ಆಹಾರ-ಅಭ್ಯಾಸ – ಪಾಠ – 9

ಈ ಪಾಠವನ್ನು ಕಲಿತ ನಂತರ ನೀನು,

* ನಾವು ಆಹಾರವನ್ನು ಎಲ್ಲಿಂದ ಮತ್ತು ಹೇಗೆ ಪಡೆಯುತ್ತೇವೆ ಎಂಬುದನ್ನು ವಿವರಿಸುವೆ.

* ಸಾಮೂಹಿಕ ಭೋಜನ ಮಾಡುವ ಸಂದರ್ಭಗಳನ್ನು ಗುರುತಿಸುವೆ. ಇಲ್ಲಿ ಅನುಸರಿಸಬಹುದಾದ ಕ್ರಮಗಳನ್ನು ರೂಢಿಸಿಕೊಳ್ಳುವೆ.

* ಆಹಾರ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಮೆಚ್ಚುವೆ.

* ನಿನ್ನ ಜಿಲ್ಲೆಯ ಹಾಗೂ ಸುತ್ತಲಿನ ಜಿಲ್ಲೆಗಳ ಆಹಾರ ಮತ್ತು ಸಾಂಸ್ಕøತಿಕ ವೈವಿಧ್ಯವನ್ನು ತಿಳಿಯುವೆ.

ಆಹಾರವನ್ನು ಕುರಿತು ದೀಪಾಳೊಂದಿಗೆ ನಾನು ಚರ್ಚಿಸಿದ ಕೆಲವು ವಿಷಯಗಳು ನಿನಗೂ ಮನದಟ್ಟಾಗಿವೆ ಎಂದುಕೊಂಡಿದ್ದೇನೆ. ನಮಗೆಲ್ಲಾ ಅತ್ಯಗತ್ಯವಾದ ಆಹಾರ ಎಲ್ಲಿಂದ ಮತ್ತು ಹೇಗೆ ಬರುತ್ತದೆ? ಯೋಚಿಸಿರುವೆಯಾ?

ಮುಂದೆ ಕೊಟ್ಟಿರುವ ಚಿತ್ರಗಳನ್ನು ಗಮನಿಸು. ಇಲ್ಲಿ ಆಹಾರದ ಹಾದಿಯನ್ನು ತೋರಿಸಿದೆ. ಈ ಹಾದಿಯನ್ನು ಅನುಕ್ರಮವಾಗಿ ಗುರುತಿಸು. ಯಾವ ಚಿತ್ರದ ನಂತರ ಯಾವುದು ಬರಬೇಕೆಂದು ಕ್ರಮ ಸಂಖ್ಯೆ ಹಾಕಿ ತೋರಿಸು. ಪ್ರತಿಯೊಂದು ಚಿತ್ರದ ಬಗ್ಗೆಯೂ ಒಂದು ವಾಕ್ಯವನ್ನು ಅಲ್ಲಿರುವ ಖಾಲಿ ಜಾಗದಲ್ಲಿ ಬರೆ.

ನಿನ್ನ ಮನೆಯಲ್ಲಿ ಬಳಸುವ 10 ಆಹಾರ ವಸ್ತುಗಳನ್ನು ಪಟ್ಟಿ ಮಾಡು. ಈ ಆಹಾರ ವಸ್ತುಗಳು ಎಲ್ಲಿಂದ ಬಂದವು ಎಂಬುದನ್ನು ಬರೆ.

ನಿನ್ನ ಮನೆಯಲ್ಲಿ ಪ್ರತಿದಿನವೂ ತಯಾರಿಸುವ ಅಡುಗೆಯನ್ನು ಇಲ್ಲಿ ಬರೆ. ಹಾಗೆಯೇ ನಿನ್ನ ಮನೆಯಲ್ಲಿ ಆಚರಿಸುವ ಹಬ್ಬಗಳಲ್ಲಿ ಮಾಡುವ ಅಡುಗೆಯನ್ನೂ ಬರೆ.

ನಿನ್ನ ಮನೆಯಲ್ಲಿ ಎಲ್ಲ ಹಬ್ಬಗಳಲ್ಲೂ ಒಂದೇ ವಿಧದ ಅಡುಗೆ ತಯಾರಿಸುತ್ತಾರೆಯೇ? ಇಲ್ಲವಾದಲ್ಲಿ ವಿವಿಧ ಹಬ್ಬಗಳಲ್ಲಿ ಮಾಡುವ ವಿಶೇಷ ಅಡುಗೆಗಳನ್ನು ಬರೆ.

