾಸಾಯನಿಕ ಸಮೀಕರಣವನ್ನು ಸರಿದೂಗಿಸಲು ಪ್ರಯತ್ನ ಮಾಡುವುದು ಬೇಡ.

ಈ ಬೂದಿಯನ್ನು ಸಂಗ್ರಹಿಸಿ, ಸ್ವಲ್ಪ ನೀರಿನಲ್ಲಿ ಬೆರೆಸಿ. ಮಿಶ್ರಣವನ್ನು (ಜಲೀಯ ದ್ರಾವಣ) ಚೆನ್ನಾಗಿ ಕಲಕಿ. ಈ ಮಿಶ್ರಣವನ್ನು ನೀಲಿ ಮತ್ತು ಕೆಂಪು ಲಿಟ್ಮಸ್‍ನ ಕಾಗದಗಳೊಂದಿಗೆ ಪರೀಕ್ಷಿಸಿ.

ಮಿಶ್ರಣವು ಕೆಂಪು ಲಿಟ್ಮಸ್‍ಅನ್ನು ನೀಲಿಯಾಗಿ ಪರಿವರ್ತಿಸುವುದೆ? ಅಥವಾ
ಮಿಶ್ರಣವು ನೀಲಿ ಲಿಟ್ಮಸ್‍ಅನ್ನು ಕೆಂಪಾಗಿ ಪರಿವರ್ತಿಸುವುದೆ?
ಈ ಪರೀಕ್ಷೆಯ ಆಧಾರದಲ್ಲಿ, ಜಲೀಯ ದ್ರಾವಣವನ್ನು ಆಮ್ಲೀಯವೆ ಅಥವಾ ಪ್ರತ್ಯಾಮ್ಲೀಯವೆ? ಎಂದು ನೀವು ಹೇಗೆ ವರ್ಗೀಕರಿಸುವಿರಿ?

ಬೂದಿಯನ್ನು ನೀರಿನಲ್ಲಿ ವಿಲೀನಗೊಳಿಸಿದಾಗ ಅದು ಒಂದು ಹೊಸ ಪದಾರ್ಥವನ್ನು ಉಂಟುಮಾಡಿತು. ಈ ಬದಲಾವಣೆಯನ್ನು ಸಮೀಕರಣದ ರೂಪದಲ್ಲಿ ಹೀಗೆ ಬರೆಯಬಹುದು.

ಮೆಗ್ನೀಸಿಯಮ್ ಆಕ್ಸೈಡ್(MgO) + ನೀರು(H2O) → ಮೆಗ್ನೀಸಿಯಮ್ ಹೈಡ್ರಾಕ್ಸೈಡ್[Mg(OH)2]

ಈಗಾಗಲೇ ಅಧ್ಯಾಯ 5ರಲ್ಲಿ ನೀವು ಮೆಗ್ನೀಸಿಯಮ್ ಹೈಡ್ರಾಕ್ಸೈಡ್ ಒಂದು ಪ್ರತ್ಯಾಮ್ಲ ಎಂದು ಕಲಿತಿರುವಿರಿ. ಆದ್ದರಿಂದ ಮೆಗ್ನೀಸಿಯಮ್‍ಅನ್ನು ದಹಿಸಿದಾಗ ಉತ್ಪತ್ತಿಯಾದ ಮೆಗ್ನೀಸಿಯಮ್ ಆಕ್ಸೈಡ್ ಒಂದು ಹೊಸ ಪದಾರ್ಥ. ಮೆಗ್ನೀಸಿಯಮ್ ಆಕ್ಸೈಡ್‍ಅನ್ನು ನೀರಿನಲ್ಲಿ ಬೆರೆಸಿದಾಗ ಉತ್ಪತ್ತಿಯಾದ ಮೆಗ್ನೀಸಿಯಮ್ ಹೈಡ್ರಾಕ್ಸೈಡ್ ಇನ್ನೊಂದು ಹೊಸ ಪದಾರ್ಥ.

ಚಟುವಟಿಕೆ 6.7
(ಶಿಕ್ಷಕರು ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಬೇಕು)
ಒಂದು ಗಾಜಿನ ಲೋಟ ಅಥವಾ ಬೀಕರ್‍ನ ಸುಮಾರು 1/2 ಭಾಗದಷ್ಟು ನೀರಿನಲ್ಲಿ ಸುಮಾರು ಒಂದು ಚಮಚ ಕಾಪರ್ ಸಲ್ಫೇಟ್ (ನೀಲಿ ಮೈಲುತುತ್ತ) ಅನ್ನು ವಿಲೀನಗೊಳಿಸಿ. ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದ ಕೆಲವು ಹನಿಗಳನ್ನು ಈ ದ್ರಾವಣಕ್ಕೆ ಸೇರಿಸಿ. ನೀವು ನೀಲಿ ಬಣ್ಣದ ದ್ರಾವಣವನ್ನು ಪಡೆಯುವಿರಿ. ಈ ದ್ರಾವಣದ ಮಾದರಿಯ ಸ್ವಲ್ಪ ಭಾಗವನ್ನು ಒಂದು ಪ್ರನಾಳ ಅಥವಾ ಚಿಕ್ಕ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ. ಉಳಿದ ದ್ರಾವಣಕ್ಕೆ ಒಂದು ಕಬ್ಬಿಣದ ಮೊಳೆ ಅಥವಾ ಉಪಯೋಗಿಸಿದ ಕ್ಷೌರದ ಬ್ಲೇಡನ್ನು ಹಾಕಿ. ಸುಮಾರು ಅರ್ಧ ಘಂಟೆ ಕಾಯಿರಿ. ಈಗ ದ್ರಾವಣದ ಬಣ್ಣವನ್ನು ಗಮನಿಸಿ. ಪ್ರತ್ಯೇಕವಾಗಿ ತೆಗೆದಿರಿಸಿದ ದ್ರಾವಣದ ಮಾದರಿಯ ಬಣ್ಣದೊಂದಿಗೆ ಇದನ್ನು ಹೋಲಿಸಿ (ಚಿತ್ರ 6.4).

