
ಬುದ್ಧಿವಂತ ರಾಮಕೃಷ್ಣ
ಒಂದು ಸಲ ವಿದ್ಯಾಸಾಗರನೆಂಬ ಮಹಾನ್ ಪಂಡಿತ ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದನು. ಅವನ ಖ್ಯಾತಿ ಎಲ್ಲ ಕಡೆ ಹಬ್ಬಿತ್ತು. ಸಂಸ್ಕೃತದಲ್ಲಿ ಅವನು ಮಹಾಮೇಧಾವಿಯಾಗಿದ್ದನು. ವಿದ್ಯಾಭಿಮಾನಿಯಾದ ಕೃಷ್ಣದೇವರಾಯ ಅವನನ್ನು ಸ್ವಾಗತಿಸಿ ಸತ್ಕರಿಸಿದನು.
‘‘ಮಹಾಪ್ರಭು ನಾನು ನಿಮ್ಮ ಆಸ್ಥಾನದ ಪಂಡಿತರೊಡನೆ ವಾದ ಮಾಡಲು ಬಂದಿದ್ದೇನೆ’’ ಎಂದನು ವಿದ್ಯಾಸಾಗರ. ಕೃಷ್ಣದೇವರಾಯ ಅದಕ್ಕೊಪ್ಪಿ ತನ್ನ ಆಸ್ಥಾನದ ಪಂಡಿತರ ಕಡೆ ನೋಡಿದ. ಅವರಾರೂ ವಾದ ಮಾಡಲು ಆಸಕ್ತಿ ತೋರಿಸಲಿಲ್ಲ.
ಎಲ್ಲರೂ ಮೌನವಾಗಿರುವುದನ್ನು ಕಂಡ ವಿದ್ಯಾಸಾಗರ “ಇಂಥ ದೊಡ್ಡ ರಾಜನ ಆಸ್ಥಾನದಲ್ಲಿ ನನ್ನನ್ನು ಸೋಲಿಸುವ ಒಬ್ಬ ಪಂಡಿತನೂ ಇಲ್ಲವೆನ್ನುವುದು ಬೇಸರದ ಸಂಗತಿ. ಈ ವಿಷಯ ಮೊದಲೇ ತಿಳಿದಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ” ಎಂದನು.
ಆಗ ತೆನಾಲಿರಾಮಕೃಷ್ಣ ಎದ್ದು ನಿಂತು ‘‘ಇಷ್ಟು ಬೇಗನೆ ನೀವು ಈ ತೀರ್ಮಾನಕ್ಕೆ ಬರಬೇಡಿ’’ ಎಂದನು. ವಿದ್ಯಾಸಾಗರ ಅವನತ್ತ ನೋಡಿ, “ನೀವು ಯಾರು?” ಎಂದು ಕೇಳಿದನು. ‘‘ನಾನು ಒಂದೆರಡು ಗ್ರಂಥಗಳನ್ನು ಬರೆದಿದ್ದೇನೆ. ನನ್ನನ್ನು ತೆನಾಲಿ ರಾಮಕೃಷ್ಣ ಎನ್ನುತ್ತಾರೆ’’ ಎಂದನು.
ವಿದ್ಯಾಸಾಗರನ ಮುಖ ಅರಳಿತು. ‘‘ಹೌದೇನು? ನಾನು ನಿಮ್ಮ ಬುದ್ಧಿವಂತಿಕೆ ಬಗ್ಗೆ ಕೇಳಿದ್ದೇನೆ. ಆದರೆ ಬುದ್ಧಿಚಾತುರ್ಯಕ್ಕಿಂತ ಮುಖ್ಯವಾಗಿ ಆಳವಾದ ಅಧ್ಯಯನ ಮಾಡಿದವರು ಮಾತ್ರ ನನ್ನೊಂದಿಗೆ ವಾದ ಮಾಡಲು ಸಾಧ್ಯ’’ ಎಂದನು. ‘‘ಅದು ನನಗೂ ತಿಳಿದಿದೆ. ನೀವು ಯಾವ ಗ್ರಂಥದ ಮೇಲೆ ವಾದ ಮಾಡುತ್ತೀರಿ?’’ ಪ್ರಶ್ನಿಸಿದ ರಾಮಕೃಷ್ಣ. ಇದಕ್ಕೆ ವಿದ್ಯಾಸಾಗರ ‘‘ನಿಮಗೆ ಇಷ್ಟವಾದ ಯಾವುದೇ ಸಂಸ್ಕೃತ ಗ್ರಂಥವಾಗಬಹುದು’’ ಎಂದನು. ‘‘ಹಾಗಾದರೆ ನಾಳೆ ಸಂಜೆ ಇದೇ ಹೊತ್ತಿಗೆ ನಿಮ್ಮೊಂದಿಗೆ ವಾದ ಮಾಡಲು ಸಿದ್ಧನಾಗಿ ಬರುತ್ತೇನೆ’’ ಎಂದನು ರಾಮಕೃಷ್ಣ.
