ಪೌರ ಮತ್ತು ಪೌರತ್ವ – (ಪೌರನೀತಿ) ಅಧ್ಯಾಯ – 6

ಪಾಠದ ಪರಿಚಯ
ಈ ಪಾಠದಲ್ಲಿ ಪೌರ ಮತ್ತು ಪೌರತ್ವದ ಪರಿಕಲ್ಪನೆಯನ್ನು ವಿವರಿಸುವುದರೊಂದಿಗೆ ಪೌರತ್ವ ಪಡೆಯುವ ವಿಧಾನ ಹಾಗೂ ಪೌರತ್ವ ಕಳೆದುಕೊಳ್ಳುವ ಸಂದರ್ಭಗಳನ್ನು ಸೂಚಿಸಲಾಗಿದೆ. ಕೊನೆಯಲ್ಲಿ ಉತ್ತಮ ಪೌರರ ಲಕ್ಷಣಗಳನ್ನು ಹೇಳಲಾಗಿದೆ.

ಪಾಠಪ್ರವೇಶ

ಮೇಲಿನ ಚಿತ್ರವನ್ನು ಗಮನಿಸಿ.
1 ಮೈಸೂರು ಅರಮನೆಯನ್ನು ನೋಡಲು ಪ್ರವಾಸಿಗರು ಎಲ್ಲೆಲ್ಲಿಂದ ಬರುತ್ತಾರೆ?
2 ‘ಎ’ ಭಾಗದಲ್ಲಿರುವವರೆಲ್ಲರೂ ಭಾರತೀಯರೇ?
3 ವಿದೇಶಿಯರನ್ನು ನೀನು ಹೇಗೆ ಗುರ್ತಿಸುವೆ?

ಸರಿತಾಳ ಸಂಶಯಗಳು
ಸರಿತಾ ದಸರಾ ರಜೆಯಲ್ಲಿ ಬೇಲೂರು, ಹಳೇಬೀಡು ಮತ್ತು ಮೈಸೂರು ನೋಡಲು ತನ್ನ ತಾಯ್ತಂದೆಯೊಂದಿಗೆ ಹೋಗಿದ್ದಳು. ಪ್ರತಿಯೊಂದರ ಬಗ್ಗೆ ಹೆಚ್ಚಿಗೆ ತಿಳಿಯುವ ಕುತೂಹಲದಿಂದ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಳು. ಮೈಸೂರು ಅರಮನೆಯ ವೀಕ್ಷಣೆಗೆ ಬಂದಾಗ ಅವಳ ಗಮನ ಬೇರೆಡೆಗೆ ಹೋಗಿತ್ತು. ಇದನ್ನು ಗಮನಿಸಿದ ಅವಳ ತಂದೆ ಹೀಗೆ ಪ್ರಶ್ನಿಸಿದರು.