ನಿನ್ನ ಪಟ್ಟಿಯನ್ನು ನಿನ್ನ ಗೆಳೆಯರ ಪಟ್ಟಿಯೊಂದಿಗೆ ಹೋಲಿಸಿ ನೋಡು.

ನಿನ್ನ ಮತ್ತು ಗೆಳೆಯರ ಮನೆಯಲ್ಲಿ ತಯಾರಿಸುವ ವಿಶೇಷ ಅಡುಗೆಯನ್ನು ಹೋಲಿಸು. ನೀನೇನು ತಿಳಿದೆ? ಇಲ್ಲಿ ಬರೆ.

ನೀನು ಉತ್ಸವ, ಜಾತ್ರೆ, ಉರುಸ್ ಮುಂತಾದ ಕಡೆ ಊಟವನ್ನು ಮಾಡಿರುವೆಯಾ? ಬಾ ನಮ್ಮೂರ ಜಾತ್ರೆಗೆ ಹೋಗೋಣ. ಅಗೋ ಅಲ್ಲಿ ನೋಡು. ಎಲ್ಲರೂ ಒಟ್ಟಾಗಿ ಮೆರವಣಿಗೆಯಲ್ಲಿ ಹೋಗುತ್ತಿದ್ದಾರೆ. ತಮಟೆಯ ಸದ್ದು ಜೋರಾಗಿದೆ. ಹುಲಿವೇಷ, ಕೀಲು ಕುದುರೆಗಳು ನೆರೆದವರಿಗೆ ಮನರಂಜನೆ ನೀಡುತ್ತಿವೆ. ಜಾತ್ರೆಯಲ್ಲಿ ನೆರೆದ ಎಲ್ಲರಿಗೂ ಊರವರೆಲ್ಲ ಸೇರಿ ಸಾಮೂಹಿಕ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಅಷ್ಟೊಂದು ಜನರಿಗೆ ಊಟದ ವ್ಯವಸ್ಥೆ ಮಾಡಲು ಜನರೆಲ್ಲ ಸಹಕರಿಸಿದ್ದಾರೆ. ಊರ ಜನರೆಲ್ಲರೂ ತಮಗೆ ಸಾಧ್ಯವಾದಷ್ಟು ಹಣ, ದವಸ-ಧಾನ್ಯ, ಸೌದೆ ಇತ್ಯಾದಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಕೆಲವರು ಒಂದುಗೂಡಿ ಅಡುಗೆಯನ್ನು ತಯಾರಿಸಿದ್ದಾರೆ. ನಾನಾ ತರಹದ ಸಿಹಿ ಅಡುಗೆಗಳು ತಯಾರಾಗಿವೆ. ಬಾ ನಾವೂ ಊಟ ಮಾಡೋಣ. ಊಟದ ನಂತರ ಕೆಲವರು ಊಟದ ಎಲೆಗಳನ್ನು ತೆಗೆದು ಸ್ವಚ್ಛ ಮಾಡುತ್ತಿದ್ದಾರೆ. ನಾವೂ ಸೇರಿಕೊಳ್ಳೋಣ. ಜಾತ್ರೆಯಲ್ಲಿ ಭಾಗವಹಿಸಿದ ಎಲ್ಲರೂ ಸಂತೋಷದಿಂದ ಹಿಂದಿರುಗುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಕೆಲಸ ಹಂಚಿಕೊಂಡು, ಒಟ್ಟಿಗೆ ಊಟ ಮಾಡಿದ ತೃಪ್ತಿ ಅವರಿಗಿದೆ.

ನೀನೂ ಈ ರೀತಿಯ ಸಾಮೂಹಿಕ ಭೋಜನಗಳಲ್ಲಿ ಭಾಗವಹಿಸಿ ಊಟ ಮಾಡಿರಬಹುದು. ಅಂತಹ ಸಂದರ್ಭಗಳು ಯಾವುವು? ನೀನು ಪಾಲ್ಗೊಂಡ ಒಂದು ಸಾಮೂಹಿಕ ಭೋಜನವನ್ನು ವಿವರಿಸು.

ನೀನು ಭಾಗವಹಿಸಿದ ಜಾತ್ರೆಯ ಅನುಭವವನ್ನು ಬರೆ.

ಸಾಮೂಹಿಕ ಭೋಜನ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಪಟ್ಟಿ ಇಲ್ಲಿದೆ. ಗಮನಿಸು.

* ಅಡುಗೆಗೆ ಬಳಸುವ ಸಾಮಗ್ರಿಗಳು, ಪಾತ್ರೆ ಮತ್ತು ನೀರು ಶುದ್ಧವಾಗಿರಬೇಕು.

