ಧನ್ಯವಾದ ಹೇಳಿದ ಕೊಕ್ಕರೆ – ಪಾಠ – 5

ಡಾ. ಅನುಪಮಾ ನಿರಂಜನ

ಪ್ರವೇಶ : `ಬದುಕು, ಬದುಕಲು ಬಿಡು’ ಇದು ಪ್ರಕೃತಿ ಧರ್ಮ. ಪರೋಪಕಾರ, ಸಹಕಾರ, ಪ್ರೀತಿ, ಕರುಣೆ ಮಾನವೀಯತೆಯೊಂದಿಗೆ ಮಾನವ ಬದುಕಿದರೆ, ಬದುಕು ಅರ್ಥಪೂರ್ಣವಾಗುತ್ತದೆ. ತಾಳ್ಮೆ, ಸಹನೆಗಳಿಂದ ಬದುಕನ್ನು ಸ್ವೀಕರಿಸಬೇಕು. ಒಳಿತೆಂಬುದು ದೊರೆಯಬೇಕಾದರೆ ಅದಕ್ಕಾಗಿ ಕಾಯಲೇಬೇಕು. ನಿಸ್ವಾರ್ಥತೆಯಿಂದ ಬದುಕಿದರೆ ನಮ್ಮ ಬದುಕು ಹಸನಾಗುತ್ತದೆ. ನಮ್ಮ ಒಳ್ಳೆಯತನ ನಮ್ಮನ್ನು ಕಾಪಾಡುತ್ತದೆ. ಅಂತಹ ತತ್ವಗಳನ್ನು ಬಿಂಬಿಸುವ ರಂಜನೀಯ ಕಥೆ ಇಲ್ಲಿದೆ.

ಒಂದೂರಿನಲ್ಲಿ ಬಡ ರೈತ ದಂಪತಿಗಳು ಇದ್ದರು. ಅವರಿಗೆ ಹರಿ ಎಂಬ ಮಗನು ಇದ್ದನು. ಅವನು ಸದ್ಗುಣವುಳ್ಳವನು ಮತ್ತು ಕರುಣಾಳುವೂ ಆಗಿದ್ದನು. ಒಂದು ದಿನ ಅವನು ಕೊಳವೊಂದರ ಬಳಿ ಹೋಗುತ್ತಿದ್ದಾಗ ಹುಲ್ಲಿನ ಮೇಲೆ ಬಿಳಿ ಕೊಕ್ಕರೆಯೊಂದು ಬಿದ್ದಿತ್ತು. ಅವನು ಕನಿಕರದಿಂದ ಬಾಗಿ ನೋಡಿದಾಗ ಕೊಕ್ಕರೆಯ ಮೈಯೊಳಗೆ ಚುಚ್ಚಿದ್ದ ಬಾಣವೊಂದು ಕಂಡಿತು. ಹರಿಯು ಮೆಲ್ಲನೆ ಆ ಬಾಣವನ್ನು ಹೊರತೆಗೆದನು. ಗಾಯಕ್ಕೆ ತನಗೆ ತಿಳಿದ ರಸಮೂಲಿಕೆಯನ್ನು ಹಾಕಿದನು. ಕೊಕ್ಕರೆಯ ನೋವು ಕಡಿಮೆಯಾಯಿತು. ಅದು ಆತನಿಗೆ ಮೂರು ಬಾರಿ ತಲೆಬಾಗಿ ನಮಸ್ಕರಿಸಿ ಹೊರಟು ಹೋಯಿತು.

ದಿನಗಳು ಕಳೆದವು ಹರಿಯು ಕೊಕ್ಕರೆಯ ವಿಷಯವನ್ನೇ ಮರೆತುಬಿಟ್ಟನು. ಒಂದು ದಿನ ಸುಂದರಿಯಾದ ಹುಡುಗಿಯೊಬ್ಬಳು ಅವನಲ್ಲಿಗೆ ಬಂದು “ನನಗೆ ತಂದೆ-ತಾಯಿ ಇಲ್ಲ. ಮುಂದಿನ ಊರಿನಲ್ಲಿ ನನ್ನ ಚಿಕ್ಕಪ್ಪನು ಇದ್ದಾನಂತೆ, ಅವನನ್ನು ಹುಡುಕಿಕೊಂಡು ಹೊರಟಿದ್ದೇನೆ. ಇವತ್ತು ರಾತ್ರಿ ನಿಮ್ಮ ಮನೆಯಲ್ಲಿ ಇರಲು ಜಾಗ ಕೊಡ್ತೀರಾ?” ಎಂದು ಕೇಳಿದಳು.