ಮಾರನೆಯ ದಿನ ವಿದ್ಯಾಸಾಗರ ಹೆಮ್ಮೆಯಿಂದ ಆಸ್ಥಾನವನ್ನು ಪ್ರವೇಶಿಸಿ ತನ್ನ ಪೀಠದಲ್ಲಿ ಕುಳಿತನು. ಇವನೆಂಥ ವಾದ ಮಾಡುತ್ತಾನೆಂದು ಎಲ್ಲರೂ ಅಚ್ಚರಿಯಿಂದ ಕಾದು ಕುಳಿತಿದ್ದರು. ರಾಮಕೃಷ್ಣ ಸ್ವಲ್ಪ ಹೊತ್ತಿನ ಅನಂತರ ಬಟ್ಟೆಯಲ್ಲಿ ಸುತ್ತಿದ ಕಟ್ಟನ್ನು ಸೇವಕನ ಹತ್ತಿರ ಹಿಡಿಸಿಕೊಂಡು ಸಭೆಗೆ ಬಂದನು. ಆ ಕಟ್ಟಿನಲ್ಲಿ ಏನಿದೆಯೆಂದು ಯಾರಿಗೂ ಊಹೆ ಮಾಡಲಾಗಲಿಲ್ಲ.
ರಾಮಕೃಷ್ಣ ತನ್ನ ಪೀಠದಲ್ಲಿ ಕುಳಿತು ವಿದ್ಯಾಸಾಗರನಿಗೆ ಹೇಳಿದನು. ‘‘ನಾನು ಸಿದ್ಧನಾಗಿದ್ದೇನೆ ಸ್ವಾಮಿ.’’ ‘‘ನಾನೂ ಸಿದ್ಧ. ಪ್ರಾರಂಭಿಸೋಣ’’ ಎಂದನು ವಿದ್ಯಾಸಾಗರ. ‘‘ವಾದಕ್ಕೆ ಯಾವುದೇ ಗ್ರಂಥವನ್ನು ನಾನು ಆರಿಸಿಕೊಳ್ಳಬಹುದೆಂದು ತಾವು ಹೇಳಿದ್ದಿರಿ’’ ಎಂದನು ರಾಮಕೃಷ್ಣ. ಇದಕ್ಕೆ ವಿದ್ಯಾಸಾಗರ ‘‘ಹೌದು! ಯಾವುದನ್ನು ಬೇಕಾದರೂ ಆರಿಸಿಕೊಳ್ಳಿ’’ ಎಂದನು. ರಾಮಕೃಷ್ಣ 8 ತನ್ನ ಎದುರಿಗಿದ್ದ ಕಟ್ಟನ್ನು ತೋರಿಸಿ ‘‘ನಾನು ಈಗ ಈ ‘ತಿಲಕಾಷ್ಠಮಹಿಷಬಂಧನ’ದ ಮೇಲೆ ವಾದ ಮಾಡುತ್ತೇನೆ. ಆರಂಭಿಸಲೇ?’’ ಎಂದನು. ‘ತಿಲಕಾಷ್ಠಮಹಿಷಬಂಧನ!’ ವಿದ್ಯಾಸಾಗರ ಕಣ್ಣರಳಿಸಿ “ಅದು…! ಅದು…!’’ ಎಂದು ತೊದಲಿದನು.