ದ್ರಾವಣದ ಬಣ್ಣದಲ್ಲಿ ಏನಾದರೂ ಬದಲಾವಣೆಯನ್ನು ಕಾಣುವಿರ?
ಮೊಳೆ ಅಥವಾ ಬ್ಲೇಡ್‍ನ್ನು ಹೊರತೆಗೆಯಿರಿ.
ಏನಾದರೂ ಬದಲಾವಣೆ ಆಗಿದೆಯೆ?

ನೀವು ಗಮನಿಸಿದ ಬದಲಾವಣೆಯು ಕಾಪರ್ ಸಲ್ಫೇಟ್ ಮತ್ತು ಕಬ್ಬಿಣದ ನಡುವಿನ ಕ್ರಿಯೆಯಿಂದಾಗಿದೆ. ದ್ರಾವಣದ ಬಣ್ಣವು ನೀಲಿಯಿಂದ ಹಸಿರಿಗೆ ಬದಲಾದುದು, ಕಬ್ಬಿಣದ ಸಲ್ಫೇಟ್ ಎಂಬ ಹೊಸ ವಸ್ತುವಿನ ಉತ್ಪತ್ತಿಯಿಂದ. ಕಬ್ಬಿಣದ ಮೊಳೆಯ ಮೇಲಿನ ಕಂದು ನಿಕ್ಷೇಪವು ಇನ್ನೊಂದು ಹೊಸ ವಸ್ತು. ಅದು ತಾಮ್ರ. ಈ ಕ್ರಿಯೆಯನ್ನು ನಾವು ಹೀಗೆ ಬರೆಯಬಹುದು.

ಚಟುವಟಿಕೆ 6.8
ಸುಮಾರು ಒಂದು ಚಮಚ ವಿನೆಗರನ್ನು ಒಂದು ಪ್ರನಾಳದಲ್ಲಿ ತೆಗೆದುಕೊಳ್ಳಿ. ಒಂದು ಚಿಟಿಕೆ ಅಡುಗೆ ಸೋಡವನ್ನು ಅದಕ್ಕೆ ಸೇರಿಸಿ. ಬುರು ಬುರು ಶಬ್ದವನ್ನು ನೀವು ಕೇಳುವಿರಿ ಮತ್ತು ಅನಿಲದ ಗುಳ್ಳೆಗಳು ಹೊರಬರುವುದನ್ನು ನೋಡುವಿರಿ. ಚಿತ್ರ 6.5 ರಲ್ಲಿ ತೋರಿಸಿದಂತೆ, ಆಗಷ್ಟೇ ತಯಾರಿಸಿದ ಸುಣ್ಣದ ತಿಳಿಯ ಮೂಲಕ ಈ ಅನಿಲವನ್ನು ಹಾಯಿಸಿ.

ಸುಣ್ಣದ ತಿಳಿಯಲ್ಲಿ ಯಾವ ಬದಲಾವಣೆಯನ್ನು ಕಾಣುವಿರಿ.
ಪ್ರನಾಳದಲ್ಲಿನ ಬದಲಾವಣೆಗಳು ಈ ಕೆಳಗಿನಂತಿವೆ.
ವಿನೆಗರ್ + ಅಡುಗೆ ಸೋಡ → ಕಾರ್ಬನ್ ಡೈಆಕ್ಸೈಡ್ + ಇತರ ಪದಾರ್ಥಗಳು.
(ಅಸಿಟಿಕ್ ಆಮ್ಲ) (ಸೋಡಿಯಮ್ ಹೈಡ್ರೋಜನ್ ಕಾರ್ಬೋನೇಟ್)

ಕಾರ್ಬನ್ ಡೈಆಕ್ಸೈಡ್ ಮತ್ತು ಸುಣ್ಣದ ತಿಳಿಯ ನಡುವೆ ನಡೆಯುವ ಕ್ರಿಯೆ ಈ ಕೆಳಗಿನಂತಿದೆ.

ಕಾರ್ಬನ್ ಡೈಆಕ್ಸೈಡ್‍ಅನ್ನು ಸುಣ್ಣದ ತಿಳಿಯ ಮೂಲಕ ಹಾಯಿಸಿದಾಗ, ಕ್ಯಾಲ್ಸಿಯಮ್ ಕಾರ್ಬೊನೇಟ್ ಉತ್ಪತ್ತಿಯಾಗುತ್ತದೆ. ಇದು ಸುಣ್ಣದ ತಿಳಿಯನ್ನು ಹಾಲಿನಂತೆ ಬೆಳ್ಳಗಾಗಿಸುತ್ತದೆ. ಸುಣ್ಣದ ತಿಳಿಯನ್ನು ಹಾಲಿನಂತೆ ಬೆಳ್ಳಗಾಗಿಸುವುದು ಕಾರ್ಬನ್ ಡೈಆಕ್ಸೈಡ್‍ನ ಒಂದು ಆದರ್ಶ ಪರೀಕ್ಷೆ. ಇದನ್ನು ನೀವು ಅಧ್ಯಾಯ 10ರಲ್ಲಿ ನಮ್ಮ ನಿಶ್ವಾಸದ ಗಾಳಿಯಲ್ಲಿ ಅತಿ ಹೆಚ್ಚು ಕಾರ್ಬನ್ ಡೈಆಕ್ಸೈಡ್ ಇದೆ ಎಂದು ತೋರಿಸಲು ಉಪಯೋಗಿಸುವಿರಿ.

