ಗಂಧರ್ವಸೇನ! – ಗದ್ಯಭಾಗ – 2

ಪ್ರವೇಶ : ಎಷ್ಟೋ ಸಂದರ್ಭಗಳಲ್ಲಿ ನಾವು ಮಾತನಾಡುವ ಶೈಲಿ, ದೇಹದ ಹಾವಭಾವಗಳು ನಿಜವಾಗಿ ನೀಡಬೇಕಾದ ಅರ್ಥಕ್ಕಿಂತ ಭಿನ್ನವಾದ ಅರ್ಥಗಳನ್ನು ಕೊಡುವುದಿದೆ. ಮಾತಿನ ಹಿನ್ನೆಲೆಯಲ್ಲಿರುವ ನಿಜವಾದ ಅರ್ಥವನ್ನು ಗ್ರಹಿಸಬೇಕಾದರೆ ಆ ಮಾತಿನ ಅಭಿವ್ಯಕ್ತಿಯಲ್ಲಿ ಸ್ಪಷ್ಟತೆ ಇರಬೇಕು. ಹಾಗಾದಾಗ ಮಾತ್ರವೇ ಭಾಷೆಯು ಸರಿಯಾದ ರೀತಿಯಲ್ಲಿ ಸಂವಹನಗೊಳ್ಳುವುದು. ಇದೊಂದು ಜಾನಪದ ಮೂಲದಿಂದ ಆರಿಸಿಕೊಂಡು ರಚಿಸಲಾದ ಕತೆ.

ಒಂದು ದಿನ ಒಬ್ಬ ರಾಜ ಒಡ್ಡೋಲಗದಲ್ಲಿದ್ದಾಗ ಅವನ ಮಂತ್ರಿ ಗಟ್ಟಿಯಾಗಿ ಅಳುತ್ತಾ ಬಂದನು. ಅವನ ರೋದನಕ್ಕೆ ಕಾರಣವೇನೆಂದು ರಾಜ ಪ್ರಶ್ನಿಸಿದ. ಮಂತ್ರಿಯು ಸಿಂಹಾಸನವನ್ನು ಚುಂಬಿಸಿ, ಭೂಮಿಯನ್ನು ಮುಟ್ಟಿ ನಮಸ್ಕರಿಸಿ ತನ್ನ ನಾಲಗೆಯನ್ನು ಉದ್ದ ಮಾಡಿ – ‘ಮಹಾರಾಜರೇ ಗಂಧರ್ವಸೇನರು ತೀರಿಕೊಂಡರಂತೆ’ ಎಂದು ಉದ್ಗರಿಸುತ್ತಾ ಮೂರ್ಛೆ ಹೋದ. ರಾಜನು ಒಡ್ಡೋಲಗವನ್ನು ಅಲ್ಲಿಗೇ ಪರಿಸಮಾಪ್ತಿಗೊಳಿಸಿ ಕಣ್ಣೀರು ಸುರಿಸುತ್ತ ಗಂಧರ್ವಸೇನರ ಆತ್ಮಶಾಂತಿಗಾಗಿ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಎಲ್ಲರೂ ಶೋಕಾಚರಣೆ ಮಾಡಬೇಕೆಂದು ಆಜ್ಞಾಪಿಸಿದ. ಮಂತ್ರಿಯ ಆರೈಕೆಗೆ ವೈದ್ಯರನ್ನು ಕರೆಸಿ ಉಪಚರಿಸುವಂತೆ ರಾಜಭಟರಿಗೆ ತಿಳಿಸಿ ಅಂತಃಪುರಕ್ಕೆ ಬಂದ. ರಾಜ, ಅಲ್ಲಿಯೂ ಕರುಳು ಕಿತ್ತುಬರುವಂತೆ ಅಳತೊಡಗಿದ. ರಾಣಿಯರು ಅವನ ಶೋಕಕ್ಕೆ ಕಾರಣವನ್ನು ಕೇಳಿದರು. `ಗಂಧರ್ವಸೇನರು ತೀರಿಕೊಂಡರು’ ಎಂದು ರಾಜ ಗದ್ಗದ ಕಂಠದಿಂದ ಹೇಳಿದಾಗ, ‘ರಾಜನ ದುಃಖ ತಮ್ಮ ದುಃಖ’ ಎಂದು ಅವರು ಕೂಡ ಕರುಳು ಹಿಂಡುವಂತೆ ಎದೆ ಬಡಿದುಕೊಂಡು ಅಳಲಾರಂಭಿಸಿದರು. ಇಡೀ ಅಂತಃಪುರ ದುಃಖ ಹಾಗೂ ಗೊಂದಲದಿಂದ ತುಂಬಿತು.