* ಅಡುಗೆ ಮಾಡುವವರು ಮತ್ತು ಬಡಿಸುವವರು ಶುಚಿಯಾಗಿರಬೇಕು. ಸ್ಚಚ್ಛ ಬಟ್ಟೆಗಳನ್ನು ತೊಟ್ಟಿರಬೇಕು. ಉಗುರುಗಳನ್ನು ಕತ್ತರಿಸಿರಬೇಕು, ಕೂದಲನ್ನು ಬಟ್ಟೆಯಿಂದ ಕಟ್ಟಿರಬೇಕು.

* ಊಟ ಮಾಡುವ ಸ್ಥಳ ಧೂಳು ಹಾಗೂ ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು.

* ಕುಡಿಯಲು ಶುದ್ಧ ನೀರನ್ನು ಒದಗಿಸಬೇಕು.

* ಅಡುಗೆ ಮಾಡುವ ಸ್ಥಳ ಸ್ವಚ್ಛವಾಗಿರಬೇಕು. ತಯಾರಿಸಿದ ಆಹಾರದೊಳಗೆ ಕೀಟ-ಪ್ರಾಣಿಗಳು ಬೀಳದಂತೆ ಎಚ್ಚರ ವಹಿಸಬೇಕು.

* ಅಡುಗೆ ಮಾಡುವ ಸ್ಥಳಗಳಲ್ಲಿ ಗಾಳಿ ಬೆಳಕು ಬರುವಂತಿರಬೇಕು.

ಶಾಲೆಯಲ್ಲಿನ ಬಿಸಿಯೂಟವು ಒಂದು ಸಾಮೂಹಿಕ ಭೋಜನ. ನೀನು ಬಿಸಿಯೂಟ ಸೇವಿಸುವಾಗ ಅನುಸರಿಸುವ ಕ್ರಮಗಳನ್ನು ಇಲ್ಲಿ ಬರೆ.

ವಿವಿಧ ಪ್ರದೇಶಗಳಲ್ಲಿ ವಾಸಿಸುವ ಜನರು ವಿವಿಧ ರೀತಿಯ ಆಹಾರ ಪದ್ಧತಿಗಳನ್ನು ಅನುಸರಿಸುತ್ತಾರೆ ಎಂದು ನಿನಗೆ ಗೊತ್ತೆ? ಉದಾಹರಣೆಗೆ, ಉತ್ತರ ಕರ್ನಾಟಕದ ಬೆಳಗಾವಿ, ಬೀದರ್ ಮುಂತಾದ ಜಿಲ್ಲೆಗಳಲ್ಲಿ ಜೋಳದಿಂದ ಮಾಡಿದ ಅಡುಗೆಗಳೇ ಹೆಚ್ಚು. ಅಂತೆಯೇ ಮಂಗಳೂರು, ಉಡುಪಿಯಂತಹ ಕರಾವಳಿ ಜಿಲ್ಲೆಗಳಲ್ಲಿ ಮೀನಿನ ಅಡುಗೆ ವಿಶೇಷ. ಇನ್ನು ಮಂಡ್ಯ, ಮೈಸೂರು ಮುಂತಾದ ಮೈದಾನ ಪ್ರದೇಶದಲ್ಲಿನ ಜಿಲ್ಲೆಗಳಲ್ಲಿ ಅಕ್ಕಿ, ರಾಗಿಯನ್ನೇ ಹೆಚ್ಚಾಗಿ ಬಳಸುವರು.

ಓದಿ-ತಿಳಿ

ಆಯಾ ಪ್ರದೇಶಗಳಲ್ಲಿ ದೊರೆಯುವ ಆಹಾರ ವಸ್ತುಗಳಿಗೆ ಅನುಗುಣವಾಗಿ ಅಲ್ಲಿನ ಆಹಾರ ಕ್ರಮ ಇರುತ್ತದೆ. ತಮ್ಮ ಪ್ರದೇಶ / ಕುಟುಂಬದ ಆಚರಣೆಗೆ, ಬೆಳೆದು ಬಂದ ಹಿಂದಿನ ಪದ್ಧತಿಗಳಿಗೆ ಅನುಗುಣವಾಗಿ ವಿವಿಧ ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ.

ನಿನ್ನ ಜಿಲ್ಲೆಯ ವಿಶೇಷ ಅಡುಗೆಗಳನ್ನು ಬರೆ.