ಚಟುವಟಿಕೆ 6.6 – 6.8 ರ, ಪ್ರತಿಯೊಂದು ಬದಲಾವಣೆಯಲ್ಲಿಯೂ ಒಂದು ಅಥವಾ ಹೆಚ್ಚು ಹೊಸ ಪದಾರ್ಥಗಳು ಉತ್ಪತ್ತಿಯಾದುದನ್ನು ನೀವು ನೋಡಿದಿರಿ. ಚಟುವಟಿಕೆ 6.6 ರಲ್ಲಿ ಮೆಗ್ನೀಸಿಯಮ್‍ಅನ್ನು ಗಾಳಿಯಲ್ಲಿ ಉರಿಸಿದಾಗ ಉತ್ಪತ್ತಿಯಾದ ಬೂದಿಯು ಒಂದು ಹೊಸ ಪದಾರ್ಥ. ಚಟುವಟಿಕೆ 6.7 ರಲ್ಲಿ ಕಬ್ಬಿಣದೊಂದಿಗೆ ಕಾಪರ್ ಸಲ್ಫೇಟ್‍ನ ಕ್ರಿಯೆಯು, ಕಬ್ಬಿಣದ ಸಲ್ಫೇಟ್ ಮತ್ತು ತಾಮ್ರವನ್ನು ಉತ್ಪತ್ತಿ ಮಾಡಿತು. ಇವೆರಡೂ ಹೊಸ ಪದಾರ್ಥಗಳು. ತಾಮ್ರವು ಕಬ್ಬಿಣದ ಬ್ಲೇಡ್‍ನ ಮೇಲೆ ನಿಕ್ಷೇಪಗೊಂಡಿತು. ಚಟುವಟಿಕೆ 6.8ರಲ್ಲಿ ವಿನೆಗರ್ ಮತ್ತು ಅಡುಗೆ ಸೋಡ ಒಟ್ಟಾಗಿ ಕಾರ್ಬನ್ ಡೈಆಕ್ಸೈಡ್‍ಅನ್ನು ಉತ್ಪತ್ತಿ ಮಾಡಿದವು. ಇದು ಸುಣ್ಣದ ತಿಳಿಯನ್ನು ಹಾಲಿನಂತೆ ಬೆಳ್ಳಗಾಗಿಸಿತು. ಈ ಕ್ರಿಯೆಯಲ್ಲಿ ಉತ್ಪತ್ತಿಯಾದ ಹೊಸ ಪದಾರ್ಥವನ್ನು ಹೆಸರಿಸಬಲ್ಲಿರ?

ಒಂದು ಅಥವಾ ಹೆಚ್ಚು ಹೊಸ ಪದಾರ್ಥಗಳು ಉತ್ಪತ್ತಿಯಾಗುವ ಬದಲಾವಣೆಯನ್ನು ರಾಸಾಯನಿಕ ಬದಲಾವಣೆ ಎನ್ನುವರು. ರಾಸಾಯನಿಕ ಬದಲಾವಣೆಯನ್ನು ರಾಸಾಯನಿಕ ಕ್ರಿಯೆ (chemical reaction) ಎಂದೂ ಕರೆಯುವರು.

ರಾಸಾಯನಿಕ ಬದಲಾವಣೆಗಳು ನಮ್ಮ ಜೀವನದಲ್ಲಿ ತುಂಬಾ ಮಹತ್ತ್ವವಾದವು. ಎಲ್ಲಾ ಹೊಸ ಪದಾರ್ಥಗಳು ರಾಸಾಯನಿಕ ಬದಲಾವಣೆಯ ಪರಿಣಾಮದಿಂದಲೇ ಉತ್ಪತ್ತಿಯಾದವುಗಳು. ಉದಾಹರಣೆಗೆ, ನಮ್ಮ ದೇಹದಲ್ಲಿ ಆಹಾರ ಜೀರ್ಣವಾಗುವುದು, ಹಣ್ಣುಗಳು ಮಾಗುವುದು, ದ್ರಾಕ್ಷಾರಸದ ಹುದುಗುವಿಕೆ ಇತ್ಯಾದಿ ಬದಲಾವಣೆಗಳು ಸರಣಿ ರಾಸಾಯನಿಕ ಕ್ರಿಯೆಗಳಿಂದ ನಡೆಯುತ್ತವೆ. ಒಂದು ಔಷಧಿಯು ವಿವಿಧ ರಾಸಾಯನಿಕ ಕ್ರಿಯೆಗಳ ಒಂದು ಸರಪಳಿಯ ಅಂತಿಮ ಉತ್ಪನ್ನ. ಪ್ಲಾಸ್ಟಿಕ್ ಮತ್ತು ಡಿಟರ್ಜೆಂಟ್‍ನಂತಹ ಹೊಸ ಪದಾರ್ಥಗಳು ರಾಸಾಯನಿಕ ಕ್ರಿಯೆಗಳಿಂದಲೇ ಉತ್ಪಾದಿತವಾಗಿವೆ. ವಾಸ್ತವವಾಗಿ ಪ್ರತಿಯೊಂದು ಉಪಯುಕ್ತ ಹೊಸ ಪದಾರ್ಥವೂ ರಾಸಾಯನಿಕ ಬದಲಾವಣೆಗಳ ಅಧ್ಯಯನದಿಂದಲೇ ಸಂಶೋಧನೆಗೊಂಡಿದೆ.

ರಾಸಾಯನಿಕ ಬದಲಾವಣೆಯಲ್ಲಿ ಒಂದು ಅಥವಾ ಹೆಚ್ಚು ಹೊಸ ಪದಾರ್ಥಗಳು ಉತ್ಪತ್ತಿಯಾಗುತ್ತವೆ ಎಂಬುದನ್ನು ನಾವು ನೋಡಿದೆವು. ಹೊಸ ಉತ್ಪನ್ನಗಳ ಜೊತೆಗೆ ರಾಸಾಯನಿಕ ಬದಲಾವಣೆಯು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು.

* ಉಷ್ಣ, ಬೆಳಕು ಅಥವಾ ಇತರ ಯಾವುದೇ ವಿಕಿರಣವು (ಉದಾಹರಣೆಗೆ, ಅತಿನೇರಳೆ) ಬಿಡುಗಡೆಯಾಗಬಹುದು ಅಥವಾ ಹೀರಿಕೆಯಾಗಬಹುದು.
* ಶಬ್ದ ಉತ್ಪತ್ತಿಯಾಗಬಹುದು.
* ವಾಸನೆಯಲ್ಲಿ ಬದಲಾವಣೆಯಾಗಬಹುದು ಅಥವಾ ಒಂದು ಹೊಸ ವಾಸನೆ ಹೊರ ಹೊಮ್ಮಬಹುದು.
* ಬಣ್ಣದಲ್ಲಿ ಬದಲಾವಣೆಯಾಗಬಹುದು.
* ಅನಿಲ ಉತ್ಪತ್ತಿಯಾಗಬಹುದು.
ಕೆಲವು ಉದಾಹರಣೆಗಳನ್ನು ನಾವು ನೋಡೋಣ.