ರಾಣಿಯ ಸೇವಕಿಯೊಬ್ಬಳಿಗೆ ಈ ಎಲ್ಲಾ ಗೊಂದಲ ಏಕೆಂದು ತಿಳಿಯಲಿಲ್ಲ. ಅವಳು, “ಮಹಾರಾಣಿಯವರೇ, ಎಲ್ಲರು ಏಕೆ ಅಳುತ್ತಿದ್ದಾರೆ?” ಎಂದು ಕೇಳಿದಳು. ರಾಣಿ ನಿಟ್ಟುಸಿರುಬಿಟ್ಟು,“ಪಾಪ! ಗಂಧರ್ವಸೇನರು ತೀರಿಕೊಂಡರಂತೆ” ಎಂದಳು. ಸೇವಕಿ ಚುರುಕು ಬುದ್ಧಿಯವಳು. ಅವಳು ಆಲೋಚನೆ ಮಾಡಿದಳು. ಈ ನಮ್ಮ ಮಹಾರಾಜರಿಗೂ ಆ ಗಂಧರ್ವಸೇನರಿಗೂ ಏನ್ ಸಂಬಂಧ? ಎಂದು ಆತಂಕದಿಂದ ರಾಣಿಯ ಬಳಿ ಕೇಳಿದಳು. ರಾಣಿ ಅದು ತನಗೆ ಗೊತ್ತಿಲ್ಲವೆಂದು ನುಡಿದು ರಾಜನ ಬಳಿಗೆ ಓಡಿಹೋಗಿ, “ಗಂಧರ್ವಸೇನರು ಯಾರು?” ಎಂದು ಕೇಳಿದಳು. ರಾಜನಿಗೂ ಗೊತ್ತಿಲ್ಲ. ಆತ ಕಣ್ ಕಣ್ ಬಿಟ್ಟು “ತಾನೆಂಥ ಮೂರ್ಖತನದ ಕೆಲಸ ಮಾಡಿದೆ” ಅಂದುಕೊಂಡು ಕೂಡಲೇ ಆಸ್ಥಾನಕ್ಕೆ ತೆರಳಿದ. ಈಗಾಗಲೆ ವೈದ್ಯರ ಉಪಚಾರದಿಂದ ಸುಧಾರಿಸಿಕೊಂಡಿದ್ದ ಮಂತ್ರಿಯನ್ನು ಕರೆಸಿಕೊಂಡು, “ಮಂತ್ರಿಗಳೇ, ಯಾರು ಈ ಗಂಧರ್ವಸೇನ?” ಎಂದು ಪ್ರಶ್ನಿಸಿದ. “ಮಹಾರಾಜರೆ ದಯವಿಟ್ಟು ಕ್ಷಮಿಸಿ. ಗಂಧರ್ವಸೇನರು ಯಾರೆಂಬುದು ನನಗೂ ತಿಳಿದಿಲ್ಲ. ಆದರೆ ಪಡೆಯ ಮುಖ್ಯಸ್ಥನು ಗಂಧರ್ವಸೇನ ತೀರಿಕೊಂಡರೆಂದು ಗಟ್ಟಿಯಾಗಿ ಗಂಟಲು ಹರಿಯುವಂತೆ ಕೂಗುತ್ತಾ ಅಳುತ್ತಿರುವುದನ್ನು ಕಂಡು ನಾನೂ ಅತ್ತೆ” ಎಂದು ಮಾರ್ನುಡಿದ. ರಾಜನ ಕೋಪ ನೆತ್ತಿಗೇರಿತು. “ನೀನೊಬ್ಬ ಮೂರ್ಖ. ಕೂಡಲೆ ಹೋಗಿ ಗಂಧರ್ವಸೇನ ಯಾರೆಂದು ಪತ್ತೆ ಮಾಡಿಕೊಂಡು ಬಾ” ಎಂದ. ಮಂತ್ರಿ ರಾಜನಿಗೆ ವಂದಿಸಿ, ‘ಕೇಳಿದ ಕಿವಿ ಊರಿಗೆ ಮಾರಿ ತಂದಿತು’ ಅಂದು ಕೊಂಡು ಅಲ್ಲಿಂದ ಕಾಲಿಗೆ ಬುದ್ಧಿಹೇಳಿದ. ಪಡೆಯ ಮುಖ್ಯಸ್ಥನನ್ನು ಕಂಡು, “ಗಂಧರ್ವಸೇನರು ಯಾರು?” ಎಂದು ಪ್ರಶ್ನಿಸಿದ. “ಸ್ವಾಮಿ, ಅವರು ಯಾರು? ಏನಾಗಿದ್ದರು? ಎಂದು ನನಗೆ ತಿಳಿಯದು. ಆದರೆ ಅವರು ತೀರಿಕೊಂಡರೆಂದು ಸ್ವತಃ ನನ್ನ ಹೆಂಡತಿಯೇ ಅಳುತ್ತಿದ್ದಳು. ಈ ಸುದ್ದಿಯನ್ನು ನಿಮಗೆ ಹೇಳಬೇಕೆನಿಸಿತು. ಬಂದು ಹೇಳಿದೆ” ಎಂದನು.