ಇತರ ಜಿಲ್ಲೆಯ ಆಹಾರ ಕ್ರಮಗಳನ್ನು ಗಮನಿಸಿರುವೆಯಾ? ಅಲ್ಲಿನ ಅಡುಗೆಗಳ ರುಚಿಯನ್ನು ಸವಿದಿರುವೆಯಾ? ನಿನ್ನ ಅನುಭವಗಳನ್ನು ಈ ಪಟ್ಟಿಯಲ್ಲಿ ಹಂಚಿಕೊ.

ನಿನಗಿದು ಗೊತ್ತೆ?

* ಒಂದು ದೊಡ್ಡ ಹೆಬ್ಬಾವು ಆಹಾರವಿಲ್ಲದೆ ಒಂದು ವರ್ಷ ಕಾಲ ಬದುಕಬಲ್ಲದು.

* ನೀನು ಸೇವಿಸಿದ ಆಹಾರದ ಹೆಚ್ಚಿನ ಭಾಗ ನಿನ್ನ ದೇಹವನ್ನು ಬೆಚ್ಚಗಿಡಲು ವ್ಯಯವಾಗುತ್ತದೆ.

* ಹಣ್ಣುಗಳನ್ನು ಊಟಕ್ಕೆ ಮೊದಲು ತಿನ್ನುವುದು ಒಳ್ಳೆಯದು. ಇದರಿಂದ ಹಣ್ಣುಗಳಲ್ಲಿರುವ ಪೋಷಕಾಂಶಗಳು ಚೆನ್ನಾಗಿ ಜೀರ್ಣವಾಗಿ ರಕ್ತವನ್ನು ಸೇರುತ್ತವೆ.

* ಹೆಚ್ಚಿನ ತರಕಾರಿಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ಅಥವಾ ಅರ್ಧ ಬೇಯಿಸಿ ತಿಂದರೆ ಒಳ್ಳೆಯದು. ತರಕಾರಿಗಳನ್ನು ಅತಿಯಾಗಿ ಬೇಯಿಸಿದಲ್ಲಿ ಅವುಗಳಲ್ಲಿರುವ ಪೌಷ್ಟಿಕಾಂಶಗಳು ನಾಶವಾಗುತ್ತವೆ.

* ಮೂಲಂಗಿಯನ್ನು ಕ್ರಿ.ಪೂ. 278ರಲ್ಲೇ ಈಜಿಪ್ಟಿನಲ್ಲಿ ಬೆಳೆಯುತ್ತಿದ್ದರು. ಸ್ವಾರಸ್ಯವೆಂದರೆ ಆಗ ಮೂಲಂಗಿಯ ಬಣ್ಣ ಕಪ್ಪಾಗಿತ್ತು.

* ಯಾವುದೇ ಆಹಾರವನ್ನು ಹಿತವಾಗಿ-ಮಿತವಾಗಿ ತಿನ್ನಬೇಕು. ಅತಿಯಾಗಿ ತಿಂದಲ್ಲಿ ಅನಾರೋಗ್ಯ ಉಂಟಾಗುತ್ತದೆ.

* ಅಕ್ಕಿಯ ಮೇಲ್ಪದರದಲ್ಲಿ ಬಿ ಜೀವಸತ್ವ ವಿಫುಲವಾಗಿರುತ್ತದೆ. ಅಕ್ಕಿಯನ್ನು ಹೆಚ್ಚು ಪಾಲಿಶ್ ಮಾಡಿದರೆ ಬಿ ಜೀವಸತ್ವ ನಾಶವಾಗುತ್ತದೆ.

* ಒಂದು ಸೇಬು ಹಣ್ಣಿನಲ್ಲಿರುವ ಪೋಷಕಾಂಶಗಳು 2 ಬಾಳೆಹಣ್ಣಿನಲ್ಲಿ ಅಥವಾ 5 ಬೆಟ್ಟದ ನೆಲ್ಲಿ ಕಾಯಿಯಲ್ಲಿ ಇರುತ್ತದೆ.

ಸಂವೇದ ವಿಡಿಯೋ ಪಾಠಗಳು

Samveda 4th EVS Ahara Abhyasa -4 KM EVS

ಪೂರಕ ವಿಡಿಯೋಗಳು

ಆಹಾರ ಅಭ್ಯಾಸ | 4ನೇ ತರಗತಿ | Shara abyasa | 4th evs | Food habit | 4th lesson | Part 1

ಆಹಾರ ಅಭ್ಯಾಸ | 4ನೇ ತರಗತಿ | Shara abyasa | 4th evs | Food habit | 4th lesson | Part 2

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.