ಮೆಗ್ನೀಸಿಯಮ್‍ನ ಉರಿಯುವಿಕೆ ಒಂದು ರಾಸಾಯನಿಕ ಬದಲಾವಣೆ ಎಂದು ನೀವು ನೋಡಿದಿರಿ. ಕಲ್ಲಿದ್ದಲು, ಮರ ಅಥವಾ ಎಲೆಗಳ ಉರಿಯುವಿಕೆಯೂ ಒಂದು ರಾಸಾಯನಿಕ ಬದಲಾವಣೆ. ವಾಸ್ತವವಾಗಿ ಯಾವುದೇ ಪದಾರ್ಥದ ದಹನವು ರಾಸಾಯನಿಕ ಬದಲಾವಣೆಯಾಗಿರುತ್ತದೆ. ದಹನ ಕ್ರಿಯೆಯು ಯಾವಾಗಲೂ ಉಷ್ಣದ ಉತ್ಪತ್ತಿಯನ್ನು ಒಳಗೊಂಡಿರುತ್ತದೆ.

ಪಟಾಕಿಯ ಸ್ಪೋಟವು ಒಂದು ರಾಸಾಯನಿಕ ಬದಲಾವಣೆ. ಅಂತಹ ಸ್ಪೋಟವು ವಾತಾವರಣವನ್ನು ಮಾಲಿನ್ಯಗೊಳಿಸುವ ಅಹಿತಕರ ಅನಿಲಗಳು, ಉಷ್ಣ, ಬೆಳಕು ಮತ್ತು ಶಬ್ದವನ್ನು ಉತ್ಪತ್ತಿ ಮಾಡುತ್ತದೆ ಎಂಬುದನ್ನು ನೀವು ತಿಳಿದಿರುವಿರಿ. ಈ ಕಾರಣಕ್ಕೆ ಪಟಾಕಿಗಳೊಂದಿಗೆ ಆಟವಾಡುವುದು ಬೇಡವೆಂದು ನಿಮಗೆ ತಿಳಿಹೇಳಲಾಗುತ್ತದೆ.

ಆಹಾರವು ಹಳಸಿದಾಗ ಅದು ಅಹಿತಕರ ವಾಸನೆಯನ್ನು ಉಂಟು ಮಾಡುತ್ತದೆ. ಇದನ್ನು ರಾಸಾಯನಿಕ ಬದಲಾವಣೆ ಎಂದು ನಾವು ಕರೆಯೋಣವೆ?

ಸೇಬಿನ ಹೋಳನ್ನು ಕತ್ತರಿಸಿದ ತಕ್ಷಣ ತಿನ್ನದಿದ್ದರೆ, ಅದು ಕಂದು ಬಣ್ಣ ಪಡೆಯುವುದನ್ನು ನೀವು ಗಮನಿಸಿರುವಿರಿ. ಬಣ್ಣದಲ್ಲಿನ ಈ ಬದಲಾವಣೆಯನ್ನು ನೀವು ನೋಡಿಲ್ಲದಿದ್ದರೆ, ಒಂದು ತಾಜಾ ಸೇಬನ್ನು ಕತ್ತರಿಸಿ, ಹೋಳನ್ನು ಸ್ವಲ್ಪಕಾಲ ಹಾಗೇ ಇಡಿ. ಇದೇ ಚಟುವಟಿಕೆಯನ್ನು ಆಲೂಗಡ್ಡೆ ಅಥವಾ ಬದನೆಕಾಯಿ ಹೋಳುಗಳೊಂದಿಗೂ ಪುನರಾವರ್ತಿಸಿ. ಈ ಸಂದರ್ಭಗಳಲ್ಲಿ ಬಣ್ಣದಲ್ಲಿನ ಬದಲಾವಣೆಯು ಹೊಸ ಪದಾರ್ಥಗಳ ಉತ್ಪತ್ತಿಯಿಂದ ಉಂಟಾಗುತ್ತದೆ. ಈ ಬದಲಾವಣೆಗಳು ರಾಸಾಯನಿಕ ಬದಲಾವಣೆಗಳಲ್ಲವೆ?

ಅಧ್ಯಾಯ 5ರಲ್ಲಿ ನೀವು ಆಮ್ಲವನ್ನು ಪ್ರತ್ಯಾಮ್ಲದೊಂದಿಗೆ ತಟಸ್ಥಗೊಳಿಸಿದಿರಿ. ತಟಸ್ಥೀಕರಣವು ಒಂದು ರಾಸಾಯನಿಕ ಬದಲಾವಣೆಯೆ?

ಒಂದು ಸುರಕ್ಷಾ ಕವಚ
ನಮ್ಮ ವಾತಾವರಣದ ಓಜೋನ್ ಪದರದ ಬಗ್ಗೆ ನೀವು ಕೇಳಿರಲೇಬೇಕು. ಇದು ಸೂರ್ಯನಿಂದ ಬರುವ ಹಾನಿಕಾರಕ ಅತಿನೇರಳೆ ವಿಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ. ಓಜೋನ್ ಈ ವಿಕಿರಣವನ್ನು ಹೀರಿಕೊಂಡು ಆಕ್ಸಿಜನ್ ಆಗಿ ವಿಭಜನೆಯಾಗುತ್ತದೆ. ಆಕ್ಸಿಜನ್, ಓಜೋನ್ ನಿಂದ ಭಿನ್ನವಾಗಿದೆ. ಓಜೋನ್ ವಿಭಜನೆಯನ್ನು ರಾಸಾಯನಿಕ ಬದಲಾವಣೆ ಎಂದು ನಾವು ಕರೆಯಲು ಸಾಧ್ಯವೆ?
ಅತಿನೇರಳೆ ಕಿರಣಗಳು ಓಜೋನ್ ನಿಂದ ಹೀರಿಕೆ ಆಗದಿದ್ದರೆ, ಭೂಮಿಯ ಮೇಲ್ಮೈಯನ್ನು ತಲುಪಿ, ನಮಗೆ ಮತ್ತು ಇತರ ಜೀವಿಗಳಿಗೆ ಹಾನಿಯನ್ನು ಉಂಟುಮಾಡುತ್ತಿದ್ದವು. ಓಜೋನ್ ನಮಗೆ ಈ ವಿಕಿರಣದ ವಿರುದ್ಧ ನೈಸರ್ಗಿಕ ಸುರಕ್ಷಾ ಕವಚವಾಗಿ ವರ್ತಿಸುತ್ತದೆ.