ಮಂತ್ರಿ ತಲೆಯ ಮೇಲೆ ಕೈ ಹೊತ್ತು ಕುಳಿತ. ಇರಲಿ, ಇವನ ಹೆಂಡತಿಯನ್ನು ವಿಚಾರಿಸೋಣ ಎಂದು ಇಬ್ಬರೂ ಆತನ ಮನೆಗೆ ಹೋಗಿ, “ಯಾರಮ್ಮ ಈ ಗಂಧರ್ವಸೇನ?” ಎಂದು ಕೇಳಿದರು. ಅವಳು, “ಸ್ವಾಮೀ, ಗಂಧರ್ವಸೇನರ ಪರಿಚಯ ನನಗಿಲ್ಲ. ಈ ದಿವಸ ಬೆಳಿಗ್ಗೆ ಸ್ನಾನ ಮಾಡಲಿಕ್ಕೆ ಕೆರೆಗೆ ಹೋಗಿದ್ದೆ. ಅಲ್ಲಿ ಮಡಿವಾಳ್ತಿ ತನ್ನ ಗಂಧರ್ವ ಸೇನ ಸತ್ತಿದ್ದಾನೆಂದು ಬಾಯಿ ಬಡಿದುಕೊಂಡು ಒಂದೇ ಸಮನೆ ಅಳುತ್ತಿದ್ದಳು. ಅದನ್ನು ನೋಡಿ ನಾನೂ ಅತ್ತೆ, ಗಂಡನ ಬಳಿ ಹೇಳಿದೆ” ಎಂದಳು. ಮಂತ್ರಿಗೆ ತಲೆಸುತ್ತಿದಂತಾಯ್ತು. ಈ ಗಂಧರ್ವಸೇನ ಯಾರು? ತಲೆತಲೆ ಚಚ್ಚಿಕೊಂಡ. ಏನೇ ಆಗಲಿ ಎಂದುಕೊಂಡು ಅವರೆಲ್ಲರೂ ಆ ಮಡಿವಾಳ್ತಿಯ ಮನೆಗೆ ಹೋಗಿ, `‘ಗಂಧರ್ವಸೇನ ಯಾರು?’’ ಎಂದು ಕೇಳಿದರು. ಅವಳು ದುಃಖಿಸತೊಡಗಿದಳು. “ಸ್ವಾಮಿ, ನನಗೆ ಅದೃಷ್ಟವಿಲ್ಲ. ಈಗಲೂ ನನ್ನ ಹೃದಯ ಅವನಿಗಾಗಿ ಮಿಡಿಯುತ್ತಿದೆ. ಗಂಧರ್ವಸೇನ ನನ್ನ ಪ್ರೀತಿಯ ಕತ್ತೆ. ನನ್ನ ಮಗನಿಗಿಂತಲೂ ಹೆಚ್ಚಾಗಿ ಅವನನ್ನು ಮುದ್ದಿನಿಂದ ಬೆಳೆಸಿದ್ದೆ. ನಮ್ಮ ಎಲ್ಲಾ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದ ಸ್ವಾಮಿ, ನಿನ್ನೆ ರಾತ್ರಿ ಕಣ್ಣು ಮುಚ್ಗೊಂಬಿಟ್ಟ. ನನ್ನ ಹೊಟ್ಟೆ ಮೇಲೆ ಕಲ್‍ಹಾಕ್ ಬಿಟ್ಟ’’ ಎಂದು ಬೊಬ್ಬಿಟ್ಟು ಅತ್ತಳು. ಇದನ್ನು ಕೇಳಿದ ಮಂತ್ರಿ, ಮುಖ್ಯಸ್ಥ, ಅವನ ಹೆಂಡತಿ ಒಬ್ಬರ ಮುಖವನ್ನುಒಬ್ಬರು ನೋಡಿಕೊಂಡು ಅಲ್ಲಿಂದ ಕಂಬಿಕಿತ್ತರು.

ಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು ನಿಜಾಂಶವನ್ನು ಹೇಳಿದ. “ಗಂಧರ್ವಸೇನರು ಸತ್ತರೆಂದು ನಾವೆಲ್ಲ ಶೋಕಿಸಿದೆವಲ್ಲಾ, ಅದು ಬೇರೆ ಯಾರು ಅಲ್ಲ; ಮಡಿವಾಳ್ತಿಯ ಪ್ರೀತಿಯ ಕತ್ತೆ” ಎಂದು ಹೇಳಿದ. ರಾಜ ಅವನಿಗೆ ಹಿಗ್ಗಾಮುಗ್ಗಾ ಬೈದನು. ಆದರೆ ಶಿಕ್ಷಿಸದೆ ಬಿಟ್ಟುಬಿಟ್ಟ. ಈ ಸುದ್ದಿ ಅಂತಃಪುರದ ರಾಣಿಯರ ಕಿವಿಗೂ ಮುಟ್ಟಿತು. ‘ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು’ ಎನ್ನುವಂತೆ ರಾಜ ಮತ್ತು ಅವನ ಆಸ್ಥಾನಿಕರ ಮೂರ್ಖತನಕ್ಕಾಗಿ ರಾಣಿಯರು ತಮ್ಮ ಪಕ್ಕೆಲುಬುಗಳು ನೋಯುವವರೆಗೂ ನಗುತ್ತಲೇ ಇದ್ದರು.

ಪದಗಳ ಅರ್ಥ
ಒಡ್ಡೋಲಗ-ರಾಜಸಭೆ, ದರ್ಬಾರು.
ರೋದನ-ಅಳುವಿಕೆ, ಪ್ರಲಾಪ.
ಚುಂಬನ- ಮುತ್ತು.
ಉದ್ಗರಿಸು-ಹೇಳು, ಹೊರಗೆಡಹು.
ಪರಿಸಮಾಪ್ತಿ-ಮುಕ್ತಾಯ, ಕೊನೆ.
ಶೋಕ-ಅಳಲು, ದುಃಖ.
ಗದ್ಗದ ಕಂಠ-ನಿಂತು ನಿಂತು ಬರುವ ಅಸ್ಪಷ್ಟವಾದ ಮಾತು, ಬಿಗಿದ ಕಂಠ.
ಅಂತಃಪುರ-ರಾಣಿವಾಸ.
ನಿಟ್ಟುಸಿರು-ದೀರ್ಘವಾಗಿ ಬಿಡುವ ಉಸಿರು, ನಿಡಿದಾದ ಶ್ವಾಸ.
ಬಡಪಾಯಿ-ಅಶಕ್ತ, ದುರ್ಬಲ, (ದರಿದ್ರ).
ತೀರಿಕೊಳ್ಳು-ಗತಿಸು, ಮರಣ ಹೊಂದು.
ಮಾರ್ನುಡಿ-ಪ್ರತಿಯಾಗಿ ಮಾತನಾಡು, ಮಾರುತ್ತರ ಕೊಡು.
ಪತ್ತೆ-ಗುರುತು, ಸುಳಿವು, ವಿಳಾಸ.
ಬೊಬ್ಬಿಡು-ಕೂಗು, ಅರಚು, ಗಟ್ಟಿಯಾಗಿ ಹೇಳು.
ನಿಜಾಂಶ- ಸತ್ಯ, ದಿಟ.
ಪಕ್ಕೆಲುಬು- ಇಬ್ಬದಿಯ ಎಲುಬುಗಳು.

ವಿವರ ತಿಳಿಯಿರಿ
ಶೋಕಾಚರಣೆ : ಸತ್ತವರಿಗಾಗಿ ಸಂತಾಪ ಸೂಚಿಸುವುದು.
ನಾಲಗೆಯನ್ನು ಉದ್ದ ಮಾಡಿ ಹೇಳು : ಒಂದು ವಿಷಯದ ಬಗ್ಗೆ ತನಗೆ ಪೂರ್ಣ ಗೊತ್ತಿದೆ ಎಂದು ಅಂದುಕೊಳ್ಳುತ್ತಾ ನಂಬಿಸಿ ಹೇಳುವುದು, ಅತಿಯಾಗಿ ಮಾತನಾಡುವುದು.
ಕರುಳು ಕಿತ್ತುಬರುವಂತೆ ಅಳು : ತನಗಾದ ದುಃಖವನ್ನು ತೋರ್ಪಡಿಸಿಕೊಳ್ಳಲು ಅಳುವ ಒಂದು ರೀತಿ, ಅತೀವವಾದ ಅಳು.
ಗಂಟಲು ಹರಿಯುವಂತೆ ಕೂಗು : ಬೊಬ್ಬೆಹಾಕಿ ಹೇಳು, ಜೋರಾಗಿ ಬೊಬ್ಬಿಡು.
ಕಾಲಿಗೆ ಬುದ್ಧಿ ಹೇಳು : ಹೇಳದೆ ಕೇಳದೆ ಓಡಿ ಹೋಗು, ಪಲಾಯನ ಮಾಡು.