“ಏಕೆ? ನಿಮಗೆ `ತಿಲಕಾಷ್ಠಮಹಿಷಬಂಧನ’ ತಿಳಿದಿಲ್ಲವೆ? ಇದು ನಮ್ಮೂರಿನಲ್ಲಿ ದನ ಕಾಯುವ ಹುಡುಗರಿಗೂ ಗೊತ್ತು’’ ಎಂದು ಹೆಮ್ಮೆಯಿಂದ ಹೇಳಿದನು ರಾಮಕೃಷ್ಣ.
ವಿದ್ಯಾಸಾಗರ ತಲೆ ಕೆರೆದುಕೊಂಡನು. ಮುಖ ಮಂಕಾಯಿತು. ಎಷ್ಟು ಯೋಚಿಸಿದರೂ ತಿಲಕಾಷ್ಠಮಹಿಷಬಂಧನ ಗ್ರಂಥ ಅವನ ನೆನಪಿಗೆ ಬರಲಿಲ್ಲ. ‘ಇದೊಂದು ಹೇಗೆ ನನ್ನ ಕಣ್ಣು ತಪ್ಪಿಸಿಕೊಂಡಿತು’ ಎಂದು ಅವನು ಪೇಚಾಡಿಕೊಂಡನು.
‘‘ಮಹಾಪ್ರಭು, ಏಕೋ ನನ್ನ ದೇಹಾರೋಗ್ಯ ಸರಿಯಿಲ್ಲ. ವಾದವನ್ನು ನಾಳೆ ಆರಂಭಿಸಲು ಅಪ್ಪಣೆ ಕೊಡಿ’’ ಎಂದು ವಿದ್ಯಾಸಾಗರನು ಮಹಾರಾಜನನ್ನು ಬೇಡಿಕೊಂಡನು. ‘‘ಆಗಬಹುದು’’ ರಾಜ ಅಪ್ಪಣೆ ಕೊಟ್ಟನು. ತಕ್ಷಣ ವಿದ್ಯಾಸಾಗರ ಜಾಗ ಖಾಲಿ ಮಾಡಿದನು. ರಾಮಕೃಷ್ಣನೂ ಏನೂ ಮಾತನಾಡದೆ ಮನೆಗೆ ಹೋದನು.
ಮರುದಿನ ಅದೇ ಸಮಯಕ್ಕೆ ಅದೇ ಕಟ್ಟನ್ನು ತೆಗೆದುಕೊಂಡು ರಾಮಕೃಷ್ಣ ಗಂಭೀರವಾಗಿ ಸಭೆಗೆ ಬಂದನು. ಆದರೆ ಬಹಳ ಹೊತ್ತಾದರೂ ವಿದ್ಯಾಸಾಗರ ಬರಲೇ ಇಲ್ಲ. ಅವನನ್ನು ಕರೆತರಲು ಆಳುಗಳು ಹೋದರು. ಆದರೆ ವಿದ್ಯಾಸಾಗರ ರಾತ್ರೋರಾತ್ರಿ ಅಲ್ಲಿಂದ ಪಲಾಯನ ಮಾಡಿರುವ ವಿಷಯ ತಿಳಿಯಿತು.
ಇಡೀ ಸಭೆ ರಾಮಕೃಷ್ಣನಿಗೆ ಜಯಕಾರ ಹಾಕಿತು. ‘‘ನಿನ್ನಿಂದ ನನ್ನ ಆಸ್ಥಾನದ ಮರ್ಯಾದೆ ಉಳಿಯಿತು. ನಾನೂ `ತಿಲಕಾಷ್ಠಮಹಿಷಬಂಧನ’ ಎಂಬ ಗ್ರಂಥವನ್ನು ಕೇಳಿಯೇ ಇಲ್ಲ. ಎಲ್ಲಿ ಅದನ್ನು ಕೊಡು ನೋಡೋಣ’’ ಎಂದು ಕೃಷ್ಣದೇವರಾಯನು ಮೆಚ್ಚುಗೆಯಿಂದ ನುಡಿದನು. ರಾಮಕೃಷ್ಣನು ಕಟ್ಟನ್ನು ಬಿಚ್ಚಿದನು. ಅದರಲ್ಲಿ ಒಂದಷ್ಟು ಕಟ್ಟಿಗೆಗಳನ್ನು ಒಂದು ಹಗ್ಗದಿಂದ ಕಟ್ಟಲಾಗಿತ್ತು. ರಾಜ ಆಶ್ಚರ್ಯದಿಂದ “ಇದೇನಿದು?” ಎಂದನು.