6.3 ಕಬ್ಬಿಣದ ತುಕ್ಕು ಹಿಡಿಯುವಿಕೆ

ತುಕ್ಕು ಹಿಡಿಯುವಿಕೆಯ ಬಗ್ಗೆ ನಾವೀಗ ಪುನಃ ಚರ್ಚಿಸೋಣ. ಇದು ಕಬ್ಬಿಣದ ಪರಿಕರಗಳ ಮೇಲೆ ಪ್ರಭಾವಬೀರಿ, ಅನಂತರ ಅವುಗಳನ್ನು ನಿಧಾನವಾಗಿ ಹಾಳು ಮಾಡುವ ಒಂದು ಬದಲಾವಣೆ. ಸೇತುವೆ, ಹಡಗು, ಕಾರು, ಟ್ರಕ್‍ಗಳು ಮತ್ತು ಇನ್ನೂ ಅನೇಕ ವಸ್ತುಗಳನ್ನು ತಯಾರಿಸಲು ಕಬ್ಬಿಣವನ್ನು ಬಳಸುವುದರಿಂದ ತುಕ್ಕು ಹಿಡಿಯುವಿಕೆಯಿಂದ ಆಗುವ ಸಂಪತ್ತಿನ ನಷ್ಟ ಅಪಾರ. ತುಕ್ಕು ಹಿಡಿಯುವ ಪ್ರಕ್ರಿಯೆಯನ್ನು ಈ ಕೆಳಗಿನ ಸಮೀಕರಣದಿಂದ ಸೂಚಿಸಬಹುದು.

ತುಕ್ಕು ಹಿಡಿಯಲು, ಆಕ್ಸಿಜನ್ ಮತ್ತು ನೀರು (ಅಥವಾ ನೀರಾವಿ) ಇವೆರಡರ ಇರುವಿಕೆಯೂ ಅವಶ್ಯಕ.

ವಾಸ್ತವವಾಗಿ ಗಾಳಿಯಲ್ಲಿ ತೇವಾಂಶವು ಹೆಚ್ಚಾಗಿದ್ದರೆ, ಅಂದರೆ ಅದು ಹೆಚ್ಚು ಆದ್ರ್ರತೆಯುಳ್ಳದ್ದಾಗಿದ್ದರೆ ತುಕ್ಕು ಹಿಡಿಯುವಿಕೆ ವೇಗವಾಗಿ ನಡೆಯುತ್ತದೆ.

ಹಾಗಾದರೆ ತುಕ್ಕು ಹಿಡಿಯುವುದನ್ನು ತಡೆಗಟ್ಟುವುದು ಹೇಗೆ? ಕಬ್ಬಿಣದ ಪರಿಕರಗಳು ಆಕ್ಸಿಜನ್ ಅಥವಾ ನೀರು ಅಥವಾ ಇವೆರಡರ ಸಂಪರ್ಕಕ್ಕೆ ಬರುವುದನ್ನು ತಡೆಗಟ್ಟುವ ಒಂದು ಸರಳ ವಿಧಾನವೆಂದರೆ ಬಣ್ಣ ಅಥವಾ ಗ್ರೀಸ್‍ನ ಪದರವನ್ನು ಲೇಪಿಸುವುದು. ವಾಸ್ತವವಾಗಿ, ತುಕ್ಕು ಹಿಡಿಯುವುದನ್ನು ತಪ್ಪಿಸಲು ಈ ಪದರಗಳನ್ನು ನಿಯತವಾಗಿ ಲೇಪಿಸುತ್ತಿರಬೇಕು. ಇನ್ನೊಂದು ವಿಧಾನವೆಂದರೆ, ಸತು (zinc) ಅಥವಾ ಕ್ರೋಮಿಯಮ್‍ನಂತಹ ಲೋಹದ ಪದರವನ್ನು ಕಬ್ಬಿಣದ ಮೇಲೆ ಲೇಪಿಸುವುದು.

ಸತುವಿನ ಪದರವನ್ನು ಕಬ್ಬಿಣದ ಮೇಲೆ ಲೇಪಿಸುವ ಈ ವಿಧಾನವನ್ನು ಕಲಾಯಿ (galvanisation) ಎನ್ನುವರು. ನಮ್ಮ ಮನೆಗಳಲ್ಲಿ ನೀರು ಸಾಗಿಸಲು ಬಳಸುವ ಕಬ್ಬಿಣದ ಕೊಳವೆಗಳಿಗೆ ತುಕ್ಕು ಹಿಡಿಯುವುದನ್ನು ತಡೆಗಟ್ಟಲು ಕಲಾಯಿ ಮಾಡಿರುತ್ತಾರೆ.

ಹಡಗುಗಳನ್ನು ಕಬ್ಬಿಣದಿಂದ ಮಾಡುತ್ತಾರೆ ಹಾಗೂ ಅವುಗಳ ಒಂದು ಭಾಗ ನೀರಿನೊಳಗೆ ಇರುತ್ತದೆ ಎಂದು ನೀವು ತಿಳಿದಿರುವಿರಿ. ನೀರಿನ ಮೇಲಿರುವ ಭಾಗದಲ್ಲಿ, ಹಡಗಿನ ಹೊರಮೈಗೆ ನೀರು ಅಂಟಿಕೊಂಡಿರುತ್ತದೆ. ಸಮುದ್ರದ ನೀರು ಅನೇಕ ಲವಣಗಳನ್ನು ಒಳಗೊಂಡಿರುತ್ತದೆ. ಈ ಉಪ್ಪುನೀರು ತುಕ್ಕು ಹಿಡಿಯುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಆದ್ದರಿಂದ ಬಣ್ಣ ಲೇಪಿಸಿದ್ದರೂ ಕೂಡ ತುಕ್ಕು ಹಿಡಿಯುವಿಕೆಯಿಂದ ಹಡಗುಗಳು ಅತಿ ಹೆಚ್ಚು ಹಾನಿಗೊಳಗಾಗುತ್ತವೆ.