ಹುಡುಗಿ ರಾತ್ರಿಯ ಅಡುಗೆ ಮಾಡಲು ರೈತನ ವೃದ್ಧ ಹೆಂಡತಿಗೆ ನೆರವಾದಳು. ಮನೆಯನ್ನು ಗುಡಿಸಿ, ಸಾರಿಸಿ ಚೊಕ್ಕಟ ಮಾಡಿದಳು. ಮರುದಿನ ಆ ವೃದ್ಧ ದಂಪತಿಗಳು “ಹುಡುಗಿ, ನೀನು ನಮ್ಮಲ್ಲೇ ಇದ್ದುಬಿಡು, ನಮ್ಮ ಮಗಳ ಹಾಗೆ ನೋಡ್ಕೋತೇವೆ” ಎಂದರು. ಹುಡುಗಿಯು ಒಪ್ಪಿ ಅಲ್ಲಿಯೇ ಉಳಿದಳು. ಹರಿಗೆ ಅವಳಲ್ಲಿ ಪ್ರೀತಿ ಹುಟ್ಟಿತು.

ಈ ವರ್ಷ ಮಳೆ ಬಾರದುದರಿಂದ ಕ್ಷಾಮ ಬಂತು. ರೈತ ದಂಪತಿಗಳು ಕಷ್ಟದಲ್ಲಿ ತೊಳಲಾಡುತ್ತಿದ್ದಾಗ ಹುಡುಗಿ ಅಂದಳು “ಮೂರು ದಿವಸ ನನ್ನನ್ನು ಒಂದು ಕೊಠಡಿಯಲ್ಲಿ ಬಿಡಿ, ಪೀತಾಂಬರ ನೇಯ್ದು ಕೊಡ್ತೀನಿ. ನೀವ್ಯಾರೂ ಒಳಗೆ ಬರಬಾರದು, ಊಟವನ್ನು ಬಾಗಿಲ ಬಳಿಯಿಟ್ಟರೆ ರಾತ್ರಿಯ ಹೊತ್ತು ಬಂದು ತಿನ್ಕೋತ್ತೇನೆ”.

ಅಂತಯೇ ಹುಡುಗಿ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಳು. ಅವಳ ಆದೇಶದ ಪ್ರಕಾರ ಯಾರೂ ಒಳಗೆ ಹೋಗಲಿಲ್ಲ. ಪ್ರತಿದಿನ ರಾತ್ರಿ ಬಾಗಿಲ ಬಳಿ ಅನ್ನಸಾರುಗಳ ತಟ್ಟೆಯನ್ನು ಇಡುತ್ತಿದ್ದ ಹರಿ, ಬೆಳಗೆದ್ದು ಖಾಲಿಯಾದ ತಟ್ಟೆಯನ್ನು ತೆಗೆದುಕೊಂಡು ಹೋಗುತ್ತಿದ್ದನು.

ಮೂರು ದಿನಗಳ ಬಳಿಕ ಹುಡುಗಿ ಹೊರಬಂದಾಗ ಅವಳ ಕೈಯಲ್ಲಿ ಪೀತಾಂಬರವಿತ್ತು. “ಇದನ್ನು ಶ್ರೀಮಂತ ವರ್ತಕರಿಗೆ ಮಾರಿ ಬನ್ನಿ” ಎಂದಳು ಹುಡುಗಿ. ಹರಿ ಅದನ್ನು ಮಾರಿ ಬಂದನು. ಪೀತಾಂಬರಕ್ಕೆ ನೂರಾರುವರಹಗಳು ಸಿಕ್ಕಿದವು. ಒಂದು ವರ್ಷ ಅವರೆಲ್ಲ ಸುಖವಾಗಿದ್ದರು.