ತಂದೆ : ಮಗು, ಯಾರನ್ನು ನೋಡುತ್ತಿರುವೆ?
ಸರಿತಾ : ಅಲ್ಲಿ ನೋಡಿ, ಮುಖಚಹರೆ, ಮೈಕಟ್ಟು, ಉಡುಗೆ ತೊಡುಗೆ, ಭಾಷೆ ಎಲ್ಲವೂ ವಿಭಿನ್ನವಾಗಿ ಕಾಣುತ್ತದೆ. ಅಪ್ಪ ಅವರು ಯಾರು?
ತಂದೆ : ಹೌದು ಅವರು ಬೇರೆ ದೇಶದ ನಿವಾಸಿಗಳು – ವಿದೇಶಿಯರು. ಭಾರತವನ್ನು ಸುತ್ತಾಡಿ ಹೋಗಲು ಇಲ್ಲಿಗೆ ಬಂದವರು. ಅವರು ಬೇರೆ ದೇಶದ ಪೌರರು.
ಸರಿತಾ : ಪೌರರು ಎಂದರೆ ಯಾರು?
ತಂದೆ : ನಮ್ಮ ದೇಶ ಭಾರತ. ನಾವು ಭಾರತೀಯರು. ನಮ್ಮ ತಾತ, ಮುತ್ತಾತ ಕೂಡ ಇಲ್ಲಿಯೇ ಹುಟ್ಟಿ ನೆಲೆಸಿದ್ದವರು. ನಾವೆಲ್ಲಾ ಇಲ್ಲಿಯ ಶಾಶ್ವತ ನಿವಾಸಿಗಳು, ಪೌರರು ಒಂದು ದೇಶದ ಶಾಶ್ವತ ನಿವಾಸಿಗಳು. ಅಲ್ಲಿಯೇ ಹುಟ್ಟಿ ಬದುಕುವವರು. ಅವರಿಗೆ ತಮ್ಮ ದೇಶದ ಬಗ್ಗೆ ನಿಷ್ಠೆ, ಗೌರವವಿದೆ.
ಸರಿತಾ : ನಮಗೂ ವಿದೇಶಿಯರಿಗೂ ಇರುವ ವ್ಯತ್ಯಾಸವೇನು?
ತಂದೆ : ಇಲ್ಲಿಯ ಪೌರರಾದ ನಮಗೆ ಕೆಲವು ಹಕ್ಕುಗಳಿವೆ. ವಿದೇಶಿಯರಿಗೆ ಅಂತಹ ಹಕ್ಕುಗಳಿಲ್ಲ.
ಸರಿತಾ : ಪೌರತ್ವ ಎಂದರೇನು?
ತಂದೆ : ನಾವೆಲ್ಲರೂ ನಮ್ಮ ಕುಟುಂಬದ ಸದಸ್ಯರಿದ್ದಂತೆ. ಈ ದೇಶದ ಸದಸ್ಯರು ಕೂಡ ಆಗಿದ್ದೇವೆ. ಒಂದು ದೇಶದ ಸದಸ್ಯತ್ವವನ್ನು ‘ಪೌರತ್ವ’ ಎನ್ನುತ್ತೇವೆ.
ಸರಿತಾ : ದೇಶವೊಂದರ ಪೌರತ್ವವನ್ನು ಪಡೆಯುವ ವಿಧಾನಗಳು ಯಾವುವು?
ತಂದೆ : ಒಂದು ದೇಶದ ಪೌರತ್ವ ಪಡೆಯಲು ಸಾಮಾನ್ಯವಾಗಿ ಎರಡು ವಿಧಾನಗಳಿವೆ. ಒಂದನೆಯದು – ಒಂದು ದೇಶದಲ್ಲಿ ಹುಟ್ಟಿದ ಮಗು ಆ ದೇಶದ ಪೌರತ್ವವನ್ನು ಸಹಜವಾಗಿಯೇ ಪಡೆಯುತ್ತದೆ. ಇದಕ್ಕೆ ಸಹಜ ಪೌರತ್ವ ಎನ್ನುವರು. ಎರಡನೆಯದು- ಒಬ್ಬ ವ್ಯಕ್ತಿ ತನ್ನ ದೇಶದ ಪೌರತ್ವವನ್ನು ಬಿಟ್ಟುಕೊಟ್ಟು, ಇನ್ನೊಂದು ದೇಶದ ಪೌರತ್ವ ಪಡೆಯುವುದು. ಇದಕ್ಕೆ ಸಹಜೀಕೃತ ಪೌರತ್ವ ಎನ್ನುವರು.
ಸರಿತಾ : ಯಾವ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ತನ್ನ ದೇಶದ ಪೌರತ್ವವನ್ನು ಕಳೆದುಕೊಳ್ಳುತ್ತಾನೆ?
ತಂದೆ : ತನ್ನ ದೇಶದ ಪೌರತ್ವವನ್ನು ಕಳೆದುಕೊಳ್ಳುವ ಕೆಲವು ಸಂದರ್ಭಗಳಿವೆ ಉದಾಹರಣೆಗೆ ಒಬ್ಬ ವ್ಯಕ್ತಿ ಇನ್ನೊಂದು ದೇಶದ ಪೌರತ್ವವನ್ನು ಪಡೆದುಕೊಂಡನೆಂದಾದರೆ ತನ್ನ ಮೂಲ ದೇಶದ ಪೌರತ್ವವನ್ನು ಕಳೆದುಕೊಳ್ಳುತ್ತಾನೆ. ಏಕಕಾಲದಲ್ಲಿ ಎರಡು ದೇಶಗಳ ಪೌರತ್ವವಿರುವುದು ಸಾಧ್ಯವಿಲ್ಲ.
ಸರಿತಾ : ಅಪ್ಪ ನಾನು ಭಾರತವನ್ನು ಪ್ರೀತಿಸುತ್ತೇನೆ. ಭಾರತೀಯ ಪೌರಳಾಗಿಯೇ ಇರುತ್ತೇನೆ.

ತಂದೆ : ಒಳ್ಳೆಯದು ಮಗಳೇ, ಬಾ ಅರಮನೆಯ ಒಳಗೆ ನೋಡಿಕೊಂಡು ಬರೋಣ.

ಉತ್ತಮ ಪೌರನ ಲಕ್ಷಣಗಳು

ಪ್ರತಿಯೊಬ್ಬ ಪೌರನಿಗೂ ತನ್ನ ದೇಶದಲ್ಲಿ ಹಕ್ಕುಗಳಿವೆ ಮತ ಚಲಾಯಿಸುವುದು, ಚುನಾವಣೆಗೆ ನಿಲ್ಲುವುದು, ಸರ್ಕಾರಿ ಸೇವೆ ಸಲ್ಲಿಸುವುದು, ರಕ್ಷಣಾ ಪಡೆ ಸೇರುವುದು ಇವೇ ಮುಂತಾದುವು ಅವನ ಹಕ್ಕುಗಳು. ಇದರೊಂದಿಗೆ ಅವನಿಗೆ ಹೊಣೆಗಾರಿಕೆಯೂ ಮಾಡಬೇಕಾದ ಕೆಲವು ಕರ್ತವ್ಯಗಳೂ ಇವೆ. ಅವುಗಳೆಂದರೆ –
● ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗಳನ್ನು ಗೌರವಿಸುವುದು.
● ಚುನಾವಣೆಯಲ್ಲಿ ಮತ ಚಲಾಯಿಸುವುದು.
● ಕಾನೂನನ್ನು ಪಾಲಿಸುವುದು.
● ದೇಶಕ್ಕೆ ಆಪತ್ತು ಬಂದಾಗ ರಕ್ಷಣೆಯ ಕಾರ್ಯದಲ್ಲಿ ಪಾಲ್ಗೊಳ್ಳುವುದು.
● ತೆರಿಗೆಗಳನ್ನು ತಪ್ಪದೇ ಪಾವತಿ ಮಾಡುವುದು.
● ಪರಿಸರ ರಕ್ಷಣೆ ಬಗ್ಗೆ ಕಾಳಜಿ ಇರುವುದು.
● ಲಂಚ ನೀಡದಿರುವುದು ಮತ್ತು ಪಡೆಯದಿರುವುದು.
● ಹಿರಿಯ ನಾಗರಿಕರಿಗೆ ಸಹಾಯ ಮಾಡುವುದು.
● ಸಾರ್ವಜನಿಕ ಹಿತಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಿರುವುದು.
● ಕುಟುಂಬ ಯೋಜನೆ ಸೇರಿದಂತೆ ಜನಕಲ್ಯಾಣ ಯೋಜನೆಗಳಿಗೆ ಬೆಂಬಲ ನೀಡುವುದು.
ಇವು ಕೆಲವು ಕರ್ತವ್ಯಗಳಾಗಿರದೆ ಉತ್ತಮ ಪೌರನ ಲಕ್ಷಣಗಳೂ ಆಗಿವೆ.

ನಿಮಗೆ ತಿಳಿದಿರಲಿ

1 ನಮ್ಮ ದೇಶದಲ್ಲಿ ಏಕ ಪೌರತ್ವವಿದೆ. ಕರ್ನಾಟಕದ ಪೌರತ್ವ ಅಥವಾ ಕೇರಳದ ಪೌರತ್ವ ಎಂದು ಬೇರೆಯಿಲ್ಲ.
2 ಪೌರನೀತಿಯು ಪೌರರ ಹಕ್ಕು, ಕರ್ತವ್ಯ ಮತ್ತು ಸಾರ್ವಜನಿಕ ಜೀವನದಲ್ಲಿ ಪೌರರು ವಹಿಸಬೇಕಾದ ಪಾತ್ರವನ್ನು ವಿವರಿಸುತ್ತದೆ. ಪೌರನೀತಿಯ ಜ್ಞಾನ ಎಲ್ಲರಿಗೂ ಅವಶ್ಯಕ.

ಸಂವೇದ ವಿಡಿಯೋ ಪಾಠಗಳು

Samveda – 6th – Social Science – Citizenship

ಪ್ರಶ್ನೋತ್ತರಗಳು

6ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ-6 ಪೌರ ಮತ್ತು ಪೌರತ್ವ ಅಭ್ಯಾಸದ ಪ್ರಶ್ನೋತ್ತರಗಳು @rakeshmagadum

****************