ವಿಡಿಯೋ ಪಾಠಗಳು

Samveda – 6th – Kannada – Gandharvasena (Part 1 of 2) | ಭಾಗ – 1
Samveda – 6th – Kannada – Gandharvasena (Part 1 of 2) | ಭಾಗ – 2

ವ್ಯಾಕರಣ ಮಾಹಿತಿ

ವಚನಗಳು | Vachanagalu | Numbers |ಕನ್ನಡ ವ್ಯಾಕರಣ | Kannada Grammar
ಲಿಂಗಗಳು | Lingagalu | Gender |ಕನ್ನಡ ವ್ಯಾಕರಣ | Kannada Grammar
ನಾಮಪದ – NAMAPADA (Kannada namapada)
ವಿಭಕ್ತಿ ಪ್ರತ್ಯಯಗಳು (vibhakthi pratyaya in kannada)

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
6ನೇ ತರಗತಿ ಕನ್ನಡ ಗದ್ಯ-2 “ಗಂದರ್ವಸೇನ” ಪ್ರಶ್ನೋತ್ತರಗಳು.6ne taragathi Kannada gadya-2 “Gandarva sen”

ಯೋಜನೆ

ನೀವು ಕೇಳಿರುವ ಹಾಗೂ ಪತ್ರಿಕೆ, ಪುಸ್ತಕಗಳಲ್ಲಿ ಓದಿರುವ ಗಾದೆ, ಒಗಟು, ನುಡಿಗಟ್ಟುಗಳನ್ನು ಸಂಗ್ರಹಿಸಿ ಬರೆದು ಒಂದು ಆಲ್ಬಂ ತಯಾರಿಸಿ ಶಾಲಾ ಕಾರ್ಯಕ್ರಮದಲ್ಲಿ ಅದನ್ನು ಪ್ರದರ್ಶಿಸಿರಿ. ಅನಂತರ ಅದನ್ನು ಶಾಲಾ ಗ್ರಂಥಾಲಯಕ್ಕೆ ಸೇರಿಸಿರಿ.

ಕನ್ನಡ ಗಾದೆಗಳು
ಕನ್ನಡ ಒಗಟುಗಳು kannada riddles
ನುಡಿಗಟ್ಟುಗಳು|| ಕನ್ನಡ ವ್ಯಾಕರಣ

ಪೂರಕ ಓದು

  1. ಜನಪದದ ಕಥೆಗಳನ್ನು ಓದಿ ಅರ್ಥೈಸಿಕೊಳ್ಳಿರಿ.
  2. ನುಡಿಗಟ್ಟು, ಪದಪುಂಜಗಳನ್ನು ಸಂಗ್ರಹಿಸಿ, ಅವುಗಳ ಅರ್ಥ ತಿಳಿಯಿರಿ.
  3. ಎಚ್.ಎಲ್.ನಾಗೇಗೌಡ, ಎ.ಕೆ.ರಾಮಾನುಜನ್‍ರವರು ಸಂಗ್ರಹಿಸಿರುವ ಜನಪದಗಳ ಕಥೆ, ಗೀತೆಗಳನ್ನು ಓದಿರಿ.
ಜನಪದದ ಕಥೆ
Sri H.L. Nage Gowda
ಎ.ಕೆ ರಾಮಾನುಜನ್ ವ್ಯಕ್ತಿಚಿತ್ರ | AK Ramanujan Documentary

ಶುಭ ನುಡಿ

 ಯಾವುದೇ ನಿರ್ಣಯ ಕೈಗೊಳ್ಳುವ ಮೊದಲು ತುಂಬಾ ಯೋಚಿಸಿರಿ.
 ಹಳ್ಳಿ ಜೀವನವನ್ನು ಪ್ರೀತಿಸಿರಿ.
 ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು.