ನಮ್ಮ ಸಂವಿಧಾನ – ಅಧ್ಯಾಯ 9

ಪಾಠದ ಪರಿಚಯ
ಈ ಪಾಠದಲ್ಲಿ ಸಂವಿಧಾನದ ಅರ್ಥ, ಮಹತ್ವ, ರಚನೆ ಹಾಗೂ ಅದರ ಮುಖ್ಯ ಲಕ್ಷಣಗಳನ್ನು ನಿರೂಪಿಸಲಾಗಿದೆ.

ಸರ್ಕಾರ ಎಂದರೇನು? ಪ್ರಜೆಗಳ ಬದುಕು ಚೆನ್ನಾಗಿರಬೇಕಾದರೆ ದೇಶದಲ್ಲಿ ಶಿಸ್ತುಪಾಲನೆ, ಶಾಂತಿ, ವ್ಯವಸ್ಥಿತ ಆಡಳಿತ, ಭದ್ರತೆ, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮುಂತಾದವುಗಳನ್ನು ಸ್ಥಾಪಿಸುವ ಹಾಗೂ ನಿರ್ವಹಿಸುವ ಸಂಘಟನೆಯೊಂದು ಬೇಕಾಗುತ್ತದೆ. ಇಂಥ ಸಂಘಟನೆಯನ್ನು ಸರ್ಕಾರ ಎನ್ನುತ್ತಾರೆ.

ಸಂವಿಧಾನದ ಅರ್ಥ ಮತ್ತು ಮಹತ್ವ
ಸಂವಿಧಾನವೆಂದರೆ ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನು. ಅದು ಸರ್ಕಾರದ ಅಂಗಗಳು, ಅವುಗಳ ಅಧಿಕಾರ ಹಾಗೂ ಕಾರ್ಯಗಳನ್ನು ನಿರೂಪಿಸುತ್ತದೆ. ಸಂವಿಧಾನದಲ್ಲಿ ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳ ಉಲ್ಲೇಖವೂ ಇರುತ್ತದೆ. ಸಂವಿಧಾನವು ಸರಕಾರಕ್ಕೆ ಮಾರ್ಗಸೂಚಿಯಂತಿದೆ.

ಸಂವಿಧಾನದ ಮಹತ್ವ: ಸಂವಿಧಾನವು ದೇಶದ ಮೂಲಭೂತ ಕಾನೂನು ಆಗಿರುವುದರಿಂದ ಅದು ಮಹತ್ವದ್ದಾಗಿದೆ. ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ಸಂಸತ್ ಸದಸ್ಯರು, ನ್ಯಾಯಾಧೀಶರು, ಅಧಿಕಾರಿ ವರ್ಗ ಎಲ್ಲರೂ ಸಂವಿಧಾನದ ಪಾಲನೆ ಮಾಡಲು ಕಟಿಬದ್ಧರು.

* ಸಂವಿಧಾನವು ಜನತೆಯ ಆದರ್ಶಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ.

* ಅದು ಸರ್ಕಾರದ ನೀತಿ ಮತ್ತು ಕಾರ್ಯವಿಧಾನಗಳನ್ನು ನಿಯಂತ್ರಿಸುತ್ತದೆ.

* ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಸೂತ್ರವನ್ನು ಎತ್ತಿಹಿಡಿದು ಪ್ರಜೆಗಳ ಹಕ್ಕುಗಳನ್ನು ರಕ್ಷಿಸುತ್ತದೆ.

ಭಾರತ ಸಂವಿಧಾನದ ರಚನೆ

ಭಾರತದ ಸಂವಿಧಾನವನ್ನು `ಸಂವಿಧಾನ ಸಭೆ’ ಎಂಬ ವಿಶೇಷ ಸಭೆಯು ಸಿದ್ಧಪಡಿಸಿತು. ಸಭೆಯ ಸದಸ್ಯರು ಪ್ರಥಮ ಅಧಿವೇಶನದಲ್ಲಿ ಡಾ. ರಾಜೇಂದ್ರ ಪ್ರಸಾದರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

ಸಂವಿಧಾನ ಸಭೆಯಲ್ಲಿ 299 ಮಂದಿ ಸದಸ್ಯರಿದ್ದರು. 1946ರಲ್ಲಿ ಅದರ ಪ್ರಥಮ ಅಧಿವೇಶನ ನಡೆಯಿತು.