ಮರುವರ್ಷವೂ ಕ್ಷಾಮ ಬಂತು ಮತ್ತೆ ಹುಡುಗಿ, “ಮೂರು ದಿನ ಯಾರೂ ಒಳಗೆ ಬರಬೇಡಿ” ಎಂದು ಹೇಳಿ ಕೊಠಡಿಯ ಬಾಗಿಲು ಹಾಕಿಕೊಂಡಳು. ಒಂದು ದಿನ ಕಳೆಯಿತು, ಎರಡು ದಿನ ಕಳೆಯಿತು. ಹರಿ ಅವಳನ್ನು ನೋಡದೆ ಇರಲಾರದಾದನು. ಕೊಠಡಿಯೊಳಗೆ ಹುಡುಗಿಯನ್ನು ಕಂಡು ಅವಳಿಗೆ ತನ್ನ ಪ್ರೇಮದ ವಿಷಯವನ್ನು ಹೇಳಬೇಕು ಎಂದುಕೊಂಡನು. ಬಾಗಿಲನು ನೂಕಿ ಒಳಗೆ ಹೋದನು. ಆಶ್ಚರ್ಯ! ಅಲ್ಲಿ ಹುಡುಗಿ ಇರಲಿಲ್ಲ, ಚಿನ್ನ ಬೆಳ್ಳಿ ದಾರಗಳನ್ನು ಕೂಡಿಸಿ ಕೊಕ್ಕರೆಯೊಂದು ಪೀತಾಂಬರವನ್ನು ನೇಯುತ್ತಿತ್ತು. ಅದು ತಾನು ಕಾಪಾಡಿದ ಹಕ್ಕಿ ಎಂಬುದರಲ್ಲಿ ಹರಿಗೆ ಸಂಶಯವಿರಲಿಲ್ಲ. ಕೊಕ್ಕರೆ ಎಂದಿತು “ನಾನು ಬೇಡ ಎಂದು ಹೇಳಿದರೂ ನೀನ್ಯಾಕೆ ಒಳಗೆ ಬಂದೆ? ಈಗ ಎಲ್ಲಾ ಹಾಳಾಯಿತ್ತಲ್ಲಾ!” ಹರಿ ತಲೆತಗ್ಗಿಸಿ ನಿಂತನು. “ನಿಜ ಹುಡುಗಿಯಾಗಿದ್ದ ನಾನು ನೀನು ಕಾಪಾಡಿದ ಕೊಕ್ಕರೆಯೇ! ನಿನಗೆ ಉಪಕಾರ ಮಾಡಬೇಕೆಂದು ನಾನು ಹುಡುಗಿಯಾಗಿದ್ದೆ, ನೀನೀಗ ಒಳ ಬರದಿದ್ದರೆ ಪೀತಾಂಬರದೊಂದಿಗೆ ನಾನು ಹುಡುಗಿಯಾಗಿ ಹೊರಬಂದು ನಿನ್ನ ಹೆಂಡತಿಯಾಗ್ತಿದ್ದೆ, ನೀನು ಕೊಟ್ಟ ಮಾತಿಗೆ ತಪ್ಪಿದ್ದರಿಂದ ಇನ್ನು ನಾನು ಹುಡುಗಿಯಾಗುವಂತಿಲ್ಲ. ಹೋಗು, ಈಗ ಮುಗಿಯುತ್ತ ಬಂದಿರೋ ಪೀತಾಂಬರ ಮಾರು, ನಿಮ್ಮ ಜೀವಮಾನವಿಡಿ ಸಾಕಾಗುವಷ್ಟು ಹಣ ಸಿಗ್ತದೆ” ಎನ್ನುತ್ತಾ ಕೊಕ್ಕರೆ ಹಾರಿಹೋಯಿತು.

ಕವಿ ಕೃತಿ ಪರಿಚಯ:

ಡಾ. ಅನುಪಮಾ ನಿರಂಜನ : ಅನುಪಮಾ ನಿರಂಜನ ಅವರು 1934ರ ಮೇ 17ರಂದು ತೀರ್ಥಹಳ್ಳಿಯಲ್ಲಿ ಜನಿಸಿದರು. ಅನುಪಮಾ ಅವರಿಗೆ ತಂದೆ-ತಾಯಿಕೊಟ್ಟ ಹೆಸರು ವೆಂಕಟಲಕ್ಷ್ಮಿ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದರ ಜೊತೆಜೊತೆಗೇ ಅವರು ಕನ್ನಡದಲ್ಲಿ ಸಾಹಿತ್ಯರಚನೆಯನ್ನು ಮಾಡಿದರು. ಅವರೊಬ್ಬ ಜನಪ್ರಿಯ ಲೇಖಕಿ. ‘ಕೇಳು ಕಿಶೋರಿ’ ಹಾಗೂ ‘ತಾಯಿ ಮಗು’ ‘ಅನಂತಗೀತ’, ‘ಶ್ವೇತಾಂಬರಿ’, ಹಿಮದ ಹೂ’,ಆಳ’, `ದಿಟ್ಟೆ’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಸೋವಿಯತ್ ಲ್ಯಾಂಡ್ ನೆಹರು ಪ್ರಸಸ್ತಿ, ಕಾಸರಗೋಡು ಮಹಿಳಾ ಸಮ್ಮೇಳನದ ಅಧ್ಯಕ್ಷತೆ, ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.

ಪದಗಳ ಅರ್ಥ

ರಸಮೂಲಿಕೆ – ಗಿಡಮೂಲಿಕೆ, ಔಷಧಿ;
ಕೊಳ – ಸರೋವರ;
ನೆರವು – ಸಹಾಯ;
ವೃದ್ಧ – ವಯಸ್ಸಾದ;
ಕ್ಷಾಮ – ಬರಗಾಲ;
ಆದೇಶ – ಆಜ್ಞೆ;
ವರಹ – ಚಿನ್ನದ ನಾಣ್ಯ;
ನೇಯುವುದು – ತಯಾರಿಸು, ಹೆಣೆಯುವುದು;
ಕರುನಾಳು – ಕನಿಕರವುಳ್ಳವನು;
ಪೀತಾಂಬರ – ರೇಷ್ಮೆಬಟ್ಟೆ;

ಸಂವೇದ ವಿಡಿಯೋ ಪಾಠಗಳು

Samveda – 6th – Kannada – Dhanyavaada Helida Kokkare

ಪೂರಕ ವಿಡಿಯೋಗಳು

DHANYAVAADA YELIDA KOKKARE(ಧನ್ಯವಾದ ಹೇಳಿದ ಕೊಕ್ಕರೆ), 6TH STNADARD, KANNADA |

ಧನ್ಯವಾದ ಹೇಳಿದ ಕೊಕ್ಕರೆ|| 6th standard|| 1st language|| ಪಾಠ – 5|| Lesson explanation in Kannada…

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವ್ಯಾಕರಣ ಮಾಹಿತಿ

ಸರ್ವನಾಮಗಳು :

ಕೆಳಗಿನ ವಾಕ್ಯಗಳನ್ನು ಗಮನಿಸಿ ಓದಿರಿ
ಪುಟ್ಟಿಗೆ ರೆಕ್ಕೆಗಳು ಬಂದವು; ಅವಳು ಮೇಲಕ್ಕೆ ಹಾರಿದಳು.
ಶಂತನು ಒಬ್ಬ ರಾಜ; ಆತನು ಬೇಟೆಗಾಗಿ ಕಾಡಿಗೆ ಹೋಗುತ್ತಿದ್ದನು.

ಮೇಲಿನ ವಾಕ್ಯಗಳಲ್ಲಿ ಅಡಿಗೆರೆ ಎಳೆದ ಪದಗಳನ್ನು ಗಮನಿಸಿರಿ. ಮೊದಲನೆಯ ವಾಕ್ಯದಲ್ಲಿ ‘ಅವಳು’ ಎಂಬ ಪದವು ‘ಪುಟ್ಟಿ’ ಎಂಬ ಪದಕ್ಕೆ ಬದಲಾಗಿ ಬಳಕೆಯಾಗಿದೆ. ಎರಡನೆಯ ವಾಕ್ಯದಲ್ಲಿ ‘ಆತನು’ ಎಂಬ ಪದವು ‘ಶಂತನು’ ಎಂಬ ಪದಕ್ಕೆ ಬದಲಾಗಿ ಬಳಕೆಯಾಗಿದೆ. ಪುಟ್ಟಿ ಮತ್ತು ಶಂತನು ಎಂಬುವು ನಾಮಪದಗಳಾಗಿವೆ. ‘ಅವಳು’, ‘ಆತನು’ ಎಂಬ ಪದಗಳು ನಾಮಪದಗಳ ಬದಲಿಗೆ ಬಳಕೆಯಾಗಿವೆ. ಹೀಗೆ ನಾಮಪದಗಳ ಬದಲಾಗಿ ಬಳಸುವ ಪದಗಳು ‘ಸರ್ವನಾಮಗಳು.’