ಆದ್ದರಿಂದ ಹಡಗಿನ ಸ್ವಲ್ಪ ಭಾಗ ಕಬ್ಬಿಣವನ್ನು ಪ್ರತಿ ವರ್ಷವೂ ಬದಲಾಯಿಸಬೇಕಾಗುತ್ತದೆ. ತುಕ್ಕಿನಿಂದ ಜಗತ್ತಿಗೆ ಉಂಟಾಗುವ ಸಂಪತ್ತಿನ ನಷ್ಟವನ್ನು ಕಲ್ಪಿಸಿಕೊಳ್ಳಬಲ್ಲಿರ?

ಕಬ್ಬಿಣದೊಂದಿಗೆ ಕಾರ್ಬನ್ ಮತ್ತು ಲೋಹಗಳಾದ ಕ್ರೋಮಿಯಮ್, ನಿಕ್ಕಲ್ ಮತ್ತು ಮ್ಯಾಂಗನೀಸ್‍ಗಳನ್ನು ಬೆರೆಸಿ ಕಲೆರಹಿತ ಉಕ್ಕನ್ನು ತಯಾರಿಸಲಾಗುತ್ತದೆ. ಇದು ತುಕ್ಕು ಹಿಡಿಯುವುದಿಲ್ಲ.

6.4 ಸ್ಪಟಿಕೀಕರಣ

ಸಮುದ್ರದ ನೀರನ್ನು ಆವಿಯಾಗಿಸಿ ಉಪ್ಪನ್ನು ಪಡೆಯಲು ಸಾಧ್ಯ ಎಂಬುದನ್ನು 6ನೇ ತರಗತಿಯಲ್ಲಿ ನೀವು ಕಲಿತಿರುವಿರಿ. ಈ ವಿಧಾನದಿಂದ ಪಡೆದ ಉಪ್ಪು ಶುದ್ಧವಾಗಿರುವುದಿಲ್ಲ ಮತ್ತು ಹರಳುಗಳ ಆಕಾರವನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ. ಆದರೂ ಶುದ್ಧ ಪದಾರ್ಥಗಳ ದೊಡ್ಡ ಹರಳುಗಳನ್ನು ಅವುಗಳ ದ್ರಾವಣಗಳಿಂದ ತಯಾರಿಸಬಹುದು. ಈ ಪ್ರಕ್ರಿಯೆಯನ್ನು ಸ್ಪಟಿಕೀಕರಣ (crystallisation) ಎನ್ನುವರು. ಇದು ಭೌತ ಬದಲಾವಣೆಗೆ ಒಂದು ಉದಾಹರಣೆ.

ಚಟುವಟಿಕೆ 6.9
ಎಚ್ಚರಿಕೆ
ಸಾರರಿಕ್ತ ಸಲ್ಫ್ಯೂರಿಕ್ ಆಮ್ಲವನ್ನು ಮಾತ್ರ ಬಳಸಿ. ನೀರನ್ನು ಕುದಿಸುವಾಗ ಎಚ್ಚರದಿಂದಿರಿ.

ಒಂದು ಬೀಕರ್‍ನಲ್ಲಿ ಒಂದು ಲೋಟದಷ್ಟು ನೀರನ್ನು ತೆಗೆದುಕೊಳ್ಳಿ. ಇದಕ್ಕೆ ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದ ಕೆಲವು ಹನಿಗಳನ್ನು ಸೇರಿಸಿ ಕಾಯಿಸಿ. ಈ ನೀರು ಕುದಿಯಲು ಪ್ರಾರಂಭವಾದಾಗ ಅದಕ್ಕೆ ಕಾಪರ್ ಸಲ್ಫೇಟ್‍ನ ಪುಡಿಯನ್ನು ನಿಧಾನವಾಗಿ ಸೇರಿಸಿ, ಕಲಕುತ್ತಿರಿ (ಚಿತ್ರ 6.6). ಇನ್ನಷ್ಟು ಪುಡಿಯನ್ನು ವಿಲೀನಗೊಳಿಸಲು ಸಾಧ್ಯವಾಗದವರೆಗೂ ಕಾಪರ್ ಸಲ್ಫೇಟ್ ಸೇರಿಸುವುದನ್ನು ಮುಂದುವರಿಸಿ. ದ್ರಾವಣವನ್ನು ಸೋಸಿ, ತಣ್ಣಗಾಗಲು ಬಿಡಿ. ತಣಿಯುತ್ತಿರುವಾಗ ದ್ರಾವಣವನ್ನು ಅಲುಗಾಡಿಸಬೇಡಿ. ಸ್ವಲ್ಪ ಹೊತ್ತಿನ ನಂತರ ಕಾಪರ್ ಸಲ್ಫೇಟ್‍ನ ಹರಳುಗಳು ಕಾಣಿಸುತ್ತವೆಯೆ? ನೋಡಿ. ಕಾಣಿಸದಿದ್ದರೆ ಇನ್ನೂ ಸ್ವಲ್ಪ ಹೊತ್ತು ಕಾಯಿರಿ.

ಭೌತ ಮತ್ತು ರಾಸಾಯನಿಕ ಬದಲಾವಣೆಗಳ ಬಗ್ಗೆ ನೀವು ಕಲಿತಿರುವಿರಿ. ನಿಮ್ಮ ಸುತ್ತಮುತ್ತಲೂ ನೀವು ಗಮನಿಸುವ ಬದಲಾವಣೆಗಳನ್ನು ಭೌತ ಮತ್ತು ರಾಸಾಯನಿಕ ಬದಲಾವಣೆಗಳಾಗಿ ಗುರ್ತಿಸಲು ಪ್ರಯತ್ನಿಸಿ.