ಸಂವಿಧಾನ ಸಭೆಯು ತನ್ನ ಕಾರ್ಯವನ್ನು ಚುರುಕುಗೊಳಿಸುವ ಉದ್ದೇಶದಿಂದ ಕೆಲವು ಸಮಿತಿಗಳನ್ನು ರಚಿಸಿತು. ಅಲ್ಲದೆ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಲು `ಸಂವಿಧಾನ ಕರಡು ಸಮಿತಿ’ಯನ್ನು ನೇಮಿಸಿತು. ಈ ಸಮಿತಿಯ ಅಧ್ಯಕ್ಷರು ಡಾ. ಬಿ.ಆರ್. ಅಂಬೇಡ್ಕರ್.

* ಸದಸ್ಯರು ಸಂವಿಧಾನದ ಕರಡು ಪ್ರತಿಯನ್ನು ಪರಿಶೀಲಿಸಿ 2473 ತಿದ್ದುಪಡಿಗಳನ್ನು ಸೂಚಿಸಿದ್ದರು. ಕರಡು ಸಂವಿಧಾನ ಮತ್ತು ತಿದ್ದುಪಡಿಗಳನ್ನು ಸಂವಿಧಾನ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. ಹೀಗೆ ಸಂವಿಧಾನಕ್ಕೆ ಅಂತಿಮ ರೂಪ ನೀಡಲು ಸುಮಾರು ಮೂರು ವರ್ಷಗಳು ಬೇಕಾದವು.
* ಡಾ. ಅಂಬೇಡ್ಕರ್ 15-8-1947ರಿಂದ 6-10-1951ರವರೆಗಿನ ಅವಧಿಯಲ್ಲಿ ಕಾನೂನು ಮಂತ್ರಿಗಳಾಗಿದ್ದರು.

26 ಜನವರಿ 1950ರಂದು ಸಂವಿಧಾನವನ್ನು ಜಾರಿಗೊಳಿಸಲಾಯಿತು. ಸಂವಿಧಾನವು ಭಾರತವನ್ನು ಗಣರಾಜ್ಯವೆಂದು ಘೋಷಣೆ ಮಾಡಿತು. ನಾವು ಪ್ರತಿ ವರ್ಷವೂ ಈ ದಿನದಂದು ಗಣರಾಜ್ಯೋತ್ಸವವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತೇವೆ.

ಸಂವಿಧಾನದಲ್ಲಿ ಉಲ್ಲೇಖಿಸಿದಂತೆ 1951-52ರಲ್ಲಿ ಪ್ರಥಮ ಮಹಾಚುನಾವಣೆಗಳು ನಡೆದವು. ರಾಜ್ಯಸಭೆ’ ಮತ್ತುಲೋಕಸಭೆ’ ಎಂಬ ಎರಡು ಸದನಗಳನ್ನೊಳಗೊಂಡ ಮೊದಲ ಚುನಾಯಿತ ಸಂಸತ್ತು (ಪಾರ್ಲಿಮೆಂಟ್) 1952ರಲ್ಲಿ ಅಸ್ತಿತ್ವಕ್ಕೆ ಬಂದಿತು.

ನಮ್ಮ ಸಂವಿಧಾನದ ಗಾತ್ರ: ಭಾರತ ಸಂವಿಧಾನವು 444 ವಿಧಿಗಳನ್ನು ಒಳಗೊಂಡಿದೆ. ಸಂವಿಧಾನದಲ್ಲಿ 12 ಪರಿಚ್ಛೇದಗಳಿವೆ. ಜನವರಿ 12, 2022ರವರೆಗೆ ಸಂವಿಧಾನವನ್ನು 105 ಬಾರಿ ತಿದ್ದುಪಡಿಮಾಡಲಾಗಿದೆ.