ಆಗ ರಾಮಕೃಷ್ಣನು ‘‘ಇದು ಎಳ್ಳಿನ ಕಡ್ಡಿಗಳು, ಅಂದರೆ ತಿಲಕಾಷ್ಠ. ಇದು ಎಮ್ಮೆ ಕಟ್ಟುವ ಹಗ್ಗ. ಅಂದರೆ ಮಹಿಷಬಂಧನ. ಅದೇ `ತಿಲಕಾಷ್ಠಮಹಿಷಬಂಧನ’. ಇದಾವುದೋ ಮಹಾಗ್ರಂಥವಿರಬೇಕೆಂದು ಹೆದರಿ ಪಾಪ ವಿದ್ಯಾಸಾಗರ ಓಡಿಹೋದನು’’ ಎಂದನು. ಎಲ್ಲರ ನಗು ಬಹಳ ಹೊತ್ತು ಸಭಾಸ್ಥಾನವನ್ನು ತುಂಬಿತು. ರಾಮಕೃಷ್ಣನ ಬುದ್ಧಿವಂತಿಕೆಯನ್ನು ಮೆಚ್ಚಿದ ಕೃಷ್ಣದೇವರಾಯ ಅವನನ್ನು ಸನ್ಮಾನಿಸಿದನು.
ವಿದ್ಯೆ ವಿನಯವನ್ನು ಕಲಿಸುತ್ತದೆ. ಬುದ್ಧಿ ವಿವೇಕವನ್ನು ಕಲಿಸುತ್ತದೆ.
ಪದಗಳ ಅರ್ಥ
ಸತ್ಕರಿಸು – ಉಪಚರಿಸು
ವಾದ – ಚರ್ಚೆ
ಪೇಚಾಡು – ಪರದಾಡು
ಅಪ್ಪಣೆ – ಒಪ್ಪಿಗೆ
ಪಂಡಿತ -ವಿದ್ವಾಂಸ
ಪೀಠ- ಆಸನ, ಗದ್ದುಗೆ






ಟಿಪ್ಪಣಿ
ಪಲಾಯನ – ಯಾರಿಗೂ ತಿಳಿಸದಂತೆ ಹಾಗೂ ಕಾಣದಂತೆ ಆ ಜಾಗ ಬಿಟ್ಟು ಹೋಗುವುದು.
ಪಕ್ಷಪಾತಿ – ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡುವವನು, ಭೇದಭಾವ ತೋರುವವನು.
ಮುಖ ಅರಳಿತು – ಮುಖದಲ್ಲಿ ನಗು ತುಂಬಿದ್ದು ಸಂತೋಷ ಎದ್ದು ಕಾಣುವುದು.



ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು ಹಾಗೂ ಭಾಷಾ ಚಟುವಟಿಕೆಗಳು
ಬಳಕೆ ಚಟುವಟಿಕೆ
ಪತ್ರಿಕೆಗಳಲ್ಲಿ ಬರುವ ಮಕ್ಕಳ ವಿಭಾಗದಿಂದ ಕಥೆಗಳನ್ನು ಸಂಗ್ರಹಿಸಿ ತರಗತಿಯಲ್ಲಿ ಶಿಕ್ಷಕರ ಸಹಾಯದಿಂದ ಓದಿ.



ಕಲಿಕೆಗೆ ದಾರಿ
ಇವರ ಹೆಸರನ್ನು ಬರೆಯಿರಿ.
ಮಹಾತ್ಮಾ ಗಾಂಧೀಜಿ ಜವಾಹರಲಾಲ್ ನೆಹರು ಬಸವಣ್ಣ
ಬಿ.ಆರ್. ಅಂಬೇಡ್ಕರ್ ಒನಕೆ ಓಬವ್ವ ಕಿತ್ತೂರು ರಾಣಿ ಚೆನ್ನಮ್ಮ
ಕುವೆಂಪು ಮದರ್ ಥೆರೇಸಾ

Please send the notes of 4 th standard 2 nd lesson
https://www.kseebsolutions.com/savi-kannada-text-book-class-4-solutions-chapter-2/