ಪ್ರಮುಖ ಪದಗಳು

ರಾಸಾಯನಿಕ ಬದಲಾವಣೆ
ಸ್ಪಟಿಕೀಕರಣ
ಭೌತ ಬದಲಾವಣೆ
ರಾಸಾಯನಿಕ ಕ್ರಿಯೆ
ಕಲಾಯಿ
ತುಕ್ಕುಹಿಡಿಯುವಿಕೆ

ನೀವು ಕಲಿತಿರುವುದು

* ಬದಲಾವಣೆಗಳಲ್ಲಿ ಎರಡು ವಿಧ – i) ಭೌತ ಬದಲಾವಣೆ ii) ರಾಸಾಯನಿಕ ಬದಲಾವಣೆ.
* ಪದಾರ್ಥಗಳ ಭೌತಿಕ ಗುಣಗಳಲ್ಲಿನ ಬದಲಾವಣೆಗಳೆ ಭೌತ ಬದಲಾವಣೆಗಳು. ಈ ಬದಲಾವಣೆಗಳಲ್ಲಿ ಹೊಸ ಪದಾರ್ಥಗಳು ಉಂಟಾಗುವುದಿಲ್ಲ. ಈ ಬದಲಾವಣೆಗಳನ್ನು ಪರಾವರ್ತಗೊಳಿಸಬಹುದು.
* ರಾಸಾಯನಿಕ ಬದಲಾವಣೆಗಳಲ್ಲಿ ಹೊಸ ಪದಾರ್ಥಗಳು ಉತ್ಪತ್ತಿಯಾಗುತ್ತವೆ.
* ಸ್ಪಟಿಕೀಕರಣದಿಂದ ಕೆಲವು ಪದಾರ್ಥಗಳನ್ನು ಶುದ್ಧ ರೂಪದಲ್ಲಿ ಅವುಗಳ ದ್ರಾವಣದಿಂದ ಪಡೆಯಬಹುದು.

ಸಂವೇದ ವಿಡಿಯೋ ಪಾಠಗಳು

7th Class | Science | ಭೌತ ಮತ್ತು ರಾಸಾಯನಿಕ ಬದಲಾವಣೆಗಳು

ಪೂರಕ ವಿಡಿಯೋಗಳು

Science Activity – Class 7 ( Physical and Chemical Changes )
Physical and Chemical Changes
Rusting of Iron
Physical Changes | Class 7 | Science | FREE Tutorial
Physical and Chemical Changes

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವಿಸ್ತರಿತ ಕಲಿಕೆ – ಚಟುವಟಿಕೆಗಳು ಮತ್ತು ಯೋಜನೆಗಳು

i) ಯಾವುದಾದರೂ ಎರಡು ಹಾನಿಕಾರಕ ಬದಲಾವಣೆಗಳನ್ನು ವಿವರಿಸಿ. ನೀವು ಅವುಗಳನ್ನು ಹಾನಿಕಾರಕ ಎಂದು ಏಕೆ ಪರಿಗಣಿಸುವಿರಿ? ವಿವರಿಸಿ. ಅವುಗಳನ್ನು ನೀವು ಹೇಗೆ ತಡೆಗಟ್ಟುವಿರಿ?

i) ಕಬ್ಬಿಣದ ತುಕ್ಕು: ಬೈಸಿಕಲ್ ಚೈನ್ ತುಕ್ಕು ಹಿಡಿದರೆ, ಅದು ಸೈಕಲ್ ಚೈನ್ ಒಡೆಯಲು ಕಾರಣವಾಗಬಹುದು.
ತಡೆಗಟ್ಟುವಿಕೆ: ನಿಯಮಿತವಾಗಿ ಅದರ ಮೇಲೆ ಗ್ರೀಸ್ ಅನ್ನು ಅನ್ವಯಿಸಿ.

ii) ಮರವನ್ನು ಸುಡುವುದು : ಮರವನ್ನು ಸುಟ್ಟಾಗ ಅದು ಹಾನಿಕಾರಕ ಅನಿಲವನ್ನು ಬಿಡುಗಡೆ ಮಾಡುತ್ತದೆ ಮತ್ತು ಭೂಮಿಯನ್ನು ಕಲುಷಿತಗೊಳಿಸುತ್ತದೆ.
ತಡೆಗಟ್ಟುವಿಕೆ: CNG, LPG, ಇತ್ಯಾದಿಗಳಂತಹ ಶುದ್ಧ ಇಂಧನಗಳನ್ನು ಬಳಸಿ.

ii) ಅಗಲವಾದ ಬಾಯಿಯುಳ್ಳ ಮೂರು ಗಾಜಿನ ಬಾಟಲಿಗಳನ್ನು ತೆಗೆದುಕೊಳ್ಳಿ. ಅವುಗಳನ್ನು ಎ, ಬಿ ಮತ್ತು ಸಿ ಎಂದು ಹೆಸರಿಸಿ. ಬಾಟಲಿ ಎ ಯಲ್ಲಿ ಸುಮಾರು ಅರ್ಧದಷ್ಟು ನೀರನ್ನು ತುಂಬಿ. ಕೆಲವು ನಿಮಿಷಗಳವರೆಗೆ ಕುದಿಸಿದ ನೀರನ್ನು ಬಾಟಲಿ ಬಿ ಮತ್ತು ಸಿ ಗಳಿಗೆ ಎ ಬಾಟಲಿಯ ನೀರಿನ ಮಟ್ಟದಷ್ಟೇ ತುಂಬಿ. ಒಂದೇ ತೆರನಾದ ಕೆಲವು ಕಬ್ಬಿಣದ ಮೊಳೆಗಳನ್ನು ಪ್ರತಿಯೊಂದು ಬಾಟಲಿಗೂ ಹಾಕಿ. ಅವುಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರಲಿ. ಸಿ – ಬಾಟಲಿಯ ನೀರಿನ ಮೇಲ್ಮೈ ಮೇಲೆ ತೆಳುವಾದ ಪದರವನ್ನು ಉಂಟುಮಾಡುವಂತೆ ಒಂದು ಚಮಚ ಅಡುಗೆ ಎಣ್ಣೆಯನ್ನು ಹಾಕಿ. ಕೆಲವು ದಿನಗಳವರೆಗೆ ಬಾಟಲಿಗಳನ್ನು ಹಾಗೆಯೆ ಇಡಿ. ನಂತರ ಪ್ರತಿಯೊಂದು ಬಾಟಲಿಯಿಂದ ಮೊಳೆಗಳನ್ನು ಹೊರತೆಗೆದು ಗಮನಿಸಿ. ನೀವು ಗಮನಿಸಿದ ಅಂಶಗಳನ್ನು ವಿವರಿಸಿ.

ಬಾಟಲಿಗಳಲ್ಲಿನ ಮೊಳೆಗಳು ಸ್ವಲ್ಪ ತುಕ್ಕು ಹಿಡಿಯುತ್ತವೆ, ಎ ಯಲ್ಲಿರುವ ಮೊಳೆಗಳು ಅತ್ಯಂತ ತುಕ್ಕು ಹಿಡಿದಿವೆ ಮತ್ತು ಸಿ ಯಲ್ಲಿ ಬದಲಾಗದೆ ಇರುತ್ತವೆ.

ತುಕ್ಕು ಹಿಡಿಯಲು ನೀರು ಮತ್ತು ಆಮ್ಲಜನಕ ಎರಡೂ ಅಗತ್ಯ. ಎರಡೂ ಅಂಶಗಳು ಬಾಟಲಿ ಎ ಯಲ್ಲಿ ಇರುವುದರಿಂದ ಆಮ್ಲಜನಕ ನೀರಿನಲ್ಲಿ ಕರಗುತ್ತದೆ.

B ಬಾಟಲಿಯಲ್ಲಿ, ನೀರನ್ನು ಕುದಿಸಲಾಗುತ್ತದೆ ಮತ್ತು ಕರಗಿದ ಗಾಳಿಯನ್ನು ತೆಗೆಯಲಾಗುತ್ತದೆ. ಆಮ್ಲಜನಕದ ಕೊರತೆಯಿಂದಾಗಿ, ಕಬ್ಬಿಣದ ಮೊಳೆಗಳು ಹೆಚ್ಚು ತುಕ್ಕು ಹಿಡಿಯುವುದಿಲ್ಲ.

ಬಾಟಲ್ C ನಲ್ಲಿ, ಇರುವ ತೈಲದ ಪದರವು ನೀರಿನಲ್ಲಿ ವಾತಾವರಣದ ಗಾಳಿಯನ್ನು ಕರಗಿಸುವುದನ್ನು ತಡೆಯುತ್ತದೆ ಮತ್ತು ಆದ್ದರಿಂದ ಯಾವುದೇ ತುಕ್ಕು ಉಂಟಾಗುವುದಿಲ್ಲ.

iii) ಪಟಿಕ (alum) ದ ಹರಳುಗಳನ್ನು ತಯಾರಿಸಿ.

To prepare pure crystals of potash alum
DIY Crystal at Home (1) – Alum

iv) ನೀವು ವಾಸಿಸುವ ಪ್ರದೇಶದಲ್ಲಿ ಅಡುಗೆಗೆ ಬಳಸುವ ಇಂಧನದ ವಿಧಗಳ ಬಗ್ಗೆ ಮಾಹಿತಿ ಸಂಗ್ರಹಿಸಿ. ಯಾವ ಇಂಧನವು ಕಡಿಮೆ ಮಾಲಿನ್ಯವನ್ನು ಉಂಟುಮಾಡುವುದು? ಏಕೆ ಎಂಬುದನ್ನು ನಿಮ್ಮ ಶಿಕ್ಷಕರು / ಪೋಷಕರು / ಇತರರೊಂದಿಗೆ ಚರ್ಚಿಸಿ.

ದ್ರವ ಪೆಟ್ರೋಲಿಯಂ ಗ್ಯಾಸ್ (LPG) ಲಿಗ್ನೈಟ್ ಮತ್ತು ಕಲ್ಲಿದ್ದಲಿನಂತಹ ಇಂಧನಗಳು. ಎಲ್‌ಪಿಜಿ ಕಡಿಮೆ ಮಾಲಿನ್ಯಕಾರಕವಾಗಿದೆ ಏಕೆಂದರೆ ಅದು ಬೇಗನೆ ಉರಿಯುತ್ತದೆ ಮತ್ತು ಕಲ್ಲಿದ್ದಲುಗಿಂತ ಸಂಪೂರ್ಣವಾಗಿ ಉರಿಯುತ್ತದೆ ಅದು ಗಾಳಿಯನ್ನು ಕಲುಷಿತಗೊಳಿಸುವ ಹಾನಿಕಾರಕ ಅನಿಲಗಳನ್ನು ಭಾಗಶಃ ಉತ್ಪಾದಿಸುತ್ತದೆ.

ನಿಮಗಿದು ಗೊತ್ತೆ?

ಚಿತ್ರ 6.7 ಕಬ್ಬಿಣದ ಸ್ಥಂಭ ದೆಹಲಿಯ ಕುತುಬ್‍ಮಿನಾರ್‍ನ ಸಮೀಪ 7 ಮೀಟರ್‍ಗಿಂತಲೂ ಹೆಚ್ಚು ಎತ್ತರದ ಒಂದು ಕಬ್ಬಿಣದ ಸ್ಥಂಭವನ್ನು ನಿಲ್ಲಿಸಲಾಗಿದೆ. (ಚಿತ್ರ 6.7). ಅದು 6000 kg ಗಿಂತಲೂ ಹೆಚ್ಚು ತೂಕವಿದೆ. ಅದನ್ನು 1600 ವರ್ಷಗಳಿಗಿಂತ ಹಿಂದೆಯೇ ನಿರ್ಮಿಸಲಾಗಿದೆ. ಇಷ್ಟು ದೀರ್ಘಕಾಲದ ನಂತರವೂ ಅದು ತುಕ್ಕು ಹಿಡಿದಿಲ್ಲ. ಅದರ ತುಕ್ಕು ನಿರೋಧಕ ಗುಣದಿಂದಾಗಿ ಪ್ರಪಂಚದ ಎಲ್ಲಾ ಭಾಗದ ವಿಜ್ಞಾನಿಗಳಿಂದ ಪರೀಕ್ಷಿಸಲ್ಪಟ್ಟಿದೆ. ಇದು 1600 ವರ್ಷಗಳಿಗಿಂತಲೂ ಹಿಂದೆಯೇ ಭಾರತವು ಸಾಧಿಸಿದ ಲೋಹ ತಂತ್ರಜ್ಞಾನದ ಮುನ್ನಡೆಗೆ ಸಾಕ್ಷಿಯಾಗಿದೆ.