ಪ್ರಸ್ತಾವನೆ
ಸಂವಿಧಾನದ ಆರಂಭದಲ್ಲಿ ಪೀಠಿಕೆಯ ರೂಪದಲ್ಲಿ `ಪ್ರಸ್ತಾವನೆ’ ಎಂಬುದಿದೆ. ಸಂವಿಧಾನದ ಹೃದಯದಂತಿರುವ ಈ ಪ್ರಸ್ತಾವನೆಯು ಜನತೆಯ ಆದರ್ಶಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸಿದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ, ವ್ಯಕ್ತಿಗೌರವ, ಭ್ರಾತೃತ್ವ ಹಾಗೂ ರಾಷ್ಟ್ರೀಯ ಏಕತೆ ಮುಂತಾದವುಗಳು ಅಂತಹ ತತ್ವಾದರ್ಶಗಳು.

ಸಂವಿಧಾನದ ಮುಖ್ಯ ಲಕ್ಷಣಗಳು

ನಮ್ಮ ಸಂವಿಧಾನಕ್ಕೆ ತನ್ನದೇ ಆದ ಕೆಲವು ಲಕ್ಷಣಗಳಿವೆ.

ಲಿಖಿತ ಸಂವಿಧಾನ: ಭಾರತ ಸಂವಿಧಾನವು ಲಿಖಿತ ರೂಪದಲ್ಲಿದೆ. ಇದು ಪ್ರಪಂಚದಲ್ಲಿಯೇ ಅತಿ ವಿಸ್ತಾರವಾದ ಸಂವಿಧಾನವಾಗಿದೆ. ಸರ್ಕಾರದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ರಚನೆ, ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಇದರಲ್ಲಿ ಹೇಳಲಾಗಿದೆ. ಸಂವಿಧಾನವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒಂದೇ ಇದೆ. ಆದ್ದರಿಂದ ಸಂವಿಧಾನದ ಗಾತ್ರ ವಿಶಾಲವಾಗಿದೆ.

ಗಣರಾಜ್ಯ: ಭಾರತವು ಒಂದು ಗಣರಾಜ್ಯವೆಂದು ಸಂವಿಧಾನವು ಸಾರಿದೆ. ಗಣರಾಜ್ಯದಲ್ಲಿ ರಾಜರ ಆಳ್ವಿಕೆಯಿರುವುದಿಲ್ಲ. ಬದಲಾಗಿ ಪ್ರಜೆಗಳಿಂದ ಚುನಾಯಿತರಾದ ಪ್ರತಿನಿಧಿಗಳ ಆಳ್ವಿಕೆಯಿರುತ್ತದೆ. ಇಂಥ ರಾಜಕೀಯ ವ್ಯವಸ್ಥೆಯನ್ನು ಹೊಂದಿರುವ ಭಾರತವು ಒಂದು `ಪ್ರಜಾಸತ್ತಾತ್ಮಕ ಗಣರಾಜ್ಯ’ವಾಗಿದೆ.

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಉಲ್ಲೇಖ: ಸಂವಿಧಾನವು ಪೌರರಿಗೆ ಆರು ಮೂಲಭೂತ ಹಕ್ಕುಗಳನ್ನು ನೀಡಿದೆ. ಅವುಗಳನ್ನು ಮೊಟಕುಗೊಳಿಸುವ ಯಾವುದೇ ಶಾಸನವನ್ನಾಗಲಿ, ನಿಯಮಗಳನ್ನಾಗಲಿ, ಉಪಕ್ರಮ ಕೈಗೊಳ್ಳುವುದನ್ನಾಗಲಿ ಯಾವುದೇ ರಾಜ್ಯವು ಮಾಡುವಂತಿಲ್ಲ. ಹಕ್ಕುಗಳು ಉಲ್ಲಂಘನೆಯಾದಾಗ ಅವುಗಳನ್ನು ರಕ್ಷಿಸುವ ಅಧಿಕಾರ ನ್ಯಾಯಾಂಗಕ್ಕಿದೆ. ನಾಗರಿಕರು ಹಕ್ಕುಗಳನ್ನು ತಮಗಿಷ್ಟ ಬಂದಂತೆ ಚಲಾಯಿಸಿ ಸಾಮಾಜಿಕ ಅಶಾಂತಿಗೆ ಕಾರಣವಾಗಬಾರದು ಅಥವಾ ಕಾನೂನು ವ್ಯವಸ್ಥೆಗೆ ಭಂಗವನ್ನುಂಟು ಮಾಡಬಾರದು. ಸಂವಿಧಾನದಲ್ಲಿ ನಾಗರಿಕರು ಮಾಡಬೇಕಾದ ಹನ್ನೊಂದು ಕರ್ತವ್ಯಗಳನ್ನೂ ಉಲ್ಲೇಖಿಸಲಾಗಿದೆ.