ಅದು, ಇದು, ಅವಳು, ಇವನು, ನಾನು, ನೀನು, ನೀವು, ನಾವು, ತಾವು, ಅವರು, ಇವರು ಇತ್ಯಾದಿಗಳು ಸರ್ವನಾಮಗಳಾಗಿವೆ. ನಾಮಪದಗಳನ್ನು ಪದೇಪದೇ ಬಳಸುವುದರ ಬದಲಿಗೆ ಇವುಗಳನ್ನು ಬಳಸುತ್ತಾರೆ.

ಇನ್ನೂ ಕೆಲವು ಉದಾಹರಣೆಗಳನ್ನು ಗಮನಿಸೋಣ.
ಗುರುಗಳು ಶಾಲೆಗೆ ಹೊರಟರು. ಅವರು ಕೈಯಲ್ಲಿ ಪುಸ್ತಕ ಹಿಡಿದಿದ್ದರು.
ಮೋತಿ ಜಾನ್ಸನ್‍ನ ನಾಯಿ. ಅದು ಆತನಿಗೆ ಬಲು ಪ್ರಿಯ.
ಯಾಸ್ಮಿನ್ ಮತ್ತು ಉನ್ನತಿ ಇಬ್ಬರು ಗೆಳತಿಯರು. ಇವರು ಒಮ್ಮೆ ಪ್ರವಾಸ ಹೊರಟರು.

ಮೇಲಿನ ವಾಕ್ಯಗಳಲ್ಲಿ ಅವರು, ಅದು, ಇವರು ಎಂಬ ಪದಗಳು ನಾಮಪದದ ಬದಲಾಗಿ ಅದರ ಸ್ಥಾನದಲ್ಲಿದ್ದು ನಾಮಪದವನ್ನು ಸೂಚಿಸುತ್ತವೆ. ಇಂತಹವುಗಳನ್ನು ಸರ್ವನಾಮಗಳು ಎನ್ನುತ್ತಾರೆ.

ತತ್ಸಮ-ತದ್ಭವ :

ತತ್ಸಮ : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ವಿಕಾರ ಹೊಂದದೆ ಬಳಸಲ್ಪಡುವ ಶಬ್ದಗಳನ್ನು ‘ತತ್ಸಮ’ ಗಳೆಂದು ಕರೆಯುವರು. ತತ್+ಸಮ ಎಂದರೆ ಅದಕ್ಕೆ ( ಸಂಸ್ಕೃತ ಪದಕ್ಕೆ) ಸಮಾನವಾದುದು ಎಂದು ಅರ್ಥ.
ಉದಾ: ಶ್ರೀ, ಸೂರ್ಯ, ತ್ಯಾಗ, ವಿಜ್ಞಾನ, ಪುಸ್ತಕ, ಸರಸ್ವತಿ.

ತದ್ಭವ : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ಅಥವಾ ಪೂರ್ಣವಾಗಿ ಬದಲಾವಣೆ ಹೊಂದಿ ಬರುವ ಪದಗಳನ್ನು ‘ತದ್ಭವ’ಗಳೆನ್ನುವರು.
ಉದಾ: ಸಜ್ಜೆ, ಲಕುಮಿ, ಹದಿಬದೆ, ಸಿರಿ, ಚಾಗ, ಹೊತ್ತಗೆ.

ಇನ್ನೂ ಕೆಲವು ತತ್ಸಮ, ತದ್ಭವ ಪದಗಳನ್ನು ನೋಡೋಣ.

ಸರ್ವನಾಮಗಳು.

ಕನ್ನಡ ಪಾಠಗಳು – ತತ್ಸಮ – ತದ್ಭವ (ಭಾಗ – 1)

ತತ್ಸಮ – ತದ್ಭವ (50 ಪದಗಳು) ಭಾಗ – I