ಸರ್ವಧರ್ಮಸಮಭಾವ: ಸಂವಿಧಾನವು `ಸರ್ವಧರ್ಮಸಮಭಾವ’ (ಸೆಕ್ಯುಲರಿಸಂ) ತತ್ವವನ್ನು ಎತ್ತಿಹಿಡಿದಿದೆ. ಸರ್ಕಾರವು ಪಕ್ಷಪಾತಮಾಡದೆ ಎಲ್ಲ ಮತಧರ್ಮಗಳನ್ನು ಸಮಾನ ದೃಷ್ಟಿಯಿಂದ ನೋಡಿಕೊಳ್ಳಬೇಕೆಂಬುದು ಇದರರ್ಥ. ಸರ್ಕಾರವು ಯಾವುದೇ ಮತಧರ್ಮವನ್ನು ದೇಶದ ಧರ್ಮವೆಂದು ಮಾನ್ಯತೆ ನೀಡುವುದಿಲ್ಲ. ಅದು ಪ್ರತಿಯೊಬ್ಬನಿಗೂ ತನ್ನ ಧರ್ಮಾಚರಣೆ ಹಾಗೂ ನಂಬಿಕೆಯ ಸ್ವಾತಂತ್ರ್ಯ ನೀಡಿದೆ. ಧಾರ್ಮಿಕ ಸ್ವಾತಂತ್ರ್ಯವನ್ನು ಸಾಮಾಜಿಕ ಹಿತದೃಷ್ಟಿಯಿಂದ ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಸರ್ವಧರ್ಮಸಮಭಾವವು ನಾಸ್ತಿಕ ಅಥವಾ ದೇವರು ಹಾಗೂ ಮತಧರ್ಮಗಳ ವಿರೋಧಿ ಎಂದಲ್ಲ.

ಸ್ವತಂತ್ರ ನ್ಯಾಯಾಂಗ: ನಮ್ಮ ನ್ಯಾಯಾಂಗವು ಸ್ವತಂತ್ರವಾಗಿದ್ದು ಸಾಕಷ್ಟು ಅಧಿಕಾರವನ್ನು ಹೊಂದಿದೆ. ಸರ್ಕಾರವಾಗಲಿ, ಸಂಸತ್ ಆಗಲಿ ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಕಾನೂನಿನ ಎದುರು ಎಲ್ಲರೂ ಸಮಾನರು; ನ್ಯಾಯ ಪಡೆಯುವ ಅವಕಾಶ ಎಲ್ಲರಿಗಿದೆ ಎಂಬ ತತ್ವವನ್ನು ನ್ಯಾಯಾಂಗ ಎತ್ತಿ ಹಿಡಿದಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲಿಸಲೇ ಬೇಕು ಮತ್ತು ಅದು ಅಂತಿಮ ನಿರ್ಧಾರ.

ವಯಸ್ಕ ಮತದಾನ ಪದ್ಧತಿ: ವಯಸ್ಕ ನಾಗರಿಕರು (18 ವರ್ಷಕ್ಕೆ ಮೇಲ್ಪಟ್ಟವರು) ಮತದಾನ ಮಾಡಿ ಪ್ರತಿನಿಧಿಗಳನ್ನು ಚುನಾಯಿಸುವ ಕ್ರಮವನ್ನು `ವಯಸ್ಕ ಮತದಾನ ಪದ್ಧತಿ’ ಎನ್ನುವರು. ನಾಗರಿಕರೆಲ್ಲರು ಯಾವುದೇ ಭೇದಭಾವವಿಲ್ಲದೆ ಮತ ಚಲಾಯಿಸುತ್ತಾರೆ.

ಅಸ್ಪೃಶ್ಯತೆಯ ರದ್ಧತಿ: ಜನ್ಮಾಧಾರಿತ ಅಸ್ಪೃಶ್ಯತೆಯು ಸಮಾಜದ ಒಂದು ಅನಿಷ್ಟ ಪದ್ದತಿಯಾಗಿದೆ. ಇದನ್ನು ಅಳಿಸಿಹಾಕಲು ಅನೇಕ ಮಹನೀಯರು ಶತಮಾನಗಳಿಂದ ಪ್ರಯತ್ನ ಮಾಡಿದರು. ಆದರೆ ಅದು ಇನ್ನೂ ಉಳಿದುಕೊಂಡಿದೆ. ಭಾರತದ ಸಂವಿಧಾನದ ಆದರ್ಶವು ಸುಖೀರಾಜ್ಯವನ್ನು (ವೆಲ್‍ಫೇರ್ ಸ್ಟೇಟ್) ಸ್ಥಾಪಿಸುವುದಾಗಿದೆ.

ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಎಲ್ಲರಿಗೂ ನೀಡುವ ಗುರಿಯನ್ನು ಇಟ್ಟುಕೊಂಡಿರುವ ರಾಜ್ಯವನ್ನು ಸಾಮಾನ್ಯವಾಗಿ ಸುಖೀರಾಜ್ಯ ಎನ್ನುವರು.

ಚುನಾವಣಾ ಪದ್ಧತಿ: ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಕಳೆದ ಆರು ದಶಕಗಳಿಂದ ಚುನಾವಣೆಗಳು ಸಾಮಾನ್ಯವಾಗಿ ಕಾಲಕಾಲಕ್ಕೆ ನಡೆದಿವೆ. ಈ ಅವಧಿಯಲ್ಲಿ ಪ್ರಜಾಪ್ರಭುತ್ವ ಪದ್ಧತಿಯು ದೇಶದಲ್ಲಿ ಸಾಕಷ್ಟು ಆಳವಾಗಿ ಬೇರೂರಿದೆ. ಇದರ ಕಾರ್ಯಾಚರಣೆಯಲ್ಲಿ ಕೆಲವು ನ್ಯೂನತೆಗಳು ಕಂಡುಬಂದರೂ ಈ ಪದ್ಧತಿಯು ತೃಪ್ತಿಕರವಾಗಿದೆ.

ಹೊಸ ಪದಗಳು

ಸಂವಿಧಾನ ಕರಡು ಸಮಿತಿ – ‘ಸಂವಿಧಾನ ಸಭೆ’ಯಲ್ಲಿ ಮಂಡಿಸಲಾದ ಸಂವಿಧಾನದ ಕಚ್ಚಾ ಪ್ರತಿಯನ್ನು (ತಿದ್ದಬೇಕಾದ ಪ್ರತಿ) ಸಿದ್ಧಪಡಿಸಿದ ಸಮಿತಿ.
ಅನುಚ್ಛೇದ – ಸಂವಿಧಾನದ ಒಂದು ಭಾಗ.
ಪ್ರಜಾಸತ್ತೆ – ಪ್ರಜೆಗಳ ಆಳ್ವಿಕೆ, ಪ್ರಜಾಪ್ರಭುತ್ವ.

ಸಂವಿಧಾನ ರಚನಾ ಸಂದರ್ಭಗಳ ಚಿತ್ರಗಳು

ಸಂವೇದ ವಿಡಿಯೋ ಪಾಠ

Samveda – 7th – Social Science – Namma Samvidhana

ಅಭ್ಯಾಸಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

*************